ಕಡಲು ಬೆಟ್ಟ ಮತ್ತು ನಾನು!

ಕಡಲು ಬೆಟ್ಟ ಮತ್ತು ನಾನು!
*
ಇದು ಕಥೆಯ?
ಗೊತ್ತಿಲ್ಲ.
ಬರೆಯಬೇಕು ಅನ್ನಿಸುತ್ತಿದೆ- ಬರೆಯುತ್ತಿದ್ದೇನೆ!
ಯಾಕೆ ಅನ್ನಿಸುತ್ತಿದೆ?
ಗೊತ್ತಿಲ್ಲ!
ಕಡಲನ್ನು ಕಂಡಾಗ, ಬೆಟ್ಟವನ್ನು ಹತ್ತಿದಾಗ…,
ಆಗಾಗ…,
ಬರೆಯಬೇಕು ಅನ್ನಿಸುತ್ತದೆ!
ಪ್ರಸ್ತುತಾ ಹೇಳಬೇಕು ಅಂದುಕೊಂಡಿರುವ ವಿಷಯವನ್ನು ವಿವರಿಸುವುದು ಸ್ವಲ್ಪ ಕಷ್ಟ!
ಆದ್ದರಿಂದ…,
ಅವಳ ಸಹಾಯವನ್ನು ಪಡೆದುಕೊಳ್ಳುತ್ತೇನೆ.
ಶಾರದೆ!
ಯಾರವಳು?
ವಾಗ್ದೇವಿ ಅಂದುಕೊಳ್ಳೋಣ!
ಪ್ರತೀ ಅವಳೂ…, ಶಾರದೆಯೇ!
ಪ್ರತೀ ಶಾರದೆಯೂ…, ಅವಳೇ!
ಇಷ್ಟಕ್ಕೂ ವಿಷಯವೇನು?
ಎಷ್ಟು ಬರೆದರೂ ಮುಗಿಯದ…,
ವಿವರಿಸಲಾಗದ…,
ಎಷ್ಟು ದಕ್ಕಿದರೂ ಸಾಲದ…,
ಅರ್ಥಕ್ಕೆ ಎಟುಕದ…,
ಅನುಭವಿಸಿ ಮಾತ್ರ ಅರಿತುಕೊಳ್ಳಬಹುದಾದ…,
ಅದ್ಭುತ ಆನಂದಾನುಭೂತಿಗೆ ಕಾರಣವಾದ…, 
ಪ್ರೇಮ!
*
ಮತ್ತೆ ಬರಬೇಡವೆಂದು ಎಷ್ಟೇ ಹೇಳಿದರೂ…,
ಮತ್ತೆ ಮತ್ತೆ ಉರುಳುರುಳಿಬಂದು ಮುತ್ತಿಕ್ಕಿ ಹೋಗುತ್ತಿದೆ…,
ಅಲೆಗಳು!
ಅಲೆಗಳಿಂದ ಆಚೆಗೆ ದೃಷ್ಟಿ ಹಾಯಿಸಿದರೆ…,
ಶಾಂತಗಂಭೀರವಾಗಿ ಹರಡಿಕೊಂಡಿದೆ…,
ಕಡಲು!
ಕಡಲಿನಂಚಿನಲ್ಲಿ…,
ಎಷ್ಟು ಅದ್ಭುತವಾದ ದೃಶ್ಯ!
ಆಕಾಶದಿಂದ ಜಾರಿ…, 
ಕಡಲನ್ನು ಚುಂಬಿಸಿ…,
ತನ್ನನ್ನು ತಾನು ಕಳೆದುಕೊಳ್ಳುತ್ತಿದ್ದಾನೆ…,
ಸೂರ್ಯ!
ಕತ್ತಲು ಬೆಳಕಿನ ಆಟ!
ಅಲೆಗಳಂತೆ ಪ್ರಕ್ಷುಬ್ಧವಾಗಿದ್ದ ನನ್ನ ಮನಸ್ಸು…,
ಅದೇ ಅಲೆಗಳ ಒಡೆಯನಾದ ಕಡಲಿನಂತೆ ಶಾಂತವಾದ ಭಾವ!
ಹೌದು…,
ನಾನು ನಿರಾಳವಾಗಿದ್ದೇನೆ…,
ನೆಮ್ಮದಿಯಾಗಿದ್ದೇನೆ…,
ಇದುವರೆಗಿನ ನನ್ನ ಜೀವನದಲ್ಲಿ ನಾನು ಸಂತೃಪ್ತನಾಗಿದ್ದೇನೆ…,
ಸಂತುಷ್ಟನಾಗಿದ್ದೇನೆ!
“ಹೇಗೋ?” ಎಂದಳು ಶಾರದೆ.
“ಎಷ್ಟು ಚಂದವೆ ನೀನು!” ಎಂದೆ.
ಮುಗುಳು ನಕ್ಕಳು. ಅವಳ ಆ ನಗು ನನಗಿಷ್ಟ.
ಅದ್ಭುತ ಕಳೆಯ ಹೆಣ್ಣು.
ಕಪ್ಪು ಬಣ್ಣ…, ಕುಳ್ಳಿ…, ಗುಂಡಮ್ಮ…, ಹೆಗಲನ್ನು ದಾಟದ ಕೂದಲು….
“ನಿನ್ನ ಕಣ್ಣಿಗೆ ಯಾರು ಚಂದ ಕಾಣಿಸುವುದಿಲ್ಲ? ಅದನ್ನು ಹೇಳು…!” ಎಂದಳು.
ಅವಳ ಮುಖವನ್ನು ಬೊಗಸೆಯಲ್ಲಿ ತೆಗೆದುಕೊಂಡೆ. ಕಣ್ಣನ್ನೇ ದಿಟ್ಟಿಸಿ ನೋಡಿದೆ. ಚಂಚಲಗೊಂಡಳು.
“ನನ್ನನ್ನು ಬಿಟ್ಟು ದೂರ ಹೋಗಲೇ ಬೇಕೇನೆ?” ಎಂದು ಕೇಳಿದೆ.
“ಇದು ನಿನ್ನನ್ನು ಬಿಟ್ಟು ಹೋಗುವುದಲ್ಲವೋ…, ನಿನ್ನ ಪ್ರೇಮವನ್ನು ತಾಕಿದ ಯಾರೂ ನಿನ್ನನ್ನು ಬಿಟ್ಟು ಹೋಗುವುದಿಲ್ಲ! ನೀನೇ ರೂಪಿಸಿಕೊಟ್ಟ ಬದುಕನ್ನು ಜೀವಿಸಲು ಹೋಗುತ್ತಿದ್ದೇನೆ! ಇರು ಎನ್ನಲಾರೆಯೆಂದು ಗೊತ್ತು! ಮತ್ತೆ…, ಪ್ರಶ್ನೆಯಾಕೆ?” ಎಂದಳು.
ನಿಜ…, ಭಾವನಾ ಪ್ರಪಂಚ ಬೇರೆ…,
ವಾಸ್ತವ ಪ್ರಪಂಚ ಬೇರೆ!
ಮುಗುಳುನಕ್ಕೆ.
“ನೆಮ್ಮದಿಯಾಗಿ ಬದುಕು ಹೋಗು! ಯಾವಕಾಲಕ್ಕೂ ಇಲ್ಲೊಬ್ಬ ಇರುತ್ತಾನೆ…! ಆದರೆ ಇವನ ಅಗತ್ಯ ಮತ್ತೊಮ್ಮೆ ನಿನಗೆ ಬಾರದಿರಲಿ!” ಎಂದೆ.
ನನ್ನ ಬೊಗಸೆಯಿಂದ ಮುಖವನ್ನು ತೆಗೆದು…,
ನನ್ನ ಕಣ್ಣುಗಳನ್ನೇ ನೋಡುತ್ತಾ…,
ನನ್ನ ಹಸ್ತಗಳೆರಡನ್ನೂ ಅವಳ ಎದೆಯಮೇಲೆ ಒತ್ತಿ ಹೇಳಿದಳು…,
“ನನ್ನಂತಾ ಹೆಣ್ಣಿಗೆ ನಿನ್ನ ಅಗತ್ಯವಿದೆ! ಅರ್ಥವಾಗದವರಿಗೆ ನೀನೊಂದು ನೋವು! ಅರ್ಥವಾಗುವಂತೆ ವಿವರಿಸು-ಅವರಿಗೆ ಸ್ಪಂದಿಸು!”
“ಇಲ್ಲವೇ! ನಾನು ಅರ್ಥವಾಗದ, ನನ್ನನ್ನು ಅನುಭಾವಿಸದ ಹೆಣ್ಣು ಯಾರೂ ಈ ಪ್ರಪಂಚದಲ್ಲಿಲ್ಲ! ಆದರೂ ಕೆಲವರಿಗೆ ನಾನು ಬೇಡ…! ಅದಕ್ಕೆ ಉತ್ತರ ನೀನೇ ಹೇಳಬೇಕು!” ಎಂದೆ.
ಕತ್ತಲು!
ಅವಳು ಮಾಯವಾಗಿದ್ದಳು.
ಅಂಗಾತನೆ ಮಲಗಿದೆ.
ಆಕಾಶದಲ್ಲಿ ನಕ್ಷತ್ರಗಳು ಮಿನುಗಲಾರಂಬಿಸಿದವು.
ಎದೆಯವರೆಗೆ ತೋಯಿಸಿ ಮರಳುತ್ತಿರುವ ಅಲೆಗಳು.
ಕಡಲಿನ ಶಬ್ದ.
ಕಡಲಿನಿಂದ ಬಂದಳೋ…,
ಆಕಾಶದಿಂದ ಇಳಿದಳೋ…,
ಅಂಗಾತ ಮಲಗಿರುವ ನನ್ನ ತೋಳಮೇಲೆ ತಲೆಯಿಟ್ಟು ಮಲಗಿದಳು…,
ಶಾರದೆ.
ಹೇಳಿದೆನಲ್ಲಾ…?
ನಾನು ಹೇಳಬೇಕು ಅಂದುಕೊಂಡಿರುವ ವಿಷಯ ಅರ್ಥವಾಗಬೇಕಾದರೆ ನನಗೆ ಶಾರದೆಯ ಅಗತ್ಯವಿದೆ.
ಸಂದರ್ಭಕ್ಕೆ ತಕ್ಕಂತೆ ಪ್ರತ್ಯಕ್ಷವಾಗುವ ಪ್ರತಿಯೊಬ್ಬಳೂ ಶಾರದೆಯೇ…!
“ನನ್ನ- ನಿನ್ನ ಬಗ್ಗೆ ಹೇಳು…! ಅರ್ಧ ವಿಷಯ ಅರ್ಥವಾಗುತ್ತದೆ!” ಎಂದಳು.
ಇವಳು ನನಗೆ ಯಾರು?
ಗೊತ್ತಿಲ್ಲ.
ಪರಿಚಯವಾದಾಗಿನಿಂದ ಅವಳು ನನ್ನನ್ನು ಅಪ್ಪು ಎಂದು ಕರೆಯುತ್ತಾಳೆ.
ಅಕ್ಕ ತಮ್ಮಂದಿರಂತೆ- ಅಲ್ಲ!
ಗೆಳೆಯ ಗೆಳತಿಯಂತೆಯೂ- ಅಲ್ಲ.
ಪ್ರೇಯಸಿ ಪ್ರಿಯಕರರಂತೆಯೂ- ಅಲ್ಲ.
ಅಥವಾ…,
ನಮ್ಮ ಬಾಂಧವ್ಯಕ್ಕೆ ನಾವು ಅರ್ಥವನ್ನು ಕಂಡುಕೊಂಡವರೋ- ಹುಡಕಬೇಕು ಅಂದುಕೊಂಡವರೋ- ಅಲ್ಲ!
ಪರಿಚಯವಾದ ಒಂದು ವರ್ಷಕ್ಕೆ…,
ಮನೆ, ಕರ್ತವ್ಯ ಎಂದು- ಪರಸ್ಪರ ದೂರ ಹೋಗಬೇಕಾಗಿ ಬಂದಿತ್ತು.
ನಂತರದ ಎರಡು ವರ್ಷಗಳ ನಂತರ…,
ಆಕಸ್ಮಿಕವಾಗಿ ಭೇಟಿಯಾದಾಗ…,
ಓಡಿಬಂದು…,
“ಅಪ್ಪೂ…!” ಎಂದು ಅಪ್ಪಿಕೊಂಡಳಲ್ಲಾ…?
ಈ ಬಾಂಧವ್ಯಕ್ಕೆ ಹೆಸರೇನು?
ಗೊತ್ತಿಲ್ಲ!
ಆದರೆ…,
ಇದೇ- ನಾನು!
ಅರ್ಧ ವಿಷಯ!
*
“ಏನೇ ಹೇಳು ಶಾರದೆ…, ಹೆಣ್ಣು ನನಗೆ ತಾಕುತ್ತಾಳೆ!” ಎಂದೆ.
“ಗೊತ್ತು!” ಎಂದಳು.
“ನನ್ನನ್ನು ತಾಕಿ…., ನನ್ನನ್ನು ಅನುಭಾವಿಸಿದ ಯಾರೂ ದೂರ ಹೋಗುವುದಿಲ್ಲ!” ಎಂದೆ.
“ಹಾಗಿದ್ದರೆ…, ದೂರ ಹೋದವರಿಗೆ ನೀನು ತಾಕಿಲ್ಲವೆಂದು ಅರ್ಥವಾ?” ಎಂದು ಕೇಳಿದಳು.
“ಹಾಗಲ್ಲವೇ…! ನಾನೇನು ಮಾಡಲಿ? ಕಟ್ಟುಪಾಡುಗಳಿಲ್ಲದವ! ನಿನಗೇ ಗೊತ್ತು…, ಒಂದು ಕಾಲದಲ್ಲಿ ಪ್ರಪಂಚಕ್ಕೇ ಹಂಚಬಹುದಾದಷ್ಟಿದ್ದ ನನ್ನ ಪ್ರೇಮವನ್ನು ನಿನ್ನೊಬ್ಬಳಲ್ಲಿ ಕೇಂದ್ರೀಕರಿಸಿದ್ದೆ! ಆದರೆ ನಿನಗೆ ನನಗಿಂತ…, ನನ್ನ ಪ್ರೇಮಕ್ಕಿಂತ ಬೇರೆ ಏನೋ ಮುಖ್ಯವಾಗಿತ್ತು! ದೂರ ಹೋದೆ! ಅಂದಿನಿಂದ ನಿನ್ನೊಬ್ಬಳಲ್ಲಿ ಕೇಂದ್ರೀಕೃತವಾಗಿದ್ದ ಪ್ರೇಮ ಅವ್ಯಾಹತವಾಗಿ ಹರಿಯಲಾರಂಬಿಸಿತು- ಬ್ರಹ್ಮಾಂಡವನ್ನೇ ತುಂಬಿತು!” ಎಂದೆ.
ಅವಳೇನೂ ಮಾತನಾಡಲಿಲ್ಲ. ಮುಂದುವರೆಸು ಅನ್ನುವಂತೆ ನೋಡಿದಳು.
“ನಾನು ಭಾವವಾದೆ. ಕಟ್ಟುಪಾಡುಗಳಿಂದ ಮುಕ್ತನಾದೆ. ಸ್ವತಂತ್ರನಾದೆ!” ಎಂದು ನಿಲ್ಲಿಸಿ…,
“ಯಾರಿಗೆ ಯಾವ ರೂಪದಲ್ಲಿಬೇಕೋ ಆ ರೂಪದಲ್ಲಿ ದೊರಕುವವನಾದೆ!” ಎಂದೆ.
“ಇದಕ್ಕೇ ನಿನ್ನ ಕಥೆ ಯಾರಿಗೂ ಅರ್ಥವಾಗುವುದಿಲ್ಲ! ಬಿಡಿಸಿ ಹೇಳು! ನಿನ್ನಿಂದ ದೂರ ಹೋದವರಿಗೆ ನೀನು ತಾಕಿಲ್ಲವೆಂದು ಅರ್ಥವಾ?” ಎಂದಳು ಮತ್ತೊಮ್ಮೆ.
“ನನಗೆ ಅತೀ ಹೆಚ್ಚು ತಾಕುವುದು- ಅಮ್ಮಂದಿರು!” ಎಂದು ಹೇಳಿ ನಗುತ್ತಿದ್ದ ಅವಳ ಮುಖವನ್ನು ನೋಡಿ…, ಅವಳು ತಲೆತಗ್ಗಿಸುವಷ್ಟು ಸೂಕ್ಷ್ಮವಾಗಿ ಅವಳ ಕಣ್ಣುಗಳನ್ನೇ ನೋಡಿದೆ.
“ಅಮ್ಮಂದಿರಿಗೆ ನಾನು ಮಗ! ಸಹೋದರನಾಗಿ ಬೇಕಾದವರಿಗೆ ನಾನು ಸಹೋದರ! ಗೆಳೆಯನಾಗಿ ಬೇಕಾದವರಿಗೆ ನಾನು ಗೆಳೆಯ! ಪ್ರಿಯಕರನಾಗಿ ಬೇಕಾದವರಿಗೆ ನಾನು ಪ್ರಿಯಕರ!” ಎಂದು ನಿಲ್ಲಿಸಿ…,
“ನನ್ನಿಂದ ದೂರ ಹೋದವರೆಲ್ಲರೂ ಪ್ರೇಯಸಿಯರೇ!” ಎಂದು ನಕ್ಕೆ.
ಅವಳೇನೂ ಮಾತನಾಡಲಿಲ್ಲ. ನಾನೇ…,
“ಸಮಸ್ಯೆಯೇನು ಗೊತ್ತೇನೆ ಶಾರದೆ?” ಎಂದೆ.
ತಲೆಯೆತ್ತಿ ನೋಡಿದಳು.
“ನಾನು ಸುಳ್ಳು ಹೇಳುವುದಿಲ್ಲ. ನಾಟಕ ಮಾಡುವುದಿಲ್ಲ. ದುಮ್ಮಿಕ್ಕುವ ಜಲಪಾತದಂತಹ ನನ್ನ ಪ್ರೇಮವನ್ನು ತಡೆಹಿಡಿಯುವುದಿಲ್ಲ! ಅಮ್ಮಂದಿರ ಪ್ರೇಮದಿಂದ ಹಿಡಿದು ಹೆತ್ತ ಮಗಳ ಪ್ರೇಮದವರೆಗೆ…, ಪ್ರತಿಯೊಬ್ಬರ ಪ್ರೇಮವೂ ನನಗೆ ಬೇಕು! ಪ್ರತಿಯೊಬ್ಬರ ಹೃದಯ ಸ್ಪಂದನೆಯೂ ನನಗೆ ಕೇಳಿಸುತ್ತದೆ. ನನ್ನ ಹೃದಯ ಪ್ರತಿಸ್ಪಂದಿಸುತ್ತದೆ! ಸಮಸ್ಯೆ ಹುಟ್ಟಿಕೊಳ್ಳುವುದು…, ಪ್ರೇಮ ಕಾಮದೊಂದಿಗೆ ತಳುಕು ಹಾಕಿದಾಗ!!” ಎಂದು ನಿಲ್ಲಿಸಿ ಗೊಂದಲದಿಂದ ನೋಡುತ್ತಿದ್ದ ಅವಳ ಕಣ್ಣುಗಳನ್ನೇ ದಿಟ್ಟಿಸಿ ಹೇಳಿದೆ…,
“ನಾನು ಕಾಮುಕನಲ್ಲ!”
ಅವಳು ಮೌನ…, ನಾನೇ…,
“ಪ್ರೇಯಸಿ ಪ್ರಿಯಕರರೆನ್ನಿಸಿಕೊಂಡವರೆಲ್ಲರೂ ಕಾಮಿಗಳಾಗಿರಬೇಕಾಗಿಲ್ಲವೇ ಶಾರದೆ! ಅದೊಂದು ಅದ್ಭುತ ಅನುಭೂತಿ! ಎದೆಗೆ ಅಪ್ಪಿಕೊಳ್ಳುವುದು, ಮುತ್ತೊಂದು ಕೊಡುವುದು, ಕಣ್ಣಲ್ಲಿ ಕಣ್ಣಿಟ್ಟು ನೋಡುವುದು…, ಇದು ಕಾಮವಾ?” ಎಂದೆ.
“ಅಲ್ಲವಾ?” ಎಂದಳು.
ನಾನೂ ಗೊಂದಲಗೊಂಡು ಹೇಳಿದೆ…,
“ಗೊತ್ತಿಲ್ಲ!”
ಎರಡು ಕ್ಷಣಗಳ ಮೌನ. ನಂತರ ಹೇಳಿದೆ…,
“ನಮ್ಮ ನಡುವೆ ಭೇಟಿಗೆ ಸಂದರ್ಭವೇ ಒದಗದಿದ್ದರೂ, ನೀನೆಲ್ಲೋ ನಾನೇಲ್ಲೋ ಆಗಿದ್ದರೂ…, ಅದ್ಭುತವಾಗಿ ತಾಕುತ್ತೇವಲ್ಲ? ಇದು ಏನು?”
ಅವಳೇನೂ ಮಾತನಾಡಲಿಲ್ಲ.
ನಾನು ತೀರದಿಂದ ಎದ್ದು ನಡೆದೆ!
*
ಬೆಟ್ಟ.
ವೇಗವಾಗಿ ಹತ್ತಿದ್ದರಿಂದ ಬೆವರು ಧಾರಾಕಾರವಾಗಿ ಸುರಿಯುತ್ತಿತ್ತು.
ವಾರಕ್ಕೆ ಆರು ದಿನ ಬೆಳಗ್ಗೆ ಬೆಟ್ಟ ಹತ್ತುವವ…, ಒಂದುದಿನ ಸಂಜೆ ಹತ್ತುತ್ತೇನೆ.
ಇಂದು ಸ್ವಲ್ಪ ತಡವಾಗಿತ್ತು!
ಕತ್ತಲಾಗಿತ್ತು.
ಬಂಡೆಯೊಂದರ ಮರೆಯಲ್ಲಿ ಯಾರೋ ಇದ್ದಾರೆ ಅನ್ನಿಸಿತು.
ಇಷ್ಟು ಹೊತ್ತಿಗೆ ಯಾರಪ್ಪಾ ಅಂದುಕೊಂಡು ಅತ್ತ ಹೋಗುವಾಗ…,
“ಬಂದೆಯಾ? ಇಷ್ಟು ಲೇಟಾದಾಗ ಬರುವುದಿಲ್ಲವೇನೋ ಅಂದುಕೊಂಡೆ!” ಎಂದಳು ಶಾರದೆ.
“ಇದೇನು ಇವತ್ತು ಹೇಳದೆ ಕೇಳದೆ?” ಎಂದೆ.
“ನನಗೊಂದು ಡೌಟು!” ಎಂದಳು.
“ನೀನು ನನ್ನ ಡೌಟುಗಳನ್ನು ತೀರಿಸುವವಳು ಹೊರತು ನಿನಗೆಂತ ಡೌಟು?” ಎಂದೆ.
“ಇದು ನನ್ನ ಡೌಟಲ್ಲ…! ನಿನ್ನದೇ ಗೊಂದಲಕ್ಕೆ ಉತ್ತರ! ಕಥೆಯಲ್ಲಿ ನೀನು ಹೇಳಬೇಕು ಅಂದುಕೊಂಡಿರುವ ಮುಖ್ಯ ವಿಷಯ!” ಎಂದಳು.
“ಹಾಗಿದ್ದರೆ ಇದು ಕಥೆ!” ಎಂದೆ.
ಅದಕ್ಕೆ ಉತ್ತರ ಕೊಡದೆ…,
“ನೀನೇನೋ ಮಹಾ ಧಾರಾಳಿ! ಕಣ್ಣಿಗೆ ಕಂಡವರನ್ನೆಲ್ಲಾ ಪ್ರೇಮಿಸುತ್ತೀಯ! ಆದರೆ ಹೆಣ್ಣು ಹಾಗಲ್ಲವಲ್ಲಾ? ಅವಳಿಗೊಬ್ಬನೇ ಪ್ರಪಂಚ!” ಎಂದಳು.
“ಕಂಡವರನ್ನೆಲ್ಲಾ ಪ್ರೇಮಿಸುವ ಧಾರಾಳಿ!” ಎಂದು ನಕ್ಕು…,
“ಹೆಣ್ಣಿಗೆ ಮಾತ್ರವಲ್ಲ ಶಾರದೆ…, ಗಂಡಿಗೂ ಒಬ್ಬಳೇ ಹೆಣ್ಣು ಸಾಯುಜ್ಯವಾಗುತ್ತಾಳೆ- ಪರಸ್ಪರ ಬಂಧಿಸಿಕೊಂಡಾಗ! ನಾನು ಬಂಧನಕ್ಕೆ ಒಳಪಡದವ! ನನ್ನನ್ನು ಪ್ರೇಮಿಸುವ ಪ್ರತಿ ಹೆಣ್ಣಿಗೆ ನಾನೊಬ್ಬ ಆಪ್ಷನ್! ನನ್ನನ್ನು ಒಪ್ಪುವ- ತಿರಸ್ಕರಿಸುವ ಸ್ವಾತಂತ್ರ್ಯ ಅವಳಿಗೆ ಇದ್ದೇ ಇದೆ! ಒಪ್ಪಿದಳೂ ಅಂದುಕೋ…, ನನ್ನಿಂದ ಹೊರಬರುವುದು ಕಷ್ಟ! ಅದಕ್ಕೇ…, ಅವಳನ್ನು ನಾನು ಯಾವ ಕಾರಣಕ್ಕೂ ಬಂಧಿಸಿಕೊಳ್ಳಲಾರೆ! ಹಾಗೆಯೇ ಅವಳ ಬಂಧನಕ್ಕೆ ನಾನೂ ಒಳಪಡಲಾರೆ! ನನ್ನನ್ನು ಹೀಗೆಯೇ ಒಪ್ಪಿಕೊಂಡ ನಂತರ ಹೆಣ್ಣು ಮಾಡುತ್ತಿರುವುದೇನು ಗೊತ್ತೇ?” ಎಂದೆ.
ತುಂಟತನದಿಂದ ನಕ್ಕಳು. ಕಣ್ಣಿನಲ್ಲಿ ಕುತೂಹಲವಿತ್ತು.
“ಪ್ರೇಮವನ್ನು ತಿರಸ್ಕರಿಸಿದರೂ ಪರವಾಗಿಲ್ಲ…, ಆದರೆ…, ನನ್ನದು ಪ್ರೇಮವೇ ಅಲ್ಲವೆಂದು ನಿರೂಪಿಸಲು ಯತ್ನಿಸುತ್ತಾಳೆ! ಅದನ್ನು ಸಾಬೀತು ಪಡಿಸಲು ಇನ್ನೊಬ್ಬಳೊಂದಿಗಿನ ನನ್ನನ್ನು ಉದಾಹರಿಸುತ್ತಾಳೆ! ನಾನು ಅದನ್ನೇ ಇಟ್ಟುಕೊಂಡು…, ‘ಅವಳೊಂದಿಗಿನ ನಾನು ನಿಜ…, ನಿನ್ನೊಂದಿಗಿನ ನಾನು ಸುಳ್ಳೆ? ಅವಳೂ ಹಾಗೇ ಅಂದಳು!’ ಅನ್ನುತ್ತೇನೆ! ದೂರ ಹೋಗುತ್ತಾಳೆ!” ಎಂದೆ.
“ಪುಣ್ಯಾತ್ಮ!” ಎಂದಳು.
“ಹೇಳಿದೆನಲ್ಲಾ? ನನ್ನ ಪ್ರೇಮ ಸ್ವತಂತ್ರ! ಯಾವಾಗ ಪ್ರೇಮದ ಉತ್ತುಂಗದಲ್ಲಿ ಕಾಮ ನಡೆಯುತ್ತದೆಯೋ…, ಬಂಧನ ಉಂಟಾಗುತ್ತದೆ! ಹಾಗೆ ಬಂಧನ ಉಂಟಾಗುವುದಾದರೆ ಕಾಮ ಬೇಡ ಅನ್ನುತ್ತೇನೆ ನಾನು! ಅದನ್ನು ಒಪ್ಪಿ…, ಬಂಧನ ಉಂಟಾಗುವುದಿಲ್ಲ ಅನ್ನುವ ಪರಸ್ಪರ ಧಾರಣೆಯಲ್ಲಿ ಕಾಮ ನಡೆಯಿತು ಅಂದುಕೋ…, ನನ್ನನ್ನು ದೂಷಿಸಿ ದೂರ ಹೋದರೆ ನಾನೇನು ಮಾಡಲಿ?” ಎಂದೆ.
“ಅವಳು ದೂರ ಹೋದರೆ ನಿನಗೆ ಸಂಕಟವಾಗುವುದಿಲ್ಲವಾ?” ಎಂದಳು.
“ಬಂಧವಿಮುಕ್ತನಿಗೆಂತ ಸಂಕಟ?” ಎಂದೆ.
“ಅದಕ್ಕೇ ಅವಳು ದೂರ ಹೋಗುತ್ತಾಳೆ!” ಎಂದಳು.
“ಅವಳಿಗೆ ಸಂಕಟವಾಗುವುದಿಲ್ಲವಾ?” ಎಂದೆ.
“ಅವಳು ಅನ್ನುವುದನ್ನು ಬಿಟ್ಟು ನಾನು ಎಂದೇ ಹೇಳುತ್ತೇನೆ ಕೇಳು…, ನನಗೆ ನಿನ್ನ ಪ್ರೇಮ ಬೇಕು! ನನಗೆ ಮಾತ್ರ ಬೇಕು! ನಿನ್ನಿಂದ ನನಗೆ ದೊರೆತ ಪ್ರೇಮ ಇನ್ನೊಬ್ಬಳಿಗೂ ದೊರಕುತ್ತಿದೆ ಅನ್ನುವ ನೋವಿಗಿಂತ…, ನಿನ್ನಿಂದ ದೂರ ಹೋಗುವ ನೋವು ನನಗೆ ಸಹ್ಯ!” ಎಂದಳು.
“ಹಾಗಿದ್ದರೆ…, ಕಾಮ ನಡೆಯುವುದಕ್ಕೆ ಮುಂಚೆಯೇ ಹೋಗಬಹುದಲ್ಲೇ?” ಎಂದೆ.
“ಇಲ್ಲಿಯೇ ಗಂಡಿಗೆ ಅರ್ಥವಾಗದ ವಿಷಯವಿರುವುದು! ಕಾಮವನ್ನು ತನ್ನ ಸಮರ್ಪಣೆಯಾಗಿ ಕಾಣುತ್ತಾಳೆ ಹೆಣ್ಣು! ಒಮ್ಮೆ ತನ್ನ ಸಮರ್ಪಣೆಯಾದರೆ ಗಂಡು ಬೇರೆಡೆಗೆ ಹೋಗುವುದಿಲ್ಲ ಅನ್ನುವ ನಂಬಿಕೆ ಅವಳದ್ದು!” ಎಂದಳು.
“ಹಾಗಿದ್ದರೆ…, ಅವಳ ಸಮರ್ಪಣೆಗೆ ನಾನು ಯೋಗ್ಯನಲ್ಲ ಅನ್ನುವುದು…, ತನ್ನನ್ನು ತಾನು ಸಮರ್ಪಿಸಿಕೊಂಡ ನಂತರ ತಿಳಿಯುತ್ತದೆ- ಅನ್ನುತ್ತೀಯ?” ಎಂದೆ.
ದೀರ್ಘವಾದ ಉಸಿರೆಳೆದುಕೊಂಡು ಹೇಳಿದಳು…,
“ನೀನು ಹೇಳುವುದು ಸರಿಯೋ…! ಗಂಡು- ಹೆಣ್ಣು…, ಪರಸ್ಪರ ಪರಿಪೂರ್ಣವಾಗಿ ಅರಿತುಕೊಳ್ಳುವುದು ಅನ್ನುವುದು- ಇಲ್ಲ! ಅದೊಂದು ಮುಗಿಯದ ಗೊಂದಲ! ಹಾಗಿದ್ದೂ ಪರಸ್ಪರ ಆಕರ್ಷಣೆಯೋ, ಪ್ರೇಮವೋ ಇಲ್ಲವಾಗುವುದೂ ಇಲ್ಲ! ಹಾಗಿದ್ದರೇ ಚಂದ!”
ಇಷ್ಟೇ ವಿಷಯ!
*
ಹೇಳಲು ಇನ್ನೇನೂ ಉಳಿದಿಲ್ಲ.
ಪ್ರತಿದಿನ ಬೆಟ್ಟ ಹತ್ತುತ್ತೇನೆ…,
ತಿಂಗಳು ಎರಡು ತಿಂಗಳಿಗೊಮ್ಮೆ ಕಡಲನ್ನು ನೋಡಿ ಬರುತ್ತೇನೆ.
ಪ್ರತಿಯೊಬ್ಬರಿಗೂ ನನ್ನಮೇಲೆ ಪ್ರೇಮಾಧಿಕಾರವಿದ್ದಾಗ್ಯೂ…,
ಯಾರೊಬ್ಬರಿಗೂ ನಾನು ಕಟ್ಟುಪಡುವುದಿಲ್ಲವಾದ್ದರಿಂದ…,
ತೀರಕ್ಕಪ್ಪಳಿಸುವ ಅಲೆಗಳ ಆಚೆಗಿನ ಕಡಲಿನಂತೆ…,
ಶಾಂತವಾಗಿದ್ದೇನೆ!
ಬೆಟ್ಟದಂತೆ…,
ದೃಢವಾಗಿದ್ದೇನೆ!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!