ಹಾರರ್ ಥೀಂ

 

ಹಾರರ್ ಥೀಂ!

ದೆವ್ವ ಭೂತಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಎಂದು ಕೇಳಿದೆ.

ಗೊಂದಲದಿಂದ ನೋಡಿದ! ಅಪರಿಚಿತ ವ್ಯಕ್ತಿಯೊಬ್ಬ ಏಕಾಏಕಿ ಹೀಗೆ ಪ್ರಶ್ನಿಸಿದರೆ ಯಾರಿಗಾದರೂ ಗೊಂದಲವುಂಟಾಗುತ್ತದೆ! ಅದರಲ್ಲೂ ಯಾವ ಪೀಠಿಕೆಯೂ ಇಲ್ಲದೆ…!

ಕ್ಷಮಿಸಿ… ನಿಮ್ಮ ಬಸ್ಸಿನಲ್ಲೇ ಇದ್ದೆ- ನಿಮ್ಮ ಹಿಂದಿನ ಸೀಟ್! ನೀವು ಪಕ್ಕದ ಸೀಟಿನವರೊಂದಿಗೆ ಏನೋ ಹೇಳುತ್ತಿದ್ದದ್ದು ಕೇಳಿಸಿತು… ರಾಜರಾಜ ಚೋಳನೆಂದೋ ಏನೋ…! ಏಳುನೂರು ವರ್ಷದಷ್ಟು ಹಳೆಯ ಮರದಬಗ್ಗೆ…!” ಎಂದೆ.

ಆತ ರಿಲಾಕ್ಸ್ ಆಗಿ ಮುಗುಳುನಕ್ಕು…,

ಇಂಗ್ಲೀಷ್ ಹಾರರ್ ಮೂವಿಗಳನ್ನು ನೋಡಿದ ಪ್ರಭಾವ ಗುರುವೆ! ಕನ್ನಡದಲ್ಲೂ ಹಾಗೊಂದು ಮೂವಿ ಮಾಡುವ ಯೋಚನೆ!” ಎಂದ.

ಈಬಾರಿ ನಾನು ಗೊಂದಲದಿಂದ ನೋಡಿದೆ!

ನಾನೊಬ್ಬ ರೈಟರ್! ಪ್ರೊಡ್ಯೂಸರೊಬ್ಬರು ಹಾರರ್ ಥೀಂ ಕಥೆ ಬೇಕು ಅಂದರು! ಅದೇ ಮಾಮೂಲಿ ಬಿಳಿಸೀರೆ, ರಕ್ತ ಹೀರುವ ದೆವ್ವಗಳನ್ನು ಬಿಟ್ಟು ಬೇರೆ ಬರೆಯೋಣ ಅನ್ನಿಸಿತು!” ಎಂದ.

ನನ್ನ ಮುಖದಲ್ಲಿ ಕುತೂಹಲವನ್ನು ಕಂಡನೋ ಏನೋ…,

ಆದರೂ ಸುಮ್ಮಸುಮ್ಮನೆ ಏನೋ ಬರೆದರೆ ಆಗದಲ್ಲಾ…? ನಿಜಕ್ಕೆ ಹತ್ತಿರವಾಗಿರುವ ಹಾಗೆ ಬರೆಯಬೇಕು! ನಿಜವೇ ಎಂದು ನಂಬುವಂತಿರಬೇಕು!” ಎಂದು ಹೇಳಿ ಕೈಯ್ಯಲ್ಲಿದ್ದ ಟೀ ಕಪ್ಪನ್ನು ಸಿಪ್ ಮಾಡಿ ನನ್ನ ಮುಖ ನೋಡಿ..,

ಸಾರಿ! ಒಬ್ಬನೇ ಕುಡಿಯುತ್ತಿದ್ದೇನೆ…! ನಿಮಗೆ ಟೀ?” ಎಂದ.

ಅಯ್ಯೋ ಬೇಡ! ನೀವು ಮಾತನಾಡುತ್ತಿದ್ದ ವಿಷಯದಬಗ್ಗೆ ಕುತೂಹಲ ಮೂಡಿ ಇಳಿದು ಬಂದೆನೆ ಹೊರತು ಟಿ ಕುಡಿಯುವುದಿಲ್ಲ! ಒಂದು ಸಣ್ಣ ಫೋಬಿಯಾ ಇದೆ! ದೂರ ಪ್ರಯಾಣ ಮಾಡುವಾಗ ಟೀ ಬ್ರೇಕ್‌ನಲ್ಲಿ ಬಸ್ಸಿನಿಂದ ಇಳಿಯುವುದಿಲ್ಲ! ನಾನು ಹತ್ತುವ ಮುಂಚೆ ಬಸ್‌ ಹೊರಟು ಹೋದರೇ... ಅನ್ನುವ ಹೆದರಿಕೆ! ಈಗ ನೀವಿರುವ ಧೈರ್ಯ!” ಎಂದೆ.

ಮುಗುಳುನಕ್ಕ ಆತ ಏನೂ ಮಾತನಾಡಲಿಲ್ಲ.

ಹೇಳಿ! ನೀವು ಹೇಳಿದ ಆ ಮರ ಎಲ್ಲಿದೆ?” ಎಂದೆ.

ಮೈಸೂರು!” ಎಂದ ಆತ- ಸಂಕ್ಷಿಪ್ತವಾಗಿ!

ಯಾಕೋ ಆತನಿಗೆ ನನ್ನೊಂದಿಗೆ ಮಾತನಾಡಲು ಆಸಕ್ತಿ ಇಲ್ಲ ಅನ್ನಿಸಿತು- ಅವನ ಕಥೆಯನ್ನು ನಾನು ಕದ್ದರೆ?

ಮೈಸೂರೇ ಆದರೆ ನೀವು ಹೇಳಿದಂತೆ ಘಟನೆಯೊಂದು ನಡೆದಿದೆ! ಆದರೆ ಕಥಾನಾಯಕ ರಾಜನಲ್ಲ! ಒಬ್ಬ ಸಾಮಾನ್ಯ ನಾಗರೀಕ- ಇತಿಹಾಸಕಾರ!” ಎಂದೆ.

ಆತನ ಮುಖದಲ್ಲಿ ಕುತೂಹಲದೊಂದಿಗೆ ಆಶ್ಚರ್ಯವೂ ಮೂಡಿತು!

ಹೇಳಿ! ನಿಮಗೆ ಈ ಕಥೆ ಹೊಳೆದಿದ್ದು ಹೇಗೆ? ಸಂಶಯ ಬೇಡ- ನಾನು ಆತ್ಮಾಭಿಮಾನ ಇರುವವನು! ನಿಮ್ಮ ಕಥೆಯನ್ನು ಕದ್ದರೆ ಅದು ನನ್ನ ಘನತೆಗೆ ಪೆಟ್ಟು!” ಎಂದೆ.

ಬಸ್ಸಿನ ಕಡೆಗೆ ನೋಡಿದ. ದಾರಿಯಲ್ಲಿ ಪಂಚರ್ ಆದ ಹಿಂದಿನ ಟಯರ್ ಅನ್ನು ಬದಲಿಸುವ ಸನ್ನಾಹದಲ್ಲಿದ್ದ ಡ್ರೈವರ್.

ನೀವೂ ರೈಟರ್‌ಏ?” ಎಂದು ಕೇಳಿದ.

ಹೌದು! ಇದೇ ಕಥೆಯ ಜಾಡು ಹಿಡಿದು ಹೊರಟವನು! ಯಾಕೋ ಜನ ಎಲ್ಲವನ್ನೂ ವಿರುದ್ಧವಾಗಿ ತೆಗೆದುಕೊಳ್ಳುತ್ತಾರೆ! ಜನರ ದೃಷ್ಟಿಕೋನದಂತಲ್ಲದೆ ಬೇರೆ ದೃಷ್ಟಿಯಲ್ಲಿ ಅಲ್ಲಿನ ಘಟನೆ ನನಗೆ ಕಾಣಿಸುತ್ತದೆ!” ಎಂದೆ.

ಅಂದರೆ?” ಎಂದ.

ನೀವು ಹೇಳಿದಂತೆ ಚೋಳರಾಜನಿಗೆ ಮೈಸೂರು ಪ್ರಾಂತದ ರಾಣಿಯಲ್ಲಿ ಮೋಹವಾಗಿದ್ದಲ್ಲ!” ಎಂದೆ.

ಹಾಗಿದ್ದರೆ ನಿಮ್ಮ ಕಥೆ ಬೇರೆ, ನನ್ನ ಕಥೆ ಬೇರೆಯೇನೋ…?” ಎಂದ.

ಅದಕ್ಕೇ ಕೇಳಿದೆ… ನಿಮಗೆ ಈ ಕಥೆ ಮೂಡಿದ್ದು ಹೇಗೆ?” ಎಂದೆ.

ಆ ಆಲದ ಮರದ ಆಸು ಪಾಸಿನ ಜನ ಹೇಳಿದ ಕಟ್ಟು ಕಥೆಗಳಿಂದ!” ಎಂದ.

ಕಟ್ಟು ಕಥೆಗಳು ಇತಿಹಾಸವೂ ಆಗಬಹುದು! ತಿರುಚಿದ ಐತಿಹ್ಯವೂ ಆಗಬಹುದು!” ಎಂದೆ.

ಅಂದರೆ… ನೀವು ದೆವ್ವ ಭೂತಗಳನ್ನು ನಂಬುತ್ತೀರ ಎಂದಾಯ್ತು!” ಎಂದ.

ಮೊದಲು… ನಾವು ಹೇಳುತ್ತಿರುವ ಕಥೆ ಒಂದೇ ಮೂಲದ್ದ ಎಂದು ಸ್ಥಿರವಾಗಲಿ!” ಎಂದೆ.

ದೀರ್ಘವಾದ ನಿಟ್ಟುಸಿರೊಂದನ್ನು ಬಿಟ್ಟು ಹೇಳಿದ…,

ಆ ಆಲದ ಮರಕ್ಕೆ ಸಮೀಪದ ಊರೇ ನನ್ನದು! ಸಿನೆಮಾ ಹುಚ್ಚಿನಿಂದಾಗಿ ಬೆಂಗಳೂರಿಗೆ ಬಂದು ಸೆಟಲ್ ಆದೆ. ಪ್ರೊಡ್ಯೂಸರೊಬ್ಬರು ಹಾರರ್ ಕಥೆ ಕೇಳಿದಾಗ ಮೊದಲು ನೆನಪಾಗಿದ್ದು ಆ ಆಲದ ಮರ!” ಎಂದ.

ಯಾಕೆ?” ಎಂದೆ ಕುತೂಹಲದಿಂದ.

ಇದುವರೆಗೆ ಯಾರೊಬ್ಬರೂ ಆ ಆಲದ ಮರದ ಕೆಳಗೆ ಮಲಗಿ ನೆಮ್ಮದಿಯಾಗಿ ನಿದ್ದೆ ಮಾಡಿದ ಚರಿತ್ರೆಯಿಲ್ಲ!” ಎಂದ.

ಅಂದರೆ?”

ಮಲಗಿದ ಸ್ವಲ್ಪ ಹೊತ್ತಿಗೆ ಯಾರೋ ಕರೆದು ಎಬ್ಬಿಸಿದ ಫೀಲ್ ಉಂಟಾಗುತ್ತದೆ!” ಎಂದ.

ನೀವು ಶ್ರಮಿಸಿದ್ದೀರ?”

ಎರಡುಮೂರು ಭಾರಿ ಶ್ರಮಿಸಿದ್ದೆ! ಯಾರೋ ಕರೆದಂತಾಗುವುದು ನಿಜ!” ಎಂದ.

ಯಾಕಿರಬಹುದು?”

ಅದು ಗೊತ್ತಿಲ್ಲ! ಜನ ಹೇಳುವ ಕಟ್ಟು ಕಥೆಯ ಪ್ರಕಾರ- ಏಳುನೂರು ವರ್ಷಗಳ ಮುಂಚೆ ಚೋಳಕುಟುಂಬದ ರಾಜನೊಬ್ಬ ಮಹಿಷಪುರದ ರಾಣಿಯಲ್ಲಿ ಮೋಹಗೊಂಡು ತನ್ನ ಪ್ರೇಮ ನಿವೇದನೆಯನ್ನು ಮಾಡಿದನಂತೆ. ಆಕೆಗೂ ಆ ರಾಜನೆಂದರೆ ಅಸಾಮಾನ್ಯ ಪ್ರೇಮ! ಕೊನೆಗೆ ಆತ ಮಹಿಷಪುರದ ಅರಸರಲ್ಲಿ ಸಂಬಂಧ ಬೇಡಿದನಂತೆ! ಆದರೆ ಮಹಿಷಪುರದ ರಾಜ ಆ ಚೋಳನನ್ನು ಕೊಂದು ಈ ಮರದ ಅಡಿಯಲ್ಲಿ ಹೂತು ಹಾಕಿದನಂತೆ! ಅದನ್ನರಿತ ಆ ರಾಣಿ ಅವನಿದ್ದಲ್ಲಿಯೇ ತನ್ನ ಸಮಾಧಿಯಾಗಬೇಕೆಂದು ಹುಡುಕಿ ಬಂದಳಂತೆ! ಆದರೆ ಮಹಿಷಪುರದ ರಾಜ ಆಕೆಯನ್ನು ಹಿಡಿಸಿ ಗುಹೆಯೊಂದರಲ್ಲಿ ಬಂಧಿಸಿಟ್ಟನಂತೆ! ಅಷ್ಟರಲ್ಲಿ ಚೋಳರು ಮಹಿಷಪುರವನ್ನು ಆಕ್ರಮಿಸಿದರಂತೆ! ಮಹಿಷಪುರ ಚೋಳರ ವಶವಾದರೂ ರಾಣಿಯನ್ನು ಹುಡುಕಿ ಬಂದ ಚೋಳನನ್ನು ಕಾಣದೆ ಚೋಳರು ನಿರಾಶರಾದರಂತೆ! ಹಾಗೆಯೇ ರಾಣಿಯನ್ನು ಕಂಡು ಹಿಡಿಯುವ ಪ್ರಯತ್ನವೂ ನೆರವೇರದೆ- ರಾಣಿ ಅದೇ ಗುಹೆಯಲ್ಲಿ ಮರಣಿಸಿದಳಂತೆ! ಅದೇ ಚೋಳ ರಾಜ ಇಂದಿಗೂ ತನ್ನ ರಾಣಿಯನ್ನು ಕಾಯುತ್ತಿದ್ದಾನೆಂದು ನಂಬಿಕೆ!” ಎಂದ.

ಗೋಜಲುಮಯವಾದ ಕೆಟ್ಟ ಕಥೆ!” ಎಂದೆ.

ಕಟ್ಟುಕಥೆಗಳು ಯಾವಾಗಲೂ ಹಾಗೆಯೇ!” ಎಂದ.

ಆದರೆ ನೀವು ನಿಮ್ಮ ಪಕ್ಕದವರಿಗೆ ಹೇಳಿದ ಕಥೆ ಹೀಗಿರಲಿಲ್ಲವಲ್ಲ!” ಎಂದೆ.

ಇದನ್ನು ಹೀಗೆಯೇ ತೆಗೆದುಕೊಂಡರೆ ಏನು ಮಜ? ಅದಕ್ಕೇ ಮರದ ಕೆಳಗೆ ಮಲಗಿದರೆ ತಟ್ಟಿ ಎಬ್ಬಿಸುವ ದೆವ್ವ- ತನ್ನ ಪ್ರಿಯಕರ ರಾಜಚೋಳನನ್ನು ಕಾಯುತ್ತಿರುವ ಹೆಣ್ಣು ದೆವ್ವ ಎಂದು ಮಾಡಿದೆ!” ಎಂದ.

ನಮ್ಮಿಬ್ಬರ ಕಥೆಯ ಮೂಲವೂ ಒಂದೇ ಮಿಸ್ಟರ್ ರೈಟರ್! ಅದೇ ಆಲದ ಮರ- ಅದೇ ಕಟ್ಟುಕಥೆ! ಆದರೆ ನಿಜವಾದ ಕಥೆ ಬೇರೆ!” ಎಂದೆ.

ಸ್ವಲ್ಪ ಗೊಂದಲ, ಸ್ವಲ್ಪ ಆಸಕ್ತಿ, ಸ್ವಲ್ಪ ಅಸಡ್ಡೆಯೂ ತುಂಬಿದ ನೋಟವೊಂದನ್ನು ನೋಡಿದ!

ಚೋಳರಿಗೂ ಪಲ್ಲವರಿಗೂ ಪದೇ ಪದೇ ಯುದ್ಧ ನಡೆಯುತ್ತಿತ್ತು! ಹಿಂಸೆಯನ್ನು ಕಂಡು ಕಂಡು ಸಾಕಾದ ಇತಿಹಾಸಕಾರನೊಬ್ಬ ಊರುಬಿಟ್ಟು ಮಹಿಷಪುರವನ್ನು ಸೇರಿದ! ತಲಕಾಡು- ಸೋಮನಾಥಪುರಗಳು ಅವನ ಆವಾಸಸ್ಥಳವಾಯಿತು! ಅಲ್ಲಿ ಅಪರಿಚಿತಳಾದ ಒಬ್ಬಳು ಕನ್ನೆಯಲ್ಲಿ ಅವನಿಗೆ ಪ್ರೇಮವುಂಟಾಯಿತು! ಅವಳೂ ಅವನಲ್ಲಿ ಅನುರಕ್ತಳಾದಳು… ಒಂದು ದಿನ ಸೋಮನಾಥಪುರದಿಂದ ಮಹಿಷಪುರಕ್ಕೆ ಹೊರಡುತ್ತಿದ್ದ ಅವಳ ಜೊತೆಯಲ್ಲಿಯೇ ಅವನೂ ಪ್ರಯಾಣ ಬೆಳೆಸಿದ! ಮರಳುತ್ತಾನೆ ಮರಳುತ್ತಾನೆ ಅಂದುಕೊಂಡರೂ ಬಿಡದೆ ತನ್ನೊಂದಿಗೇ ಬರುತ್ತಿದ್ದ ಇವನನ್ನು ನೋಡಿ ಗಾಭರಿಯಾದ ಅವಳು- ತಾನು ರಾಜ ಕುಟುಂಬಕ್ಕೆ ಸೇರಿದವಳೆಂದೂ ತನ್ನನ್ನು ಹೀಗೆ ಹಿಂಬಾಲಿಸಬಾರದೆಂದೂ ಪ್ರತ್ಯಕ್ಷವಾಗಿ ತಾವು ಸೇರುವುದು ಅಪಾಯಕರವೆಂದೂ ಆದ್ದರಿಂದ ದಾರಿಯಲ್ಲಿ ಕಾಣಿಸುವ ದೊಡ್ಡ ಆಲದ ಮರದಡಿಯಲ್ಲಿ ತಂಗಬೇಕೆಂದೂ ತಾನು ಎಲ್ಲರ ಕಣ್ಣು ತಪ್ಪಿಸಿ ಬರುವುದಾಗಿಯೂ ಹೇಳಿದಳು! ಅವಳ ಮಾತಿಗೆ ಬೆಲೆಕೊಟ್ಟು ಅವನು ಅಲ್ಲಿಯೇ ತಂಗಿದ. ಇದುವರೆಗೂ ಅವಳು ಬರಲಿಲ್ಲ! ಕಾಯುತ್ತಲೇ ಇದ್ದೇನೆ!” ಎಂದೆ.

ವಾಟ್?” ಎಂದು ಮುಂದಕ್ಕೆ ಮುಗ್ಗರಿಸಿದ- ಟೀ ಚೆಲ್ಲಿತು!

ಬೇಗ ಬೇಗ ಬಂದು ಬಸ್ ಹತ್ತಿ!” ಎಂದು ಕಂಡೆಕ್ಟರ್ ವಿಷಲ್ ಹಾಕುವುದು ಕೇಳಿಸಿತು.

ನಾನು ಎದ್ದು ಬಸ್ಸಿನ ಕಡೆಗೆ ನಡೆದೆ.

ಏನಾಯ್ತು ಸರ್? ಎನಿ ಬ್ಯಾಡ್ ನ್ಯೂಸ್?” ಎಂದ ಟೀ ತಂದು ಕೊಟ್ಟ ವೈಟರ್ ಹುಡುಗ.

ವಾಟ್ ಬ್ಯಾಡ್‌ನ್ಯೂಸ್?” ಎಂದ ರೈಟರ್!

ಆಗಲೆಯಿಂದ ಒಬ್ಬರೇ ಮಾತಾಡ್ತಿದ್ರಲ್ಲಾ…? ಬ್ಲೂಟೂತ್ ಹಾಕೊಂಡಿದ್ದೀರೇನೋ ಅಂತ…!” ಎಂದ ಹುಡುಗ.

ಆಶ್ಚರ್ಯದಿಂದ ವೈಟರ್‌ನನ್ನು ನೋಡಿ- ಬಸ್ಸಿನಕಡೆ ನೋಡಿದ ಅವನ ಮುಖದಲ್ಲಿ ಹೆದರಿಕೆ ಸ್ಪಷ್ಟವಾಗಿತ್ತು!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!