ಬಲಿ- ಕಥೆ
೧ ಆ ಮಗು ನನ್ನ ಗಮನವನ್ನು ಸೆಳೆಯಿತು .... ಶಾಲೆಗೆ ಹೋಗಲು ಬಸ್ಸಿಗಾಗಿ ಕಾಯುತ್ತಾ ನಿಂತಿದೆ ಮಗು - ಹೆಣ್ಣುಮಗು . ತನಗಿಂತ ಭಾರವಾದ ಚೀಲವೊಂ ದನ್ನು ಹೆಗಲಮೇಲೆ ಹೊತ್ತಿದೆ . ಅದರ ಮುಖದಲ್ಲಿ ದಯನೀಯತೆಯಿದೆ , ಏಕಾಂಗಿತನವಿದೆ , ಕೀಳರಿಮೆಯಿದೆ , ಯಾರೊಂದಿಗಾದರೂ ಬೆರೆಯಬೇಕು ಆದರೆ ಆಗುತ್ತಿಲ್ಲ ಎನ್ನುವ ಚಿಂತೆಯಿದೆ .... ಮಕ್ಕಳ ಮನಶ್ಶಾಸ್ತ್ರವನ್ನು ಕರತಲಾಮಲಕ ಮಾಡಿಕೊಂಡಿರುವ ಅಹಂಕಾರಿ ನಾನು ! ಆ ಮಗು ನನ್ನ ಗಮನವನ್ನು ಸೆಳೆದದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ ! ಆ ಮಗುವನ್ನೇ ನೋಡುತ್ತಾ ಟೆಲಿಫೋನ್ ಬೂತ್ ಕಡೆಗೆ ನಡೆದೆ . ಜೇಬಿನಲ್ಲಿರುವ ಮೊಬೈಲ್ ಬಗ್ಗೆ ಮರೆತೆ . ಮರೆತೆ ಎನ್ನುವುದಕಿಂತ - ಕೆಲವೊಮ್ಮೆ ನಮ್ಮ ಸ್ವಂತ ಫೋನ್ ಬಳಸುವುದಕ್ಕಿಂತ ಬೇರೆ ಫೋನ್ ಬಳಸುವುದೇ ಒಳ್ಳೆಯದು ! ೨ ಬಸ್ಸು ಜನರಿಂದ ತುಂಬಿದೆ . ಸೀಟುಸಿಗದೆ ನಿಂತಿರುವ ಆ ಮಗುವನ್ನು ಎಳೆದು ಮಡಿಲಿನಮೇಲೆ ಕೂರಿಸಿಕೊಂಡೆ . ಮಕ್ಕಳ ಮೇಲಿನ ಸಹಜ ಆಸಕ್ತಿ , ಜೊತೆಗೆ - ಆ ಮಗುವಿಗೆ ಒಬ್ಬರ ಸಾಮಿಪ್ಯದ ಅಗತ್ಯವಿದೆ ಅನ್ನಿಸಿದ್ದರಿಂದ ಕೇಳಿದೆ , " ಏನು ನಿನ್ನ ಹೆಸರು ?" ನನ್ನ ಊಹೆ ತಪ್ಪಲಿಲ್ಲ ! ಮಕ್ಕಳನ್ನು ಸೆಳೆಯುವುದು ನನ್ನ ಆಜನ್ಮ ಸಿದ್ದ ಹಕ್ಕು ಎನ್ನುವ ನನ್ನ ಅಹಂಕಾರವನ್ನು ಹೆಚ್ಚಿಸುತ್ತಾ ಮಗುವೆಂದಿತು , " ಸಾನಿಯ !...