ನವರಸಗಳೆಂದರೇ...
ನನ್ನನ್ನೇ ನೋಡುತ್ತಿರುವ ಅವಳನ್ನು ಕಂಡು ಗೊಂದಲಗೊಂಡೆ . ಅಪರಿಚಿತೆ . ನೋಟದಲ್ಲಿ ಪರಿಚಯವಾಗಲಿ , ಅಪರಿಚಿತತೆಯಾಗಲಿ ಇಲ್ಲ . ಆದರೂ ನೋಡುತ್ತಿದ್ದಾಳೆ . ಯಾಕೆ ? ಗೊಂದಲಗೊಂಡೆ . ನೋಡುತ್ತಿರುವುದು ನನ್ನನ್ನೋ ಅಥವಾ - ಅನ್ನುವಂತೆ ಸೂಕ್ಷ್ಮವಾಗಿ ನೋಡಿದೆ . ಮುಗುಳುನಕ್ಕಳು . ಹಾಗಿದ್ದರೆ ಪರಿಚಿತೆಯೇ ಇರಬೇಕು . ನಾನು ಮರೆತಿರಬೇಕು . “ ದೇವೀಪುತ್ರ ಅಲ್ವಾ ?” ಎಂದಳು . ಆಶ್ಚರ್ಯವಾಯಿತು . ನನ್ನ ಕಣ್ಣಿನಲ್ಲಿನ ಗೊಂದಲವನ್ನು ಕಂಡುಕೊಂಡಳು . “ ನಿಮಗೆ ನನ್ನ ಪರಿಚಯ ಇಲ್ಲ . ನನಗೆ ನಿಮ್ಮ ಪರಿಚಯ ಇದೆ !” ಎಂದಳು . “ ಹೇಗೆ ?” ಎಂದೆ . “ ನಿಮ್ಮ ಕಥೆಗಳನ್ನು ಓದಿ !” ಎಂದಳು . ಸಣ್ಣ ಅಹಂ ಮನವನ್ನು ಪ್ರವೇಶಿಸಿತು . ನನ್ನ ನೋಟದ ವಿಧಾನ ಬದಲಾಯಿತು . ನಾನೇನೂ ಅವಳನ್ನು ಒಲಿಸಿಕೊಳ್ಳುವುದು ಬೇಕಿಲ್ಲ - ನನ್ನ ಕಥೆಗಳನ್ನು ಓದಿ ಇಂಪ್ರೆಸ್ ಆಗಿದ್ದಾಳೆ ಅನ್ನುವ - ಅಹಂ ! ನನ್ನ ನೋಟದ , ದೇಹಚಲನೆಯ " ಭಾಷೆ " ಬದಲಾಗಿದ್ದು ಅವಳ ಅರಿವಿಗೆ ಬಂತು . ಆದರೆ ಅವಳ ಭಾವವೋ ಉದ್ದೇಶವೋ ನನಗೆ ಹೊಳೆಯಲೇ ಇಲ್ಲ . “ ಹೆಂಗಸರೆಂದರೆ ತುಂಬಾ ಹಗುರವಾದ ಅಭಿಪ್ರಾಯ ಇರುವಂತಿದೆ ?” ಎಂದಳು . ಇದಕ್ಕಿಂತ ಏಟು ಏನು ಬೇಕು ? ಭಾವನೆಗಳನ್ನು ಕಂಡುಕೊಳ್ಳುವುದರಲ್ಲಿ ನಾನೇ ಶ್ರೇಷ್ಠನೆಂದು - ಅಂದುಕೊಂಡಿರುವಾಗ… ? “ ಇಲ್ಲ… , ನನ್ನ ಹೆಸರು ದೇವೀಪುತ್ರ ! ಅದು ಅ - ನು - ಸ - ರ - ಣೆ - ಯ ಸಂಕೇತವೇ ಹೊರತು ಅಧಿಕಾರದ್ದಲ್ಲ !” ಎಂದೆ . “ ಹಾಗಿದ್ದರ...