ಗೆಳೆಯ- ಕಥೆ

ಹಣವನ್ನು ಸಂಪಾದಿಸುವುದು ಹೇಗೆ?

ಗೆಳೆಯ ಮತ್ತು ನಾನು ಹಗಲೂ ರಾತ್ರಿ ಯೋಚಿಸುತ್ತಿದ್ದ ವಿಷಯ!

ಒಟ್ಟಿಗೆ ಕುಳಿತು ಯೋಚಿಸಿದಷ್ಟೂ ತಲೆ ಹುಣ್ಣಾಗುತ್ತಿತ್ತು. ಐಡಿಯ ಹೊಳೆಯುತ್ತಿರಲಿಲ್ಲ! ಒಬ್ಬೊಬ್ಬರೇ ಯೋಚಿಸುವಾಗ ಏನೇನೋ ಐಡಿಯಾಗಳು.

ಒಂದು ದಿನ, ತೀರಾ ಆಕಸ್ಮಿಕವಾಗಿ ಇಬ್ಬರ ತಲೆಗೂ ಒಂದೇ ಐಡಿಯ ಹೊಳೆಯಿತು! ಇಬ್ಬರೂ ಅದರಬಗ್ಗೆ ಚರ್ಚಿಸಿದೆವು!

ಅದರ ಆಗು ಹೋಗುಗಳಬಗ್ಗೆ ದೀರ್ಘವಾಗಿ ವಿಶ್ಲೇಷಿಸಿದೆವು.

ಕೊನೆಗೆ, ಅದನ್ನು ಪ್ರಯೋಗಕ್ಕೆ ತರಲು ತೀರ್ಮಾನಿಸಿದೆವು.

ಅದರ ಆಚರಣೆಯಲ್ಲಿ, ಅಪಾಯಕಾರಿ ಭಾಗವನ್ನು ಗೆಳೆಯನೇ ಕೈಗೊಳ್ಳುವುದಾಗಿ ಹೇಳಿದ.

ಏನಿದ್ದರೂ ನಾನು ಪರಿಸ್ಥಿತಿಯನ್ನು ನಿಯಂತ್ರಿಸುವುದರಲ್ಲಿ ಅವನಿಗಿಂತ ಸಮರ್ಥ!

ಇಷ್ಟಕ್ಕೂ ನಾಟಕವೆಂದು ಕರೆಯಬಹುದಾದ ಅದೊಂದು ಕುತಂತ್ರ!

ದೂರದಲ್ಲಿ ಬರುತ್ತಿತ್ತು ಒಂದು ಐಶಾರಾಮಿ ಕಾರು.

ಗೆಳೆಯ ನನ್ನನ್ನು ನೋಡಿದ.

ಇಬ್ಬರೂ ಕಣ್ಣಿನಲ್ಲೇ ಮಾತನಾಡಿಕೊಂಡೆವು.

ಕಾರು ತುಂಬಾ ಸಮೀಪಕ್ಕೆ ಬಂದಾಗ ನನ್ನ ಗೆಳೆಯ ಅಡ್ಡವಾಗಿ ಓಡಿದ!

ಕಾರು ನಿಜವಾಗಿಯೂ ಗುದ್ದಿತೋ... ಅವನೇ ಎಗರಿದನೋ.... ಕಾರಿಗಿಂತ ಸುಮಾರು ಹತ್ತು ಅಡಿ ದೂರದಲ್ಲಿ ಬಿದ್ದ!

ನಾನು ಓಡುವುದಕ್ಕಿಂತ ಮುಂಚೆ ಜನ ಸೇರಿದರು!

ಒಂದು ಕ್ಷಣ, ಏನು ಮಾಡಬೇಕೆಂದು ತಿಳಿಯದೆ ಬೆಪ್ಪನಂತೆ ನಿಂತೆ. ನಂತರ ಗೆಳೆಯನ ಬಳಿಗೆ ಓಡಿದೆ.

ಎದೆಯಬಳಿ ಒಂದು ತರಚು ಗಾಯ ಬಿಟ್ಟರೆ ಅವನಿಗೇನೂ ಆದಂತೆ ಕಾಣಲಿಲ್ಲ! ಆದರೂ ಅವನ ಅಭಿನಯವನ್ನು ಮೆಚ್ಚಿಕೊಂಡೆ. ನಂತರ,

ಯಾರಾದರೂ ಬನ್ನೀ.... ಆದಷ್ಟು ಬೇಗ ಇವನನ್ನು ಆಸ್ಪತ್ರೆಗೆ ಸೇರಿಸಬೇಕು”ಎಂದೆ.

ಜನ ಹಿಂದೆ ಮುಂದೆ ನೋಡಿದರು! ಕೆಲವರು ಕಳಚಿಕೊಂಡರು. ಕೆಲವರ ಸಹಾಯದಿಂದ ಅವನನ್ನು ಅದೇ ಕಾರಿನಲ್ಲಿ ಹತ್ತಿಸಿದೆ. ಗೆಳೆಯ ನನ್ನನ್ನು ನೋಡಿ ಕಣ್ಣು ಮಿಟುಕಿಸಿದ.

ಕಾರು ಚಲಿಸಿತು.

ದಾರಿಯಲ್ಲಿ,

"ಪ್ಲೀಸ್ ಸರ್, ನಿಮಗೆ ಒಂದುಲಕ್ಷ ರೂಪಾಯಿ ಕೊಡುತ್ತೇನೆ ನನ್ನನ್ನು ಬಿಟ್ಟುಬಿಡಿ”ಎಂದ ಕಾರಿನ ಒಡೆಯ.

ಎದೆಗೆ ಸರಿಯಾಗಿ ಪೆಟ್ಟುಬಿದ್ದಿದೆ! ಅದಕಿಂತ ಹೆಚ್ಚು ಖರ್ಚಾದರೆ?” ಎಂದೆ.

ಯಾವ ಮಾತೂ ಆಡದೆ ಮಡಿಲಿನ ಮೇಲಿದ್ದ ಪೆಟ್ಟಿಗೆಯಿಂದ ಎರಡು ಕಟ್ಟು ನೋಟಿನ ಕಂತೆಯನ್ನು ನನಗೆ ನೀಡಿದ!

ಎರಡು ಲಕ್ಷವಿದೆ”ಎಂದ.

ನನ್ನ ಕಣ್ಣು ಹೊರಕ್ಕೆ ನುಗ್ಗಿತು!

ಎರಡು ಲಕ್ಷ!!

ಸರಿ, ಕಾರು ನಿಲ್ಲಿಸಿ”ಎಂದೆ.

ನಿಲ್ಲಿಸಿ ನಮ್ಮನ್ನು ಇಳಿಸಿ ಹೋದ!

ಎದ್ದೇಳೋ... ಎರಡು ಲಕ್ಷ”ಎಂದೆ.

ಗೆಳೆಯನಲ್ಲಿ ಚಲನೆಯಿಲ್ಲ.

ಸಂಶಯದಿಂದ ನೋಡಿದೆ.

ಗೆಳೆಯ ಸತ್ತಿದ್ದ!!

ದೇವರಿಗೆ ವಂದನೆಗಳು! ಎರಡು ಲಕ್ಷವೂ ನನ್ನದೇ......!!!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!