ಪ್ರೇಮವೆಂದರೇ....!
ಪ್ರೇಮವೆಂದರೇ…!
“ಹೇರಿಕೆ ಯಾರು ಮಾಡುತ್ತಿರುವುದು ದೇವಿ? ಪ್ರಪಂಚದಮೇಲೆ ನಾನೋ ನನ್ನಮೇಲೆ ಪ್ರಪಂಚವೋ?” ಎಂದೆ.
ನಕ್ಕರು ದೇವಿ.
“ಅದೇನು ನಿನ್ನ ಗೊಂದಲ?” ಎಂದರು.
“ಧರ್ಮ ಅಂದರೇನು?”
“ಅದೆಷ್ಟು ಸಾರಿ ಹೇಳಬೇಕೋ…? ನೀನೇ ಅದೆಷ್ಟು ಸಾರಿ ಬರೆದಿದ್ದೀಯ…! ಪುನಃ ಗೊಂದಲವೇ?”
“ಗೊಂದಲವಲ್ಲ ದೇವಿ… ಹೊಸ ಹೊಸ ರೀತಿಯಲ್ಲಿ ಸಮರ್ಥಿಸಿಕೊಳ್ಳುವುದು! ಪ್ರಪಂಚ…, ಮತವೇ ಧರ್ಮ ಎಂದು ಪದೇ ಪದೇ ನನ್ನಮೇಲೆ ಹೇರುತ್ತಿದೆ! ಅದಕ್ಕೆ ಪರ್ಯಾಯವಾಗಿ…, ಅಲ್ಲ…, ಮತ ಬೇರೆ, ಧರ್ಮ ಬೇರೆ…, ಬ್ರಹ್ಮಾಂಡವನ್ನೇ ಒಳಗೊಳ್ಳುವ ವಿಶಾಲಾರ್ಥದ ಧರ್ಮವನ್ನು ಅತಿ ಸಂಕುಚಿತಾರ್ಥದ ಮತಕ್ಕೆ ಆರೋಪಿಸಿವುದು ತಪ್ಪು ಎಂದು ನಾನೂ ಪಟ್ಟು ಬಿಡದೆ ವಾದಿಸುತ್ತಿದ್ದೇನೆ- ಅಷ್ಟೆ!” ಎಂದೆ.
“ಸರಿ…, ಈಗ ಪಾಯಿಂಟ್‌ಗೆ ಬಾ!” ಎಂದರು ದೇವಿ.
ಮುಗುಳುನಕ್ಕು ತಲೆತಗ್ಗಿಸಿದೆ! ತೆಕ್ಕೆಯಗಲಿಸಿ ನನ್ನನ್ನು ತಮ್ಮೆದೆಗೆ ಆನಿಸಿಕೊಂಡರು ದೇವಿ.
“ಪ್ರೇಮ!
ಧರ್ಮವನ್ನೂ ಒಳಗೊಂಡು ಪೂರ್ತಿ ಬ್ರಹ್ಮಾಂಡವನ್ನೇ ತನ್ನೊಳಗೆ ಅಡಗಿಸುವಷ್ಟು ವಿಶಾಲವಾದ ಅರ್ಥವಿರುವ ಪ್ರೇಮವನ್ನು…, ಒಬ್ಬರಮೇಲೆ ನಮಗುಂಟಾಗುವ ಅನುರಾಗದ ಶ್ರೇಷ್ಠೆಯನ್ನು ತೋರಿಸಲು ಉಳಿದ ಎಲ್ಲವನ್ನು ತೊರೆಯುವುದು- ಅನ್ನುವುದಕ್ಕೆ ಆರೋಪಿಸಬಹುದೆ?
ಪಿತೃಧರ್ಮ, ಮಾತೃಧರ್ಮ, ಪುತ್ರಧರ್ಮ, ಭ್ರಾತೃಧರ್ಮ, ಮಿತ್ರಧರ್ಮ, ರಾಷ್ಟ್ರಧರ್ಮ…, ಹೀಗೆ…, ಸಂದರ್ಭಕ್ಕೆ ಅನುಗುಣವಾಗಿ ಆಚರಿಸಲೇ ಬೇಕಾದ ಕರ್ತವ್ಯವೇ ಮಾನವ ಧರ್ಮ! ಧರ್ಮದ ಮೂಲ ಪ್ರತಿಯೊಬ್ಬ ಮನುಷ್ಯನ ಮನಸ್ಸೇ ಹೊರತು ಯಾವನೋ ಒಬ್ಬನ ತುಮುಲಗಳನ್ನು ಹಿಂಬಾಲಿಸುವುದಲ್ಲ!
ಹಾಗೆಯೇ…,
ಬ್ರಾಹ್ಮೀಮುಹೂರ್ತಕ್ಕೆ ಎದ್ದು…, ಪಕ್ಷಿಗಳ ಕಲರವದಮಧ್ಯೆ…, ಪೂರ್ವದಂಚಿನಲ್ಲಿ ಮೂಡುವ ಬೆಳ್ಳಿರೇಖೆಯನ್ನು ನೋಡುತ್ತಾ…, ಮನಸ್ಸಿನಲ್ಲಿ ಗಾಯತ್ರೀಮಂತ್ರವನ್ನು ಜಪಿಸಿ…, ಸೂರ್ಯನ ಒಂದೊಂದೇ ಹೆಸರುಗಳನ್ನು ಹೇಳುತ್ತಾ ಸೂರ್ಯನಮಸ್ಕಾರವನ್ನು ಮಾಡಿ ಅವನಿಗೆ ಸ್ವಾಗತವನ್ನು ಕೋರುತ್ತಾ…, ಮನಸ್ಸು ಮತ್ತು ಶರೀರದ ಆರೋಗ್ಯವನ್ನು ಜೋಪಾನ ಮಾಡಿಕೊಳ್ಳುವುದು- ನನಗೆ ನನ್ನಮೇಲಿನ ಪ್ರೇಮ! ಬಾಡಲು ಬಿಡದೆ ಹೂಗಿಡಗಳಿಗೆ ನೀರನ್ನು ಹಾಕುವಂತೆ ಪ್ರೇರೇಪಿಸುವುದು- ಅವುಗಳಮೇಲಿನ ಪ್ರೇಮ! ಹಾಗೆಯೇ…, ಮಾತೃಪ್ರೇಮ, ಪಿತೃಪ್ರೇಮ, ಅಕ್ಕತಮ್ಮಂದಿರನಡುವೆ ಭ್ರಾತೃಪ್ರೇಮ, “ಎಷ್ಟೊತ್ತಿಗೆ ಸಿಗ್ತೀಯೋ?” ಎನ್ನುವ ಮಿತ್ರಪ್ರೇಮ…., ಪ್ರೇಮಕ್ಕೆ ಎಲ್ಲೆಯೇ…?
ಒಟ್ಟು ಪ್ರಪಂಚದಮೇಲೆ ನಮ್ಮೊಳಗೆ ಮೂಡುವ ಒಂದುರೀತಿಯ ಪಾಸಿಟಿವ್ ಎನರ್ಜಿಯನ್ನು ಪ್ರೇಮ ಅನ್ನಬಹುದು! ಅದೊಂದು ಭಾವ, ಅನುಭೂತಿ, ನಮ್ಮೊಳಗೆ ಮೂಡಿದರೂ ವ್ಯಕ್ತಪಡಿಸಲಾಗದ ಅವ್ಯಕ್ತ ಆನಂದ! ಪ್ರೇಮ ಯಾವುದನ್ನೂ ಡಿಪೆಂಡ್ ಆಗಿಲ್ಲ. ಪ್ರೇಮಕ್ಕೆ ಯಾವ ನಿರೀಕ್ಷೆಯೂ ಇಲ್ಲ! ಅದೊಂದು ಅವ್ಯಾಹತವಾಗಿ ಹರಿಯುವ ಅಂತರ್ಜಲ! ಮಹಾಸಮುದ್ರ!
ಆದರೆ ಪ್ರಪಂಚ ನನ್ನಮೇಲೆ ಹೇರುತ್ತಿರುವುದು ಏನು?
ಒಬ್ಬಳಮೇಲೆ ನನಗುಂಟಾಗುವ ಅನುರಾಗವನ್ನು ಪ್ರೂಮಾಡಲು…, ಒಟ್ಟು ಪ್ರಪಂಚದಮೇಲೆ ನನಗಿರುವ ಭಾವ ಸುಳ್ಳು ಎಂದು ಸ್ಥಾಪಿಸುವುದು ಪ್ರೇಮವಂತೆ!
ಅವಳಿಂದ ಒಂದು ಚೂರು ವ್ಯತಿಚಲಿಸಿದರೂ…, ಅವಳಿಗೆ ದುಃಖವಂತೆ! ಅವಳಿಗೆ ದುಃಖಕೊಡುವುದು ಪಾಪವಂತೆ! ಅವಳಮೇಲೆ ನನಗಿರುವುದು ಪ್ರೇಮ- ಆ ಪ್ರೇಮವನ್ನು ಉಳಿಸಲು ಉಳಿದವುಗಳಮೇಲಿನ ಆಸಕ್ತಿ ಕಳೆದುಕೊಳ್ಳುವುದು ನಿಜವಾದ ಪ್ರೇಮ- ಅಂತೆ!
ಒಪ್ಪಬಹುದೆ?
ನಿಜವೇ…! ಪ್ರಕೃತಿಯ ವಿರುದ್ಧವೇ ಸಮರ ಸಾರಿರುವ ಕಾಲವಿದು!
ಗಂಡು ಗಂಡಿನ ನಡುವೆ ಕಾಮ! ಹೆಣ್ಣು ಹೆಣ್ಣಿನ ನಡುವೆ ಕಾಮ!
ಹೌದು ಮಾಡುತ್ತೇವೆ- ಏನೀಗ? ಅನ್ನುವವರ ವಿರುದ್ಧ ನನ್ನ ವ್ಯಾಖ್ಯಾನ!!
ನನಗೆ ಎಲ್ಲದರಮೇಲೂ, ಎಲ್ಲರಮೇಲೂ ಪ್ರೇಮ- ಅನ್ನುವುದು ಸುಳ್ಳು!
ಒಬ್ಬಳಿ/ನಿಗೆ ಒಬ್ಬನ/ಳಮೇಲೆ ಉಂಟಾಗುವ ಅನುರಾಗ ಮಾತ್ರ ಪ್ರೇಮ…, ಒಬ್ಬವ್ಯಕ್ತಿಯ ಕಲ್ಪನೆಯಂತೆ ರೂಪುಗೊಂಡ ಕೇವಲ ಮತದಂತೆ- ಅನ್ನವುದು ನಿಜ!
ಸಮಸ್ಯೆ ಏನು ಗೊತ್ತೇ ದೇವಿ?
ಓ…, ಮಿತ್ರಪ್ರೇಮ ಅಂದ ತಕ್ಷಣ ನಿನ್ನ ಗೆಳೆಯನೊಂದಿಗೆ ಸೆಕ್ಸ್ ಮಾಡಿಬಿಡುತ್ತೀಯ? ಅನ್ನುವ ಪ್ರಶ್ನೆ!
ಇದು ಯಾವ ವಾದ ದೇವಿ?
ಸುಖ ಪ್ರೇರಿತವಾದ, ಪ್ರಕೃತಿಯ ನಿಯಮಕ್ಕೆ ಬದ್ಧವಾದ, ವೈಯುಕ್ತಿಕ ಇಚ್ಛೆಯಾದ ಕಾಮಕ್ಕೂ…, ಎಲ್ಲೆಯೇ ಇಲ್ಲದ ಪ್ರೇಮಕ್ಕೂ ಯಾವ ಹೋಲಿಕೆಯೋ ತಿಳಿಯುವುದಿಲ್ಲ!
ಇದನ್ನು ಹೇಳಿದರೆ…, ನೀನು ಹೇಳುವುದನ್ನು ಪ್ರಪಂಚ ತೆಗೆದುಕೊಳ್ಳುವುದೇ ಹಾಗೆ- ಅನ್ನುತ್ತದೆ ಪ್ರಪಂಚ!
ಹಾಗೆಂದು ನಾನೂ ಪ್ರಪಂಚದಂತೆ ಬದಲಾಗಲೇ?
ಗಂಡು ಹೆಣ್ಣು…, ಅವರೊಳಗಿನ ಅನುರಾಗ, ಅವರೊಳಗಿನ ನಂಬಿಕೆ, ಅವರೊಳಗಿನ ಆಸೆ, ಅವರೊಳಗಿನ ಪರಸ್ಪರ ಧಾರಣೆ- ಅಂದರೆ ಅಂಡರ್‌ಸ್ಟ್ಯಾಂಡಿಂಗ್…, ಬೇಕೋ ಬೇಡವೋ ಎಂದು ಅವರು ತೆಗೆದುಕೊಳ್ಳುವ ತೀರ್ಮಾನದ ಫಲ ಕಾಮವೇ ಹೊರತು ಪ್ರೇಮಕ್ಕೂ ಕಾಮಕ್ಕೂ ಯಾವುದೇ ಸಂಬಂಧವಿಲ್ಲ!
ನೀನೆಂದರೆ ನನಗೆ ಇಷ್ಟ…, ನಿನ್ನಮೇಲೆ ನನಗೆ ಪ್ರೇಮವುಂಟಾಗಿದೆಯೆಂದರೆ ಅರ್ಥ…, ನಿನ್ನೊಂದಿಗೆ ನನಗೆ ಸೆಕ್ಸ್‌ಬೇಕು ಎಂದು ಅಲ್ಲ- ಅನ್ನುವ ಅರಿವು ಮೂಡಿದ ದಿನ…, ಮತಕ್ಕೂ- ಧರ್ಮಕ್ಕೂ ನಡುವಿನ ವ್ಯತ್ಯಾಸದ ಅರಿವೂ ಮೂಡುತ್ತದೆ!
ಧೂಮಪಾನ, ಮಧ್ಯಪಾನದಂತೆ ಪ್ರೇಮವೂ ಒಂದು ವ್ಯಸನ ಎಂದು ಸಾಬೀತು ಮಾಡುತ್ತಿರು ಕಾಲದಲ್ಲಿ…,
ಪ್ರೇಮವೊಂದು ಧ್ಯಾನ, ಪ್ರೇಮವೊಂದು ತಪಸ್ಸು ಎಂದು ಸಾಬೀತು ಮಾಡಲು ಶ್ರಮಿಸುತ್ತಿರುವ ನಾನೊಬ್ಬ ಹುಚ್ಚನೇ ಸರಿ!”
“ಪ್ರಪಂಚದಲ್ಲಿ ಸಂತೋಷದಿಂದಿರುವವರೆಲ್ಲರೂ ಹುಚ್ಚರೋ ಪುತ್ರ! ನೀನವರ ನಾಯಕ!” ಎಂದು ಹೇಳಿ ಮತ್ತಷ್ಟು ಒಳಕ್ಕೆ ಒತ್ತಿಕೊಂಡರು ದೇವಿ!
ಮತಕ್ಕೂ, ಧರ್ಮಕ್ಕೂ,ಪ್ರೇಮಕ್ಕೂ,ಏನು ಸಂಬಂಧ.ಪ್ರೇಮ ಧರ್ಮದ ಮೇಲೆ ನಿಂತಿದೆ ಮತದ ಮೇಲೆ ಅಲ್ಲ ಅಂತ ನಿಮಗೂ ಗೊತ್ತಲ್ಲವ.ಪ್ರೇಮ ಪ್ರೇಮವೇ ಜೀವ ವಿರುವ ಯಾವುದೇ ಜೀವಿಯ ಮೇಲೆ ಉಂಟಾಗಬಹುದುಪ್ರೇಮ ಅವರ ಭಾವಕ್ಕನುಗುಣವಾಗಿ ಪ್ರೇಮ ಇಂತದ್ದು ಅಂತ ಬಿಂಬಿಸಲ್ಪಡುತ್ತದೆ ಅಷ್ಟೇ ಅಲ್ವಾ. ಕೆಲವಕ್ಕೆ ಪ್ರಚೋದನೆ ಇರುತ್ತೆ ಕೆಲವಕ್ಕೆ ಇರಲ್ಲ ಅಷ್ಟೇ ಅಲ್ವ ಬರೀತೀರಪ್ಮ ಕಥೆಯಲ್ಲಿ ಸತಿ ಪ್ರೇಮ ಮಿಸ್ ಮಾಡಿದ್ದೂ ಯಾಕೋ ಪಿತೃಧರ್ಮ, ಮಾತೃಧರ್ಮ, ಪುತ್ರಧರ್ಮ, ಭ್ರಾತೃಧರ್ಮ, ಮಿತ್ರಧರ್ಮ, ರಾಷ್ಟ್ರಧರ್ಮ…, ಹೀಗೆ ಈ ಪ್ರೇಮಗಳೇನ ಇರೋದು ಬೇರೆ ಇಲ್ವಾ
ReplyDeleteಈ ಪ್ರೇಮದಲ್ಲಿ ಸೃಷ್ಟಿ ರಚನೆಯಾಗುತ್ತ ಮಿತ್ರ
ಇದು ಎಲ್ಲ ನಿಂತಿರೋದು ಸತಿ ಪ್ರೇಮದ ಧರ್ಮದ ಮೇಲೆ ಇದು ಇಲ್ಲ ಅಂದರೆ ಅದು ಯಾವುದು ಇಲ್ಲ.
ಸತಿ ಇಲ್ಲದೆ ಪುತ್ರಿ ಪ್ರೇಮ ಪುತ್ರ ಪ್ರೇಮ ಹೇಗೆ ಬಿಂಬಿತ ವಾಗುತ್ತೆ ಮಾತೃ ಪ್ರೇಮ ಪಿತೃ ಪ್ರೇಮ ಹೇಗೆ ಬಿಂಬಿತ ವಾಗುತ್ತೆ?