ತಾವರೆ- ಕಥೆ
ತಾವರೆ
ತಾವರೆಯನ್ನು ಕಂಡು ನಿಂತೆ! ಎದೆ ಧಗ್ ಅಂದಿತು!
ತಾವರೆಯನ್ನು ಕಂಡರೆ ಎದೆ ಧಗ್ ಅನ್ನುತ್ತದೆಯೇ...?
ಹಾ... ತಾವರೆ ಹೆಣ್ಣಿನಂತೆ ಕಂಡರೆ ಎದೆ ಧಗ್ ಅನ್ನುತ್ತದೆ.
ವಾಸ್ತವದ ಅರಿವಾದಾಗ ಮುಗುಳುನಗು!! ಹೆಣ್ಣೇ ತಾವರೆಯಂತೆ ಕಂಡಳೆಂಬ ಅರಿವು!
ಪಾರ್ವತಿ ಶಿವನನ್ನು ಪಡೆಯಲು ಗಂಟಲವರೆಗಿನ ನೀರಿನಲ್ಲಿ ತಪಸ್ಸು ಮಾಡಿದಳಂತೆ... ಆಗ ಅವಳ ತಲೆ ತಾವರೆಯಂತೆಯೇ ಕಂಡಿತಂತೆ!
ಯಾರು ಹೇಳಿದರು ಈ ಕಟ್ಟು ಕಥೆ?
ನಾನೇ!
ಈಗ ಈ ಹೆಣ್ಣನ್ನು ಹೊಗಳಬೇಕಲ್ಲಾ!
ಆಗತಾನೆ ಮುಳುಗುತ್ತಿರುವ ಸೂರ್ಯನ ಕಿರಣ ಅವಳ ಮುಖದಮೇಲೆ ಬಿದ್ದು- ಈಗ- ಸೂರ್ಯನೇ ಅವಳೇನೋ ಅನ್ನಿಸುವಂತಿತ್ತು! ಕರ್ಮ ನನ್ನದು... ಇನ್ನೂ ಏನೇನು ಅನ್ನಿಸುತ್ತಿದ್ದಳೋ.... ನಿಧಾನವಾಗಿ ನೀರಿನೊಳಗಿನಿಂದ ನಡೆದು ಬಂದಳು....
ಎಲ್ಲಿಯೋ ನೋಡಿದ್ದೇನೆ ಅನ್ನಿಸಿತು- ಸ್ಪಷ್ಟವಾಗಿ!
ನನ್ನಕಡೆ ನೋಡಿದಳೇ....? ನೋಡಬೇಕೆ...!!??
ನನಗೇಕೆ ಇಷ್ಟೊಂದು ಕಾತರ?
ಹೊಗಳಬೇಕೆಂದುಕೊಂಡದ್ದು ಏಕೆ?
ನನ್ನ ಹೊಗಳಿಕೆಗೆ ಎಟುಕದವಳು- ಅವಳೆಂದರೇನರ್ಥ?
ನಾನವಳನ್ನು ಪ್ರೇಮಿಸುತ್ತಿದ್ದೇನೆಂದು!
ಹಾಗಿದ್ದರೆ ಮೊನ್ನೆಯೂ ಮೊದಲಬಾರಿ ಹಾಗನ್ನಿಸಿ ಪ್ರಪೋಸ್ ಮಾಡಿ ತಿರಸ್ಕೃತಗೊಂಡೆನಲ್ಲಾ ಆ ಹುಡುಗಿ?
*
ಮರದ ನೆರಳಿನಲ್ಲಿ ಕುಳಿತಿದ್ದಾಳೆ!
ಅವಳನ್ನೇ ನೋಡುತ್ತಾ ಎರಡು ಮೂರುಬಾರಿ ಆಚೆ ಈಚೆ ಸುತ್ತಿದೆ!
ಪರಿಚಯದ ನಗು ನಕ್ಕಾಗ ಆಶ್ಚರ್ಯಗೊಂಡೆ! ಗಮನಿಸಿದ್ದಾಳೆ!
ಆಹಾ ಕಳ್ಳೀ... ಅನ್ನುವಂತೆ ನೋಡಿದೆ.
“ನಿಮ್ಮನ್ನು ನನಗೆ ಗೊತ್ತು!” ಎಂದಳು.
ಗಾಬರಿಯಾದೆ! ಮುಂಚೆ- ನಾನು ಹಿಂದೆ ಸುತ್ತಿದ ಹುಡುಗಿಯರ ಅಕ್ಕತಂಗಿ ಯಾರಾದರೂ ಆಗಿರುತ್ತಾಳೆಯೇ?
ಸಂಶಯದಿಂದ ನೋಡಿ,
“ಹೇಗೆ? ನನಗೆ ನೀವು ಗೊತ್ತಿರಬೇಕೇ ಹೊರತು ನಿಮಗೆ ನಾನು ಹೇಗೆ?” ಎಂದೆ.
ನಕ್ಕಳು.
“ಅಂದರೆ? ಪ್ರತಿ ಹುಡುಗಿಯೂ ನಿಮಗೆ ಗೊತ್ತೆ?” ಎಂದಳು.
“ಇಲ್ಲ.... ನಿಮ್ಮನ್ನು ಗೊತ್ತಿಲ್ಲ!” ಎಂದೆ.
“ಸರಿ... ನನ್ನ ಹೊರತು ಪ್ರತಿ ಹುಡುಗಿಯೂ ನಿಮಗೆ ಗೊತ್ತೇ?” ಎಂದಳು.
“ಇಲ್ಲ... ಹಾಗಲ್ಲ... ನನ್ನನ್ನು ಗೊತ್ತಿರುವ ಎಲ್ಲಾ ಹುಡುಗಿಯರನ್ನೂ ನನಗೆ ಗೊತ್ತು... ಕೆಲವು ಹುಡುಗಿಯರನ್ನು ಅವರ ಅರಿವಿಲ್ಲದೆಯೂ ಗೊತ್ತು!” ಎಂದೆ.
“ಹಾಗಿದ್ದರೆ ನಿಮ್ಮನ್ನು ಗೊತ್ತಿರುವ ಎಲ್ಲಾ ಹುಡುಗಿಯರನ್ನೂ ನಿಮಗೆ ಗೊತ್ತು ಅನ್ನುವುದು ನಿಮ್ಮ ಭ್ರಮೆ!” ಎಂದು ಹೇಳಿ ನನ್ನ ಮುಖವನ್ನು ನೋಡಿ ಕೀಟಲೆಯ ನಗು ನಕ್ಕಳು.
“ಹೇಗೆ? ನನ್ನನ್ನು ನಿಮಗೆ ಹೇಗೆ ಗೊತ್ತು?” ಎಂದೆ.
*
ಕಲಿಕಾಲ! ಈ ಕಲಿಕಾಲದ ನಂಬಿಕೆಗಳೇ ಬೇರೆ! ನಮಗೆ ಏನಾದರೂ ತಿಳಿಯದಿದ್ದರೆ ಅದು ಇಲ್ಲ! ನಮ್ಮ ಅಳತೆಗೆ ಮೀರಿದ್ದಾದರೆ- ಸುಳ್ಳು! ಮನುಷ್ಯ ತನ್ನ ಮಿತಿಯನ್ನು ತಿಳಿದುಕೊಳ್ಳಲಾರ! ತನಗೆ ತಿಳಿದಿರುವುದಕ್ಕಿಂತಲೂ ಈ ಪ್ರಪಂಚದಲ್ಲಿ ತಿಳಿಯದೇ ಇರುವುದೇ ಸಾವಿರಕೋಟಿ ಪಟ್ಟು ಅಧಿಕ ಎಂದವನಿಗೆ ತಿಳಿಯದು- ಅಂದರೆ- ಅವನಿಗೇನೂ ಗೊತ್ತಿಲ್ಲ ಅನ್ನುವ ಅರಿವು ಅವನಿಗಿಲ್ಲ!!
ಒಬ್ಬರಲ್ಲಿ ಹುಟ್ಟುವ ಪ್ರೇಮಕ್ಕೂ ಕೂಡ ಕಾರಣವಿರಬಹುದೇ ಎನ್ನುವುದೂ ಕೂಡ....
ಇತಿಹಾಸದ ಪುಟಗಳಲ್ಲಿ ಸಿಗದ... ಎಷ್ಟೋ ಇತಿಹಾಸವಿದೆ! ಊಹೆಗೂ ನಿಲುಕದ ವಿಷಯಗಳು...
ಕಾಲದ ಹಿಂದಕ್ಕೂ ಮುಂದಕ್ಕೂ ಏನೂ ತಿಳಿಯದ ಮನುಷ್ಯ..... ಅದೆರಡರಲ್ಲೇ ಬದುಕುತ್ತಿರುವುದು ಎಂಥಾ ವಿಪರ್ಯಾಸ!
ಉತ್ತರ ಭಾರತದಿಂದ ಬಂದ ಅಗಸ್ತ್ಯ ಅನ್ನುವ ಮಹರ್ಷಿಯಂತೆ ದಕ್ಷಿಣ ಭಾರತದ ಮೂಲ ಪುರುಷ!
ಎಂಥಾ ಕಲ್ಪನೆ! ಎಂಥಾ ಊಹೆ.... ಅದಕ್ಕೂ ಮುಂಚೆ ಇಲ್ಲಿ ಜನವೇ ಇರಲಿಲ್ಲವೇ??
ಇದ್ದರು.... ಅಗಸ್ತ್ಯ ಮಹರ್ಷಿ ಉತ್ತರ ದಕ್ಷಿಣಗಳನ್ನು ಬೆರೆಸಿದ ಕೊಂಡಿ ಇರಬಹುದಷ್ಟೇ...! ಅಂದರೆ ಸಂಪೂರ್ಣ ಆರ್ಯಾವರ್ತವನ್ನು ಒಂದುಗೂಡಿಸಿದ ಮೂಲ ಪುರುಷ!
ಈ ಒಂದುಗೂಡುವಿಕೆ ಪ್ರಾರಂಭವಾಗಿ ಸುಮಾರು ಒಂದು ಸಾವಿರ ವರ್ಷಗಳ ನಂತರ... ದಕ್ಷಿಣ ಭಾರತದ ಯಾವುದೋ ಒಂದು ಊರು... ಊರೆ? ಕೆಲವು ಮನೆಗಳು- ಮನುಷ್ಯರು ಇರುವುದರಿಂದ ಊರು!!
ಸುತ್ತಲೂ ಹಸಿರು... ಪ್ರಕೃತಿಯೇ ಬೆಳೆಸಿದ ಸಹಜ ಗಿಡ ಮರಗಳ ಗೂಡು- ಆ ಊರು!
ನಾಲಕ್ಕು ಜನ ವಿಧ್ಯಾರ್ಥಿಗಳಿಗೆ ಪಾಠವನ್ನು ಬೋಧಿಸುತ್ತಿದ್ದಾರೆ ಗುರು- ಕಣಾದ!
ಜ್ಞಾನದ ಲಕ್ಷಣವಾದ ಶಾಂತತೆ- ತೇಜಸ್ಸು... ವಿದ್ಯಾರ್ಥಿಗಳಿಗೆ ಪಾಠವನ್ನು ಮಾಡುವಾಗ ಮುಗುಳುನಗು- ಪ್ರೇಮ!
ಚಂಚಲಗೊಂಡ ವಿದ್ಯಾರ್ಥಿಯೊಬ್ಬನ ಕಣ್ಣುಗಳು ಅರಳಿದ್ದನ್ನು ಗಮನಿಸಿದರು ಗುರುಗಳು. ಅವನ ನೋಟದ ಮೂಲದತ್ತ ತಿರುಗಿದರು....
ಹದಿನೈದು ವರ್ಷದ ಕೃಷ್ಣೆ- ಹೆಸರಿನಂತೆಯೇ ಅವಳ ಬಣ್ಣ- ತನ್ಮಯಳಾಗಿ ಎದೆಗೆ ಒತ್ತಿ ಹಿಡಿದಿರುವ ಮೊಲದ ತಲೆಯನ್ನು ನೇವರಿಸುತ್ತಿದ್ದಳು!
ಪುನಹ ಶಿಷ್ಯನಕಡೆ ನೋಡಿದ ಗುರುಗಳು,
“ಭಾರ್ಗವಾ....!” ಎಂದರು.
ಗಲಿಬಿಲಿಯಿಂದ ಎದ್ದು ನಿಂತು,
“ಏನು ಗುರುಗಳೇ...?” ಎಂದ.
“ಏನು ಕಂಡು ಆಕರ್ಷಿತನಾದೆ?”
“ಕೃಷ್ಣೆಯನ್ನು ಕಂಡು ಗುರುಗಳೇ....!” ಎಂದ ಧೈರ್ಯವಾಗಿ.
“ಅವಳಲ್ಲಿ ಏನನ್ನು ಕಂಡು?” ಎಂದರು ಗುರುಗಳು.
“ಗೊತ್ತಿಲ್ಲ ಗುರುಗಳೇ.... ಸುಮಾರು ದಿನದಿಂದ ನೋಡುತ್ತಿದ್ದೇನೆ.... ಅವಳು ನನಗೊಂದು ಅದ್ಭುತ!” ಎಂದ.
ಮುಗುಳುನಕ್ಕ ಗುರುಗಳು,
“ಸರಿ... ಕುಳಿತುಕೋ...!” ಎಂದರು.
*
ಕಾಯುತ್ತಿದ್ದ ಕುದುರೆಯ ಕೆನೆತದ ಸದ್ದು- ಹಿಂದಿನಿಂದ ಕೇಳಿ ತಿರುಗಿ ನೋಡಿದ ಭಾರ್ಗವ!
ಎದುರಿನಿಂದ ಬರುತ್ತಾಳೆ ಅಂದುಕೊಂಡರೆ.... ತುಂಟತನದ ನಗು ನಕ್ಕು ಕುದುರೆಯಿಂದ ಕೆಳಕ್ಕೆ ನೆಗೆದಳು ಕೃಷ್ಣೆ!
“ನಿನ್ನ ಏಕಾಗ್ರತೆಯ ಪರೀಕ್ಷೆ ಮಾಡಿದೆ! ನೀನು ಸೋತೆ!” ಎಂದಳು.
ಮುಗುಳುನಕ್ಕ! ಅವನ ಕಣ್ಣುಗಳು ಹೊಳೆದವು....,
“ನನ್ನ ಏಕಾಗ್ರತೆ ಪೂರ್ತಿಯಾಗಿ ನನ್ನ ಎದುರುಗಡೆಯ ದಾರಿಯಲ್ಲಿಯೇ ಇತ್ತು! ನೀನು ಬೇರೆ ದಿಕ್ಕಿನಿಂದ ಬರುತ್ತೀಯೆನ್ನುವ ಕಲ್ಪನೆಯೂ ನನಗಿರಲಿಲ್ಲ!” ಎಂದ.
“ಹಾಗಿದ್ದರೆ ಕುದುರೆಯ ಕೆನೆತವೂ ಕೇಳಬಾರದು ಅಲ್ಲವೇ?” ಎಂದಳು.
“ಪ್ರಾಣಕ್ಕೆ ಏನಾದರೂ ಆಪತ್ತಾದರೇ... ಎನ್ನುವ ಚಿಂತೆ ಒಳಮನಸ್ಸಿನಲ್ಲಿ ಇದ್ದೇ ಇರುತ್ತದೆ ಅಲ್ಲವೇ?” ಎಂದ.
ಮುಗುಳುನಕ್ಕು ಎಟುಕಿಸಿ ಅವನ ತುಟಿಯಮೇಲೊಂದು ಮುತ್ತು ಕೊಟ್ಟಳು.
ಆಯೋಧನ ವಿದ್ಯೆಯ ಅಭ್ಯಾಸ ಪ್ರಾರಂಭವಾಯಿತು... ಅವನು ಅವಳಿಗೆ ಎಲ್ಲವನ್ನೂ ಕಲಿಸುತ್ತಿದ್ದ...
ಅವನಿಗೆ ತಿಳಿಯದ ವಿದ್ಯೆಯಿರಲಿಲ್ಲ.... ತಿಳಿದುದೆಲ್ಲವನ್ನೂ ಅವಳಿಗೆ ಕಲಿಸುತ್ತಿದ್ದ...
ಅವಳಿಗೆ ತಿಳಿದಿದ್ದುದು ಪ್ರೇಮ ಮಾತ್ರ!
*
“ಎಲ್ಲಿಗೆ ಮಗಳೇ?” ಎಂದ ಗುಹ.
“ಭಾರ್ಗವನನ್ನು ನೋಡಲು! ಇಂದು ಅವನು ಪರಶುವನ್ನು ಬೀಸುವುದನ್ನು ಹೇಳಿಕೊಡುತ್ತಾನೆ!” ಎಂದಳು.
“ಹೋಗಬೇಡ!” ಎಂದ ಗುಹ.
ಆಶ್ಚರ್ಯದಿಂದ ಅಪ್ಪನ ಮುಖವನ್ನು ನೋಡಿದಳು...
“ನಿನ್ನೊಬ್ಬಳ ಕಾರಣವಾಗಿ ನಮ್ಮ ಪೂರ್ತಿ ಕುಲವನ್ನು ಇಲ್ಲವಾಗಿಸಲು ನಾನು ತಯಾರಿಲ್ಲ!” ಎಂದ.
“ಅರ್ಥವಾಗಲಿಲ್ಲ!”
“ಭಾರ್ಗವನ ಅರಿವಿಲ್ಲದೆ ಅವನ ಮನೆಯವರು ಬಂದಿದ್ದರು.... ನಮ್ಮ ಮೂರು ತಲೆಮಾರಿಗೆ ಬೇಕಾಗುವಷ್ಟು ಹೊನ್ನು- ಆಸ್ತಿ ಕೊಡುತ್ತಾರಂತೆ...!”
“ಅದಕ್ಕೆ?” ಎಂದಳು ಕೃಷ್ಣೆ.
“ಯಾವ ಕಾರಣಕ್ಕಾಗಿ ಅನ್ನುವ ಅರಿವು ಭಾರ್ಗವನಿಗೆ ಬಾರದಂತೆ ನೀನು ಅವನಿಂದ ದೂರವಾಗಬೇಕು...”
“ಅದಕ್ಕೆ ನಾನು ಸಾಯಬೇಕು!” ಎಂದಳು.
ನಿರ್ವಿಕಾರವಾಗಿ ಅವಳನ್ನು ನೋಡಿ,
“ಮೂರು ತಲೆಮಾರು....” ಎಂದ ಗುಹ- ತಂದೆ!
*
ಮೊದಲಬಾರಿ ಕಣಾದನ ಮುಖದಲ್ಲಿ ದುಃಖ! ಶಿಷ್ಯತ್ವ ಮುಗಿದಿದ್ದರೂ ಗುರುಗಳ ಸಹಾಯಕ್ಕೆ ನಿಂತಿದ್ದ ಭಾರ್ಗವನಿಗೆ ಆಶ್ಚರ್ಯವಾಯಿತು....
“ಏನಾಯಿತು ಗುರುಗಳೇ...?” ಎಂದ.
“ಏನಿಲ್ಲ ಭಾರ್ಗವ... ಒಂದು ಕೆಟ್ಟ ಕನಸು ಕಂಡೆ...! ನನ್ನ ಪರಿವಾರ- ನಿನ್ನ ಹೊರತು- ನನ್ನ ಮಾತನ್ನು ಮೀರಿ... ವರ್ಣ- ಮೇಲು- ಕೀಳೆಂದು ಹೊಡೆದಾಡುತ್ತಿರುವಂತೆ... ಯಾರನ್ನೋ ಇಲ್ಲವಾಗಿಸುತ್ತಿರುವಂತೆ....”
ಭಾರ್ಗವನಿಗೆ ಅರ್ಥವಾಗಲಿಲ್ಲ.... ಸಂಶಯದಿಂದ ಗುರುಗಳ ಮುಖವನ್ನು ನೊಡಿದ!
ಕೇವಲ ಕನಸೊಂದಕ್ಕೆ ಇಷ್ಟು ದುಃಖಿಸುವರೇ ತನ್ನ ಗುರುಗಳು???
*
ಸುಮಾರು ಹನ್ನೆರಡು ಅಡಿ ಆಳದ ಗುಂಡಿ! ಬಿದ್ದರೆ ಮೇಲೆ ಬರಲು ಯಾವುದೇ ಮಾರ್ಗವಿಲ್ಲ.... ಅದರಲ್ಲಿ ನಿಂತು ಮೇಲಕ್ಕೆ ನೋಡಿ ಕಣ್ಣೀರು ಸುರಿಸುತ್ತಿದ್ದಾಳೆ ಕೃಷ್ಣೆ! ನಿರ್ವಿಕಾರನಾಗಿ ಮಣ್ಣು ತುಂಬಿಸುತ್ತಿದ್ದಾನೆ- ಗುಹ! ಕೊನೆಗೆ ಆ ಜಾಗದಲ್ಲಿ ಆಲದ ಸಸಿಯೊಂದನ್ನು ನೆಟ್ಟು ಹೊರಟು ಹೋದ....! ಆ ಸಸಿ ಮರವಾಗಿ ಬೆಳೆಯಿತು... ಉರುಳಿತು.... ಅದೇ ಜಾಗದಲ್ಲಿ ಮತ್ತೊಂದು ಬೆಳೆಯಿತು... ಉರುಳಿತು... ಮತ್ತೊಂದು ಬೆಳೆಯಿತು....!
*
“ಇದು ಹತ್ತನೆಯದು!” ಎಂದಳು.
ಅವಳನ್ನೇ ಮಿಕಿಮಿಕಿ ನೋಡಿದೆ! ಈ ಮರದ ಬಗ್ಗೆ ಗೊತ್ತು... ಭಾರತದಲ್ಲಿಯೇ ಅತಿ ಪುರಾತನ ಮರಗಳಲ್ಲಿ ಒಂದು... ಅವಳ ಮುಖವನ್ನು ಮತ್ತೊಮ್ಮೆ ನೋಡಿದೆ....
“ನಾನು ಕೃಷ್ಣೆ... ನೀನು ಭಾರ್ಗವ!” ಎಂದಳು.
ನಗು ಬರಲಿಲ್ಲ...! ಕಣ್ಣನ್ನೊಮ್ಮೆ ಉಜ್ಜಿ ಅವಳನ್ನು ನೋಡಿದೆ.
“ಸೋ... ನೀನು ನಂಬಿದೆ....! ನಿನ್ನ ಅನುಭವಕ್ಕೆ ಬರದ ವಿಷಯವಾದರೂ.... ನೀನು ಕಲಿಯುಗಕ್ಕೆ ಮಾತ್ರ ಸೇರಿದವನಲ್ಲ... ಅದಕ್ಕೇ.... ನನ್ನನ್ನು ಗೇಲಿ ಮಾಡಲಿಲ್ಲ!” ಎಂದಳು.
“ಇಲ್ಲ... ಹಾಗಲ್ಲ... ಈಗ ಯೋಚಿಸುತ್ತಿದ್ದೇನೆ... ನಿನ್ನನ್ನು ನೋಡಿದ ಮೊದಲ ಕ್ಷಣ... ಎಲ್ಲಿಯೋ ನೋಡಿದ್ದೇನೆ... ಇವಳು ಪರಿಚಿತಳು ಅನ್ನಿಸಿತ್ತು....!” ಎಂದೆ.
“ನೀನು ನನ್ನವ... ನಾನು ನಿನ್ನವಳು.... ಅದು ನಿಜ!” ಎಂದು ಹೇಳಿ ಮುಗುಳುನಕ್ಕು ಮರದೆಡೆಗೆ ನಡೆದಳು...
ಮರದಲ್ಲಿ ಲೀನವಾದಳು.... ನಾನೇನು ಮಾಡಿದ್ದೆ?? ಅವಳವನಾದರೆ ಯಾಕೆ ಬಿಟ್ಟು ಹೋದಳು....?
ಪಕ್ಕದಲ್ಲಿ ಯಾರೋ ನಕ್ಕಂತಾಯಿತು..... ಕಣ್ಣು ತೆರೆದೆ!!
ಮೊನ್ನೆ ಮೊನ್ನೆ ಈ ಊರಿಗೆ ಬಂದು.... ನನಗವಳಲ್ಲಿ ಪ್ರೇಮ ಹುಟ್ಟಿ.... ಅವಳೂ ನನ್ನಲ್ಲಿ ಆಸಕ್ತಿಯಿರುವವಳಂತೆ ತೋರಿಸಿಕೊಂಡು.... ಪರಿಚಯವಾಗಲು ಹೋದಾಗ ಅಪಮಾನಿಸಿ ಕಳಿಸಿದ ಹುಡುಗಿ!
ಎದ್ದು- ಮುಖ ಊದಿಸಿ ಅವಳಿಂದ ದೂರಕ್ಕೆ ಹೋಗುವಾಗ....
“ನನ್ನ ಹೆಸರು ಕೃಷ್ಣೆ...!” ಎಂದಳು.
******
super ರವಿ ಕಾಣದ್ದನ್ನು ಕವಿ ಕಂಡ,
ReplyDeleteಪುರಾಣವಾದರು ನವ ಪೀಳಿಗೆಯಾದರು ಪ್ರೇಮ ಅದ್ಬುತವಾದದ್ದು ಅವರವರ ಭಾವಕ್ಕೆ