ಕಥಾಸ್ಪರ್ಧೆ- ಕಥೆ
ಕಥಾಸ್ಪರ್ಧೆ!
೧
ಯಾವುದರಲ್ಲಿಲ್ಲ ಸ್ಪರ್ಧೆ?
ಹಾಗೆಂದು ನಮ್ಮ ಅರಿವಿಗೆ ಮೀರಿದ ಸ್ಪರ್ಧೆಗಳಲ್ಲಿ ಭಾಗವಹಿಸಬಹುದೇ?
ನಮ್ಮ ಸಾಮರ್ಥ್ಯ ಯಾವುದರಲ್ಲಿದೆಯೋ ಅದರಲ್ಲಿ ಮಾತ್ರ ಸ್ಪರ್ಧಿಸಬೇಕು!!
ನನಗೆ ಗೊತ್ತಿರುವುದೊಂದೇ.... ಕಥೆ ಬರೆಯುವುದು!
ಆದರೆ ಸ್ಪರ್ಧೆಯಲ್ಲಿ ನನಗೆ ಆಸಕ್ತಿಯಿಲ್ಲ!
"ನನಗಾಗಿ ಒಂದು ಕಥೆಯನ್ನು ಬರೆದು ಆ ಸ್ಪರ್ಧೆಗೆ ಕಳಿಸು...” ಎಂದವಳು ಹೇಳಿದಾಗ ಚಂಚಲಗೊಂಡೆ!
ಅವಳು ಹೇಳಿದ್ದರಿಂದ ಸ್ಪರ್ಧಿಸಲೇ?
ಬರೆದ ಕಥೆಗೆ ಬಹುಮಾನ ಬರಲಿಲ್ಲವೆಂದರೋ.....?
ಅವಳು ಹೇಳಿದಳೆಂದು- ಸ್ಪರ್ಧಿಸಲಾರೆ! ಅವಳು ಹೇಳಿರುವುದರಿಂದ ಸ್ಪರ್ಧಿಸದೆಯೂ ಇರಲಾರೆ!!!
ಯೋಚನೆಯಿಂದ ತಲೆಭಾರವಾಯಿತು!
ಇನ್ನೆರಡುದಿನಗಳಲ್ಲಿ ಕಥೆ- ಅದೂ ಬಹುಮಾನ ಬರುವಂತಹ ಕಥೆ- ಅವಳಿಗಾಗಿ!!!
೨
ಒರಗಿಕೊಳ್ಳಲೊಂದು ವಿಶಾಲವಾದ ಎದೆ- ಪ್ರತಿ ಹೆಣ್ಣಿನ ಕನಸಂತೆ, ಆಸೆಯಂತೆ!
ನನ್ನ ವಿಷಯದಲ್ಲಿ ಅದು ಉಲ್ಟಾ!
ನನಗೆ ಉತ್ತೇಜನ ಬೇಕು- ನನ್ನ ಸಾಮರ್ಥ್ಯವನ್ನು ಅರಿತು ಅದನ್ನು ಬೆಳೆಸಲು ಒಂದು ಆಧಾರ ಬೇಕು!
- ಆ ಆಧಾರದ ಎದೆಯಲ್ಲಿ ಮುಖ ಹುದುಗಿಸಿ ಮಲಗಿದ್ದೇನೆ!
ಅವಳ ಬೆರಳುಗಳು ನನ್ನ ತಲೆಕೂದಲುಗಳನಡುವೆ ಓಡಿಯಾಡುತ್ತಿದೆ.
ಅವಳಿಗೆ ಗೊತ್ತು- ನಾನವಳ ಕರ್ತವ್ಯವೆಂದು!
ಎದೆ ಒದ್ದೆಯಾಗಿದ್ದು ಅರಿವಾಯಿತೇನೋ..... ನನ್ನ ತಲೆಯನ್ನು ಹಿಂದಕ್ಕೆ ಬಾಗಿಸಿ ಮುಖವನ್ನು ನೋಡಿ,
“ಯಾಕೋ...?” ಎಂದಳು.
ನಾನೇನೂ ಮಾತನಾಡಲಿಲ್ಲ. ಮತ್ತೊಮ್ಮೆ ಮುಖವನ್ನು ಅವಳೆದೆಯೊಳಕ್ಕೆ ಹುದುಗಿಸಿದೆ- ಅವಳೂ ಒತ್ತಿಕೊಂಡಳು.
ಎಷ್ಟು ಸಮಯ ಕಳೆಯಿತೋ..... ಸಹಸ್ರ ವರ್ಷಗಳಾದರೂ ಹಾಗೆಯೇ ಇರಬೇಕೆನ್ನುವ ಆಸೆಯನ್ನು ಬದಿಗೊತ್ತಿ- ಎದ್ದೆ!
“ಒಬ್ಬ ಕಥೆಗಾರನಿದ್ದನಂತೆ!” ಎಂದೆ.
ಅವಳು ನನ್ನ ಮುಖವನ್ನೇ ನೋಡುತ್ತಿದ್ದಳು.
“ಕಥಾವಸ್ತುಗಳು ಅವನನ್ನು ಹುಡುಕಿಕೊಂಡು ಬರುತ್ತಿದ್ದವಂತೆ!” ಎಂದೆ.
ಅವಳಿಗೆ ಅರ್ಥವಾಗಲಿಲ್ಲ.
೩
ಅನಾಯಾಸೇನ ಮರಣಂ... ವಿನಾ ದೈನ್ಯೇನ ಜೀವನಂ!
ಭಾರತೀಯ ಸಂಸ್ಕಾರದಲ್ಲಿ ತತ್ವಗಳಿಗೇನೂ ಕೊರತೆಯಿಲ್ಲ- ಆಚರಣೆ ಕಷ್ಟ!
ನಾನು ಮಾಡಿದ್ದು ತಪ್ಪೇ?
ಅದರ ಹೊರತು ನಾನೇನು ಮಾಡಬಲ್ಲವನಾಗಿದ್ದೆ???
ಎಷ್ಟು ದಿನದಿಂದ ಹಾಗೆ ಬಿದ್ದಿದ್ದರೋ ಏನೋ....!
ಎಲ್ಲರೂ ಅಸಹ್ಯವೆಂದು ಮುಖ ಸಿಂಡರಿಸಿ ಬೇಗಬೇಗನೆ ಹೊರಟು ಹೋಗುತ್ತಿದ್ದರು.
ನಾನು ನಿಂತೆ- ನೋಡಿದೆ....
ಹೆಣ್ಣೊಬ್ಬಳು ನಿತ್ರಾಣಳಾಗಿ ಮಲಗಿದ್ದಳು! ಎದೆಯ ಮೇಲೊಂದು ಪಾಪು!
ಮಲ ಮೂತ್ರ ವಿಸರ್ಜನೆಗಳೆಲ್ಲಾ ಅಲ್ಲೇ ಆಗಿ.... ಪ್ರಾಣವಿದೆಯೇ ಇಲ್ಲವೇ ತಿಳಿಯದಂತೆ ಮಲಗಿದ್ದಾಳೆ!
ಏನು ಮಾಡಲಿ? ಮಲಗಿರುವುದು ಹೆಣ್ಣು!
ಯಾಕೆ ಈ ಯೋಚನೆ?
ಯಾರೊಬ್ಬರೂ ಸಹಾಯಕ್ಕೆ ಬರುವ ಸೂಚನೆಯಿಲ್ಲ!
ಇಬ್ಬರನ್ನೂ ಒಟ್ಟಿಗೆ ಹೊತ್ತುಕೊಂಡು ಹೋಗಲಾರೆ!
ಪ್ರಪಂಚದ ಮುಂದೆ ಆಕೆಯನ್ನು ಬೆತ್ತಲೆಮಾಡಿ ಶುಚಿಗೊಳಿಸಲಾರೆ!
ಏನು ಮಾಡಲಿ?
ಎದೆಯ ಏರಿಳಿತವನ್ನು ನೋಡಿದೆ- ಚಲನೆ ಕಾಣಿಸಲಿಲ್ಲ!
ಮೂಗಿನ ಬಳಿ ಬೆರಳಿಟ್ಟು ನೋಡಿದೆ- ಉಸಿರಾಟವಿದೆ!!
ಪಕ್ಕದ ಹೋಟೆಲ್ಲಿಗೆ ಹೋಗಿ ಇಡ್ಲಿ ಸಾಂಬಾರನ್ನೂ ಪೇಪರ್ ಲೋಟದಲ್ಲಿ ಹಾಲನ್ನೂ ಎರಡು ಬಾಟಲ್ ನೀರನ್ನೂ..., ಅಂಗಡಿಯಿಂದ ಗ್ಲೂಕೋಸ್ ಪುಡಿಯನ್ನೂ ತಂದೆ.
ಹೆಚ್ಚು ಜನಸಂಚಾರವೇನೂ ಇಲ್ಲದ ಪ್ರದೇಶ. ಇದ್ದವರೂ ನಿಲ್ಲುತ್ತಿರಲಿಲ್ಲ! ನಾನೇನು ಮಾಡುತ್ತಿದ್ದೇನೆಂದು ನೋಡುತ್ತಾ... ಅಸಹನೀಯ ವಾಸನೆಯಿಂದಾಗಿ- ಅಸಹ್ಯದಿಂದ ಹೊರಟು ಹೋಗುತ್ತಿದ್ದರು.!
ಪಾಪುವಿಗೆ ಹಾಲು ಕುಡಿಸಲು ಎಬ್ಬಿಸಿದೆ- ಆಗಲೇ ತಿಳಿದದ್ದು ಜೀವವಿಲ್ಲದೆ ಮರಗಟ್ಟಿದೆಯೆಂದು!!
ಜೇಬಿನಿಂದ ಕರ್ಚೀಫ್ ತೆಗೆದು ನೀರಿನಿಂದ ಒದ್ದೆ ಮಾಡಿ ಆಕೆಯ ಮುಖವನ್ನು ಒರೆಸಿದೆ.
ಒರಗಿಸಿ ಕೂರಿಸಲು ಆಧಾರವೇನೂ ಇರಲಿಲ್ಲವಾದ್ದರಿಂದ ಅವಳ ಹಿಂದೆ ಕುಳಿತು- ಅವಳ ಬೆನ್ನನ್ನು ಎದೆಗಾನಿಸಿಕೊಂಡೆ.
ಅಸಹ್ಯದಬಗ್ಗೆ ಅಸಹ್ಯವಾದ ಕ್ಷಣ!
ನೀರಿಗೆ ಗ್ಲೂಕೋಸನ್ನು ಬೆರೆಸಿ ಎರಡು ಮೂರು ಗುಟುಕು ಕುಡಿಸಿದೆ.
ಸ್ವಲ್ಪ ಸುಧಾರಿಸಿದಳೆನ್ನಿಸಿತು....
ಇಡ್ಲಿಯನ್ನು ಚೂರುಮಾಡಿ ಬಾಯಿಗೆ ಇಡಲು ಹೋದಾಗ....,
“ಬೇಡಿ ದೊರೆ! ಬದುಕಿಸಬೇಡಿ! ಈ ನೋವನ್ನು ನಾನು ತಾಳಲಾರೆ!” ಎಂದಳು- ಅತಿ ಕಷ್ಟದಿಂದ.
ಗೊಂದಲಗೊಂಡೆ.
ಮತ್ತೂ ಏನೋ ಹೇಳಲು ಶ್ರಮಿಸುತ್ತಿದ್ದಳು. ತುಟಿಯಬಳಿ ಕಿವಿಯಾನಿಸಿದೆ.
“ನನ್ನ ಸೊಂಟ ಮುರಿದಿದೆ!” ಎಂದಳು.
ತುಟಿಯ ಬಳಿಯಿಂದ ಕಿವಿಯನ್ನು ಸರಿಸುವಾಗ,
“ಮೂರು ನಾಲಕ್ಕು ಕಡೆ ಮೂಳೆಯೂ ಮುರಿದಿದೆ!” ಎಂದಳು.
ಹೆಚ್ಚು ಮಾತನಾಡಿಸಬಾರದೆಂದುಕೊಂಡೆ! ಅವಳು ಬಿಡಲಿಲ್ಲ! ಅದೇ ಕೊನೆ ಎಂದು ತಿಳಿದೋ- ಕೊನೆ ಮಾಡಲೋ- ನನ್ನ ಮನಸ್ಸನ್ನು ಅವಳಿಗೆ ಬೇಕಾದಂತೆ ತಿರುಗಿಸಲು ಏನು ಹೇಳಬೇಕೋ ಹೇಳಿದಳು!
ಅಲೆಮಾರಿ ಕುಟುಂಬದ ಸದಸ್ಯೆ ಅವಳು!
ಬೆಳೆದ ಅವಳ ದೇಹವನ್ನು ಮೊದಲು ಹಿಂಡಿ ಹಿಪ್ಪೆ ಮಾಡಿದ್ದು ಅವಳ ಅಪ್ಪನೇ- ನಂತರ ದುಡ್ಡಿಗಾಗಿ ಅವಳನ್ನು ಬಳಸಿಕೊಂಡ!
ಆಮೇಲಾಮೇಲೆ ಅವಳೂ ಅದನ್ನು ಆಸ್ವಾದಿಸತೊಡಗಿದಳು- ದುಡ್ಡಿಗೆ ದುಡ್ಡು- ಸುಖಕ್ಕೆ ಸುಖ!
ಕಾಲಗಳುರುಳಿದಂತೆ ಪಾಪು ಹುಟ್ಟಿತು! ಅದೇನೂ ಅವಳಿಗಂಥಾ ಹೊರೆ ಅನ್ನಿಸಲಿಲ್ಲ!
ಮತ್ತಷ್ಟು ದಿನಗಳುರುಳಿದವು.... ಒಂದು ದಿನ....
ಪಾಪುವಿಗೆ ಹಾಲು ಕುಡಿಸುತ್ತಿದ್ದ ಅವಳನ್ನು ಅಪ್ಪ ಕರೆದ. ಅವಳು ಹೋಗಲಿಲ್ಲ! ಕೋಪದಿಂದ ಬಂದ ಆತ ಅವಳ ಕೆನ್ನೆಗೆ ಬಡಿದು ಪಾಪುವನ್ನು ದೂರಕ್ಕೆ ಎಸೆದ!
ಅವಳಿಗೂ ಕೋಪ ಬಂದಿತು! ಆತನ ತೊಡೆಯಮಧ್ಯೆ ಜಾಡಿಸಿ ಒದ್ದಳು!
ಆತ ರಾಕ್ಷಸನಾದ! ಒದ್ದ ಒದೆತಕ್ಕೆ ಬಿದ್ದವಳು ಮತ್ತೆ ಮೇಲೇಳಲಿಲ್ಲ- ಸೊಂಟ ಮುರಿದಿತ್ತು!
ಆತನ ಕೋಪ ಅಲ್ಲಿಗೇ ನಿಲ್ಲಲಿಲ್ಲ- ಕೈ ಕಾಲುಗಳನ್ನು ತಿರುಚಿ ಮುರಿದು.....
ರಾತ್ರಿಯಲ್ಲಿ ಅವಳನ್ನೂ ಮಗುವನ್ನೂ ಎಳೆದು ತಂದು ಇಲ್ಲಿ ಹಾಕಿ ಊರು ಬಿಟ್ಟು ಹೊರಟು ಹೋದ!
ಎಷ್ಟು ದಿನವಾಯಿತೋ.....
ತುಂಬಿದ ಕಣ್ಣಿನಿಂದ ಅವಳನ್ನೇ ನೋಡಿದೆ.
ಏನು ಮಾಡಲಿ?
ನನ್ನ ಯೋಚನೆ ಅವಳಿಗೆ ತಾಕಿದಂತೆ- ಪರಿಹಾರವನ್ನು ಸೂಚಿಸುವಂತೆ- ಹೇಳಿದಳು,
“ದಯವಿಟ್ಟು ಉಳಿಸಬೇಡಿ ತಂದೆ! ಈ ಜನ್ಮದಿಂದ ಮುಕ್ತಿ ಕೊಡಿ- ನಿಮಗೆ ಪುಣ್ಯ ಬರುತ್ತದೆ!”
೪
"ನೀನು ಬರೆದು ಸ್ಪರ್ಧೆಗೆ ಕಳಿಸಿದ ಕಥೆ......!” ಎಂದಳು.
ಅವಳ ಕಣ್ಣುಗಳನ್ನೇ ನೋಡುತ್ತಾ....,
“ತಪ್ಪು ಮಾಡಿದೆನಾ?” ಎಂದೆ.
ಮತ್ತೊಮ್ಮೆ.... ನನ್ನ ಮುಖವನ್ನು ತನ್ನೆದೆಗೆ ಒತ್ತಿಕೊಂಡಳು!
ಕೆಲವೊಂದು ಪ್ರಶ್ನೆಗಳಿಗೆ ಉತ್ತರವಿರುವುದಿಲ್ಲ!
“ಸಮಾಧಾನಕರ ಬಹುಮಾನವೂ ಬರಲಿಲ್ಲವಲ್ಲೋ.....!” ಎಂದಳು.
ಮುಖವನ್ನು ಮತ್ತಷ್ಟು ಒತ್ತಿದೆ!!
****
Comments
Post a Comment