ವೈದೇಹಿ- ಕಥೆ

ವೈದೇಹಿ

ಕೆಲವೊಂದು ಘಟನೆಗಳಿಗೆ ಕಾರಣವಿರುವುದಿಲ್ಲ! ಹಾಗೆಯೇ.., ಕೆಲವೊಂದು ಭಾವನೆಗಳಿಗೆ ಅರ್ಥವಿರುವುದಿಲ್ಲ!

*

ನನ್ನನ್ನೇ ನೋಡುತ್ತಿದ್ದಳು. ಅದಕ್ಕೆ ಕಾರಣ ನಾನೇ!

ಎಲ್ಲೋ ನೋಡಿದ್ದೇನೆ ಅನ್ನುವ ಭಾವ ನನ್ನ ಮುಖದಲ್ಲಿರುವಾಗ ಹೇಗೆ ನೋಡದಿರುತ್ತಾಳೆ?

ಅವಳ ಮುಖದಲ್ಲಿ ಗೊಂದಲ. ಗೊಂದಲ ಸಂಶಯವಾಗಿ ನನ್ನನ್ನೇ ನೋಡುತ್ತಾ ಹೊರಟು ಹೋದಳು!

ನನ್ನ ಮೆದುಳು ವರ್ತಿಸುತ್ತಿಲ್ಲ ಅನ್ನಿಸಿತು!

ಹೆಣ್ಣುಮುಖವನ್ನು ಮರೆಯುವುದೇ?

ಅದು ನನಗೆ ನಾನೇ ಮಾಡಿಕೊಳ್ಳುವ ಅವಮಾನ!!

ಅವಳನ್ನು ನಾನು ನೋಡಿದ್ದೇನೆ- ಸ್ಪಷ್ಟವಾಗಿ! ಅವಳ ಪರಿಚಯವಿದೆ..., ಮರೆಯಬಾರದ ಮುಖವದು..., ಆದರೂ ನೆನಪಾಗುತ್ತಿಲ್ಲಾ ಅಂದರೆ....?

ತಲೆ ಕೊಡವಿ ಮುಂದಕ್ಕೆ ನಡೆದೆ. ಅವಳನ್ನು ಹಿಂಬಾಲಿಸಬೇಕು ಅನ್ನಿಸಲಿಲ್ಲ...,ಆದರೂ ಸಿಗುತ್ತಾಳೆ ಅನ್ನುವ ಭಾವ!

ಅವಳದೇ ಯೋಚನೆಯಲ್ಲಿ ತಲೆ ಗುಯ್ಗುಡುತ್ತಿತ್ತು. ಸಿಗರೇಟು ಸೇದಬೇಕೆನ್ನಿಸಿತು- ಸೇದಿದವನಲ್ಲ- ಆದರೂ ಅನ್ನಿಸಿತು! ಸಿಗರೇಟೊಂದನ್ನು ಕೊಂಡು ಸೇದುತ್ತಾ ನಿಂತೆ.... ಅಸ್ಪಷ್ಟ ಯೋಚನೆ!!

ಅವಳು ನನ್ನ ಆತ್ಮೀಯಳು..., ನನ್ನಲ್ಲಿ ಲೀನವಾಗಿರುವ ಏನೋ ಒಂದು..., ನನಗಿಂತಲೂ ಅವಳು ಬೇರೆಯಲ್ಲ ಅನ್ನುವ ಭಾವ!!

ಹುಚ್ಚನಾಗುತ್ತಿದ್ದೇನೆಯೇ...?

ನಿಂತಲ್ಲಿಯೇ ಹತ್ತು ಸಿಗರೇಟನ್ನು ಸೇದಿ..., ನಶೆ ಹಿಡಿದವನಂತೆ..., ಯಾವುದೋ ಅಮಲಿನ ಲಹರಿಯಲ್ಲಿ ತೂರಾಡುತ್ತಾ ನಡೆದೆ.

ಎಷ್ಟು ಕ್ಷಣ ನೋಡಿರುತ್ತೇನೆ? ಒಂದು ಕ್ಷಣವೇ? ಒಂದು ನಿಮಿಷವೇ? ಅಷ್ಟಕ್ಕೇ ಇಷ್ಟು ನಶೆಯೇ....? ಏನು ನಾನು? ಏನಾಯಿತು ನನಗೆ....?

ಹೇಗೆ ಮನೆ ಸೇರಿದೆನೆಂದೇ ತಿಳಿಯಲಿಲ್ಲ.... ಹಾಸಿಗೆಯಲ್ಲಿ ಬಿದ್ದೆ.... ಅಷ್ಟೇ ನೆನಪು- ವಾಸ್ತವದ್ದು!!

ನಂತರ..., ಎಂದಿನಂತೆ ಅದೇ ಕನಸು!

ಗಾಢಾಂಧಕಾರ..... ಆ ಗಾಢಾಂಧಕಾರದ ಮಧ್ಯೆ ಚುಕ್ಕಿಯಂತೆ ಬೆಳಕು..... ಬೆಳಕಿನೆಡೆಗೆ ಚಲಿಸಿದರೆ..., ಚುಕ್ಕಿ ಬೆಳಕು ವಿಶಾಲವಾಗುತ್ತಾ..., ಆ ಬೆಳಕಿನಲ್ಲಿ..., ಎರಡು ರೂಪ!

ಯಾರದು ಅನ್ನುವ ನನ್ನ ಪ್ರಶ್ನೆಯ ಉತ್ತರ- ಮೂರ್ಛೆ ಹೋಗಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ!

*

ಹುಡುಕಲಾರೆ! ಹುಡುಕಿ ಸಿಗುವ ಅವಳು ನನಗೆ ಬೇಡ!

ಒಂದು ಅಹಂಕಾರವಿತ್ತು...,

ಕಣ್ಣಿಗೆ ಕಾಣಿಸುವ ಪ್ರಪಂಚವೆಲ್ಲಾ ಪಕೃತಿಯಾದರೆ.... ಅದನ್ನು ಚಾಲಿಸುವ ಶಕ್ತಿ ಪುರುಷ- ಎಂದು!!

ಇದರಲ್ಲಿ ಅಹಂಕಾರವೇನು?

ನಾನು ಪುರುಷ ಅನ್ನುವ ಅಹಂಕಾರ!!

ಪ್ರಕೃತಿಯಿಲ್ಲದೆ ಪುರಷನಿಗೆ ಅಸ್ತಿತ್ವವೇ ಇಲ್ಲ ಅನ್ನುವ ಅರಿವು..., ಅಹಂಕಾರವನ್ನು ಮರೆತು ಆ ಪ್ರಕೃತಿಗಾಗಿ ಹಾತೊರೆಯುವಂತೆ ಮಾಡಿತು!!

*

ಪುಟ್ಟ ಪುಟ್ಟ ಹೆಜ್ಜೆಗಳನ್ನು ಹಾಕುತ್ತಾ ಓಡಿ ಬಂದ ಕಂದಮ್ಮನನ್ನು ಕೈಯಗಲಿಸಿ ತೆಕ್ಕೆಯೊಳಕ್ಕೆ ಸೆಳೆದುಕೊಂಡೆ!

ಒಂದು ವರ್ಷದ ಮುಂಚೆ ಕೆರೆಯೊಂದರ ಸಮೀಪದಿಂದ ಸಿಕ್ಕಿದ ಮಗು!

ತಾಯಿಯಾರೋ... ತಂದೆಯಾರೋ... ತಿಳಿಯದು. ಆದರೂ ಅವಳು ನನ್ನ ಸ್ವಂತ!

ಆ ಪಾಪು ಸಿಕ್ಕಿದ ದಿನ ನನಗೆ ಚೆನ್ನಾಗಿ ನೆನಪಿದೆ!!

ಕನಸಿಗೂ ವಾಸ್ತವಕ್ಕೂ ವ್ಯತ್ಯಾಸ ತಿಳಿಯದ ಅವಸ್ತೆಯಲ್ಲಿದ್ದೆ ಅಂದು!!

ಹೆಣ್ಣೆಂದರೆ ನನಗೆ ಪ್ರಾಣ.... ಅವಳಲ್ಲಿ ಏನನ್ನೋ ಹುಡುಕುತ್ತಿರುವುದು ನನ್ನ ಸಹಜ ಗುಣ!

ಏನನ್ನು ಎಂದರೆ..., ತಿಳಿಯದು!! ಹುಡುಕುವುದಷ್ಟೇ!!

ಅದೇ ಹುಡುಕಾಟದ ಗುಂಗಿನಲ್ಲಿ ಹೆಣ್ಣೊಬ್ಬಳ ಸಹವಾಸವನ್ನು ಮುಗಿಸಿ ಬಂದು ಮಲಗಿಕೊಂಡವನು- ನಿನ್ನೆ ಕಂಡ ಕನಸನ್ನು ಮೊದಲಬಾರಿ ಕಂಡೆ! ಕನಸು ಮುಗಿಯುವ ಸಮಯಕ್ಕೆ ಸರಿಯಾಗಿ ಅಲರಾಂ ಬಡಿಯಿತು!

ಅಂದು ಯಾಕೋ ಜಾಗಿಂಗ್ ಹೋಗುವುದು ಬೇಡ ಅನ್ನಿಸಿದರೂ.... ಯಾರೋ ನನಗಾಗಿ ಕಾಯುತ್ತಿದ್ದಾರೆ ಅನ್ನುವ ಭಾವ ಬಂದು- ಎದ್ದು ಹೊರಟೆ!

ಬೆಳಗಿನ ನಾಲ್ಕೂವರೆ!!

ಐದು ಕಿಲೋಮೀಟರ್ ಸುತ್ತಳತೆಯ ಆ ಕೆರೆಯನ್ನು ಮೂರು ಸುತ್ತು ಸುತ್ತಿ.... ಅಲ್ಲಿಯೇ ವ್ಯಾಯಾಮವನ್ನೂ ಮಾಡಿ ಬರುವುದು ವಾಡಿಕೆ..., ನಾನು ಮರಳುವ ಸಮಯಕ್ಕೆ ಸರಿಯಾಗಿ ಒಬ್ಬೊಬ್ಬರಾಗಿ ಜನರು ಬರತೊಡಗುತ್ತಾರೆ!

ಅಂದು ಓಟವನ್ನು ಶುರು ಮಾಡಿದಾಗ ದೂರದಲ್ಲಿ ನಾಯಿಗಳು ಬೊಗಳುತ್ತಿರುವುದು ಕೇಳಿಸಿತು! ಯಾರೋ ನೆರಳಲ್ಲಿ ಮರೆಯಾದಂತೆ..., ಅನ್ನಿಸಿಕೆ! ಪರಿಚಯದ ನಾಯಿಗಳೇ! ಇಷ್ಟು ದಿನ ಇಲ್ಲದ್ದು ಇಂದೇಕೆ ಇಷ್ಟು ಬೊಗಳುತ್ತಿವೆ ಅನ್ನುವ ಸಂಶಯಬಂದು ಅತ್ತಕಡೆ ಹೋದೆ!

ಪುಟ್ಟ ಪಾಪುವೊಂದು- ನಿದ್ರಿಸುತ್ತಿದೆ!

ಯಾರೋ ಮರೆಯಾದಂತೆ ಅನ್ನಿಸಿದ್ದು ಮಗುವನ್ನು ಮಲಗಿಸಿ ಹೋದವರೇ ಇರಬೇಕು! ಕೆರೆಗೆ ಎಸೆದು ಕೊಲ್ಲಲು ಬಂದಿದ್ದರೇನೋ? ಅಥವಾ ಅವರೂ ಸಾಯಬೇಕು ಅಂದುಕೊಂಡಿದ್ದರೋ??

ಇನ್ನೂ ಕನಸಿನಲ್ಲಿದ್ದೇನೆಯೇ ಅನ್ನುವ ಸಂಶಯ ಬಂತು.

ನಾಯಿಗಳು ಬೊಗಳುವುದನ್ನು ನಿಲ್ಲಿಸಿ ನನ್ನನ್ನೇ ನೋಡುತ್ತಿದ್ದವು. ನಾನು ಆ ಪಾಪುವನ್ನು ಎತ್ತಿಕೊಂಡೆ. ಹೆಣ್ಣು ಪಾಪು! ಹೆಣ್ಣೆಂದರೆ ನನಗೆ ಪ್ರಾಣ!

ಏನೂ ಮಾಡಲು ತೋಚದೆ ಆಯಾಚಿತವಾಗಿ ಪಾಪುವನ್ನು ಎತ್ತಿಕೊಂಡು ಮನೆಗೆ ಬಂದೆ! ಮಗುವಿಗೆ ಆರೇಳು ತಿಂಗಳಾಗಿದೆ ಅನ್ನಿಸಿತು....

ಆ ಪಾಪುವಿನೊಂದಿಗೆ ಊರು ಬಿಟ್ಟೆ! ಇಲ್ಲದಿದ್ದರೆ ಪಾಪು ನನಗೆ ಉಳಿಯುವುದಿಲ್ಲ- ಉಳಿದವರಿಂದ!

*

ಆ ಪಾಪು ಸಿಗುವ ದಿನ ನಾನು ಕಂಡ ಕನಸು ಮತ್ತೆಂದೂ ನನ್ನನ್ನು ಬಿಟ್ಟು ಹೋಗಲಿಲ್ಲ!

ಆ ಕನಸಿನ ಒಡತಿಯನ್ನಲ್ಲವೇ ನಾನು ನಿನ್ನೆ ಕಂಡದ್ದು- ಪಾಪು ಸಿಕ್ಕಿದ ಊರಿಗೆ ಮರಳಿ ಬಂದ ದಿನವೇ!

ಆದರೂ ಯಾಕೆ ಗುರುತಿಸಲಿಲ್ಲ?

ಪಾಪು ಇರಲಿಲ್ಲ!!

ಪಾಪುವನ್ನು ಹೆಗಲಮೇಲೆ ಹಾಕಿಕೊಂಡು ನಡೆದೆ! ಈ ಪಾಪು ಸಿಕ್ಕಿದಮೇಲೆ..., ಹೆಣ್ಣಿನಲ್ಲಿ ಏನನ್ನೋ ಹುಡುಕುವುದು ನಿಲ್ಲಿಸಿದ್ದೆ! ಆದರೆ..., ಕನಸಿನ ರೂಪದಲ್ಲಿ ಮುಂದುವರೆದಿತ್ತು!

ಪಾಪುವೇ ಕಾರಣಳಾಗಿ ಅವಳು ನನಗೆ ಸಿಕ್ಕುವಳೇ??

--ಳು.... ಕನಸಿನಲ್ಲಿ ಕಂಡವಳು- ನಿನ್ನೆ ಕಂಡವಳು- ಯಾರವಳು?

ತಿಳಿಯದು!!

*

ನನ್ನನ್ನೇ ನೋಡುತ್ತಾ ಕುಳಿತಿರುವ ಅವಳನ್ನು ಕಂಡು ಬೆಚ್ಚಿದೆ! ಮಿದುಳು ವರ್ತನೆ ನಿಲ್ಲಿಸಿತು!

ಎದ್ದು ಬಂದು ನನ್ನ ಮುಂದೆ ಕುಳಿತಳು.

ನನಗೆ ನೀವು ಗೊತ್ತೇ?” ಎಂದಳು.

ಗೊತ್ತಿಲ್ಲ! ನಿಮಗೆ ನಾನು ಗೊತ್ತೇ ಎಂದು ಗೊತ್ತಿಲ್ಲ!” ಎಂದೆ.

ಮುಗುಳು ನಕ್ಕು,

ನಿಮಗೆ ನಾನು?” ಎಂದಳು.

ಗೊತ್ತು!” ಎಂದೆ.

ಗೊತ್ತೇ? ಹೇಗೆ?” ಎಂದಳು.

ನಿಮ್ಮನ್ನು ನಾನು ಸ್ಪಷ್ಟವಾಗಿ ನೋಡಿದ್ದೇನೆ!” ಎಂದೆ.

ಎಲ್ಲಿ?” ಎಂದಳು.

ಕನಸಿನಲ್ಲಿ!” ಎಂದೆ.

ವ್ಹಾಟ್? ಯು ಆರ್ ಮ್ಯಾಡ್!” ಎಂದಳು.

ಯಸ್!” ಎಂದೆ.

ಬಟ್ ಐ ನೋ ಯು!” ಎಂದಳು!

ಆಶ್ಚರ್ಯದಿಂದ ಅವಳ ಮುಖವನ್ನು ನೊಡಿದೆ!

ಗೀತ ನನ್ನ ಫ್ರೆಂಡು!” ಎಂದಳು.

ನನ್ನ ಮುಖದಲ್ಲಿ ಅದೇನನ್ನು ಓದಿದಳೋ....

ಗೀತ ನಿಮಗೆ ಮೋಸ ಮಾಡಲಿಲ್ಲ!” ಎಂದಳು.

ಅವಳೆಲ್ಲಿ?” ಎಂದಷ್ಟೇ ಕೇಳಿದೆ.

ತೀರಿಕೊಂಡಳು!” ಎಂದಳು.

ಗಾಬರಿಯಿಂದ ಅವಳನ್ನು ನೋಡಿದೆ.

ಹೆದರಬೇಡಿ..., ಆತ್ಮ ಹತ್ಯೆಯೇ..., ಆದರೆ ರೀಸನ್ ನೀವಲ್ಲ!” ಎಂದಳು.

ನಾನು ಗಲಿಬಿಲಿಯಿಂದ ಅವಳ ಮುಖವನ್ನು ನೋಡಿದೆ.

ನಿಮ್ಮ ಮತ್ತು ಗೀತಾಳ ಬಗ್ಗೆ ನನಗೆ ಚೆನ್ನಾಗಿ ಗೊತ್ತು! ಗೀತಾ ಎಲ್ಲಾ ಹೇಳಿದ್ದಾಳೆ!”

ಏನು ಹೇಳಿದ್ದಾಳೆ?” ಎಂದೆ.

ನೀವು ಅವಳಲ್ಲಿ ನಿಮಗೊಂದು ಮಗು ಬೇಕು ಅಂದಿದ್ದಿರಿ!”

ತಟ್ಟನೆ ಅವಳ ಮುಖವನ್ನೇ ದಿಟ್ಟಿಸಿ ನೋಡಿ,

ಹೌದು... ಆದರೆ ನಾನವಳ ಸಂಪೂರ್ಣ ಹೊಣೆ ಹೊರಲು ಸಿದ್ಧನಾಗಿದ್ದೆ!”

ಗೊತ್ತು! ಆದರೆ ನೀವು ಕೇಳುವ ಮುಂಚೆಯೇ ಅವಳು ಗರ್ಭಿಣಿಯಾಗಿದ್ದಳು!”

ವ್ಹಾಟ್?” ಎಂದೆ.

ಅವಳು ವಿವರಣೆಯನ್ನು ಕೊಟ್ಟಳು...,

ಗೀತಾ ನನ್ನ ಬೆಸ್ಟ್ ಫ್ರೆಂಡ್..., ನನ್ನ ಬಗ್ಗೆ ನಿಮಗೆ ಹೇಳಿದ್ದಾಳೋ ಇಲ್ಲವೋ..., ನಿಮ್ಮ ಬಗ್ಗೆ ಪೂರ್ತಿಯಾಗಿ ನನಗೆ ಹೇಳಿದ್ದಾಳೆ!”

ಅವಳನ್ನು ಮಧ್ಯೆ ತಡೆದು...,

ನಿಮ್ಮ ಹೆಸರು ವೈದೇಹಿಯೇ?” ಎಂದೆ.

ಹೌದೆನ್ನುವಂತೆ ತಲೆಯಾಡಿಸಿದಳು.

ನಿಮ್ಮ ಹೆಸರು ಮಾತ್ರ ಹೇಳಿದ್ದಳು” ಎಂದೆ.

ಬರೀ ಹೆಸರೇ?”

ಹೌದು..., ಬರೀ ಹೆಸರು..., ನನ್ನಬಗ್ಗೆ ಪೂರ್ತಿಯಾಗಿ ಗೊತ್ತಿರುವುದು ವೈದೇಹಿಗೆ ಮಾತ್ರ..., ನಿನ್ನಬಗ್ಗೆಯೂ ಹೇಳಿದ್ದೇನೆ..., ಅವಳಿಗೆ ನೀನಂದ್ರೆ ಇಷ್ಟ! ಎಂದಷ್ಟೇ ಹೇಳಿದ್ದಳು!” ಎಂದೆ.

ಅವಳ ಮುಖ ಕೆಂಪಾಯಿತು...!

ಬಾಕಿ ಹೇಳಿ....” ಎಂದೆ.

ನಿಮ್ಮ ಲೈಫ್ ಸ್ಟೈಲ್ ಅವಳಿಗೆ ತುಂಬಾ ಇಷ್ಟವಿತ್ತು. ಆಫ್ಕೋರ್ಸ್..., ನನಗೂ! ನಾವಿಬ್ಬರೂ ನಿಮ್ಮ ಬಗ್ಗೆ ತುಂಬಾ ಮಾತನಾಡಿಕೊಳ್ಳುತ್ತಿದ್ದೆವು. ಅವಳಿಗೆ ಬೇರೆಯವರೊಂದಿಗೆ ಮದುವೆಯಾಗಿದ್ದರೂ ನೀವು ಅವಳೊಂದಿಗೆ ಫಿಸಿಕಲ್ ಆಗಿ ಸೇರುತ್ತಿದ್ದದ್ದು- ಅವಳನ್ನು ಪ್ರೇಮಿಸುತ್ತಿದ್ದದ್ದು ನನಗೆ ಗೊತ್ತು! ನೀವು ಅವಳಿಂದ ನಿಮಗೆ ಮಗಳು ಬೇಕು ಅಂದ ದಿನ ತುಂಬಾ ದುಃಖಗೊಂಡಳು. ಕಾರಣ- ಅವಳು ಗರ್ಬಿಣಿ ಅನ್ನುವುದು ಮಾತ್ರವಲ್ಲ...., ಅದು ಯಾರಿಂದ ಅನ್ನುವುದು ಅವಳಿಗೂ ಗೊತ್ತಿರಲಿಲ್ಲ!!” ಎಂದು ನಿಲ್ಲಿಸಿ ನನ್ನ ಮುಖವನ್ನು ನೋಡಿ...,

ನಿಮ್ಮ ಕೈಯ್ಯಲ್ಲಿರುವ ಮಗು ಅದೇ...!” ಎಂದಳು.

ಗೊಂದಲದಿಂದ ಅವಳ ಮುಖವನ್ನು ನೋಡಿದೆ.

ನಿಮಗೆ ನಿಮ್ಮ ಮಗುವೇ ಬೇಕೆ ಅಥವಾ ಅವಳಲ್ಲಿ ಹುಟ್ಟಿದ ಮಗು ಸಾಕೆ ಎಂದು ತಿಳಿದುಕೊಳ್ಳಲು ಹೇಳಿದ್ದೆ...!”

ಹೌದು..., ನನ್ನದೇ ಆಗಬೇಕಿಲ್ಲ... ಹೆಣ್ಣುಪಾಪುವಾಗಿದ್ದರೆ ಸಾಕು ಎಂದಿದ್ದೆ!” ಎಂದೆ.

ಹೇಳಿದ್ದಳು..., ಅದಕ್ಕೇ ಈ ಮಗು ನಿಮ್ಮ ಕೈಯ್ಯಲ್ಲಿದೆ!” ಎಂದಳು.

ಗೊಂದಲದಿಂದ ಅವಳನ್ನು ನೋಡಿ...,

ಸ್ಪಷ್ಟಪಡಿಸಿ..., ತಲೆ ಸಿಡಿಸಬೇಡಿ!” ಎಂದೆ.

ನೀವು ನನ್ನ ಕನಸು ಕಂಡಿದ್ದಾಗಿ ಏಕೆ ಸುಳ್ಳು ಹೇಳಿದಿರಿ!” ಎಂದಳು.

ಸುಳ್ಳಲ್ಲ..., ಅದನ್ನು ಆಮೇಲೆ ಹೇಳುತ್ತೇನೆ..., ನೀವು ನನ್ನ ಕೊಲ್ಲುವ ಅವಕಾಶವಿದೆ..., ಆದರೂ ಹೇಳಲೇ ಬೇಕು...! ಅದು ನೀವೇ ಅಂತ ಕಂಫರ್ಮ್ ಆಗಿ ಗೊತ್ತಿರುವುದರಿಂದ ಹೇಳದೇ ವಿಧಿಯಿಲ್ಲ!! ನನ್ನ ಪ್ರಕಾರ..., ಗೀತಾ ನಿಮಗೆ- ವೈದೇಹಿಗೆ- ನನ್ನ ಇಷ್ಟ ಅಂತ ಹೇಳಿದ್ದರಿಂದ ವೈದೇಹಿಗೆ ಮನದಲ್ಲೊಂದು ರೂಪ ಕೊಡಲು ಹೋಗಿ..., ಬಿಡಿ..., ಈ ಪಾಪು ನೀವು ಹೇಳಿದ ಪಾಪುವೇ ಎಂದು ಹೇಗೆ ನಂಬುವುದು? ಇದು ನನಗೆ ಹೇಗೆ ಸಿಕ್ಕಿತೆಂದೇ ನಿಮಗೆ ತಿಳಿಯದು....”

ಹಹ್ಹಾ..., ಪಾಪು ನಿಮ್ಮ ಕೈ ಸೇರುವಂತೆ ಮಾಡಿದ್ದೇ ನಾನು! ಅಂದು ಬೆಳಗ್ಗೆ, ಗೀತಾ ಮರಣಿಸಿದ ಮಾರನೆಯ ದಿನ, ನೀವು ಆ ಕೆರೆಗೆ ಬರುವವರೆಗೆ ಈ ಮಗು ನನ್ನ ಕೈಯ್ಯಲ್ಲೇ ಇತ್ತು! ನೀವು ಬಂದಮೇಲೆ..., ಖಂಡಿತಾ ನೀವದರ ಕೇರ್ ತೆಗೆದುಕೊಳ್ಳುತ್ತೀರೆಂದು ತಿಳಿದಿತ್ತಾದ್ದರಿಂದ ಹೊರಟು ಹೋದೆ. ಆದರೆ ನೀವು ಊರು ಬಿಟ್ಟು ಹೋಗುತ್ತೀರೆಂದು ಊಹಿಸದಾದೆ! ಕಾಯುತ್ತಲೇ ಇದ್ದೆ...!” ಎಂದಳು.

ನಾನವಳನ್ನು ದಯನೀಯವಾಗಿ ನೋಡಿದೆ! ಏನೆಂದರೆ ಏನೂ ಅರ್ಥವಾಗದೆ ಗೊಂದಲದಲ್ಲಿ ಮುಳುಗಿದೆ. ಅವಳೇ ಮುಂದುವರೆಸಿದಳು,

ರಾಜೇಂದ್ರನನ್ನು ನಿಮಗೂ ಗೊತ್ತು..., ಗೀತಾಳ ಗಂಡ! ಅವರು ಸದ್ಯಕ್ಕೆ ಪಾಪು ಬೇಡ ಅನ್ನುವ ಚಿಂತೆಯಲ್ಲಿದ್ದರು! ಆದರೆ ಯಾವುದೇ ಸೇಫ್ಟಿ ಉಪಯೋಗಿಸುತ್ತಿರಲಿಲ್ಲ! ರಾಜೇಂದ್ರನಿಗೆ ಅಷ್ಟು ಕಾನ್ಫಿಡೆಂಟ್! ಗೀತಾಳಿಗೋ ನಿಮ್ಮಿಂದಲೇ ಮಗುಬೇಕು ಅನ್ನುವ ಆಸೆ! ಸೋ ನಿಮ್ಮೊಂದಿಗೆ ಯಾವ ಮುನ್ನೆಚ್ಚರಿಕೆಯೂ ತೆಗೆದುಕೊಂಡಿರಲಿಲ್ಲ!”

ಆದರೆ ನಾನು ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೆ..., ಅವಳ ಅನುಮತಿಯಿಲ್ಲದೆ ನಾನು....” ಎಂದು ಅವಳ ಮುಖವನ್ನು ನೋಡಿದೆ.

ಗೊತ್ತು..., ಆದರೆ ಒಂದು ದಿನ..., ಪಿರಿಯಡ್ ಆಗಿ ನಾಲ್ಕೇ ದಿನ ಆಗಿರುವುದು ಎಂದು ಅವಳು ಹೇಳಿದ್ದರಿಂದ...” ಎಂದು ಹೇಳಿ ನನ್ನ ಮುಖ ನೋಡಿ

ಆದರೆ ಆಗ ಡೇಟ್ ಆಗಿ ಹದಿಮೂರು ದಿನ ದಾಟಿತ್ತು!” ಎಂದಳು.

ಹಾಗಿದ್ದರೆ ಸಂಶಯವೇಕೆ?” ಎಂದೆ.

ರಾಜೇಂದ್ರನ ಕಾನ್ಫಿಡೆಂಟ್ ಅವನನ್ನು ಸಾಭೀತುಪಡಿಸಲಿಲ್ಲ!” ಎಂದು ಹೇಳಿ ನನ್ನ ಮುಖವನ್ನು ನೊಡಿ...,

ರಾಜೇಂದ್ರನಿಗೆ ಸದ್ಯಕ್ಕೆ ಪಾಪು ಬೇಕಿರಲಿಲ್ಲ! ಗೀತಾ ಪ್ರೆಗ್ನೆಂಟ್ ಆದಾಗ ಹಲವುಬಾರಿ ಅಬಾರ್ಷನ್ ಬಗ್ಗೆ ಹೇಳಿದ. ಆದರೆ ಗೀತಾ ಒಪ್ಪಲಿಲ್ಲ. ಅವಳಿಗೆ ಮಗುವನ್ನು ಹೇಗಾದರೂ ನಿಮ್ಮ ಕೈಗೆ ತಲುಪಿಸಬೇಕಿತ್ತು. ವಿಧಿಯಾಟ! ರಾಜೇಂದ್ರ ಆಕ್ಸಿಡೆಂಟಿನಲ್ಲಿ ತೀರಿಕೊಂಡ....”

ನನ್ನ ಬಳಿ ಬರಬಹುದಿತ್ತು!”

ಎರಡು ಕಾರಣಕ್ಕೆ ಅವಳು ನಿಮ್ಮ ಬಳಿಗೆ ಬರಲಿಲ್ಲ! ಒಂದು..., ರಾಜೇಂದ್ರ ಸಾಯುವ ಮುಂಚೆ ನಾನು ನಿಮ್ಮನ್ನು ಮದುವೆಯಾಗಲು ಅವಳಲ್ಲಿ ಅನುಮತಿ ಕೇಳಿದ್ದೆ...! ಎರಡು..., ಈ ಪಾಪು ಯಾರದು ಅನ್ನುವ ಸಂಶಯ- ನೀವು ಹೇಳಿರಬಹುದು ನಿಮ್ಮದೇ ಆಗಿರಬೇಕೆಂದಿಲ್ಲ ಎಂದು! ಆದರೂ...”

ಆದರೆ..., ನನ್ನ ಕೈಗೆ ಇವಳನ್ನು ಒಪ್ಪಿಸಿದ ಬಗೆ ಹೇಗೆ?”

ನಿಮ್ಮ ದಿನಚರಿ ನಮಗೆ ಗೊತ್ತಿತ್ತು... ಸುಮಾರು ಸಾರಿ ಅಷ್ಟು ಹೊತ್ತಿನಲ್ಲಿ ಅಲ್ಲಿಗೆ ಇಬ್ಬರೂ ಬಂದಿದ್ದೆವು... ಆದರೆ ಮಗುವನ್ನು ಬಿಟ್ಟಿರಲಾರದೇ ಹೋದೆವು...!” ಎಂದು ಹೇಳಿ ನನ್ನ ಮುಖವನ್ನು ನೋಡಿ,

ಆಮೇಲೆ ಗೀತ ಒಂದು ದಿನ..., ನೀನು ಹೇಗಾದರೂ ಮಗುವನ್ನು ಅವರಿಗೆ ಒಪ್ಪಿಸು..., ಇದು ನನ್ನ ಕೊನೆಯ ಆಸೆ..., ಎಂದು ಹೇಳಿ ಆತ್ಮ ಹತ್ಯೆ ಮಾಡಿಕೊಂಡಳು...!”

ಎದೆಯಲ್ಲಿ ಒರಗಿದ್ದ ಪಾಪು ಮಿಸುಕಾಡಿತು... ಮತ್ತೊಮ್ಮೆ ಬೆನ್ನುತಟ್ಟಿ ಮಲಗಿಸಿದೆ....

ನೀವು ನನ್ನನ್ನು ನೋಡಿದ್ದರಬಗ್ಗೆ ಹೇಳಿ....!” ಎಂದಳು.

ನೀವು ನಂಬಲಾರಿರಿ...!” ಎಂದೆ.

ನಂಬುತ್ತೇನೆ. ಎಷ್ಟೇ ಹುಡುಗಿಯನ್ನು ಸೆಳೆಯುವವರೆಂದುಕೊಂಡರೂ..., ನೀವು ಮೊದಲಬಾರಿ ನನ್ನನ್ನು ನೋಡಿದಾಗಿನ ನಿಮ್ಮ ಕಣ್ಣಿನ ಭಾವನೆ ಅಸಾಧ್ಯ! ನನ್ನ ಪರಿಚಯದ ಗುರುತು ಅದರಲ್ಲಿ ಸ್ಪಷ್ಟವಾಗಿತ್ತು. ಗೀತಾ ನನ್ನ ಬಗ್ಗೆ ನಿಮ್ಮಲ್ಲಿ ಹೇಳಿದ್ದಳೇನೋ ಅಂದುಕೊಂಡೆ!”

ಇಲ್ಲಾ..., ನಾನು ನಿಮ್ಮನ್ನು ಮೊದಲಬಾರಿ ಕನಸಿನಲ್ಲಿ ಕಂಡದ್ದು ಈ ಪಾಪು ನನಗೆ ಸಿಕ್ಕಿದ ದಿನ! ನಂತರ ಒಂದು ದಿನವೂ ಆ ಕನಸು ನನ್ನನ್ನು ಬಿಡಲಿಲ್ಲ! ಆದರೂ ಮೊನ್ನೆ ನಿಮ್ಮನ್ನು ಕಂಡಾಗ- ನೋಡಿದ್ದೇನೆ ಅನ್ನುವುದು ಅರಿವಾಯಿತೇ ಹೊರತು ಆ ಕನಸಿನ ಒಡತಿ ಎಂದು ಅರಿಯದಾದೆ! ನನ್ನ ಪ್ರಕಾರ ಆ ಕನಸೊಂದು ಅದ್ಭುತ.... ಆದರೆ ಕನಸಿನಲ್ಲಿನ ಪ್ರಕೃತಿ ನೀವಾದ್ದರಿಂದ ನಿಮಗೆ ಹಿಡಿಸುತ್ತದೆಯೋ ಏನೋ...?”

ಹೇಳಿ..., ನಿಮ್ಮಬಗ್ಗೆ ನನಗೆ ಚೆನ್ನಾಗಿ ಗೊತ್ತು..., ಹೆಣ್ಣು ಮಕ್ಕಳ ಮೇಲಿನ ನಿಮ್ಮ ಗೌರವ..., ಪ್ರೇಮಕ್ಕಾಗಿನ ಅಲೆದಾಟ..., ಅದು ಹುಡುಕಿದರೆ ಸಿಗುವುದಿಲ್ಲವೆಂದೂ, ಅದಾಗಿ ಅದೇ ಕ್ರಿಯೇಟ್ ಆಗಬೇಕೆಂದೂ ನೀವೇ ಹೇಳಿ..., ಪುನಃ ನೀವೇ ಅದನ್ನು ಹುಡುಕುತ್ತಿದ್ದದ್ದು ನಮಗೆ ಆಶ್ಚರ್ಯ ಹುಟ್ಟಿಸಿತ್ತು....!”

ಮುಗುಳುನಕ್ಕೆ... ನಂತರ,

ಪ್ರೇಮದ ಹೊರತಾಗಿಯೂ ಹೆಣ್ಣು ಒಂದು ಅದ್ಭುತ!” ಎಂದು ಹೇಳಿ ಅವಳ ಮುಖವನ್ನು ನೋಡಿ,

ಹೆಣ್ಣಿಲ್ಲದೆ ನಾನಿಲ್ಲ..., ನಾನು ಬೆರೆತ ಹುಡುಗಿಯರಲ್ಲಿ ಗೀತಾ ನನ್ನ ಬೆಸ್ಟ್...! ಯಾರಿಂದಲಾದರೂ ಸರಿ..., ಅವಳಿಗೆ ಹುಟ್ಟಿದ ಹೆಣ್ಣುಮಗು ಅದ್ಭುತವಾಗಿರುತ್ತದೆನ್ನುವ ಭಾವನೆಯಿಂದ ಅವಳಲ್ಲಿ ಮಗುವನ್ನು ಬೇಡಿದೆ. ಆದರೆ ಅವಳು ವೈದೇಹೀ ಅಂದಾಗ..., ಆ ಹೆಸರಿನಮೇಲೆ ವ್ಯಾಮೋಹ ಹುಟ್ಟಿತು! ಹೆಣ್ಣಿನಲ್ಲಿ ವೈದೇಹಿಯನ್ನು ಹುಡುಕಲಾರಂಭಿಸಿದೆ.... ಗೀತಾಳಲ್ಲಿ ಕೇಳೋಣ ಅಂದುಕೊಂಡೆನಾದರೂ ಅವಳು ಸಂಪೂರ್ಣವಾಗಿ ರಾಜೇಂದ್ರನಲ್ಲಿ ಮುಳುಗಿ ಕೊನೆಕೊನೆಗೆ ನನಗೆ ಸಿಗಲೇ ಇಲ್ಲ....! ಗೀತಾ ಮರಣಿಸಿದಳೆಂದು ನನಗೆ ತಿಳಿಯದು- ತಿಳಿಯದೆಯೇ..., ಅವಳು ಮರಣಿಸಿದ ದಿನ..., ಅಂದರೆ ಈ ಪಾಪು ನನಗೆ ಸಿಕ್ಕಿದ ದಿನದ ಹಿಂದಿನ ದಿನ..., ನಾನೊಂದು ಹೆಣ್ಣಿನ ಸಹವಾಸ ಮಾಡಿ ಬಂದು ಮಲಗಿದೆ...! ಒಂದು ಕನಸು ಬಿತ್ತು!” ಎಂದು ಹೇಳಿ ಅವಳ ಮುಖ ನೋಡಿದೆ.

ಕಾತರದಿಂದ ನೋಡುತ್ತಿದ್ದಳು....!

ಗಾಢಾಂಧಕಾರ! ಅದರ ಮಧ್ಯೆ ತೂತಿನಿಂದ ಬೀಳುವ ಸೂರ್ಯ ಕಿರಣದಂತೆ- ಚುಕ್ಕಿಯಂತೆ- ಬೆಳಕು! ಆ ಬೆಳಕು ವಿಶಾಲವಾಗುತ್ತಾ ಹೋದರೆ..., ಅಂಗಾತನೆ ಮಲಗಿದ್ದಾಳೆ ಹೆಣ್ಣು- ನಿಮ್ಮ ಮುಖದ ಹೆಣ್ಣು! ನಗ್ನವಾಗಿದ್ದಾಳೆ. ಬಲಗಾಲನ್ನು ಮಡಚಿ ಬಲ ಪಕ್ಕಕ್ಕೆ ವಾಲಿಸಿದ್ದಾಳೆ. ಅವಳ ರಹಸ್ಯವನ್ನು ನನ್ನ ಎದೆಯಿಂದ ಮುಚ್ಚಿ ಅವಳ ಹೊಕ್ಕಳಿಗೆ ನನ್ನ ಬಲಗಿವಿಯನ್ನು ತಾಗಿಸಿ ಹೊಟ್ಟೆಗೆ ಕೆನ್ನೆಯೊತ್ತಿ ಮಲಗಿದ್ದೇನೆ.... ನನ್ನ ಕೈ ಅವಳ ನಡುವನ್ನು ಬಳಸಿದೆ. ಅವಳ ಸ್ತನಗಳು ಸ್ವಲ್ಪವೇ ಸ್ವಲ್ಪ ಎರಡೂ ಕಡೆಗೆ ಜೋತಿದೆ- ಆದರೆ ಅದ್ಭುತವಾಗಿದೆ. ತನ್ನೆರಡೂ ಕೈಗಳಿಂದ ನನ್ನ ತಲೆಯನ್ನು ಮತ್ತಷ್ಟು ಒತ್ತಿ ಹಿಡಿದು ತನ್ಮಯತೆಯಿಂದ ಕಣ್ಣು ಮುಚ್ಚಿದ್ದಾಳೆ!! ಆ ಕನಸಿನ ನಂತರ ನಾನು ಬೇರೆ ಯಾವ ಹೆಣ್ಣನ್ನೂ ಸೇರಿಲ್ಲ!!” ಎಂದೆ.

ರಕ್ತ ಮುಖಕ್ಕೆ ನುಗ್ಗಿಬಂದ ರಭಸಕ್ಕೆ ಸ್ವಲ್ಪ ಮುಂದಕ್ಕೆ ಮುಗ್ಗರಿಸಿದಳು ವೈದೇಹಿ!

ನನ್ನ ಮುಖವನ್ನು ನೋಡಲಾರದೆ ತಲೆ ತಗ್ಗಿಸಿ...,

ಒಂದು ವರ್ಷದಿಂದ..., ಅಂಗಾತನೆ ಮಲಗಿದರೆ..., ಹೊಟ್ಟೆಯಲ್ಲೇನೋ ಭಾರವಾದ ಅನುಭವ ನನಗೂ ಆಗುತ್ತಿತ್ತು! ತನ್ಮಯಳಾಗಿ ಅನುಭವಿಸಿದ್ದೇನೆ!” ಎಂದಳು.

ಎದೆಯಿಂದ ತಲೆಯೆತ್ತಿದ ಪಾಪು ಅಪರಿಚಿತಳನ್ನು ನೋಡಿದರೂ ಪರಿಚಿತಳಂತೆ ನಕ್ಕಳು!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!