ತಾವರೆ- ಕಥೆ
ತಾವರೆ ತಾವರೆಯನ್ನು ಕಂಡು ನಿಂತೆ ! ಎದೆ ಧಗ್ ಅಂದಿತು ! ತಾವರೆಯನ್ನು ಕಂಡರೆ ಎದೆ ಧಗ್ ಅನ್ನುತ್ತದೆಯೇ ...? ಹಾ ... ತಾವರೆ ಹೆಣ್ಣಿನಂತೆ ಕಂಡರೆ ಎದೆ ಧಗ್ ಅನ್ನುತ್ತದೆ . ವಾಸ್ತವದ ಅರಿವಾದಾಗ ಮುಗುಳುನಗು !! ಹೆಣ್ಣೇ ತಾವರೆಯಂತೆ ಕಂಡಳೆಂಬ ಅರಿವು ! ಪಾರ್ವತಿ ಶಿವನನ್ನು ಪಡೆಯಲು ಗಂಟಲವರೆಗಿನ ನೀರಿನಲ್ಲಿ ತಪಸ್ಸು ಮಾಡಿದಳಂತೆ ... ಆಗ ಅವಳ ತಲೆ ತಾವರೆಯಂತೆಯೇ ಕಂಡಿತಂತೆ ! ಯಾರು ಹೇಳಿದರು ಈ ಕಟ್ಟು ಕಥೆ ? ನಾನೇ ! ಈಗ ಈ ಹೆಣ್ಣನ್ನು ಹೊಗಳಬೇಕಲ್ಲಾ ! ಆಗತಾನೆ ಮುಳುಗುತ್ತಿರುವ ಸೂರ್ಯನ ಕಿರಣ ಅವಳ ಮುಖದಮೇಲೆ ಬಿದ್ದು - ಈಗ - ಸೂರ್ಯನೇ ಅವಳೇನೋ ಅನ್ನಿಸುವಂತಿತ್ತು ! ಕರ್ಮ ನನ್ನದು ... ಇನ್ನೂ ಏನೇನು ಅನ್ನಿಸುತ್ತಿದ್ದಳೋ .... ನಿಧಾನವಾಗಿ ನೀರಿನೊಳಗಿನಿಂದ ನಡೆದು ಬಂದಳು .... ಎಲ್ಲಿಯೋ ನೋಡಿದ್ದೇನೆ ಅನ್ನಿಸಿತು - ಸ್ಪಷ್ಟವಾಗಿ ! ನನ್ನಕಡೆ ನೋಡಿದಳೇ ....? ನೋಡಬೇಕೆ ...!!?? ನನಗೇಕೆ ಇಷ್ಟೊಂದು ಕಾತರ ? ಹೊಗಳಬೇಕೆಂದುಕೊಂಡದ್ದು ಏಕೆ ? ನನ್ನ ಹೊಗಳಿಕೆಗೆ ಎಟುಕದವಳು - ಅವಳೆಂದರೇನರ್ಥ ? ನಾನವಳನ್ನು ಪ್ರೇಮಿಸುತ್ತಿದ್ದೇನೆಂದು ! ಹಾಗಿದ್ದರೆ ಮೊನ್ನೆಯೂ ಮೊದಲಬಾರಿ ಹಾಗನ್ನಿಸಿ ಪ್ರಪೋಸ್ ಮಾಡಿ ತಿರಸ್ಕೃತಗೊಂಡೆನಲ್ಲಾ ಆ ಹುಡುಗಿ ? * ಮರದ ನೆರಳಿನಲ್ಲಿ ಕುಳಿತಿದ್ದಾಳೆ ! ಅವಳನ್ನೇ ನೋಡುತ್ತಾ ಎರಡು ಮೂರುಬಾರಿ ಆಚೆ ಈಚೆ ಸುತ್ತಿದೆ ! ...