ರಹಸ್ಯ!
ರಹಸ್ಯ!
*
“ಏನಾಯ್ತು ಕಥೆಗಾರ? ಸುಮಾರು ದಿನದಿಂದ ನೋ ಕಥೆ!”
“ಕಥೆ ಹೇಳಿದರೆ ವಾಸ್ತವ ಅನ್ನುತ್ತಾರೆ! ವಾಸ್ತವವನ್ನು ಹೇಳಿದರೆ ಕಥೆ ಅನ್ನುತ್ತಾರೆ! ಏನುಮಾಡಲಿ?”
“ವಾಸ್ತವವನ್ನು ಕಥೆಯಂತೆ ಹೇಳು!”
“ಸಾಕಾಯ್ತು!”
“ಹಾಗಾದ್ರೆ ಕಥೆಯನ್ನು ವಾಸ್ತವದಂತೆ ಹೇಳು!”
೧
ಟಪ್ ಎಂದು ಮೊದಲ ಹನಿ ಬಿತ್ತು!
ತಲೆಯೆತ್ತಿ ನೋಡಿದೆ.
ಆಕಾಶ ತಿಳಿಯಾಗಿದೆ!
ಮೊದಲ ಹನಿಯೆಂದು ಹೇಗೆ ಹೇಳಿದೆ?
ಮಳೆ ಬರುತ್ತದೆ ಅನ್ನುವ ಭ್ರಮೆಯೆ?
ವಾಸ್ತವ ನಾವಂದುಕೊಂಡಂತೆಯೇ ಇರಬೇಕೆಂದಿಲ್ಲ!
ಜೀವನದಲ್ಲಿ ಕೆಲವೊಮ್ಮೆ ಭ್ರಮೆ- ನಿಜಗಳು ಅದಲುಬದಲಾಗಿ ಆಟವಾಡಬಹುದು!
*
ಅಸಾಧ್ಯ ನೋವು- ಎದೆಯೊಳಗೆ!
ಭಾವನೆಗಳಿಂದ ಅತೀತನಾಗಬೇಕೆಂಬ ತಪಸ್ಸೇನಾಯಿತು?
ಇಷ್ಟುದಿನ ಹಿಡಿದಿಟ್ಟುಕೊಂಡಿದ್ದ ಭಾವನೆಗಳು- ನಿರ್ವಿಕಾರಿ ನಾನೆಂಬ ಬಿಂಬ- ಸುಳ್ಳೆ?
ಬಿಂಬ ಅಂದೆ!
ಸುಳ್ಳೇ ಆಗಿರಬೇಕು!
*
“ಏನಪ್ಪಾ…? ಹೆಂಗಸರು ಸ್ನಾನ ಮಾಡಬೇಕು! ಬೇರೆ ಕಡೆ ಹೋಗು!” ಎಂದರು.
ಮನದಲ್ಲೇನೋ ದುಗುಡ! ಅವರೇ ಬೇರೆಕಡೆ ಹೋಗಲಿ ಹೊರತು ನಾನು ಏಳುವುದಿಲ್ಲವೆನ್ನುವ ಹಠ!
“ಯೋ…! ನಿನಗೇ ಹೇಳ್ತಿರೋದು!” ಎಂದರು- ಪುನಃ!
ನಾನು ಚಲಿಸಲಿಲ್ಲ! ಇದು ನನ್ನ ನೆಲೆ! ಮೊದಲೇ ಬಂದು ಕುಳಿತಿರುವವನು- ಯಾಕೆ ಹೋಗಲಿ?
“ನೀವೇ ಬೇರೆ ಕಡೆ ಹೋಗಿ!” ಎಂದೆ.
“ಹೆಣ್ಣು ಅಂದ್ರೆ ಅಷ್ಟೂ ಗೌರವ ಇಲ್ವ ನಿನಗೆ? ನಿನ್ನ ಹೆತ್ತೋಳು ಹೆಣ್ಣು ತಾನೆ?” ಎಂದರು.
“ನಿಮ್ಮನ್ನು ಹೆರೋಕೆ ಕಾರಣ ಗಂಡು ತಾನೆ?” ಎಂದೆ.
ಅವರಿಗೆ ಅರ್ಥವಾಗಲಿಲ್ಲ! ಆಗಲೇ ಇಲ್ಲ!
ಏನನ್ನೋ ಗೊಣಗುತ್ತಾ- ನಾನು ಎದ್ದು ಹೋಗುವೆನೇನೋ ಎಂದು ಕಾಯತೊಡಗಿದರು!
ಅವರಿಗೆ ಅಲ್ಲೇ ಸ್ನಾನಮಾಡಬೇಕೆಂಬ ಹಠ ಯಾಕೋ ತಿಳಿದುಕೊಳ್ಳಬೇಕೆಂಬ ಹಠ- ನನಗೆ!
ಅವರೊಂದಿಗೆ ಬಂದಿದ್ದ ಉಳಿದ ಹೆಂಗಸರ ಮುಖಲ್ಲಿನ ಭಾವ- ಏನು ಮಾಡೋದು- ಅನ್ನುವಂತೆ ಇತ್ತು!
ಎರಡು ಕ್ಷಣದ ನಂತರ ಆಕೆ ಎದ್ದು ಸ್ನಾನಕ್ಕೆ ತಯಾರಾದಳು- ಬಟ್ಟೆ ಕಳಚತೊಡಗಿದಳು- ಆಗಲಾದರೂ ಎದ್ದು ಹೋಗುವೆನೆಂದು!
ಅಸಹ್ಯವೆನ್ನಿಸಿ ಎದ್ದೆ!
*
ಯಾರು ಸರಿ- ಯಾರು ತಪ್ಪು?
ಅಥವಾ…,
ಯಾವುದು ಸರಿ- ಯಾವುದು ತಪ್ಪು?
ಅವರವರಿಗೆ ಅವರವರೆ ಸರಿ- ಮನಸ್ಸಾಕ್ಷಿಗೆ ತಪ್ಪು ಅನ್ನಿಸುವವರೆಗೆ!
ಒಂದು ಪುಟ್ಟ ಪಾಪು ನಡೆಯಲು ಶ್ರಮಿಸುತ್ತಿದೆ- ಕಲಿಯುತ್ತಿದೆ- ಈಗ ಬೀಳುವೆನೇನೋ ಅನ್ನುವಂತೆ!
ಅದರ ಕೈಹಿಡಿದು ನಡೆಸುವುದು ಸರಿಯೋ- ಸ್ವತಂತ್ರವಾಗಿ ನಡೆಯಲು ಬಿಡುವುದು ಸರಿಯೋ?
ಕೆಲವೊಮ್ಮೆ ನಮ್ಮ ಜೀವನದ ಗೊಂದಲಗಳು ಹೀಗೆ!
ಏನು ತೀರ್ಮಾನ ತೆಗೆದುಕೊಂಡರೂ ಸರಿ- ಅಥವಾ ತಪ್ಪು!
ಈ ಸರಿ ತಪ್ಪುಗಳಾಚೆ, ಹೌದು ಇಲ್ಲಗಳಾಚೆ ಒಂದು ಬದುಕಿದೆ- ವಾಸ್ತವವಿದೆ!
ಆ ವಾಸ್ತವವನ್ನು ನಿರ್ಧರಿಸುವುದು- ಅಲ್ಲಿನ ಸರಿ ತಪ್ಪುಗಳನ್ನು ನಿರ್ಧರಿಸುವುದು- ಪರಿಪೂರ್ಣವಾಗಿ ನಮ್ಮ ಮನಸ್ಸಾಕ್ಷಿಯೇ ಹೊರತು- ಹೊರಗಿನ ಯಾರೊಬ್ಬರೂ ಅಲ್ಲ!
*
ಕಾಂಟ್ರವರ್ಸಿ!
ಮೂರುವರ್ಷದ ಹೆಣ್ಣುಪಾಪುವಿನ ರೇಪ್!
ಹೊಟ್ಟೆ ತೊಳಸದಿರುವುದು ಹೇಗೆ?
ಅಯ್ಯೋ ಅಂದಿತು ಮನ!
ಮರುಕವೇ? ದುಃಖವೇ? ವೇದಾಂತವೆ?
ರೇಪ್ ಮಾಡಿದವನಿಗೆ- ಯಾರೇ ಆದರೂ ರೇಪ್ ಮಾಡಲು ಹೆದರುವಂತಾ ಶಿಕ್ಷೆ ಕೊಡಬೇಕು!
ಕೊಟ್ಟರೇ?
ನಿಟ್ಟುಸಿರೊಂದೇ ನನ್ನ ದೊಡ್ಡತನ!
*
“ಭವತಿ ಭಿಕ್ಷಾಂದೇಹಿ!” ಎಂದೆ.
“ಇಷ್ಟು ಆರೋಗ್ಯಪೂರ್ಣವಾಗಿದ್ದೀಯಲ್ಲಾ…? ದುಡಿದು ತಿನ್ನೋಕೆ ಆಗಲ್ವಾ?” ಎಂದರು.
ಮುಗುಳುನಕ್ಕು ಮುಂದಕ್ಕೆ ನಡೆದೆ.
ಅವರಿಗೆ ಏನನ್ನಿಸಿತೋ ಏನೋ…,
“ಇರಿ- ಬಂದೆ!” ಎಂದರು.
“ಬೇಡಿ ತಾಯಿ! ಇಚ್ಛೆಯಿಲ್ಲದೆ ನೀಡುವ ಭಿಕ್ಷೆ- ಭಿಕ್ಷೆಯಲ್ಲ!” ಎಂದೆ.
ಅವರ ಮುಖದಲ್ಲಿ ಆಶ್ಚರ್ಯ- ಗೊಂದಲ!
“ದಿನಕ್ಕೆ ಒಂದು ಹೊತ್ತಿನ ಊಟ ಸಿಕ್ಕರೆ ಸಾಕು! ಅದಕ್ಕಾಗಿ ದುಡಿಯಬೇಕು ಅನ್ನಿಸುವುದಿಲ್ಲ!? ಅಲೆಮಾರಿ ನಾನು! ಹಾಗೆಂದು ನಿಮಗೆ ಹೊರೆಯಾಗಲೆ?” ಎಂದೆ.
“ಯಾವ ಹೊರೆಯೂ ಇಲ್ಲ… ಕೈಕಾಲು ತೊಳೆದುಕೊಳ್ಳಿ!” ಎಂದರಾಕೆ.
*
ಜೀವನ ಒಂದು ಝರಿ- ಕಳೆದು ಹೋದ ಕ್ಷಣ ಮರಳಿ ಸಿಗದ- ಹರಿವು!
ನನ್ನ ಕುಟೀರ!
ಗ್ರಂಥಗಳನ್ನು ಹರಡಿ ಕುಳಿತೆ!
ಯಾವುದನ್ನು ಓದಲಿ?
ಯಾಕೆ ಓದಲಿ?
ಓದಿ ಏನು ಪ್ರಯೋಜನ?
ಬಾಗಿಲಬಳಿ ಏನೋ ಚಲನೆ!
ಎದ್ದು ಹೊರಬಂದಾಗ ಕುತ್ತಿಗೆಯಮೇಲೆ ಏಟು ಬಿತ್ತು!
ಎಷ್ಟುಜನರಿದ್ದರೋ…, ಕುಟೀರದೊಳಕ್ಕೆ ನುಗ್ದಿದರು…!
ಚಲನೆಯ ಶಬ್ದ…,
ಕೊನೆಗೆ..,
“ಇಲ್ಲೇನೂ ಇಲ್ಲ- ಇವನೊಬ್ಬ ಇದ್ದಾನೆಂದು ತಿಳಿಯಲು!” ಎಂದರು ಯಾರೋ!
“ಪರ್ಫೆಕ್ಟ್ ಆಗಿದ್ದಾನೆ! ಎತ್ಕೋಳಿ!” ಎಂದರು ಇನ್ಯಾರೋ…!
*
ಕೆಲವರನ್ನು ನೋಡಿದ ತಕ್ಷಣ ಅನ್ನಿಸುವುದು- ಅಯ್ಯೋ ಪಾಪ ಎಂದು!
ಮತ್ತೆ ಕೆಲವರೋ…?
ಅಬ್ಬಾ- ಎಂದು!
ನೋಟಕ್ಕೆ ಹಾಗೆ ಕಾಣಿಸಿದ ಮಾತ್ರಕ್ಕೆ ಅವರು ಹಾಗೆಯೇ?
ನನ್ನ ವಿಷಯದಲ್ಲೂ ಅವರಿಗೆ ತಪ್ಪಿತು!
ಧರ್ಮವನ್ನು ಸಂರಕ್ಷಿಸಲು ಸಾಧ್ಯವಾಗದಿದ್ದರೂ ನಾಶವಾಗಲು ಬಿಡುವವನಲ್ಲ!
ಹಾಗೆಯೇ…,
ತಪ್ಪು ಮಾಡಿದವನಿಗೆ ಶಿಕ್ಷೆ ಆಗದಿದ್ದರೂ ಸಮಸ್ಯೆ ಇಲ್ಲ- ಆ ತಪ್ಪಿಗೆ ಶಿಕ್ಷೆ ಇನ್ನೊಬ್ಬನಿಗೆ ಆಗಬಹುದೇ…?
ಐದು ಜನರಿದ್ದರು!
ನನ್ನ ವ್ಯಾಯಾಮ- ನನ್ನ ತಪಸ್ಸು- ನನ್ನ ಮನಃಶ್ಶಕ್ತಿ ಅವರಿಗೇನು ಗೊತ್ತು?
ಐವರನ್ನೂ ಹೊಡೆದುರುಳಿಸಿದ್ದೆ!
ಕಾನೂನು ಕೈಗೆ ತೆಗೆದುಕೊಳ್ಳುವಂತಿಲ್ಲ! ಆದರೆ ಆತ್ಮ ಸಂರಕ್ಷಣೆಗೋಸ್ಕರ ಇಷ್ಟಾದರೂ ಮಾಡದಿದ್ದರೆ ಹೇಗೆ?
*
ಮೂಟೆಯೊಂದನ್ನು ಹೊರತೆಗೆದರು! ಮೇಲಕ್ಕೆ ಬರದಂತೆ ಕಲ್ಲು ಸೇರಿಸಿ ಕಟ್ಟಿದ್ದ ಮೂಟೆ!
ಮೂಟೆ ಬಿಚ್ಚಿದಾಗ ನಾರುವ ಹೆಣ್ಣು ಹೆಣ!
ನಾನಂತೆ ಆ ಹೆಣ್ಣನ್ನು ಕೊಂದಿದ್ದು! ನದೀತೀರದಲ್ಲಿ ಕುಟೀರವನ್ನು ಕಟ್ಟಿ ವಾಸಿಸುತ್ತಿರುವ ನನ್ನ ಕೆಲಸ ಅದೇ ಅಂತೆ!
ಹಾಗೆ ಬಿಂಬಿಸಲೆಂದೇ ನನ್ನನ್ನು ಕಿಡ್ನಾಪ್ ಮಾಡಿದ್ದು!
ನ-ನ್ನ-ನ್ನು!
ಆವೇಶದಲ್ಲಿ ಒಬ್ಬನ ಮುಖಕ್ಕೆ ಬಾರಿಸುವುದಲ್ಲ- ನಮ್ಮ ಬಲ!
ಆವೇಶ ಬರದಂತೆ ಮನಸ್ಸನ್ನು ನಿಯಂತ್ರಿಸುವುದು ಬಲ- ಆತ್ಮಬಲ!
ಅದಕ್ಕೆ ತಪಸ್ಸು ಮಾಡಬೇಕು!
ಕಾಡಿಗೆ ಹೋಗಿ ಕುಳಿತು ಮಾಡುವ ತಪಸ್ಸಲ್ಲ- ಪಟ್ಟಣದ ನಡುವೆಯಿದ್ದರೂ ಮಾಡಬಹುದಾದ ತಪಸ್ಸು!
ಕಾಡಿಗೆ ಹೋದರೆ ಜನಮನದ ಬಗ್ಗೆ ಏನು ತಿಳಿಯುತ್ತದೆ?
ನಾಡಿನಲ್ಲಿದ್ದು ಪ್ರಪಂಚವನ್ನು ಕಣ್ಣುತುಂಬ ಕಾಣಬೇಕು- ವಾಸ್ತವವನ್ನು ಅರಿಯಬೇಕು! ಮನುಷ್ಯ ಮನಸ್ಸನ್ನು ಅನುಭಾವಿಸಬೇಕು!
೨
ಟಪ್ ಎಂದು ಮೊದಲ ಹನಿ ಬಿತ್ತು!
ತಲೆಯೆತ್ತಿ ನೋಡಿದೆ.
ಆಕಾಶ ತಿಳಿಯಾಗಿದೆ!
ಮತ್ತೆ- ಮೊದಲ ಹನಿಯೆಂದು ಹೇಗೆ ಹೇಳಿದೆ?
ಮಳೆ ಬರುತ್ತದೆ ಅನ್ನವ ಭ್ರಮೆಯೇ?
ಅಲ್ಲ!
ವಾಸ್ತವ ನಾವಂದುಕೊಂಡಂತೆಯೇ ಇರಬೇಕೆಂದಿಲ್ಲ!
ಎಲೆಯ ತುದಿಯಲ್ಲಿ ಮತ್ತೊಂದು ಹನಿ ತೂಗಿ ನಿಂತಿದೆ!
ಪ್ರಕೃತಿ ಎಷ್ಟು ಚಂದ!
*
ಅಸಾಧ್ಯ ನೋವು- ಎದೆಯೊಳಗೆ!
ಭಾವನೆಗಳಿಗೆ ಅತೀತನಾಗಬೇಕೆಂಬ ತಪಸ್ಸೇನಾಯಿತು?
ಇಷ್ಟುದಿನ ಹಿಡಿದಿಟ್ಟುಕೊಂಡಿದ್ದ ಭಾವನೆಗಳು- ನಿರ್ವಿಕಾರಿ ನಾನೆಂಬ ಬಿಂಬ- ಸುಳ್ಳೆ?
ಬಿಂಬ ಅಂದೆ! ಸುಳ್ಳೇ ಆಗಿರಬೇಕು!
ಬಿಂಬವಲ್ಲದಿದ್ದರೆ?
ಪ್ರಪಂಚದ ಒಳಿತಿಗಾಗಿ ಪ್ರತಿಕ್ರಿಯಿಸುವುದು ಮಾನಸಿಕ ದೌರ್ಭಲ್ಯವೇ?
ಅದರಲ್ಲೂ ಈ ಘಟ್ಟದಲ್ಲಿ?
*
“ಏನಪ್ಪಾ…? ಹೆಂಗಸರು ಸ್ನಾನ ಮಾಡಬೇಕು! ಬೇರೆ ಕಡೆ ಹೋಗು!” ಎಂದರು.
ಮನದಲ್ಲೇನೋ ದುಗುಡ! ಅವರೇ ಬೇರೆಕಡೆ ಹೋಗಲಿ ಹೊರತು ನಾನು ಏಳುವುದಿಲ್ಲವೆನ್ನುವ ಹಠ!
“ಯೋ…! ನಿನಗೇ ಹೇಳ್ತಿರೋದು!” ಎಂದರು- ಪುನಃ!
ನಾನು ಚಲಿಸಲಿಲ್ಲ! ಇದು ನನ್ನ ನೆಲೆ! ಮೊದಲೇ ಬಂದು ಕುಳಿತಿರುವವನು- ಯಾಕೆ ಹೋಗಲಿ?
“ನೀವೇ ಬೇರೆ ಕಡೆ ಹೋಗಿ!” ಎಂದೆ.
“ಹೆಣ್ಣು ಅಂದ್ರೆ ಅಷ್ಟೂ ಗೌರವ ಇಲ್ವ ನಿನಗೆ? ನಿನ್ನ ಹೆತ್ತೋಳು ಹೆಣ್ಣು ತಾನೆ?” ಎಂದರು.
“ನಿಮ್ಮನ್ನು ಹೆರೋಕೆ ಕಾರಣ ಗಂಡು ತಾನೆ?” ಎಂದೆ.
ಅವರಿಗೆ ಅರ್ಥವಾಗಲಿಲ್ಲ! ಆಗಲೇ ಇಲ್ಲ!
ಏನನ್ನೋ ಗೊಣಗುತ್ತಾ- ನಾನು ಎದ್ದು ಹೋಗುವೆನೇನೋ ಎಂದು ಕಾಯತೊಡಗಿದರು!
ಅವರಿಗೆ ಅಲ್ಲೇ ಸ್ನಾನಮಾಡಬೇಕೆಂಬ ಹಠ ಯಾಕೋ ತಿಳಿದುಕೊಳ್ಳಬೇಕೆಂಬ ಹಠ- ನನಗೆ!
ಅವರೊಂದಿಗೆ ಬಂದಿದ್ದ ಉಳಿದ ಹೆಂಗಸರ ಮುಖಲ್ಲಿನ ಭಾವ- ಏನು ಮಾಡೋದು- ಅನ್ನುವಂತೆ ಇತ್ತು!
ಎರಡು ಕ್ಷಣದ ನಂತರ ಆಕೆ ಎದ್ದು ಸ್ನಾನಕ್ಕೆ ತಯಾರಾದಳು- ಬಟ್ಟೆ ಕಳಚತೊಡಗಿದಳು- ಆಗಲಾದರೂ ಎದ್ದು ಹೋಗುವೆನೆಂದು!
ಅಸಹ್ಯವೆನ್ನಿಸಿ ಎದ್ದೆ!
ಗೆಲ್ಲಲು ಹೆಣ್ಣು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾಳೆ- ಅದು ಪ್ರಕೃತಿ ನಿಯಮ!
ಆದರೆ…,
ಹೆಣ್ಣಿನ ದೇಹವನ್ನು ಕಂಡು ಉತ್ತೇಜಿತಗೊಳ್ಳುವ ಹಂತವನ್ನು ದಾಟಿದ್ದೇನೆ!
ಹಠ- ಹಠವೇ!
ಇಲ್ಲೇ ಯಾಕೆ ಇವರು ಸ್ನಾನ ಮಾಡಬೇಕು?
ಅದರಲ್ಲೂ ಇಷ್ಟು ದಿನ ಇಲ್ಲದ್ದು- ಇವತ್ತೇ??
ಮನದಲ್ಲಿನ ದುಗುಡಕ್ಕೆ ಕಾರಣ ತಿಳಿಯಬೇಕಿತ್ತು- ಅವರಿಗೆ ಕಾಣದಂತೆ ಗಮನಿಸಲಾರಂಭಿಸಿದೆ!
ಕಲ್ಲುಕಟ್ಟಿದ ಮೂಟೆಯೊಂದನ್ನು ಎಳೆದು ತಂದು ನೀರಿಗೆ ಹಾಕಿದರು!
*
ಯಾರು ಸರಿ- ಯಾರು ತಪ್ಪು?
ಅಥವಾ…,
ಯಾವುದು ಸರಿ- ಯಾವುದು ತಪ್ಪು?
ಅವರವರಿಗೆ ಅವರವರೆ ಸರಿ- ಮನಸ್ಸಾಕ್ಷಿಗೆ ಬೆಲೆ ಕೊಡುವವರೆಗೆ!
ನಡೆಯಲು ಕಲಿಯುತ್ತಿರುವ ಮಗುವನ್ನು ಕೈಹಿಡಿದು ನಡೆಸುತ್ತೇನೆ ಅನ್ನಬಾರದು- ನಡೆಯಲು ಬಿಡಬೇಕು!
ಗೊಂದಲಗಳಿಂದ ಹೊರಬರುವುದೇ ಜೀವನ!
ನಮಗೆ ಸರಿ ಅನ್ನಿಸಿದರೂ ಕೆಲವೊಮ್ಮೆ ತಪ್ಪು ಮಾಡಿದವರ ಶಿಕ್ಷೆಯ ಹೊಣೆ ನಮಗಿರುವುದಿಲ್ಲ- ಆದರೆ ಆ ಶಿಕ್ಷೆಗೆ ಇನ್ನೊಬ್ಬರು ಒಳಗಾಗದಂತೆ ಮಾಡುವ ಕರ್ತವ್ಯ ನಮ್ಮದೇ!
*
ಕಾಂಟ್ರವರ್ಸಿ!
ಮೂರುವರ್ಷದ ಹೆಣ್ಣುಪಾಪುವಿನ ರೇಪ್!
ಮಾಡಿದ್ದು ಯಾರು?
ಸ್ವಂತ ಅಪ್ಪ!
ಹೊಟ್ಟೆ ತೊಳಸದಿರುವುದು ಹೇಗೆ?
ಅಯ್ಯೋ ಅಂದಿತು ಮನ!
ಮರುಕವೇ? ದುಃಖವೇ? ವೇದಾಂತವೆ?
ರೇಪ್ ಮಾಡಿದವನಿಗೆ- ಶಿಕ್ಷೆಯಾಯಿತೆ?
ವ್ಯವಸ್ತೆ ಹಾಗಿದೆ!
*
“ಭವತಿ ಭಿಕ್ಷಾಂದೇಹಿ!” ಎಂದೆ.
“ಇಷ್ಟು ಆರೋಗ್ಯಪೂರ್ಣವಾಗಿದ್ದೀಯಲ್ಲಾ…? ದುಡಿದು ತಿನ್ನೋಕೆ ಆಗಲ್ವಾ?” ಎಂದರು.
ಮುಗುಳುನಕ್ಕು ಮುಂದಕ್ಕೆ ನಡೆದೆ. ಅವರಿಗೆ ಏನನ್ನಿಸಿತೋ ಏನೋ…,
“ಇರಿ- ಬಂದೆ!” ಎಂದರು.
“ಬೇಡಿ ತಾಯಿ! ಇಚ್ಛೆಯಿಲ್ಲದೆ ನೀಡುವ ಭಿಕ್ಷೆ ಭಿಕ್ಷೆಯಲ್ಲ!” ಎಂದೆ.
ಅವರ ಮುಖದಲ್ಲಿ ಆಶ್ಚರ್ಯ- ಗೊಂದಲ!
“ದಿನಕ್ಕೆ ಒಂದು ಹೊತ್ತಿನ ಊಟ ಸಿಕ್ಕರೆ ಸಾಕು! ಅದಕ್ಕಾಗಿ ದುಡಿಯಬೇಕು ಅನ್ನಿಸುವುದಿಲ್ಲ!? ಅಲೆಮಾರಿ ನಾನು! ಹಾಗೆಂದು ನಿಮಗೆ ಹೊರೆಯಾಗಲೆ?” ಎಂದೆ.
“ಯಾವ ಹೊರೆಯೂ ಇಲ್ಲ… ಕೈಕಾಲು ತೊಳೆದುಕೊಳ್ಳಿ!” ಎಂದರಾಕೆ.
ಅದೆಷ್ಟು ಜನ ಭಿಕ್ಷೆಗೆ ಬರುತ್ತಾರೋ…! ಅವರಿಗೂ ನನಗೂ ವ್ಯತ್ಯಾಸವೇನು?
ಅವರು ಸೋಮಾರಿತನದಿಂದಾಗಿ- ಭಿಕ್ಷೆ ಸಂಪಾದನೆಯ ಸುಲಭ ಮಾರ್ಗವಾದ್ದರಿಂದ ಭಿಕ್ಷೆ ಬೇಡುತ್ತಾರೆ!
ನಾನು ಒಂದು ಹೊತ್ತಿನ ಊಟಕ್ಕಾಗಿ ಬೇಡುತ್ತೇನೆ!
ಆದರೂ ಕಾಟಾಚಾರದ ಭಿಕ್ಷುಕನೆಂದು ತಿಳಿದು ಅವರಾಡಿದ ಮಾತು- ಈಗ ನಾನವರನ್ನು ತಿರಸ್ಕರಿಸಿ ಮುಂದುವರೆದರೆ ಅವರಲ್ಲಿ ಕೀಳರಿಮೆ ಹುಟ್ಟಿಸುತ್ತದೇನೋ! ಪಾಪಪ್ರಜ್ಞೆ ಕಾಡಿಸುತ್ತದೇನೋ…!
ಅರಿಯದೆ ಅವರಾಡಿದ ಮಾತಿಗೆ ಅವರನ್ನು ಮಾನಸಿಕ ತೊಳಲಾಟಕ್ಕೆ ಈಡು ಮಾಡಲೆ?
ಊಟಕ್ಕೆ ಕುಳಿತೆ!
ತುಂಬು ಹೃದಯದಿಂದ ಅವರು ಬಡಿಸುವಾಗ ಕೇಳಿದೆ…,
“ಈ ಮನೆಗೆ ನೀವು ಹೊಸಬರೆ? ಇಲ್ಲಿದ್ದವರ ಬಗ್ಗೆ ಏನಾದರೂ ಮಾಹಿತಿ ಇದೆಯೇ?”
“ಅವರಿನ್ನು ಬರುವುದಿಲ್ಲ!” ಎಂದರು.
ತಲೆಯೆತ್ತಿ ಅವರ ಕಣ್ಣನ್ನೇ ನೋಡುತ್ತಾ…,
“ನೀವು…?” ಎಂದೆ.
ಏನೂ ಮಾತನಾಡದೆ ಒಳಹೋದರು!
ಊಟ ಮುಗಿಸಿ ಹೊರಡುವಾಗ…,
“ಒಳಿತಾಗಲಿ ತಾಯಿ ನಿಮ್ಮ ಒಳ್ಳೆಯ ಮನಸ್ಸಿಗೆ!” ಎಂದೆ.
“ನದೀತೀರದ ಕುಟೀರ ನಿಮ್ಮದೆ?” ಎಂದಳು.
“ಹೌದು ತಾಯಿ! ನಿಮಗೆ ಹೇಗೆ ಗೊತ್ತು?”
ಅವರೇನೂ ಮಾತನಾಡಲಿಲ್ಲ!
*
ಜೀವನ ಒಂದು ಝರಿ! ಕಳೆದು ಹೋದ ಕ್ಷಣ ಮರಳಿ ಸಿಗದ- ಹರಿವು!
ಕುಟೀರ!
ಗ್ರಂಥಗಳನ್ನು ಹರಡಿ ಕುಳಿತೆ!
ಯಾವುದನ್ನು ಓದಲಿ?
ಯಾಕೆ ಓದಲಿ?
ಓದಿ ಏನು ಪ್ರಯೋಜನ?
ಜೀವನವೊಂದು ನಾಟಕ!
ಆ ಹೆಣ್ಣು ಎಷ್ಟು ಪಕ್ವವಾಗಿ ಅಭಿನಯಿಸಿದಳು!
ಆಕೆ ಊಟವನ್ನು ಬಡಿಸುವಾಗಿನ ಭಾವ- ಇವನು ಅವನೇ- ಅನ್ನುವಂತಿತ್ತು!
ಕೊನೆಯಲ್ಲಿ ಕೇಳಿ ಖಚಿತಪಡಿಸಿಕೊಂಡಳು ಕೂಡ!
ಆಕೆಯ ಆ ಭಾವ- ಹೆಂಗಸರು ತಂದು ಹಾಕಿದ ಮೂಟೆಯನ್ನು ಸಂಶಯಿಸುವಂತೆ ಮಾಡಿತು!
ಆ ಮೂಟೆಯಿಂದಾಗಿ ನನಗೇನೋ ಆಪತ್ತು ಬರುವಂತೆ…!
ಹೌದು…,
ಬಾಗಿಲಬಳಿ ಚಲನೆ!
ಎದ್ದು ಹೊರಬಂದಾಗ ಕುತ್ತಿಗೆಯಮೇಲೆ ಏಟು ಬಿತ್ತು!
ಎಷ್ಟುಜನರಿದ್ದರೋ…, ಕುಟೀರದೊಳಕ್ಕೆ ನುಗ್ಗಿದರು…!
ಚಲನೆಯ ಶಬ್ದ -ಏನೋ ಹುಡುಕುವಂತೆ! ಕೊನೆಗೆ..,
“ಇಲ್ಲೇನೂ ಇಲ್ಲ- ಇವನೊಬ್ಬ ಇದ್ದಾನೆಂದು ತಿಳಿಯಲು!” ಎಂದರು ಯಾರೋ!
“ಪರ್ಫೆಕ್ಟ್ ಆಗಿದ್ದಾನೆ! ಎತ್ಕೋಳಿ!” ಎಂದರು ಇನ್ಯಾರೋ…!
*
ಕೆಲವರನ್ನು ನೋಡಿದ ತಕ್ಷಣ ಅನ್ನಿಸುವುದು- ಪಾಪ ಎಷ್ಟು ಸಾಧು!
ಮತ್ತೆ ಕೆಲವರೋ…?
ಅಬ್ಬಾ ಎಷ್ಟು ಕ್ರೂರವಾಗಿದ್ದಾನೆ!
ನೋಟಕ್ಕೆ ಹಾಗೆ ಕಾಣಿಸಿದ ಮಾತ್ರಕ್ಕೆ ಅವರು ಹಾಗೆಯೇ ಇರಬೇಕೆಂದಿಲ್ಲ!
ನನ್ನ ವಿಷಯದಲ್ಲೂ ಅವರಿಗೆ ತಪ್ಪಿತು!
ಯಾರೂ ಇಲ್ಲದ ಅನಾಥನೆನ್ನುವುದು ನಿಜ! ಆದರೆ ನನ್ನ ಬಲ? ನನ್ನ ಮನಃಶ್ಶಕ್ತಿ?
ಅವರ ವಿಷಯದಲ್ಲಿ- ಅವರ ಪರಾಕ್ರಮ, ಗಡಸುತನ ತೋರಿಕೆಯದ್ದೇ ಹೊರತು ವಾಸ್ತವವಲ್ಲ!
ಧರ್ಮವನ್ನು ಸಂರಕ್ಷಿಸಲು ಸಾಧ್ಯವಾಗದಿದ್ದರೂ ನಾಶವಾಗಲು ಬಿಡುವವನಲ್ಲ!
ಹಾಗೆಯೇ…,
ತಪ್ಪು ಮಾಡಿದವನಿಗೆ ಶಿಕ್ಷೆ ಆಗದಿದ್ದರೂ ಸಮಸ್ಯೆ ಇಲ್ಲ- ಆ ತಪ್ಪಿಗೆ ಶಿಕ್ಷೆ ಇನ್ನೊಬ್ಬನಿಗೆ ಆಗುತ್ತಿದ್ದರೆ ಒಪ್ಪಬಹುದೇ…?
ಅವರು ಐದು ಜನರಿದ್ದರು!
“ಯಾರು ನೀವು?” ಎಂದೆ.
“ಅದೆಲ್ಲಾ ನಿನಗೆ ಯಾಕೆ?” ಎಂದರು!
“ನನ್ನನ್ನು ಹಿಡಿದು ತಂದವರು ನೀವು! ನಿಮ್ಮಬಗ್ಗೆ ನಾನು ಕೇಳಬಹುದು! ನನ್ನನ್ನು ನೀವು ಪ್ರಶ್ನಿಸುವಂತಿಲ್ಲ!” ಎಂದೆ.
ಹಗುರವಾಗಿ ನಕ್ಕರು!
ಒಬ್ಬನ ತೊಡೆಯಮಧ್ಯೆ ಒದ್ದು, ಒಬ್ಬನ ಮೂಗಿಗೆ ಗುದ್ದಿ, ಒಬ್ಬನ ಕಿವಿಗೆ ಅಪ್ಪಳಿಸಿ, ಒಬ್ಬನ ಗಂಟಲನ್ನು ಅದುಮಿ…, ಒಬ್ಬನ ಸೊಂಟವನ್ನು ಮುರಿದಿದ್ದೆ!
ಕಾನೂನು ಕೈಗೆ ತೆಗೆದುಕೊಳ್ಳುವಂತಿಲ್ಲ! ಆದರೆ ಆತ್ಮ ಸಂರಕ್ಷಣೆಗೋಸ್ಕರ ಇಷ್ಟಾದರೂ ಮಾಡದಿದ್ದರೆ ಹೇಗೆ?
“ಈಗ ಹೇಳಿ- ಯಾರು ನೀವು? ನನ್ನನ್ನೇಕೆ ಕರೆತಂದಿರಿ? ಅದೂ ಬೆನ್ನ ಹಿಂದೆಯಿಂದ ಹೊಡೆದು?”
ಅವರ ಮನಸ್ಸಿನೊಂದಿಗೆ ಆಟ ಶುರು ಮಾಡಿದೆ!
ನಿಜ- ಬಯಲಾಯಿತು!
ಪ್ರಪಂಚ ಎಷ್ಟು ಘೋರ!
*
ಮೂಟೆಯೊಂದನ್ನು ಹೊರತೆಗೆದರು! ಮೇಲಕ್ಕೆ ಬರದಂತೆ ಕಲ್ಲು ಸೇರಿಸಿ ಕಟ್ಟಿದ್ದ ಮೂಟೆ!
ಮೂಟೆ ಬಿಚ್ಚಿದಾಗ ನಾರುವ ಹೆಣ್ಣು ಹೆಣ!
ಆ ಹೆಣ್ಣನ್ನು ಕೊಂದಿದ್ದು ನಾನು ಎಂದು ಬಿಂಬಿಸಲು ನನ್ನನ್ನು ಕಿಡ್ನಾಪ್ ಮಾಡಿದರಂತೆ!
ಪಾಪ…., ನ-ನ್ನ-ನ್ನು!
ಏನೋ ಮಾತಿನ ಮಧ್ಯೆ ಆವೇಶದಲ್ಲಿ ಒಬ್ಬನ ಮುಖಕ್ಕೆ ಬಾರಿಸುವುದು ಬಲವಲ್ಲ!
ಆವೇಶ ಬರದಂತೆ ಮನಸ್ಸನ್ನು ನಿಯಂತ್ರಿಸುವುದು- ಬಲ- ಆತ್ಮಬಲ!
ಹಾಗೆಯೇ ಸಂದರ್ಭ ಒದಗಿಯೂ ಒಬ್ಬರನ್ನು ಶಿಕ್ಷಿಸದಿರುವುದು ಆತ್ಮಬಲವಲ್ಲ- ದೌರ್ಭಲ್ಯ!
ಶಿಕ್ಷಿಸಲೇ ಬೇಕಿರುವುದು- ವಿವೇಕ!
ಅದಕ್ಕೆ ತಪಸ್ಸು ಮಾಡಬೇಕು!
ಕಾಡಿಗೆ ಹೋಗಿ ಕುಳಿತು ಮಾಡುವ ತಪಸ್ಸಲ್ಲ- ಪಟ್ಟಣದ ನಡುವೆಯಿದ್ದರೂ ಮಾಡಬಹುದಾದ ತಪಸ್ಸು!
ಕಾಡಿಗೆ ಹೋದರೆ ಜನರ ಮನಸ್ಸಿನ ಬಗ್ಗೆ ಏನು ತಿಳಿಯುತ್ತದೆ?
ನಾನು ನಾಡಿನಲ್ಲಿದ್ದು ಪ್ರಪಂಚವನ್ನು ಕಣ್ಣುತುಂಬ ಕಂಡವ!
ಮನುಷ್ಯನ ವಾಸ್ತವ ಮನಸ್ಸನ್ನು ಅರಿತವ!
ನಾನು ಭಿಕ್ಷೆಗೆ ಹೋದ ಮನೆಯಲ್ಲಿ ಮೊದಲಿದ್ದ ಹೆಣ್ಣು ನನಗೆ ಪರಿಚಯ- ಅವಳ ಮೂರುವರ್ಷದ ಮಗಳೂ!!
ಈಗ ಅವರಿಲ್ಲ!
ಕೆಲವು ದಿನದ ಹಿಂದೆ ಒಂದು ಕಾಂಟ್ರವರ್ಸಿಗೆ ಕಾರಣವಾದ ಮನೆ!
ಮೂರು ವರ್ಷದ ಮಗು ರೇಪ್‌ಗೆ ಒಳಗಾದ ಮನೆ!
ತಪ್ಪು ಮಾಡುವುದು- ಮಾಡುವವರಿಗೆ ಅಷ್ಟು ಮುಖ್ಯವಲ್ಲ! ಆ ತಪ್ಪು ಹೊರಬಂದು ಪ್ರಪಂಚದ ಮುಂದೆ ಮುಖ ತೋರಿಸದಂತಾಗುವುದು ಅಸಹನೀಯ!
ಎಲ್ಲಿ ತಾನು ಮಾಡಿದ ರೇಪ್ ಹೊರಬರುತ್ತದೋ ಎನ್ನುವುದು ಆತನ ಸಮಸ್ಯೆ!
ಹೆಂಡತಿ- ಸುಮ್ಮನಿರುವಳೇ?
ಆದ್ದರಿಂದ…,
ಅವಳಿಗೆ ಹುಚ್ಚು! ಸ್ವಂತ ಅಪ್ಪನೇ ಮಗಳನ್ನು ರೇಪ್ ಮಾಡುವನೇ? ಅದರಲ್ಲೂ ಮೂರುವರ್ಷದ ಪುಟಾಣಿಯನ್ನು?
ಎಂದು ಮನೆಯವರ ಮುಂದೆ ಬಿಂಬಿಸಿದ!
ಗಂಡನ ಮನೆಯವರು ಒಟ್ಟು ಸೇರಿ- ಮನೆತನದ ಮಾನ ಕಾಪಾಡಲು… ಮುಗಿಸಿದರು!
ಆತನಿಗೆ ಕಾನೂನಿನ್ವಯ ಶಿಕ್ಷೆ ಆಯಿತೋ ಇಲ್ಲವೋ ತಿಳಿಯದು!
ಯಾವ ಕಾರಣಕ್ಕೂ ಕಾನೂನನ್ನು ಕೈಗೆ ತೆಗೆದುಕೊಳ್ಳುವುದು- ಅಪರಾಧ!
ನನ್ನನ್ನು ಕಿಡ್ನಾಪ್ ಮಾಡಿದ ತಪ್ಪಿಗೆ ಮಾತ್ರ ನಾನು ಶಿಕ್ಷೆ ನೀಡಬಲ್ಲೆ!
ಆದರೆ…,
ಒಬ್ಬರ ಪಾಪಕ್ಕೆ ಮತ್ತೊಬ್ಬರು ಬಲಿಯಾಗದಂತೆ ತಡೆಯುವುದು ಮಾತ್ರ ನನ್ನ ಕರ್ತವ್ಯ!
ನದಿಯಲ್ಲಿ ಮುಳುಗಿಸಲಾದ ಮೂಟೆಯನ್ನು ಪ್ರಪಂಚಕ್ಕೆ ತೋರಿಸಿಕೊಟ್ಟು- ಮಾಯವಾದೆ!
ಅಲೆಮಾರಿಗೆ ಊರು ಕೇರಿಯೇ?
*
“ನಿಜ ಹೇಳು! ಇದು ಕಥೆಯೋ ವಾಸ್ತವವೋ!”
“ರಹಸ್ಯ!”
*********
Comments
Post a Comment