ಆಕ್ಷೇಪಣಾ ಪತ್ರ!
ಹೇಗಿದ್ದೀಯೆ?
ಬ್ಯುಸಿ- ಅಲಾ?
ಗೊತ್ತು…, ದಿನಕ್ಕೆ ಇಪ್ಪತ್ತನಾಲ್ಕು ಗಂಟೆ ಸಮಯ ಸಾಲದ ಪಾಪದ ಹೆಣ್ಣು ನೀನು!
ವಿಷಯ ನ್ತ ಗೊತ್ತ?
ನೀ ಎಷ್ಟೇ ಬ್ಯುಸಿಯಾಗಿದ್ರೂ, ಫ್ರೀಯಾಗಿದ್ರೂ, ನೆನಪಿಸಿಕೊಂಡರೂ- ಕೊಳ್ಳದಿದ್ದರೂ ಐ ಲವ್‌ಯು!
ಬದುಕು ಎಷ್ಟು ಚಂದ!
ಪಾಪ ನನ್ನ ಅಮ್ಮ…, ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆದಿದ್ದರೆ ನಾನಿಂದು ಎಲ್ಲಿರುತ್ತಿದ್ದೆನೋ ಏನೋ!
ಅದು ಹಾಗೆಯೇ ನೋಡು…, ಹಲ್ಲಿದ್ದವನಿಗೆ ಕಡಲೆಯಿಲ್ಲ ಕಡಲೆಯಿದ್ದವನಿಗೆ ಹಲ್ಲಿಲ್ಲ ಅನ್ನುವಂತೆ ನನ್ನ ಜೀವನ.
ಅತಿ ಸಮರ್ಥ ನಾನು! ನದಿಯ ಹರಿವಿಗೆ ನನ್ನನ್ನು ಒಡ್ಡಿಕೊಂಡಿದ್ದರೂ ಸಾಕಿತ್ತು- ಕುಟುಂಬದ, ಗೆಳೆಯರ, “ಇತರರ" ದೃಷ್ಟಿಕೋನದ ಗೆಲುವನ್ನು ಅತಿ ಸುಲಭದಲ್ಲಿ ಸಾಧಿಸುತ್ತಿದ್ದೆ.
ಆದರೇನು ಮಾಡುವುದು…?
ಇದು- ನಾನು ಅಲಾ?
ನನಗೆ ಸಹಜವಾಗಿ ಒಲಿದಿದ್ದ ಸಾಮರ್ಥ್ಯಕ್ಕೆ, ಅವಕಾಶಗಳಿಗೆ ವಿರುದ್ಧವಾಗಿ…, ಪ್ರವಾಹಕ್ಕೆ ಇದಿರಾಗಿಯೇ ಈಜಬೇಕೆಂದು ತೀರ್ಮಾನಿಸಿದವ!
ತೀರ್ಮಾನ ನನ್ನದು! ಪ್ರವಾಹವೆಂದರೇನೆಂಬ ಅರಿವೇ ಇಲ್ಲದೆ- ಅದಕ್ಕೆ ಇದಿರಾಗಿ!
ಅದೆಷ್ಟುಸಾರಿ ಶುರುಮಾಡಿದ ಸ್ಥಳವನ್ನೇ ಸೇರಿದೆ! ಇಲ್ಲದ ದಾರಿಯನ್ನು ಸೃಷ್ಟಿಸಿ ಅದೆಷ್ಟುಸಾರಿ ಗಮ್ಯದ ಹತ್ತಿರಕ್ಕೆ ತಲುಪಿದೆ! ನನಗೆ ಸಂಬಂಧವೇ ಇಲ್ಲದ ಅಡತಡೆಗಳು…, ಅನೂಹ್ಯ ತಿರುವುಗಳು…, ಪೆಟ್ಟುಗಳು!
ಇದೋ…, ಪುನಃ ಅದೇ ಶುರುವಿನ ಹಂತಕ್ಕೆ ಬಂದು ನಿಂತಿದ್ದೇನೆ.
ಪ್ರವಾಹದ ಸಂಪೂರ್ಣ ಅರಿವು ದೊರಕಿದ ತೃಪ್ತಿಯೇನೋ ಇದೆ…, ಆದರೆ ಆದರೆ…, ಮತ್ತೊಮ್ಮೆ ಈಜು ಶುರುಮಾಡಲು ನಿರುತ್ಸಾಹ!
ಪ್ರವಾಹಕ್ಕನುಗುಣವಾಗಿ ತೇಲಿ ಹೋಗಲೂ ನಿರುತ್ಸಾಹ ಎದುರಾಗಿ ಈಜಲೂ ನಿರುತ್ಸಾಹ!
ಯಾಕೆ ಈಜಲಿ ಅನ್ನುವ ಪ್ರಶ್ನೆ!
ಇದುವರೆಗಿನ ನನ್ನ ಬದುಕಿನಲ್ಲಿ ನಾನು ತೃಪ್ತ!
ಅತ್ತ ಯಾರಿಗೂ ಉಪಯೋಗಕ್ಕೂ ಇಲ್ಲ, ಇತ್ತ ನನ್ನಿಂದ ಯಾರಿಗೂ ಅಪಕಾರವೂ ಆಗಿಲ್ಲ.
ಬದುಕಲು ಕಷ್ಟ ಪಡಬೇಕಾಗಿಲ್ಲ!
ಕಷ್ಟ ಪಟ್ಟು ಬದುಕಬೇಕಾಗಿಲ್ಲ.
ನಶ್ವರ ಬದುಕಿನಲ್ಲಿ ಏನು ಮಾಡಿ ಏನು ಪ್ರಯೋಜನವೆನ್ನುವ ವೇದಾಂತ ಭಾವ!
ಇಲ್ಲ…, ಸೋಮಾರಿತನವನ್ನು ವೇದಾಂತಕ್ಕೆ ಆರೋಪಿಸಲಾಗದು.
ಸಾಕು…, ಅಥವಾ ಸಾಕಾಯಿತು ಅನ್ನುವ ತೀರ್ಮಾನ ನನ್ನದು! ಆ ತೀರ್ಮಾನದಲ್ಲಿ…, ಏನೂ ಮಾಡದ ಅವಸ್ಥೆಯಲ್ಲಿದ್ದಾಗ ನೀನು ಬಂದೆ!
ಚೈತನ್ಯದ ಚಿಲುಮೆ.
ಏನುಗೊತ್ತಾ?
ನನಗೆ ನೀನು ಬೇಕಿರಲಿಲ್ಲ. ಅಥವಾ ನಾನೇನೂ ನಿನ್ನನ್ನು ಅವಲಂಬಿಸಲಿಲ್ಲ.
ನಿನ್ನ ವಿಚಾರಧಾರೆ, ಯೋಚನಾ ಧಾಟಿ, ನಿನ್ನ ವಿಧ್ವತ್ತು ನನ್ನನ್ನು ಸೆಳೆಯಿತು. ಅದನ್ನು ನಾನು ನಿನಗೆ ತಿಳಿಸಿದಾಗ…,
ಇಮೋಷನಲ್ ಅಟ್ಯಾಚ್‌ಮೆಂಟ್ ನೋವು ನೀಡುತ್ತದೆ ಅಂದೆ ನೀನು!
ಯಾವನಿಗೆ ಬೇಕು ಇಮೋಷನಲ್ ಅಟ್ಯಾಚ್‌ಮೆಂಟ್?
ನಾನು ಹೇಳಿದ್ದು…,
ನನ್ನದೇನಿದ್ದರೂ ಬೌದ್ಧಿಕವಾಗಿಯೇ ಯೋಚನೆ!
ಇಲ್ಲಿ ತಪ್ಪು ಒಪ್ಪುಗಳಿಲ್ಲ…!
ಇದನ್ನು ಅರ್ಥಮಾಡಿಸಲು ಜೀವನವೇ ಬೇಕಾಗಬಹುದು ನೋಡು!
ನಿನಗೋ ಯಾವೊಂದು ಹೆಣ್ಣಿಗೋ ನಾನು ಶೇಖಡಾ ಒಂದರಷ್ಟು ಕೂಡ ಎಟುಕುವುದಿಲ್ಲ ಅನ್ನುವುದು ನನ್ನ ಜೀವನದ ಅತಿದೊಡ್ಡ ವಿಪರ್ಯಾಸ!
ಇದು ನಿನ್ನನ್ನು ಬ್ಲೇಂ ಮಾಡುವುದಲ್ಲ…, ನಾನು ನಿನ್ನಬಗ್ಗೆ 'ಏನೋ' ಅಂದುಕೊಂಡಿದ್ದರೆ ಅದು ನನ್ನದೇ ತಪ್ಪು!
ಇಮೋಷನಲ್ ಅಟ್ಯಾಚ್‌ಮೆಂಟ್- ಏನು ಹಾಗೆಂದರೆ?
ಹೇಗಿದ್ದೀಯ, ಹುಷಾರ- ಇದು ಇಮೋಷನ್‌ಗೆ ಬರುವುದಿಲ್ಲವಾ?
ಹಾಗೊಂದು ಮಾತುಕತೆಯ ಅಗತ್ಯವಾದರೂ ಏನು?
ಯಾರಿಲ್ಲದೆಯೂ ಯಾರೂ ಬದುಕಬಹುದು!
ಗಂಡು- ಹೆಣ್ಣು, ಬೌದ್ಧಿಕ ಮಟ್ಟ, ಒಡನಾಟ, ಯಾವುದೇ ನಿರೀಕ್ಷೆಯಿಲ್ಲದೆ ಪರಸ್ಪರರಿಗೆ ಪರಸ್ಪರರು ಅನ್ನುವುದೊಂದು ಇದೆ…! ನೋವು ನಲಿವುಗಳಿಗೆ ಅತೀತವಾಗಿ…, ಪ್ರಪಂಚದ ಯಾವುದೇ ವಿಷಯವಾದರೂ ಮುಕ್ತವಾಗಿ ಮಾತನಾಡುವಂತಾ, ದೈಹಿಕ ವಾಂಛೆಗಳನ್ನು ಮೀರಿದ, ಅತಿ ಮುಖ್ಯವಾಗಿ ಕೇವಲ ನನ್ನದು ಅನ್ನುವುದನ್ನು ಮೀರಿದ ಒಂದು ಬಾಂಧವ್ಯ…!
ಇಷ್ಟೆಲ್ಲಾ ಯಾಕೆ ಹೇಳಿದೆನೆಂದರೆ…,
ನೀನು- ನೀನೆಂಬ ನೀನು ನನಗೆ ಯಾವತ್ತಿಗೂ ಒಂದು ಉತ್ತೇಜನ.
ಇಂಗ್ಲೀಷಿನಲ್ಲಿ ಹೇಳಿದರೆ…, ಇನ್ಸ್‌ಪಿರೇಷನ್!
ಏನೆಲ್ಲಾ ಮಾಡುತ್ತಿ!
ಬೌದ್ಧಿಕವಾಗಿ ನಾವೆಷ್ಟೇ ಸಮಾನರಾದರೂ…, ಜೀವನ ರೀತಿಯಲ್ಲಿ ಅದೆಷ್ಟು ಮುಂದು ನೀನು!
ಅದಕ್ಕೇ ಹೇಳಿದೆ…,
ಬೇಕು ನೀನು!
ಆದರೆ ಆ ಬೇಕು ನಿನಗೆ ಅರ್ಥವಾಗಲೇ ಇಲ್ಲ.
ನನ್ನನ್ನೋ…, ನನ್ನ ಮನಸ್ಸನ್ನೋ ಅರ್ಥಮಾಡಿಕೊಳ್ಳುವ ಕನಿಷ್ಠ ಪ್ರಯತ್ನವನ್ನೂ ನೀನು ಮಾಡಲಿಲ್ಲ.
ಈಗನೋಡು…, ನಿನ್ನ ಅದೇ ತಾತ್ಸಾರ ಕಾರಣವಾಗಿ…,
ಸಾಧಿಸಬೇಕು ಅನ್ನಿಸಿಬಿಟ್ಟಿದೆ!
ಕಟ್ಟ ಕಡೆಯದಾಗಿ…, ಪ್ರವಾಹದ ಸಂಪೂರ್ಣ ಅರಿವಿನೊಂದಿಗೆ…, ಈಜಲು ಇಳಿಯುತ್ತಿದ್ದೇನೆ!
ಈಸಾರಿ ಮರಳಿ ತಲುಪುವುದು ಅನ್ನುವುದು ಇಲ್ಲವೇ!
ಒಂದೋ ನಾನು…, ಅಥವಾ ಗಮ್ಯ!
ಒಂದೋ ಗೆದ್ದು ಇತಿಹಾಸವಾಗುತ್ತೇನೆ…, ಅಥವಾ ಆ ಪ್ರಯತ್ನದಲ್ಲಿ ಯಾರೊಬ್ಬರ ಅರಿವಿಗೂ ಬರದಂತೆ ಅಪ್ರತ್ಯಕ್ಷವಾಗುತ್ತೇನೆ!
ಯಾವತ್ತಾದರೂ ನಾನು ತಾಕಿ, ಅರ್ಥವಾಗಿ, ನನ್ನೆಡೆಗೆ ಗಮನವನ್ನು ಕೊಡುವ ಸಮಯದಲ್ಲಿ…, ನಾನಿಲ್ಲದೇ ಹೋಗಬಹುದು- ಅಥವಾ ನಿನ್ನನ್ನು ಗಮನಿಸಲಾಗದಷ್ಟು ದೂರಕ್ಕೆ ತಲುಪಿರಬಹುದು- ಜೋಪಾನ!
Comments
Post a Comment