ನಿಮಿತ್ತ - ಕಥೆ
ಒಬ್ಬ ರಾಜನಿದ್ದನಂತೆ,
ಗೌತಮ....,
ಒಂದು ಶವ - ಒಬ್ಬ ರೋಗಿ - ಒಬ್ಬ ವೃದ್ಧನನ್ನು ಕಂಡು ವೈರಾಗ್ಯ ಹೊಂದಿ ಬುದ್ಧನಾದನಂತೆ!
ಇಂದು?
ಶವಗಳರಾಶಿ, ರೋಗಿಗಳ ಗುಂಪು, ಅಸಂಖ್ಯಾತ ವೃದ್ಧರೇ ಕಂಡುಬರುತ್ತಿದ್ದಾರೆ...
ಯಾರಿಗೂ ಏನೂ ಅನ್ನಿಸುತ್ತಿಲ್ಲ – ಅನ್ನಿಸುವುದಿಲ್ಲ!
ಯಾಕೆ?
ಒಂದೇರೀತಿಯ ಘಟನೆ- ಒಂದೇ ರೀತಿಯಲ್ಲಿ- ಎಲ್ಲರಿಗೂ ಅನ್ವಯಿಸುವುದಿಲ್ಲ.
'ಧರ್ಮವು ನಶಿಸಿದಾಗಲೆಲ್ಲಾ ಅವತಾರವೆತ್ತುತ್ತೇನೆ' ಎಂದಿದ್ದಾನೆ ಭಗವಂತ. ಭಗವಂತನಾದರೂ ಸರಿಯೇ.. ಭೂಮಿಯಮೇಲೆ ಮನುಷ್ಯನಾಗಿ ಅವತರಿಸಿದರೆ ತನ್ನ ಅವತಾರದ ಉದ್ದೇಶವನ್ನು ತಿಳಿಯಲು ನಿಮಿತ್ತವೊಂದು ನಡೆಯಬೇಕಂತೆ- ಗೌತಮನಿಗೆ ಶವ- ರೋಗಿ- ವೃದ್ಧರು ಕಂಡಂತೆ!!
ಇಷ್ಟಕ್ಕೂ ಈ ನಿಮಿತ್ತಗಳೆಂದರೆ ಏನು?
ಮನುಷ್ಯನನ್ನು ಯೋಚಿಸುವಂತೆ ಮಾಡುವ ಸಣ್ಣ-ದೊಡ್ಡ ಘಟನೆಗಳು!
ನಡೆದ ಘಟನೆಯನ್ನು ನಾವು ಯಾವ ರೀತಿ ತೆಗೆದುಕೊಳ್ಳುತ್ತೇವೆ ಎನ್ನುವುದರಮೇಲೆ ನಮ್ಮ ಭವಿಷ್ಯ ನಿಂತಿರುತ್ತದೆ!
ಅದೇ ನಿಮಿತ್ತ!
೧
ಚಿಕ್ಕಂದಿನಲ್ಲಿ, ನಾನೊಂದು ಚಿತ್ರವನ್ನು ಬಿಡಿಸಿದೆ. ಅಮ್ಮನಿಗೆ ತೋರಿಸಿದಾಗ,
“ನನ್ನ ಮಗ ಚಿತ್ರ ಬಿಡಿಸೋದನ್ನೂ ಕಲಿತನ? ತುಂಬಾ ಚೆನ್ನಾಗಿದೆ" ಎಂದರು.
ಖುಷಿಗೊಂಡೆ.
ಆದರೂ ಏನೋ ಸಂಶಯ.
ಅದಕ್ಕಿಂತಲೂ ಚೆನ್ನಾಗಿರುವ ಮತ್ತೊಂದು ಚಿತ್ರವನ್ನು ಬಿಡಿಸಿ ಅಮ್ಮನಿಗೆ ತೋರಿಸಿದೆ.
“ನನ್ನ ಗೆಳೆಯ ಬಿಡಿಸಿದ ಚಿತ್ರ, ಹೇಗಿದೆ?”ಎಂದೆ.
“ಥೂ... ಯಾವ ಗೆಳೆಯನೋ...? ಇಷ್ಟೊಂದು ಕೆಟ್ಟದಾಗಿದೆ?” ಎಂದರು.
ನಾನೇನೂ ಮಾತನಾಡಲಿಲ್ಲ. ಆ ಕ್ಷಣದ ನನ್ನ ಬಾವನೆಗಳಿಗೆ ಅರ್ಥವನ್ನೂ ಹುಡುಕಲಿಲ್ಲ. ಆದರೂ ಆ ಘಟನೆ ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಿತು- ನನ್ನ ವ್ಯಕ್ತಿತ್ವವನ್ನು ರೂಪಿಸುವಂತೆ!
೨
ದಿನಪತ್ರಿಕೆಯೊಂದನ್ನು ಓದುತ್ತಾ ಕುಳಿತಿದ್ದೇನೆ.
ಮೊದಲ ಪುಟದಲ್ಲೇ ಆಕರ್ಷಕ ಚಿತ್ರ!
ಹುಡುಗಿಯೊಬ್ಬಳನ್ನು ಮೇಲಕ್ಕೆ ಎತ್ತಿ ಹಿಡಿದಿದ್ದಾರೆ!
ಅದರಲ್ಲಿ, ಸೊಂಟವನ್ನು ಬಳಸಿ ಹಿಡಿದಿರುವವನನ್ನು ಕಂಡು ಅಸೂಯೆಗೊಂಡೆ, ಆ ಅವಕಾಶ ನನಗೆ ಸಿಗಲಿಲ್ಲವಲ್ಲಾ ಎಂದು! ಚಿತ್ರವನ್ನೇ ನೋಡುತ್ತಿದ್ದಾಗ ಏನೋ ಅಸ್ವಾಭಾವಿಕತೆ! ಹುಡುಗಿ ಸುಂದರಿಯಾದರೂ ಮುಖದಲ್ಲಿ ಜೀವ ಕಳೆ ಇಲ್ಲ! ವಾರ್ತೆಯನ್ನು ಓದಿದಾಗ ತಿಳಿಯಿತು, ಜೀವವಿದ್ದರೆ ತಾನೆ ಕಳೆ?
ನದಿಯಲ್ಲಿ ಮುಳುಗಿದ ಬಸ್ಸಿನಿಂದ ಶವಗಳನ್ನು ಹೊರತರುತ್ತಿರುವ ರಕ್ಷಣಾ ಪ್ರವರ್ತಕರು...!
ಯಾರೋ ಮುಖದಮೇಲೆ ಬಾರಿಸಿದಂತಾಯಿತು.
ಶವ- ಮರಣಿಸಿರುವ ಹುಡುಗಿಯ ಶವವನ್ನು ಕಂಡು ನನ್ನ ಮನದಲ್ಲಿ ಇಂಥಾ ಭಾವನೆಯೆ?
ನಾನೇಕೆ ಹೀಗೆ?
ನನ್ನನ್ನು ಯೋಚಿಸುವಂತೆ ಮಾಡಿದ ಘಟನೆಗಳಲ್ಲಿ ಮತ್ತೊಂದು.
ಆದರೆ ಅದು ಕ್ಷಣಿಕ! ಸುಪ್ತ ಮನಸ್ಸಿನೊಳಗೆ ಉಳಿದುಕೊಳ್ಳಬಹುದೇನೋ ಆಗಲಿ ನಾನದನ್ನು ಮರೆತು ಹೋದೆ.
೩
ಬಡ ಕುಟುಂಬ ನನ್ನದು.
ಕುಟುಂಬ ಎನ್ನಲು ಏನೂ ಇಲ್ಲ, ನಾನೂ ಅಮ್ಮ ಇಬ್ಬರೇ...
ಅಪ್ಪನ ಮರಣದ ನಂತರ ಅಮ್ಮನ ಅಕ್ಕರೆಯಲ್ಲಿ ಬೆಳೆದೆ!
ಕೂಲಿ ಕೆಲಸಮಾಡುತ್ತಾ ನನಗೆ ಯಾವ ಕೊರತೆಯೂ ಬರದಂತೆ ಹೇಗೆ ಬೆಳೆಸಿದರೋ ಆ ತಾಯಿ, ನನಗೆ ತಿಳಿಯದು!
ಅದರಬಗ್ಗೆ ಯೋಚಿಸಿದವನೇ ಅಲ್ಲ!
ಹಾಗೂ ಹೀಗೂ ಕಾಲೇಜಿನಲ್ಲಿ ಕೊನೆಯ ವರ್ಷದ ಪರೀಕ್ಷೆಯನ್ನು ಮುಗಿಸಿ ಮನೆಯಲ್ಲೇ ಕುಳಿತಿದ್ದೆ.
ಯವ್ವನದ ಹುಚ್ಚು ಮನಸ್ಸು. ನಿಯಂತ್ರಣದಲ್ಲಿ ಇಟ್ಟುಕೊಳ್ಳಲಾಗಲಿಲ್ಲ! ಮನೆಯಿಂದ ಹೊರಬಿದ್ದು, ಮನಸ್ಸಿಗೆ ಅನುಗುಣವಾಗಿ ಏನಾದರೂ ಕಾಣಿಸುತ್ತದೆಯೇ ಎಂದು ಹುಡುಕುತ್ತಾ ನಡೆದೆ!
ಬಡವರ ಕಾಲೋನಿಯಾದ್ದರಿಂದ ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು ಕೆಲವೊಮ್ಮೆ ಸ್ನಾನ ಮಾಡುವುದು ಕೂಡ ಮನೆಯ ಹೊರಗಡೆಯೇ.... ಕಣ್ಣಿಗೆ ರಸವತ್ತಾಗಿ ಏನಾದರೂ ಕಾಣಿಸಬಹುದು.
ಕಾಣಿಸಿದಾಗಲೆಲ್ಲಾ ನೇರವಾಗಿ ನೋಡಲು ಧೈರ್ಯವಾಗದೆ ಓರೆಗಣ್ಣಿನಿಂದ ನೋಡುತ್ತಿದ್ದೆ.
ಕೆಲವೊಂದುಕಡೆ ಮೈಮೇಲೆ ಜ್ಞಾನ ಇಲ್ಲದವರಂತೆ ಕುಳಿತು ಬಟ್ಟೆ ಒಗೆಯುತ್ತಿದ್ದರು.
ಹಾಗೆಯೇ 'ಸೂಕ್ಷ್ಮವಾಗಿ' ನೋಡುತ್ತಿದ್ದಾಗ ಸ್ವಲ್ಪ ದೂರದ ಮನೆಯೊಂದರಲ್ಲಿ ಹೆಂಗಸೊಬ್ಬರು ಗುಡಿಸುತ್ತಿರುವುದು ಕಾಣಿಸಿತು.
ಬಗ್ಗಿ ಗುಡಿಸುತ್ತಿರುವುದರಿಂದ ಹೆಚ್ಚೂ ಕಡಿಮೆ ಪೂರ್ಣವಾಗಿ ಕಾಣಿಸುತ್ತಿದೆ.
ನನ್ನನ್ನು ಯಾರಾದರೂ ಗಮನಿಸುತ್ತಿದ್ದಾರೆಯೇ ಎಂದು ನೋಡುತ್ತಾ ಅವರ ಸಮೀಪಕ್ಕೆ ನಡೆದೆ.
ಅಷ್ಟು ಹತ್ತಿರದಿಂದ.... ದುಂಡು ದುಂಡಾಗಿ..... ತಬ್ಬಿಬ್ಬುಗೊಂಡೆ!
ಮತ್ತಷ್ಟು ಸಮೀಪಕ್ಕೆ ಹೋದೆ.
ಅದೇ ಸಮಯಕ್ಕೆ ಅವರೂ ತಲೆಯೆತ್ತಿದರು.
ನನ್ನ ತಲೆಯೊಳಗೊಂದು ಮಿಂಚು- ಹೃದಯದಲ್ಲೊಂದು ಸ್ಪೋಟ!
ಅಮ್ಮ....!!!
ಅಯ್ಯೋ....
ನನ್ನ ಅಮ್ಮ ನನಗಾಗಿ ಇಲ್ಲಿ.....
ಆದರೆ ನಾನು?
ನನ್ನನ್ನು ಯೋಚಿಸುವಂತೆ ಮಾಡಿದ ಘಟನೆಗಳಲ್ಲಿ ಮತ್ತೊಂದು. ಆದರೆ ಇದನ್ನು ನಾನು ಅಷ್ಟುಬೇಗ ಮರೆಯಲಾರೆ!!
೪
ಒಬ್ಬರು ಒಳ್ಳೆಯ ಮಾರ್ಗದರ್ಶಿ ನನಗಿಲ್ಲ.
ಯಾವುದು ಸರಿ, ಯಾವುದು ತಪ್ಪು ಎನ್ನುವುದನ್ನು ಹೇಳಿ ಕೊಡುವವರಿಲ್ಲ.
ಜೀವನದಲ್ಲಿ ನಡೆಯುವ ಸಣ್ಣಪುಟ್ಟ ಘಟನೆಗಳಿಂದಲೇ ನನ್ನನ್ನು ನಾನು ರೂಪಿಸಿಕೊಳ್ಳಬೇಕು.
ನನ್ನ ಗುರಿಯನ್ನು ರೂಪಿಸಿಕೊಳ್ಳಬೇಕು.
ಗುರಿ.
ಹೌದು, ಗುರಿ....
ನಿಜವಾಗಿಯೂ ಏನು ನನ್ನ ಗುರಿ?
ಅಮ್ಮನನ್ನು ಆ ದೃಷ್ಟಿಯಿಂದ ನೋಡಿದಮೇಲೆ ನನ್ನ ಮನದೊಳಗೊಂದು ಮೊರೆತ...
ಏನು ನಾನು?
ನಾನು ಮಾತ್ರ ಹೀಗೆಯೋ, ಅಥವಾ...?
ಪ್ರಪಂಚವೆಲ್ಲಾ ಹೀಗೆಯೇ....!
ಸ್ವಂತ ಮಕ್ಕಳನ್ನೇ ಬಲತ್ಕಾರ ಮಾಡುತ್ತಿರುವವರಿರುವಾಗ, ಯಾರೆಂದು ತಿಳಿಯದೆ, ಅಮ್ಮನನ್ನು ಬೇರೆದೃಷ್ಟಿಯಿಂದ ನೋಡಿದ ನನ್ನದು ತಪ್ಪಲ್ಲ.
ಆದರೆ, ಯಾವ ಹೆಣ್ಣನ್ನೇ ಆದರೂ ಆ ದೃಷ್ಟಿಯಿಂದ ಯಾಕೆ ನೋಡಬೇಕು ಎಂದು ಕೇಳಿಕೊಂಡಾಗ ನನ್ನದು ತಪ್ಪು!
ನಾನು ಬದಲಾಗಬೇಕು.!
ಗೆಳೆಯರು, ಮಾರ್ಗದರ್ಶಿಗಳು, ಹಿತೈಷಿಗಳು ಯಾರೂ ಇಲ್ಲದವನಿಗೆ ಪುಸ್ತಕಗಳೇ ಪ್ರಾಣ ಸ್ನೇಹಿತರು!
ಓದಲಾರಂಬಿಸಿದೆ.... ಅದರಲ್ಲೂ ತತ್ವಶಾಸ್ತ್ರವನ್ನು - ಮನಶ್ಶಾಸ್ತ್ರವನ್ನು.
ಒಂದುರೀತಿಯ ಶಾಂತಿ ನನ್ನನ್ನಾವರಿಸಿತು.
ಆದರೂ ಗುರಿಯ ನಿರ್ಧಾರವಾಗಲಿಲ್ಲ.
ಯಾವುದೋ ಒಂದು ನಿಮಿತ್ತದ ಕೊರತೆ.
ಯವುದು, ಯಾವುದು ಎಂದು ಹುಡುಕುತ್ತಿರುವಾಗ ಆಕಸ್ಮಿಕವಾಗಿ ಒಂದು ಸುಂದರ ದೃಶ್ಯವನ್ನು ಕಂಡೆ.
ತನ್ನ ಮಗುವಿಗೆ ಹಾಲೂಡಿಸುತ್ತಿರುವ ತಾಯಿ. ತಾಯಿಯ ಮುಖದಲ್ಲಿ ಅದ್ಭುತವಾದ ಆನಂದ-ತೃಪ್ತಿ.
ಮಗುವಿನ ಮುಖದಲ್ಲಿ ಪ್ರಶಾಂತತೆ.
ಒಂದುಕ್ಷಣ ನಾನು ಮಗುವಾದೆ, ಹೆಣ್ಣು ತಾಯಿಯಾದಳು.
ಅವ್ಯಕ್ತವಾದ ಏನೋ ಒಂದು ನನ್ನ ಮನಸ್ಸಿನಲ್ಲಿ ಮೂಡಲಾರಂಬಿಸಿತು.
ಅದನ್ನು ವ್ಯಕ್ತಗೊಳಿಸುವಂತೆ ರಸ್ತೆ ಬದಿಯಲ್ಲಿ ಅನಾಥ ಮಕ್ಕಳನ್ನು ಕಂಡೆ. ವೃದ್ಧರು ರೋಗಿಗಳನ್ನು ಕಂಡೆ.
ಜೊತೆಗೆ, ನಾನು ಓದುತ್ತಿದ್ದ ಪ್ರತಿಯೊಂದು ಪುಸ್ತಕಗಳು ಹೇಳುತ್ತಿದ್ದದ್ದೂ ಅದನ್ನೇ...
ಪ್ರಪಂಚವನ್ನು ಪ್ರೀತಿಸು! ಪ್ರೇಮಕ್ಕಿಂತ ಮಿಗಿಲಾದುದು ಈ ಪ್ರಪಂಚದಲ್ಲಿ ಬೇರೆ ಯಾವುದೂ ಇಲ್ಲ.
ಒಂದಿಷ್ಟು ಪ್ರೇಮಕ್ಕಾಗಿ ಹಂಬಲಿಸುವ ಕೋಟ್ಯಾನು ಕೋಟಿ ಜೀವಗಳಿವೆ, ಅವರ ಉದ್ದಾರಕ್ಕಾಗಿ ಶ್ರಮಿಸು.
ಹಣ ಸಂಪಾದನೆ, ಮದುವೆ, ಐಶಾರಾಮಿ ಜೀವನ, ಇದು ಪ್ರತಿಯೊಬ್ಬರ ಕನಸು!
ನನ್ನ ಕನಸು...... ನನ್ನದೇ ಆದ ಪ್ರೇಮ ಪ್ರಪಂಚವೊಂದನ್ನು ಸೃಷ್ಟಿಸುವುದು.
ನನ್ನ ಪ್ರಪಂಚ....
ಅಲ್ಲಿ, ನನಗೆ ಯಾರೂ ಇಲ್ಲ ಅನ್ನುವವರಿರಿವುದಿಲ್ಲ.... ಪ್ರತಿಯೊಬ್ಬರಿಗೂ ಪ್ರತಿಯೊಬ್ಬರು.... ನನಗಾಗಿ ಎಲ್ಲರೂ, ಎಲ್ಲರಿಗಾಗಿ ನಾನೂ....!
ಅದೇ ನನ್ನ ಗುರಿ.
ಯಾರು ನಿಸ್ವಾರ್ಥವಾಗಿ, ಯಾವುದೇ ಫಲಾಪೇಕ್ಷೆಯಿಲ್ಲದೆ, ತನ್ನ ಕರ್ಮವನ್ನು ತಾನು ನೆರವೇರಿಸುತ್ತಾನೋ, ಅವನನ್ನು ಬಿಟ್ಟು ನಾನಿರಲಾರೆ. ಅವನ ಪ್ರಯತ್ನದ ಅರ್ಧವನ್ನು ನಾನು ಹೊತ್ತುಕೊಂಡು, ಕೊನೆಯವರೆಗೆ ಅವನೊಂದಿಗಿದ್ದು ಸಲಹುತ್ತೇನೆ ಅಂದಿದ್ದಾನೆ ಭಗವಂತ!
ನನ್ನ ಸಂಪೂರ್ಣ ಹೊಣೆಯನ್ನು ಭಗವಂತನ ಮೇಲೆ ಹೊರಿಸಿ, ಗುರಿ ಸಾಧನೆಗಾಗಿ ಮುನ್ನುಗ್ಗಿದೆ.
Comments
Post a Comment