ಪ್ರಾಕ್ಟಿಕಲ್ ಜೋಕ್- ಆತ್ಮ ಹತ್ಯೆಗೆ ಯೋಗ್ಯವಾದದ್ದು!!!- ಕಥೆ
ಪ್ರಾಕ್ಟಿಕಲ್ ಜೋಕ್
*
ಸಿನೇಮಾ ನಿರ್ದೇಶಕನಾಗಬೇಕೆನ್ನುವುದು ನನ್ನ ಕನಸು.
ಕನಸು ಕಾಣ ತೊಡಗಿದಮೇಲೆ ಅದರ ಸಾಧನೆಗೆ ಶ್ರಮಿಸಲೇ ಬೇಕಲ್ಲ?
ಶ್ರಮಿಸಲಾರಂಭಿಸಿದೆ.
ಬೆಂಗಳೂರು, ಮೈಸೂರು, ಶಿವಮೊಗ್ಗ ಎಂದು ಎಲ್ಲಾಕಡೆ ಸುತ್ತಾಡಿದೆ. ಹಲವು ನಿರ್ದೇಶಕರನ್ನು ಕಂಡು ಅಸಿಸ್ಟಂಟ್ ಆಗಿ ಸೇರಿಸಿಕೊಳ್ಳಿ ಎಂದೆ.
ಹೊಸಬನಾದ್ದರಿಂದಲೂ ಮತ್ತೇನೋ ಕಾರಣಗಳಿಂದಲೂ ಯಾರೂ ಸೇರಿಸಿಕೊಳ್ಳಲಿಲ್ಲ.
ಎರಡುವರ್ಷದ ಅಲೆದಾಟದ ನಂತರ ನನ್ನ ಗೆಳೆಯನೊಂದಿಗೆ ಒಬ್ಬರು ನಿರ್ಮಾಪಕರನ್ನು ಕಂಡೆ.
ಅವರು ನನಗೆ ಸಹಾಯ ಮಾಡುವುದಾಗಿ ಹೇಳಿದರು.
ಹಲವು ನಿರ್ದೇಶಕರ ಪರಿಚಯವಿರುವುದಾಗಿಯೂ ಯಾರಾದರೊಬ್ಬರನ್ನು ಪರಿಚಯಿಸುವುದಾಗಿಯೂ ಹೇಳಿದರು. ವೃತ್ತಿಯಿಂದ ಅವರು ಸರ್ಕಾರಿ ಕಾಲೇಜೊಂದರಲ್ಲಿ ಪ್ರಾದ್ಯಾಪಕರು. ಸ್ವಂತ ಹೆಸರಿನಲ್ಲಿ ಸಿನೆಮಾ ನಿರ್ಮಿಸುವಂತಿಲ್ಲ. ಆದರೂ, ಸಿನೆಮಾ ನಿರ್ಮಿಸುತ್ತೇನೆ, ಯಾರಾದರೊಬ್ಬರನ್ನು ಪರಿಚಯಿಸುತ್ತೇನೆ ಎಂದು ಹೇಳುತ್ತಾ ಎರಡು ವರ್ಷ ಅಲೆಸಿದರು! ಪ್ರಾದ್ಯಾಪಕರಾದ್ದರಿಂದ ಒಂದುರೀತಿಯ ನಂಬಿಕೆ, ಕಾದೆವು.
ಪಾಪ..! ನನ್ನೊಂದಿಗೆ ನನ್ನ ಗೆಳೆಯನೂ ಅಲೆದಾ... ಅಲೆದಾ... ಅಲೆದಾ... ಅಲೆದದ್ದೇ ಆಯಿತು!
ಮನೆಯವರಿಂದ ಸಿಗುವ ಬೈಗುಳಕ್ಕೆ ಬಲಿಪಶು ಅವನೇ...!! ಅವನ ಕಾರಣದಿಂದ ನಾನು ಹೀಗೆ ದಾರಿ ತಪ್ಪಿ ನಡೆಯುತ್ತಿದ್ದೇನೆ ಎನ್ನುವುದು ಅವರ ನಂಬಿಕೆ..! ಗೆಳೆಯ ದೃತಿಗೆಡಲಿಲ್ಲ. ನನ್ನನ್ನು ಸಿನೆಮಾ ಪ್ರಪಂಚಕ್ಕೆ ತಲುಪಿಸಿಯೇ ತಲುಪಿಸುತ್ತೇನೆಂದ!
ಕೊನೆಗೊಂದುದಿನ, ಅವನ ಶ್ರಮದ ಫಲವಾಗಿ, ಅದೇ ನಿರ್ಮಾಪಕರು ನಮಗೆ ಕನ್ನಡದ ನಾದಬ್ರಹ್ಮರನ್ನು ಪರಿಚಯಿಸಿದರು.
ನಾದಬ್ರಹ್ಮ... ಕನ್ನಡ ಚಲನಚಿತ್ರ ರಂಗದ ಸಂಗೀತ ಸಾಮ್ರಾಟ... ಸಾಹಿತಿ... ವ್ಯಕ್ತಿತ್ವದ ಸಾಕಾರ ರೂಪ.
ಅವರನ್ನು ಪರಿಚಯಗೊಂಡು ಮಾತನಾಡುವಾಗ ಒಂದು ರೀತಿಯ ಥ್ರಿಲ್ ಅನುಭವಿಸಿದೆ. ಭೇಟಿಯೇ ಆಗುವುದಿಲ್ಲ ಅಂದುಕೊಳ್ಳುವವರನ್ನು ಭೇಟಿಯಾಗುವಾಗ ಆಗುವ ಥ್ರಿಲ್!
“ಏನು ನಿನ್ನ ಹೆಸರು?”ಕೇಳಿದರು. ಹೇಳಿದೆ.
"ನಿನಗೋಸ್ಕರ ನಾನೇನು ಮಾಡಲಿ?”
ಏನೂ ಹೇಳದೆ ಅವರ ಮುಖವನ್ನೇ ನೋಡಿದೆ!
ನಿರ್ಮಾಪಕರು ಮಾತನಾಡಿದರು,
“ಹುಡುಗನಿಗೆ ನಿರ್ದೇಶಕನಾಗಬೇಕೆಂಬ ಆಸೆ, ಸುಮಾರು ದಿನದಿಂದ ಅಲೆಯುತ್ತಿದ್ದಾನೆ. ನಿಮ್ಮನ್ನು ಪರಿಚಯಿಸುವುದಾಗಿ ಹೇಳಿದ್ದೆ....”
“ನಾನೇನು ಮಾಡಲಿ?” ಕೇಳಿದರು ನಾದಬ್ರಹ್ಮ!
"ಏನಾದರೊಂದು ವ್ಯವಸ್ಥೆಮಾಡಿ" ಎಂದರು ನಿರ್ಮಾಪಕರು.
“ಏನು ಓದಿದ್ದೀಯ?”
“ಎಮ್. ಎ, ಬಿ. ಎಡ್”ಎಂದೆ.
“ಎಮ್. ಎ, ಬಿ. ಎಡ್ ಮಾಡಿ ಸಿನೆಮಾಫೀಲ್ಡ್ ಗೆ ಬರುತ್ತಿದ್ದೀಯ?”
“ಹೌದು ಸರ್, ತುಂಬಾ ಕಥೆಗಳನ್ನು ಬರೆದಿದ್ದೇನೆ, ಅದನ್ನೆಲ್ಲಾ ಸಿನೆಮಾ ಮಾಡಬೇಕೆನ್ನುವ ಆಸೆ!”
ನಕ್ಕರು.
“ನನ್ನದೊಂದು ಕಾಲೇಜಿದೆ, ಅದರಲ್ಲಿ ಪಾಠ ಹೇಳಿಕೊಡುತ್ತೀಯ?”
ಅಮಾಯಕ ನಗು ನಕ್ಕೆ!
“ಹೆದರಬೇಡ... ಮದ್ಯಾಹ್ನದವರೆಗೆ ಪಾಠ ಹೇಳಿಕೊಡು, ಮದ್ಯಾಹ್ನಾನಂತರ ನನ್ನ ಸ್ಟುಡಿಯೋದಲ್ಲಿರು.”
“ಸರ್, ಮಧ್ಯೆ ನನಗೆ ಅವಕಾಶಸಿಕ್ಕಿ ಹೋಗಬೇಕಾಗಿ ಬಂದರೆ?”
“ಅದರಬಗ್ಗೆ ನೀನು ತಲೆಕೆಡಿಸಿಕೊಳ್ಳಬೇಡ! ಮುಂದಿನ ವಾರ ಬಂದು ಜಾಯಿನ್ ಆಗು.”ಎಂದರು.
ಸಂತೋಷದಿಂದ ಒಪ್ಪಿಕೊಂಡೆ.
ನಿಜವಾದ ಕಥೆ ಪ್ರಾರಂಭವಾಗುತ್ತಿರುವುದೇ ಈಗ!!
೨
ಬೆಂಗಳೂರು.
ಎರಡುಮೂರುಬಾರಿ ಬಂದಿದ್ದೇನೆ ಅನ್ನುವುದನ್ನು ಬಿಟ್ಟರೆ ನನಗೆ ಪರಿಚಯವೇ ಇಲ್ಲದ ಮಹಾ ನಗರ.
“ಮೆಜೆಸ್ಟಿಕ್‌ನಿಂದ ಶಂಕರಮಠಕ್ಕೆ ಬಸ್ಸು ಹತ್ತು, ಅಲ್ಲಿನ ವಿವೇಕಾನಂದ ಪಾರ್ಕ್‌ನ ಹಿಂದೆ ನನ್ನ ಸ್ಟುಡಿಯೋ." ಅಂದಿದ್ದರು.
ಹುಡುಕುವುದು ಕಷ್ಟವಾಗಲಿಲ್ಲ.
ಸ್ಟುಡಿಯೋವನ್ನು ಪ್ರವೇಶಿಸಿದೆ.
ನಾದಬ್ರಹ್ಮರು ಇನ್ನೂ ಬಂದಿರಲಿಲ್ಲ.
ಲೈಬ್ರರಿಯಲ್ಲಿ ಕುಳಿತು ಕಾದೆ.
ಅವರು ಬಂದ ವಿಷಯವನ್ನು ಅಲ್ಲಿನ ಹುಡುಗ ಹೇಳಿದ. ಎದ್ದು ಹೋಗಿ ಭೇಟಿಯಾದೆ.
“ಹೇಳು, ಏನು ತೀರುಮಾನಿಸಿದ್ದೀಯ?”ಕೇಳಿದರು.
“ನನ್ನಲ್ಲಿ ಬದಲಾವಣೆಯೇನೂ ಇಲ್ಲ ಸರ್.”ಎಂದೆ.
“ಸರಿ, ನೀನೇನೂ ಪ್ರತಿನಿತ್ಯ ಪಾಠ ಹೇಳಿಕೊಡಬೇಕಾಗಿಲ್ಲ. ಯಾರನ್ನಾದರೂ ಪರಿಚಯವಾಗುವವರೆಗೆ ಇಲ್ಲೇ ಇರು, ನಂತರ ನಿನ್ನ ಸಮಯಕ್ಕೆ ಅನುಗುಣವಾಗಿ ಟೈಂಟೇಬಲ್ ರೆಡಿಮಾಡೋಣ, ನನ್ನ ಪ್ರಕಾರ ನೀನು ನನ್ನೊಂದಿಗೆ ಇದ್ದು ಕಾಂಟಾಕ್ಟ್ ಬೆಳೆಸಿಕೊಳ್ಳುವುದು ಒಳ್ಳೆಯದು. ಒಂದು ಸ್ಟಾಟಸ್ ಇರುತ್ತದೆ.”ಎಂದರು.
“ಖಂಡಿತ ಸರ್... ನಾನು ನನ್ನನ್ನು ಸಂಪೂರ್ಣವಾಗಿ ನಿಮಗೆ ಒಪ್ಪಿಸುತ್ತಿದ್ದೇನೆ”ಎಂದೆ.
“ಸರಿ, ಯಾವಾಗಿನಿಂದ ಬರುತ್ತೀಯ?”
“ನಾನು ಈಗಲೇ ರೆಡಿ ಸರ್.”
“ಬೇಡ, ಮುಂದಿನ ವಾರದಿಂದ ಬಾ.... ನೀನು ಮಾಡಬೇಕಾದ ಕೆಲಸಗಳಬಗ್ಗೆ ಹೇಳುತ್ತೇನೆ”ಎಂದರು.
“ಸರಿ ಸರ್.”ಎಂದು ಎದ್ದೆ.
“ಎಲ್ಲಿ ತಂಗಿದ್ದೀಯ?”
“ಬಸವನಗುಡಿಯಲ್ಲಿ ಗೆಳೆಯನೊಂದಿಗೆ ಸರ್.”
“ತುಂಬಾ ದೂರ ಆಯಿತಲ್ಲೋ...”
“ಪರವಾಗಿಲ್ಲ ಸರ್... ಮೈಸೂರಿನಿಂದ ನನ್ನ ಗಾಡಿ ತರುತ್ತೇನೆ.”
“ಸರಿ, ಒಳ್ಳೆಯದು, ಹಾಗೇ ಮಾಡು. ಮುಂದಿನ ಭಾನುವಾರ ಬೆಳಗ್ಗೆ ಹತ್ತುಗಂಟೆಗೆ ಬಂದು ನನ್ನನ್ನು ಕಾಣು.”
“ಸರಿ ಸರ್...” ಎಂದುಹೇಳಿ ಹೊರಟು ಬಂದೆ.
೩
ಶನಿವಾರ.
ನಾನು ತುಂಬಾ ಸಂತೋಷದಲ್ಲಿದ್ದೆ.
ನನ್ನ ಕನಸು ನನಸಾಗುತ್ತಿದೆ. ಅದರ ಥ್ರಿಲ್.
ಎಲ್ಲಾ ಬಟ್ಟೆಗಳನ್ನೂ, ಪುಸ್ತಕಗಳನ್ನೂ ಜೋಡಿಸಿಟ್ಟುಕೊಂಡೆ.
ನಾದಬ್ರಹ್ಮರನ್ನು ಪರಿಚಯವಾಗಲು ಕಾರಣನಾದ ಗೆಳೆಯ ರಾಮ ತಾನೂ ಬರುವುದಾಗಿ ಹೇಳಿದ್ದ. ಅವನಿಗೆ ಬೆಂಗಳೂರಿನ ಪರಿಚಯವಿದೆ.
ಇಬ್ಬರೂ ಸೇರಿ ನನ್ನ ಗಾಡಿಯಲ್ಲಿ ಹೊರಟೆವು.
ಚೆನ್ನಪಟ್ಟಣವನ್ನು ದಾಟಿ ಹೋಗುವಾಗ ನಾದಬ್ರಹ್ಮರಿಂದ ಕರೆ ಬಂತು.
“ನೀನು ಬರುತ್ತಿದ್ದೀಯೋ ಇಲ್ಲವೋ ತಿಳಿದುಕೊಳ್ಳಲು ಕರೆ ಮಾಡಿದೆ, ಸರಿ, ನಾಳೆ ಬಂದು ಭೇಟಿಯಾಗು.”ಎಂದರು
“ಖಂಡಿತ ಸರ್”ಎಂದೆ.
“ನಾಲಕ್ಕು ವರ್ಷ ಅಲೆದಾಡಿದ್ದಕ್ಕೂ ಸಾರ್ಥಕ.”ಎಂದೆ ಗೆಳೆಯನಿಗೆ. ನಕ್ಕ,
“ನಾವು ಅಂದುಕೊಂಡರೆ ಆಗಲೇ ಬೇಕಲ್ಲ?”ಎಂದ.
ಅಲ್ಲಲ್ಲಿ ಗಾಡಿ ನಿಲ್ಲಿಸಿ ಟೀ ಕುಡಿಯುತ್ತಾ, ಗಾಡಿಯನ್ನು ನಿಧಾನವಾಗಿ ಓಡಿಸುತ್ತಾ, ಕೆಲವೊಮ್ಮೆ ವೇಗವಾಗಿ ಓಡಿಸುತ್ತಾ, ಹಾಡು ಹೇಳುತ್ತಾ, ಖುಷಿಯಾಗಿ ಬೆಂಗಳೂರು ತಲುಪಿದೆವು.
ಬಸವನಗುಡಿಯಲ್ಲಿ ಗೆಳೆಯನ ರೂಮಿಗೆ ಬಂದಾಗ ಬೀಗ ಹಾಕಿತ್ತು!
ಫೋನ್ ಮಾಡಿ ಕೇಳಿದಾಗ, ನಾವು ಬರುವ ವಿಷಯವನ್ನು ಮರೆತು ರೂಮಿಗೆ ಬೀಗವನ್ನು ಹಾಕಿ ಮೈಸೂರಿಗೆ ಹೋಗಿಬಿಟ್ಟಿದ್ದ..!!
“ಸಾರಿ ಬ್ರದೇರ್ಸ್... ನಾಳೇನೆ ಬಂದುಬಿಡುತ್ತೇನೆ, ಒಂದುದಿನ ಅಡ್ಜಸ್ಟ್ ಮಾಡಿ.”ಎಂದ.
ರಾಮ ತಲೆ ಕೆಡಿಸಿಕೊಳ್ಳಲಿಲ್ಲ. ಅವನ ಮಾವನ ಮನೆಗೆ ಕರೆದುಕೊಂಡು ಹೋದ. ಅವರಿಗೆ ಸ್ವಲ್ಪ ತೊಂದರೆಯಾದರೂ ಅಂದಿನರಾತ್ರಿ ಅಲ್ಲಿ ಕಳೆದೆವು.
ಮಾರನೆಯದಿನ ಬೆಳಗ್ಗೆ ಶಂಕರಮಠಕ್ಕೆ ಬಂದೆವು.
೪
“ಬಂದೆಯಾ? ಬಾ... ಏನು ಮಾಡುತ್ತೀಯ? ನಾಳೆಯಿಂದ ಬರುತ್ತೀಯೋ, ಅಥವಾ ಇಂದು ಇಲ್ಲೇ ಇದ್ದು ಪರಿಚಯ ಮಾಡಿಕೊಂಡು ಹೋಗುತ್ತೀಯೋ?”ಎಂದರು ನಾದಬ್ರಹ್ಮ.
"ಪರಿಚಯಮಾಡಿಕೊಂಡು ಹೋಗುತ್ತೇನೆ ಸರ್"ಎಂದೆ.
“ಸರಿ ಹಾಗಾದರೆ”ಎಂದು ನನಗೆ ಹೇಳಿ,
“ಇನ್ನುಮೇಲೆ ಇವನು ಇಲ್ಲೇ ಇರುತ್ತಾನೆ, ಮಕ್ಕಳಿಗೆ ಪಾಠ ಹೇಳಿಕೊಡುತ್ತಾನೆ. ನಮ್ಮ ಬಿಲ್ಡಿಂಗ್ ಒಂದುಸಾರಿ ತೋರಿಸು.”ಎಂದು ಅಲ್ಲಿನ ಹುಡುಗನಿಗೆ ಹೇಳಿದರು
ರಾಮ "ನಾನು ಸಂಜೆ ಬರುತ್ತೇನೆ”ಎಂದು ಹೇಳಿ ಹೊರಟು ಹೋದ.
ಭಾನುವಾರವಾದ್ದರಿಂದ ರಜೆ. ಯಾರೂ ಇರಲಿಲ್ಲ. ಕಟ್ಟಡವನ್ನು ತೋರಿಸಿಕೊಟ್ಟು ಹುಡುಗ ಹೊರಟು ಹೋದ.
ಅಲ್ಲಿ ಇಲ್ಲಿ ಸುತ್ತುತ್ತಾ, ಲೈಬ್ರರಿಯಲ್ಲಿ ಕುಳಿತು ಕಥೆ ಬರೆಯುತ್ತಾ, ಪುಸ್ತಕವನ್ನು ಓದುತ್ತಾ ಸಮಯವನ್ನು ಕೊಂದೆ.
ಆದರೆ ಆ ಜಾಗ ನನಗೆ ತುಂಬಾ ಹಿಡಿಸಿತು.
ಮಧ್ಯಾಹ್ನವಾದಾಗ ನಾದಬ್ರಹ್ಮರ ಹೆಂಡತಿ ಬಂದು ಯಾರೆಂದು ವಿಚಾರಿಸಿ ಹೋದರು!
“ಇವನು ಯಾಕೆ ಇಲ್ಲಿ ಕುಳಿತಿದ್ದಾನೆ”ಎಂದು ಯಾರನ್ನೋ ಕೇಳುತ್ತಿದ್ದರು.
“ಲೆಕ್ಚರರಾಗಿ ತೆಗೆದುಕೊಂಡಿದ್ದಾರೆ ಮೇಡಂ"ಎಂದ ಆತ.
“ನಮಗೆ ಬೇಕಿರುವುದು ಲೇಡಿ ಟೀಚರ್... ಇವನಲ್ಲ”ಎನ್ನುತ್ತಿದ್ದರು.
“ಲೇಡೀನೂ ಬರುತ್ತಿದ್ದಾರೆ ಮೇಡಂ”ಎಂದ.
“ಹೌದಾ... ಹಾಗದರೆ ಸರಿ!”ಎಂದುಹೇಳಿ ಹೊರಟುಹೋದರು.
ಸಂಜೆಯಾದಾಗ ನಾದಬ್ರಹ್ಮರು ಬಂದರು.
“ಏನಪ್ಪಾ... ಏನನ್ನಿಸಿತು?”ಎಂದರು.
“ಖುಷಿಯಾಗಿದ್ದೇನೆ ಸರ್!”ಎಂದೆ.
“ಗುಡ್! ಈಗ ಹೊರಡು, ನಾಳೆಯ ಪ್ರೋಗ್ರಾಂಷೀಟ್ ನೋಡಿ ಫೋನ್ ಮಾಡುತ್ತೇನೆ”ಎಂದರು.
“ಸರಿ ಸರ್..”ಎಂದು ಹೇಳಿ ಹೊರಟೆ.
ರಾಮ ಆಗಲೇ ಬಂದು ನಿಂತಿದ್ದ.
ಬಸವನ ಗುಡಿಯ ಗೆಳೆಯ ಪುನಹ ಕೈಕೊಟ್ಟ! ಅವನೇ ಫೋನ್ ಮಾಡಿ,
“ಸಾವಿರ ಸಾರಿ! ದಯವಿಟ್ಟು, ನೀವು ಬರುವುದು ಇಷ್ಟವಿಲ್ಲದೆ ಹೀಗೆ ಮಾಡಿದೆನೆಂದು ತಿಳಿದುಕೊಳ್ಳಬೇಡಿ. ನಾಳೆ ಬೆಳಗ್ಗೆ ಎಂಟು ಗಂಟೆಗೆ ಅಲ್ಲಿರುತ್ತೇನೆ.”ಎಂದ!
ಪುನಹ ರಾಮನ ಮಾವನ ಮನೆ!!
ಅಂದು ರಾತ್ರಿ ಅಲ್ಲೇ ಕಳೆದೆವು.
ನಾದಬ್ರಹ್ಮರು ಫೋನ್ ಮಾಡಲಿಲ್ಲ. ನಾವೂ ತಲೆ ಕೆಡಿಸಿಕೊಳ್ಳಲಿಲ್ಲ. ಅವರಿಗೆ ಸಾವಿರ ಕೆಲಸ, ನಾವೇ ಅರ್ಥಮಾಡಿಕೊಳ್ಳಬೇಕು!
೫
ಮಾರನೆಯ ದಿನ, ಸೋಮವಾರ, ಬೆಳಗ್ಗೆ ಎಂಟುಗಂಟೆಯಾಗುವಷ್ಟರಲ್ಲಿ ಬಸವನಗುಡಿಯ ಗೆಳೆಯನ ರೂಂಗೆ ಹೋದೆವು. ಬಂದಿದ್ದ. ತಮಾಶೆಯ ಮಟ್ಟಿಗಾದರೂ ಕಾಲು ಮುಟ್ಟಿ ಕ್ಷಮೆ ಕೇಳಿದ! ನಮಗೆ ಸಮಯವಿರಲಿಲ್ಲ, ರಾಮನಿಗೂ ಮೈಸೂರಿಗೆ ಹೊರಡಬೇಕಿತ್ತು. ಲಗೇಜನ್ನು ರೂಮಿನಲ್ಲಿ ಬಿಟ್ಟು ಹೊರಟೆವು. ರಾಮನನ್ನು ಸಾಟಲೈಟ್ ಬಸ್ ನಿಳ್ದಾಣದಲ್ಲಿ ಬಿಟ್ಟು ನಾನು ಶಂಕರಮಠಕ್ಕೆ ಹೋದೆ.
ಗಾಡಿಯನ್ನು ಹೊರಗೆ ನಿಲ್ಲಿಸಿ ಸ್ಟುಡಿಯೋವನ್ನು ಪ್ರವೇಶಿಸಿದೆ.
ನನ್ನನ್ನು ನೋಡಿ,
“ಬಾರಪ್ಪಾ ಬಾ...”ಎಂದರು ನಾದಬ್ರಹ್ಮ.
“ತಗೋನಂಬರ್!”ಎಂದರು.
ಅವರು ಹೇಳಿದ ನಂಬರನ್ನು ನನ್ನ ಮೊಬೈಲ್‌ನಲ್ಲಿ ಫೀಡ್ ಮಾಡಿಕೊಂಡೆ.
“ಎನ್ ಪಿ ಅಂತ! ಡೈರೆಕ್ಟರ್! ಫೋನ್ ಮಾಡು, ನಾನು ಹೇಳಿದೆ ಅನ್ನು!”ಎಂದರು.
ನನಗೇನೂ ಅರ್ಥವಾಗಲಿಲ್ಲ.
“ಈಗಲೇ ಮಾಡಬೇಕೆ ಸರ್?”ಕೇಳಿದೆ.
“ನಿನಗೆ ಇಷ್ಟಬಂದಾಗ ಮಾಡು! ಗೇಟಿನಿಂದ ಹೊರಗಡೆ ಹೋಗಿ ನಿಂತು ಮಾಡು! ಇಲ್ಲಿ ಯಾರಿಗೂ ಡಿಸ್ಟರ್ಬ್ ಆಗಬಾರದು!”ಎಂದರು.
“ಸರ್... ಇಲ್ಲಿಯ ಕೆಲಸ?”ಕೇಳಿದೆ.
“ಇಲ್ಲಿ ನಿನಗೇನೂ ಕೆಲಸವಿಲ್ಲ!”ಎಂದರು.
“ಇಲ್ಲಿ ಕೆಲಸಮಾಡುತ್ತಾ.....”ನನ್ನನ್ನು ಪೂರ್ತಿಗೊಳಿಸಲು ಬಿಡಲಿಲ್ಲ.
“ಹೆಚ್ಚಿಗೆ ಮಾತನಾಡಬೇಡ, ಹೇಳಿದಷ್ಟು ಮಾಡು ಅಷ್ಟೆ!”ಎಂದರು.
ಒಂದು ಕ್ಷಣ ಎದೆ ಧಗ್ ಎಂದಿತು.
“ಅಲ್ಲಾ ಸರ್, ಇಲ್ಲಿಯ ಕೆಲಸ ಮಾಡುತ್ತಾ....”
“ನೋಡಯ್ಯಾ... ನಿನ್ನಂತವನು ಸಾವಿರ ಜನಾನ ನೋಡಿದ್ದೀನಿ, ನೀನು ಸಾವಿರದ ಒಂದನೆಯವನು! ಡೈರೆಕ್ಟರ್ ಆಗಬೇಕು ತಾನೆ? ದಾರಿ ತೋರಿಸಿದ್ದೀನಿ, ಸುಮ್ಮನೆ ಹೇಳಿದಷ್ಟು ಮಾಡು, ಹೋಗು!”ಎಂದರು.
ಹೊರಕ್ಕೆ ಹೊರಡುವ ಮುಂಚೆ,
“ಸರ್, ಅಗಾಗ ಬಂದು ನಿಮ್ಮನ್ನು ಭೇಟಿಯಾಗಬಹುದೇ?”ಕೇಳಿದೆ.
“ಅದರ ಅಗತ್ಯವಿಲ್ಲ! ಬೇಕಿದ್ದರೆ ನಾನೇ ಕರೆಸಿಕೊಳ್ಳುತ್ತೇನೆ”ಎಂದರು.
ಹೊರಬಂದೆ. ಮನಸ್ಸು ಬರಿದಾಗಿತ್ತು! ಆಗಿನ ನನ್ನ ಮಾನಸಿಕ ಸ್ಥಿತಿಗೆ ಯಾವುದೇ ಅರ್ಥವಿರಲಿಲ್ಲ.
ಎನ್ ಪಿಗೆ ಫೋನ್ ಮಾಡಿದೆ.
“ಸಂಜೆ ಆರುಗಂಟೆಗೆ ಮಾಡಪ್ಪಾ...”ಎಂದರು.
ಆರುಗಂಟೆಗೆ ಮಾಡಿದೆ.
“ನಾಳೆಬೆಳಗ್ಗೆ ಹನ್ನೊಂದುಗಂಟೆಗೆ ಫೋನ್ ಮಾಡಪ್ಪಾ!”ಎಂದರು.
ಮಾಡಿದೆ.
“ಸಂಜೆ ನಾಲಕ್ಕು ಗಂಟೆಗೆ ಬಂದು ಭೇಟಿಯಾಗು”ಎಂದರು.
ಹುಡುಕಿಕೊಂಡು ಹೋದೆ. ಫೋನ್ ಮಾಡಿದಾಗ
“ನಾನು ಹೊರಗೆ ಇದ್ದೀನಿ, ನಾಳೆ ಸಿಗುತ್ತೇನೆ" ಎಂದರು!
ಮೂರು ದಿನ ಕಳೆದಮೇಲೆ ಸಿಕ್ಕಿದರು...
“ನೋಡಪ್ಪಾ... ನನ್ನ ಸಿನೆಮಾ ಶುರುವಾಗುವುದು ಇನ್ನೂ ಒಂದೂವರೆ ವರ್ಷ ಕಳೆದಮೇಲೆ... ಆಗಲೂ ನಿನಗೆ ಕೆಲಸಕೊಡುತ್ತೇನೆ ಎನ್ನುವ ಯಾವ ಗ್ಯಾರಂಟೀನೂ ಇಲ್ಲ! ಹೊಸಬರು ಯಾರನ್ನೂ ಸೇರಿಸಿಕೊಳ್ಳುತ್ತಿಲ್ಲ, ನನ್ನ ಟೀಂ ಈಗಾಗಲೇ ರೆಡಿಯಾಗಿದೆ!”ಎಂದರು.
“ನಾದಬ್ರಹ್ಮರು ನಿಮ್ಮನ್ನು ಭೇಟಿಯಾಗಲು ಹೇಳಿದರು”ಎಂದೆ.
“ಅವರು ಸಾವಿರ ಜನರನ್ನು ಕಳಿಸುತ್ತಾರೆ! ಹಾಗಂತ ಎಲ್ಲರಿಗೂ ಕೆಲಸ ಕೊಡೋಕೆ ಆಗುತ್ತೇನೋ?” ಎಂದರು.
ನಾದಬ್ರಹ್ಮರು ಇವರನ್ನು ಭೇಟಿಯಾಗಲು ತಿಳಿಸಿದ್ದರ ಉದ್ದೇಶವೇನೋ ತಿಳಿಯಲಿಲ್ಲ!
ಹೊರಟೆ.
ಎನ್ ಪಿ ನನಗೆ ಇಷ್ಟವಾದರು! ಇರುವುದನ್ನು ನೇರವಾಗಿ ಹೇಳಿದರು. ನಾದಬ್ರಹ್ಮರೂ ಹಾಗೆ ಹೇಳಿದ್ದರೆ ಏನಾಗುತ್ತಿತ್ತು?
ಕೆಲಸವಿದೆಯೆಂದು ನಂಬಿಸಿ, ಕರೆಸಿ, ಒಂದುದಿನವೆಲ್ಲಾ ಅಲ್ಲಿಯೇ ಇರಿಸಿ, ಅದರಲ್ಲೂ ರಜಾ ದಿನ... ನಂತರ ಯಾಕೆ ಹೀಗೆ ಮಾಡಿದರು?
ತಿಳಿಯದು...!!
ಬೆಂಗಳೂರಿನಿಂದ ಮರಳಿದೆ.
ಬರುವಾಗ ಗೆಳೆಯನಿದ್ದ. ಅಷ್ಟು ಕಷ್ಟವೆನಿಸಲಿಲ್ಲ.
ಈಗ ಒಬ್ಬನೇ... ಬೆಂಗಳೂರಿನಿಂದ ಮೈಸೂರಿಗೆ... ಗಾಡಿಯಲ್ಲಿ...
ಮೈಸೂರು ತಲುಪಿದಾಗ ಸುತ್ತಮುತ್ತಲಿನವರ ಪ್ರಶ್ನೆಗಳು, ನಗು, ಅಪಹಾಸ್ಯ...!
ಅದೇನೂ ನನ್ನನ್ನು ಅಷ್ಟು ದುಃಖಕ್ಕೀಡುಮಾಡುವುದಿಲ್ಲ. ಮನಸ್ಸೆಲ್ಲಾ ಒಂದೇ ಪ್ರಶ್ನೆ...
ನಾದಬ್ರಹ್ಮರು ಯಾಕೆ ಹೀಗೆ ಮಾಡಿದರು?
ನಾಲಕ್ಕು ವರ್ಷದ ಅಲೆದಾಟ ಬಂದು ನಿಂತದ್ದು ಇಲ್ಲಿ!
ಆದರೆ ಬಿಡುವುದಿಲ್ಲ!! ಗೆಲ್ಲುತ್ತೇನೆ, ಗೆಲ್ಲಬೇಕು.
ನನ್ನಂತಾ ಸಾವಿರಜನರನ್ನು ನೋಡಿದ್ದಾರಂತೆ! ಅವರಂತವರನ್ನು ನಾನು ಬೇರೆ ನೋಡಿಲ್ಲ!
Comments
Post a Comment