ರಹಸ್ಯ!
ರಹಸ್ಯ ! * “ ಏನಾಯ್ತು ಕಥೆಗಾರ ? ಸುಮಾರು ದಿನದಿಂದ ನೋ ಕಥೆ !” “ ಕಥೆ ಹೇಳಿದರೆ ವಾಸ್ತವ ಅನ್ನುತ್ತಾರೆ ! ವಾಸ್ತವವನ್ನು ಹೇಳಿದರೆ ಕಥೆ ಅನ್ನುತ್ತಾರೆ ! ಏನುಮಾಡಲಿ ?” “ ವಾಸ್ತವವನ್ನು ಕಥೆಯಂತೆ ಹೇಳು !” “ ಸಾಕಾಯ್ತು !” “ ಹಾಗಾದ್ರೆ ಕಥೆಯನ್ನು ವಾಸ್ತವದಂತೆ ಹೇಳು !” ೧ ಟಪ್ ಎಂದು ಮೊದಲ ಹನಿ ಬಿತ್ತು ! ತಲೆಯೆತ್ತಿ ನೋಡಿದೆ . ಆಕಾಶ ತಿಳಿಯಾಗಿದೆ ! ಮೊದಲ ಹನಿಯೆಂದು ಹೇಗೆ ಹೇಳಿದೆ ? ಮಳೆ ಬರುತ್ತದೆ ಅನ್ನುವ ಭ್ರಮೆಯೆ ? ವಾಸ್ತವ ನಾವಂದುಕೊಂಡಂತೆಯೇ ಇರಬೇಕೆಂದಿಲ್ಲ ! ಜೀವನದಲ್ಲಿ ಕೆಲವೊಮ್ಮೆ ಭ್ರಮೆ - ನಿಜಗಳು ಅದಲುಬದಲಾಗಿ ಆಟವಾಡಬಹುದು ! * ಅಸಾಧ್ಯ ನೋವು - ಎದೆಯೊಳಗೆ ! ಭಾವನೆಗಳಿಂದ ಅತೀತನಾಗಬೇಕೆಂಬ ತಪಸ್ಸೇನಾಯಿತು ? ಇಷ್ಟುದಿನ ಹಿಡಿದಿಟ್ಟುಕೊಂಡಿದ್ದ ಭಾವನೆಗಳು - ನಿರ್ವಿಕಾರಿ ನಾನೆಂಬ ಬಿಂಬ - ಸುಳ್ಳೆ ? ಬಿಂಬ ಅಂದೆ ! ಸುಳ್ಳೇ ಆಗಿರಬೇಕು ! * “ ಏನಪ್ಪಾ… ? ಹೆಂಗಸರು ಸ್ನಾನ ಮಾಡಬೇಕು ! ಬೇರೆ ಕಡೆ ಹೋಗು !” ಎಂದರು . ಮನದಲ್ಲೇನೋ ದುಗುಡ ! ಅವರೇ ಬೇರೆಕಡೆ ಹೋಗಲಿ ಹೊರತು ನಾನು ಏಳುವುದಿಲ್ಲವೆನ್ನುವ ಹಠ ! “ ಯೋ… ! ನಿನಗೇ ಹೇಳ್ತಿರೋದು !” ಎಂದರು - ಪುನಃ ! ನಾನು ಚಲಿಸಲಿಲ್ಲ ! ಇದು ನನ್ನ ನೆಲೆ ! ಮೊದಲೇ ಬಂದು ಕುಳಿತಿರುವವನು - ಯಾಕೆ ಹೋಗಲಿ ? “ ನೀವೇ ಬೇರೆ ಕಡೆ ಹೋಗಿ !” ಎಂದೆ . “ ಹೆಣ್ಣು ಅಂದ್ರೆ ಅಷ್ಟೂ ಗೌರವ ಇಲ್ವ ನಿನಗೆ ? ನಿನ್ನ ಹೆತ್ತೋಳು ಹೆಣ್ಣು ತಾನೆ ...