ಕಥೆ- ಕಥೆ

ಕಥೆ

ಕಥೆ.

ಜೀವನಾನುಭವ ಮತ್ತು ಕಲ್ಪನೆಗಳ ಮಿಶ್ರಣ!

ಏನು ಹೇಳಿದರೂ ಕಥೆಯೇ! ಅದನ್ನು ಎಷ್ಟು ರಸವತ್ತಾಗಿ ಹೇಳುತ್ತೇವೆ ಅನ್ನುವುದು ಮುಖ್ಯ!

ನಡೆದದ್ದನ್ನು ಮಾತ್ರ ಹೇಳಿದರೆ ವಾಸ್ತವ ಕಥೆ!

ಕಲ್ಪನೆಯನ್ನು ಮಾತ್ರ ಹೇಳಿದರೆ ಕಾಲ್ಪನಿಕ ಕಥೆ!

ಕೆಲವೊಮ್ಮೆ.... ವಾಸ್ತವವನ್ನು ಹೇಳಿದರೆ ಯಾರೂ ನಂಬುವುದಿಲ್ಲ- ಅಸಾಧ್ಯ ಅನ್ನುತ್ತೇವೆ!

ಕೆಲವೊಮ್ಮೆ.... ಕಲ್ಪನೆಯನ್ನು ಹೇಳಿದರೆ ವಾಸ್ತವಕ್ಕಿಂತಲೂ ಹೆಚ್ಚಾಗಿ ನಂಬುತ್ತೇವೆ!!

ಕೆಲವು ವಿಷಯಗಳನ್ನು ನಂಬಲಾಗುವುದಿಲ್ಲ! ಆದರೂ ನಡೆದಿರುತ್ತದೆ!

ಕೆಲವು ವಿಷಯಗಳು ಕಲ್ಪನೆಯಾಗಿರುತ್ತದೆ! ಆದರೂ ನಂಬುತ್ತೇವೆ!

ಕಥೆ....

ಹೇಳುತ್ತಿರುವುದು ಕಲ್ಪನೆಯೋ ವಾಸ್ತವವೋ.... ಎರಡರ ಮಿಶ್ರಣವೋ.... ಒಟ್ಟಿನಲ್ಲಿ....

ಇದೊಂದು ಕಥೆ!

*

ಪ್ರಪಂಚದಲ್ಲಿಯೇ ಅತ್ಯಂತ ಬಲಯುತವಾದದ್ದು ಏನು?

ಹುಚ್ಚು ಪ್ರಶ್ನೆ! ಬಲವನ್ನು ಅಳೆಯುವುದು ಹೇಗೆ?

ಒಬ್ಬೊಬ್ಬರಿಗೆ ಒಂದೊಂದು! ಒಂದೊಂದು ಸಂದರ್ಭದಲ್ಲಿ ಒಂದೊಂದು.....!

ಆದರೂ.... ಪ್ರಪಂಚದಲ್ಲಿ ಅತ್ಯಂತ ಬಲಯುತವಾದದ್ದು ಏನು?

ಮನುಷ್ಯನ ಮನಸ್ಸು!

ಮನುಷ್ಯ ಮನಸ್ಸಿನಷ್ಟು ಪ್ರಬಲವಾದದ್ದು ಪ್ರಂಪಚದಲ್ಲಿಯೇ ಇನ್ನೊಂದಿಲ್ಲ- ನನ್ನ ನಂಬಿಕೆ!

ಇಲ್ಲದಿರುವುದನ್ನು ಸೃಷ್ಟಿಸಬಲ್ಲದು ಮನಸ್ಸು... ಇರುವುದನ್ನು ಸರ್ವನಾಶ ಮಾಡಬಲ್ಲದು ಮನಸ್ಸು!

ಹೀಗೆ..... ಮನಸ್ಸಿನ ಬಗ್ಗೆ ಯೋಚಿಸುತ್ತಿರುವಾಗ- ಅದನ್ನೇ ಬರೆಯುತ್ತಿರುವಾಗ- ಕಾಲಕೆಳಗೆ ಏನೋ ಚಲಿಸಿದಂತಾಯಿತು. ಗಾಬರಿಯಿಂದ ಎರಡೂ ಕಾಲನ್ನು ಮೇಲಕ್ಕೆ ಎತ್ತಿದೆ! ಎತ್ತಿದ ರಭಸಕ್ಕೆ ಕಾಲು ಟೇಬಲ್ಲಿಗೆ ಬಡಿದು, ಟೇಬಲ್ ಮೇಲಿದ್ದದ್ದೆಲ್ಲಾ ಕೆಳಕ್ಕೆ ಉರುಳಿ, ಮಂಡಿಗೆ ಪೆಟ್ಟು ಬಿದ್ದು..... ಇಷ್ಟಕ್ಕೂ ಕಾಲಕೆಳಗೆ ಚಲಿಸಿದ್ದೇನು?

ಜಿರಲೆ!!

ಅಬ್ಬಾ ನನ್ನ ಧೈರ್ಯವೇ....!!

ಸರಿ.... ಪ್ರಪಂಚದಲ್ಲಿ ಅತ್ಯಂತ ದುರ್ಬಲವಾದದ್ದು ಏನು?

ಉತ್ತರವನ್ನು ಹೇಳಬೇಕಾದ ಅಗತ್ಯವೇ ಇಲ್ಲ!

ಅದೂ- ಮನಸ್ಸೇ!!!

ಮನಸ್ಸಿನಷ್ಟು ದುರ್ಬಲವಾದದ್ದು ಈ ಪ್ರಪಂಚದಲ್ಲಿ ಬೇರೆ ಯಾವುದೂ ಇಲ್ಲ!

ಸಾಕು! ಸೈಕಾಲಜಿ- ಫಿಲಾಸಫಿಗಳು.... ಇನ್ನು ಕಥೆಯೊಳಕ್ಕೆ ಪ್ರವೇಶಿಸಿದರೆ......

*

ಒಂದಾನೊಂದು ಕಾಲದಲ್ಲಿ...

ಸಪ್ತ ಸಮುದ್ರಗಳನ್ನು ದಾಟಿ....

ಸಪ್ತ ಪರ್ವತಗಳನ್ನು ದಾಟಿ....

ಸಪ್ತಾರಣ್ಯಗಳನ್ನು ದಾಟಿ....

ಮತ್ತಷ್ಟು ಮುಂದಕ್ಕೆ ಹೋದರೆ....

ಒಂದು ಪುಟ್ಟ ಹಳ್ಳಿ!

ಸುತ್ತಲೂ ಅರಣ್ಯದಿಂದ ಆವರಿಸಲ್ಪಟ್ಟ ಆ ಹಳ್ಳಿಯಲ್ಲಿ ಬಿಡಿಬಿಡಿಯಾಗಿ ಮನೆಗಳು.

ಕಾಡಿನ ಮಕ್ಕಳು ಅವರು. ಆ ಕಾಡೇ ಅವರ ಪ್ರಪಂಚ....

ಆ ಹಳ್ಳಿಯಲ್ಲಿ ಒಂದು ಶಾಲೆಯಿದೆ. ಬಡವರ ಮಕ್ಕಳಿಗಾಗಿ ಸರ್ಕಾರಿ ಶಾಲೆ!

---ರು.... ಬಡತನವನ್ನು ಅಳೆಯುವುದು ಹೇಗೆ?

ದುಡ್ಡಿನಿಂದ!

ದುಡ್ಡಿನಿಂದ ಅಳೆದರೆ ಅವರು ಬಡವರು... ಮನಸ್ಸಿನಿಂದ ಅಳೆದರೆ ಅವರಷ್ಟು ಸಿರಿವಂತರು ಯಾರೂ ಇಲ್ಲ!

ಧೈರ್ಯವೇ? ಸಾಹಸವೇ? ನಂಬಿಕೆಯೇ? ಋಣವೇ? ಸಂತೋಷವೇ....

ಅವರಲ್ಲಿರುವಷ್ಟು ಬೇರೆ ಯಾರಲ್ಲಿರುತ್ತದೆ?

ಆದರೂ ಅವರು ಬಡವರು!

ತಮ್ಮ ಮಕ್ಕಳು ಓದು ಬರಹವನ್ನು ಕಲಿತು ವಿದ್ಯಾವಂತರಾಗಿ ಬಡತನವನ್ನು ನೀಗಿಸಬೇಕೆನ್ನುವುದು ಅಲ್ಲಿಯ ಜನಗಳ ಆಸೆ.

ಎಲ್ಲರ ಆಸಗಳೂ ನೆರವೇರುವುದಿಲ್ಲ.... ಕೆಲವರದ್ದು ಸ್ವಲ್ಪ ಮಟ್ಟಿಗೆ ನಡೆಯುತ್ತದೆ... ಕೆಲವರು ಅಲ್ಲಿಯೇ ಉಳಿಯುತ್ತಾರೆ.

ಆದರೆ.... ಕೆಲವರಲ್ಲಿ ಕೆಲವರು- ಕೆಲವೇ ಕೆಲವರು- ವಿದ್ಯಾವಂತರಾಗುತ್ತಾರೆ!

ಆ ರೀತಿ ವಿದ್ಯಾವಂತನಾದ ಒಬ್ಬ ಹುಡುಗನ ಕಥೆಯಿದು....

*

ವಿದ್ಯೆ...

ಪುಸ್ತಕದಿಂದ ನಾವು ಕಲಿತುಕೊಂಡದ್ದು ಮಾತ್ರವಲ್ಲ ವಿದ್ಯೆ.... ಪ್ರಪಂಚದಿಂದ ನಾವು ಆವಾಹಿಸಿಕೊಂಡದ್ದು ಕೂಡ ವಿದ್ಯೆಯೇ... ಪ್ರಪಂಚವನ್ನು ನಾವು ಹೇಗೆ ನೋಡುತ್ತೇವೆ- ಅರ್ಥವನ್ನು ಹುಡುಕುತ್ತೇವೆ- ಕಲಿಯುತ್ತೇವೆ.... ಎನ್ನುವುದೇ ನಿಜವಾದ ವಿದ್ಯೆ!

ಹೆಡೆಯೆತ್ತಿ ನಿಂತಿರುವ ಹಾವನ್ನು ಕೊಲ್ಲುವುದು.... ಹಾವಿನ ಪಟವನ್ನು ಪೂಜಿಸುವುದು.... ಹುತ್ತಕ್ಕೆ ಹಾಲುಯ್ಯುವುದು.... ಅದೂ ಒಂದು ಜೀವ ಎಂದು ಅದರ ಪಾಡಿಗೆ ಅದನ್ನು ಬಿಡುವುದು- ಯಾವುದು ವಿದ್ಯೆ??

ಅವನ ಜೀವನದ ಮೊದಲ ಪಾಠ- ಜೀವವಿರುವ ಯಾವುದಕ್ಕೇ ಆದರೂ ಪ್ರಪಂಚದಲ್ಲಿ ಬದುಕುವ ಹಕ್ಕಿದೆ!

ಹಾಗೆಂದು ಅವನೇನು ಕೊಲ್ಲದೆ ಇರಲಿಲ್ಲ- ತಿನ್ನದೇ ಇರಲಿಲ್ಲ.... ಆದರೂ....

ಕುರುಚಲು ಗಿಡಗಳನ್ನು ಸರಿಸುತ್ತಾ ಮುಂದಕ್ಕೆ ನಡೆಯುವಾಗ ಏನೋ ಸದ್ದು. ಜೊತೆಗೆ ವಾಸನೆ!

ಕೆಸರಿನ ವಾಸನೆ! ಕೆ--ರಿ-ನ ವಾಸನೆ ಅಂದರೆ ಪಕ್ಕದಲ್ಲೆ ಎಲ್ಲೋ ಆನೆಯಿದೆ!

ಹೊರಡುವಾಗಲೇ ಅಮ್ಮ ಹೇಳಿದ್ದರು... ಇಷ್ಟು ಹೊತ್ತಿಗೆ ಹೋಗಬೇಡವೋ ಆನೆ ಬರಬಹುದು... ಜೊತೆಗೆ ದಾರಿಯಲ್ಲಿರುವ ಹುಣಸೇ ಮರದಲ್ಲಿ ದೆವ್ವ....!

ವಾಸನೆಯಿಂದಾಗಿ ಆನೆ- ಆನೆಯಿಂದಾಗಿ ಅಮ್ಮನ ಮಾತು- ಅಮ್ಮನ ಮಾತಿನಿಂದಾಗಿ- ದೆವ್ವ!

ಮನದ ಮೂಲೆಯಲ್ಲಿ ಚಿಗುರೊಡೆದ ಹೆದರಿಕೆ ಕ್ರಮೇಣ ನರ ನರಗಳನ್ನೆಲ್ಲಾ ಆವರಿಸಿ ಬೆವರಲಾರಂಭಿಸಿದ!

ಒಮ್ಮೆ ಹೆದರಿಕೆ ಮನವನ್ನು ಪ್ರವೇಶಿಸಿದರೆ.... ಕಾಣುವುದೆಲ್ಲಾ ಅದಕ್ಕೆ ಅನುಗುಣವಗಿರುತ್ತದೆ- ಪ್ರಪಂಚವೇ ನಮಗೆ ವಿರುದ್ಧವಾದಂತೆ- ಹೆದರಿಸುತ್ತಿರುವಂತೆ....

ಜೊತಗೆ ದೂರದಿಂದ ಎಂದೂ ಕೇಳಿಸದ ಚಿತ್ರ ವಿಚಿತ್ರ ಶಬ್ದಗಳು.....

ಶಬ್ದದ ಜೊತೆಗೇ ಆನೆಯೊಂದು ಬರುತ್ತಿರುವುದು ಕಾಣಿಸಿತು- ಒಂಟಿ ಸಲಗ!

ಹೆದರಿಕೆಯಿಂದ ಹಿಂದಕ್ಕೆ ತಿರುಗಿದರೆ ಹೆಡೆಯೆತ್ತಿ ನಿಂತಿರುವ ನಾಗರ....

ಜಂಘಾಬಲವೇ ಉಡುಗಿದಂತಾಗಿ ಶರೀರದ ಬಲವನ್ನೆಲ್ಲಾ ಯಾರೋ ಹೀರಿದಂತಾಗಿ ನಡುಕದೊಂದಿಗೆ ದೊಪ್ಪನೆ ಕೆಳಕ್ಕೆ ಬಿದ್ದ!

ಕಣ್ಣು ತೆರೆದೇ ಇದೆ! ಆಕಾಶ, ಆಕಾಶದ ಕೆಳಗೆ ಮರಗಳು, ಸುತ್ತಲೂ ಬೆಳೆದಿರುವ ಕುರುಚಲು ಗಿಡಗಳು ಎಲ್ಲವನ್ನೂ ನೋಡುತ್ತಿದ್ದಾನೆ! ಎಲ್ಲವೂ ಅರಿವಿಗೆ ಬರುತ್ತಿದೆ. ಆದರೆ ಚಲಿಸಲಾಗುತ್ತಿಲ್ಲ!!

ದೇಹ ಎಲ್ಲಿಯೋ ಕಳೆದು ಹೋಗಿರುವ ಭಾವನೆ- ಈ ದೇಹ ನನ್ನದಲ್ಲ- ನಾನು ನಾನಲ್ಲ!!

ಇವನ ತೀರಾ ಸಮೀಪಕ್ಕೆ ಬಂದ ಹಾವು ಯಾವ ಕಾರಣಕ್ಕೋ- ಆನೆ ಹಾವನ್ನು ನೋಡಿಯೋ ಪರಸ್ಪರ ವಿರುದ್ಧ ದಿಕ್ಕಿಗೆ ಹೊರಟು ಹೋದವು.

ಕಣ್ಣು ಮುಚ್ಚಿದ. ಮಂಪರು ನಿದ್ರೆ.... ಕನಸು!

ಕನಸಿನಲ್ಲಿ ಅವನು ಎಂದಿನಂತೆ ತನಗೆ ಪ್ರಿಯವಾದ ಮರದ ಕೆಳಗೆ ಕುಳಿತು ಪುಸ್ತಕವೊಂದನ್ನು ಓದುತ್ತಿದ್ದಾನೆ. ಪಕ್ಕದಲ್ಲಿ ಮಣ್ಣು ಕುದಿಯುತ್ತಿದೆ! ಕು-ದಿ-ಯು-ತ್ತಿ-ದೆ! ಸಂಶಯದಿಂದ ನೋಡಿದ! ಮಣ್ಣಿನಿಂದ ಅವನ ಅಜ್ಜಿ ಹೊರಕ್ಕೆ ಬರುತ್ತಿದ್ದಾರೆ!! ಇವರೇಕೆ ಇಲ್ಲಿ? ಹೇಗೆ? ತೀರಿಕೊಂಡು ವರ್ಷವಾಯಿತಲ್ಲ?

ಅವನನ್ನು ನೋಡಿ ಮುಗುಳುನಕ್ಕರು! ಅವನೂ ನಕ್ಕ- ಆದರೂ ಮುಖದಲ್ಲಿ ಹೆದರಿಕೆ.

ಹೆದರುತ್ತಿದ್ದೀಯ ಮಗಾ?”

ಅವನಿಗೇನೂ ಅರ್ಥವಾಗಲಿಲ್ಲ.... ಸುತ್ತಮುತ್ತಲ ಪ್ರಪಂಚವೆಲ್ಲಾ ಮಾಯವಾಗಿ ಅವರಿಬ್ಬರು ಮಾತ್ರ ಉಳಿದು....

ಹೆದರಬೇಡ! ಹೆದರಬೇಡ ಅಲ್ಲ.... ಹೆದರಬಾರದು.... ಯಾವುದಕ್ಕೂ ಹೆದರಬಾರದು.... ನಾನಿದ್ದೇನೆ ನಿನ್ನಜೊತೆ... ದೇವರಿದ್ದಾನೆ! ಯಾಕೆ ಹೆದರುತ್ತೀಯ? ನಿನ್ನ ಜೀವನ ನಿನ್ನದು... ಮರಣವೂ ಕೂಡ ನಿನ್ನ ಅನುಮತಿಯನ್ನು ಪಡೆದೇ ನಿನ್ನನ್ನಾವರಿಸಬೇಕು.... ಪ್ರತಿ ಕ್ಷಣ ದೇವರು ನಿನ್ನನ್ನು ಕಾಪಾಡುತ್ತಾನೆ... ನಂಬು... ಮರಣಕ್ಕೆ ಭಯಪಡಬೇಡ... ಅದರ ಮೇಲಿನ ಭಯ ಹೋದರೆ ಇನ್ನು ಯಾವುದಕ್ಕೂ ಹೆದರಬೇಕಾಗಿಲ್ಲ!”

ಎಂದು ಹೇಳಿ ಕೈಯ್ಯಲ್ಲಿದ್ದ ಭಸ್ಮವನ್ನು ಅವನ ಬಾಯಿಗೆ ಹಾಕಿದರು.... ಹಣೆಯಮೇಲೊಂದು ಗೆರೆಯನ್ನು ಎಳೆದು ಎದೆಯನ್ನು ಸವರಿ ಹೊರಟು ಹೋದರು!

ಟಕ್ಕನೆ ಕಣ್ಣು ತೆರೆದ. ಅದೇ ಆಕಾಶ, ಅದೇ ಮರಗಳು, ಸುತ್ತಲೂ ಕುರುಚಲು ಗಿಡ...

ಕೈಯ್ಯನ್ನು ಚಲಿಸಲು ಶ್ರಮಿಸಿದ... ಮೊದಲು ಸಾಧ್ಯವಾಗಲಿಲ್ಲ.... ನಂತರ ನಿಧಾನವಾಗಿ ದೇಹ ಅವನ ನಿಯಂತ್ರಣಕ್ಕೆ ಬಂತು. ಎದ್ದು ಕುಳಿತ. ಸುತ್ತಲೂ ನೋಡಿದ.

ದೂರದಲ್ಲಿ ಮರವೊಂದು ಉರುಳುತ್ತಿರುವ ಶಬ್ದ ಕೇಳಿಸಿತು. ಒಂಟಿ ಸಲಗದ ಕೆಲಸ ಅಂದುಕೊಂಡ!

ನಿಧಾನವಾಗಿ ಮನೆಯಕಡೆ ನಡೆದ!

ಈಗಲೂ ಅದೇ ಹರಿದಾಟಗಳು ಚಿತ್ರ ವಿಚಿತ್ರ ಶಬ್ದಗಳು.... ಆದರೆ ಹೆದರಿಕೆಯಾಗಲಿಲ್ಲ!!

ಸಾವಧಾನವಾಗಿ ಮನೆಗೆ ಬಂದ.

ಅಮ್ಮ ಆಶ್ಚರ್ಯದಿಂದ ಅವನನ್ನು ನೋಡಿದರು.

ಇದೇನೋ ಹಣೆಯಮೇಲೆ"

ಸಂಶಯದಿಂದ ಮುಟ್ಟಿನೋಡಿದ.... ಭಸ್ಮ!

ದೊಡ್ಡಪ್ಪನ ಮನೆಗೆ ಹೋಗಲಿಲ್ಲವೇನೋ? ಒಳ್ಳೆಯದೇ ಆಯಿತು... ಅವರೇ ಬರುತ್ತಾರಂತೆ...” ಎಂದು ಅಮ್ಮ ಇನ್ನೂ ಏನೇನೋ ಹೇಳುತ್ತಿದ್ದರು....

ಅವನು ಗಾಳಿಯಲ್ಲಿ ನಡೆಯುತ್ತಿರುವವನಂತೆ ಒಳಕ್ಕೆ ಬಂದ.

ಕನ್ನಡಿಯಮುಂದೆ ನಿಂತು ನೋಡಿದ. ಹಣೆಯಲ್ಲಿ ಭಸ್ಮ- ಬದುಕಿದ್ದಾಗ ಅಜ್ಜಿ ಹಾಕುತ್ತಿದ್ದಂತೆ!

ಶರ್ಟನ್ನು ಬಿಚ್ಚಿ ಎದೆಯನ್ನು ನೋಡಿದ.... ನಾಲಕ್ಕು ಬೆರಳುಗಳ ಗುರುತು!!

*

ಈ ಪ್ರಪಂಚದಲ್ಲಿ ಏನು ಬೇಕಿದ್ದರೂ ನಡೆಯುತ್ತದೆ!

ಇದು ವಾಸ್ತವ- ಇದು ಅವಾಸ್ತವ ಎಂದು ಹೇಳುವುದು ತುಂಬಾ ಕಷ್ಟ!

ಪ್ರತ್ಯಕ್ಷವಾಗಿ ಅನುಭವಕ್ಕೆ ಬರದ ಹೊರತು ಕೆಲವನ್ನು ನಂಬಲಾಗುವುದಿಲ್ಲ!

ಹಾಗೆಂದು ಅದು ನಡೆದೇ ಇಲ್ಲವೆಂದು ಹೇಳುವುದು ಹೇಗೆ?

ಅವನು ಪ್ರಪಂಚನ್ನು ಹೊಸ ದೃಷ್ಟಿಯಿಂದ ನೋಡಲಾರಂಭಿಸಿದ್ದ! ತನ್ನ ಅನುಭವಗಳನ್ನು ಯಾರೊಂದಿಗೂ ಹೇಳದೆ ಅದನ್ನು ಅನುಭವಿಸುತ್ತಿದ್ದ! ತಾನೊಂದು ಸಂರಕ್ಷಣ ವಲಯದಲ್ಲಿರುವಂತೆ! ತನಗೇನೂ ಕೆಡುಕಾಗದು!

ಕಾಡಿನ ಮಕ್ಕಳು ಅವನ ಅನುಭವವನ್ನು ಅವಾಸ್ತವ ಎಂದು ಹೇಳಲಾರರು...

ಆದರೂ ಅವನು ಯಾರಿಗೂ ಹೇಳಲಿಲ್ಲ....

*

ತರಗತಿಯಲ್ಲಿ ಕುಳಿತು ಪಾಠವನ್ನು ಕೇಳುವಾಗ ಯಾರೋ ಅರಚಿಕೊಂಡಂತೆ ಶಬ್ದ ಕೇಳಿಸಿತು.

ಎಲ್ಲರೂ ಆ ಕಡೆಗೆ ನೋಡಿದರು.

ಹುಡುಗಿಯೊಬ್ಬಳು ಹೆದರಿಕೆಯಿಂದ ಓಡಿ ಬರುತ್ತಿದ್ದಳು. ಅವಳ ಹಿಂದೆ ಒಂದು ಕಾಡುಕೋಣ.

ಎಲ್ಲರೂ ನೋಡುತ್ತಿದ್ದರೇ ಹೊರತು ಯಾರಿಗೂ ಏನು ಮಾಡಬೇಕೆಂದು ತಿಳಿಯಲಿಲ್ಲ!

ಅವನು ಎದ್ದ! ಮೇಸ್ಟರರ ಮೇಜಿನಿಂದ ಬೆತ್ತವನ್ನು ತೆಗೆದುಕೊಂಡು ಹೊರಬಂದ. ಇವನನ್ನು ಕಂಡು ಕೋಣ ನಿಂತಿತು! ಹೆದರಿಸುವಂತೆ ಮುಂದಕ್ಕೆ ನುಗ್ಗಿದಾಗ ಓಡಿಹೋಯಿತು!!

ಅಷ್ಟು ಹೊತ್ತು ಓಡಿದ ಹುಡುಗಿ ಮುಗ್ಗರಿಸಿದಳು. ಹಿಡಿದುಕೊಂಡ. ನಂತರ ನಿಧಾನವಾಗಿ ಮಲಗಿಸಿದ.

ಮುಳ್ಳು ಗಿಡಗಳಿಗೆ ಸಿಕ್ಕಿ ಅವಳ ಲಂಗವೆಲ್ಲಾ ಹರಿದು ಚಿಂದಿಯಾಗಿತ್ತು.

ಪ್ರಾಣ ಭಯದ ಅವಳ ಓಟವನ್ನು ಊಹಿಸಿದ. ಕಣ್ಣು ತುಂಬಿತು.

ತನ್ನ ಅಂಗಿಯನ್ನೇ ತೆಗೆದು ಅವಳ ಸೊಂಟದಿಂದ ಕೆಳಗೆ ಸುತ್ತಿ ಅವಳನ್ನು ಎತ್ತಿಕೊಂಡು ನಡೆದ.

ಸಣ್ಣಪುಟ್ಟ ತರಚು ಗಾಯಗಳು ಬಿಟ್ಟರೆ ಬೇರೇನೂ ಆಗಿರಲಿಲ್ಲ.

ಅವಳ ಮನೆಯನ್ನು ತಲುಪಿದಾಗ ಯಾರೂ ಇರಲಿಲ್ಲ.

ಮನೆಯಮುಂದೆ ಮಲಗಿಸಿ ಹಿಂಬಾಗಕ್ಕೆ ಹೋಗಿ ತೊಟ್ಟಿಯಿಂದ ನೀರು ತಂದ. ಅವಳ ಮುಖವನ್ನು ನೀರಿನಿಂದ ಒರೆಸಿದ. ನಂತರ ಪಕ್ಕದಲ್ಲೇ ಕುಳಿತ.

ಶಾಲೆಯಿಂದ ಒಂದಿಬ್ಬರು ಮಕ್ಕಳು ಬಂದು ವಿಚಾರಿಸಿಕೊಂಡು ಹೋದರು.

ಅವನು ಯೋಚಿಸಲಾರಂಭಿಸಿದ.... ಪ್ರಾಣಭಯದೊಂದಿಗಿನ ಅವಳ ಓಟ.... ತಾನು ಹೊರಕ್ಕೆ ಬಂದಾಗ ಹೆದರಿ ನಿಂತುಕೊಂಡ ಕೋಣ... ಹೆ--ರಿ.... ನಿಜವೇ..... ಯಾಕೆ???

ತನ್ನ ಕಣ್ಣಿನಲ್ಲಿನ ಧೈರ್ಯ......

ಅವಳ ಮನೆಯವರು ಬರುವವರೆಗೆ ಕಾದಿದ್ದು ವಿಷಯವನ್ನು ತಿಳಿಸಿ ಹೊರಟು ಹೋದ.

ಎಚ್ಚರವಾಗಿದ್ದರೂ ಅವನೇನು ಮಾಡುವನೋ ನೋಡೋಣವೆಂದು ಮಲಗಿದ್ದ ಹುಡುಗಿಗೆ....

ನಿರಾಸೆಯಾಯಿತು!!

*

ಪ್ರಕೃತಿ- ಪುರಷ!

ಏನು ಹಾಗಂದರೆ?

ಪ್ರಕೃತಿ ಪ್ರಕೃತಿಯೇ..... ಪುರುಷ ಎಂದರೇನು? ಏನಿರಬಹುದು?

ಅವನಿಗೆ ತಾನು ಹೆದರಿ ಮೂರ್ಛೆಹೋದ ಸಂದರ್ಭ ನೆನಪಾಯಿತು!

ಕಣ್ಣು ತೆರೆದು ಮಲಗಿರುವ ತನಗೆ ದೇಹವನ್ನು ಅಲುಗಿಸಲು ಸಾಧ್ಯವಾಗಿರಲಿಲ್ಲ!!

ಮೆದುಳು ಪ್ರವರ್ತಿಸುತ್ತಿತ್ತು! ದೇಹ ಪ್ರತಿಸ್ಪಂದಿಸಲಿಲ್ಲ!!

ಮೆದುಳು ಅಥವಾ ಅದರ ಪ್ರವರ್ತನೆಯನ್ನು ಚೈತನ್ಯ ಎಂದು ಹೇಳಬಹುದೆ?

ದೇಹವು ಚೈತನ್ಯವನ್ನು ಅವಲಂಭಿಸಿದೆ!

ಪ್ರಕೃತಿ- ಪುರುಷ.

ದೇಹ- ಚೈತನ್ಯ.

ಕಾರ್ಯ- ಕಾರಣ!!

ಏನೋ.... ಅರ್ಥವಾದಂತೆ! ಆದರೆ ಸ್ಪಷ್ಟವಾಗದ ಅವಸ್ಥೆ!

ಸರಿಯಾದ ರೀತಿಯಲ್ಲಿ ಚಿಂತಿಸಿದ್ದೇನೆ ಅನ್ನುವುದು ಮಾತ್ರ ನಿಜ!!

*

"ಎಷ್ಟು ಬಂತೋ?” ಎಂದು ಕೇಳಿದ ಗೆಳೆಯನ ಮುಖವನ್ನು ಸಂಶಯದಿಂದ ನೋಡಿದ.

"ಅದೇ... ಪವನನಿಗೆ ಹುಣಿಸೇ ಹಣ್ಣು ಕೊಟ್ಟೆಯಲ್ಲ?” ಎಂದ ಗೆಳೆಯ.

ಅದರಲ್ಲಿ ಬರುವುದಕ್ಕೆ ಏನಿದೆ?”

ಫ್ರೀಯಾಗಿ ಕೊಟ್ಟೆಯ?”

ನನಗೆ ಫ್ರೀಯಾಗಿ ಸಿಕ್ಕಿದ್ದು ತಾನೆ?”

ಒಂದು ಕ್ಷಣ ಏನೂ ಮಾತನಾಡದೆ ಅವನ ಮುಖವನ್ನು ನೋಡಿದ ಗೆಳೆಯ.

ನಾನಾಗಿದ್ದರೆ ಮಾರುತ್ತಿದ್ದೆ" ಎಂದು ಹೇಳಿ ಹೊರಟು ಹೋದ!

ಯಾಕೆ?

ತಾನು ಕಾಡಿನಲ್ಲಿ ಕಿತ್ತ ಹುಣಸೇ ಹಣ್ಣು... ಅದನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ತನ್ನ ಮನೆಗೂ ಬೇಕು ಅಂದ ಪವನ... ತಾನು ಕೊಟ್ಟ! ಅಷ್ಟೇ....

ಪ್ರತಿಯೊಂದಕ್ಕೂ ಬೆಲೆಕಟ್ಟುತ್ತಾ ಹೋದರೆ ಸಂಬಂಧಗಳಿಗೆ ಅರ್ಥವೇನು? ಭಾವನೆಗಳಿಗೆ ಬೆಲೆಯೇನು?

ಯೋಚಿಸುತ್ತಾ ನಡದ. ಅವನಿಗೆ ವೃದ್ಧೆಯೊಬ್ಬರು ನೆನಪಾದರು.

ಆ ಕಾಡಿನ ವೈದ್ಯೆ ಅವರು.

ಎಷ್ಟೋ ಜನರ ಪ್ರಾಣವನ್ನು ಯಾವುಯಾವುದೋ ರೀತಿಯಿಂದ ಕಾಪಾಡಿದ ಮಹಾನುಭಾವೆ!

ಒಂದೇ ಒಂದು ನಯಾ ಪೈಸೆ ಪ್ರತಿಫಲ ಪಡೆದುಕೊಂಡವಳಲ್ಲ!

ಎಷ್ಟೇ ಕಡಿಮೆಯೆಂದರೂ ನೂರು ವರ್ಷ ವಯಸ್ಸು ಅವರಿಗೆ!

ಹೇಗೆ ಬದುಕಿದರು? ಬದುಕುತ್ತಿದ್ದಾರೆ?

ಯೋಚನೆ ಯೋಚನೆ ಯೋಚನೆ.... ಹುಡುಕಾಟ....

ಶಾಲೆಯ ಲೈಬ್ರರಿಯಲ್ಲಿದ್ದ ಅಲ್ಪಸ್ವಲ್ಪ ಪುಸ್ತಕವನ್ನೆಲ್ಲಾ ಯಾವುದೋ ಕಾಲಕ್ಕೆ ಓದಿ ಮುಗಿಸಿದ್ದ!

ಅವನಿಗೆ ಹೊಸ ಹೊಸ ಅರಿವು ಬೇಕಿತ್ತು!

ಕಣ್ಣು ಹುಡುಕುತ್ತಿತ್ತು... ಮಿದುಳು ಯೋಚಿಸುತ್ತಿತ್ತು....

ಕೆಲವೊಂದಕ್ಕೆ ಉತ್ತರ ಸಿಗುತ್ತಿತ್ತು... ಕೆಲವಕ್ಕೆ ಸಿಗುತ್ತಿರಲಿಲ್ಲ...

ದಿನಗಳುರುಳುತ್ತಿದ್ದವು.... ಕಾಲ ಗರ್ಭದಲ್ಲಿ ಎಷ್ಟೆಷ್ಟೋ ರಹಸ್ಯಗಳು....

ಆ ಕಾಡನ್ನೂ ಕೂಡ ನಾ--ರೀ--ತೆ ಪ್ರವೇಶಿಸಲಾರಂಭಿಸಿತ್ತು!

ಯಾರು ಯಾರೋ ಬಂದು ಜಾಗವನ್ನು ಕೊಂಡರು, ಮನೆಗಳನ್ನು ಕಟ್ಟಿದರು....

ಸ್ಥಳೀಯರನ್ನು ಕೆಲಸಕ್ಕೆ ಇಟ್ಟುಕೊಂಡರು.....

ಸಂಶಯ ಅಸೂಯೆಗಳು ಬೆಳೆದವು... ಅತಿಕ್ರಮ ಪ್ರವೇಶ- ವ್ಯಭಿಚಾರಗಳು ಕಾಣಿಸಿಕೊಂಡವು...

*

ಅವನೀಗ ಬಿಸಿ ರಕ್ತದ ಯುವಕ!!

ಓದು ಮುಂದುವರೆಸಲು ಊರು ಬಿಡಬೇಕಿತ್ತು!

ಅಪ್ಪ ಅಮ್ಮ ಮಾನಸಿಕವಾಗಿ ತಯಾರಾಗಿದ್ದರು. ಅವನೇ ಹಿಂಜರಿಯುತ್ತಿದ್ದ.

ಆದರೂ ಓದಬೇಕೆಂಬ ಆಸೆ....

ಸರಕಾರಿ ಕಾಲೇಜೊಂದರಲ್ಲಿ ಸೀಟು ಸಿಕ್ಕಿತ್ತು. ಅದೇ ಕಾಲೇಜಿನ ಹಾಸ್ಟೆಲ್....

ಹೊರಡುವ ದಿನದ ಹಿಂದಿನ ದಿನ... ಬಟ್ಟೆಯನ್ನು ಐರನ್ ಮಾಡುತ್ತಿದ್ದ.... ಐರನ್ ಬಾಕ್ಸಿನ ಹಿಡಿಯಲ್ಲಿ ವಯರ್ ಕಿತ್ತು ಹೋಗಿರುವುದು ಅವನಿಗೆ ಕಾಣಿಸಲಿಲ್ಲ... ಸ್ವಿಚ್ ಹಾಕಿದಾಗ ಶಾಕ್ ಹೊಡೆಯಿತು.... ನಡುಗಲಾರಂಭಿಸಿದ. ಶಬ್ದ ಹೊರಡಲಿಲ್ಲ... ಒಂದು ನಿಮಿಷ ಆಗಿರಬಹುದು... ಒಂದು ಸೆಕೆಂಡ್ ಕರೆಂಟ್ ಹೋಗಿ ಬಂತು!!

ಸ್ವಿಚ್ ಆಫ್ ಮಾಡಿದ. ಏನೋ ಸಂಶಯವಾಗಿ ಶರ್ಟ್ ಬಿಚ್ಚಿ ನೋಡಿದ. ಬನಿಯನ್ ತೋಳಿನ ಭಾಗದಲ್ಲಿ ಸುಟ್ಟು ಕಿತ್ತು ಹೋಗಿತ್ತು! ಆದರೂ ತಾನು ಬದುಕಿದ್ದಾನೆ!

ಹೇಗೆ? ಕರೆಂಟ್ ಯಾಕೆ ಹೋಯಿತು?

ತಿಳಿಯದು!

*

ಹಾಗೆ.... ಮೊದಲಬಾರಿ ಅವನು ತನ್ನ ಹುಟ್ಟಿದೂರನ್ನು ಬಿಟ್ಟು ಹೊರಟ... ಟ್ರೈನಿನಲ್ಲಿ....

ಪ್ರಯಾಣದ ಸಂದರ್ಭದಲ್ಲಿ ಸಣ್ಣ ಘಟನೆಯೊಂದು ನಡೆಯಿತು.... ತೀರಾ ಸಣ್ಣ ಘಟನೆ...

ರಾತ್ರಿ... ಎಲ್ಲರೂ ಕುಳಿತಲ್ಲಿಯೇ ತೂಕಡಿಸುತ್ತಿದ್ದರು.... ಟ್ರೈನ್ ಅತಿವೇಗವಾಗಿ ಚಲಿಸುತ್ತಿತ್ತು.... ಅವನಿಗೆ ನಿದ್ರೆ ಬರಲಿಲ್ಲ... ಏನೇನೋ ಯೋಚನೆಗಳು.... ಎದ್ದು ಬಾಗಿಲಬಳಿ ಬಂದ. ಬಾಗಿಲನ್ನು ತೆರೆದಾಗ ತಣ್ಣನೆಯ ಗಾಳಿ ಬೀಸಿತು. ಜಗುಲಿಯಮೇಲೆ ಕುಳಿತ. ಎಷ್ಟು ಸಮಯ ಕುಳಿತಿದ್ದನೋ ಕಣ್ಣಮುಂದೆ ಮಿಂಚೊಂದು ಮಿಂಚಿದಂತಾಗಿ ಮುಂದಕ್ಕೆ ಮುಗ್ಗರಿಸಿದ..... ಘಂಟೆಗೆ ನೂರಾ ಇಪ್ಪತ್ತು ಕಿಲೋಮೀಟರ್ ವೇಗದಲ್ಲಿ ಓಡುತ್ತಿರುವ ಟ್ರೈನ್... ಮುಂದಕ್ಕೆ ಮುಗ್ಗರಿಸಿದ ಅವನನ್ನು ಯಾರೋ ತಳ್ಳಿದಂತೆ ಟ್ರೈನಿನೊಳಕ್ಕೆ ಬಿದ್ದ!

ಹೇಗೆ?

ತಿಳಿಯದು...

ಹಾಗೆ ಅವನು ಮಾಹಾ ನಗರವನ್ನು ಪ್ರವೇಶಿಸಿದ!!!

ಮುಂದಿನ ಅವನ ಜೀವನ ಭವಿಷ್ಯವಾದ್ಧರಿಂದ..... ಕಥೆ ಇಷ್ಟೇ!!

ಯಾರಿಗೆ ಏನು ಅರ್ಥವಾದರೂ ಆಗದಿದ್ದರೂ ಇಷ್ಟೇ ಕಥೆ!

*

ಈ ಕಥೆ ಬರೆಯಲು ಕಾರಣ- ಬರೆದದ್ದರ ಉದ್ದೇಶ.....

ವಾಸ್ತವ ಅವಾಸ್ತವಗಳನ್ನು ತೀರುಮಾನಿಸುವುದು ನಮ್ಮಿಂದ ಸಾಧ್ಯವಿಲ್ಲ....!!!

ಜೊತೆಗೆ,

ಪ್ರತಿಯೊಬ್ಬರ ಮನಸ್ಸೇ ಅವರ ಜೀವನ.

ಧೈರ್ಯ ಅಧೈರ್ಯಗಳು ಅವರವರ ಮನಸ್ಸನ್ನು ಅವಲಂಭಿಸಿರುತ್ತದೆ!

ಧೈರ್ಯಗೊಳ್ಳಲು ಕೆಲವೇ ಕೆಲವು ಕಾರಣಗಳಾದರೆ ಅಧೈರ್ಯಗೊಳ್ಳಲು ಹಲವು ಕಾರಣಗಳು!!

ಕಾಲ ಕೆಳಗೆ ಏನೋ ಚಲಿಸಿದಂತಾದಾಗ ಆ ಕ್ಷಣದಲ್ಲಿ ಕಾಲನ್ನು ಮೇಲಕ್ಕೆತ್ತುವುದು ಒಂದು ಆಯಾಚಿತ ಚರ್ಯೆ- ಅಧೈರ್ಯವಲ್ಲ...

ನಂತರ ಅಲ್ಲಿಂದ ಓಡುವುದು ಅಧೈರ್ಯ!!

ಕಾಲ ಕೆಳಗೆ ಇರುವುದು ಜಿರಲೆಯೇ ಆದರೂ ಹಾವೇ ಆದರು ಅಲ್ಲಿಂದ ಓಡದೆ ಅದನ್ನೇ ಹೊರಹಾಕಲು ಶ್ರಮಿಸುವುದು ಧೈರ್ಯ!!

ಶುಭಂ!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!