ಕಥಾಸ್ಪರ್ಧೆ- ಕಥೆ
ಕಥಾಸ್ಪರ್ಧೆ ! ೧ ಯಾವುದರಲ್ಲಿಲ್ಲ ಸ್ಪರ್ಧೆ ? ಹಾಗೆಂದು ನಮ್ಮ ಅರಿವಿಗೆ ಮೀರಿದ ಸ್ಪರ್ಧೆಗಳಲ್ಲಿ ಭಾಗವಹಿಸಬಹುದೇ ? ನಮ್ಮ ಸಾಮರ್ಥ್ಯ ಯಾವುದರಲ್ಲಿದೆಯೋ ಅದರಲ್ಲಿ ಮಾತ್ರ ಸ್ಪರ್ಧಿಸಬೇಕು !! ನನಗೆ ಗೊತ್ತಿರುವುದೊಂದೇ .... ಕಥೆ ಬರೆಯುವುದು ! ಆದರೆ ಸ್ಪರ್ಧೆಯಲ್ಲಿ ನನಗೆ ಆಸಕ್ತಿಯಿಲ್ಲ ! " ನನಗಾಗಿ ಒಂದು ಕಥೆಯನ್ನು ಬರೆದು ಆ ಸ್ಪರ್ಧೆಗೆ ಕಳಿಸು ...” ಎಂದವಳು ಹೇಳಿದಾಗ ಚಂಚಲಗೊಂಡೆ ! ಅವಳು ಹೇಳಿದ್ದರಿಂದ ಸ್ಪರ್ಧಿಸಲೇ ? ಬರೆದ ಕಥೆಗೆ ಬಹುಮಾನ ಬರಲಿಲ್ಲವೆಂದರೋ .....? ಅವಳು ಹೇಳಿದಳೆಂದು - ಸ್ಪರ್ಧಿಸಲಾರೆ ! ಅವಳು ಹೇಳಿರುವುದರಿಂದ ಸ್ಪರ್ಧಿಸದೆಯೂ ಇರಲಾರೆ !!! ಯೋಚನೆಯಿಂದ ತಲೆಭಾರವಾಯಿತು ! ಇನ್ನೆರಡುದಿನಗಳಲ್ಲಿ ಕಥೆ - ಅದೂ ಬಹುಮಾನ ಬರುವಂತಹ ಕಥೆ - ಅವಳಿಗಾಗಿ !!! ೨ ಒರಗಿಕೊಳ್ಳಲೊಂದು ವಿಶಾಲವಾದ ಎದೆ - ಪ್ರತಿ ಹೆಣ್ಣಿನ ಕನಸಂತೆ , ಆಸೆಯಂತೆ ! ನನ್ನ ವಿಷಯದಲ್ಲಿ ಅದು ಉಲ್ಟಾ ! ನನಗೆ ಉತ್ತೇಜನ ಬೇಕು - ನನ್ನ ಸಾಮರ್ಥ್ಯವನ್ನು ಅರಿತು ಅದನ್ನು ಬೆಳೆಸಲು ಒಂದು ಆಧಾರ ಬೇಕು ! - ಆ ಆಧಾರದ ಎದೆಯಲ್ಲಿ ಮುಖ ಹುದುಗಿಸಿ ಮಲಗಿದ್ದೇನೆ ! ಅವಳ ಬೆರಳುಗಳು ನನ್ನ ತಲೆಕೂದಲುಗಳನಡುವೆ ಓಡಿಯಾಡುತ್ತಿದೆ . ಅವಳಿಗೆ ಗೊತ್ತು - ನಾನವಳ ಕರ್ತವ್ಯವೆಂದು ! ಎದೆ ಒದ್ದೆಯಾಗಿದ್ದು ಅರಿವಾಯಿತೇನೋ ..... ನನ್ನ ತಲೆಯನ್ನು ಹಿಂದಕ್ಕೆ ಬಾಗಿಸಿ ಮುಖವನ್ನು ನೋಡಿ , “ ಯಾಕೋ ...?” ಎಂದಳು . ನಾನೇನ...