ಪ್ರೇಮವೆಂದರೇ....!
ಪ್ರೇಮವೆಂದರೇ… ! “ ಹೇರಿಕೆ ಯಾರು ಮಾಡುತ್ತಿರುವುದು ದೇವಿ ? ಪ್ರಪಂಚದಮೇಲೆ ನಾನೋ ನನ್ನಮೇಲೆ ಪ್ರಪಂಚವೋ ?” ಎಂದೆ . ನಕ್ಕರು ದೇವಿ . “ ಅದೇನು ನಿನ್ನ ಗೊಂದಲ ?” ಎಂದರು . “ ಧರ್ಮ ಅಂದರೇನು ?” “ ಅದೆಷ್ಟು ಸಾರಿ ಹೇಳಬೇಕೋ… ? ನೀನೇ ಅದೆಷ್ಟು ಸಾರಿ ಬರೆದಿದ್ದೀಯ… ! ಪುನಃ ಗೊಂದಲವೇ ?” “ ಗೊಂದಲವಲ್ಲ ದೇವಿ… ಹೊಸ ಹೊಸ ರೀತಿಯಲ್ಲಿ ಸಮರ್ಥಿಸಿಕೊಳ್ಳುವುದು ! ಪ್ರಪಂಚ… , ಮತವೇ ಧರ್ಮ ಎಂದು ಪದೇ ಪದೇ ನನ್ನಮೇಲೆ ಹೇರುತ್ತಿದೆ ! ಅದಕ್ಕೆ ಪರ್ಯಾಯವಾಗಿ… , ಅಲ್ಲ… , ಮತ ಬೇರೆ , ಧರ್ಮ ಬೇರೆ… , ಬ್ರಹ್ಮಾಂಡವನ್ನೇ ಒಳಗೊಳ್ಳುವ ವಿಶಾಲಾರ್ಥದ ಧರ್ಮವನ್ನು ಅತಿ ಸಂಕುಚಿತಾರ್ಥದ ಮತಕ್ಕೆ ಆರೋಪಿಸಿವುದು ತಪ್ಪು ಎಂದು ನಾನೂ ಪಟ್ಟು ಬಿಡದೆ ವಾದಿಸುತ್ತಿದ್ದೇನೆ - ಅಷ್ಟೆ !” ಎಂದೆ . “ ಸರಿ… , ಈಗ ಪಾಯಿಂಟ್‌ಗೆ ಬಾ !” ಎಂದರು ದೇವಿ . ಮುಗುಳುನಕ್ಕು ತಲೆತಗ್ಗಿಸಿದೆ ! ತೆಕ್ಕೆಯಗಲಿಸಿ ನನ್ನನ್ನು ತಮ್ಮೆದೆಗೆ ಆನಿಸಿಕೊಂಡರು ದೇವಿ . “ ಪ್ರೇಮ ! ಧರ್ಮವನ್ನೂ ಒಳಗೊಂಡು ಪೂರ್ತಿ ಬ್ರಹ್ಮಾಂಡವನ್ನೇ ತನ್ನೊಳಗೆ ಅಡಗಿಸುವಷ್ಟು ವಿಶಾಲವಾದ ಅರ್ಥವಿರುವ ಪ್ರೇಮವನ್ನು… , ಒಬ್ಬರಮೇಲೆ ನಮಗುಂಟಾಗುವ ಅನುರಾಗದ ಶ್ರೇಷ್ಠೆಯನ್ನು ತೋರಿಸಲು ಉಳಿದ ಎಲ್ಲವನ್ನು ತೊರೆಯುವುದು - ಅನ್ನುವುದಕ್ಕೆ ಆರೋಪಿಸಬಹುದೆ ? ಪಿತೃಧರ್ಮ , ಮಾತೃಧರ್ಮ , ಪುತ್ರಧರ್ಮ , ಭ್ರಾತೃಧರ್ಮ , ಮಿತ್ರಧರ್ಮ , ರಾಷ್ಟ್ರಧರ್ಮ… , ಹೀಗೆ… , ಸಂದರ್ಭಕ್ಕೆ ಅನುಗುಣವಾಗಿ ...