ಕಥೆಗಾರನ ಕಥೆ- ಕಥೆ

ಕಥೆಗಾರನ ಕಥೆ

ಕಥೆಗಾರ ನಾನು! ಆದ್ದರಿಂದ ಬರೆಯುತ್ತಲೇ ಇರಬೇಕು! ಬೇರೆ ವಿಧಿಯಿಲ್ಲ, ಯಾರು ಓದಿದರೂ ಬಿಟ್ಟರೂ- ಬರೆಯುವುದು ನನ್ನ ಧರ್ಮ!

ಸಾಮಾನ್ಯವಾಗಿ ಕಥೆಗಳಲ್ಲಿ ಕಥೆಗಾರನನ್ನು ಹುಡುಕುವುದು ವಾಡಿಕೆ! ಸಿಗಲಾರ! ಆದರೂ ಕಂಡುಕೊಂಡಿದ್ದೇ ಅವನು ಅನ್ನುವ ನಂಬಿಕೆ ಇದ್ದೇ ಇರುತ್ತದೆ!

ಆದ್ದರಿಂದ ಇಂದು ಕಥೆಗಾರನ ಕಥೆಯನ್ನು ಹೇಳೋಣ ಅಂದುಕೊಂಡಿದ್ದೇನೆ!

ಬರೆಯುತ್ತಿರುವುದು ಗಂಡು ಪ್ರಾಣಿಯಾದ್ದರಿಂದ..., ಇದು..., ಕಥೆಗಾರನ ಕಥೆ!

ಬರೆಯುವವನ ಜೀವನಕ್ಕೆ ಸಂಬಂಧ ಪಡದೇ ಇದ್ದರೂ ಅವನು ಹೇಗೆ ಕಥೆ ಬರೆಯಬಲ್ಲ ಅನ್ನುವ ಕಥೆ!

*

ಮನೆಯಮುಂದೆ ಕುಳಿತಿದ್ದೇನೆ. ಕುರ್ಚಿಯಲ್ಲಿ ಕುಳಿತು- ಎಡಗಾಲನ್ನು ಸ್ಟೂಲ್ ಮೇಲಿಟ್ಟು- ಯಾಕೆಂದು ಕೇಳಬೇಡಿ- ಮುರಿದಿದೆ!- ಪಕ್ಕದ ಮತ್ತೊಂದು ಸ್ಟೂಲಿನ ಮೇಲೆ ಬರೆಯಲು ಕಾಗದ- ಪೆನ್ನು- ಜೊತೆಗೆ ಟೀ! ಕೈಯ್ಯಲ್ಲಿ ಸಿಗರೇಟಿದೆ ಅನ್ನೋಣ ಅನ್ನುವ ಆಸೆ! ಆದರೆ ನಾನು ಸಿಗರೇಟು ಸೇದಲಾರೆ!- ಕುಳಿತು ಏನು ಬರೆಯಲಿ ಅನ್ನುವ ಯೋಚನೆಯಲ್ಲಿ ದೂರದ ಬೆಟ್ಟವನ್ನೇ ನೋಡುತ್ತಿದ್ದೇನೆ!

ಬೆಟ್ಟವನ್ನು ನೋಡಿದರೆ ಕಥೆ ಬರುತ್ತದೆಯೇ?

ಬರಬೇಕು! ಕಥೆಯೂ ಕಾದಂಬರಿಯೂ ಕವಿತೆಯೂ ಮಹಾಕಾವ್ಯವೂ.., ಬರಬೇಕು! ಆದರೆ ಬರುತ್ತಿಲ್ಲ!

ಹೆಂಡತಿ ನಾಲ್ಕನೇ ಟೀಯನ್ನು ತಂದಿಟ್ಟು ನನ್ನನ್ನು ನೋಡಿ ಮುಗುಳುನಕ್ಕು ಹೊರಟು ಹೋದಳು!

ಗೇಲಿ ಮಾಡಿದಳೇ?

ಮಾಡಲಾರಳು! ಅವಳಿಗೆ ಗೊತ್ತು ನಾನೇನೆಂದು- ಅವಳನ್ನೇ ಪಾತ್ರವಾಗಿಸಿ ಎಷ್ಟು ಕಥೆ ಬರೆದಿದ್ದೇನೆಂದು!

ನನ್ನಿಂದ ಏನೋ ಅದ್ಭುತ ಬರುತ್ತದೆ ಅನ್ನುವುದು ಅವಳ ನಗುವಿನ ಅರ್ಥ! ನಾನು ಏನೇ ಬರೆದರೂ ಅವಳಿಗೆ ಅದ್ಭುತವೇ... ಆದರೆ ಮೇಧಾವಿ ವರ್ಗಕ್ಕೋ.... ಆ ವಿಷಯ ಬೇಡ...!!

ಬೆಟ್ಟ.... ಎಷ್ಟು ಸಾರಿ ಹತ್ತಿ ಇಳಿದಿದ್ದೇನೆ?

ತಿಳಿಯದು.... ಈಗ ಹತ್ತಬೇಕೆಂದುಕೊಂಡರೂ ಹತ್ತಲಾರೆ! ಎಷ್ಟು ತಿಂಗಳು ಬೇಕೋ ಏನೋ....

ಇಷ್ಟೆ ಮನುಷ್ಯ!

ಬೆಟ್ಟದ ಕಾಲು ದಾರಿಯಲ್ಲಿ ಏನೋ ಮಿಂಚು... ಮಿಂಚು?

ಏನೋ ಹೊಳೆದಂತಾಯಿತು ಅನ್ನವುದನ್ನು ಮಿಂಚು ಅನ್ನುತ್ತೇನಲ್ಲಾ.... ಏನಿರಬಹುದು?

ವಾಸ್ತವ ಏನೆಂದು ನನಗೇನು ಗೊತ್ತು? ಆದರೆ ಕಲ್ಪನೆಗೆ ಎಲ್ಲೆಯಿದೆಯೇ....?

ಐದನೆಯ ಟೀ ತಂದ ಹೆಂಡತಿ ನಾನು ಬರೆಯಲು ಕಾಗದ ಪೆನ್ನನ್ನು ತೆಗೆದುಕೊಂಡದ್ದನ್ನು ನೋಡಿ-

ಬೆಟ್ಟದಲ್ಲಿ ಏನಾದರೂ ಮಿಂಚಿತೇ?” ಎಂದಳು!

ಮನದಲ್ಲಿ ಏನಾದರೂ ಮೂಡಿತೆ- ಅನ್ನುವುದು ಸಾರ!

ಮುಗುಳುನಕ್ಕೆ! ಅರ್ಥವಾದಂತೆ ಅವಳೂ ನಕ್ಕು ಹೊರಟು ಹೋದಳು!

*

ಮನೆಯ ಮುಂದೆ ಜೀಪು. ವ್ಯಕ್ತಿಯೊಬ್ಬ ಇಳಿದು ಬಂದ. ನಿರ್ವಿಕಾರಿ! ಬಂದವನೇ ನಾನು ಕಾಲಿಟ್ಟಿದ್ದ ಸ್ಟೂಲನ್ನು ಎಳೆದು ಕುಳಿತುಕೊಂಡ. ಟಕ್ಕನೆ ಕಾಲು ಕೆಳಕ್ಕೆ ಬಿದ್ದಿತು. ಆತ ತಲೆ ಕೆಡಿಸಿಕೊಳ್ಳಲಿಲ್ಲ.

ನಿಮ್ಮನ್ನೊಂದು ಪ್ರಶ್ನೆ ಕೇಳಬಹುದೇ?” ಎಂದ.

ಕೇಳಬಾರದು!” ಎಂದೆ.

ಕಸಿವಿಸಿಗೊಂಡ! ಆದರೂ....

ಕೇಳಲೇ ಬೇಕು!” ಎಂದ.

ಮೌನವಾಗಿದ್ದೆ.

ನಿಮ್ಮ ಹೆಂಡತಿ ಕಾಣೆಯಾಗಿ ಎಷ್ಟು ದಿನವಾಯಿತು?” ಎಂದ.

ನಿಮಗೇಕೆ?” ಎಂದೆ.

ಕೇಸ್ ರಿಜಿಸ್ಟರ್ ಆಗಿದೆ!”

ಅದಕ್ಕೆ?”

ಆ ಕೇಸನ್ನು ಪರಿಶೀಲಿಸುತ್ತಿರುವವನು ನಾನೇ!” ಎಂದ.

ಮನೆಯೊಳಕ್ಕೆ ನೋಡಿ-

ವೈಶಾಲೀ...” ಎಂದೆ.

ಹೊರಕ್ಕೆ ಬಂದಳು ನನ್ನ ಹೆಂಡತಿ.

ಆತನ ಮುಖದಲ್ಲಿ ಆಶ್ಚರ್ಯ.

ಸಿಕ್ಕಿದರೇ?” ಎಂದ.

ನೀವು ಹುಡುಕಿಕೊಂಡು ಬಂದಾತ ಪಕ್ಕದ ಮನೆಯವನು!” ಎಂದೆ.

ನಾಚಿಕೆಯಿಂದ ಎದ್ದು...,

ಸಾರಿ.... ನಿಮ್ಮ ಕಾಲನ್ನು ಗಮನಿಸಲಿಲ್ಲ!” ಎಂದು ಹೇಳಿ ಹೊರಟು ಹೋದ.

ವೈಶಾಲಿ ನನ್ನ ಕಾಲನ್ನು ಪುನಹ ಸ್ಟೂಲಿನ ಮೇಲಿಟ್ಟು ಕೂದಲ ನಡುವೆ ಬೆರಳಾಡಿಸಿ ಒಳಕ್ಕೆ ಹೋದಳು.

*

ಮೂರುದಿನ ಮುಂಚೆ ಪಕ್ಕದ ಮನೆಯಲ್ಲಿ ಗಲಾಟೆ!

ಅಂತಿಂತಾ ಗಲಾಟೆಯೋ.... ಗಂಡ ಕೊಟ್ಟ ಪೆಟ್ಟಿಗೆ ಮೂರ್ಛೆ ಹೋಗಿದ್ದಳು ಹೆಂಡತಿ!

ಕಾಣೆಯಾಗದೆ ಇನ್ನೇನಾಗುತ್ತಾಳೆ?

ನನ್ನ ಹತ್ತಿರ ಬಂದಿದ್ದಾನೆ ದಡ್ಡ ಪೋಲೀಸ್! ಅವಳನ್ನು ಹೇಗೆ ಕಂಡುಕೊಳ್ಳುತ್ತಾನೋ....!

ಹೊರಕ್ಕೆ ಹೊರಟಳು ವೈಶಾಲಿ..... ಶಾಪಿಂಗ್!

ಒಂದು ಫ್ಲಾಸ್ಕ್ ತುಂಬಾ ಟೀ ಪಕ್ಕದ ಸ್ಟೂಲಿನಲ್ಲಿಟ್ಟಳು.

ಬೆಟ್ಟ... ಬೆಟ್ಟದಲ್ಲಿ ಮಿಂಚು! ಮಿಂಚಿನಲ್ಲಿ ನೆರಳು! ನೆರಳಿನಲ್ಲಿ ಚಲನೆ.....

*

ಪ್ಲೀಸ್... ಪ್ಲೀಸ್... ನನ್ನ ಏನೂ ಮಾಡಬೇಡಿ....” ಎಂದಳು ಪಕ್ಕದ ಮನೆಯಾತನ ಹೆಂಡತಿ!

ನಾನೇನು ಮಾಡಲಿ?” ಎಂದೆ.

ಗೊಂದಲದಿಂದ ನನ್ನ ಮುಖವನ್ನು ನೋಡಿದಳು.

ನಿನ್ನ ಸಹಕಾರವಿಲ್ಲದೆ...” ಎಂದು ಮುಗಿಸಿದೆ.

ಅವಳ ಮುಖದಲ್ಲಿ ಪುನಃ ಹೆದರಿಕೆ!

ಹೆದರುತ್ತಿದ್ದೀಯ?” ಎಂದೆ.

ಪುನಹ ಗೊಂದಲ.

ನಾನು ಯಾರೆಂದು ಗೊತ್ತೆ?” ಎಂದೆ.

ಗೊತ್ತು ಎನ್ನುವಂತೆ ತಲೆಯಾಡಿಸಿದಳು.

ಆದರೂ ಹೆದರಿಕೆಯೇ?” ಎಂದೆ.

ಏನೂ ಮಾತನಾಡದೆ ನನ್ನನ್ನೇ ನೋಡಿದಳು.

ನಿನ್ನ ಸಂಶಯವನ್ನು ನಿವಾರಿಸಲು ಬಂದಿದ್ದೇನೆ!” ಎಂದೆ.

ಅಯೋಮಯ ಪರಿಸ್ಥಿತಿ- ಅವಳಿಗೆ.

ನಾನು ಬರೆದ- ನೀನು ಓದಿದ ಕಥೆಯಲ್ಲಿ ರೇಪ್ ಆದ ಹುಡುಗಿಯನ್ನು ರೇಪ್ ಮಾಡಿದವನು ನಾನೇ ಎಂದು ನೀನು ವೈಶಾಲಿಗೆ ಹೇಳಿದೆಯಂತೆ?”

ಪುನಹ ನಿಧಾನವಾಗಿ ಅವಳ ಮುಖದಲ್ಲಿ ಹೆದರಿಕೆ ಕಾಣಿಸಿಕೊಳ್ಳತೊಡಗಿತು.

ನಿನ್ನನ್ನೂ ರೇಪ್ ಮಾಡಿ ಅದನ್ನು ಕಥೆಯಾಗಿ ಬರೆಯೋಣವೆಂದು ಬಂದರೆ ಗಂಡನಿಂದ ಏಟು ತಿಂದು ಪ್ರಜ್ಞೆತಪ್ಪಿ ಮಲಗಿದ್ದೀಯಲ್ಲಾ ನಾಚಿಕೆಯಾಗುವುದಿಲ್ಲವೇ?” ಎಂದೆ.

ಅಷ್ಟರಲ್ಲಿ

ಋಷೀ....” ಎನ್ನುತ್ತಾ ಒಳಕ್ಕೆ ಬಂದಳು ವೈಶಾಲಿ.

*

ಗೇಟಿಗೆ ಬೀಗ ಹಾಕಿದೆ! ಅವರು ಬಂದರೆ ನನ್ನನ್ನು ಕಾಂಟಾಕ್ಟ್ ಮಾಡಲು ಹೇಳಿ- ಈ ನಂಬರ್ ಕೊಡಿ!” ಎಂದು ಹೇಳಿದ ಆಗಲೇ ಬಂದ ವ್ಯಕ್ತಿ!

ನಾನು ಮುಗುಳುನಕ್ಕೆ. ಆತ ಚೀಟಿಯನ್ನು ಫ್ಲಾಸ್ಕಿನ ಕೆಳಗಿಟ್ಟು ಹೊರಟು ಹೋದ. ನಾನು ಫ್ಲಾಸ್ಕನ್ನು ತೆಗೆದು ಲೋಟಕ್ಕೆ ಟೀ ಸುರಿದೆ. ಚೀಟಿ ಗಾಳಿಗೆ ಹಾರಿಹೋಯಿತು!

*

ಒಬ್ಬರು ಸಾಯುತ್ತಿದ್ದರೂ ಹುಡುಗಾಟ ಬಿಡಬೇಡ!” ಎಂದಳು ವೈಶಾಲಿ.

ಮುಗುಳುನಕ್ಕೆ.

ಮತ್ತೆ? ಕಥೆಯಲ್ಲಿನ ಹುಡುಗಿಯನ್ನು ರೇಪ್ ಮಾಡಿದ್ದು ನಾನೇ ಅನ್ನುತ್ತಾಳೆ?” ಎಂದೆ.

ನಿನ್ನ ತಲೆ!” ಎಂದು ನನಗೆ ಹೇಳಿ,

ಹೆದರಬೇಡಿ.... ಪುರಾಣದ ಋಷ್ಯಶೃಂಗ ವೈಶಾಲಿಯನ್ನು ಬಿಟ್ಟು ಹೋದ! ಅದಕ್ಕೆ ಶಿಕ್ಷೆ ಇವನಿಗೆ- ಜನ್ಮ ಪೂರ್ತಿ ನನ್ನೊಂದಿಗೆ- ಈ ವೈಶಾಲಿಯೊಂದಿಗೆ ನರಕ- ನಿಮ್ಮನ್ನೇನೂ ಮಾಡಲಾರ!” ಎಂದು ಪ್ರೇಮದ ನೋಟ ನನ್ನೆಡೆಗೆಬೀರಿ....

ನಿಮ್ಮ ಕಥೆಯನ್ನು ಇನ್ನೂ ಇವನಿಗೆ ಹೇಳಿಲ್ಲ.... ನೀವು ಆತನ ಹೆಂಡತಿಯಲ್ಲ ಎನ್ನುವುದನ್ನು! ಆತನನ್ನು ಕಂಡರೆ ಇವನಿಗೆ ಆಗುವುದಿಲ್ಲ! ಅದಕ್ಕೇ ಸೀರಿಯಸ್‌ನೆಸ್ ಗೊತ್ತಿಲ್ಲದೆ ಹೆದರಿಸಿದ! ಬನ್ನಿ!” ಎಂದು ಹೇಳಿ ಅವಳೊಂದಿಗೆ ಹೊರಕ್ಕೆ ನಡೆದಳು.

ನಮ್ಮ ಮನೆಗೆ!!!

*

ಕೋಪ ಮಾನವ ಸಹಜ! ಆದರೆ ಅದಕ್ಕೆ ಕಾರಣವಿರಬೇಕು!

ಪಕ್ಕದ ಮನೆಯಾತನನ್ನು ಕಂಡರೆ ನನಗೆ ಆಗುವುದಿಲ್ಲ- ಯಾಕೆ?

ಮೊದಲ ಕಾರಣ- ಬೆಟ್ಟದಲ್ಲೊಮ್ಮೆ ಹುಡುಗಿಯೊಬ್ಬಳನ್ನು ರೇಪ್ ಮಾಡಲು ಶ್ರಮಿಸಿದ್ದು! ನಾನು ಆ ಸಮಯಕ್ಕೆ ಹೋಗದೇ ಇದ್ದಿದ್ದರೆ?

ಎರಡನೆಯ ಕಾರಣ- ನನ್ನಿಂದ ಅಷ್ಟು ಏಟು ತಿಂದರೂ.... ಏನೂ ಆಗಿಲ್ಲದವನಂತೆ ನನ್ನ ಮುಂದೆಯೇ ತಲೆಯೆತ್ತಿ ನಡೆದಾಡುತ್ತಿರುವುದು!

ಮೂರನೆಯ ಕಾರಣ- ವೈಶಾಲಿಗಿಂತಲೂ ನೋಡಲು ಸುಂದರಿಯಾದ ಹುಡುಗಿ ಅವನೊಂದಿಗಿರುವುದು!

ನಾಲಕ್ಕನೆಯ ಕಾರಣ- ಆತ ರೇಪ್ ಮಾಡಲು ಶ್ರಮಿಸಿದ ಕಥೆಯನ್ನು ನಾನು ಬರೆದರೆ.... ಆ ಕಥೆಯ ವಿಲನ್ ನಾನೇ ಎಂದು ಆತನೊಂದಿಗೆ ಇರುವ ಹುಡುಗಿ ನನ್ನ ವೈಶಾಲಿಗೆ ಹೇಳಿದ್ದು...!!

ತಲೆಯೊಳಗೆ ಮತ್ತೊಂದು ಮಿಂಚು!!

ಆಕೆ ಯಾಕೆ ಹಾಗೆ ಹೇಳಿದಳು?

ಆತ ಬೆಟ್ಟ ಹತ್ತುವಾಗ ನಾನೊಬ್ಬಳು ಹುಡುಗಿಯನ್ನು ರೇಪ್ ಮಾಡಲು ಶ್ರಮಿಸುತ್ತಿರುವುದು ಕಂಡು ಆತನೇ ಹೀರೋ ಆಗಿ ನನ್ನನ್ನು ಥಳಿಸಿದಂತೆ ಅವಳಿಗೆ ಹೇಳಿರಬಹುದೋ?- ಐದನೆಯ ಕಾರಣ!!!

*

ಋಷೀ... ಪಾಪ ಅವಳು!” ಎಂದಳು ವೈಶಾಲಿ.

ಪ್ರಶ್ನಾರ್ಥಕವಾಗಿ ಅವಳನ್ನು ನೋಡಿದೆ.

ತುಂಬಾ ಬಡತನದ ಕುಟುಂಬ!”

ಪಾಪ!” ಎಂದೆ.

ಮುನಿಸಿನಿಂದ ನೋಡಿ,

ಕೇಳು.... ಪಕ್ಕದ ಮನೆಯಾತ ಇವರ ಮನೆಯವರಿಗೆ ಹತ್ತುಲಕ್ಷ ಸಾಲ ಕೊಟ್ಟಿದ್ದಾನಂತೆ!”

ವಾವ್! ಗ್ರೇಟ್! ಅದಕ್ಕೆ ಅಡಮಾನ ಇವಳೇ?” ಎಂದೆ.

ಒಂದು ರೀತಿಯಲ್ಲಿ ಹೌದು! ಪಾಪ! ಹೇಗಾದರೂ ಕಾಪಾಡಬೇಕು!” ಎಂದಳು.

ನಾನು ಅವಳ ಮುಖವನ್ನು ನೋಡಿದೆ.

ಅಪ್ಪ ಅಮ್ಮ ನೆಮ್ಮದಿಯಾಗಿ ಬದುಕಬೇಕಾದರೆ ಅವರನ್ನು ಒಪ್ಪಿಸಿ ತನ್ನೊಂದಿಗೆ ಬರಬೇಕು ಅಂದನಂತೆ! ಪಾಪ ಬಂದಳು! ಹಲವು ರೀತಿಯಿಂದ ಇವಳನ್ನು ಒಲಿಸಿಕೊಳ್ಳಲು ನೋಡಿದ! ಒಪ್ಪಲಿಲ್ಲ! ಕೊನೆಗೆ ಇವತ್ತು ಬಲವಂತವಾಗಿ ಶ್ರಮಿಸಿದ. ಕಾಲುಗಳಮಧ್ಯೆ ಬಲವಾಗಿ ಒದ್ದಿದ್ದಾಳೆ....!”

ಅವಳು ಮುಗಿಸುವ ಮುಂಚೆ ಜೋರಾಗಿ ನಕ್ಕುಬಿಟ್ಟೆ. ಅವಳ ಕಣ್ಣು ಕೆಂಪಾಗಿದ್ದು ಕಂಡು ನಗು ತಡೆದುಕೊಂಡೆ!

ಅದಕ್ಕೇ ಅವನು ಯರ್ರಾಬಿರ್ರಿ ಹೊಡೆದು ಇವಳು ಪ್ರಜ್ಞೆ ತಪ್ಪಿದಾಗ ಹೊರಕ್ಕೆ ಹೋದ!” ಎಂದಳು.

ಗಂಭೀರವಾಗಿ ಅವಳ ಮುಖವನ್ನು ನೋಡಿದೆ. ಅರ್ಥಗರ್ಭಿತವಾಗಿ ತಲೆಯಾಡಿಸಿದಳು.

*

ಬೆಟ್ಟ! ಬೆಟ್ಟದಲ್ಲಿ ಮಿಂಚು! ಮಿಂಚಿದ ಜಾಗದಲ್ಲಿ ಹದ್ದುಗಳು- ರೆಕ್ಕೆ ಬಿಚ್ಚಿ ಹಾರಾಡುತ್ತಿರುವ ಹದ್ದುಗಳು!!

ಬೆಟ್ಟದ ಬಗ್ಗೆ ನನಗಿಂತ ಚೆನ್ನಾಗಿ ಯಾರಿಗೆ ಗೊತ್ತು?

ಮೊದಲೇ ಋಷ್ಯಶೃಂಗ ನಾನು! ಬೆಟ್ಟ ಗುಡ್ಡಗಳು- ಕಾಡು- ನನ್ನ ಸಕಾರಾತ್ಮಕ ಶಕ್ತಿಯ ಹಿಂದಿರುವ ಕಾರಣಗಳು!

ಕೆಲವೊಂದು ನಕಾರಾತ್ಮಕತೆಯನ್ನು ಮುಚ್ಚಿಡುವ ತಾಣ!!

ಆತನಬಗ್ಗೆ ತಿಳಿದುಕೊಳ್ಳಲು ಎರಡುದಿನ ಸಾಕಾಯಿತು! ಹಲವು ಪ್ರಾಣಗಳು ಅವನಿಂದ ಇಲ್ಲವಾಗಿದೆ. ಎಷ್ಟೋ ಹೆಣ್ಣುಮಕ್ಕಳ ಮಾನವೂ.... ಆತ ಇಲ್ಲವಾಗುವುದರಿಂದ ಪ್ರಪಂಚಕ್ಕೆ ಒಳಿತೇ ಹೊರತು ಯಾವುದೇ ನಷ್ಟವಿಲ್ಲ!!

ಆತನನ್ನು ಹುಡುಕಿಕೊಂಡು ಬಂದಿದ್ದಾತ ಆತನ ತಮ್ಮ! ಏನೂ ಅರಿಯದವನಂತೆ ನನ್ನಬಗ್ಗೆ ತಿಳಿದುಕೊಳ್ಳಲು ಬಂದಿದ್ದಾನೆ- ಮೂರ್ಖ!

ಅಣ್ಣನೊಂದಿಗೆ ಹೆಣ್ಣೊಬ್ಬಳು ಇರುವುದು ಗೊತ್ತೇ ಹೊರತು ಅವಳು ಯಾರೆಂದೋ ಹೇಗಿದ್ದಾಳೆಂದೋ ಅವನಿಗೆ ತಿಳಿಯದು- ನನ್ನ ಮತ್ತು ವೈಶಾಲಿಯ ಹೊರತು ಯಾರಿಗೂ ತಿಳಿಯದು!!

ಅವಳೀಗ ಅವಳ ಅಪ್ಪ ಅಮ್ಮನೊಂದಿಗೆ ಸಂತೋಷ- ನೆಮ್ಮದಿಯಿಂದ ಬದುಕುತ್ತಿದ್ದಾಳೆ.

ಆತ ಬೆಟ್ಟದಲ್ಲೇ ಎಲ್ಲೋ ಲೀನವಾಗಿದ್ದಾನೆ! ಆತನನ್ನು ಅಲ್ಲಿ ಬಿಟ್ಟು ಬರುವಾಗಲೇ ಆಕ್ಸಿಡೆಂಟ್ ಆಗಿದ್ದು!

ಆಕ್ಸಿಡೆಂಟ್- ಕೆಲವೊಂದು ಒಳ್ಳೆಯದನ್ನು ಮಾಡುವಾಗ ಅದರಿಂದಾಗುವ ಕೆಡುಕನ್ನು ತಪ್ಪಿಸಲು ಈ ರೀತಿಯ ಆಕ್ಸಿಡೆಂಟುಗಳು ಒಳ್ಳೆಯದೇ....!

ಕಾಲು ಮುರಿದು ಕುಳಿತಿರುವ ನನಗೂ ಪಕ್ಕದ ಮನೆಯಾತನಿಗೂ ಏನು ಸಂಬಂಧ??!!

*

ಹೊರಕ್ಕೆ ಹೋಗಿದ್ದ ವೈಶಾಲಿ ಬಂದಳು. ಬಲಗಾನ್ನೂ ಸ್ಟೂಲಿನ ಮೇಲಿಟ್ಟು ಎರಡೂ ಕೈಗಳನ್ನು ತಲೆಯ ಹಿಂದೆ ಇಟ್ಟು ಕುರ್ಚಿಗೊರಗಿ ಆರಾಮವಾಗಿ ಕುಳಿತಿರುವ ನನ್ನನ್ನು ನೋಡಿ ನಕ್ಕಳು. ಬರೆದು ಮುಗಿಸಿದ್ದ ಕಥೆಯನ್ನು ತೆಗೆದುಕೊಂಡು ಓದಿದಳು....

ಅವಳ ಮುಖದಲ್ಲಿ ಹಲವಾರು ಭಾವನೆಗಳು ಮಿಂಚಿ ಮರೆಯಾಗಿ ಕೊನೆಯಲ್ಲಿ ಕೋಪ ಉಳಿದುಕೊಂಡಿತು!

ದರಿದ್ರವಾಗಿದೆ! ನೀನು ಬರೆದ ಕಥೆಗಳಲ್ಲೇ ಅತಿ ಕೆಟ್ಟ ಕಥೆ! ಏನೂ ಅರ್ಥವಾಗಲಿಲ್ಲ!” ಎಂದಳು.

ನಿರಾಳನಾದೆ! ಹಾಗಿದ್ದರೆ ವಿಮರ್ಶಕರಿಂದ- ಮೇಧಾವೀ ವರ್ಗದಿಂದ ಖಂಡಿತಾ ಹೊಗಳಿಸಿಕೊಳ್ಳುತ್ತದೆ!!

ಹೇಳಿದೆನಲ್ಲಾ? ಕಥೆಗಾರನಿಗೂ ಅವನು ಬರೆಯುವ ಕಥೆಗಳಿಗೂ ಯಾವುದೇ ಸಂಬಂಧವಿಲ್ಲವೆಂದು.....

ಟೀ ಖಾಲಿ!” ಎಂದೆ.

ಅವಳ ಮುಖದಲ್ಲಿ ಮುಗುಳುನಗು ಬಿರಿಯಿತು! ಬಾಗಿ ಹಣೆಗೊಂದು ಮುತ್ತುಕೊಟ್ಟು ಒಳಕ್ಕೆ ಹೋದಳು.

ಐದು ನಿಮಿಷ.... ಒಂದು ಲೋಟ ಟೀ.... ಜೊತೆಗೆ ಬರೆಯಲು ಖಾಲಿ ಹಾಳೆಗಳು.....

ಪುನಹ... ಬೆಟ್ಟವನ್ನು ನೋಡುತ್ತಾ ಕುಳಿತೆ!!!

*******

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!