ಮರ

ದೇವರೇ ಯಾಕೆ? ಯಾಕೆ ನನ್ನ ಬಳಿ ಯಾರೂ ಬರುತ್ತಿಲ್ಲ? ನನ್ನ ಈ ಬೃಹದಾಕಾರದಿಂದ ನಾನು ಸೃಷ್ಟಿಸಿರುವ ನೆರಳು ಯಾರಿಗೂ ಬೇಡವೇ?

ಹಿಂದೆ, ದುಡಿದು ದಣಿದು ಬರುತ್ತಿದ್ದ ಜನ ನನ್ನ ಈ ನೆರಳಿನಲ್ಲಿ ಕುಳಿತು ಹರಟುತ್ತಾ ಮುದನೀಡುವ ಜಾನಪದ ಹಾಡುಗಳನ್ನು ಹಾಡುತ್ತಾ ದೇಹದ ದಣಿವನ್ನೂ ಮನಸ್ಸಿನ ದಣಿವನ್ನೂ ನಿವಾರಿಸಿಕೊಂಡು, ಕೈಮುಗಿದು ನನಗೆ ಧನ್ಯವಾದವನ್ನು ಅರ್ಪಿಸಿ ಮುಂದಕ್ಕೆ ಹೋಗುತ್ತಿದ್ದರು. ಬರುಬರುತ್ತಾ ಆ ಸಂಖ್ಯೆ ಕಡಿಮೆಯಾಗಿ ಈಗ ಇಲ್ಲವಾಗಿದೆ.

ನಮ್ಮ ಸಂಖ್ಯೆಯೂ ಇಲ್ಲವಾಗಿದೆ.

ನನ್ನ ಸುತ್ತಲೂ ಇದ್ದ ಅನೇಕ ಗಿಡಮರಗಳನ್ನು ಈ ನೀತಿಗೆಟ್ಟ ಜನ ಕಡಿದುರುಳಿಸಿದರು. ನನ್ನ ಬಂಧುಗಳು ಸಾಯುವಾಗ ಮಾಡಿದ ಆರ್ತನಾದ ಈಗಲೂ ನನ್ನ ಕಿವಿಯಲ್ಲಿ ಮೊಳಗುತ್ತಿದೆ.

ಜನರೇಕೆ ಹೀಗೆ? ನಾವು ಅವರಿಗೇನು ಕೇಡು ಮಾಡಿದ್ದೇವೆ?

ಅವರು ಕಲುಷಿತಗೊಳಿಸುತ್ತಿರುವ ವಾಯುವನ್ನು ಶುದ್ಧಗೊಳಿಸುತ್ತಿರುವುದು ತಪ್ಪೇ? ಅವರು ಸವೆಸುತ್ತಿರುವ ಮಣ್ಣನ್ನು ಸಂರಕ್ಷಿಸುತ್ತಿರುವುದು ತಪ್ಪೇ? ಅವರಿಗೆ ಹಣ್ಣು ಹಂಪಲುಗಳನ್ನು ನೀಡುತ್ತಿರುವುದು ತಪ್ಪೇ? ಭೂಮಿಯ ವಾತಾವರಣ ಹದಗೆಡದಂತೆ- ಸಮತೋಲನದಲ್ಲಿಟ್ಟಿರುವುದು ತಪ್ಪೇ? ಅವರ ಜೀವನವೇ ನಮ್ಮನ್ನವಲಂಬಿಸಿದೆ ಅನ್ನುವುದು ತಿಳಿದಿದ್ದರೂ ಅವರೇಕೆ ಹೀಗೆ?

ದೇವರೇ ಅವರಿಗೆ ವಿವೇಕವನ್ನು ನೀಡು, ಅವರ ಬುದ್ಧಿಶಕ್ತಿಯನ್ನು ಬೆಳೆಸು, ವೈಜ್ಞಾನಿಕವಾಗಿ ಬೆಳೆಯುತ್ತಿದ್ದೇವೆ ಎಂದು ಮೂಢವಾಗಿ ನಂಬುವುದಲ್ಲ, ಪರಿಸರವನ್ನು- ಪ್ರಕೃತಿಯನ್ನು ತಿಳಿದುಕೊಳ್ಳುವುದು ನಿಜವಾದ ವೈಜ್ಞಾನಿಕತೆ ಎಂದು ಅವರಿಗೆ ತಿಳಿಸಿಕೊಡು.

ನಮ್ಮನ್ನು ನೆಟ್ಟು ಬೆಳೆಸದಿದ್ದರೂ ಚಿಂತೆಯಿಲ್ಲ, ಉಳಿದಿರುವ ನಮ್ಮನ್ನು ನಾಶಪಡಿಸದಿದ್ದರೆ ಸಾಕು, ನಮ್ಮನ್ನು ನಾವೇ ಬೆಳೆಸಿಕೊಳ್ಳುತ್ತೇವೆ.

ಜೀವ ಸಂಕುಲದ ನೆಲೆನಿಲ್ಲುವಿಕೆ ನಮ್ಮನ್ನು ಅವಲಂಬಿಸಿದೆ ಎನ್ನುವ ಅರಿವನ್ನು ಅವರಿಗೆ ನೀಡು.

ಎಂದೆಲ್ಲಾ ದೇವರನ್ನು ಪ್ರಾರ್ಥಿಸುತ್ತಿದ್ದ ಮರ ತನ್ನೆಡೆಗೆ ಬರುತ್ತಿರುವ ಜನರನ್ನು ಕಂಡು ಖುಷಿಗೊಂಡಿತು! ಆದರೆ ಅವರು ಬಂದ ಕಾರಣವನ್ನು ಅರಿತಾಗ- ಬೆಚ್ಚಿತು!

ಕೊಡಲಿ ಗರಗಸಗಳೊಂದಿಗೆ ತನ್ನನ್ನು ಕಡಿಯಲು ಜನ ಸುತ್ತುವರೆದಾಗ..., ಮಣ್ಣನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ ಬೇರು ಸಡಿಲಗೊಂಡಿತು.

ಧರೆಗುರುಳುವಾಗಲೂ..., ಮೂಢ ಜನರಿಗೆ ಜ್ಞಾನವನ್ನು ನೀಡೆಂಬ ಪ್ರಾರ್ಥನೆ ಮುಂದುವರೆಸಿತು!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!