ಒಂದು ಹುಡುಕಾಟ- ಕಥೆ

ಹುಡುಕಾಟ

*

ಹುಡುಕಾಟ ಪ್ರಾರಂಭಿಸಿ ವರ್ಷಗಳಾಯಿತು... ಎಲ್ಲೂ ಕಾಣಿಸಲಿಲ್ಲ. ಒಬ್ಬೊಬ್ಬರು ಒಂದೊಂದು ಕಡೆ ಹುಡುಕಲು ಹೇಳಿದರು. ಹುಡುಕಿದೆ. ನಂತರ ತಿಳಿಯಿತು ಅವರು ಹೇಳಿದ್ದು ಅವರಿಗೆ ಏನು ಬೇಕೋ ಅದನ್ನು ಹುಡುಕಲು!! ನನಗೇನು ಬೇಕು ಅನ್ನುವುದು ಪಾಪ ಅವರಿಗೇನು ಗೊತ್ತು?

ಆದರೂ ಹುಡುಕಿದೆ... ಹುಡುಕುತ್ತಿದ್ದೇನೆ... ಸಿಗುತ್ತದೆಯೇ ಇಲ್ಲವೇ ತಿಳಿಯದು... ಹುಡುಕಾಟ ಮಾತ್ರ ನಿರಂತರ!

ಅಮ್ಮನ ಗರ್ಭದಿಂದ ಹೊರಬರುವವರೆಗೆ ಚಿಂತೆಯಿಲ್ಲ! ಹೊರಬಂದಮೇಲೆ ಅವರಿವರನ್ನು ನೋಡಿ ಕಲಿತ ಅನುಕರಣೆ! ನನ್ನತನವೇನೆಂದೇ ನನಗೆ ತಿಳಿಯದು!

ಕಲಿತದ್ದೇನು? ಏನಿದೆ ಕಲಿಯಲು? ಭವಿಷ್ಯವೇನೋ ನನಗೆ ತಿಳಿಯದು... ಸ್ವರ್ಗ ನರಕಗಳ ಚಿಂತೆ ನನಗಿಲ್ಲ... ವರ್ತಮಾನದಲ್ಲಿ ಕಾಣುತ್ತಿರುವುದೇನು?

ಜನ! ಗಡಿಬಿಡಿ! ಕೋಪ! ಅಸಹನೆ! ಯಾವುದಕ್ಕಾಗಿಯೋ ಹೋರಾಟ!!

ಕಟ್ಟಡಗಳು, ಕಣ್ಮರೆಯಾಗುತ್ತಿರುವ ಗಿಡಮರಗಳು, ಪ್ರಾಣಿ ಪಕ್ಷಿಗಳು!!

ಮನುಷ್ಯ ಪ್ರಪಂಚದಲ್ಲಿ ತಾನೇ ಸಾರ್ವಭೌಮ ಅಂದುಕೊಂಡಿದ್ದಾನೆ. ಅವನ ನಾಶಕ್ಕೆ ಅವನೇ ಮುನ್ನುಡಿಯನ್ನು ಬರೆಯುತ್ತಿದ್ದಾನೆ!

ವಿಷಯ ಬೇರೆಡೆಗೆ ತಿರುಗುತ್ತಿದೆ- ನಾನು ಹುಡುಕುತ್ತಿರುವುದು....

ಪುರುಷ- ಪ್ರಕೃತಿ!

ಗಂಡು ಹೆಣ್ಣು!!

ಪುರುಷ ಪುರುಷ ಸೇರಿದರೆ ಯಾವುದೇ ಪ್ರಯೋಜನವಿಲ್ಲ! ಪ್ರಕೃತಿ ಪ್ರಕೃತಿ ಸೇರಿದರೂ ಪ್ರಯೋಜನವಿಲ್ಲ! ಪುರುಷ ಪ್ರಕೃತಿಯ ಸಮ್ಮಿಲನವಾದಾಗ ಸೃಷ್ಟಿ!!!

ಕೇವಲ ಮನುಷ್ಯರಿಗೆ ಅನ್ವಯಿಸುವುದಲ್ಲ!! ಅಖಿಲಾಂಡ ಕೋಟಿ ಬ್ರಹ್ಮಾಂಡವನ್ನು ಒಳಗೊಂಡ ಪ್ರಪಂಚಕ್ಕೆ ಅನ್ವಯಿಸುವ ವಿಷಯ!! ಆದರೂ ಮನುಷ್ಯ ಅಂದುಕೊಂಡಿದ್ದಾನೆ ತಾನೇ ಶ್ರೇಷ್ಠನೆಂದು!

ಮೇಲು, ಕೀಳು, ಶ್ರೇಷ್ಠ, ಅಧಮ.... ಪುನಹ ಕೈಬಿಟ್ಟು ಹೋಗುತ್ತಿದೆ ವಿಷಯ... ನನ್ನ ಹುಡುಕಾಟ....

ನಿಯಮಗಳು, ಕಟ್ಟುಪ್ಪಾಡುಗಳು... ಗಂಡು ಹೆಣ್ಣಿನ ನಡುವೆ ಆಕರ್ಷಣೆ.... ಯುದ್ಧ!!!

ಮನುಷ್ಯ ಮನುಷ್ಯನ ನಡುವೆ ಯುದ್ಧ!! ಮೇಲ್ಮೆಗಾಗಿ ಯುದ್ಧ, ಸರ್ವ ನಾಶಕ್ಕಾಗಿ ಯುದ್ಧ!!

ನಿಜ... ನನ್ನ ಹುಡುಕಾಟ ವ್ಯರ್ಥ!

ಅತಿ ವಿಶಾಲವಾದ- ಅಂತ್ಯವಿಲ್ಲದ ಪ್ರಪಂಚದಲ್ಲಿ ಹುಡುಕಾಟ ಪ್ರಾರಂಭಿಸಿದರೂ ಬಂದು ನಿಲ್ಲುವುದು ಗಂಡು ಹೆಣ್ಣಿನ ನಡುವೆ- ಅವರ ಆಕರ್ಷಣೆಯಲ್ಲಿ!!ಮೇಲು ಕೀಳುಗಳ ತಾಕಲಾಟದಲ್ಲಿ ಬೆಂದು ಕರಕಲಾಗುತ್ತಿರುವ ಪ್ರಪಂಚದಲ್ಲಿ... ಏನನ್ನು ಹುಡುಕಲಿ? ನನ್ನೊಳಗಿ ನಾನು ಎನ್ನಲೆ- ಏನದು? ಆತ್ಮ ಎನ್ನಲೆ- ಏನದು? ಮನಸ್ಸು ಎನ್ನಲೆ- ಅದೇನು? ಶಾಂತಿಯನ್ನೆ? ಸಿಗುತ್ತದೆಯೆ? ಎಲ್ಲಿ.....?

ತಿಳಿಯದು- ಏನು ನಾನೆಂದೋ, ಹುಡುಕುತ್ತಿರುವುದು ಏನನ್ನು ಎಂದೋ. ಆದರೂ ಹುಡುಕುತ್ತಿದ್ದೇನೆ- ಏನನ್ನು ಹುಡುಕುತ್ತಿದ್ದೇನೋ ತಿಳಿಯದೆ! ಬದುಕಿದ್ದೇನೆ- ಏಕೆ ಬದುಕಿದ್ದೇನೋ ತಿಳಿಯದೆ!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!