ಕಥಾವಸ್ತು- ಕಥೆ
೧
ಕಥೆಗಾರನಾಗಬೇಕೆನ್ನುವುದು ನನ್ನ ಬಹುದೊಡ್ಡ ಆಸೆ! ಆದರೇನು ಮಾಡಲಿ? ಬರೆಯಲೊಂದು ವಿಷಯ ಬೇಕಲ್ಲಾ? ಕಥೆ ಬರೆಯದೆ ಹೇಗೆ ಕಥೆಗಾರನಾಗುವುದು?
ಸಿಕ್ಕಿದ ವಿಷಯಗಳನ್ನು ಕಥೆಯಾಗಿಸಿದರೆ ಓದುಗರಿಂದ ನನ್ನ ಪ್ರಾಣಕ್ಕೆ ಕುತ್ತು ಬರಬಹುದು! ಆದ್ದರಿಂದ, ಬರೆಯಲು ಯೋಗ್ಯವಾದ ವಿಷಯವೊಂದನ್ನು ಹುಡುಕುತ್ತಾ ಮಹಾನಗರಕ್ಕೆ ಬಂದೆ.
ಮಹಾನಗರ.... ವೇಗವಾಗಿ ಚಲಿಸುತ್ತಿರುವ ವಾಹನಗಳು, ಆತುರಾತುರವಾಗಿ ನಡೆದಾಡುತ್ತಿರುವ ಜನ, ಬೀದಿಬದಿಯ ವ್ಯಾಪಾರಿಗಳ ಗದ್ದಲ ಕೋಲಾಹಲ, ಇದೆಲ್ಲ ಸಾಲದೆನ್ನುವಂತೆ ಎಲ್ಲೆಲ್ಲಿಂದಲೋ ಕೇಳಿಬರುತ್ತಿರುವ ಕರ್ಕಶವಾದ ಹಾಡುಗಳು!
ಗಾಬರಿಯಾದೆ! ಮೂಗನಾದ ನಾನು ಇಲ್ಲಿ ಬದುಕುವುದು ಹೇಗೆ? ಬದುಕಿದರೆ ತಾನೆ ಕಥೆ ಬರೆಯಲು ಸಾದ್ಯ? ನಾನು ಮಾತ್ರ ಬದುಕಿದರೆ ಸಾಕೆ? ಎರಡೂ ಕಾಲು ಕಳೆದುಕೊಂಡಿರುವ ಅಪ್ಪ, ಅವರ ಸೇವೆಯಲ್ಲೇ ಬದುಕು ಸವೆಸುತ್ತಿರುವ ಅಮ್ಮ?
ಮತ್ತೆ ಹೇಗೆ?
ಯೋಚನೆಯಲ್ಲಿರುವಾಗ ಆ ಮಗು ನನ್ನ ಗಮನವನ್ನು ಸೆಳೆಯಿತು.
ನಡು ರಸ್ತೆಯಲ್ಲಿ ವಾಹನಗಳ ಮದ್ಯೆ ಸಿಕ್ಕಿ ಅಳುತ್ತಿರುವ ಪುಟ್ಟ ಮಗು.
ಯಾರೂ ಆ ಮಗುವನ್ನು ಗಮನಿಸುತ್ತಿಲ್ಲ. ಎಲ್ಲರೂ ಅವರವರ ಆತುರದಲ್ಲಿದ್ದಾರೆ.
ಕೆಲವರು ಮಗುವನ್ನೂ ಮಗುವಿನ ಅಪ್ಪ ಅಮ್ಮನನ್ನೂ ಬೈದು ಮುಂದುವರೆಯುತ್ತಿದ್ದಾರೆ, ಕೆಲವರು ಗಮನಿಸಿಯೇ ಇಲ್ಲವೇನೋ ಎನ್ನುವಂತೆ ಹೋಗುತ್ತಿದ್ದಾರೆ.
ಒಂದುಕ್ಷಣ ಯೋಚಿಸಿದೆ. ನಗರ ನನಗೂ ಹೊಸದು, ಮಗುವನ್ನು ಕಾಪಾಡಲು ಹೋಗಿ ನನ್ನ ಪ್ರಾಣಕ್ಕೇ ಕುತ್ತಾದರೆ? ಆದರೂ ಧೈರ್ಯಮಾಡಿ ರಸ್ತೆಗಿಳಿದೆ. ಯಾವ ಅವಘಡವೂ ಇಲ್ಲದಂತೆ ಮಗುವಿನೊಂದಿಗೆ ರಸ್ತೆಬದಿಗೆ ಬಂದೆ. ನಿಜವಾದ ಅವಘಡ ಆಗ ಸಂಭವಿಸಿತು!
“ಅಯ್ಯೋ ನನ್ನ ಮಗು... ಯಾರಾದರೂ ಕಾಪಾಡೀ" ಎನ್ನುವ ಕೂಗು ಕೇಳಿಸಿತು.
ಆಶ್ಚರ್ಯದಿಂದ ನೋಡಿದೆ. ಹೆಂಗಸೊಬ್ಬರು ರಸ್ತೆಯ ಆಚೆ ಬದಿಯಿಂದ ಅರಚುತ್ತಿದ್ದರು.
ಅಲ್ಲೇ ಇರಿ ನಾನೇ ಕರೆದುಕೊಂಡು ಬರುತ್ತೇನೆ ಎನ್ನುವಂತೆ ಸನ್ನೆ ಮಾಡಿದೆ.
“ಅಯ್ಯೋ ಕಳ್ಳಾ ಕಳ್ಳಾ ನನ್ನ ಮಗೂನ ಎತ್ಕೊಂಡ್ ಹೋಗ್ತಿದಾನೇ ಅಯ್ಯೋ" ಎಂದಳು.
ಕಕ್ಕಾಬಿಕ್ಕಿಯಾದೆ!
ಬೇಸರವಾಯಿತು. ಮಗುವನ್ನು ಜೊತೆಗೆ ಕರೆತಂದದ್ದೂ ಅಲ್ಲದೆ -ಗಮನಿಸದೆ -ಈಗ ನನ್ನನ್ನೇ ಕಳ್ಳನನ್ನಾಗಿ ಮಾಡುತ್ತಿದ್ದಾರೆ.
ಶ್ರೀಮಂತ ಹೆಂಗಸು, ಪಾರದರ್ಶಕ ಸೀರೆ, ಆರ್ತಮೊರೆ! ಯಾವ ಗಂಡುತಾನೆ ಸಹಾಯಕ್ಕೆ ಬರುವುದಿಲ್ಲ?
ಈಗ ಯಾರಿಗೂ ಆತುರವಿಲ್ಲ.
ವ್ಯಕ್ತಿಯೊಬ್ಬ ನನ್ನ ಬಳಿ ಬಂದವನೇ ಮಗುವನ್ನು ಕಿತ್ತುಕೊಂಡು ನನ್ನ ಮುಖಕ್ಕೆ ಬಾರಿಸಿದ.
“ಈ ವಯಸ್ಸಿಗೆನೇ ಮಾಫಿಯಾನ?” ಯಾರೋ ಕೇಳಿದರು.
ಯಾರಿಗೂ ವಿಷಯ ತಿಳಿದುಕೊಳ್ಳಬೇಕೆಂಬ ಕುತೂಹಲವಿಲ್ಲ, ಎಲ್ಲರಿಗೂ ಆ ಹೆಂಗಸಿನ ಮುಂದೆ ಹೀರೋ ಆದರೆ ಸಾಕು!
ನಾನು ವಿಷಯವನ್ನು ತಿಳಿಸಲು ಪರದಾಡುತ್ತಿದ್ದೆ.
ಮೂಗ....
ನೋವು ತಾಳಲಾಗದೆ ಪುನಹ ಹೊಡೆಯಲು ಬಂದವನನ್ನು ತಳ್ಳಿದೆ.
ಅಷ್ಟೇ.....
ಮೊದಲಏಟು ಮೂಗಿನಮೇಲೆ, ನಂತರ ಎಲ್ಲೆಲ್ಲಿಗೆ ಏಟು ಬಿತ್ತೋ, ಎಷ್ಟುಜನ ಸೇರಿ ಹೊಡೆದರೋ ತಿಳಿಯದು. ಕುಸಿದುಬಿದ್ದೆ.
೨
ಎಚ್ಚರವಾದಾಗ ವೃದ್ಧನೊಬ್ಬ ನನ್ನನ್ನೇ ನೋಡುತ್ತಿದ್ದ. ನಾನು ಕಣ್ಣು ತೆರೆದದ್ದು ಕಂಡು ನಕ್ಕ. ನಂತರ ನನ್ನನ್ನೇ ದುರುಗುಟ್ಟಿ ನೋಡಲಾರಂಬಿಸಿದ.
ನನಗೆ ವಾಸ್ತವದ ಅರಿವಾಗಲು ಕೆಲವು ಕ್ಷಣಗಳೇ ಬೇಕಾಯಿತು.
ನಿಧಾನವಾಗಿ ನೋವು ಕಣಕಣಗಳನ್ನೂ ಆವರಿಸಿತು.
ಏಳಲು ಶ್ರಮಿಸಿದೆ.
ಕೈಯ್ಯನ್ನು ಅಲ್ಲಾಡಿಸಲೂ ಸಾದ್ಯವಾಗಲಿಲ್ಲ.
ಕೈ ಕಾಲುಗಳನ್ನು ಮುರಿದಿದ್ದಾರೆನ್ನಿಸಿತು.
ನೋವಿನಿಂದ ಪುನಹ ಪ್ರಜ್ಞೆಯನ್ನು ಕಳೆದುಕೊಂಡೆ.
ಪುನಹ ಎಚ್ಚರನಾದಾಗ,
“ಅಮ್ಮಾ ತಾಯೀ ಧರ್ಮಮಾಡಿ, ನನ್ನ ಮಗನನ್ನು ಆಸ್ಪತ್ರೆಗೆ ಸೇರಿಸಬೇಕು ಅಪ್ಪಾತಂದೇ ದಾನಮಾಡೀ....” ಎಂದು ಕೂಗುತ್ತಿರುವುದು ಕೇಳಿಸಿತು.
ಆ ವೃದ್ಧ ನನ್ನನ್ನು ಮುಂದಿಟ್ಟುಕೊಂಡು ಭಿಕ್ಷೆ ಬೇಡುತ್ತಿದ್ದ!
ನನ್ನ ಕಣ್ಣಿನಿಂದ ನೀರು ಸುರಿಯಿತು. ಏನೂ ಮಾಡಲಾಗದ ಅವಸ್ತೆ, ಪಕ್ಕಕ್ಕೆ ಹೊರಳಲೂ ಕೂಡ.....
ನನಗೆ ಅಪ್ಪ ಅಮ್ಮ ನೆನಪಾದರು. ಮಗ ಏನನ್ನೋ ಸಾಧಿಸಿ ತಮ್ಮನ್ನು ಸಂರಕ್ಷಿಸಲು ಬಂದೇ ಬರುತ್ತಾನೆಂದು ನಂಬಿಕೆಯಿಂದ ಕಾಯುತ್ತಲೇ ಇರುತ್ತಾರೆ.
ಜೀವನಪೂರ್ತಿ ಅದೇ ನಂಬಿಕೆಯಿಂದ.....
ನನ್ನ ಬಗ್ಗೆ ಅವರಿಗೆ ತಿಳಿಸಲೂ ಕೂಡ ಸಾದ್ಯವಲ್ಲದ ಪರಿಸ್ಥಿತಿ.....
ದಿನಗಳುರುಳುತ್ತಿದ್ದವು. ವೃದ್ದ ಪ್ರತಿ ದಿನ ಬಂದು ನನ್ನ ಮುಂದೆ ಕುಳಿತು ಭಿಕ್ಷೆ ಬೇಡುತ್ತಿದ್ದ. ಆದರೆ ಒಂದು ತೊಟ್ಟು ನೀರು ಕೂಡ ನನಗೆ ಕುಡಿಸಲಿಲ್ಲ.
ನನ್ನ ಮರಣ ಸಮೀಪಿಸಿದಾಗ ನನ್ನಿಂದ ದೂರಕ್ಕೆ ಹೊರಟು ಹೋದ!
ನನಗೀಗ ಬರೆಯಲು ಉತ್ತಮ ಕಥಾವಸ್ತುವೊಂದು ಸಿಕ್ಕಿದೆ. ಆದರೆ ಕಾಯುತ್ತಿದ್ದೇನೆ..... ಮರಣವಾದರೂ ಬೇಗ ಬರಬಾರದೇ ಎಂದು!
Comments
Post a Comment