ತಪ್ಪು- ಕಥೆ
ತಪ್ಪು
ತಪ್ಪು ಮಾಡಿದೆ!
ನಿಜವೇ.... ತಪ್ಪು ಮಾಡಿದೆ. ಹೆಣ್ಣನ್ನು ಪ್ರೇಮಿಸಿದೆ- ಪ್ರತಿ ಹೆಣ್ಣನ್ನೂ...!!
ಇಲ್ಲಿ ನಿಯತ್ತಿನ ಪ್ರಶ್ನೆಯಿದೆ!
ನಿಜವನ್ನು ಮುಚ್ಚಿಡುವುದು ಬೇರೆ- ಸುಳ್ಳು ಹೇಳುವುದು ಬೇರೆ- ನಿಜವನ್ನೇ ಹೇಳುವುದು ಬೇರೆ!!
ಪ್ರೇಮದ ಉತ್ತುಂಗ- ಕಾಮವಂತೆ!
ಇರಲಿ... ತಪ್ಪಿಗೆ ಬರುತ್ತೇನೆ.....!
*
ನನ್ನ ಹೆಸರು ಮಾಧವ! ಮಹದೇವನಲ್ಲ- ಮಾಧವ! ಹೆಸರಿನಿಂದಾಗಿಯೋ ಎನೋ.... ಹೆಣ್ಣೆಂದರೆ ನನಗೆ ಪ್ರಾಣ! ಕಣ್ಣಿಗೆ ಕಂಡ ಪ್ರತಿ ಹೆಣ್ಣಿನಲ್ಲಿಯೂ ನನಗೆ ಪ್ರೇಮ ಹುಟ್ಟುತ್ತದೆ! ಪ್ರೇಮ ಅಂದರೆ ಪ್ರೇಮವೇ... ಒಂದು ರೀತಿಯ ನಶೆ- ಅದ್ಭುತ ಆನಂದ!
ಹೆಣ್ಣಿನ ಕಣ್ಣು.... ಕಣ್ಣಿನಲ್ಲಿಯ ಭಾವನೆ.... ಹೊಳಪು.... ಹಾಗೆಯೇ ಆಚೆಈಚೆ ಕೆನ್ನೆ ಮೂಗು ಬಾಯಿಯಿಂದ.... ಪೂರ್ತಿಯಾಗಿ ಅವಳನ್ನು ನನ್ನೊಳಕ್ಕೆ ಸೆಳೆದುಕೊಳ್ಳಲು ಸೆಕೆಂಡುಗಳು ಸಾಕು!
ಹೆಣ್ಣು ನನ್ನನ್ನು ನೋಡಿದ ಕ್ಷಣಾರ್ಧದಲ್ಲಿ ಅವಳ ಕಣ್ಣಿನಲ್ಲಿನ ಭಾವನೆ ಹೇಗೆ ನನಗೆ ತಿಳಿಯುತ್ತದೋ ಅದಕ್ಕಿಂತ ಸ್ಪಷ್ಟವಾಗಿ ನನ್ನ ಕಣ್ಣಿನ ಭಾವನೆ ಅವಳಿಗೆ ತಿಳಿಯುತ್ತದೆ! ಅದು ಪ್ರಾರಂಭ....!
“ನೀನು ಎಲ್ಲಾ ಹೆಣ್ಣಿನೊಂದಿಗೂ ಹೀಗೆಯೇ ಏನು?” ಅನ್ನುವ ಪ್ರಶ್ನೆಯೊಂದಿಗೆ ಪ್ರಾರಂಭವಾಗುತ್ತದೆ ಸಮಸ್ಯೆ!
“ಗೊತ್ತಿಲ್ಲ!” ಅನ್ನುತ್ತೇನೆ.
“ಗೊತ್ತಿಲ್ಲ?”
“ಇಲ್ಲ ಗೊತ್ತಿಲ್ಲ!”
“ಗೊತ್ತಿಲ್ಲ ಅಂದರೆ ಹೇಗೆ?”
“ಹೇಗೆ ಅಂದರೆ? ಪ್ರತಿ ಹೆಣ್ಣೂ ನೀನಲ್ಲವಲ್ಲಾ... ಒಬ್ಬೊಬ್ಬರಿಗೂ ಅವರದೇ ಆದ ವ್ಯಕ್ತಿತ್ವವಿದೆ- ಹೃದಯವಿದೆ- ಭಾವನೆಗಳಿದೆ!”
“ಆದರೂ....!”
“ಹೇಳು.... ಏನು ಆದರೂ....?”
“ನಾನೂ ಎಲ್ಲಾ ಗಂಡಸರೊಂದಿಗೆ ಹೀಗೆಯೇ ಇದ್ದರೆ ನಿನಗೆ ಸಹಿಸುತ್ತದೆಯೇ?”
“ಎಲ್ಲರೊಂದಿಗೂ ಯಾಕೆ ಹೀಗೆಯೇ ಇರುತ್ತೀಯ? ನೀನು ಹೇಗೆಯೋ ಹಾಗೆ-ಅವರವರಿಗೆ ಅನುಗುಣವಾಗಿ- ನಿನಗೆ ಬೇಕಾದಂತೆ ಇರು!”
“ನನಗೆ ಬೇಕಾದಂತೆ?”
“ಹಾ!”
“ಈಗ.... ಒಬ್ಬಳು ಹುಡುಗಿ ನಿನ್ನೊಂದಿಗೆ ಸೆಕ್ಸ್ ಬೇಕು ಅನ್ನುತ್ತಾಳೆ.... ನೀನೇನು ಮಾಡುತ್ತೀಯ?”
“ಗೊತ್ತಿಲ್ಲ! ಕೇಳಿ ನೋಡು....!”
“ನಿನ್ನ ತಲೆ! ನಾನು ಯಾಕೆ ಕೇಳಲಿ?”
“ನಿನ್ನ ಡೌಟ್ ಕ್ಲಿಯರ್ ಆಗಲು!” ಎಂದೆ.
ಅವಳೇನೂ ಮಾತನಾಡಲಿಲ್ಲ. ಕಣ್ಣು ಮಿಟುಕಿಸದೆ ಅವಳ ಮುಖವನ್ನೇ ನೋಡಿದೆ..... ತಲೆ ತಗ್ಗಿಸಿದಳು.
“ನಿನ್ನ ಸಮಸ್ಯೆಯೇನು?” ಎಂದೆ.
ಗೊಂದಲದಿಂದ ತಲೆಯೆತ್ತಿ ನೋಡಿದಳು.
“ನನ್ನ ತಲೆಯಲ್ಲಿ ಏನೂ ಇಲ್ಲ! ನಿನ್ನ ಈ ರೀತಿಯ ಪ್ರಶ್ನೆಗಳಿಗೆ ಉತ್ತರಿಸಲು ನನ್ನಲ್ಲಿ ಉತ್ತರವಿಲ್ಲ! ಕಲ್ಪನೆಗಳಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ ಅಲ್ಲವೇ? ನೀನು ನನ್ನೊಂದಿಗೆ ಇರುವಾಗ ನನಗೆ ಬೇರೆ ಯಾವ ಚಿಂತೆಯೂ ಇರುವುದಿಲ್ಲ! ನಿನ್ನೊಳಗೆ ಪೂರ್ಣವಾಗಿ ಮುಳುಗಿ ಹೋಗುತ್ತೇನೆ!” ಎಂದೆ.
“ಯಾರು ನಿನ್ನೊಂದಿಗೆ ಇರುತ್ತಾರೋ.... ಅವರೊಂದಿಗೆ...?” ಎಂದಳು ನಿಧಾನವಾಗಿ ತಲೆಯೆತ್ತಿ ನೋಡಿ.
ನಾನೂ ಸ್ಪಷ್ಟವಾಗಿ ಅವಳ ಕಣ್ಣಿನಾಳಕ್ಕೆ ನೋಡಿ....,
“ಹೌದು!” ಎಂದೆ.
“ಹಾಗಿದ್ದರೆ ನನ್ನ ಅಸ್ಮಿತೆ ಏನು?” ಎಂದಳು.
“ಗೊತ್ತಿಲ್ಲ!” ಎಂದೆ.
“ಸರಿ... ಗುಡ್ಬೈ!” ಎಂದು ಹೊರಟು ಹೋದಳು.
*
ಇದು ಇಲ್ಲಿಗೇ ನಿಲ್ಲುವುದಿಲ್ಲ! ಪುನಃ ಬರುತ್ತಾಳೆ! ಕಾರಣ ಅವಳಿಗೂ ಗೊತ್ತಿರುವುದಿಲ್ಲ!
ಹೆಣ್ಣಿಗೆ ಕುತೂಹಲ ಹೆಚ್ಚು! ನಾನವಳಿಗೆ ಮೋಸ ಮಾಡಲಾರೆನೆಂದು ಅವಳಿಗೆ ಗೊತ್ತು! ಅವಳಿಗೆ ತಿಳಿಯ ಬೇಕಾಗಿರುವುದು- ಬೇರೆ ಹೆಣ್ಣಿನೊಂದಿಗೆ ನಾನು ಹೇಗೆ ಅನ್ನುವುದು- ಎಲ್ಲರೊಂದಿಗೂ ನಾನು ಹೀಗೆಯೇ ಏನು ಅನ್ನುವುದು. ಈ ಕುತೂಹಲದಿಂದಾಗಿ..... ನನ್ನೊಂದಿಗಿನ ವರ್ತಮಾನದ ಸಂತೋಷವನ್ನು ಕಳೆದುಕೊಳ್ಳುತ್ತಿರುವುದರ ಅರಿವು ಅವಳಿಗೆ ಬರುವುದೇ ಇಲ್ಲ!
ಆದರೂ... ಹೆಣ್ಣಿನ ಹೃದಯ ಅದ್ಭುತ! ಅವಳ ಪ್ರೇಮ ಅನುಭವಿಸಿಯೇ ಅರಿಯಬೇಕು!
ಸರಿ.....,
“ಮದುವೆಯಾಗೋಣವೇ?” ಅಂದಳು.
“ಯಾಕೆ?!”
“ಯಾಕಾ?”
“ಹು!”
“ನಾನು ನಿನ್ನನ್ನು ಪ್ರೇಮಿಸುತ್ತಿದ್ದೇನೆ!”
“ನಾನೂ ಕೂಡ!”
“ಮತ್ತೆ ಮದುವೆ ಯಾಕೆ ಅನ್ನುತ್ತಿದ್ದೀಯ?”
“ಹು! ಯಾಕೆ? ಪ್ರೇಮಕ್ಕೂ ಮದುವೆಗೂ ಏನು ಸಂಬಂಧ?”
“ನೀನು ನನಗೆ ಮೋಸ ಮಾಡುತ್ತಿದ್ದೀಯ!”
“ಹೇಗೆ?”
“ಹೇಗಾ?”
“ಹು!”
“ಮುಂಚೆಯೇ ಹೇಳಬೇಕಿತ್ತು!”
“ಏನು?”
“ಮದುವೆಯಾಗುವುದಿಲ್ಲವೆಂದು!”
“ಆಗುತ್ತೇನೆಂದು ಹೇಳಿದ್ದೆನೆ?”
“ನಾನು ಹಾಗೆ ಅಂದುಕೊಂಡೆ!”
“ಯಾಕೆ?”
“ಯಾಕೆ ಅಂದರೆ?”
“ಯಾಕೆ ಹಾಗಂದುಕೊಂಡೆ?”
ತಲೆ ತಗ್ಗಿಸಿದಳು!
“ನಾನು ನಿನ್ನ ಮದುವೆಯಾಗಬೇಕು ಅನ್ನುವುದು ನಿನ್ನ ಅಗತ್ಯ!” ಎಂದೆ.
ತಲೆಯೆತ್ತಿ ನೋಡಿದಳು. ಪ್ರಶ್ನಾರ್ಥಕವಾಗಿ ಹುಬ್ಬು ಕುಣಿಸಿದೆ.
“ಬೇರೆ ಯಾರನ್ನಾದರೂ ಲವ್ ಮಾಡುತ್ತಿದ್ದೀಯ?” ಎಂದು ಕೇಳಿದಳು.
“ಗೊತ್ತಿಲ್ಲ!” ಎಂದೆ.
“ಗೊತ್ತಿರುತ್ತೆ! ಅದಕ್ಕೇ ನನ್ನ ಅವಾಯ್ಡ್ ಮಾಡುತ್ತಿದ್ದೀಯ! ಐ ಹೇಟ್ ಯು!” ಎಂದು ಹೇಳಿ ಹೊರಟು ಹೋದಳು.
*
ಹೇಳಿದೆನಲ್ಲಾ? ಹೆಣ್ಣು ಒಂದು ಅದ್ಭುತ! ಯಾವ ಸಮಯದಲ್ಲಿ ಅವಳ ಮನಸ್ಸು ಹೇಗೆ ಇರುತ್ತದೆಂದು ಅವಳಿಗೇ ತಿಳಿದಿರುವುದಿಲ್ಲ!
“ಮಾಧವ! ಯಾಕೋ ನನಗೆ ನಿನ್ನೊಂದಿಗೆ ಒಂದೆರಡು ದಿನ ಸಂತೋಷದಿಂದ ಕಳೆಯಬೇಕು ಅನ್ನಿಸುತ್ತಿದೆ!” ಎಂದಳು.
ಸಂಶಯದಿಂದ ಅವಳ ಮುಖವನ್ನು ನೋಡಿದೆ.
“ಎಲ್ಲಾದರೂ ಒಂದು ಹೋಂ ಸ್ಟೇ ಬುಕ್ ಮಾಡು!” ಎಂದು ಹೇಳಿ ಉತ್ತರಕ್ಕೆ ಕಾಯದೆ ಹೊರಟು ಹೋದಳು.
*
ಹೋಂ ಸ್ಟೇ...!
ಪ್ರೇಮದ ಪರಾಕಾಷ್ಟೆ ಕಾಮ- ಇರಬಹುದು! ಆದರೆ ಕಾಮ ನಡೆಯಲು ಪ್ರೇಮದ ಅಗತ್ಯವಿಲ್ಲ!
ಕಾಮವೂ ಕೂಡ ಪರಾಕಾಷ್ಟೆ ತಲುಪದಿರಲು ಹಲವು ಅಡ್ಡಿ ಆತಂಕಗಳಿದೆ....!
ನನ್ನ ಮೇಲೆ ಕುಳಿತು- ಬೆವರುವಷ್ಟು ಆವೇಶದ ಚಲನೆಯಲ್ಲಿರುವಾಗ ಅವಳೇ ಕೇಳಿದ ಪ್ರಶ್ನೆ.....,
“ನೀನು ಇದಕ್ಕೂ ಮುಂಚೆ ಯಾರೊಂದಿಗಾದರೂ ಸೆಕ್ಸ್ ಮಾಡಿದ್ದೀಯ? ಅದೂ ಇಷ್ಟು ಪರ್ಫೆಕ್ಟ್ ಆಗಿ?”
ಇದು ಈ ಸಂದರ್ಭದಲ್ಲಿ ಕೇಳಬೇಕಾದ ಪ್ರಶ್ನೆಯೇ?!
“ಉತ್ತರವನ್ನು ಹೇಳುತ್ತೇನೆ.... ಅದಕ್ಕೂ ಮೊದಲು ಒಂದು ಪ್ರಶ್ನೆಯಿದೆ....!” ಎಂದೆ.
“ಏನು?” ಎಂದಳು.
“ಈ.... ಮಹದೇವ ಯಾರು?”
ಅಷ್ಟೇ.... ಕೊನೆಯ ಹಂತದಲ್ಲಿದ್ದ ಚಲನೆ ನಿಂತಿತು!
“ನೀನು ಯಾವಾಗಲೂ ಹೀಗೆಯೇ.... ಬರೀ ಡೌಟು! ಅವನು ನನಗೆ ಯಾರೂ ಅಲ್ಲ.... ಅಷ್ಟು ಡೌಟಿದ್ರೆ ಹೋಂ ಸ್ಟೇ ಯಾಕೆ ಬುಕ್ ಮಾಡಿಸಿದೆ?”
“ಅವನು ಅವನ ಗೆಳತಿಯೊಂದಿಗೆ ಬಂದ ಹೋಂಸ್ಟೇ ಇದು!” ಎಂದೆ.
ಮೌನ.... ಸ್ಮಶಾನ ಮೌನ! ಸರ್ರನೆ ಇಳಿದ ಆವೇಶ- ತಲೆತಗ್ಗಿಸಿ ನನ್ನಿಂದ ಬೇರ್ಪಟ್ಟ ಅವಳನ್ನೇ ನೋಡುತ್ತಾ,
“ನಾನು ಇದಕ್ಕೂ ಮುಂಚೆ ಹಲವರೊಂದಿಗೆ ಸೆಕ್ಸ್ ಮಾಡಿದ್ದೇನೆ- ಅವರವರ ಪ್ರಕಾರ- ಪರ್ಫೆಕ್ಟ್ ಆಗಿ!” ಎಂದೆ.
*
ನಂತರ ಅವಳು ನನ್ನ ಬಾಳಿಗೆ ಬರಲಿಲ್ಲ. ಯಾಕೆಂದೋ...?
ನಾನು ತಪ್ಪು ಮಾಡಿದೆ. ಹೌದು ತಪ್ಪು ನನ್ನದೇ....!
ಅವಳು ಏನೋ.... ಅದನ್ನು ನನ್ನಮೇಲೆಯೂ ಆರೋಪಿಸಲು ಬಂದಾಗ.... ಅದನ್ನವಳಿಗೆ ತೋರಿಸಿಕೊಟ್ಟೆ!
ಬೇರೊಬ್ಬರೊಂದಿಗೆ ಸೇರುವ ವಿಷಯದಲ್ಲಿ ಅವಳು ತಪ್ಪಲ್ಲ! ನಾನೂ ತಪ್ಪಲ್ಲ!
ಆದರೆ ತನ್ನನ್ನು ಮುಚ್ಚಿಟ್ಟು- ನಾನೇನೋ ತಪ್ಪು ಮಾಡಿದಂತೆ- ಏನೋ ದ್ರೋಹ ಮಾಡಿದಂತೆ ನಿರೂಪಿಸಲು ನೋಡಿದಾಗ.... ನೀನೂ ಹಾಗೆಯೇ ಎಂದು ತೋರಿಸಿಕೊಟ್ಟೆನಲ್ಲಾ.... ಅದು ತಪ್ಪು!
ಅರ್ಥವಾಯಿತೆ?
ನಿಜವನ್ನು ಹೇಳದಿರುವುದು ತಪ್ಪಲ್ಲ! ಮತ್ತೊಬ್ಬರಿಗೆ ಅದು ಸುಳ್ಳು ಎಂದು ಅರಿವಾಗದಿರುವಂತೆ ಸುಳ್ಳು ಹೇಳುವುದೂ ತಪ್ಪಲ್ಲ!
ಅವರ ವಿಷಯವಾದರೂ- ನಮ್ಮ ವಿಷಯವಾದರೂ ನಿಜ ಹೇಳುವುದು ತಪ್ಪು!!!!
Comments
Post a Comment