ಅಮ್ಮ- ಕಥೆ!
೧
ಚಿಕ್ಕಂದಿನಲ್ಲಿ ನಾನೂ ನನ್ನ ಅಮ್ಮನೊಂದಿಗೆ ಭಿಕ್ಷೆಬೇಡುತ್ತಿದ್ದೆ. ನಮ್ಮದು ಯಾವ ಮತವೆಂದೋ..., ನಾವು ಯಾವ ಜಾತಿಗೆ ಸೇರಿದವರೆಂದೋ..., ಏನೂ ತಿಳಿಯದು. ಆದರೆ ಅಮ್ಮ ಬುರ್ಖಾ ಧರಿಸುತ್ತಿದ್ದರು. ನನ್ನ ಕೈಹಿಡಿದು ಮನೆಮನೆಗೆ, ಅಂಗಡಿ ಅಂಗಡಿಗೆ ಭಿಕ್ಷೆಗೆಂದು ಕರೆದೊಯ್ಯುತ್ತಿದ್ದರು. ದಾರಿಯಲ್ಲಿ ಸಿಗುವ ಹಣವಂತರೆದುರೂ ಕೈ ಚಾಚುತ್ತಿದ್ದರು.
ಎಷ್ಟೇ ಕಷ್ಟವಾದರೂ ನನ್ನನ್ನು ಓದಿಸಬೇಕೆನ್ನುವುದು ಅಮ್ಮನ ಆಸೆ. ಶಾಲೆಗೆ ಸೇರಿಸಿದರು.
ಅಮ್ಮ ಯಾವಾಗಲೂ ಹೇಳುತ್ತಿದ್ದ ಮಾತೊಂದೇ,
“ನನ್ನಿಂದಾಗಿ ನೀನು ತಲೆತಗ್ಗಿಸಬೇಕಾಗಿ ಬರಬಹುದು, ಆದರೆ ನಿನ್ನಿಂದಾಗಿ ನಾನು ತಲೆಯೆತ್ತಿ ನಡೆಯುವಂತೆ ಮಾಡಬೇಕು”
ಅಮ್ಮ ಹಾಗೇಕೆ ಹೇಳುತ್ತಿದ್ದರೋ ಮೊದಲೆಲ್ಲಾ ನನಗೆ ತಿಳಿಯಲಿಲ್ಲ. ಕಾಲಕ್ರಮೇಣ ತಿಳಿಯಿತು.
ಒಂದುರಾತ್ರಿ, ಅಮ್ಮ ಕೊಟ್ಟ ಹಾಲು ಕುಡಿಯದೆ ಮಲಗಿದ ನನಗೆ ಯಾರೋ ನರಳುತ್ತಿರುವ ಶಬ್ದ ಕೇಳಿ ಎಚ್ಚರವಾಯಿತು. ಸಮೀಪದಲ್ಲಿ ಅಮ್ಮ ಇಲ್ಲ. ಪಕ್ಕದ ಗೋಡೆಯ ಆಚೆಯಿಂದ ಮುಲುಕುಗಳೂ ನರಳುವಿಕೆಯೂ ನಿಟ್ಟುಸಿರುಗಳೂ ಕೇಳಿಸುತ್ತಿದ್ದವು. ಹೆದರುತ್ತಲೇ ಹೋಗಿ ನೋಡಿದೆ. ಅಮ್ಮನ ಪಕ್ಕದಲ್ಲಿ ಯಾರೋ ಪರಪುರುಷನೊಬ್ಬ ಮಲಗಿದ್ದ. ಅವರಿಗೆ ತಿಳಿಯದಂತೆ ಬಂದು ಮಲಗಿದೆ.
ಮಾರನೆಯದಿನ ಅಮ್ಮ ಕೊಟ್ಟ ಹಾಲು ಕುಡಿದು ಮಲಗಿದ್ದರಿಂದ ಎಚ್ಚರವಾಗಲಿಲ್ಲ! ಅದರ ಮಾರನೆಯದಿನ ಹಾಲು ಕುಡಿಯಲಿಲ್ಲ. ಅದೇ ಅನುಭವ! ಈ ಬಾರಿ ಯಾರೋ ಬಂದಿದ್ದು, ಅಮ್ಮ ಎದ್ದು ಹೋಗಿದ್ದು, ಪಿಸುಮಾತು, ಮುಲುಕುಗಳು, ನಿಟ್ಟುಸಿರು, ಎಲ್ಲವೂ ಅನುಭವಕ್ಕೆ ಬಂದಿತು.
ಅಂದಿನಿಂದ ಅಮ್ಮನೊಂದಿಗಿನ ನನ್ನ ಸಾಮೀಪ್ಯಕ್ಕೆ ಅಂತರ ಬೆಳೆಯಿತು. ಆ ಘಟನೆ ನನ್ನ ಮನಸಸ್ಸಿನ ಮೂಲೆಯಲ್ಲೆಲ್ಲೋ ಹುದುಗಿಕೊಂಡಿತು.
ಅಮ್ಮನ ಬಗ್ಗೆ ನನಗೇನೋ ಸೂಚನೆ ಸಿಕ್ಕಿದೆಯೆಂದು ಅಮ್ಮನಿಗೂ ತಿಳಿಯಿತು. ನನ್ನನ್ನು ದೂರದ ಹಾಸ್ಟೆಲ್ಲಿಗೆ ಸೇರಿಸಿದರು. ನಾನೊಂದು ಹೊರೆಯಾಗಿದ್ದರಿಂದಲೇ ಅಮ್ಮ ಹಾಗೆ ಮಾಡಿದರೆಂಬ ವ್ಯತಿರಿಕ್ತ ಭಾವನೆಯೊಂದು ಮನವನ್ನು ಕದಡಿತು.
೨
ಕಲಿಯಲಾರಂಭಿಸಿದೆ. ಪುಸ್ತಕಗಳೇ ನನ್ನ ಗೆಳೆಯರಾದರು. ಜ್ಞಾನಾರ್ಜನೆಯೇ ನನ್ನ ಗುರಿಯಾಯಿತು. ಓದಿಗೆ ಬೇಕಾದ ಹಣ ನನ್ನನ್ನು ಸೇರುತ್ತಿತ್ತು. ಅದು ಹೇಗೆ ಅನ್ನುವ ಅರಿವು- ಈಗ ನನಗಿತ್ತು!
ಯಾವುದೇ ತೊಂದರೆಯಿಲ್ಲದೆ ಓದಿದೆ, ಬೆಳೆದೆ, ಇಂಜಿನಿಯರಾದೆ.
ವ.ಯ.ಸ್ಸಾ.ಗಿ.ದ್ದ.ರಿಂ.ದ ಅಮ್ಮನನ್ನು ನಾನೇ ನೋಡಿಕೊಳ್ಳಬೇಕಾಯಿತು! ಇಬ್ಬರೂ ಒಟ್ಟಿಗೆ ಇದ್ದರೂ ಪರಸ್ಪರ ಪ್ರೀತಿಯನ್ನು ಪ್ರಕಟಪಡಿಸಲಾರದಾದೆವು. ಅಮ್ಮನನ್ನು ನಾನು ಅರ್ಥಮಾಡಿಕೊಳ್ಳಲು ಶ್ರಮಿಸಲೇ ಇಲ್ಲ!
ಹೀಗಿರುವಾಗ ಬರವಣಿಗೆ ನನ್ನ ಹವ್ಯಾಸವಾಯಿತು, ಕಥೆಗಳನ್ನು ಬರೆಯಲಾರಂಭಿಸಿದೆ. ನಾನು ಬರೆದ ಮೊದಲ ಕಥೆಯೇ ವಿವಾದಕ್ಕೆ ಈಡಾಯಿತು. ವೃದ್ಧಾಶ್ರಮಗಳಿಂದ ವಯಸ್ಸಾದ ಮನುಷ್ಯರನ್ನು ಕೊಂಡುಕೊಂಡು, ಅಥವಾ ವೃದ್ಧರನ್ನು ಅಪಹರಿಸಿ..., ಇಲಿ, ಮೊಲ, ಮಂಗಗಳ ಮೇಲೆ ಪ್ರಯೋಗಗಳನ್ನು ನಡೆಸುವಂತೆ- ಜೀವಂತ ಮನುಷ್ಯರಮೇಲೆ ಪ್ರಯೋಗ ನಡೆಸುವ ಸಂಸ್ಥೆಯೊಂದರ ಕಥೆ! ಅದರಲ್ಲಿನ ನಾಯಕ- ಸಾಯುವವರೆಗೆ ವೃದ್ಧರಿಗೆ ಸಣ್ಣ ಸಣ್ಣ ಗಾಯವನ್ನು ಮಾಡಿ, ಅವರು ನರಳುತ್ತಿದ್ದರೆ ನೋಡಿ ಸಂತೋಷಗೊಳ್ಳುವ ಸ್ಯಾಡಿಸ್ಟ್!
ಓದುಗರು ವಿರೋಧಿಸಿದರು, ಹಾಗೆ ನಡೆಯಲು ಸಾದ್ಯವೇ ಇಲ್ಲವೆಂದರು. ಅದನ್ನು ನಿರೂಪಿಸಲು ವ್ಯಕ್ತಿಯೊಬ್ಬ ನನ್ನ ಬಳಿಗೆ ಬಂದ. ಯಾವುದೇ ಪೀಠಿಕೆಯಿಲ್ಲದೆ ಕೇಳಿದ,
“ನಿನ್ನ ಅಮ್ಮನನ್ನು ನನಗೆ ಮಾರುವೆಯಾ?”
ಆವೇಶದಿಂದ ಮುನ್ನುಗ್ಗಿದೆ. ನಾನು ಕೊಟ್ಟ ಪೆಟ್ಟು ಆತನಿಗೆ ಬಿದ್ದಿದ್ದರೆ ಆತ ಸತ್ತೇ ಹೋಗುತ್ತಿದ್ದ!
ಆದರೆ ಒಂದು ಕ್ಷಣ ಯೋಚಿಸಿದೆ! ಅಮ್ಮನಿಂದ ನನಗಿರುವ (ಆಗಿರುವ- ಅಲ್ಲ! ಅದನ್ನು ಮನಃಪೂರ್ವಕವಾಗಿ ಮರೆತೆ! ಅಮ್ಮನೆಂಬುದನ್ನೇ ಮರೆತವನಿಗೆ...) ಉಪಯೋಗವಾದರೂ ಏನು?! ಅವರೀಗ ನನಗೊಂದು ಹೊರೆಯಲ್ಲವೇ?
ಇಷ್ಟು ವರ್ಷಗಳಲ್ಲಿ ಅಮ್ಮನ ವಿಷಯವೊಂದನ್ನು ಬಿಟ್ಟು ಉಳಿದದ್ದೆಲ್ಲದರ ಬಗ್ಗೆಯೂ ಸಕಾರಾತ್ಮಕವಾಗಿ ಚಿಂತಿಸಿದವನು ನಾನು- ಲಾಭವನ್ನು ಪಡೆದವನು! ಇಂದು ಅಮ್ಮನಬಗ್ಗೆಯೂ ಸ.ಕಾ.ರಾ.ತ್ಮ.ಕ.ವಾ.ಗಿ ಚಿಂತಿಸಲು ತೀರ್ಮಾನಿಸಿದೆ.!!
ಈ ಪ್ರಪಂಚವೆಲ್ಲಾ ಒಂದೇಪ್ರಕಾರವಾಗಿರುವಾಗ ನಾನುಮಾತ್ರ ಬದಲಾದರೆ ಹೇಗೆ?
ನಿನ್ನಿಂದಾಗಿ ನಾನು ತಲೆಯೆತ್ತಿ ನಡೆಯುವಂತಾಗಬೇಕೆಂಬ ಅಮ್ಮನ ಮಾತಿನ ಅರ್ಥ; ನಾನು ಬೆಳೆದು, ವಿದ್ಯಾವಂತನಾಗಿ, ಪ್ರಪಂಚದಲ್ಲಿ ಒಂದು ಸ್ಥಾನಮಾನವನ್ನು ಪಡೆದು ಅಮ್ಮನನ್ನು ಅರಿತು, ಕ್ಷಮಿಸಿ, ಬಾಳಬೇಕೆಂದು ಹೇಳಿದ್ದೆಂದು ತಿಳಿಯಲಾರದೆ ಹೋದೆ. ತಿಳಿದರೂ ಮನಸ್ಸಾಕ್ಷಿಯನ್ನು ಅದುಮಿಟ್ಟೆ.
ಅಮ್ಮ ಹಾಗೆ ಬದಲಾಗಲು ಎದುರಾದ ಪರಿಸ್ಥಿತಿಯಬಗ್ಗೆಯೋ, ಅಮ್ಮನ ಮಾನಸಿಕ ಸ್ಥಿತಿಯಬಗ್ಗೆಯೋ, ಅಮ್ಮನ ಈಗಿನ ಅವಸ್ತೆಯಬಗ್ಗೆಯೋ ಯೋಚಿಸದೆ.....
“ಎಷ್ಟು ಕೊಡುತ್ತೀರಿ?” ಎಂದೆ!
ಆತ ಕೊಂಡುಕ್ಕೊಳ್ಳಲಿಲ್ಲ .ಅದು ಬೇರೆ ಪ್ರಶ್ನೆ! ಆದರೆ ಆತನ ಮುಖದಲ್ಲಿ ಪ್ರಕಟವಾದ ಭಾವ... ನನ್ನೊಳಗಿನ ರಾಕ್ಷಸ ಅಟ್ಟಹಾಸಗೈಯ್ಯುವಂತಾ ಸಂತೋಷವನ್ನು ನೀಡಿತು.
ನನ್ನ ಕಥೆಯನ್ನು ನಾನು ಸಮರ್ಥಿಸಿದ್ದೆ..!! ಬಿಟ್ಟ ಬಾಯಿ ಬಿಟ್ಟಂತೆ ಆತ ಹೊರಟು ಹೋದ..!!
ನಂತರ ಅಮ್ಮ ಏನಾದರೆಂದು ಯಾರೊಬ್ಬರಿಗೂ ತಿಳಿಯುವ ಅವಕಾಶವೇ ಇರಲಿಲ್ಲ!
Comments
Post a Comment