ರಹಸ್ಯ!
ಹದಿಮೂರು ವರ್ಷದಿಂದ ಚಾಮುಂಡಿಬೆಟ್ಟ ಹತ್ತುತ್ತಿದ್ದೇನೆ! ಪ್ರತಿ ದಿನ ಹತ್ತುತ್ತಿದ್ದವನು ಕೊರೋನ ಸಮಯದಲ್ಲಿ ಕಾಲಿಗೆ ಬಿದ್ದ ಪೆಟ್ಟಿನಿಂದಾಗಿ, ಲಿಗಮೆಂಟ್ ಕಟ್ಟಾಗಿ, ಆಪರೇಷನ್ ಮಾಡಿಸಿಕೊಂಡನಂತರ…, ವಾರಕ್ಕೆ ನಾಲ್ಕು- ಐದು ದಿನ ಹತ್ತುತ್ತೇನೆ! ವ್ಯಾಯಾಮವೇ ಉದ್ದೇಶ. ಬೆಳಕು ಮೂಡುವ ಮುನ್ನ ಹತ್ತಿ ಇಳಿಯುವುದು ಅಭ್ಯಾಸ! ಬೆಳಗ್ಗಿನ ಐದು ಗಂಟೆಗೆ ಅಲ್ಲಿ ತಲುಪಿ, ಮೆಟ್ಟಿಲು ಹತ್ತಲು ಶುರು ಮಾಡುವ ಮೊದಲು- ಹತ್ತುನಿಮಿಷ ವಾರ್ಮ್‌ಅಪ್ ಮಾಡುತ್ತೇನೆ! ಒಂಬೈನೂರು ಮೆಟ್ಟಿಲು ದಾಟಿದಮೇಲೆ, ಹನುಮಂತನ ಗುಡಿಯಬಳಿ- ಹತ್ತು ನಿಮಿಷ ಕಠಿಣ ವ್ಯಾಯಾಮ ಮಾಡುತ್ತೇನೆ. ಅದರಲ್ಲಿ…, ಅಂಗಾತನೆ ಮಲಗಿ, ಕಾಲನ್ನು ಮಾತ್ರ ಮೇಲಕ್ಕೆ ಎತ್ತಿ, ಪುನಃ ನೆಲಕ್ಕೆ ತಾಗದಂತೆ ಕೆಳಕ್ಕೆ ತಂದು, ಪುನಃ ಮೇಲಕ್ಕೆ…, ಹೀಗೆ…, ಇಪ್ಪತ್ತೈದು ಸಾರಿ ಮಾಡಿ ಮೇಲಕ್ಕೆ ಏಳಲು ತಿರುಗುವಾಗ…, ನನ್ನನ್ನೇ ನೋಡುತ್ತಾ ಯಾರೋ ನಿಂತಿರುವ ಅನುಭವವಾಗುತ್ತದೆ! ಪ್ರತಿ ದಿನ! ಅಂಗಾತನೆ ಮಲಗುವಾಗ ಅಂದುಕೊಳ್ಳುತ್ತೇನೆ…, ಇವತ್ತು ಹೆದರಬಾರದೆಂದು! ಆದರೆ ಏಳುವಾಗ- ಅತಿ ಸ್ಪಷ್ಟವಾಗಿ- ಅಷ್ಟು ಹತ್ತಿರ! ಬೆಚ್ಚಿ ಏಳುವಷ್ಟರಲ್ಲಿ ಮಾಯ! ಏನಿರಬಹುದು ಈ ರಹಸ್ಯ?
Comments
Post a Comment