ಪ್ರೇಮ- ಕಥೆ

ಪ್ರೇಮ

ಆಕಸ್ಮಿಕವಾಗಿ ಆ ವ್ಯಕ್ತಿಯನ್ನು ಕಂಡೆ. ಎಷ್ಟು ದಿನದಿಂದ ಮಲಗಿದ್ದಾನೋ ತಿಳಿಯದು. ಕುಷ್ಟವೋ ಏನೋ... ಮೈಯ್ಯೆಲ್ಲಾ ಗುಳ್ಳೆಗಳೆದ್ದು- ಕೀವು ಒಡೆದು- ಮಲಮೂತ್ರ ವಿಸರ್ಜನೆಯೆಲ್ಲಾ ಅಲ್ಲೇ ನಡೆದು ನಾರುತ್ತಿದೆ.!

ಜನ- ಮೂಗುಮುಚ್ಚಿ ಅಸಹ್ಯದಿಂದ -ಅಸಹ್ಯ- ಮನುಷ್ಯನಿಗೆ ಮನುಷ್ಯನಬಗ್ಗೆ ಅಸಹ್ಯ! ತಾನೂ ಮಲಮೂತ್ರ ವಿಸರ್ಜಿಸುವವನೇ- ತಿಂದ ಆಹಾರ, ಕುಡಿದ ನೀರೇ ಅದು- ಆದರೂ ಅಸಹ್ಯದಿಂದ ಹೋಗುತ್ತಿದ್ದಾರೆಯೇ ಹೊರತು ಯಾರೊಬ್ಬರೂ ಆತನನ್ನು ಗಮನಿಸುತ್ತಿಲ್ಲ! ಯಾಕೆ?

ನಾನೂ ಕೂಡ ಏನು ಮಾಡಲಿ ಎಂದು ಯೋ-ಚಿ-ಸು-ತ್ತಾ ನಿಂತೆನೇ ಹೊರತು, ಚಲಿಸಲಿಲ್ಲ!

ಆಗ, ಚಿಕ್ಕ ಹುಡುಗನೊಬ್ಬ ಯಾವ ಯೋ--ನೆ-ಯೂ--ಲ್ಲ-ದೆ ಆ ವ್ಯಕ್ತಿಯಬಳಿಗೆ ನಡೆದ!

ವ್ಯಕ್ತಿ ಏನನ್ನೋ ಹೇಳಲು ಶ್ರಮಿಸುತ್ತಿದ್ದ. ಹುಡುಗ ಅರ್ಥವಾದಂತೆ ತಲೆಯಾಡಿಸಿ ತನ್ನ ಬ್ಯಾಗಿನಿಂದ ನೀರಿನ ಬಾಟಲಿಯನ್ನು ತೆಗೆದು ಆತನಿಗೆ ಕುಡಿಸಿದ. ನಂತರ ಆತನನ್ನು ಎಬ್ಬಿಸವ ಶ್ರಮದಲ್ಲಿದ್ದಾಗ ಅವರಬಳಿಗೆ ನಡೆದೆ.

ಮತ್ತೊಂದು ಕೈಯ ಜೊತೆಸೇರುವಿಕೆಯಿಂದ- ಹುಡುಗ ಆಶ್ಚರ್ಯದಿಂದ ನನ್ನನ್ನು ನೋಡಿದ. ಮುಗುಳುನಕ್ಕೆ.

ತನ್ನ ಬ್ಯಾಗಿನಿಂದ ಟಿಫನ್ ಬಾಕ್ಸನ್ನು ತೆಗೆಯುತ್ತಿದ್ದಾಗ ತಡೆದೆ. ಪಕ್ಕದ ಹೋಟೆಲಿನಿಂದ ತಿಂಡಿಯನ್ನು ತಂದೆ. ಆಂಬ್ಯುಲನ್ಸಿಗೆ ಫೋನ್ ಮಾಡಿದೆ.

ಆತ ತಿಂಡಿ ತಿಂದು ಮುಗಿಸುವ ಸಮಯಕ್ಕೆ ಸರಿಯಾಗಿ ಆಂಬ್ಯುಲನ್ಸ್ ಬಂತು.

ಹುಡುಗನ ಕೈಹಿಡಿದು ಅಲ್ಲಿಂದ ನಡೆದೆ!

ಅವನೊಂದಿಗೆ ಹೆಜ್ಜೆ ಹಾಕುತ್ತಾ...

"ಏನು ಪುಟ್ಟ ನಿನ್ನ ಹೆಸರು?” ಎಂದು ಕೇಳಿದೆ.

ದೂರದಲ್ಲಿ ಅವನ ಶಾಲೆ ಕಾಣಿಸುತ್ತಿತು.

ರುದ್ರ" ಎಂದ!

ನೀನೇಕೆ ಆ ವ್ಯಕ್ತಿಗೆ ಸಹಾಯ ಮಾಡಿದೆ?” ಎಂದೆ.

ನನ್ನ ಮುಖವನ್ನು ನೋಡಿದ. ಅವನ ಕಣ್ಣಿನಲ್ಲಿನ ಭಾವನೆಯನ್ನು ಏನೆಂದು ಹೇಳಲಿ? ಆರ್ದ್ರತೆಯೇ? ಕರುಣೆಯೇ? ಪ್ರಪಂಚದಮೇಲಿನ ನಿರುತ್ಸಾಹವೇ? ತಿಳಿಯದು..... ಹೇಳಿದ,

"ಎರಡುಮೂರು ದಿನದಿಂದ ನೋಡುತ್ತಿದ್ದೇನೆ! ಯಾರೂ ಆತನಿಗೆ ಸಹಾಯಮಾಡುತ್ತಿಲ್ಲ! ಚಿಕ್ಕ ಹುಡುಗ ನಾನು. ಏನು ಮಾಡಲಿ ಅಂತ ಸುಮ್ಮನಿದ್ದೆ! ಏಳಲು ಶಕ್ತಿಯಿದ್ದು ಚಲಿಸುವಂತಿದ್ದರೆ ಆತ ಅಲ್ಲಿ ಮಲಗಿರುತ್ತಿದ್ದನೇ? ಅದಕ್ಕೇ... ಇವತ್ತು, ಸ್ವಲ್ಪ ತಿಂಡಿಯನ್ನಾದರೂ ಕೊಡೋಣವೆನ್ನಿಸಿತು...” ಎಂದ.

ಅಸಹ್ಯವಾಗಲಿಲ್ಲವೇ?” ಕೇಳಿದೆ.

ಮೊದಲು ಅಸಹ್ಯವಾಯಿತು! ಆದರೆ ಅವನ ಜಾಗದಲ್ಲಿ ನಾನೋ ನನ್ನ ಅಪ್ಪನೋ ಅಮ್ಮನೋ ಇದ್ದಿದ್ದರೇ ಅನ್ನುವ ಚಿಂತೆ ಬಂತು!” ಎಂದ.

ಎದೆಯಮೇಲೆ ಭಾರವಾದ ಏನೋ ಬಿದ್ದಂತಾಯಿತು!

ಅವನ ಬೆನ್ನು ತಟ್ಟಿ ಚಲಿಸುವಾಗ,

ನೀವೇಕೆ ಸಹಾಯಕ್ಕೆ ಬಂದಿರಿ?” ಎಂದು ಕೇಳಿದ!

ಮುಗುಳುನಕ್ಕು ಹೊರಟು ಹೋದೆ.

ಎದೆಯಲ್ಲಿನ ದುಗುಡ ಕಡಿಮೆಯಾಗಲಿಲ್ಲ. ರುದ್ರನ ಮಾತುಗಳೇ ಪ್ರತಿಧ್ವನಿಸುತ್ತಿತ್ತು- ಆತನ ಜಾಗದಲ್ಲಿ ನಾನೋ ಅಪ್ಪನೋ ಅಮ್ಮನೋ ಇದ್ದಿದ್ದರೆ ಅನ್ನುವ ಚಿಂತೆ ಬಂತಂತೆ!

ಅಹಂಬ್ರಹ್ಮಾಸ್ಮಿ! ಆತನೂ ನಾನೇ ಅನ್ನುವ ಚಿಂತೆ!!

ತಿಳಿದೋ ತಿಳಿಯದೆಯೋ ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಆ ಯೋಚನೆ!

ನಾನೇನು ಮಾಡುತ್ತಿದ್ದೇನೆ....? ಪ್ರೇಮ ಪ್ರೇಮವೆಂದು...? ಆ ಹುಡುಗನದು ಪ್ರೇಮವಲ್ಲವೇ?

ವಿಶ್ವಜನೀಯವಾದ ಪ್ರೇಮ...

ತನ್ನದು???

ನಾನು ಈ ಊರಿಗೆ ಬಂದ ಉದ್ದೇಶ ನೆನಪಾಯಿತು!

ನನ್ನದು ಅದ್ವಿತೀಯವಾದ ಪ್ರೇಮವೆಂದು ಭ್ರಮಿಸಿ- ಅದನ್ನು ಅವರಿಗೆ ತಿಳಿಸಿ- ಆಭಾಸಗೊಂಡು- ಅವರಿಂದ ವಿವರಣೆಯನ್ನು ಪಡೆಯಲು ವ್ಯಗ್ರನಾಗಿ.....

ಎದೆಬಡಿತ ಅಧಿಕವಾಯಿತು...!

ಅವರನ್ನು ಕಾಣಬೇಕೆಂಬ ಉದ್ದೇಶವನ್ನು ಪಕ್ಕಕ್ಕಿಟ್ಟು ಲಾಡ್ಜಿಗೆ ಹೋದೆ.

ನಾನೇನೂ ಕೆಟ್ಟವನಲ್ಲ- ಒಳ್ಳೆಯವನೂ ಅಲ್ಲವೆನ್ನಿಸುತ್ತದೆ! ಕೆಟ್ಟದ್ದು ಮಾಡದಿದ್ದರೆ ಹೇಗೆ ಕೆಟ್ಟವನಲ್ಲವೋ ಒಳ್ಳೆಯದು ಮಾಡದಿದ್ದರೆ ಒಳ್ಳೆಯವನೂ ಅಲ್ಲ.

ಆ ಹುಡುಗ ಒಳ್ಳೆಯದು ಮಾಡಿದ! ನಾನು ಮಾಡಲಿಲ್ಲ!

ಅವನು ಮಾಡಿದ ಒಳ್ಳೆಯದನ್ನು ಕಥೆಯಾಗಿ ಬರೆಯುವೆನೆ?

ಇಲ್ಲ, ಬರೆಯಲಾರೆ! ಬರೆಯಬೇಕೆಂದು ಅನ್ನಿಸುವುದೂ ಇಲ್ಲ!! ಬರೆದರೆ ಯಾರೂ ಓದುವುದೂ ಇಲ್ಲ!

ನಾನು ಬರೆದದ್ದೇನು? ಯಾರಿಗಾಗಿ? ಯಾಕೆ?

ನನ್ನ ಸ್ವಾರ್ಥಕ್ಕೆ ಹೊರತು- ನನ್ನ ಅದ್ವಿತೀಯ ಪ್ರೇಮವನ್ನು ಪ್ರದರ್ಶಿಸಲು ಹೊರತು- ನಾನೇನನ್ನೂ ಬರೆದಿಲ್ಲ!

ಪ್ರೇಮವನ್ನು ಬರೆದರೆ ಎಲ್ಲರೂ ಓದುತ್ತಾರೆ- ಕಾರಣ ಅದರಲ್ಲಿ ಕಾಮವೂ ಇರುತ್ತದೆ!!

ಈಗ ನೆನೆದುಕೊಂಡರೆ ನಾಚಿಕೆಯಾಗುತ್ತದೆ. ನಾಚಿಕೆಯಾಗಲು ಮತ್ತೊಂದು ಕಾರಣವೂ ಇದೆ!

ಅತೀ ಮಹತ್ತರವಾದದ್ದು ಎಂದು ನಾನು ಬೆಳೆಸಿಕೊಂಡು ಬಂದ ಭಾವನೆ- ಅದಕ್ಕೆ ಸಿಕ್ಕ ಪ್ರತಿಫಲ!

ಚಿಕ್ಕಂದಿನಿಂದಲೂ ಎದೆಯ ಗೂಡಿನಲ್ಲಿ ಕಾಪಾಡಿಕೊಂಡು ಬಂದ ಭಾವನೆ- ಆ ಭಾವನೆಯನ್ನು ಆ ಭಾವನೆಗೆ ಒಡತಿಯಾದವಳಲ್ಲಿ ನಿವೇದಿಸಿಕೊಂಡಾಗ ಸಿಕ್ಕ ಪ್ರತಿಫಲ.....

ವಿಷಾದವಿತ್ತು- ಸ್ವಲ್ಪ ಮುಂಚೆ! ಈಗ ಇಲ್ಲ! ರುದ್ರನಿಂದಾಗಿ! ನಿಜ ರುದ್ರನಿಂದಾಗಿ!

ರು-ದ್ರ, ಯಾಕೋ ಆ ಹೆಸರು ನನಗೆ ಹಿಡಿಸಿತು- ಹೆಸರಿನ ಒಡೆಯನೂ!

ಅವನನ್ನು ಮತ್ತೊಮ್ಮೆ ಭೇಟಿಯಾಗಬೇಕೆನ್ನಿಸಿತು!

ಆ ವಯಸ್ಸಿನ ಇತರ ಹುಡುಗರಂತಲ್ಲದೆ ಅವನಲ್ಲಿ ಯಾವುದೋ ಪ್ರತ್ಯೇಕತೆಯಿದೆ!

ಅವನ ಶಾಲೆಯ ಗೇಟಿನಬಳಿ ನಿಂತು ಕಾಯಲಾರಂಬಿಸಿದೆ.

ಕೆಲವೊಂದು ಭಾವನೆಗಳಿಗೆ ಹೇಗೆ ಅರ್ಥವಿಲ್ಲವೋ.... ಹಾಗೆಯೇ ಕೆಲವೊಂದು ಘಟನೆಗಳಿಗೆ ಕಾರಣವೂ ಇರುವುದಿಲ್ಲ! ಆಯಾಚಿತವಾಗಿ ನಡೆಯುವ ಆ ಘಟನೆಗಳು ನಮ್ಮ ಜೀವನದಲ್ಲಿ ಪ್ರಭಾವವನ್ನು ಬೀರುತ್ತವೆ.

ರುದ್ರ.... ಅವನ ಗಮನ ಬೇರೆ ಎಲ್ಲಿಯೋ ಇದೆ! ಆ ಗಮನದಲ್ಲಿ ಒಂದು ಜೋಡಿಯಿದೆ- ಸಂತೋಷದಿಂದ ಮಾತನಾಡುತ್ತಾ ನಡೆಯುತ್ತಿರುವ ಹುಡುಗ-ಹುಡುಗಿ!

ಅದನ್ನು ಕಂಡು ಅವನ ಮುಖದಲ್ಲಿ ನಗು!!

ಅವನ ಎದುರಿನಲ್ಲಿಯೇ ನಿಂತಿರುವ ನನ್ನನ್ನೂ ಗಮನಿಸದ ಆನಂದದಲ್ಲಿ ಮುಳುಗಿದ್ದಾನೆ!

ತೀರಾ ಸಮೀಪಕ್ಕೆ ಬಂದಾಗ ಅಡಚಣೆಯ ಅರಿವಾಗಿ ಬೆಚ್ಚಿ ನಿಂತ!

ನನ್ನನ್ನು ಕಂಡ ಆಶ್ಚರ್ಯ ಅವನ ಮುಖದಲ್ಲಿ ಸ್ಪಷ್ಟವಾಗಿತ್ತು!

"ಏನು ನೋಡುತ್ತಿದ್ದೆ ರುದ್ರ?” ಎಂದೆ ಗೇಲಿ ಮಾಡುವಂತೆ....

ಅವನ ಮುಖದಲ್ಲಿ ನಾಚಿಕೆ....!

ಅವಳು ನನ್ನ ಮಾವನ ಮಗಳು" ಎಂದ! ಗೇಲಿಯ ಅಗತ್ಯವಿಲ್ಲ ಅನ್ನುವಂತೆ!

"ಅದರಲ್ಲೇನಿದೆ?” ಎಂದೆ. ಅವನ ನಾಚಿಕೆ ನನ್ನಲ್ಲಿ ಕುತೂಹಲ ಮೂಡಿಸಿತ್ತು!

ಎಷ್ಟು ಖುಷಿಯಾಗಿದ್ದಾಳೆ!” ಎಂದ.

ನನಗರ್ಥವಾಗಲಿಲ್ಲ. ನನ್ನ ಮುಖದಲ್ಲಿನ ಗೊಂದಲವನ್ನು ಕಂಡು,

ಅವಳೆಂದರೆ ನನಗೆ ತುಂಬಾ ಇಷ್ಟ!” ಎಂದ.

ಬೆಚ್ಚಿದೆ. ನಿಜವಾಗಿಯೂ ಬೆಚ್ಚಿದೆ! ಹದಿಮೂರು ವರ್ಷದ ಹುಡುಗ.....!

"ಮಾವನ ಮಗಳಮೇಲೆ ಇಷ್ಟವಿಲ್ಲದಿರುತ್ತದೆಯೇ ರುದ್ರ?” ಎಂದು ಕೇಳಿದೆ.

"ಅವಳನ್ನು ಮದುವೆಯಾಗಬೇಕು ಅಂದುಕೊಂಡಿದ್ದೆ!!”

ಅಂ-ದು-ಕೊಂ-ಡಿ-ದ್ದೆ!

"ಅದಕ್ಕೇನು? ಮುಂದೆ ಆದರಾಯಿತು!!” ಎಂದೆ.

"ಆದರೆ ಅವಳಿಗೆ ನನ್ನಮೇಲೆ ಆ ಭಾವನೆಯಿಲ್ಲ!”

ಅದಕ್ಕೇನು? ಮುಂದೆ ಬರಿಸಿದರಾಯಿತು!!!" ಎಂದೆ.

ಆಗ ನೋಡಿದ ನನ್ನ ಮುಖವನ್ನು! ಆ ನೋಟದಲ್ಲಿನ ಧಿಕ್ಕಾರವನ್ನು ನನ್ನ ಜೀವನದಲ್ಲಿ ಮರೆಯುವುದಿಲ್ಲ....!

ಜೊತೆಯಲ್ಲಿ ಹೋಗುತ್ತಿರುವ ಹುಡುಗನನ್ನು ಅವಳು ಪ್ರೇಮಿಸುತ್ತಿದ್ದಾಳೆ!!!” ಎಂದ.

ಈಗಿನ ನನ್ನ ಮನದ ಭಾವನೆಯನ್ನು ದೇವರೂ ಕೂಡ ಅರಿತುಕೊಳ್ಳಲಾರ!!

ತಾನು ಪ್ರೇಮಿಸುತ್ತಿರುವ ಹುಡುಗಿ- ಮಾವನ ಮಗಳು- ಮತ್ತೊಬ್ಬನನ್ನು ಪ್ರೇಮಿಸಿ ಅವನೊಂದಿಗೆ ಸಂತೋಷದಿಂದಿರುವಾಗ ಇವನೂ ಸಂ-ತೋ--ದಿಂ-ದಿ-ದ್ದಾ-ನೆ!- ಈ ವಯಸ್ಸಿನಲ್ಲಿ!!

ಅವನ ಮುಖವನ್ನು ನೋಡಿದೆ. ನನ್ನ ಮನದಲ್ಲಿ ಮೂಡಿದ ಪ್ರಶ್ನೆಗೆ ಉತ್ತರಿಸುವ ಪ್ರಬುದ್ಧತೆ ಅವನಿಗಿದೆ ಅನ್ನಿಸಿತು.

-ನ್ನಿ-ಸಿ-ತು.... ಆದರೂ ನನ್ನ ಅಹಂಕಾರವೇ!!! ಕೇಳಿದೆ,

ಅವಳಲ್ಲಿರುವ ನಿನ್ನ ಪ್ರೇಮವನ್ನು ಅವಳಿಗೆ ತಿಳಿಸುವುದು ನಿನ್ನ ಧರ್ಮವಲ್ಲವೆ ರುದ್ರ?”

ಅಲ್ಲ" ಎಂದ!

ಅಲ್ವಾ?” ಎಂದೆ ಆಶ್ಚರ್ಯದಿಂದ!

ಅವನು ಕೊಡುವ ಉತ್ತರವನ್ನು ಅರಗಿಸಿಕೊಳ್ಳುವ ಪ್ರಬುದ್ಧತೆ ನನಗಾದರೂ ಇದೆಯೇ ಅನ್ನುವ ಸಂಶಯವಾಯಿತು!!

ಅಲ್ಲ...” ಎಂದು ಹೇಳಿ ನನ್ನ ಮುಖವನ್ನು ನೋಡಿ,

ನಾನು ಅವಳನ್ನು ಪ್ರೀತಿಸುತ್ತಿದ್ದೇನೆ. ಅದು ಅವಳಿಗೆ ತಿಳಿಯದು! ತಿಳಿದರೂ ಅವಳು ನನ್ನನ್ನು ಪ್ರೀತಿಸಬೇಕೆಂದೇನೂ ಇಲ್ಲವಲ್ಲ??” ಎಂದು ನಿಲ್ಲಿಸಿ,

ಆದರೂ ಅವಳ ಸಂತೋಷವೇ ನನಗೆ ಮುಖ್ಯ! ಅವಳು ಬೇರೊಬ್ಬನನ್ನು ಪ್ರೀತಿಸುತ್ತಿರುವುದು ಗೊತ್ತಿದ್ದೂ ನನ್ನ ಪ್ರೇಮವನ್ನು ಅವಳಿಗೆ ತಿಳಿಸಿದರೆ ಅವಳ ಸಂತೋಷ ಭಂಗವಾಗುವುದಿಲ್ಲವೇ? ನೋಡಿ, ಎಷ್ಟು ಖುಷಿಯಾಗಿದ್ದಾಳೆ!” ಎಂದ.

ನಿಜ! ಅವನ ತರ್ಕ ನನಗೆ ಅರಗಿಸಿಕೊಳ್ಳಲಾಗಲಿಲ್ಲ!!! ಅವನಿಗಿಂತ ನಾನು ಹಿರಿಯನೇ???

ಈ ರೀತಿಯ ಯೋಚನೆಗಳು ನಿನಗೆ ಹೇಗೆ ಬರುತ್ತದೆ ರುದ್ರ?” ಎಂದು ಕೇಳಿದೆ- ಬೆಪ್ಪನಂತೆ.

"ಪುಸ್ತಕಗಳಿಂದ!” ಎಂದ.

ಪುಸ್ತಕಗಳು! ನಾನೂ ಬರೆಯುತ್ತೇನೆ ಪುಸ್ತಕ- ಮಣ್ಣು!!

ನಾನು ಯೋಚನೆಯಲ್ಲಿರುವುದನ್ನು ಕಂಡು,

ನಾನು ಹೊರಡಲೆ?” ಎಂದು ಕೇಳಿದ.

ಅವನನ್ನು ನೋಡಿ ನಕ್ಕು ತಲೆಯಾಡಿಸಿದೆ.

ಥ್ಯಾಂಕ್ಸ್ ರುದ್ರ" ಎಂದೆ.

ಥ್ಯಾಂಕ್ಸ? ಯಾಕೆ?” ಎಂದ.

ಏನಿಲ್ಲ... ಹೋಗು.... ನಿನ್ನ ಪ್ರೇಮ ನಿನಗೆ ಸಿಗಲಿ" ಎಂದೆ.

ಅವನು ಓಡುತ್ತಾ....

ಬೇಡ ಬೇಡ.... ಅಂಥಾ ವಿಘ್ನ ಸಂತೋಷಿ ನಾನಾಗಲಾರೆ" ಎಂದ!

ನನ್ನನ್ನು ಸೋಲಿಸುವುದೇ ಈ ಹುಡುಗನ ಕೆಲಸ ಎಂದುಕೊಂಡು ತಿರುಗಿ ನಡೆದೆ.

ನನಗೆ ಉತ್ತರ ದೊರಕಿತ್ತು! ಸ್ವಲ್ಪ ತಡವಾಗಿ! ಉತ್ತರವನ್ನು ಕಂಡುಹಿಡಿಯುವುದಕ್ಕಿಂತ ಮುಂಚೆಯೇ ಬೇಡದ ಕೆಲಸವನ್ನು ಮಾಡಿದ್ದೆ- ಮಾಡಿ- ತಪ್ಪು ಅವರದ್ದು ಎಂದು ತೀರುಮಾನಿಸಿದ್ದೆ!!

ತಪ್ಪು ಅವರದ್ದಲ್ಲ.... ನನ್ನದೇ!

ಅವನು ಹೇಳಿದ್ದು ಎಷ್ಟು ನಿಜ! ನನ್ನ ಬಾಳಿನಲ್ಲಿ ನಡೆದದ್ದೂ ಅದೇ ಅಲ್ಲವೇ?

ನಮ್ಮ ಪ್ರೇಮವನ್ನು ನಾವು ಪ್ರೇಮಿಸುತ್ತಿರುವವರಿಗೆ ತಿಳಿಸಬೇಕೆನ್ನವುದು ನನ್ನವಾದ!

ಅನಗತ್ಯವಾಗಿ ತಿಳಿಸಬಾರದೆನ್ನುವುದು- ಅವನದ ವಾದ!

ಅವನೇ ಗೆದ್ದನಲ್ಲವೇ? ತಿಳಿಸಿ ನನಗೆ ಸಿಕ್ಕಿದ್ದೇನು??

ಪ್ರೇಮ ಒಂದು ಅದ್ಭುತ!

ಎಷ್ಟೇ ವಿಶ್ವಜನೀಯ ಪ್ರೇಮವೆಂದರೂ ಒಬ್ಬರಮೇಲೆ ನಮಗುಂಟಾಗುವ ಅನುರಾಗ... ಅದನ್ನು ವಿವರಿಸುವುದು ಹೇಗೆ?

ಮೊದಲಬಾರಿ ನಾನವರನ್ನು ಕಂಡಾಗ ಅವರಿಗೆ ಹದಿನೈದೋ ಹದಿನಾರೋ ವರ್ಷ ವಯಸ್ಸು! ನನಗೆ ಒಂಬತ್ತು!!

ನಾನು ಪ್ರೈಮರಿ ಸ್ಕೂಲ್! ಅವರು ನನ್ನಮ್ಮ ಟೀಚರ್ ಆಗಿದ್ದ ಹೈಸ್ಕೂಲ್!

ಕೆಲವೊಮ್ಮೆ ಅಮ್ಮನೊಂದಿಗೆ ಅವರ ಸ್ಕೂಲಿಗೆ ಹೋಗುತ್ತಿದ್ದೆ. ಆಗಲೇ ಅವರು ನನ್ನ ಗಮನವನ್ನು ಸೆಳೆದದ್ದು!

ಪೂರ್ಣ ಚಂದ್ರನ ಮುಖ ಅವರಿಗೆ. ಕೆನ್ನೆಯಲ್ಲಿ ಗುಳಿಬೀಳುವ ನಗು! ಆಕರ್ಷಕ ಕಣ್ಣು...

ನೋಡುವುದಕ್ಕೆ ಚೆನ್ನಾಗಿದ್ದಾರೆ ಅನ್ನುವುದನ್ನು ಬಿಟ್ಟರೆ ನಾನು ಅವರೆಡೆಗೆ ಆಕೃಷ್ಟನಾಗಲು ಬೇರೆ ಕಾರಣವೇನಾದರೂ ಇತ್ತೇ....? ತಿಳಿಯದು! ಅದರಬಗ್ಗೆ ಯೋಚಿಸಿದವನೇ ಅಲ್ಲ!

ಬುದ್ಧಿವಂತೆ ಆಕೆ. ತನಗೆ ತಿಳಿದದ್ದನ್ನು ಯಾವುದೇ ಮುಜುಗರವಿಲ್ಲದೆ ಎಲ್ಲರಿಗೂ ಹೇಳಿಕೊಡುತ್ತಿದ್ದಳು.

ನನ್ನ ಜೀವನದಲ್ಲಿ ಅವರಿಗೆ ಅಂಥಾ ಪಾತ್ರವೇನೂ ಇಲ್ಲ. ಅವರೊಂದಿಗೆ ಹೆಚ್ಚು ಬೆರೆತವನೂ ಅಲ್ಲ.

ದೂರದಿಂದಲೇ ಅವರತನವನ್ನು ಆಸ್ವದಿಸಿದವನು... ಆದರೂ ಅಚ್ಚಳಿಯದೆ ಉಳಿದ ರೂಪ!

ಅವರೊಂದಿಗೆ ನಡೆದ ಸಣ್ಣ ಸಂಬಾಷಣೆಯೊಂದು ನೆನಪಿನ ಪೆಟ್ಟಿಗೆಯಲ್ಲಿ ಸುಪ್ತವಾಗಿದೆ.

ಯಾರೊಂದಿಗೋ ಏನೋ ಹೇಳುತ್ತಿದ್ದ ಅವರ ಗಮನವನ್ನು ನನ್ನಕಡೆ ಸೆಳೆಯಲು ಕೇಳಿದ್ದೆ,

"ನಾನು ನಿಮಗೆ ಏನಾಗಬೇಕು?”

ಗೊತ್ತಿಲ್ಲ!”

ನಿಜವೇ! ಎನೂ ಅಲ್ಲ ಎನ್ನುವುದಕ್ಕಿಂತ ಉತ್ತಮ!!

ನಾನು ನಿಮ್ಮನ್ನು ಏನೆಂದು ಕರೆಯಲಿ?”

ನಾನು ನಿನಗಿಂತ ದೊಡ್ಡವಳು- ಅಕ್ಕ ಎಂದು ಕರೆ!”

ಎಷ್ಟು ವರ್ಷ ದೊಡ್ಡವಳು?”

ನಾನು ಓದುತ್ತಿರುವ ತರಗತಿಯನ್ನು ಕೇಳಿ ಲೆಕ್ಕ ಹಾಕಿ ಹೇಳಿದರು,

ಏಳುವರ್ಷ"

ಏಳುವರ್ಷ ಹಿರಿಯಳಾದ ಅವರ ಮೇಲೆ ನನಗಿದ್ದ ಭಾವನೆ ಅಕ್ಕನಲ್ಲಿ ನನಗಿರಬೇಕಾದ ಭಾವನೆಯೇ?

ತಿಳಿಯದು. ಆದರೆ ಅವರ ಮುಖ ಮಾತ್ರ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಿತು!

ಹಿರಿಯಳು! ಬುದ್ಧಿವಂತೆ! ಸುಂದರಿ.... ಅದೊಂದು ಫೀಲ್!

ದಿನಗಳು ವಾರಗಳು ತಿಂಗಳುಗಳು ವರ್ಷಗಳು ಉರುಳಿದವು.

ಕಥೆಗಾರನಾಗಿ ಗುರುತಿಸಿಕೊಳ್ಳಬೇಕೆನ್ನುವುದು ನನ್ನ ಆಸೆ. ಸಣ್ಣಪುಟ್ಟ ಕಥೆಗಳನ್ನು ಬರೆಯುತ್ತಿದ್ದೆ. ಆದರೂ ಅವರ ನೆನಪು ಕಾಡುತ್ತಲೇ ಇತ್ತು. ಆ ನೆನಪಿನ ಭಾರವನ್ನು ಇಳಿಸಲು- ತನಗಿಂತ ಹಿರಿಯಳಾದ ಹುಡುಗಿಯನ್ನು ಪ್ರೀತಿಸುವ ಹುಡುಗನೊಬ್ಬನ ಕಥೆ ಬರೆದೆ!

ಅವಳ ಅರಿವಿಲ್ಲದೆ ಅವಳನ್ನು ಪ್ರೇಮಿಸಿ ಆರಾಧಿಸಿದ ಹುಡುಗನೊಬ್ಬನ ನಿಷ್ಕಾಮ ಪ್ರೇಮವದು!

ಪ್ರೇಮ- ಅಷ್ಟೆ! ಒಂದು ಫೀಲ್!

ಅವನಿಗೆ ಅವಳಿಂದ ಏನೂ ಬೇಕಿರಲಿಲ್ಲ! ಅವಳ ಬದುಕಿನೊಂದಿಗೆ ಆಟವಾಡಬೇಕು ಅಂದುಕೊಂಡವನೂ ಅಲ್ಲ... ಆದರೂ ತನ್ನ ಪ್ರೇಮವನ್ನು ಅವಳಿಗೆ ತಿಳಿಸಬೇಕೆಂದುಕೊಂಡ- ಅವರನ್ನು ಹುಡುಕಿ ತಿಳಿಸಿದ!

ಕಥೆ ಸುಖಾಂತ್ಯವಾಗಿ ಮುಗಿಯಿತು....

ಆದರೆ ಆ ಕಥೆಯನ್ನು ಬರೆಯಲು ಪ್ರೇರಣೆಯನ್ನು ಕೊಟ್ಟ ನನ್ನ ಪ್ರೇಮ....

ಅಮ್ಮ ಅವರಬಗ್ಗೆ ಹೇಳಿದಾಗ ಆಶ್ಚರ್ಯವಾಯಿತು! ಇಂಟರ್ನೆಟ್ ಯುಗದ ಈ ಕಾಲದಲ್ಲಿ, ಹಳೆಯ ಗೆಳೆಯ-ಗೆಳತಿಯರು, ವಿದ್ಯಾರ್ಥಿಗಳು ಹುಡುಕಿಕೊಂಡು ಬರುವುದು ಅಂಥಾ ಆಶ್ಚರ್ಯದ ವಿಷಯವೇನೂ ಅಲ್ಲ!

ಆದರೂ, ಅವರು ನನ್ನ ಕತೆಯನ್ನು ಓದಿದರೆಂದೂ ಒಳ್ಳೆಯ ಅಭಿಪ್ರಾಯವನ್ನು ಹೇಳಿದರೆಂದೂ ಕೇಳಿದಾಗ ಸಂತೋಷಗೊಂಡೆ.

ಆ ಕಥೆಗೆ ಪ್ರೇರಣೆ ನೀವೆ ಎಂದು ಅವರಿಗೆ ತಿಳಿಸಬೇಕು ಅನ್ನಿಸಿದ್ದರಲ್ಲಿ ಆಶ್ಚರ್ಯವೇನು???

ನಾನು ಅಮ್ಮನ ಮಗ- ಅವರ ಟೀಚರ ಮಗ- ಅನ್ನುವುದು ಅವರಿಗೆ ತಿಳಿದೇ ಇರಲಿಲ್ಲವಂತೆ!

ನಿಜ, ಅವರಿಗೆ ಯಾಕೆ ನೆನಪಿರಬೇಕು? ಆಕರ್ಷಣೆ ನನ್ನದಲ್ಲವೇ?

ಪತ್ರವೊಂದನ್ನು ಬರೆದೆ!!

೧೦

ನೀವು ಸರಿಯಿಲ್ಲ!! ಜೀವನದಲ್ಲಿ ಒಬ್ಬರನ್ನು ಮಾತನಾಡಿಸಲು ಇಷ್ಟೊಂದು ಹಿಂಜರಿದವನಲ್ಲ! ಈಗಲೇ ಇಷ್ಟೊಂದು ಹೃದಯಬಡಿತ.. ನೇರವಾಗಿ ಸಿಕ್ಕಾಗ ಅವಸ್ತೆಯೇನೋ.... ಪೀಚು ಹೃದಯದ ತುಡಿತ- ಎಷ್ಟೋ ವರ್ಷದ ಭಾರ...!ಕೆಲವೊಂದು ಭಾವನೆ ಹಾಗೆಯೇ ಅನ್ನಿಸುತ್ತಿದೆ- ನಮ್ಮನ್ನರಿಯದವರೇ ನಮ್ಮ ಆರಾಧನಾ ಮೂರ್ತಿಯಾಗುವುದು. ಕಾರಣವನ್ನು ಹೇಳಲಾರೆ- ಹೇಳಲಾರೆ ಅಲ್ಲ, ತಿಳಿದಿದ್ದರೆ ತಾನೆ ಹೇಳುವುದು- ಹುಡುಕಲಾರೆ.

ಹೇಳುವುದೇ ಬೇಡ, ನಾನೊಬ್ಬ ಇದ್ದೇನೆಂದು ತಿಳಿಸುವುದೇ ಬೇಡ ಅಂದುಕೊಂಡಿದ್ದೆ!

ಕಾಲ ಕಳೆಯುತ್ತಾ ಹೃದಯದಭಾರ ಅಧಿಕವಾಗಿ ಅದೇ ಒಂದು ಹೊರೆಯಾದರೆ ಕಷ್ಟ!

ಅಲ್ಲದೆ... ನೀವು ನನ್ನ ಕೈಯಳತೆಯಲ್ಲೇ ಇದ್ದೀರ!!

ಎರಡುಬಾರಿ ನಿಮ್ಮನ್ನು ನೋಡಿದ್ದಷ್ಟೇ ನನಗೆ ನೆನಪು! ಮೂರೋ ನಾಲ್ಕೋ ತರಗತಿಯಲ್ಲಿದ್ದಾಗ!

ಒಂದು ಸಣ್ಣ ಸಂಭಾಷಣೆ ಮನಸ್ಸಿನಲ್ಲಿ ಗುಯ್ ಗುಡುತ್ತದೆ.

ನಿಮ್ಮನ್ನು ಏನೆಂದು ಕರೆಯಲಿ ಎಂದು ಕೇಳಿದ್ದೆ.... ನಿನಗಿಂತ ದೊಡ್ಡವಳು ನಾನು- ಅಕ್ಕ ಎಂದು ಕರೆ! ಎಂದಿರಿ. (ಕರೆಯಲಷ್ಟೇ ಅಕ್ಕ! ಮನದಲ್ಲಿನ ಪ್ರೇಮ- ಅಕ್ಕನಿಗೆ ಮೀರಿದ್ದು)

ಎಷ್ಟು ವರ್ಷ ದೊಡ್ಡವಳು? ಎಂಬ ಪ್ರಶ್ನೆಗೆ ನನ್ನ ತರಗತಿಯನ್ನು ಕೇಳಿ ಲೆಕ್ಕ ಹಾಕಿ- ಏಳು ವರ್ಷ! ಎಂದರಿ.

ಏಳುವರ್ಷ ಹಿರಿಯಳಾದ ಆ ಅಕ್ಕ ಮನಸ್ಸಿನಲ್ಲಿ ಶಾಶ್ವತವಾಗಿ ಯಾಕೆ ಉಳಿದಳೋ ತಿಳಿಯದು! ಪೂರ್ಣ ಚಂದಿರನನ್ನು ನೋಡಿದಾಗಲೆಲ್ಲಾ ಆ ಮುಖ ಯಾಕೆ ನೆನಪಿಗೆ ಬರುತ್ತಿತ್ತೋ ಅದೂ ತಿಳಿಯದು!

ಮರೆಯಲಾಗದೆ ಕಾಡುತ್ತಿದ್ದ ಆ ನೆನಪನ್ನು ಒಂದು ಪಾತ್ರವಾಗಿ ರೂಪೀಕರಿಸುವಾಗ ದುಃಖವೋ ಸಂತೋಷವೋ ನಿರ್ಲಿಪ್ತತೆಯೋ....

ಆ ಕಥೆಯನ್ನು ಆ ಅಕ್ಕ(?) ಓದುವಳೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ... ಓದಿದಳು- ಆದರೂ ಅರಿಯಳು!!

ಹೇಳಲೋ ಬೇಡವೋ, ಮಾತನಾಡಿಸಲೋ ಬೇಡವೋ, ಭೇಟಿಯಾಗಲೋ ಬೇಡವೋ.... ಎನ್ನುವ ಸಂದಿಗ್ದತೆ- ತುಮುಲ!

ಬರೀ ಅಕ್ಕನೇ ಆಗಿದ್ದಿದ್ದರೆ ಸಂಧಿಸುತ್ತಿದ್ದೆನೋ ಏನೋ.....

ಏನೇನೋ ಹೇಳುತ್ತಿರುವ ಈ ಹುಡುಗನಬಗ್ಗೆ ಕ್ಷಮೆಯಿರಲಿ ಧರಿತ್ರಿಯೇ...

ಅರ್ಥವಾದರೂ ಆಗದಿದ್ದರೂ ಇದಕ್ಕಿಂತಲೂ ಹೆಚ್ಚಿಗೆ ಹೇಳಲು ಏನೂ ಇಲ್ಲ!

ಇಷ್ಟೇ... ಆ ಪತ್ರದ ಸಾರಂಶ.

ಉತ್ತರವೂ ಬಂತು!

೧೧

ನೋಡಪ್ಪಾ, ನೀನು ಯಾರೋ ನನಗೆ ತಿಳಿಯದು! ನನಗೆ ನಿನ್ನ ನೆನಪೇ ಇಲ್ಲ! ಸುಮ್ಮನೆ ಭಾವನಾ ಲೋಕದಲ್ಲಿ ವಿಹರಿಸಬೇಡ! ಕನಸಿನಿಂದ ಹೊರಕ್ಕೆ ಬಾ! ನನಗೆ ಇಬ್ಬರು ಮಕ್ಕಳಿದ್ದಾರೆ, ನಾನೊಬ್ಬಳು ಸಾಮಾನ್ಯ ಹೆಣ್ಣು! ನನಗೆ ನಿನ್ನನ್ನು ಭೇಟಿಯಾಗಲು ಕಾತುರವೂ ಇಲ್ಲ- ಇಷ್ಟವೂ ಇಲ್ಲ! ಭೇಟಿ ಆಗುವುದೂ ಇಲ್ಲ!"

ಅಷ್ಟೇ!! ಎಷ್ಟು ನಿಜ!! ಇಷ್ಟು ವರ್ಷ ನಾನು ಮನದಲ್ಲಿ ಹೊತ್ತ ಭಾರಕ್ಕೆ ಸಿಕ್ಕ ಪ್ರತಿಫಲ!!

ಯಾಕೆ ಹೀಗಾಯಿತು? ಹೀಗೆ ಹೇಳಲು ನಾನೇನು ಮಾಡಿದ್ದೆ??

ತಿಳಿದುಕೊಳ್ಳಬೇಕೆನ್ನಿಸಿತು! ಅವರನ್ನು ಭೇಟಿಯಾಗಲು ತೀರ್ಮಾನಿಸಿದೆ.

ಹಾಗೆ ಅವರ ಊರಿಗೆ ಬಂದಾಗಲೇ.... ರುದ್ರನ ಭೇಟಿಯಾಗಿದ್ದು!!

೧೨

ಅವರನ್ನು ಭೇಟಿಯಾಗಲಿಲ್ಲ... ಮರಳಲು ತೀರ್ಮಾನಿಸಿದೆ.

ಹೋಟೆಲ್ ರೂಂ ವೇಕೆಟ್ ಮಾಡಿ ಹೊರಬಂದೆ.

ಬಸ್ಟಾಪಿಗೆ ಬರುತ್ತಿದ್ದಾಗ ರುದ್ರ ಕಾಣಿಸಿದ!

ಯಾರೊಂದಿಗೋ ಮಾತನಾಡುತ್ತಾ ಹೋಗುತ್ತಿದ್ದ. ಅವನ ಅಮ್ಮನಿರಬೇಕು.

ಅವನಬಳಿಗೆ ನಡೆಯುವಾಗ ಅವನ ಅಮ್ಮನ ಮುಖ ಸ್ಪಷ್ಟವಾಗಿ ಕಾಣಿಸಿತು...

ನಾನು ಹುಡುಕಿಕೊಂಡು ಬಂದ ನನ್ನ ಆರಾಧನಾಮೂರ್ತಿ.....!!!

ಶುಭಂ!!

Comments

  1. This comment has been removed by the author.

    ReplyDelete
  2. This comment has been removed by the author.

    ReplyDelete
  3. ತ್ಯಾಗ ತನ್ನ ಸಂತೋಷವನ್ನು ಬೇರೊಬ್ಬರಲ್ಲಿ ಕಾಣುವುದು ಅವರ ಸುಖವನ್ನು ಬಯಸುವುದು.ಇದು ನಿಸ್ವಾರ್ಥ ನಿಶ್ಕಳಂಕ ಪ್ರೇಮ.ಬಿಟ್ಟು ಕೊಡುವುದು ತ್ಯಾಗ ಆದರ್ಶ ಅಂತಾನೂ ಹೇಳಬಹುದು.ಇದು ವಿಶ್ವ ಜನನಿಯ ಪ್ರೇಮದ ಹೃದಯ ಬಾಗ 😊

    ReplyDelete

Post a Comment

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!