ಅಸಹಾಯಕ ಪ್ರೇಮಿಯೊಬ್ಬನ ಪತ್ರ!
ಅಸಹಾಯಕ ಪ್ರೇಮಿಯೊಬ್ಬನ ಪತ್ರ!
ಪ್ರಿಯೆ,
ಸ್ವಲ್ಪ ತಾಳ್ಮೆ..., ಜಾಸ್ತಿ ಶ್ರದ್ಧೆಯಿಂದ ಓದು- ಆಯಿತಾ!
ಇತ್ತೀಚೆಗೆ ನಾನು ಮಾತನಾಡುವುದೇ ಯಾರಿಗೂ ಅರ್ಥವಾಗುತ್ತಿಲ್ಲವಂತೆ!
ಇನ್ನು ಬರಹದ ವಿಷಯ ಕೇಳಬೇಕೆ?
ನಾನೇನೂ ಸಾಹಿತಿಯಲ್ಲ- ಅಂದರೆ…,
ಲೇಖಕನಲ್ಲ, ಕವಿಯಲ್ಲ, ಕಥೆಗಾರನಲ್ಲ…, ಒಟ್ಟಾರೆಯಾಗಿ ಬರಹಗಾರನೇ ಅಲ್ಲ!
ನಿನಗಾಗಿ ಬರೆದ ಪ್ರೇಮಪತ್ರಗಳ ಹೊರತು ಬೇರೆ ಏನನ್ನುತಾನೆ ಬರೆದಿದ್ದೇನೆ?
ಆದ್ದರಿಂದ…,
ಇದೊಂದು ಪತ್ರ..., ಇವನ ಕೊನೆಯ ತಲೆನೋವದೇನೋ ನೋಡಿಯೇಬಿಡುತ್ತೇನೆಂದು ಓದಿಬಿಡು!
“ಗೆಳತಿಯಂತಾದರೂ ಇರಬೇಕೋ ಅಥವಾ...” ಅನ್ನುವ ನಿನ್ನ ಬೆದರಿಕೆ ನನ್ನನ್ನು ಚಂಚಲಗೊಳಿಸಿದೆಯೇ!
“ಇರು!” ಎಂದರೆ…, ಅಪರೂಪಕ್ಕಾದರೂ ನಿನ್ನ ಭೇಟಿ ಸಾಧ್ಯ!
ಅದೊಂದು ನಿರಾಳತೆ ಅಂದುಕೊಳ್ಳೋಣವೆಂದರೆ…, ಭೇಟಿಯಾದಾಗಲೆಲ್ಲಾ ನೀನು ನನ್ನ ಪ್ರೇಮಿ, ನನ್ನವಳು, ನನಗೆ ಬೇಕು ಅನ್ನುವ ಭಾವ ಕಾಡಿ- ಅದೊಂದು ನೋವು!
“ಗೆಳತಿಯಂತಾದರೆ ಬೇಡ!” ಅನ್ನೋಣವೆಂದರೆ…., ಅ-ನ್ನೋ-ಣ-ವೆಂ-ದ-ರೆ…,
ಅನ್ನಲು ಸಾಧ್ಯವೇ?
ನೀನಿಲ್ಲದೆ, ನಿನ್ನ ಸಾನ್ನಿಧ್ಯವಿಲ್ಲದೆ ನನ್ನ ಬದುಕು ಸಾಧ್ಯವೇ?
ಪ್ರೇಮಿಯೋ ಗೆಳತಿಯೋ…, ಹೇಗೋ…, ನೀನು ನನ್ನ ಬದುಕಿನಲ್ಲಿ ಇರುವುದು ಮುಖ್ಯ- ಅಂದುಕೊಂಡಿದ್ದೆ!
ಆದರೆ…, ಆದರೆ…, ದಿನ ಕಳೆದಂತೆ ಅದೊಂಥರಾ ನೋವು!
ಪ್ರೇಮದಲ್ಲಿ ನೋವಿಲ್ಲ ಅನ್ನುವವ ನಾನು!
ನಿಜವೇ…!
ನೀನು ದಕ್ಕಲಿಲ್ಲವೆಂದು ನನ್ನ ಪ್ರೇಮ ಸುಳ್ಳೇ?
ಅಲ್ಲ!
ಮತ್ತೇಕೆ ನೋವು?
ನಿ-ರೀ-ಕ್ಷೆ!
ನನ್ನನ್ನು ಒಪ್ಪಿಕೊಳ್ಳಲಾಗುವುದಿಲ್ಲವೆಂದು ಹೇಳಿ ನೀನು ದೂರ ಹೋಗಿದ್ದರೂ…,
ಅದು ಸುಮ್ಮನೆ ಹೇಳಿದ್ದರೆ?
ಒಂದು ವೇಳೆ ನಾನಾಗಿ ಶ್ರಮಿಸಿ ಬಂದರೆ ನೀನು ಸಿಕ್ಕಿಬಿಟ್ಟರೆ...,
ಅನ್ನುವ ತುಮುಲ!
ಎರಡು ಬಾರಿ ನಿನ್ನ ಸಾನ್ನಿಧ್ಯಕ್ಕಾಗಿ ಶ್ರಮಿಸಿ- ಮತ್ತಷ್ಟು ದೂರ ಮಾಡಿಕೊಂಡೆನೆನ್ನುವುದು ಮತ್ತೊಮ್ಮೆ ನಿನಗಾಗಿ ಶ್ರಮಿಸಲು ಹಿಂಜರಿಯುವಂತೆ ಮಾಡಿದೆ.
ನೀನು ನನ್ನದು ಅನ್ನುವ ನಂಬಿಕೆ ನನಗೆ!
ನೀನೋ ನನ್ನನ್ನು ಒಪ್ಪದೆ ದೂರವಿದ್ದೀಯೇ…!
ಏನು ಮಾಡಲಿ ಅನ್ನುವ ಗೊಂದಲ!!!
ಇರಲಿ…,
ನನ್ನ ಅವಸ್ತೆಯನ್ನು ಹೇಳುತ್ತೇನೆ ಕೇಳು.
ನಿನಗಾಗಿ ಶ್ರಮಿಸಲಾರೆ, ಶ್ರಮಿಸದೇ ಇರಲಾರೆ!
ಒಂದೋ ನಿನ್ನಿಂದ ದೂರ…, ಬಹಳ ದೂರ ಹೊರಟು ಹೋಗಿಬಿಡಬೇಕು!
ಅಥವಾ…,
ನಾನು ಸಾಯಬೇಕು!
ಆದರೆ…,
ನನ್ನನ್ನು ನಂಬಿರುವ ಅಮ್ಮ!
ಅವರಿಗಾದರೂ ನಾನಲ್ಲದೆ ಯಾರಿದ್ದಾರೆ?
ನನಗೇನೂ ಕನಸುಗಳಿಲ್ಲವೇ! ಕನಸುಗಳನ್ನು ಸಾಧಿಸಬೇಕೆಂಬ ಹಂಬಲವೂ ಇಲ್ಲ!
ಅಲೆಮಾರಿಯಾಗಿ ಬದುಕಬೇಕೆಂಬುದು ನನ್ನ ಇಚ್ಛೆ!
ಆದರೂ ಸಾಧನೆಯೊಂದರ ದಾರಿಯಲ್ಲಿದ್ದೇನೆ!
ಯಾಕೆ ಹೇಳು?
ಕೊನೆಗೂ ನನ್ನ ಮಗ ಸಾಧಿಸಿದ- ಎಂದು ಅಮ್ಮನಿಗೆ ನಾಲ್ಕು ಜನರಲ್ಲಿ ಹೇಳಿಕೊಳ್ಳಲು ಹೊರತು, ನನಗೇನೋ ಮಹಾ ಸಾಧನೆ ಮಾಡಬೇಕೆಂಬ ಚಿಂತೆಯೇ ಇಲ್ಲ.
ಈಗ ನನ್ನ ಮನಸ್ಥಿತಿಯನ್ನು ಏನನ್ನಲಿ?
ಇಷ್ಟು ದುರ್ಬಲನೇ ನಾನೆಂದೋ…?
ಅಥವಾ…,
ನನ್ನ ಪ್ರೇಮ ಅಷ್ಟು ಬಲವಾದುದೆಂದೋ?
ನಮ್ಮದು ಯಾರೊಬ್ಬರ ಪ್ರಯತ್ನದಿಂದ ರೂಪುಗೊಂಡ ಪ್ರೇಮವಲ್ಲವೇ!
ಅದು…,
ಆ ಪ್ರೇಮ-
ಪರಸ್ಪರರಿಗೆ ತಾನೇ ತಾನಾಗಿ ರೂಪುಗೊಂಡಿದ್ದು- ಅದಾಗಿ ಅದೇ ಆಗಿದ್ದು!
ಮತ್ತೇಕೆ ದೂರ ಹೋದೆ?
ನಿನ್ನ ಪ್ರೇಮಕ್ಕೆ ನಾನು ಯೋಗ್ಯನಲ್ಲವೇ?
ಕಾರಣ ಹೇಳದೆ ದೂರ ಹೋದರೆ ನಾನೇನೆ ಮಾಡಲಿ?
ನಂಬಿದ್ದೆ.
ಈಗ…,
ನಿನಗೆ ಸಂಪೂರ್ಣವಾಗಿ ಸಮರ್ಪಿಸಿಕೊಂಡ ನಾನು ಅನಾಥನಲ್ಲವೇನೆ?
ನೀನೇನೋ ನೀನೂ ಸಮರ್ಪಿಸಿಕೊಂಡಿದ್ದೆ- ಪಾಯಿಂಟ್ ಮಾಡು- ಸಮರ್ಪಿಸಿಕೊಂಡಿದ್ದೆ- ಇದ್ದೆ- ಅಂದಿದ್ದೆ!
ಈಗ?
ನಾನು ಈಗಲೂ ಅದೇ ಸಮರ್ಪಣೆಯಲ್ಲಿದ್ದೇನೆ! ಆದರೆ ನಿನಗೆ ಬೇಡ!
ನೀನು ನನಗೆ ಬೇಕು- ಆದರೆ ಇಲ್ಲ!
ಏನು ಮಾಡಲೇ?
ನಿನ್ನ ಪಾಡಿಗೆ ನಿನ್ನ ಬಿಡಲಾರೆ, ನನ್ನ ಪಾಡಿಗೆ ನಾ ಇರಲಾರೆ!
ಇನ್ನೊಬ್ಬನೊಂದಿಗಿನ ನಿನ್ನ ಆತ್ಮೀಯ ಒಡನಾಟವನ್ನು ಕಂಡು…, ಎಲ್ಲವನ್ನೂ, ಎಲ್ಲರನ್ನೂ ಬಿಟ್ಟು ಎಲ್ಲಿಗಾದರೂ ಹೋಗುವುದೇ ಪರಿಹಾರವೆಂದುಕೊಳ್ಳುವುದಕ್ಕೂ ಸ್ವತಂತ್ರನಲ್ಲವಲ್ಲೇ…!
ಏನು ಮಾಡಲಿ?
ಇನ್ನು…, ನಾನೇನಾದರೂ ನಿನಗಾಗಿ ಶ್ರಮಿಸಿ…, ನೀನೇನಾದರೂ ಸಾಯುವ ಯೋಚನೆ ಮಾಡಿದೆ ಅನ್ನು…, ಅದು ನನ್ನಲ್ಲುಂಟು ಮಾಡುವ ಮಾನಸಿಕ ಕ್ಷೋಭೆಯನ್ನು ಹೇಗೆ ವಿವರಿಸಲಿ?
ನನ್ನಿಂದಾಗಿ ಸತ್ತಳು!
ಉಫ್!
ನ-ನ್ನಿಂ-ದಾ-ಗಿ ಸ-ತ್ತ-ಳು!
ನಾನೇನೂ ಹೇಳುವಂತೆಯೂ ಇಲ್ಲ, ಪ್ರವರ್ತಿಸುವಂತೆಯೂ ಇಲ್ಲ, ಎಲ್ಲಿಗೂ ಹೋಗುವಂತೆಯೂ ಇಲ್ಲ, ಇಲ್ಲೇ ಇರುವಂತೆಯೂ ಇಲ್ಲ!
ನಿನಗಾದರೋ…,
ಅವನಿದ್ದಾನೆ!
ಏನು ವಿಚಿತ್ರ ಪ್ರಪಂಚವೇ…!
ಅವನಿಗೋ ನೀನೆಂದರೆ ತಾತ್ಸರ! ಅವ ತಾತ್ಸರ ತೋರಿಸಿದಷ್ಟೂ ನಿನಗೆ ಅವನೇ ಬೇಕು!
ಇಲ್ಲೊಬ್ಬ…,
ನಿನಗಾಗಿ ತುಡಿಯುತ್ತಿದ್ದಾನೆ, ಕಾಯುತ್ತಿದ್ದಾನೆ, ಪ್ರಾಣವನ್ನೇ ಕೊಡಲು ತಯಾರಿದ್ದಾನೆ!
ನಿನಗೆ ಬೇಡ!
ನಿನಗೆ ಅವನೇನೋ- ನನಗೆ ನೀನು!
ಅವನಿಗೆ ನೀನೇನೋ- ನಿನಗೆ ನಾನು!
ನಿನಗರ್ಥವಾಗುತ್ತಿಲ್ಲ- ಆಗುವುದಿಲ್ಲ!
ಇನ್ನು…,
ನಿನಗಾಗಿ-
ಶ್ರಮಿಸುವುದಿಲ್ಲ,
ತೊಂದರೆ ಕೊಡುವುದಿಲ್ಲ,
ಹಳೆಯದೇನನ್ನೂ ನೆನಪಿಸುವುದಿಲ್ಲ…,
ಆದರೂ…,
ಕಾಯುತ್ತಿರುತ್ತೇನೆ- ಆಯಿತಾ…!
Comments
Post a Comment