ಅನಿರುದ್ಧ ಬಿಂಬ!
ಅನಿರುದ್ಧ ಬಿಂಬ!
*
ನಮಸ್ತೇ…,
ನಾನು ಅನಿರುದ್ಧ- ಬಿಂಬದಿಂದ ಹೊರಬಂದ ರೂಪವಿಲ್ಲದ ಅನಿರುದ್ಧ!
ನಾವೊಂದು ಕಲ್ಪನೆಯ ಲೋಕಕ್ಕೆ ಹೋಗಿಬರೋಣ. ಈ ಕಾಲ್ಪನಿಕ ಕಥೆಯನ್ನು ಕೇಳಿ ಕೊನೆಗೆ- ಇದರಲ್ಲಿ ಯಾವುದು ಕಲ್ಪನೆ, ಯಾವುದು ವಾಸ್ತವ, ಯಾವುದು ಕನಸು, ಯಾವುದು ಭ್ರಮೆ, ಕಥೆಗೆ ಪ್ರೇರಣೆಯೇನು ಎಂದೆಲ್ಲಾ ಕೇಳಬಾರದು!
ಮತ್ತೊಮ್ಮೆ ಹೇಳುತ್ತಿದ್ದೇನೆ…, ಈ ಬ್ರಹ್ಮಾಂಡದಲ್ಲಿ ಏನೂ ಸಾಧ್ಯ ಅನ್ನುವ ಅಡಿಪಾಯದಲ್ಲಿ ಈ ಕಥೆಯನ್ನು ಹೇಳುತ್ತಿದ್ದೇನೆ.
ಈ ಕಥೆ ನಡೆಯುವುದು ಎರಡು ವ್ಯತ್ಯಸ್ತವಾದ ಪ್ರಪಂಚದಲ್ಲಿ!
ಒಂದು…, ನಿದ್ದೆ ಅನ್ನುವ ಮಾಯಾ ಪ್ರಪಂಚದಲ್ಲಿ!
ಇನ್ನೊಂದು…, ನಿದ್ದೆಯ ಹೊರತಾದ ಮಾಯಾ ಪ್ರಪಂಚದಲ್ಲಿ!
ಆದ್ದರಿಂದ ಇದು ಪರಿಪೂರ್ಣವಾಗಿ ಕಾಲ್ಪನಿಕ ಕಥೆ!
*
ಮೊನ್ನೆ ನಾನೊಂದು ಊರಿಗೆ ಹೋಗಿದ್ದೆ.
ಊರಾ ಅಂದರೆ ಊರಲ್ಲ ಊರಲ್ಲವಾ ಅಂದರೆ ಊರು!
ಅದೊಂದು ಕಾಡಿನಂತಾ ಪ್ರದೇಶ- ಜನಸಂಚಾರವೇ ಇಲ್ಲದ ಪ್ರದೇಶ. ಅಲ್ಲೊಂದು ದೇವಸ್ಥಾನ. ಆ ದೇವಸ್ಥಾನದಬಗ್ಗೆ ಹಲವರು ಹಲವು ಕಥೆಗಳನ್ನು ಹೇಳಿದ್ದರು. ನನಗೋ ಅದರಕಡೆ ಗಮನವೇ ಇಲ್ಲ. ನನ್ನ ಗಮನವೆಲ್ಲಾ ಆ ದೇವಸ್ಥಾನಕ್ಕೆ ನೆರಳಿನಂತೆ ನಿಂತಿದ್ದ ಆ ದೊಡ್ಡ ಆಲದ ಮರದ ಕಡೆಗೆ. ಎಷ್ಟು ವರ್ಷವಿರಬೇಕು ಆ ಮರಕ್ಕೆ ಅನ್ನಿಸಿದರೂ ಅದಕ್ಕಿಂತ ಕುತೂಹಲ.., ಈ ಮರದ ಇರವಿನ ಅರಿವು ನನಗಿತ್ತಲ್ಲಾ- ಅನ್ನುವುದು!
ಅದರ ಸಮೀಪಕ್ಕೆ ಹೋಗುತ್ತಿದ್ದಂತೆ ಮನಸ್ಸಿನೊಳಗೆ ಅರಿಯದ ಭಾವ ಸಂಚಲನಗಳು…, ನೆರಳುಗಳು…!
ಚಿಕ್ಕಂದಿನಲ್ಲಿ ಕೇಳಿದ- ಓದಿದ- ಕನಸು ಕಂಡ ಯಕ್ಷಿ ಕಥೆಗಳ ನೆನಪುಗಳು.
ಗೊತ್ತೇ ಯಕ್ಷಿಯಬಗ್ಗೆ?
ಅದೊಂದು ಅದ್ಭುತ ಸೌಂಧರ್ಯದ ಹೆಣ್ಣು ರೂಪ. ಮನುಷ್ಯರಾ ಅಂದರೆ ಮನುಷ್ಯರಲ್ಲ! ದೆವ್ವವಾ ಅಂದರೆ ದೆವ್ವಗಳೂ ಅಲ್ಲ! ಇನ್ನು ದೇವರಾ ಅಂದರೆ ದೇವರೂ ಅಲ್ಲ! ಅದೊಂದು ಅನುಭವ ಮಾತ್ರ! ನಮ್ಮ ಜೊತೆಯೇ ಇರುತ್ತಾಳೆ- ನಮ್ಮ ಅರಿವಿಗೆ ಬರುವುದಿಲ್ಲ. ಅರಿವಿಗೆ ಬಂದವರು ಹೇಳಿದರೆ ಯಾರೂ ನಂಬುವುದೂ ಇಲ್ಲ.
ಒಬ್ಬರೇ ರಾತ್ರಿ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುತ್ತೇವೆ. ಆಗ ಈ ಯಕ್ಷಿ ನಮ್ಮೊಂದಿಗೆ ಸೇರಿಕೊಂಡು ನಮ್ಮೊಂದಿಗೆ ಮಾತನಾಡುತ್ತಾ ಒಂದು ನಿಶ್ಚಿತ ದೂರದವರೆಗೆ ಬರುತ್ತಾಳೆ. ಅವಳು ನಮ್ಮೊಂದಿಗೆ ಇರುವಷ್ಟು ಸಮಯ ನಮಗೆ ಅದರ ಅರಿವೇ ಆಗುವುದಿಲ್ಲ. ಅವಳು ಬಿಟ್ಟು ದೂರವಾದ ಕ್ಷಣ ನಮಗೆ ಗೊಂದಲವಾಗುತ್ತದೆ!
ಯಾರೋ ಇದ್ದರಲ್ಲ? ಯಾರದು? ಯಾವಾಗ ಬಂದರು? ಯಾವಾಗ ಹೋದರು?
ಅಷ್ಟೆ…! ನಂತರ ಆ ಅನುಭವ ಆಗಬಹುದು ಆಗದೇ ಇರಬಹುದು. ಅವರಿಂದ ನಮಗೆ ಯಾವುದೇ ಕೆಡುಕೋ ಒಳಿತೋ ಏನೂ ಆಗುವುದಿಲ್ಲವಾಗಲಿ- ನಾವದನ್ನು ಹೇಗೆ ತೆಗೆದುಕೊಳ್ಳುತ್ತೇವೆ ಅನ್ನುವುದರಮೇಲೆ ಉಳಿದ ಪರಿಣಾಮಗಳಿರುತ್ತದೆ!
ಕೆಲವರಿಗೆ ಮತಿಭ್ರಮಣೆಯಾಗಬಹುದು, ಕೆಲವರ ಆತ್ಮಸ್ಥೈರ್ಯ ಹೆಚ್ಚಬಹುದು, ಏನೂ ವ್ಯತ್ಯಾಸವಿಲ್ಲದೆ ಬದುಕು ಮುಂದುವರೆಯಲೂ ಬಹುದು!
ಇನ್ನು ಈ ಮರದ ವಿಷಯಕ್ಕೆ ಬರೋಣ!
ದೇವಸ್ಥಾನವಿರುವ ಸ್ಥಳದ ಹೊರತು ಉಳಿದಕಡೆಗೆಲ್ಲಾ ನೆಲವನ್ನು ತಾಕುವಂತೆ ಇಳಿಬಿದ್ದಿರುವ ಬೇರುಗಳು. ಪ್ರತಿ ಬೇರು ಸಾಮಾನ್ಯ ಮನುಷ್ಯನ ಕೈಯ್ಯಷ್ಟು ದಪ್ಪವಿರಬಹುದು. ಕೆಲವೊಂದು ಬೇರುಗಳು ಸೀಳುಬಂದು ಐದಾರು ಬೆರಳುಗಳಾಗಿ ಇಳಿಬಿದ್ದಿದೆ. ಅದರ ಸಮೀಪಕ್ಕೆ ಹೋದಾಗ ತಣ್ಣನೆ ಗಾಳಿಯೊಂದು ಬೀಸಿತು. ಅಷ್ಟು ಹೊತ್ತು ಅಸಾಧ್ಯ ಬಿಸಿಲಿನ ಜಳಕ್ಕೆ ಬೆವೆತು ಸ್ನಾನ ಮಾಡಿದ್ದವನನ್ನು ಏಸಿ ರೂಮಿಗೆ ತಳ್ಳಿದಂತಾಯಿತು.
“ಬಂದೆಯಾ!” ಅನ್ನುವ ಹೆಣ್ಣು ಶಬ್ದ.
“ಯಾ…, ಯಾರು?” ಎಂದೆ ಗೊಂದಲದಿಂದ.
“ಅನಿರುದ್ಧನಿಗೆ ನನ್ನ ಅರಿವಾಗಲಿಲ್ಲವಾ? ನಾನಿನ್ನಿದ್ದೇನು ಪ್ರಯೋಜನ!”
“ಉಷೆಯೇ…? ನನ್ನ ಉಷೆಯೇ…?” ಎಂದು ಅಧೀರನಾಗಿ ಬೇರುಗಳನ್ನು ಸರಿಸಿ ಒಳನುಗ್ಗಿದೆ.
ಅಲ್ಲಿ…, ಒಣಗಿದ ಎಲೆಗಳ ಮೇಲೆ…, ತನ್ನ ಅಪಾರವಾದ ಕೇಶರಾಶಿಯನ್ನು ವಿಶಾಲವಾಗಿ ಹರಡಿ…, ಅಂಗಾತನೆ ಮಲಗಿದ್ದಾಳೆ- ಉಷೆ!
ಅನಿರುದ್ಧನ ಉಷೆ!
ಸೊಂಟದ ಕೆಳಗೆ ಸುತ್ತಿರುವ ಬಿಳಿ ಸೀರೆಯ ಸೆರಗನ್ನೇ ಎದೆಯಮೇಲೆ ಹರಡಿಕೊಂಡಿದ್ದಾಳೆ. ಕುಪ್ಪಸವಿಲ್ಲ.
ಎಡರೂ ಕೈಗಳನ್ನು…, ಎದೆ ಗೋಪುರಗಳನ್ನು ಮಾತ್ರ ಮರೆಮಾಚಿರುವ ಸೆರಗು ಗಾಳಿಗೆ ಹಾರದಂತೆ…, ತೆರೆದ ಹೊಟ್ಟೆಯಮೇಲೆ…, ಹೊಕ್ಕಳನ್ನು ಮರೆಮಾಚುವಂತೆ ಇಟ್ಟುಕೊಂಡಿದ್ದಾಳೆ.
ಅವಳ ಮುಖದಲ್ಲಿರುವ ಕಾಂತಿಯನ್ನು ಏನೆಂದು ವರ್ಣಿಸುವುದು?
ಬಾ ಅನ್ನುವಂತೆ ನೋಡಿದಳು.
ನನ್ನ ಅರಿವಿಲ್ಲದಂತೆ ಕಣ್ಣಿನಿಂದ ಸುರಿದ ಆನಂದಭಾಷ್ಪ…, ಅವಳ ಮುಗುಳುನಗುವಿಗೆ ಕಾರಣವಾಯಿತು!
“ಇಷ್ಟೊಂದು ಭಾವುಕನೆ ನನ್ನ ಅನಿರುದ್ಧ?” ಎಂದಳು.
ನಾನೇನೂ ಮಾತನಾಡಲಿಲ್ಲ. ಅವಳ ಅದ್ಭುತ ಸೌಂಧರ್ಯದಲ್ಲಿ ನನ್ನನ್ನೇ ಮರೆತು ನಿಂತಿದ್ದೆ.
ನಿಧಾನವಾಗಿ ಕಾಲಗಲಿಸಿದಳು. ಮುಗುಳುನಕ್ಕು…, ಸೀರೆಯ ಮೇಲೆಯೇ…, ಅವಳ ಕಾಲುಗಳಮಧ್ಯೆ…, ತಲೆ ಅವಳ ಹೊಟ್ಟೆಯಮೇಲೆ- ಹೊಕ್ಕಳ ಕೆಳಗೆ ಬರುವಂತೆ ಇಟ್ಟು ಅಂಗಾತನೆ ಮಲಗಿದೆ. ಎರಡೂ ಕೈಗಳನ್ನು ಅವಳ ಎರಡೂಕಡೆಗಳಿಗೆ ಹರಡಿ…, ಹಗುರವಾದವನಂತೆ ಮಲಗಿದೆ. ಅವಳು ನನ್ನ ಕೂದಲುಗಳ ನಡುವೆ ಬೆರಳಾಡಿಸುತ್ತಾ ಕೇಳಿದಳು…,
“ಹೇಳು…, ಏನಂದಳು ಅನ್ನಪೂರ್ಣೆ?”
“ಅನ್ನಕ್ಕೆ ಕೊರತೆಯುಂಟಾಗುವುದಿಲ್ಲವೆಂದಳು!” ಎಂದೆ.
“ಶಾರದೆ?”
“ವಿದ್ವತ್ತಿಗೇನೂ ಕೊರತೆಯುಂಟಾಗುವುದಿಲ್ಲವೆಂದಳು!” ಎಂದೆ.
“ಅಂದರೆ ನೀನು ಭಾರಿ ವಿದ್ವಾನ್ ಎಂದೇ?”
“ಅಲ್ಲವೇ…, ಹೊರಗಿನವರಿಗೆ ಏನು ವಿದ್ಯೆಯೋ ಅದಲ್ಲದೆ…, ನನ್ನದೇ ಆದ ಆಲೋಚನಾಧಾಟಿ, ಜೀವನವೆಂದರೇನೆಂಬ ಸ್ಪಷ್ಟ ಅರಿವು, ನೈತಿಕಾನೈತಿಕಗಳನ್ನು ಮೀರಿ…, ಬ್ರಹ್ಮಾಂಡದಲ್ಲಿ ನಾನೇನೆಂಬ ಅರಿವು…!” ಎಂದೆ.
“ಮೂಕಾಂಬಿಕೆಯೇನೆಂದಳು?”
“ಅವಳು ಮೂಕಿ! ಏನೂ ಹೇಳಲಿಲ್ಲ!”
“ಯಾಕೆ ಬಂದೆಯೆಂದು ಕೇಳಲಿಲ್ಲವೇ?”
“ಅದನ್ನು ಕಳೆದ ಸಾರಿಯೇ ಕೇಳಿದ್ದಳು!” ಎಂದೆ.
“ಮತ್ತೇಕೆ ಈಸಾರಿ ಅವಳನ್ನು ನೋಡಲು ಬಂದೆ?”
“ಗೊತ್ತಿಲ್ಲವೇ…! ನಾನಾಗಿ ಬರಲಿಲ್ಲ!” ಎಂದೆ.
“ಬರುವುದು ಬರದಿರುವುದು ನಿನ್ನ ಕೈಯ್ಯಲ್ಲಿ ಇಲ್ಲವೆಂದಮೇಲೆ ಶಾರದೆ ಕೊಟ್ಟ ಅರಿವಿಗೆ ಅರ್ಥವೇನು?” ಎಂದಳು.
“ಉಷೆ…!” ಎಂದು ಮಲಗಿದಲ್ಲಿಂದಲೇ ತಲೆಯನ್ನು ಮಾತ್ರ ತಿರುಗಿಸಿ ಅವಳ ಮುಖವನ್ನು ನೋಡುವ ಪ್ರಯತ್ನ ಮಾಡಿದೆ.
ಅವಳು ಎರಡೂ ಕೈಗಳಿಂದ ನನ್ನ ತಲೆಯನ್ನು ಮೊದಲಿನಂತೆ ಮಾಡಿ…,
“ಹೇಳು…, ದುರ್ಗೆ ಏನಂದಳು?” ಎಂದು ಕೇಳಿದಳು.
“ಅವಳೇನು ಹೇಳುವುದು? ಧೈರ್ಯದ ರೂಪದಲ್ಲಿ ಪ್ರತಿ ಕ್ಷಣ ಇರುವಾಗ!” ಎಂದೆ.
“ನಾಲ್ವರಲ್ಲಿ ನೀನೇನು ಬೇಡಿದೆಯೋ?” ಎಂದಳು.
“ಏನೆಂದರೆ ಏನೂ ಬೇಡಲಿಲ್ಲವೇ! ಬೇಡಬೇಕೆಂದು ತೋಚಲಿಲ್ಲ!” ಎಂದೆ.
“ಮತ್ತೆ? ಅವರು ನಾಲ್ವರನ್ನು ನೋಡಿ ಬಂದಮೇಲೆ ಏನು ತೀರ್ಮಾನಕ್ಕೆ ಬಂದೆ?” ಎಂದಳು.
“ಬಿಂಬದಿಂದ ಹೊರಬರುವ ತೀರ್ಮಾನ!” ಎಂದೆ.
“ನನಗೆ ನೀನು ಹೇಳಿದ್ದು ಅರ್ಥವಾಯಿತು! ಆದರೆ ಈ ಕಥೆಯನ್ನು ನೀನು ನನಗಾಗಿ ಹೇಳುತ್ತಿಲ್ಲ.., ಆದ್ದರಿಂದ ವಿವರಿಸು!” ಎಂದಳು.
“ನಿನಗೆ ಗೊತ್ತು.., ನಾನೊಬ್ಬ ಅದ್ವೈತಿ…, ದ್ವೈತವನ್ನು ಆಚರಿಸುತ್ತಿದ್ದ ಅದ್ವೈತಿ!”
“ದ್ವೈತವನ್ನು ಯಾಕೆ ಆಚರಿಸುತ್ತಿದ್ದೆ ಅನ್ನುವುದು ಹೇಳು!”
“ಚಂದ ಅಲಾ! ಈಗ ನೀನು…, ಎಷ್ಟು ಚಂದ! ನಿನ್ನ ನೋಡುವುದು ನನಗೆಷ್ಟು ಸಂತೋಷ! ನಿನ್ನೊಂದಿಗೆ ಹೀಗೆ ಸಮಯವನ್ನು ಕಳೆಯುವುದು ಎಷ್ಟು ಸಂತೋಷ! ಈ ಅವಕಾಶವನ್ನು ಬೇಡವೆನ್ನಲೆ? ಹಾಗೆಯೇ…, ದೇವಿಯ ಪ್ರತಿಷ್ಠೆಯಿರುವ ಯಾವ ದೇವಸ್ಥಾನವಾದರೂ ನನಗೊಂದು ಆಕರ್ಷಣೆ! ಆದ್ದರಿಂದ ದ್ವೈತವನ್ನು ಆಚರಿಸುತ್ತಿದ್ದೆ! ನನ್ನೊಳಗಿನ ದೇವಿಗೊಂದು ರೂಪ ಅನ್ನುವ ನೆಪದಲ್ಲಿ!” ಎಂದೆ.
“ಈಗೇನಾಯಿತು!?”
“ಆ ಹಂತವನ್ನು ದಾಟಿದೆನೆನ್ನುವ ಅರಿವೇ!” ಎಂದೆ.
“ಅಂದರೆ…? ಏನರ್ಥ?”
“ನಿನ್ನ ಅಗತ್ಯವಿಲ್ಲದೆ ಅನಿರುದ್ಧ ಬದುಕುವ ಸಮಯ ಬಂದಿದೆಯೆಂದು ಅರ್ಥ!” ಎಂದೆ.
“ಪುನಃ ನೀನು ಯಾರಿಗಾಗಿ ಕಥೆ ಹೇಳುತ್ತಿದ್ದೀಯೋ ಮರೆಯಬೇಡ!”
“ನಾನು ಬ್ರಹ್ಮಾಂಡದಿಂದ ಹೊರತಲ್ಲ! ನಾನು ದೇವಿಯಿಂದ ಹೊರತಲ್ಲ! ನನ್ನ ಹೃದಯದಲ್ಲಿ ದೇವಿ ಅನ್ನುವುದನ್ನೂ ಮೀರಿ…, ನಾನು ದೇವಿಯ ಒಂದು ಅಂಶ ಅನ್ನುವುದನ್ನೂ ಮೀರಿ…, ನಾನೂ ದೇವಿಯೂ ಒಂದೇ ಅನ್ನುವ ಹಂತಕ್ಕೆ ಬಂದಿದ್ದೇನೆ!” ಎಂದೆ.
ಅವಳೇನೂ ಮಾತನಾಡಲಿಲ್ಲ. ನಾನೇ ಕೇಳಿದೆ…,
“ಈಗ ಹೇಳು…, ಯಾಕೆ ನನ್ನ ಬಿಟ್ಟು ಬಂದೆ?”
“ಉತ್ತರ ನೀನೇ ಹೇಳಾಯಿತಲ್ಲೋ! ನೀನು ಬೇರೆ- ಉಷೆ ಬೇರೆಯೋ? ಉಷೆಯಿಲ್ಲದೆ ಅನಿರುದ್ಧ ಬದುಕುವ ಕಾಲ ಬಂದಿದೆ!” ಎಂದಳು.
ನಾನೇನೂ ಮಾತನಾಡಲಿಲ್ಲ. ಅವಳೇ ಮುಂದುವರೆಸಿ ಹೇಳಿದಳು…,
“ಎಲ್ಲವೂ ನಿಮಿತ್ತವೋ…! ಅಂದು ನಾನು ಹಾಗೆ ನಡೆದುಕೊಳ್ಳದಿದ್ದರೆ ನೀನಿಂದು ಈ ಅರಿವನ್ನು ಪಡೆದುಕೊಳ್ಳುತ್ತಿರಲಿಲ್ಲ. ಯೋಚಿಸಿನೋಡು…, ನಾನಿದ್ದು…, ಈ ಉಷೆಯಿದ್ದೂ ನೀನು ಬೇರೊಂದು ಹೆಣ್ಣಿನ ಹಿಂದೆ ಹೋಗುವುದೆಂದರೆ...” ಎಂದು ನಿಲ್ಲಿಸಿದಳು.
ಮತ್ತೊಮ್ಮೆ ತಲೆತಿರುಗಿಸಿ ಅವಳ ಮುಖವನ್ನು ನೋಡುವ ಪ್ರಯತ್ನ ಮಾಡಿದೆ. ಬಿಡಲಿಲ್ಲ. ಹೇಳಿದಳು…,
“ಹೌದು…, ಗೊತ್ತು…, ನಿನಗೆ ಅನ್ನಪೂರ್ಣೆಯೂ ಒಂದೇ, ಶಾರದೆಯೂ ಒಂದೇ, ಮೂಕಾಂಬಿಕೆಯೂ ಒಂದೇ, ದುರ್ಗೆಯೂ ಒಂದೆ! ಹಾಗೆಯೇ ಪ್ರತಿ ಹೆಣ್ಣಿನಲ್ಲಿ ನನ್ನನ್ನು- ಉಷೆಯನ್ನು ಕಾಣುವವ! ಆದರೇನು ಮಾಡಲೋ…, ಆ ಪ್ರೇಮವನ್ನು ಒಪ್ಪಲು ನನ್ನಿಂದಾಗದು! ನನ್ನಿಂದ ಮಾತ್ರವಲ್ಲ…, ಪ್ರಪಂಚದಲ್ಲಿ ಯಾರಿಂದಲೂ ಆಗದು! ಯಾರಿಗೂ ಅದು ಅರ್ಥವಾಗುವುದೂ ಇಲ್ಲ!” ಎಂದಳು.
“ಈಗ ನಾನೇನು ಮಾಡಲೇ?” ಎಂದೆ.
“ದೇವಿ ಅನ್ನುವ ಬಿಂಬದಿಂದ ಹೊರಬಂದಂತೆ…, ನನ್ನಿಂದ…, ಉಷೆಯಿಂದ ಹೊರಬಾ!” ಎಂದಳು.
“ಅದಸಾಧ್ಯ!” ಎಂದು ಹೇಳಿ ಅಂಗಾತನೆ ಇದ್ದವನು ಬೋರಲಾದೆ. ಸೊಂಟಕ್ಕೆ ಸುತ್ತಿದ್ದ ಅವಳ ಸೀರೆಯನ್ನು ಸ್ವಲ್ಪ ಕೆಳಕ್ಕೆ ಸರಿಸಿ ಗಾಢವಾಗಿ ತುಟಿಯೊತ್ತಿ…, ದೇವಿಯ ಹೊರತು- ಉಷೆಯ ಹೊರತು ಅಥವಾ…, ದೇವಿಯನ್ನೂ ಒಳಗೊಂಡು- ಉಷೆಯನ್ನೂ ಒಳಗೊಂಡು ಅನ್ನುವುದಕ್ಕಿಂತ ದೇವಿಯೂ ಉಷೆಯೂ ನಾನೂ ಒಂದೇ ಅನ್ನುವಂತೆ…, ಅವಳನ್ನು ನನ್ನೊಳಕ್ಕೆ ಸೆಳೆದುಕೊಂಡೆ.
ತಟ್ಟನೆ…, ಮರ ಮಾಯವಾಯಿತು, ದೇವಸ್ಥಾನ ಮಾಯವಾಯಿತು, ಸುತ್ತಲ ಪರಿಸರ ಮಾಯವಾಯಿತು, ಕೇವಲ ನಾನು ಮತ್ತು ನಾನು ಮಾತ್ರ!
*
“ಈ ಸ್ಥಳವೇ ಹೀಗೆ! ಬಿಟ್ಟು ಹೋಗಲು ಮನಸ್ಸು ಬರುವುದಿಲ್ಲ. ಧ್ಯಾನ ಮಾಡುತ್ತಾ…, ಇಲ್ಲಿಯೇ ಇರಬೇಕೆನ್ನಿಸುತ್ತದೆ!” ಎನ್ನುವ ಮಾತುಗಳನ್ನು ಕೇಳಿ ಹೊರಳಿದೆ. ನಾನು ಹೊರಳಿದ ಶಬ್ದವನ್ನು ಕೇಳಿ…,
“ಯಾರದು?” ಎಂದರು.
ನನಗೆ ಗೊತ್ತು! ನಾನು ಯಾರಿಗೂ ಕಾಣಿಸುವುದಿಲ್ಲವೆಂದು! ಹೊರಳಿದವ ಅಲ್ಲಿಯೇ ಮಲಗಿದೆ. ಅವರ ಮಾತು ಮುಂದುವರೆಯಿತು…,
“ಅಲ್ಲಾ…! ಈ ಹೆಂಗಸರೆಷ್ಟು ಸ್ವಾರ್ಥಿಗಳು ಅಲ್ಲವಾ…! ನಾನು ನಿನ್ನನ್ನು ಪ್ರೀತಿಸುತ್ತೇನೆ ಅನ್ನುತ್ತಾರೆ…, ನಾವು ಪರಿಪೂರ್ಣವಾಗಿ ಅವರಲ್ಲಿ ಮುಳುಗುವ ಸಮಯಕ್ಕೆ ಸರಿಯಾಗಿ ದೂರ ಹೋಗಲು ನೆಪಗಳನ್ನು ಹುಡುಕುತ್ತಾರೆ!” ಎಂದ ಒಬ್ಬ.
“ಗಂಡಸರಬಗ್ಗೆ ಹೆಂಗಸರೂ ಹೀಗೇ ಹೇಳುತ್ತಾರೆ!” ಎಂದ ಮತ್ತೊಬ್ಬ.
“ಹಾಗೇನೂ ಇಲ್ಲ…, ಎಷ್ಟೋ ಜನ ಪರಸ್ಪರ ಹೊಂದಾಣಿಕೆಯಿಂದ ಎಷ್ಟು ಖುಷಿಯಾಗಿದ್ದಾರೆ! ಸ್ವಾರ್ಥವನ್ನು ಮಾತ್ರ ನೋಡಿದರೆ ಎಲ್ಲರೂ ಸ್ವಾರ್ಥರಂತೆಯೇ ಕಾಣಿಸುತ್ತಾರೆ! ಗಂಡಸರಿಗೆ ಹೆಂಗಸರು, ಹೆಂಗಸರಿಗೆ ಗಂಡಸರು…, ನಾವು ಎಲ್ಲರಲ್ಲಿ ಒಳಿತನ್ನು ಕಂಡರಾಯಿತು! ಗಂಡು ಹೆಣ್ಣು ದೇವರು ದೆವ್ವ…. ಎಲ್ಲವೂ ವೈವಿಧ್ಯಮಯ! ಏಕರೂಪದ ಯಾವುದೆಂದರೆ ಯಾವುದೂ ಇಲ್ಲ!” ಎಂದ ಮಗದೊಬ್ಬ!
ಅಷ್ಟು ಸುಲಭದಲ್ಲಿ ಮನುಷ್ಯ ಬದಲಾಗಲಾರ! ಅವನ ಯೋಚನೆಗಳು ಯಾವುದೋ ಒಂದು ಪರಿಧಿಯಲ್ಲಿ ಹುದುಗಿಕೊಂಡಿರುತ್ತದೆ ಹೊರತು ತನ್ನ ಯೋಚನೆ ಪರಿಧಿಯೊಳಗಿದೆಯೆಂದೋ ಆ ಪರಿಧಿಯನ್ನು ಭೇದಿಸಿ ಮುನ್ನುಗ್ಗಬೇಕೆಂದೋ ಅವನಿಗೆ ಅರಿವಾಗುವುದೇ ಇಲ್ಲ!
ಅದೇ ಮಾಯೆ!
ಅಲ್ಲಿಂದ ಚಲಿಸಿದೆ.
“ಇಷ್ಟು ಹೊತ್ತಿದ್ದ ಪ್ರಶಾಂತತೆ ಮಾಯವಾಯಿತಲ್ಲಾ…! ಯಾಕೋ ಏನೋ ಮನಸ್ಸು ಚಂಚಲವಾಗುತ್ತಿದೆ- ಇಲ್ಲಿಂದ ಹೋಗೋಣ…!” ಎಂದು ಹೇಳುತ್ತಿರುವುದು ಕೇಳಿಸಿತು.
ಮುಗುಳುನಕ್ಕು ನಾನು ನೀನು ನಾವುಗಳಿಂದಾಚೆಗೆ ಹೊರಟುಹೋದೆ…, ಅಥವಾ…, ನಾನು ನೀನು ನಾವುಗಳಾಗಿ ಬದಲಾದೆ!
Comments
Post a Comment