ವಿಧಿ- ಕಥೆ
ನಮ್ಮ ಬದುಕಿನಲ್ಲಿ ಏನು ನಡೆಯಬೇಕೋ ಅದು ನಡೆಯುತ್ತದೆ. ಯಾರನ್ನು ಸಂಧಿಸಬೇಕೋ ಅವರನ್ನು ಸಂಧಿಸುತ್ತೇವೆ. ಯಾರನ್ನು ಸಂಧಿಸಿದಾಗ ಏನು ನಡೆಯಬೇಕೋ ಅದು ನಡೆದೇ ನಡೆಯುತ್ತದೆ. ಕೆಲವೊಮ್ಮೆ ನಮ್ಮ ಜೀವನಕ್ಕೂ ಜೀವನದಲ್ಲಿ ನಡೆಯುತ್ತಿರುವುದಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಆದರೂ ನಡೆಯುತ್ತದೆ!
ಅದೇ ವಿಧಿ- ಅಂತೆ....!!
೧
ಸಮುದ್ರ ತೀರ.
ಅಸ್ತಮಿಸುತ್ತಿರುವ ಸೂರ್ಯನನ್ನು ನೋಡುತ್ತಾ ಕುಳಿತಿದ್ದೇನೆ.
ಪ್ರತಿ ದಿನ ಸಮುದ್ರ ತೀರದಲ್ಲಿ ಜನಸಂದಣಿಯಿಂದ ಬೇರೆಯಾಗಿ ಎರಡು ಗಂಟೆಗಳಕಾಲ ಕುಳಿತುಕೊಳ್ಳುವುದು ನನ್ನ ಹವ್ಯಾಸ.
ಸ್ವಂತವಾಗಿ ಕಂಪೆನಿಯೊಂದನ್ನು ನಡೆಸುತ್ತಿರುವ ನನಗೆ ಒತ್ತಡ, ಅಸಹನೆ, ಕೋಪ ತಾಪಗಳಿಗೆ ಯಾವ ಕೊರತೆಯೂ ಇಲ್ಲ! ಅದರಿಂದಲೆಲ್ಲಾ ಹೊರಬಂದು, ಯಾವ ಚಿಂತೆಗೂ ಎಡೆಗೊಡದೆ, ಎರಡು ಗಂಟೆಗಳ ಕಾಲ ಹೀಗೆ ಪ್ರಶಾಂತವಾಗಿ ಕಳೆಯುವುದರಲ್ಲಿ ನನಗೇನೋ ತೃಪ್ತಿ. ಅದೆಷ್ಟೇ ಒತ್ತಡವಿದ್ದರೂ, ಎಷ್ಟುದೊಡ್ದ ಕೆಲಸವಿದ್ದರೂ ಈ ಎರಡು ಗಂಟೆಗಳನ್ನು ನಾನು ಕಳೆದುಕೊಳ್ಳುವುದಿಲ್ಲ.
ಸ್ವಲ್ಪ ಸಮಯದಲ್ಲಿಯೇ ಸೂರ್ಯ ಶುಭರಾತ್ರಿ ಹೇಳಿ ಹೊರಟುಹೋದ.
ಕತ್ತಲು ಬೆಳಕಿನ ಆಟ ಅದ್ಭುತವಾಗಿದೆ.
ಜನರೂ ಕೂಡ ಅವರವರ ಅ-ಸಹಜ ಪ್ರಪಂಚಕ್ಕೆ ಹೊರಟುಹೋದರು.
ನಾನೂ ಎದ್ದೆ.
ನೀರಿಗೆ ಇಳಿದು, ಸಮುದ್ರದ ವಿಶಾಲತೆಯನ್ನೊಮ್ಮೆ ಅಳೆದು, ಪ್ರಕೃತಿದೇವಿಗೆ ವಂದನೆಗಳನ್ನು ಅರ್ಪಿಸಿ ಮರಳುವಾಗ ಪುಟ್ಟ ಬಾಲಕಿಯೊಬ್ಬಳು ನಡೆದು ಬರುತ್ತಿರುವುದು ಕಾಣಿಸಿತು. ಹಿರಿಯರು ಯಾರಾದರೂ ಇದ್ದಾರೆಯೇ ಎಂದು ನೋಡಿದೆ. ಯಾರೂ ಇಲ್ಲ! ನಾನು ನೋಡುನೋಡುತ್ತಿದ್ದಂತೆಯೇ ಆ ಮಗು ಸಮುದ್ರದ ನೀರಿನಲ್ಲಿಳಿದು ಮಾಯವಾಯಿತು! ದೇವರು, ದೆವ್ವಗಳನ್ನು ನಂಬದ ನಾನು- ಒಂದುಕ್ಷಣ ಗಾಬರಿಯಾದೆ. ಮೆದುಳು ಸ್ತಂಭಿಸಿತು. ನಂತರ ನನ್ನ ದಡ್ಡತನದ ಅರಿವಾಗಿ ಮಗು ಮುಳುಗಿದತ್ತ ಓಡಿದೆ. ಕಾಣಿಸಲಿಲ್ಲ. ಬ್ರಮೆಯೇನೋ ಅಂದುಕೊಂಡೆ. ಆದರೆ ನನ್ನಮೇಲೆ ನನಗೆ ನಂಬಿಕೆಯಿದೆ- ನಾನು ಆ ಮಗುವನ್ನು ನೋಡಿದ್ದು ನಿಜ.
ಹೌದು, ನಿಜ, ನಿನಗೆ ತಪ್ಪಾಗುವುದಿಲ್ಲ ಎನ್ನುವಂತೆ ಅಲೆಯೊಂದು ಆ ಮಗುವನ್ನು ತಳ್ಳಿಕೊಂಡುಬಂದು ನನ್ನ ಕಾಲ ಬಳಿಯಲ್ಲಿ ಬಿಟ್ಟಿತು.
ವಿಧಿ....!
ಆ ಮಗುವಿಗೆ ಜೀವವಿದೆ.
೨
ಈ ಪ್ರಪಂಚವನ್ನು ನಾನು ನಂಬುವುದಿಲ್ಲ. ನನ್ನವರೆಂದು ನನಗೆ ಯಾರೂ ಇಲ್ಲ. ಪ್ರೇಮವೆಂದರೇನೆಂದೇ ನನಗೆ ತಿಳಿಯದು. ಇತರರ ದುಃಖ ನನ್ನನ್ನು ದುಃಖಿಸುವಂತೆ ಮಾಡುವುದಿಲ್ಲ. ಭಾವನೆಗಳಿಗೆ ಬೆಲೆ ಕೊಡದಿರುವವನು ನಾನು. ಈ ಮಗು ಸತ್ತಿದ್ದರೂ ನನಗೇನೂ ಅನ್ನಿಸುತ್ತಿರಲಿಲ್ಲ. ಕರುಣೆತೋರಿಸುವ ಗುಣವಲ್ಲ ನನ್ನದು. ಆದರೂ ಆ ಮಗುವನ್ನು ಮನೆಗೆ ಕರೆತಂದೆ!
ಒಂಟಿ ನಾನು. ನನಗೊಂದು ಜೊತೆ- ಅಷ್ಟೆ.
ಆರು ವರ್ಷ ಅವಳಿಗೆ. ದೇಹದಮೇಲೆ ಅಲ್ಲಲ್ಲಿ ಸುಟ್ಟ ಕಲೆಗಳು. ಕೆಲವುಕಡೆ ಚರ್ಮ ಸುಲಿದಿದೆ. ಎಡಕೈ ಮುರಿದು ತಿರುಚಿಕೊಂಡಿದೆ. ಮುಂದಿನ ಎರಡು ಹಲ್ಲುಗಳು ಉದುರಿದೆ. ಬಲಗಾಲಿನ ಹೆಬ್ಬೆರಳ ಉಗುರು ಇಲ್ಲ! ಒಟ್ಟಿನಲ್ಲಿ ವಿಕಾರವಾಗಿದ್ದಾಳೆ!
ಅವಳ ಅವಸ್ತೆಗೆ ಕಾರಣವನ್ನು ಕೇಳಿದಾಗ, 'ಅಪ್ಪ ಅಮ್ಮ ಮಾಡಿದ್ದು' ಎಂದಳು! ಕೊನೆಗೆ ಪ್ರವಾಸಕ್ಕೆಂದು ಕರೆತಂದು ಇಲ್ಲಿಯೇ ಬಿಟ್ಟು ಹೋದರಂತೆ. ಬೇರೆ ದಾರಿ ಕಾಣದೆ ಆತ್ಮಹತ್ಯೆಗೆ ಶ್ರಮಿಸಿದ್ದಾಳೆ!
ಆರು ವರ್ಷದ ಮಗು ಆತ್ಮಹತ್ಯೆ ಮಾಡುವುದು.... ನಂಬಲಸಾಧ್ಯ- ಆದರೂ ನಿಜ!
ನಾನೇ ಕಠಿಣ ಅಂದುಕೊಂಡಿದ್ದೆ, ಅವಳ ಅಪ್ಪ ಅಮ್ಮ ಯಾರೋ ಏನೋ....!
ಯಾಕೋ... ಅಕಾರಣವಾಗಿ ನನಗೆ ಶೇಖರ್ ನೆನಪಾದ.
ಅವನೊಬ್ಬ ನರರಾಕ್ಷಸ. ಮತ್ತೊಬ್ಬರ ನೋವಿನಲ್ಲಿ ಸಂತೋಷ ಕಾಣುವವನು. ಅವನ ಹೆಂಡತಿ ಶೀಲ-ಅವನಿಗಿಂತ ಸ್ಯಾಡಿಸ್ಟ್.
ಮುಂಚೆ, ನಾನೂ ಶೇಖರ್ ಒಟ್ಟಿಗೆ ವ್ಯಾಪಾರ ಮಾಡುತ್ತಿದ್ದೆವು. ಅವನ ಸ್ವಭಾವವನ್ನು ಅರಿತಾಗ ಬೇರೆಯಾದೆ. ಬೇರೆಯಾದಾಗ ಅವನು ಬಿದ್ದ, ನಾನು ಬೆಳೆದೆ. ಮೊದಲೇ ಸ್ಯಾಡಿಸ್ಟ್. ಜೊತೆಗೆ ಜಾತಕದಲ್ಲಿ ನಂಬಿಕೆ. ಅವನ ಪ್ರಕಾರ ಅವನ ಅದಃಪತನಕ್ಕೆ ಕಾರಣ ನಾನು! ಸೇಡು ತೀರಿಸಿಕೊಳ್ಳಲು ಹಲವುಬಾರಿ ಶ್ರಮಿಸಿದ. ಸಾದ್ಯವಾಗಿರಲಿಲ್ಲ. ನಂತರ ತನ್ನ ಅವಸ್ತೆಗೆ ಹೆಂಡತಿಯ ಗರ್ಭದಲ್ಲಿನ ಪಿಂಡ ಕಾರಣವೆಂದು ತೀರ್ಮಾನಿಸಿ ಹೆಂಡತಿಯ ಹೊಟ್ಟೆಗೆ ಗುದ್ದಿ ಪಿಂಡವನ್ನು ನಾಶಮಾಡಲು ಶ್ರಮಿಸಿದ್ದ. ಆ ಪಿಂಡ ನಶಿಸಿತೋ ಇಲ್ಲವೋ ತಿಳಿಯದಾಗಲೀ ಒಂದುಕ್ಷಣ ಅವನ ಮಗಳೇನೋ ಇವಳು ಅಂದುಕೊಂಡೆ. ಇರಲಾರದು! ಅಂದೇ ಕೊಂದಿರುತ್ತಾನೆ!
ಇದು ಆರೇಳು ವರ್ಷ ಮುಂಚಿನ ಕಥೆ! ನಂತರ ಅವನಬಗ್ಗೆ ಏನೂ ತಿಳಿಯಲಿಲ್ಲ.
೩
ಅವಳಿಗೆ ನಾನು ಮಾಳವಿಕ ಎಂದು ಹೆಸರಿಟ್ಟೆ.
ಮಾಳವಿಕಾ ಪ್ರವೇಶಿಸಿದಮೇಲೆ ನನ್ನ ಬದುಕು ಅದ್ಭುತ ತಿರುವನ್ನು ಕಂಡಿತು.
ಪ್ರೇಮವನ್ನು ಅರಿತೆ.
ಭಾವನೆಗಳನ್ನು ಅನುಭವಿಸಿದೆ.
ಯಂತ್ರವಾಗಿದ್ದ ನಾನು ಮನುಷ್ಯನಾದೆ.
ನಾನೂ ಮಾಳವಿಕ- ಮಾಳವಿಕಾ ನಾನು ಎನ್ನುವ ಅದ್ಭುತ ಪ್ರಪಂಚ.
ದಿನಗಳುರುಳುತ್ತಿದ್ದವು.
ಆ ಪುಟ್ಟ ಹುಡುಗಿ ನನ್ನ ಬದುಕನ್ನು ಎಷ್ಟರ ಮಟ್ಟಿಗೆ ಆವರಿಸಿಕೊಂಡಳೆಂದರೆ, ಅವಳಿಗೆ ನಾನು ಆಡಿಕ್ಟ್ ಆದೆ!
ನನ್ನ ಜೀವನಕ್ಕೆ ಒಂದು ಅರ್ಥ ಬರುತ್ತಿತ್ತು.
ಹೀಗಿರುವಾಗ ಒಂದುದಿನ ನನ್ನ ಗೆಳೆಯನೊಬ್ಬ ಮನೆಗೆ ಬಂದ. ಮಾಳವಿಕಾಳನ್ನು ಕಂಡು,
“ಇವಳನ್ನು ಎಲ್ಲಿಯೋ ನೋಡಿದ್ದೇನೆ. ವಿನಯ, ಯಾರಿದು? ಈ ಪುಟ್ಟ ಅಥಿತಿ?” ಎಂದ.
ನಡೆದ ಘಟನೆಯನ್ನು ಹೇಳಿದೆ.
ಮಾರನೆಯ ದಿನ.... ಮಾಳವಿಕಾಳ ಅಪ್ಪ ಅಮ್ಮ ನನ್ನ ಮುಂದೆ ನಿಂತಿದ್ದರು.
ಶೇಖರ್.... ಶೀಲಾ..!!
ಕ್ರೌರ್ಯವೇ ಎದ್ದು ಬಂದಂತೆ!
ಯಾವ ಪೀಠಿಕೆಯೂ ಇಲ್ಲದೆ,
“ನಮಗೆ ನಮ್ಮ ಮಗಳು ಅಥವಾ ನಿನ್ನ ಆಸ್ತಿ- ಎರಡರಲ್ಲಿ ಒಂದು ಬೇಕು" ಎಂದ ಶೇಖರ್.
ಅವನು ಸೇಡು ತೀರಿಸಿಕೊಳ್ಳುತ್ತಿದ್ದಾನೆ. ಮುಂಚಿನ ನಾನಾಗಿದ್ದರೆ ಮಾಳವಿಕಾಳನ್ನು ಕೊಟ್ಟಿರುತ್ತಿದ್ದೆನೇನೋ..?
ಈಗ ಅವಳು ನನ್ನ ಬೆಲೆಕಟ್ಟಲಾಗದ ಆಸ್ತಿ.
ಹೆಚ್ಚು ಯೋಚಿಸಲಿಲ್ಲ, ನನ್ನ ಮೇಲೆ ನನಗೆ ನಂಬಿಕೆಯಿದೆ. ಕಡಿಮೆ ಅವಧಿಯಲ್ಲಿ ಈಗ ಇರುವುದರ ಎರಡರಷ್ಟು ಆಸ್ತಿಯನ್ನು ಸಂಪಾದಿಸಬಲ್ಲೆ. ನನಗೆ ಮಾಳವಿಕಾ ಮುಖ್ಯ. ಆಸ್ತಿಯನ್ನೆಲ್ಲಾ ಅವರ ಹೆಸರಿಗೆ ಬರೆದೆ.
ಸಂತೋಷಗೊಂಡ ಶೇಖರ್,
“ಬ್ರದರ್... ಹಳೆಯ ಪಾರ್ಟ್ನರ್ಸ್ ನಾವು. ಅಲ್ಲದೆ, ನನ್ನ ಮಗಳು ನಿನ್ನಲ್ಲಿ ಕ್ಷೇಮವಾಗಿರುತ್ತಾಳೆ. ಇನ್ನುಮುಂದೆ ನಾವು ಭೇಟಿಯಾಗುತ್ತೇವೋ ಇಲ್ಲವೋ... ಕೊನೆಯಬಾರಿ ಒಂದು ಪಾರ್ಟಿ ಮಾಡಿದರೆ ಹೇಗೆ?” ಎಂದ.
ನಗುತ್ತಾ, “ನಾನೀಗ ಭಿಕಾರಿ" ಎಂದೆ.
"ಪಾರ್ಟಿ ನನ್ನ ಕಡೆಯಿಂದ" ಎಂದ.
೪
"ನಮಗಿಲ್ಲದ ಅದೃಷ್ಟ ನಿನಗೇಕೆ?” ಎಂದ ಶೇಖರ್.
ಪಾರ್ಟಿ ಮುಗಿಸಿ ಮಾತನಾಡುತ್ತಾ ಕುಳಿತಿದ್ದೇವೆ.
ಅವನ ಮುಖವನ್ನು ದಿಟ್ಟಿಸಿ ನೋಡಿದೆ.
ಒಂದುರೀತಿಯ ಉನ್ಮಾದದಲ್ಲಿದ್ದಾನೆ!
ಏನೋ ಸಂಶಯ...
ನಡೆಯಬಾರದ್ದೇನೋ ನಡೆಯುತ್ತದೆಂಬಂತೆ...
“ಅವಳು ಅವಳಮ್ಮನ ಗರ್ಭವನ್ನು ಸೇರಿದಾಗಲೇ ನಾನು ನನ್ನ ಆಸ್ತಿಯನ್ನೆಲ್ಲಾ ಕಳೆದುಕೊಂಡೆ! ಅದಕ್ಕೆ ನೀನು ಕಾರಣನಾದೆ! ಅವಳ ನಂತರ ನಮಗೆ ಸಂತಾನವಾಗುವುದಿಲ್ಲವೆಂದು ಡಾಕ್ಟರ್ ಹೇಳಿದರು. ಅವಳ ಜಾತಕ ತುಂಬಾ ಕೆಟ್ಟದ್ದೆಂದು ಜೋತಿಷಿ ಹೇಳಿದ. ಅವಳನ್ನು ನಾವು ದ್ವೇಶಿಸಿದೆವು. ಅವಳ ಬದುಕನ್ನು ನರಕ ಮಾಡಿದೆವು. ಅವಳನ್ನು ಕಂಡಾಗಲೇ ಅವಳಿಗೆ ನಾವು ಕೊಟ್ಟ ನರಕ ನಿನಗೆ ತಿಳಿದಿರಬೇಕು? ಹಾಗಿರುವಾಗ ಅವಳು ನಿನಗೆ ಸಿಕ್ಕಿ ಸುಖವಾಗಿ ಬಾಳುವುದೆಂದರೇನು?” ಎಂದ.
ಮಾತನಾಡಲು ಶ್ರಮಿಸಿದೆ. ಕಷ್ಟವಾಯಿತು. ನಾಲಗೆ ಭಾರವಾದಂತೆ, ನಿಶ್ಶಕ್ತಿ ಆವರಿಸಿದಂತೆ.... ಚಲಿಸಲಾಗುತ್ತಿಲ್ಲ. ಸಂಶಯ ನಿಜವಾಗುತ್ತಿದೆ... ಆದರೂ ಕಷ್ಟದಿಂದ ತೊದಲಿದೆ,
“ಇದರಲ್ಲಿ ಅವಲು ಮಾದಿದ ದಪ್ಪೇನು?”
“ಹುಟ್ಟಿದ್ದು" ಎಂದ ಕೋಪದಿಂದ. “ಅವಳು ಹುಟ್ಟಿ ನಮಗೆ ನರಕವನ್ನು ಕೊಟ್ಟು ನಿನಗೆ, ನಿ-ನ-ಗೆ ಸ್ವರ್ಗವನ್ನು ಕೊಡುವುದೆಂದರೇನು? ನನ್ನ ಅದಃಪತನಕ್ಕೆ ಕಾರಣನಾದವನು ನೀನು. ನನಗೆ ನಿನ್ನ ಸಾವು ಮುಖ್ಯ! ಹಾಗಿರುವಾಗ ಸುಮ್ಮನೆ ಬಿಟ್ಟುಬಿಡುತ್ತೇನೆಂದು ಹೇಗಂದುಕೊಂಡೆ?” ನಿಲ್ಲಿಸಿದ. ವಿಕಟವಾಗಿ ನಕ್ಕ. “ಅವಳು ನಿನಗೆ ಹೇಗೆ ಸಿಕ್ಕಿದಳೋ ನನಗೆ ತಿಳಿಯದು. ನಿನ್ನ ಸಾವಿಗೆ ಕಾರಣಳಾಗುತ್ತಿರುವುದು ನಿಜ! ನೀನು ತಿಂದ ಆಹಾರದಲ್ಲಿ ವಿಷವಿದೆ! ಸ್ವಲ್ಪ ಸಮಯದಲ್ಲಿಯೇ ನೀನು ಸಾಯುತ್ತೀಯ! ನನ್ನ ಗೆಳೆಯ ನೀನು! ನಿನ್ನ ಸಾವಿಗೆ ಕಾರಣಳಾದ ಅವಳನ್ನು ಸುಮ್ಮನೆ ಬಿಡುತ್ತೇನೆಯೇ?”ಎಂದ.
ಅವನ ವಾದ ಸ್ಯಾಡಿಸಂನ ಪರಮಾವಧಿ!
ನಾನು ನಿಶ್ಶಕ್ತಿಯಿಂದ ಕುಸಿದೆ. ಬೆವರಿನಿಂದ ಒದ್ದೆಯಾದೆ. ಕಣ್ಣು ಮುಚ್ಚಿಕ್ಕೊಳ್ಳುತ್ತಿದೆ.
“ನನ್ನ ಗೆಳೆಯನ ಈ ರೀತಿಯ ಸಾವಿಗೆ ಕಾರಣಳಾದ ಅವಳನ್ನು ಸುಮ್ಮನೆ ಬಿಡುವುದಿಲ್ಲ. ಆ ಕಡೆಗೆ ನೋಡು" ಎಂದ.
ಮುದುಕನೊಬ್ಬ ಆ ಮಗುವಿನ ಬಟ್ಟೆಗಳನ್ನು ಕಳಚುತ್ತಿದ್ದ! ತಲೆತಗ್ಗಿಸಿದೆ. ತಟ್ಟನೆ ಮರಣಿಸಿದ್ದರೇ.. ಎನ್ನುವ ಆಸೆ.
ಆ ಮಗುವಿನ ಆಕ್ರಂದನವನ್ನು ಕೇಳಲಾಗದೆ ತಪಿಸಿದೆ.
“ಅವಳನ್ನು ಅಷ್ಟುಬೇಗ ಕೊಲ್ಲುವುದಿಲ್ಲ! ಎಷ್ಟು ಸಾದ್ಯವೋ ಅಷ್ಟು ಸಂಪಾದಿಸುತ್ತೇನೆ! ನಂತರ ಕೊಲ್ಲುತ್ತೇನೆ!” ಎಂದ.
ಪಾಪ...
ಅಂದೇ ಸಮುದ್ರದಲ್ಲಿ ಮುಳುಗಿ ಸಾಯುತ್ತಿದ್ದಳು. ನಾನೇ ಕಾಪಾಡಿ ಈ ನರಕಕ್ಕೆ ಈಡುಮಾಡಿದೆ. ನಾನೇನೋ ಸ್ವಲ್ಪ ಸಮಯದಲ್ಲಿಯೇ ಮರಣಿಸುತ್ತೇನೆ.
ಆದರೆ ಆ ಪುಟ್ಟ ಪಾಪು....
ನನ್ನ ಈ ಅವಸ್ತೆಗೆ ಅವಳು ಕಾರಣಳೋ- ಅವಳ ಈ ಅವಸ್ತೆಗೆ ನಾನು ಕಾರಣನೋ... ಒಟ್ಟಿನಲ್ಲಿ-
ಹಾಳು ವಿಧಿ!!!
ಸ್ಯಾಡಿಸಂನ ಪರಮಾವಧಿ, ನೈಜವಾಗಿ ಇಂತಹ ಘಟನೆಗಳೆಂದೂ ಜರುಗದಿರಲಿ ದೇವಾ 🙏🙏
ReplyDelete