ನವರಸಗಳೆಂದರೇ...
ನನ್ನನ್ನೇ ನೋಡುತ್ತಿರುವ ಅವಳನ್ನು ಕಂಡು ಗೊಂದಲಗೊಂಡೆ. ಅಪರಿಚಿತೆ. ನೋಟದಲ್ಲಿ ಪರಿಚಯವಾಗಲಿ, ಅಪರಿಚಿತತೆಯಾಗಲಿ ಇಲ್ಲ. ಆದರೂ ನೋಡುತ್ತಿದ್ದಾಳೆ. ಯಾಕೆ?
ಗೊಂದಲಗೊಂಡೆ. ನೋಡುತ್ತಿರುವುದು ನನ್ನನ್ನೋ ಅಥವಾ- ಅನ್ನುವಂತೆ ಸೂಕ್ಷ್ಮವಾಗಿ ನೋಡಿದೆ.
ಮುಗುಳುನಕ್ಕಳು. ಹಾಗಿದ್ದರೆ ಪರಿಚಿತೆಯೇ ಇರಬೇಕು. ನಾನು ಮರೆತಿರಬೇಕು.
“ದೇವೀಪುತ್ರ ಅಲ್ವಾ?” ಎಂದಳು.
ಆಶ್ಚರ್ಯವಾಯಿತು. ನನ್ನ ಕಣ್ಣಿನಲ್ಲಿನ ಗೊಂದಲವನ್ನು ಕಂಡುಕೊಂಡಳು.
“ನಿಮಗೆ ನನ್ನ ಪರಿಚಯ ಇಲ್ಲ. ನನಗೆ ನಿಮ್ಮ ಪರಿಚಯ ಇದೆ!” ಎಂದಳು.
“ಹೇಗೆ?” ಎಂದೆ.
“ನಿಮ್ಮ ಕಥೆಗಳನ್ನು ಓದಿ!” ಎಂದಳು.
ಸಣ್ಣ ಅಹಂ ಮನವನ್ನು ಪ್ರವೇಶಿಸಿತು. ನನ್ನ ನೋಟದ ವಿಧಾನ ಬದಲಾಯಿತು. ನಾನೇನೂ ಅವಳನ್ನು ಒಲಿಸಿಕೊಳ್ಳುವುದು ಬೇಕಿಲ್ಲ- ನನ್ನ ಕಥೆಗಳನ್ನು ಓದಿ ಇಂಪ್ರೆಸ್ ಆಗಿದ್ದಾಳೆ ಅನ್ನುವ- ಅಹಂ!
ನನ್ನ ನೋಟದ, ದೇಹಚಲನೆಯ "ಭಾಷೆ" ಬದಲಾಗಿದ್ದು ಅವಳ ಅರಿವಿಗೆ ಬಂತು. ಆದರೆ ಅವಳ ಭಾವವೋ ಉದ್ದೇಶವೋ ನನಗೆ ಹೊಳೆಯಲೇ ಇಲ್ಲ.
“ಹೆಂಗಸರೆಂದರೆ ತುಂಬಾ ಹಗುರವಾದ ಅಭಿಪ್ರಾಯ ಇರುವಂತಿದೆ?” ಎಂದಳು.
ಇದಕ್ಕಿಂತ ಏಟು ಏನು ಬೇಕು? ಭಾವನೆಗಳನ್ನು ಕಂಡುಕೊಳ್ಳುವುದರಲ್ಲಿ ನಾನೇ ಶ್ರೇಷ್ಠನೆಂದು- ಅಂದುಕೊಂಡಿರುವಾಗ…?
“ಇಲ್ಲ…, ನನ್ನ ಹೆಸರು ದೇವೀಪುತ್ರ! ಅದು ಅ-ನು-ಸ-ರ-ಣೆ-ಯ ಸಂಕೇತವೇ ಹೊರತು ಅಧಿಕಾರದ್ದಲ್ಲ!” ಎಂದೆ.
“ಹಾಗಿದ್ದರೆ…, ನಿಮ್ಮ ಕಣ್ಣಿನಲ್ಲಿ ಮಿಂಚಿ ಮರೆಯಾದ ಭಾವ…?” ಎಂದಳು.
“ಅದನ್ನು ಹೇಗೆ ವಿವರಿಸಲಿ…?” ಎಂದು ನಿಲ್ಲಿಸಿ, ದೀರ್ಘವಾದ ನಿಟ್ಟುಸಿರೊಂದನ್ನು ಬಿಟ್ಟು ಹೇಳಿದೆ,
“ಅದು ಅಹಂಕಾರವೇ! ಆದರೆ ನೀವಂದುಕೊಂಡಂತಾ ಅಹಂಕಾರವಲ್ಲ!” ಎಂದು ನಿಲ್ಲಿಸಿ ಅವಳ ಕಣ್ಣನ್ನೇ ನೋಡುತ್ತಾ, ಜೊತೆಗೆ, ಮನದೊಳಗೆ ವಿಷಯನ್ನು ಕಲೆ ಹಾಕುತ್ತಾ ನಿಧಾನವಾಗಿ ಹೇಳಿದೆ…,
“ಪ್ರತಿ ಹೆಣ್ಣನ್ನು ನೋಡಿದಾಗಲೂ ನನ್ನ ಕಿಬ್ಬೊಟ್ಟೆಯಿಂದ ಪುಳಕವೊಂದು ದೇಹದ ಪೂರ್ತಿ ವ್ಯಾಪಿಸುತ್ತದೆ. ಅದರಲ್ಲಿ ಕೆಲವರನ್ನು ನೋಡಿದಾಗಲಂತೂ ಒಂದು ರೀತಿಯ ಆರಾಧನಾಭಾವ ಮೂಡುತ್ತದೆ. ಅವರನ್ನು ಒಲಿಸಿಕೊಳ್ಳಬೇಕು- ಅವರ ದಾಸನಾಗಬೇಕೆಂಬ ಭಾವ! ಆದರೆ ನನ್ನ ಭಕ್ತಿ ಎಲ್ಲಿ ಅವರಿಗೆ ಅರಿವಾಗುವುದಿಲ್ಲವೋ ಅನ್ನುವ ಹೆದರಿಕೆ ಇದ್ದೇ ಇರುತ್ತದೆ. ನಿಮಗೆ ನನ್ನ ಪರಿಚಯವಿದೆ- ನನ್ನ ಕಥೆಗಳನ್ನು ಓದಿದ್ದೀರೆಂದು ಹೇಳಿದಾಗ…, ಅದೊಂದು ಅಹಂಕಾರವೇ ಅಲ್ಲವಾ…? ನಾನು ದಾಸ ಅನ್ನುವುದು ನಿಮಗೆ ಅರಿವಾಗಿದೆ- ಹೆಚ್ಚು ವಿವರಣೆ ಕೊಡಬೇಕಾಗಿಲ್ಲ, ತಪ್ಪು ತಿಳಿಯದೆ ನನ್ನನ್ನು ಅರ್ಥಮಾಡಿಕೊಳ್ಳುತ್ತೀರ- ಅನ್ನುವ ಭಾವ?” ಎಂದೆ.
ಅವಳು ನನ್ನನ್ನೇ ನೋಡುತ್ತಿದ್ದಳು. ನನ್ನ ನೋಟ, ಭಾವ- ಅರ್ಥವಾದಷ್ಟು ಬೇಗ ಅವಳಿಗೆ ನನ್ನ ಮಾತುಗಳು ಅರ್ಥವಾಗಲಿಲ್ಲ.
ಅಹಂ ಅಂದಕೂಡಲೇ ಎಲ್ಲರ ಮನದಲ್ಲಿ ಮೂಡುವುದೇ ಅದು…!
ನಾನೇನೂ ಅವಳನ್ನು ಒಲಿಸಿಕೊಳ್ಳುವುದು ಬೇಕಿಲ್ಲ ಅಂದರೆ…, ಅವಳೇ ನನ್ನ ವಶವಾಗುತ್ತಾಳೆ, ಅವಳನ್ನು ನಾನು "ಆಳುವಂತೆ" ಗುಲಾಮಳಾಗುತ್ತಾಳೆ, ನಾನಾಗಿ ಒಲಿಸಿಕೊಳ್ಳಬೇಕಿಲ್ಲ- ಅವಳೇ ಒಲಿಯುತ್ತಾಳೆ…, ಅನ್ನುವಂತೆ!
ಆದರೆ ಅದಲ್ಲ. ಕೆಲವೊಮ್ಮೆ ಅಹಂ ಅಂದರೆ…,
ನಾನು ಅವಳಿಗೆ ರೆಸ್ಪೆಕ್ಟ್ ಕೊಡುತ್ತೇನೆ ಅನ್ನುವ ಭಾವ ಅವಳಿಗೆ ಅರ್ಥವಾಗಿದೆ- ಅನ್ನುವಂತೆಯೂ ಆಗುತ್ತದೆ.
ನಾನು ಯೋಚನೆಯಲ್ಲಿರುವುದನ್ನು ಕಂಡು…, ನಾನು ಹೇಳಿದ್ದು ಅರ್ಥವಾಗಲಿಲ್ಲ ಅನ್ನುವುದನ್ನು ಒಪ್ಪುವಂತೆ…, ನಕ್ಕು ಹೇಳಿದಳು…,
“ಸುಮ್ಮನೆ ಅಲ್ಲ ನಿಮ್ಮ ಬರಹಗಳನ್ನು ಓದಿದವರು ನೀವು ಅಷ್ಟು ಸುಲಭದಲ್ಲಿ ಅರ್ಥವಾಗುವುದಿಲ್ಲ ಅನ್ನುವುದು!”
ಎಷ್ಟು ಬೇಗ ಪಾತ್ರಗಳು ಅದಲುಬದಲಾದವು! ಕಂಡ ಕ್ಷಣ- ಅವಳಿಗೆ ನಾನು ಅರ್ಥವಾದಂತೆ ನನಗೆ ಅವಳು ಅರ್ಥವಾಗಲಿಲ್ಲ ಅನ್ನುವ ಭಾವ ಬಂತು. ಆದರೆ ಅವಳು ಹೇಳುತ್ತಿದ್ದಾಳೆ- ನಾನು ಅರ್ಥವಾಗಲಿಲ್ಲವೆಂದು!
“ನಾನು ನಿಮ್ಮ ಮುಖದಲ್ಲಿ ನಿಮ್ಮನ್ನು ಹುಡುಕಿದೆ- ಸಿಗಲಿಲ್ಲ! ನೀವು ನನ್ನ ಕಥೆಗಳಲ್ಲಿ ಹುಡುಕುತ್ತಿದ್ದೀರಿ!” ಎಂದೆ. ಮುಗುಳುನಕ್ಕಳು. ಏನೂ ಮಾತನಾಡಲಿಲ್ಲ.
“ಹೇಳಿ…, ಕಥೆಗಳನ್ನು ಓದಿ ಏನನ್ನಿಸಿತು?” ಎಂದು ಕೇಳಿದೆ.
“ಅರ್ಥವಾದರೆ ತಾನೆ ಏನಾದರೂ ಅನ್ನಿಸುವುದು!” ಎಂದು ಹೇಳಿ ನನ್ನ ಮುಖವನ್ನು ನೋಡಿ ಏನಂದುಕೊಂಡಳೋ ಏನೋ…,
“ಕ್ಷಮಿಸಿ, ನಾನು ಹೇಳಿದ್ದರ ಅರ್ಥ ನಿಮ್ಮ ಕಥೆ ಅರ್ಥವೇ ಆಗುವುದಿಲ್ಲವೆಂದೋ, ನಿಮ್ಮ ಕಥೆಯಲ್ಲಿ ಅರ್ಥವಿಲ್ಲವೆಂದೋ ಅಲ್ಲ! ಅರ್ಥಮಾಡಿಕೊಳ್ಳಲು ಕಷ್ಟ- ಎಂದು. ತುಂಬಾ ತಾಳ್ಮೆ ಮತ್ತು ಸಹನೆಯನ್ನು ಕೇಳುವ ಕಥೆಗಳು!” ಎಂದಳು.
“ಈಗ ಇದನ್ನು ಹೇಗೆ ತೆಗೆದುಕೊಳ್ಳಲಿ? ಹೊಗಳಿಕೆಯಾಗಿಯೋ ತೆಗಳಿಕೆಯಾಗಿಯೋ?” ಎಂದೆ.
“ನಿಮ್ಮಿಷ್ಟ!” ಎಂದು ಹೇಳಿ ಹೊರಡಲನುವಾದಳು.
“ನೀವು ಡಾನ್ಸರ್‌ಆ?” ಎಂದೆ. ನಿಂತು, ನನ್ನ ಮುಖವನ್ನು ಸೂಕ್ಷ್ಮವಾಗಿ ನೊಡಿ ಮುಗುಳುನಕ್ಕು…,
“ಹೌದು…, ಕ್ಲಾಸಿಕಲ್ ಡಾನ್ಸರ್!” ಎಂದಳು.
“ಕ್ಲಾಸಿಕಲ್ ಅಂದರೆ…? ಭರತನಾಟ್ಯವಾ?” ಎಂದೆ.
ಹೌದೆನ್ನುವಂತೆ ತಲೆಯಾಡಿಸಿ ತಿರುಗಿ ನಡೆದ ಅವಳನ್ನು ಉದ್ದೇಶಿಸಿ ಹೇಳಿದೆ…,
“ನಿಮ್ಮ ಮುಖಭಾವ ನನಗೆ ಯಾಕೆ ಅರ್ಥವಾಗಲಿಲ್ಲವೆಂದರೆ…, ನಾನು ನನ್ನ ಮನದಂತೆ ನಿಮ್ಮ ಮುಖದಲ್ಲಿ ಅರ್ಥವನ್ನು ಹುಡುಕಲಿಲ್ಲ!”
ನಿಂತಳು. ತಿರುಗಿ ನೋಡಿದಳು. ಮುಂದುವರೆಸಿದೆ…,
“ನಿಮಗೆ ನನ್ನ ಮುಖಭಾವ ಯಾಕೆ ಅರ್ಥವಾಯಿತೆಂದರೆ- ಅರ್ಥವಾಯಿತು ಅನ್ನಿಸಿತೆಂದರೆ…, ಹಲವು ಗಂಡಸರು ನಿಮ್ಮೊಂದಿಗೆ ನಡೆದುಕೊಂಡ ರೀತಿಯ ಅನುಭವದಿಂದ, ನಾನೂ ಕೂಡ ಅದೇ ದೃಷ್ಟಿಯಿಂದ ನಿಮ್ಮನ್ನು ನೋಡುತ್ತಿದ್ದೇನೆಂಬ ನಿಮ್ಮ ಪೂರ್ವಾದೃಷ್ಟಿಯಿಂದ!” ಎಂದೆ.
“ಅದಕ್ಕೆ ನಾನು…, ನೀವು ನನಗೆ ಅರ್ಥವಾದಿರಿ ಎಂದು ಹೇಳಲೇ ಇಲ್ಲವಲ್ಲ? ನಿಮ್ಮ ಬರಹಗಳು ಅರ್ಥವಾಗುವುದಿಲ್ಲ ಎಂದು ತಾನೆ ಹೇಳಿದ್ದು?!” ಎಂದಳು. ನಾನು ಮುಗುಳುನಕ್ಕು…,
“ನನ್ನ ನೋಟವನ್ನು ಕಂಡು…, “ಹೆಂಗಸರೆಂದರೆ ತುಂಬಾ ಹಗುರವಾದ ಅಭಿಪ್ರಾಯ ಇರುವಂತಿದೆ” ಎಂದಿದ್ದಿರಿ!” ಎಂದು ಹೇಳಿ…,
“ಎನಿ-ವೇ…, ನಿಮ್ಮನ್ನು ಪರಿಚಯವಾಗಿದ್ದು ತುಂಬಾ ಖುಷಿಯಾಯಿತು. ಅಪರೂಪದ ಹೆಣ್ಣು ನೀವು!” ಎಂದು ಪೂರ್ತಿಮಾಡಿದೆ.
ಇಬ್ಬರೂ ಪರಸ್ಪರ ವಿರುದ್ಧ ದಿಕ್ಕಿಗೆ ಹೊರಟುಹೋದೆವು.
*
“ಅವಳನ್ನು ಕಂಡಾಗಿನಿಂದ ಭಾರಿ ಗೊಂದಲ ದೇವಿ!” ಎಂದೆ.
“ಯಾರನ್ನು ಕಂಡಾಗ ನಿನಗೆ ಗೊಂದಲವಾಗುವುದಿಲ್ಲ?” ಎಂದರು ದೇವಿ.
“ಇದು ಹಾಗಲ್ಲ!”
“ಹಾಗಲ್ಲ ಅಂದ್ರೆ?”
“ಉಳಿದವರೊಂದಿಗೆ ನಾನಿರುವಂತೆ ನನ್ನೊಂದಿಗೆ ನೀವಾ?” ಎಂದೆ- ಅಸಹನೆಯಿಂದ.
“ಅದು- ಉಳಿದವರೊಂದಿಗೆ ನೀನಿರುವಂತೆ ನಿನ್ನೊಂದಿಗೆ ನಾನಲ್ಲ! ನಿನ್ನೊಂದಿಗೆ ನಾನಿರುವಂತೆ ಉಳಿದವರೊಂದಿಗೆ ನೀನು!” ಎಂದರು.
“ದೇವೀಪುತ್ರ ನೀನು- ಅಂತ! ಈಗೇನು…? ಗೊಂದಲ ಪರಿಹರಿಸುತ್ತೀರೋ ಇಲ್ಲ ಹೀಗೇ ತಾತ್ಸರ ಮಾಡುತ್ತಿರುತ್ತೀರೋ?”
“ಹೇಳು ಅದೇನು ಗೊಂದಲ?”
“ಅವಳನ್ನು ಕಂಡಾಗ, ಭೇಟಿಯಾಗಿ ಮಾತನಾಡಿದಾಗ…, ಅವಳ ಮುಖದಲ್ಲಿದ್ದ ಭಾವವೇನು ದೇವಿ?”
“ಇದು ಯಾವ ರೀತಿಯ ಕುತೂಹಲ ಪುತ್ರ? ಪ್ರತಿಯೊಬ್ಬರನ್ನು ಭೇಟಿಯಾದಾಗಲೂ ಅವರ ಮುಖಭಾವಕ್ಕೆ ಅರ್ಥ ಹುಡುಕುವವ…! ಇವಳದ್ದು ಮಾತ್ರ ಯಾಕೆ ಗೊಂದಲ ಹುಟ್ಟಿಸಿತು?”
“ಹೀಗೆ ಇರಬಹುದು…! ಎಲ್ಲರ ಮುಖದಲ್ಲಿನ ಭಾವದಂತೆ ಅವಳ ಮುಖದ ಭಾವವನ್ನೂ ಹುಡುಕಿರಬಹುದು ನಾನು! ಆದರೆ ಅವಳು ನಾಟ್ಯವಿಶಾರದೆ ಅನ್ನುವ ಕಾರಣಕ್ಕೆ- ಶಾಸ್ತ್ರೀಯವಾಗಿ ಮುಖಭಾವಗಳಬಗ್ಗೆ ತಿಳಿದುಕೊಳ್ಳಬೇಕು ಅನ್ನುವ ಕುತೂಹಲ ಹುಟ್ಟಿರಬಹುದು!” ಎಂದೆ.
“ನಿನ್ನ ಸ್ವ-ವಿಮರ್ಶೆಗೆ ನಾನೊಂದು ಹೇತು ಅನ್ನುವುದು ಬಿಟ್ಟರೆ…, ನಾನೆಂದಿಗೂ ನಿನಗೆ ನೇರವಾದ ಉತ್ತರವನ್ನು ಕೊಟ್ಟವಳಲ್ಲ! ಇಷ್ಟು ಹೇಳಬಲ್ಲೆ…, ಹೇಗೆ ಏಳು ಬಣ್ಣಗಳು ಸಾವಿರಾರು ಬಣ್ಣಗಳಿಗೆ ಮೂಲವೋ…, ಹಾಗೆ ಒಂಬತ್ತು ಭಾವಗಳು ನೂರಾರು ಭಾವಗಳಿಗೆ ಮೂಲವೇ ಹೊರತು ಇರುವುದೇ ಒಂಬತ್ತು ಭಾವಗಳಲ್ಲ!”
“ಅದೇ ಗೊಂದಲ! ನವಭಾವವೋ ನವರಸಗಳೋ…? ಏನದು?”
“ಭಾವಗಳು ಅಭಿನಯಕ್ಕೆ ಬಂದಾಗ- ಮುಖದಲ್ಲಿ ಪ್ರತಿಫಲಿಸಿದಾಗ ರಸಗಳು!” ಎಂದು ಹೇಳಿ ಮುಗುಳುನಕ್ಕರು ದೇವಿ.
ನನಗೂ ಮನದೊಳಗೆ ಏನೋ ಮಿಂಚು!
*
ಭರ್ಜರಿ ಮಳೆ. ಮಳೆಯಲ್ಲಿ ಗಂಡು ಹೆಣ್ಣು. ಹೆಣ್ಣಿನ ಬಟ್ಟೆಯೆಲ್ಲಾ ಮೈಗಂಟಿ…, ಅವಳನ್ನೇ ನೋಡುತ್ತಿರುವ ಗಂಡಿನ ಕಣ್ಣಿನಲ್ಲಿ ಆಸಕ್ತಿ. ಆ ಆಸಕ್ತಿಯನ್ನು ನೋಡಿ ಅವಳ ಕಣ್ಣಿನಲ್ಲಿಯೂ ಮಿಂಚು….!
ಇಲ್ಲಿ…, ಅವಳನ್ನು ನೋಡುತ್ತಿರುವ ಅವನ ಕಣ್ಣಿನ ಭಾವ "ಶೃಂಗಾರ"ವೋ…, ಅಥವಾ ಅವನ ಭಾವವನ್ನು ಅರ್ಥೈಸಿಕೊಂಡಾಗಿನ ಅವಳ ಭಾವ ಶೃಂಗಾರವೋ…, ಅಥವಾ ಅವರಲ್ಲಿ ಆಸಕ್ತಿ ಹುಟ್ಟಿಸಿದ ಆ ಸಂದರ್ಭ ಶೃಂಗಾರವೋ?
ಅಥವಾ…,
ಅವರನ್ನು ನೋಡುತ್ತಿರುವ ನನ್ನ ಭಾವ ಶೃಂಗಾರವೋ?
ಅಂದರೆ…,
ಕಾಮಕ್ಕಾಗಿನ ನನ್ನೊಳಗಿನ ಆಸಕ್ತಿ ನನ್ನ ಕಣ್ಣಿನಲ್ಲಿ ಪ್ರತಿಫಲಿಸುವುದು ಶೃಂಗಾರವೋ…, ಅಥವಾ ಆ ಕಾಮದ ಭಾವ ಮೂಡಲು ಉಂಟಾದ ಕಾರಣ ಅಥವಾ ಪ್ರೇರಣೆ- ಶೃಂಗಾರವೋ…?
ಹೆಣ್ಣೊಬ್ಬಳನ್ನು ಕಂಡೆ, ಅವಳ ಕಣ್ಣಿನಲ್ಲಿನ ಆಸಕ್ತಿಯ ಅರಿವಾಯಿತು, ಮುಂದುವರೆದೆ! ಇಲ್ಲಿ ಅವಳ ಕಣ್ಣಿನಲ್ಲಿ ಆಸಕ್ತಿಯಿದೆ ಅನ್ನುವುದು ನನ್ನೊಳಗಿನ ಭಾವವೋ…, ಅಥವಾ…, ನಿಜಕ್ಕೂ ಅವಳ ಕಣ್ಣಿನಲ್ಲಿ ಶೃಂಗಾರಾಹ್ವಾನದ ಭಾವವಿದೆಯೋ ಅನ್ನುವುದೇ ನನ್ನ ಗೊಂದಲ!
ಇನ್ನು "ಹಾಸ್ಯ"ದ ವಿಷಯಕ್ಕೆ ಬಂದರೆ…, ಮಳೆ ನೆನೆಯುತ್ತಾ ಶೃಂಗಾರ ಭಾವದಲ್ಲಿ ನಿಂತಿದ್ದ ಅವರನ್ನೇ ನೋಡುತ್ತಿದ್ದ ನಾನು ಕಾಲು ಜಾರಿ ಕೊಚ್ಚೆಯಲ್ಲಿ ಬಿದ್ದೆ! ಎದ್ದ ನನ್ನನ್ನು ನೋಡಿ ಆ ಇಬ್ಬರು ನಕ್ಕರು. ಇಲ್ಲಿ ಅವರ ನಗುವಿಗೆ ಕಾರಣನಾದ ನಾನು ಹಾಸ್ಯವೋ…, ನನ್ನನ್ನು ನೋಡಿ ಅವರ ಕಣ್ಣಿನಲ್ಲಿ ಉದಿಸಿದ ಭಾವ ಹಾಸ್ಯವೋ?
"ಕರುಣ"ವನ್ನು ವಿಮರ್ಶಿಸಿದರೆ ಉತ್ತರ ಇನ್ನೂ ಸ್ವಲ್ಪ ಸ್ಪಷ್ಟವಾಗಬಹುದೇನೋ…,
ಹರಿದ ಬಟ್ಟೆ, ಬಿಳುಚಿಕೊಂಡಿರುವ ಚರ್ಮ, ಮೂಳೆಗಳೆಲ್ಲಾ ಎದ್ದು ಕಾಣುತ್ತಿದ್ದು "ದಯನೀಯ"ವಾಗಿರುವ ಮಗುವೊಂದು ಭಿಕ್ಷೆಗಾಗಿ ಕೈನೀಡಿತು. ಆ ಮಗುವಿನ ಅವಸ್ತೆಯನ್ನು ಕಂಡು ಕರುಣೆಯಿಂದ ಹತ್ತು ರೂಪಾಯಿ ಕೊಟ್ಟೆ!
ಹೆಚ್ಚೂಕಮ್ಮಿ ಉತ್ತರ ಸ್ಪಷ್ಟ! ದೇವಿಯ ಮಾತಿನಂತೆ…, ನನ್ನೊಳಗಿನ ಭಾವ ನನ್ನ ಕಣ್ಣಿನಲ್ಲಿ ಪ್ರತಿಫಲಿಸುವುದು ರಸ! ಅಂದರೆ ಆ ಮಗುವಿನ ಅವಸ್ತೆಯನ್ನು ಕಂಡು ನನ್ನೊಳಗೆ ಮೂಡಿದ ಭಾವ ನನ್ನ ಕಣ್ಣಿನಲ್ಲಿ ಪ್ರತಿಫಲಿಸಿತಲ್ಲಾ ಅದುರಸ- ಕರುಣ ರಸ!
ಎಷ್ಟು ಬೇಗ ಕರುಣದಿಂದ "ರೌದ್ರ"ಕ್ಕೆ ಭಾವದ ಚಲನೆ!
ನನಗೆ ಗೊತ್ತು ನನ್ನಲ್ಲಿ ಭಿಕ್ಷೆಬೇಡಿದ ಆ ಮಗು ನಿಜಕ್ಕೂ ಭಿಕ್ಷುಕಿಯೇ…! ನನ್ನಿಂದ ಹತ್ತು ರೂಪಾಯಿ ಪಡೆದು, ಮಳೆಯಲ್ಲಿ ನಿಂತಿದ್ದ ಆ ಇಬ್ಬರಲ್ಲಿ ಕೈನೀಡಿದಾಗ…, ಗಂಡು ಆ ಮಗುವಿನ ಕೆನ್ನೆಗೆ ಹೊಡೆದರೆ ಸಹಿಸುತ್ತದೆಯೇ…? ಆಗ ನನ್ನಲ್ಲಿನ ಭಾವವೇನು? ಕೋಪ- ರೌದ್ರ!
ಪೆಟ್ಟು ತಿಂದರೂ ಹೋಗದೆ ಅವರನ್ನೇ ನೋಡುತ್ತಾ ನಿಂತ ಮಗುವಿಗೆ ಮತ್ತೊಂದು ಪೆಟ್ಟು ಬೀಳುವ ಮುಂಚೆ…, ಮುನ್ನುಗ್ಗಿ ಹೋಗಿ ಆ ವ್ಯಕ್ತಿಯನ್ನು ತಳ್ಳಿ- ಆತನ ಕಿವಿಯ ಕೆಳಗೊಂದು ಪೆಟ್ಟು ಕೊಟ್ಟು- ಆ ಮಗುವನ್ನು ಎತ್ತಿಕೊಂಡಾಗ…, ಆ ಮಗುವಿನ ಕಣ್ಣಿನಲ್ಲಿನ ಭಾವವೇನು?
ಇಲ್ಲಿ ಅವಳನ್ನು ಕಾಪಾಡಿದ ವೀರ ನಾನೇ! ಆದರೆ…, ಇನ್ನು ನಾನು ಸಂರಕ್ಷಿತೆ ನನಗೇನೂ ಆಗುವುದಿಲ್ಲ ಅನ್ನುವ ಅವಳಲ್ಲಿನ ನಂಬಿಕೆ- ಧೈರ್ಯದ ಪ್ರತಿಫಲನ "ವೀರ??”
ಇಲ್ಲ…! ಪ್ರತಿ ಭಾವಕ್ಕೂ ಒಂದೇ ದೃಷ್ಟಿಕೋನ ಸೆಟ್ ಆಗುವುದಿಲ್ಲ.
ಆತನಿಂದ ಮಗುವನ್ನು ಸಂರಕ್ಷಿಸಿ- ಮಗುವನ್ನು ನೋಡುವ ನನ್ನ ಭಾವವೂ ವೀರವೇ…, ಹೆದರಬೇಡ ನಾನಿದ್ದೇನೆ ಅನ್ನುವಂತೆ!
ಹಾಗೆಯೇ…, ಇನ್ನು ನನಗೆ ಹೆದರಿಕೆಯಿಲ್ಲ ಅನ್ನುವ ಅವಳ ಭಾವವೂ ವೀರವೇ!?
ಇನ್ನು…,
ಮಗುವನ್ನು ಕಾಪಾಡುವ ಭರದಲ್ಲಿ ನನ್ನಿಂದ ಪೆಟ್ಟುತಿಂದವನ ಮುಖದಲ್ಲಿನ ಭಾವ- "ಭಯಾನಕ?”
ಅವನ ಕಣ್ಣಿನ ಭಾವವೋ ಅಥವಾ ಆ ಭಾವಕ್ಕೆ ಕಾರಣವಾದ ನನ್ನ ಭಾವವೋ?
ನನಗನ್ನಿಸುವುದು…, ನನ್ನನ್ನು ಕಂಡು ಅವನೊಳಗೆ ಹುಟ್ಟಿದ ಹೆದರಿಕೆ- ಭಯಾನಕ.
ಆ ಭಯಾನಕ ಅವಸ್ತೆಯಲ್ಲಿ ಅವನನ್ನು ಬಿಟ್ಟು ಮಗುವಿನೊಂದಿಗೆ ಮರಳುವಾಗ…, ಛಿಲ್ಲನೆ ಮಗುವಿನ ತಲೆ ಉರುಳಿದರೆ ಆ ಅವಸ್ಥೆಯನ್ನು ಏನು ಹೇಳಬೇಕು?
ಮಗುವಿನ ಕುತ್ತಿಗೆಯಿಂದ ಚಿಮ್ಮುತ್ತಿರುವ ರಕ್ತ! ಉರುಳಿದ ತಲೆ! ನಾನಂತೂ ರಕ್ತಾಭಿಷಿಕ್ತ! ನನ್ನರಿವಿಲ್ಲದೆ ನನ್ನ ಹಿಡಿತದಿಂದ ಜಾರಿದ ಮಗುವಿನ ಶರೀರ…, "ಭೀಭತ್ಸ್ಯ" ದೃಶ್ಯ!
ಇಲ್ಲಿ ನನ್ನ ಅವಸ್ಥೆ ಭೀಭತ್ಸ್ಯವೋ…, ಅಥವಾ…, ಅದಕ್ಕೆ ಕಾರಣಳಾದ..., ಪ್ರಿಯಕರನಿಗಾಗಿ ಮಗುವಿನ ತಲೆಕಡಿದ- ಆ ಹೆಣ್ಣಿನ ಭಾವ ಭೀಭತ್ಸವೋ?
ಕಣ್ಣು ಮುಚ್ಚಿದೆ! ಎಷ್ಟು ಕ್ಷಣ ನಿಂತಿದ್ದೆನೋ…, ಕಣ್ಣು ತೆರೆದಾಗ ಸ್ಥಂಬಿಸಿ ನಿಂತ ನನ್ನ ಬಳಿಗೆ ವಿರುದ್ಧ ದಿಕ್ಕಿನಿಂದ ಹೆಣ್ಣೊಬ್ಬಳು ಬಂದಳು. ಸೂಕ್ಷ್ಮವಾಗಿ ನೋಡಿದೆ. ದೇವಿ- ನಾಟ್ಯವಿಶಾರದೆ! ಕಣ್ಣುಜ್ಜಿ ಮತ್ತೊಮ್ಮೆ ನೋಡಿದೆ!
"ಅದ್ಭುತ!” ಮಗುವೂ ಇಲ್ಲ, ಪ್ರಿಯಕರ-ಪ್ರಿಯತಮೆಯರೂ ಇಲ್ಲ, ಮಳೆಯೂ ಇಲ್ಲ!
ನಾನೊಂದು ಭಯಂಕರ ಭ್ರಮೆಯಲ್ಲಿದ್ದೆ!
ಆ ಅರಿವು, ದೇವಿಯ ಮುಗುಳುನಗು…,
“"ಶಾಂತ”-ನಾಗು ಕಂದ!”
*
“ಹೇಳೀಗ…, ಉತ್ತರ ಸಿಕ್ಕಿತ?” ಎಂದರು ದೇವಿ. ತಾತ್ಸರದಿಂದ ಮೂತಿ ತಿರುಗಿಸಿದೆ.
“ಹೇಳು…, ಯಾವ ಹೆಣ್ಣನ್ನು ಕಂಡಾಗಿನಿಂದ ಗೊಂದಲ ನಿನಗೆ?”
ದೇವಿಯ ಮುಖವನ್ನು ನೋಡಿ ಮುಗುಳುನಕ್ಕೆ. ಕೈಯ್ಯಗಲಿಸಿದರು. ಎದೆಯಲ್ಲಿ ಹುದುಗಿಕೊಂಡೆ.
ದೇವಿಯ ಹೊರತು ನನ್ನ ಬದುಕಿನಲ್ಲಿ ಯಾರಿದ್ದಾರೆ? ನಾನು ನೋಡುವ, ಒಡನಾಡುವ, ಅನುಭಾವಿಸುವ…, ಪ್ರತಿ ಹೆಣ್ಣೂ ದೇವಿಯೇ!
ಗಂಡು?
ನಾನೇ!
“ಹೇಳಿಬಿಡು!” ಎಂದರು ದೇವಿ.
“ಇನ್ನೇನು ಹೇಳುವುದು?”
“ನಿನ್ನ ಬರಹದಿಂದ ಏನಾದರೂ ಉಪಯೋಗ ಆಗಬೇಕಲ್ಲಾ…?! ಯಾರೂ ನವರಸಗಳನ್ನು ಮರೆಯದಂತೆ- ಪರ್ಮನೆಂಟ್ಆಗಿ ನೆನಪಿಟ್ಟುಕೊಳ್ಳುವಂತೆ- ಒಂದು ಆರ್ಡರ್‌ನಲ್ಲಿ ಹೇಳಿಬಿಡು!”
“ಮೇಲೆ ಹೇಳಿರುವುದು…” ನಾನಿನ್ನೂ ಮುಗಿಸಿರಲಿಲ್ಲ…,
“ತುಂಬಾ ಗೊಂದಲ ಹುಟ್ಟಿಸುವಂತಿದೆ!” ಎಂದರು ದೇವಿ.
*
ನವರಸಗಳಲ್ಲಿ ನನ್ನ ಫೇವರಿಟ್ ರಸ 1.ಶೃಂಗಾರ!
1.ಶೃಂಗಾರವನ್ನು ಪ್ರಾಕ್ಟಿಕಲ್ ಆಗಿ ಮಾಡದೆ ವಿವರಿಸುತ್ತಾ ಕುಳಿತರೆ- 2.ಹಾಸ್ಯ!
2.ಹಾಸ್ಯವನ್ನು ಮುಗಿಸಿ ಪ್ರಾಕ್ಟಿಕಲ್ ಆಗಿ ಸೋತರೆ- 3. ಕರುಣ!
3.ಕರುಣ ಹಲವುಸಾರಿ ಮುಂದುವರೆದರೆ ಹೆಂಡತಿ- 4. ರೌದ್ರ!
4.ರೌದ್ರಭಾವದ ಹೆಂಡತಿಯನ್ನು ತೃಪ್ತಿಪಡಿಸಿದರೆ- 5.ವೀರ!
5.ವೀರತನವನ್ನು ಮತ್ತಷ್ಟು ಮಗದಷ್ಟು ಮುಂದುವರೆಸುವುದು- 6. ಭಯಾನಕ!
6.ಭಯಾನಕ ಅವಸ್ತೆಯಲ್ಲಿ ಹೆಂಡತಿಯನ್ನು ಕೊಲ್ಲುವುದು- 7. ಭೀಭತ್ಸ್ಯ!
7.ಭೀಭತ್ಸ್ಯವಾಗಿ ಇಲ್ಲವಾದ ಹೆಂಡತಿ ನಿದ್ದೆಯಿಂದೆಂಬಂತೆ ಎಚ್ಚರಗೊಳ್ಳುವುದು- 8. ಅದ್ಭುತ!
8.ಅದ್ಭುತಕರವಾಗಿ ಎಚ್ಚರಗೊಂಡ ಹೆಂಡತಿಯ ಮುಖದಲ್ಲಿ ನನಗೆ ಕಾಣುವ ಭಾವ- 9. ಶಾಂತ!
9. ಶಾಂತರಸವೊಂದನ್ನು ಅಳವಡಿಸಿಕೊಳ್ಳುವಂತಾದರೆ ಬದುಕು- ಸ್ವರ್ಗ!
Comments
Post a Comment