ಅವನೂ ಆತ್ಮಹತ್ಯೆಯೂ!
*
“ಒಂದು ವಿಷಯ ಯಾವತ್ತಿಗೂ ನೆನಪಿಟ್ಟುಕೋ...., ಸುಖ-ದುಃಖಗಳಿರಲಿ..., ನಾವೇ ಶಾಶ್ವತವಲ್ಲದ ಈ ಬದುಕಿನಲ್ಲಿ..., ಬಾಂಧವ್ಯಕ್ಕೆ ಸಮಯ ಕೊಡಲಾಗದಷ್ಟು ಬ್ಯುಸಿಯಾದ ಬದುಕು- ಬದುಕಲ್ಲ!” ಎಂದ.
ಅವನ ಮುಖವನ್ನೇ ನೋಡಿದೆ. ಮಾತನಾಡಲು ಏನೂ ಇರಲಿಲ್ಲ. ಅವನೇ...,
“ನನಗೆ ಸಮಯ ಕೊಡಲು ನಿನ್ನಿಂದ ಸಾಧ್ಯವಾಗುತ್ತಿಲ್ಲ ಅನ್ನುವ ಕಾರಣಕ್ಕೆ ಇದನ್ನು ಹೇಳುತ್ತಿಲ್ಲವೇ..., ಪದೇ ಪದೇ ನಿನಗಾಗಿ ತಪಿಸುವ ನನ್ನನ್ನು ನೀನು ಬ್ಯುಸಿಯಾಗು ಅಂದೆಯಲ್ಲಾ...? ಅದಕ್ಕೆ ಹೇಳಿದೆ!” ಎಂದ.
ನನ್ನದು ಅದೇ ಮೌನ! ಮತ್ತೆ ಅವನೇ...,
“ಏನಂದುಕೊಂಡಿದ್ದೀಯ? ನಿನಗಾಗಿ ತಪಿಸುತ್ತಿರುವುದು ಬೇರೆ ಕೆಲಸವಿಲ್ಲದ್ದರಿಂದ ಅಂತಾನ? ಅಥವಾ ನಿನ್ನಿಂದ ಏನಾದರೂ ನಿರೀಕ್ಷೆ ಇಟ್ಟುಕೊಂಡು ಅಂತಾನ?”
ನನ್ನ ಕಣ್ಣು ತುಂಬಿತು. ಏನೆಂದು ಉತ್ತರಿಸಲಿ?
ಮೊದಲು ನನ್ನ ಅರಿವಿಲ್ಲದೆ..., ನಂತರ ಅರಿವಿನೊಂದಿಗೆ ಅವನನ್ನು ಇಗ್ನೋರ್ ಮಾಡುತ್ತಿದ್ದೇನೆ- ಎಂದೇ?
ಯಾಕೆ?
*
ರುದ್ರನನ್ನು ಪರಿಚಯವಾಗುವಾಗ ನನ್ನ ಗಂಡ ಸತ್ತು ಎರಡು ವರ್ಷವಾಗಿತ್ತು. ಎರಡನೇ ವರ್ಷದ ದುಃಖಾಚರಣೆಗಾಗಿ ಬಾರ್‌ಗೆ ಹೋಗಿದ್ದೆ. ಒಬ್ಬಳೇ..., ಆ ಟೇಬಲ್ ನನಗೊಬ್ಬಳಿಗೆ ಮೀಸಲು. ಹೊಟ್ಟೆ ತುಂಬಾ ಕುಡಿದು ಮನೆಗೆ ಹೋಗಿ ಮಲಗಿಬಿಡುವುದು ಉದ್ದೇಶ.
ಒಂದು ಕೈಯ್ಯಲ್ಲಿ ಬಿಯರ್ ಬಾಟಲ್, ಮತ್ತೊಂದು ಕೈಯ್ಯಲ್ಲಿ ಮೊಬೈಲ್...!
ಗಂಡನೊಂದಿಗಿನ ಅದ್ಭುತ ಕ್ಷಣಗಳ ಫೋಟೋಗಳು..., ನೆನಪುಗಳು..., ನಾನು!
“ಎಕ್ಸ್‌ಕ್ಯೂಸ್‌ಮಿ!” ಅನ್ನುವ ಮಾತು ನನ್ನನ್ನೇ ಉದ್ದೇಶಿಸಿ ಅನ್ನುವುದು ಗೊತ್ತಾಗಿ ಅಸಹನೆಯಿಂದ ತಲೆಯೆತ್ತಿ ನೋಡಿದೆ.
“ಓಹ್! ದುಃಖಿನಿ! ಡಿಸ್ಟರ್ಬಿದೆ! ಸಾರಿ..., ಯು ಕಂಟಿನ್ಯೂದ ದುಃಖ- ಎಂಜಾಯ್ ದ ದುಃಖ!” ಎಂದು ಹೇಳಿ ತೂರಾಡುತ್ತಾ ಹೊರಟು ಹೋದ.
ರುದ್ರನಲ್ಲವೇ ಅದು?- ಅನ್ನಿಸಿತು! ನೇರವಾದ ಪರಿಚಯವಿಲ್ಲವಾದರೂ ನಮ್ಮ ನಡುವೆ ಒಂದು ಯುದ್ಧವೇ ನಡೆದಿತ್ತು! ಫೇಸ್‌ಬುಕ್‌ನಲ್ಲಿ ಓಪನ್ ವಾರ್! ಅವನೊಬ್ಬ ಒಂದುಕಡೆ...., ನಾವು ಹೆಣ್ಣುಕುಲವೇ ಒಂದು ಕಡೆಯಾಗಿ- ಯುದ್ಧ! ಯುದ್ಧಕಾರಣ..., ಅವನು ಬರೆದು ಹಾಕಿದ್ದ- ಹೆಣ್ಣೆಂದರೆ ಹೀಗೇನೇ... ಅನ್ನುವ ಕಥೆ!
ಕಥೆಯಲ್ಲಿ ಅವನು..., ಹೆಣ್ಣೆಂದರೆ ಅಸೂಯೆ, ಹೆಣ್ಣೆಂದರೆ ಸಂಶಯ, ಹೆಣ್ಣೆಂದರೆ ವಾದ, ಹೆಣ್ಣೆಂದರೆ ನಾಟಕ, ಹೆಣ್ಣೆಂದರೆ ಗೋಳು, ಹೆಣ್ಣೆಂದರೆ ಚಂಚಲತೆ...., ಅನ್ನುವುದನ್ನು ಬರಿ ಕಥೆಯಂತೆ ಅಲ್ಲದೆ..., ಹೆಣ್ಣುಕುಲಕ್ಕೇ ಅನ್ವಯಿಸಿ- ಅದು ಹಾಗೆಯೇ ಅನ್ನುವಂತೆ ಬರೆದಿದ್ದ!
ಆ ಬರಹವನ್ನು ಅಟ್ಯಾಕ್ ಮಾಡುವಂತೆ ಕಮೆಂಟ್ ಮಾಡಿದ/ ಯುದ್ಧವನ್ನು ಮಾಡಿದ ಅಷ್ಟೂ ಜನ ಹೆಂಗಸರಿಗೆ ಚರ್ಚೆಯ ಕೊನೆಯಲ್ಲಿ...., “ನೋಡಿದ್ರಾ..., ಕಥೆಯಲ್ಲಿರುವ ಅಷ್ಟೂ ಅಂಶಗಳು ನಿಮ್ಮ ನಿಮ್ಮ ಕಮೆಂಟ್‌ಗಳಲ್ಲಿದೆ!” ಅನ್ನುವ ಕಮೆಂಟ್‌ಮಾಡಿ..., ಮೀಸೆ ತಿರುವುವ ಇಮೋಜಿ ಹಾಕಿದ್ದ!
ಹೋಗಿದ್ದು ಅವನೇ ಆದರೆ ಬಿಡಬಾರದು- ಅಂದುಕೊಂಡು ಎದ್ದೆ.
ನನ್ನನ್ನು ದಾಟುವಾಗ ತೂರಾಡುತ್ತಿದ್ದವ ಈಗ ನೇರವಾಗಿಯೇ ನಡೆಯುತ್ತಿದ್ದ!
“ಎಕ್ಸ್‌ಕ್ಯೂಸ್‌ಮಿ!” ಎಂದೆ.
ತಿರುಗಿ ನಿಂತವ..., ಮುಗುಳುನಗುತ್ತಾ..., ನನ್ನ ಮುಖದ ತೀರಾ ಸಮೀಪಕ್ಕೆ ಬಂದು...,
“ಇದನ್ನೇ ನಾನು ಹೇಳಿದಾಗ ನಿಮ್ಮ ಮುಖದಲ್ಲಿ ಅಸಹನೆಯಿತ್ತು!” ಎಂದ.
ಅಷ್ಟು ಹತ್ತಿರದಿಂದ ಅವನ ಮುಖವನ್ನು ಕಂಡಾಗ..., ಅವನನ್ನು ಜಾಲಾಡಬೇಕು ಅನ್ನುವ ನನ್ನೊಳಗಿನ ಆವೇಶ ಇಳಿದು..., ಗೊಂದಲ ಹುಟ್ಟಿ..., ಕೊನೆಗೆ ಅಯೋಮಯಳಾಗಿ ಅವನನ್ನು ನೋಡಿದೆ- ಅವನು ಕುಡಿದಿರಲಿಲ್ಲ!!
“ನಿಮಗಾಗಿಯೇ ಬಂದೆ!” ಎಂದ ನನ್ನ ಗೊಂದಲವನ್ನು ನಿವಾರಿಸುವಂತೆ.
ಸಂಶಯದಿಂದ ನೋಡಿದೆ!
“ನಿಮ್ಮ ಗಂಡ ಸತ್ತು ಎರಡು ವರ್ಷ! ಅದಕ್ಕೂ ಮುಂಚೆ ಆರುತಿಂಗಳಿಗೆ ಒಂದರಂತೆ ಪುಸ್ತಕ ಬರೆಯುತ್ತಿದ್ದವರು..., ಯಾಕೆ ನಿಲ್ಲಿಸಿದಿರಿ?” ಎಂದ.
ಅವನು ಉಪಯೋಗಿಸಿದ ಸತ್ತು- ಅನ್ನುವ ಪದ ಹಿಡಿಸಲಿಲ್ಲ. ಆದರೂ...,
“ಉತ್ತರ ಹೇಳಿ ಪ್ರಶ್ನೆ ಕೇಳುತ್ತಿದ್ದೀರಿ!” ಎಂದೆ.
“ನನ್ನ ಹೆಂಡತಿ ಸತ್ತು ಹತ್ತು ವರ್ಷ! ಅವಳು ಸಾಯುವುದಕ್ಕೂ ಮುಂಚೆ ವರ್ಷ/ಎರಡುವರ್ಷಕ್ಕೊಂದು ಪುಸ್ತಕ ಬರೆಯುತ್ತಿದ್ದವ ಈಗ ವರ್ಷಕ್ಕೆರಡು ಪುಸ್ತಕ ಬರೆಯುತ್ತಿದ್ದೇನೆ!” ಎಂದ.
ಮಾತನಾಡುತ್ತಲೇ ನಾನು ಕುಳಿತಿದ್ದ ಟೇಬಲ್‌ಬಳಿಗೆ ನಡೆಯುತ್ತಿದ್ದ. ಸೆಳೆತಕ್ಕೆ ಒಳಗಾದವಳಂತೆ ಅವನ ಹಿಂದೆಯೇ ಹೆಜ್ಜೆ ಹಾಕಿದೆ.
“ನಾಚ್ಕೋಬೇಡಿ ಕೂತ್ಕೋಳಿ!” ಎಂದು ನಾನು ಕುಳಿತಿದ್ದ ಖರ್ಚಿಯನ್ನು ತೋರಿಸಿ ಅದರ ಎದುರಿನ ಖುರ್ಚಿಯಲ್ಲಿ ಅವನು ಕುಳಿತುಕೊಂಡ!
“ತೂರಾಡುತ್ತಾ ಹೋಗಿದ್ದು- ನಿಮ್ಮನ್ನು ಗೇಲಿ ಮಾಡಿದ್ದು!” ಎಂದ.
ನಾನೇನೂ ಮಾತನಾಡಲಿಲ್ಲ. ಅವನೇ...,
“ಅವತ್ತು..., ನನ್ನ ಕಥೆಗೆ ನೀವು ಮಾಡಿದಷ್ಟು ದಾರ್ಷ್ಟ್ಯದ ಕಮೆಂಟ್ ಯಾರೂ ಮಾಡಿರಲಿಲ್ಲ! ಉಳಿದ ಎಲ್ಲರೂ ಇನ್ಬಾಕ್ಸಿಗೂ ಬಂದು ಧಾರಾಳ ಬೈದರು! ಅವರಿಗೆಲ್ಲಾ ಅಲ್ಲೇ ಉತ್ತರಕೊಟ್ಟು- ಕ್ಷಮೆಕೇಳಿದ್ದೆ!” ಎಂದ.
ಅವನನ್ನೇ ದಿಟ್ಟಿಸಿ ನೋಡುತ್ತಿದ್ದೆ.
“ಆ ಕಥೆ ಬರೆಯುವವರೆಗೆ ನಾನೆಂದರೆ ಯಾರಿಗೂ ಗೊತ್ತಿರಲಿಲ್ಲ..., ಈಗ ಒಂದು ರೇಂಜಿಗೆ ಜನ ನನ್ನ ಗುರುತಿಸುತ್ತಾರೆ! ಅದು ಮ್ಯಾಟರ್ ಹೊರತು- ಹೆಂಗಸರನ್ನು ಕೀಳಾಗಿ ಕಾಣುವುದಲ್ಲ!” ಎಂದ.
“ಇವತ್ತು ನಾನಿಲ್ಲಿರುತ್ತೇನೆ ಅಂತ ಹೇಗೆ ಗೊತ್ತಾಯ್ತು?” ಎಂದು ಕೇಳಿದೆ.
“ಈ "ಆಕಸ್ಮಿಕ"ಕ್ಕೆ ನಮ್ಮ ಬದುಕಿನಲ್ಲಿ ತುಂಬಾ ದೊಡ್ಡ ಪಾತ್ರವಿದೆ!” ಎಂದು ಹೇಳಿ ನಕ್ಕು...,
“ನಿಮ್ಮ ಪುಸ್ತಕಗಳನ್ನು ಓದಿದ್ದೇನೆ..., ಜೊತೆಗೆ ಅವತ್ತಿನ ನನ್ನ ಪೋಸ್ಟ್‌ಗೆ ನಿಮ್ಮ ಕಮೆಂಟ್‌ಗಳನ್ನು ನೋಡಿ ಅಪರೂಪದ ವ್ಯಕ್ತಿತ್ವ ಅನ್ನಿಸಿ ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಚೆಕ್ ಮಾಡಿದ್ದೆ. ಆದ್ದರಿಂದ ನೀವು ನನಗೆ ಪರಿಚಯ! ಅದೇ ಮುಖ ಇವತ್ತು ಬಸವನಗುಡಿ ಸಿಗ್ನಲ್‌ನಲ್ಲಿ ಕಾಣಿಸಿದಾಗ ಕುತೂಹಲವಾಯಿತು! ಫಾಲೋ ಮಾಡಿದೆ!” ಎಂದ.
“ನೀವು ಕುಡಿಯುವುದಿಲ್ಲವೇ?” ಎಂದು ಕೇಳಿದೆ.
ನಕಾರಾತ್ಮಕವಾಗಿ ತಲೆಯಾಡಿಸಿದ. ಮುಜುಗರವಾಯಿತು!
ಹಾಗೆ ಶುರುವಾದ ಪರಿಚಯ ಏಕವಚನದಲ್ಲಿ ಮಾತನಾಡುವಷ್ಟು ಬೆಳೆದ ಒಂದುದಿನ..., ನಾನು ಪದೇ ಪದೇ ಗಂಡನ ವಿಷಯಕ್ಕೆ ದುಃಖಿಸುವುದು ಕಂಡು..., ಅವನ ಕೈಯ್ಯಮೇಲಿದ್ದ ಗಾಯದ ಗುರುತನ್ನುತೋರಿಸಿ ಹೇಳಿದ್ದ...,
“ನೋಡು ಕಲೆ! ಗಾಯದ ಕಲೆ- ನೋವಲ್ಲ! ಈರೀತಿ ಮೈಮೇಲೆ ಸುಮಾರು ಕಲೆಗಳಿದೆ. ಅಷ್ಟೆ..., ಆ ಗಾಯವಾದಾಗಿನ ನೋವಿಲ್ಲ! ಹಾಗೆಯೇ ಮನಸ್ಸೂ...! ಜೀವನದಲ್ಲಿ ಹಲವಾರು ಘಟನೆಗಳು ನಡೆದಿರುತ್ತದೆ- ನೋವಿಗೋ ನಲಿವಿಗೋ ಕಾರಣವಾಗುವ ಘಟನೆಗಳು! ಆ ಸಮಯ ಕಳೆದನಂತರ ಅದು ಕೇವಲ ನೆನಪುಮಾತ್ರ- ಈ ಕಲೆಗಳಂತೆ!” ಎಂದು ಹೇಳಿ ನಿಲ್ಲಿಸಿ ನನ್ನ ಮುಖವನ್ನು ನೋಡಿ...,
“ನನಗೇನು ನನ್ನ ಹೆಂಡತಿಯೆಂದರೆ ಇಷ್ಟವಿಲ್ಲ ಅಂತೀಯ? ನನ್ನ ಪ್ರಾಣ ಅವಳು..., ಒಂದು ದಿನಕೂಡ ಪರಸ್ಪರ ಬಿಟ್ಟು ಇದ್ದವರಲ್ಲ! ಹೋದಳು- ಏನು ಮಾಡುವುದು? ಸಾವು ಅನ್ನುವ ವಾಸ್ತವ ಯಾರನ್ನು ಬಿಡುತ್ತದೆ? ಹಾಗೆಂದು ನಾನೂ ಸಾಯಲೇ? ಅವಳ ಮೇಲಿನ ನನ್ನ ಪ್ರೀತಿಯನ್ನು ಇತರರಮೇಲೆ, ಪ್ರಪಂಚದಮೇಲೆ, ಪ್ರಕೃತಿಯಮೇಲೆ ಕನ್ವರ್ಟ್ ಮಾಡಿದೆ. ನನಗೆ ಇಷ್ಟವಿಲ್ಲದ ಯಾವುದೂ ಈ ಪ್ರಪಂಚದಲ್ಲಿ ಇಲ್ಲ ಅನ್ನುವಷ್ಟರ ಮಟ್ಟಿಗೆ! ಆಗಲೇ ತಿಳಿದದ್ದು ನಾನು ಅವಳನ್ನೆಷ್ಟು ಪ್ರೇಮಿಸುತ್ತಿದ್ದೇನೆ ಅಂತ..., ಇಡೀ ಪ್ರಪಂಚಕ್ಕೆ ಹಂಚಬಹುದಾದಷ್ಟು ಪ್ರೇಮವನ್ನು ಅವಳೊಬ್ಬಳಿಗೆ ನೀಡಿದ್ದೆ! ಈಗ ಅವಳಿಲ್ಲ- ಸೋ..., ಆ ಪ್ರೇಮವನ್ನು ಪ್ರಪಂಚಕ್ಕೇ ಹಂಚುತಿದ್ದೇನೆ!” ಎಂದ.
ಕಥೆಗಾರ್ತಿಯಾದ್ದರಿಂದಲೇನೋ..., ಒಬ್ಬರು ಮಾತನಾಡುವಾಗ ಕೆಲವೊಂದು ಪದಗಳು ನನ್ನನ್ನು ಸೆಳೆಯುತ್ತದೆ! ನನಗೇನು ನನ್ನ ಹೆಂಡತಿಯೆಂದರೆ "ಇಷ್ಟವಿಲ್ಲ" ಅಂತೀಯ? ಅಂದಿದ್ದ! ಅಂದರೆ ವರ್ತಮಾನ ಕಾಲ! “ಇಷ್ಟವಿರಲಿಲ್ಲ- ಅಂತೀಯ?” ಅನ್ನುವುದಕ್ಕೂ "ಇಷ್ಟವಿಲ್ಲ ಅಂತೀಯ" ಅನ್ನುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ.
ಅವನ ಮೇಲಿನ ಗೌರವ ಇಮ್ಮಡಿಯಾಯಿತು!
*
ವರ್ಷವೊಂದು ಕಳೆಯಿತು! ಅವನನ್ನು ನಾನು ಇಗ್ನೋರ್ ಮಾಡತೊಡಗಿದೆ!
ಯಾಕೆ?
ಯಾಕೆಂದರೆ..., ಯಾಕೆಂದರೆ...., ಅವನ ಮೇಲೆ ನನಗೆ..., ಗೌರವ- ಆದರಗಳನ್ನುಮೀರಿ ಯಾವುದೋ ಭಾವ ಹುಟ್ಟುತ್ತಿದೆ- ಅದು ನನಗೆ ಬೇಕಿಲ್ಲ!!!
ಒಮ್ಮೆ ಹಾಗೇ ಆಯಿತು..., ಅವನ ಪ್ರತಿ ಮೆಸೇಜ್‌ಗೆ, ಕಾಲ್‌ಗೆ ತಪ್ಪದೆ ಪ್ರತಿಕ್ರಿಯಿಸುತ್ತಿದ್ದ ನಾನು ನನ್ನರಿವಿಲ್ಲದಂತೆಯೇ ಅವನನ್ನು ಅವಾಯ್ಡ್ ಮಾಡತೊಡಗಿದೆ. ಮೊದಮೊದಲು ಅವನಿಗೂ ಅರ್ಥವಾಗಲಿಲ್ಲ- ಅನಾರೋಗ್ಯವೇನೋ ಅಂದುಕೊಂಡ- ಅಲ್ಲ ಎಂದು ತಿಳಿದಾಗ..., ಬ್ಯುಸಿಯೇನೋ ಅಂದುಕೊಂಡ..., ಆಗಲೇ ನಾನವನಿಗೆ ಹೇಳಿದ್ದು...,
“ನೀನು ಇನ್ನೂ ಬ್ಯುಸಿಯಾಗು ರುದ್ರ!” ಎಂದು.
ನನ್ನ ಉದ್ದೇಶ..., ನನಗೆ ಕಾಲ್ ಮೆಸೇಜ್ ಮಾಡಲು ಸಮಯವಿಲ್ಲದಷ್ಟು ಅವನು ಬ್ಯುಸಿಯಾಗಬೇಕೆಂದು!! ಹಾಗಲ್ಲದೆ ಅವನಿಗೆ ಹೇಗೆ, ಏನು ಹೇಳಬೇಕೋ ನನಗೂ ತಿಳಿಯಲಿಲ್ಲ!
ಆದರೆ..., ಅವನ ಸಾನ್ನಿಧ್ಯ ನನಗೆ ಬೇಕಾಗಿಲ್ಲ ಅನ್ನುವ ಅರಿವು ಅವನನ್ನು ನನ್ನಿಂದ ದೂರ ಮಾಡಿತು!
ಅದು..., ನನಗೆ ಮತ್ತೂ ಹೆಚ್ಚಿನ ನೋವು ನೀಡಿತು!!
ಅವನು ದೂರ ಹೋಗುವುದೂ ನನಗೆ ಬೇಕಾಗಿರಲಿಲ್ಲ!!!
ಹಾಗೆಂದು ಅವನನ್ನು ಒಪ್ಪಿ- ಸ್ವಂತ ಮಾಡಿಕೊಳ್ಳಲೂ ನಾನು ತಯಾರಿಲ್ಲ!
ನನ್ನ ಗಂಡನ ಮೇಲಿನ ನನ್ನ ಭಾವನೆ- ಪ್ರೇಮ ಸುಳ್ಳು ಎಂದಾಗಿಬಿಡುತ್ತದೆ ಅನ್ನುವ ಭಯ ನನಗೆ!
ಅದಕ್ಕೇ..., ತೀರ್ಮಾನವೊಂದನ್ನು ತೆಗೆದುಕೊಂಡೆ!
ನನ್ನ ಗಂಡನಬಳಿಗೆ ಹೋಗುತ್ತಿದ್ದೇನೆ- ಎಂದು ಲೆಟರ್ ಒಂದನ್ನು ಬರೆದಿಟ್ಟು...?!
ಅವನು ಹೇಳಿದಂತೆ..., ಅವನ ಬದುಕಿನ "ಆಕಸ್ಮಿಕಕ್ಕೆ" ಅವನಿಗೇ ಗೊತ್ತಿಲ್ಲದಷ್ಟು ಭಾರಿದೊಡ್ಡ ಪಾತ್ರವಿದೆ!
ದೇವರೇ...., ನಾನು ಅವನ ಕಾರಣವಾಗಿ ಆತ್ಮಹತ್ಯೆ ಮಾಡಿದೆ ಎಂದು ಅವನಿಗೆ ತಿಳಿಯದೇ ಹೋಗಲಿ....!
ಪ್ರಪಂಚವೆಲ್ಲಾ ಗಂಡನಮೇಲಿನ ನನ್ನ ಪ್ರೇಮಕ್ಕೆ ಸಾಕ್ಷಿಯಾಗಲಿ....!
ಬಂದರ ಎಷ್ಟು ದಿವಸ ಆಯಿತು ಸರ್ ನಿಮ್ಮ ಬರಹ ಓದಿ. ಕಥೆ ಚಂದವಿದೆ ಒಂದು ಹೆಣ್ಣು ತನ್ನ ಪುರುಷನ ಮೇಲಿನ ಅಗಾದ ಪ್ರೀತಿ.. ಅವಳ ಶುದ್ಧ ಪ್ರೀತಿಯನ್ನು ಮೆಚ್ಚಿದೆ.. ಆದರೆ ಗಂಡನೇ ಸರ್ವಸ್ವ ಅಂದು ಕೊಂಡವರು ಮಕ್ಕಳು ಮಾಡ್ಕೋ ಬಾರದು.. ಬರೀ ಒಂದು ಕಡೆಯ ಪ್ರೀತಿ ಕಥೆಯಲ್ಲಿದೆ ಸತ್ತವಳಿಗೆ ಮಕ್ಕಳು ಇರಲಿಲ್ಲವೇ? ಅದರ ಬಗ್ಗೆ ಒಂದು ದಿವಸವೂ ಯೋಚಿಸಲಿಲ್ಲವೇ 🤔ಸರಿ ರುದ್ರ ಪ್ರೀತಿಯನ್ನು ಹೇಗೆಲ್ಲ ಹಂಚಿಕೊಳ್ಳಬೇಕು ಎಂದು ಹೇಳಿದರು ಸಹ ಅದು ಅವರಿಗೆ ತನ್ನ ಗಂಡನ ಪ್ರೀತಿಯಂತೆ ಅದು ತೋರಲಿಲ್ಲ ಅದನ್ನು ಮತ್ತೆ ಇನ್ನೊಬ್ಬರಲ್ಲಿ ಪಡೆಯಲು ಇಷ್ಟವಿಲ್ಲ ಅದಕ್ಕೆ ಸಾವೇ ಕೊನೆ ಅಂತ ಫುಲ್ ಸ್ಟಾಪ್ ಇಟ್ಟಳು ಅವಳ ಸಾಹಿತ್ಯವೂ ಅವಳಿಗೆ ಖುಷಿಕೊಡಲಿಲ್ಲ 🤔ಅಂದವರೇ ಅವರಿಗೆ ತನ್ನ ಭಾವನೆಗಳನ್ನು ಹತೋಟಿಯಲ್ಲಿಟ್ಟು ಜೀವನ ಸಾಗಿಸುವ ಶಕ್ತಿ ಇರಲಿಲ್ಲ ಈ ಆತ್ಮ ಹತ್ಯೆ ಒಂದೇ ದಾರಿ ಅಂದು ಕೊಂಡರೆ ಇದನ್ನು ಒಪ್ಪಿಕೊಂಡರೆ ಪ್ರಸ್ತುತ ಗಂಡ ಸತ್ವರೆಲ್ಲ ಆತ್ಮ ಹತ್ಯೆ ಮಾಡಿಕೊಂಡು ಅವರವರ ಗಂಡಂದಿರ ಪ್ರೀತಿಯನ್ನು ಸಾಭಿತು ಪಡಿಸಿಕೊಳ್ಳಬೇಕಾಗುತ್ತೆ ಇಲ್ಲ ಅಂದರೆ ಅವರ ಗಂಡಂದಿರ ಮೇಲೆ ನಿಜವಾದ ಪ್ರೀತಿ ಇಲ್ಲ ಅಂತ ಸಾಭಿತು ಆಗುತ್ತದೆ ಆದ್ದರಿಂದ ಈ ಆತ್ಮಹತ್ಯೆ ಸರಿ ಅಂತ ಒಪ್ಪಿಕೊಳ್ಳುವುದಿಲ್ಲ ಅದು ಸತ್ತವಳ ವೀಕ್ನೆಸ್ಸ್ 😔😔ಚಂದದ ಕಥೆ ದೇವಿಪುತ್ರರರೇ ಇನ್ನಷ್ಟು ಕಥೆಗಳು ಬರಲಿ.....
ReplyDelete