ಪ್ರೇಮಿ- ಕಥೆ

ಪ್ರೇಮಿ

ಒಬ್ಬ ಬರಹಗಾರನಿದ್ದನಂತೆ. ಇದ್ದನಂತೆ ಅಲ್ಲ- ಇದ್ದಾನೆ! ನಿರಂತರವಾಗಿ ಕಥೆ ಬರೆಯುವುದೇ ಅವನ ಜೀವನ! ನೂರು ಕಥೆಗಳನ್ನು ಬರೆದ! ತೊಂಬತ್ತೊಂಬತ್ತು ಕಥೆಗಳಲ್ಲಿ ಹೆಣ್ಣು ಪವಿತ್ರಳು! ಆ ತೊಂಬತ್ತೊಂಬತ್ತು ಕಥೆಗಳೂ ಗಮನಿಸಲ್ಪಡಲಿಲ್ಲ! ಒಂದೇ ಒಂದು ಕಥೆಯಲ್ಲಿ- ಅರಿಯದೆ ಅಪವಿತ್ರಳನ್ನಾಗಿಸಿದ! ಪ್ರಚಾರ ಗಿಟ್ಟಿಸಿದ ಒಂದೇ ಒಂದು ಕಥೆ!

ಅವನಿಗೆ ಹೆಣ್ಣು- ಹೃದಯ ಸೌಂಧರ್ಯದ ಸಾಕಾರ ಮೂರ್ತಿ! ಕರುಣಾಮಯಿ! ಪ್ರೇಮ!

ತೊಂಬತ್ತೊಂಬತ್ತು ಕಥೆಗಳಲ್ಲೂ ಪ್ರೇಮದ ವಿಜೃಂಭಣೆ!

ಯಾರೂ ಗಮನಿಸಲಿಲ್ಲ- ಅವನ ಪ್ರೇಮಿಯ ಹೊರತು! ಕಾರಣ- ಹೆಣ್ಣು ಪವಿತ್ರಳು! ಪ್ರೇಮ ಪವಿತ್ರ!

ಒಂದೇ ಒಂದು ಅಪವಿತ್ರವಾದ ಕಥೆಯನ್ನು ಬರೆದಾಗ.... ಹೆಣ್ಣು- ಅವನ ಪ್ರೇಮಿ ತನಗೆ ಅನ್ವಯಿಸಿಕೊಂಡಳು!

ಪ್ರತಿ ಕಥೆಯನ್ನು ಬರೆಯುವಾಗಲೂ ಅವನ ಮನದಲ್ಲಿ ಒಂದೇ ಚಿಂತೆ- ಹೆಣ್ಣಿಗೆ ಅಪಮಾನವಾಗಬಾರದು!

ಕೈಬಿಟ್ಟು ಹೋದ ಆ ಕಥೆಯಿಂದ ಅವನೊಂದು ತೀರುಮಾನಕ್ಕೆ ಬಂದ- ತಾನಿನ್ನೂ ಪಕ್ವಗೊಳ್ಳಬೇಕು! ಹೆಣ್ಣು ಗಂಡು ಪ್ರೇಮ ಅನ್ನುವುದುರಿಂದ ಆಚೆ ಬರೆಯಬೇಕು!

ಯೋಚಿಸತೊಡಗಿದ. ತನ್ನ ಬದುಕನ್ನು! ಬದುಕಿನಲ್ಲಿ ಬಂದ ಹೆಣ್ಣನ್ನು! ತನಗೆ ಉಳಿದಿರುವುದೇನು ಅನ್ನುವುದನ್ನು!

ಕೊನೆಗೆ ತೀರುಮಾನವೊಂದಕ್ಕೆ ಬಂದ! ಪ್ರೇಮವಿಲ್ಲದ ಏನನ್ನಾದರೂ ಬರೆಯಬೇಕಾದರೆ-ಅದು ತನ್ನ ಬದುಕು! ಪ್ರೇಮವನ್ನೇ ಕಾಣದವನು ಪ್ರೇಮದ ಬಗ್ಗೆ ಅತಿ ಹೆಚ್ಚು ಬರೆಯುತ್ತಾನಂತೆ!

ಬರವಣಿಗೆಯಲ್ಲಾದರೂ ಕಂಡುಕೊಳ್ಳುವ ತವಕ!

ಹಾಗಿದ್ದರೆ ತನ್ನ ಜೀವನದಲ್ಲಿ ಪ್ರೇಮವೇ ಇಲ್ಲವೇ? ಪ್ರೇಮಕ್ಕೆ ಪ್ರಾಶಸ್ತ್ಯವಿಲ್ಲವೇ? ತಾನು ಪ್ರೇಮಶೂನ್ಯನೇ?

ಅಲ್ಲ! ತನ್ನೊಳಗೆ ಪ್ರೇಮವಿದೆ- ತನ್ನೊಳಗೆ...! ಪ್ರಪಂಚಕ್ಕೆ ಪೂರ್ತಿ ಹಂಚಿದರೂ ಮುಗಿಯದ ಪ್ರೇಮ!

ಮತ್ತೇನು ಸಮಸ್ಯೆ??

ಗಂಡು ಹೆಣ್ಣಿನ ಪ್ರೇಮ...!!

ಹದಿಮೂರನೆಯ ವಯಸ್ಸು ದಾಟುತ್ತಿದ್ದಾಗ.... ಅವನೊಳಗೆ ಗಂಡು ಜನಿಸಿದ!

ಪ್ರಪಂಚ ಹೊಸ ರೀತಿಯಾಗಿ ಕಾಣಿಸತೊಡಗಿತು. ಏನೋ ಆಕರ್ಷಣೆ!

ದೇಹದಲ್ಲಿ ಮಾರ್ಪಾಟು ಹೊಂದಿದ ಹೆಣ್ಣು ಅವನ ಕೆಂದ್ರಬಿಂದು! ಆಸಕ್ತಿ- ಕುತೂಹಲ!

ಅವನನ್ನು ಗಮನಿಸುವ ಹೆಣ್ಣನ್ನು ಕಂಡರೆ 'ಅವನಿಗೆ' ಪ್ರೇಮ- ಅವಳು ತನ್ನವಳೆಂಬ ಭಾವ!

ಪ್ರತಿ ಹೆಣ್ಣಿನೊಂದಿಗೆ ಬೆರೆಯುತ್ತಾ ಹುಡುಕುತ್ತಾ ಅವನು ಕಂಡುಕೊಂಡದ್ದು- ಮನುಷ್ಯ ಸ್ವಭಾವ ಅಥವಾ ವರ್ತನೆ ಬೇರೆ- ಭಾವನೆ ಬೇರೆ!

ಒಬ್ಬ ಹೆಣ್ಣಿನಮೇಲೆ ಏರ್ಪಡುವ ಭಾವನೆ- ನಿಜ! ಆ ಹೆಣ್ಣಿನ ವರ್ತನೆಯಿಂದ ಅವಳಮೇಲೆ ನೀರಸವೇರ್ಪಟ್ಟರೆ ಅರ್ಥ ಅವಳ ಮೇಲಿನ ಭಾವನೆ ಸುಳ್ಳು ಎಂದಲ್ಲ- ತನ್ನ ಭಾವನೆ ಅವಳಿಗೆ ಅರ್ಥವಾಗುವುದಿಲ್ಲ ಎಂದು! ಅರ್ಥವಾಗಿದ್ದೂ ನೀರಸವೇ ಆದರೆ ಅರ್ಥ- ಅವಳಿಗೆ ತನ್ನ ಭಾವನೆ- ಪ್ರೇಮ- ಬೇಡ ಎಂದೇ ಹೊರತು ಅದು ಸುಳ್ಳು ಎಂದಲ್ಲ- ಅಥವಾ- ಅವಳಿಗೆ ತನ್ನ ಪ್ರೇಮವನ್ನು ಅನುಭಾವಿಸಿಕೊಳ್ಳಲಾಗುವುದಿಲ್ಲ- ಎಂದು!

ಪ್ರಪಂಚವನ್ನು ಅತಿ ಸೂಕ್ಷ್ಮವಾಗಿ ಗಮನಿಸುತ್ತಾ- ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾ ಬೆಳೆದ ಅವನ ಬಲವಾದ ನಂಬಿಕೆ- ಪ್ರೇಮದಲ್ಲಿ ದುಃಖವಿಲ್ಲ!

ಒಬ್ಬಳು ಹೆಣ್ಣಿನಿಂದ ತನಗೋ ತನ್ನಿಂದ ಹೆಣ್ಣಿಗೋ ದುಃಖವಾದರೆ ಅರ್ಥ.... ಮುಂದಕ್ಕವನು ಚಿಂತಿಸಲಾರ!!

ಬೆಳೆಯುತ್ತಾ... ಹೆಣ್ಣಿನೊಂದಿಗೆ ಹೆಚ್ಚಾಗಿ ಬೆರೆಯುತ್ತಾ ಅವನು ಕಂಡುಕೊಂಡ ಮತ್ತೊಂದು ವಿಷಯವೆಂದರೆ... ಪ್ರತಿ ಹೆಣ್ಣಿಗೂ ಅವನ ಮೇಲೆ- ಅವನ ಪ್ರೇಮದಮೇಲೆ ಸಂಶಯ! ಆ ಸಂಶಯದಿಂದಾಗಿ ಅವನು ಹೆಣ್ಣನ್ನೂ- ಹೆಣ್ಣು ಅವನನ್ನೂ ಕಳೆದುಕೊಳ್ಳ ತೊಡಗಿದರು! ಆದರೆ ಆ ಒಬ್ಬಳು ಹೆಣ್ಣೇನಾದರೂ ಅವನ ಪ್ರೇಮವನ್ನು ಅನುಭಾವಿಸಿಕೊಳ್ಳದೆ ಇದ್ದಿದ್ದರೆ ಅವನಿಂದ ನೂರು ಕಥೆಗಳನ್ನು ಬರೆಯಲಾಗುತ್ತಿರಲಿಲ್ಲ!

ಪ್ರೇಮಿಸಿದ ಯಾವೊಂದು ಹೆಣ್ಣನ್ನೂ ತಾನು ಕಾಮಿಸಿಲ್ಲ-ಕಾಮಿಸಿದ್ದರೆ ತನ್ನ ಪ್ರೇಮ ಪರಿಪೂರ್ಣವಾಗುತ್ತಿತ್ತೇನೋ ಅನ್ನುವುದರಿಂದ ಅವನ ಯೋಚನೆಗಳು ಸ್ಪಷ್ಟ ರೂಪವನ್ನು ಪಡೆದುಕೊಳ್ಳತೊಡಿಗಿತು! ತನ್ನ ಪ್ರೇಮವನ್ನು- ಪ್ರೇಮದ ಭಾರವನ್ನು ಇಳಿಸಿಕೊಂಡು ಪಕ್ವತೆಯನ್ನು ಪಡೆದುಕೊಳ್ಳಲು ಅವನು ಬರೆದ ನೂರಾ ಒಂದನೆಯ ಕಥೆ- ಪ್ರೇಮ!

*

ನನಗಾಗ ಹನ್ನೊಂದು ವರ್ಷ ವಯಸ್ಸು! ಐದನೆಯ ತರಗತಿಯಲ್ಲಿ ಓದುತ್ತಿದ್ದ ನಾನು- ಓದುವುದರಲ್ಲೂ ಆಟೋಟಗಳಲ್ಲೂ ಶಾಲೆಗೇ ಮೊದಲಿಗ! ಆದರೆ ಅದರ ಅರಿವೋ ಅಹಂಕಾರವೋ ನನಗಿರಲಿಲ್ಲ. ನನ್ನ ಪಾಡಿಗೆ ನಾನು ಓದುತ್ತಿದ್ದೆ- ಪ್ರತಿ ಆಟೋಟಗಳಲ್ಲೂ ಭಾಗವಹಿಸುತ್ತಿದ್ದೆ.

ಒಂದು ದಿನ... ಅಂತರ ಶಾಲಾ ಕಬಡ್ಡಿ ಪಂದ್ಯಾವಳಿಗಾಗಿ ಪ್ರಾಕ್ಟೀಸ್ ಮಾಡುತ್ತಿದ್ದೆವು. ಗಂಡು ಹೆಣ್ಣು ಭೇದ ನಮಗಿಲ್ಲ! ಒಟ್ಟಿಗೆ ಆಡುತ್ತಿದ್ದೆವು...

ರೈಡಿಂಗ್ ಬಂದ ಏಳನೆಯ ಕ್ಲಾಸು ಹುಡುಗಿಯ ಕಾಲನ್ನು ತಬ್ಬಿಹಿಡಿದು ಬೀಳಿಸಿದಾಗ... ಹತ್ತಿರದಿಂದ- ತೀರಾ ಹತ್ತಿರದಿಂದ ಮಂಡಿಯ ಮೇಲಿನ ಮಾಂಸಲ ಭಾಗವನ್ನು ಕಂಡು ಪರವಶಗೊಂಡೆ! ಅವಳ ಬೆವರಿನ ವಾಸನೆ... ಗಾಂಜಾ ಸೇವಿಸಿದವನಂತೆ... ಕೈಯಗಲಿಸಿ ಅಂಗಾತ ಮಲಗಿಬಿಟ್ಟೆ!

ಅದು ಪ್ರಾರಂಭ!

ಕೌಮಾರ್ಯಕ್ಕೆ ಮೊದಲ ಹೆಜ್ಜೆಯನ್ನು ಹಾಕಿದ್ದ ಅವಳೂ ಕೂಡ ನನ್ನನ್ನು ಗಮನಿಸಿದಳು!

ಸಣ್ಣ ಹಿಂಜರಿಕೆಯೊಂದಿಗೆ ಪ್ರಾರಂಭವಾದ ನಮ್ಮ ನಂಟು.... ಪರೀಕ್ಷೆಗಳು ಮುಗಿದ ದಿನ... ನನ್ನನ್ನು ಕಾಪೀ ತೋಟದೊಳಕ್ಕೆ ಕರೆದೊಯ್ದು ಏನು ಮಾಡಬೇಕೆಂದು ಅರಿಯದೆ ವ್ಯಗ್ರಗೊಂಡ ಅವಳು... ಕೊನೆಗೆ ನನ್ನ ಕೈಯ್ಯನ್ನು ಅವಳ ರಹಸ್ಯದ ಕಡೆಗೆ ಕೊಂಡೊಯ್ದಾಗ- ಗಾಭರಿಗೊಂಡೆ- ಅವಳನ್ನು ಕಳೆದುಕೊಂಡೆ! ಕಳೆದುಕೊಂಡೆ ಎಂದರೆ ನಾನಾಗಿ- ಅವಳು ಮಾಡಿದ್ದು ತಪ್ಪು ಎಂದು ದೋಷಾರೋಪಣೆ ಮಾಡಿ ಕಳೆದುಕೊಂಡದ್ದಲ್ಲ! ಅವಳ ಹೆದರಿಕೆ! ಈ ರಹಸ್ಯವನ್ನು ನಾನೆಲ್ಲಿ ಬಯಲು ಮಾಡುವೆನೋ ಅನ್ನುವ ಅವಳ- ಭಯ!

ಮುಂದೆ ಒಮ್ಮೆಯೂ ಅವಳು ನನ್ನ ಮುಖವನ್ನು ನೇರವಾಗಿ ನೋಡಲಿಲ್ಲ! ಅವಳು ಮಾಡಿದ್ದು ತಪ್ಪು ಅನ್ನುವ ಭಾವ ಈಗಲೂ ನನಗಿಲ್ಲ! ನಾನಾಗಿ ಅವಳೊಂದಿಗೆ ಬೆರೆಯಲು ಶ್ರಮಿಸಿದರೂ- ಏನೋ ಒಂದು ಕಗ್ಗಂಟು! ಅದು ಹೆಣ್ಣಿನ ಸಹಜ ಗುಣವಿರಬಹುದು! ಅದೇ ಅವಳ ಭೂಷಣ ಕೂಡ!

*

ನಾನು ಯುವಕನಾದ ಮೊದಲ ದಿನ.... ನನಗಿನ್ನೂ ಸ್ಪಷ್ಟವಾಗಿ ನೆನಪಿದೆ.

ನನ್ನ ದುರಾದೃಷ್ಟವೋ ಏನೋ.... ಓದಲು ಕಲಿತಾಗಿನಿಂದ... ವಯಸ್ಕರ ಪುಸ್ತಕಗಳು ನನ್ನ ಕೈಸೇರಿದವು! ಕಳ್ಳ ತನದಲ್ಲೇ ಆದರೂ ನಾನದನ್ನು ಆಸಕ್ತಿಯಿಂದ ಓದುತ್ತಿದ್ದೆ. ಮನದೊಳಗೆ ಅರಿಯದ ಭಾವ ತರಂಗಗಳು! ಹೆಣ್ಣು ಅನ್ನುವ ರಹಸ್ಯವನ್ನು ಅರಿತುಕೊಳ್ಳುವ ತುಮುಲ!

ಒಂದು ದಿನ... ಸಿಕ್ಕಿದ ಪುಸ್ತಕವನ್ನು ಓದಿ ಮನಸ್ಸು ನಿಯಂತ್ರಣಕ್ಕೆ ಬಾರದೆ.... ಗೊಂದಲದಿಂದ ನಡೆಯುತ್ತಿದ್ದಾಗ... ತೋಟದೊಳಗಿನಿಂದ ಏನೋ ಸದ್ದು! ಎರವ ಭಾಷೆಯ ಮಾತುಗಳು! ಕುತೂಹಲದಿಂದ ಹೋಗಿ ನೋಡಿದೆ. ಗಂಡು ಹೆಣ್ಣಿನ ರಹಸ್ಯ... ತನ್ಮಯರಾಗಿ ಸಂಬೋಗದಲ್ಲಿ ಏರ್ಪಟ್ಟಿದ್ದ ಅವರನ್ನೇ ನೋಡುತ್ತಾ ನಿಂತೆ!

ಅಂದು ರಾತ್ರಿ ನನ್ನ ಒದ್ದಾಟ- “ನಿದ್ದೆ ಬರಲಿಲ್ಲವೇನೋ?” ಅನ್ನುವ ದೊಡ್ಡಮ್ಮನ ಮಾತಿನಿಂದ ನಿಂತಿತಾದರೂ... ಮಧ್ಯ ರಾತ್ರಿಯಲ್ಲಿ ನನ್ನ ಅರಿವಿಲ್ಲದೆಯೇ ಸ್ಕಲಿಸಿಕೊಂಡಾಗ... ಹೆದರಲಿಲ್ಲ... ಅದರ ಅರಿವಿತ್ತಾದ್ದರಿಂದ ಆನಂದಗೊಂಡೆ! ನಿಜ- ಆನಂದಗೊಂಡೆ- ನಾನು ಹೆಣ್ಣನ್ನು ಆಳಬಲ್ಲವನಾದೆನೆಂಬ ಆನಂದ!

*

ಸುಮ್ಮನೆ ಎದೆಗೊರಗಿ ಮಲಗುವುದರಲ್ಲಿ ನಿನಗೇನು ಸುಖವೋ....!” ಎಂದಳು.

ಸುಖವಲ್ಲ- ಆನಂದ!” ಎಂದೆ.

ಅವಳಿಗೆ ಅರ್ಥವಾಗಲಿಲ್ಲ.

ಇತ್ತೀಚೆಗೆ ಕಂಡುಕೊಳ್ಳತೊಡಗಿದ್ದೆ. ವಯಸ್ಕರ ಪುಸ್ತಕ ಮಾತ್ರವಲ್ಲದೆ ನನ್ನ ಓದಿನ ಹರಿವು ಪುರಾಣಗಳಿಗೂ ಪ್ರೌಢ ಗ್ರಂಥಗಳಿಗೂ ಪ್ರಬಂಧಗಳಿಗೂ ವಿಸ್ತರಿಸಿದಾಗ ಹೆಣ್ಣಿನದೇಹವನ್ನು ತಿಳಿದುಕೊಳ್ಳುವ ಆಸಕ್ತಿಗಿಂತಲೂ ದೈಹಿಕ ವಾಂಛೆಗಳನ್ನು ಅಧಿಗಮಿಸಿದ ಏನೋ ಒಂದರ ಹುಡುಕಾಟ!

ಏನು ಆನಂದವೋ ಏನೋ.... ಆ ಕೃಷ್ಣನಾಗಿದ್ದರೆ ಸ್ವಲ್ಪ ಮಜವಾದರೂ ಸಿಗುತ್ತಿತ್ತು!” ಎಂದಳು.

ಅವಳ ಎದೆಯಾಳಕ್ಕೆ ಮತ್ತೊಮ್ಮೆ ಮುಖ ಹುದುಗಿಸಿ- ಬೇರ್ಪಟ್ಟು ಕೇಳಿದೆ,

ಮಜ ಸಿಗಲಿಲ್ಲವೇ?”

ಇದೇನು ಮಜ ಮಣ್ಣು!” ಎಂದಳು.

ಅರ್ಥವಾಯಿತು! ಅವಳ ಕಣ್ಣುಗಳನ್ನು ದಿಟ್ಟಿಸಿ ನೋಡಿ ಕೇಳಿದೆ,

ನಿನಗೆ ಬೇಕಾದ ಮಜ ಅವನಿಂದ ಸಿಗುತ್ತಿದೆ ಅಂದಮೇಲೆ ನಾನೇಕೆ?”

ಗೊಂದಲಗೊಂಡಳು.

ಗೊತ್ತಿಲ್ಲ! ಅದೇನೋ, ಅವನೊಂದಿಗೆ ಎಷ್ಟು ಖುಷಿಯಾಗಿದ್ದರೂ, ಜಾಸ್ತಿ ಸಮಯ ನಿನ್ನೊಂದಿಗೆ ಕಳೆಯಬೇಕು ಎಂದೇ ಅನ್ನಿಸುತ್ತದೆ!” ಎಂದಳು.

ಮುಗುಳುನಕ್ಕೆ.. ಅದೇ ಆನಂದ...!

ಆದರೆ ದಿನದಿಂದ ದಿನಕ್ಕೆ ನನ್ನಿಂದ ಮಜ ಅನ್ನುವುದು ಸಿಗುವುದೇ ಇಲ್ಲವೆಂದು ಅರಿವಾಗಿದ್ದರಿಂದಲೋ.... ಮಜದಲ್ಲೇ ಆನಂದವನ್ನು ಕಂಡುಕೊಂಡಿದ್ದರಿಂದಲೋ.... ದೂರವಾದಳು!

ಅವಳನ್ನು ತಪ್ಪು ಹೇಳುವುದಿಲ್ಲ! ವಯಸ್ಸಿನ ಸಹಜ ಗುಣ!

ಮತ್ತೆ ನಾನೇನು?

ಪ್ರೇಮದ ಉತ್ತುಂಗಕ್ಕೆ ತಲುಪುವ ಮುಂಚೆ- ಕಾಮ ಅದಾಗಿ ಅದು ರೂಪುಗೊಳ್ಳುವ ಮುಂಚೆ- ನನಗದರಲ್ಲಿ ಆಸಕ್ತಿ ಬರುವುದಿಲ್ಲ ಅನ್ನಿಸುತ್ತಿದೆ.

*

ಒಂದು ದುರದೃಷ್ಟಕರ ಘಟನೆ ನಡೆದದ್ದು ನನ್ನ ಇಪ್ಪತ್ತ ಮೂರನೆಯ ವಯಸ್ಸಿನಲ್ಲಿ.

ಹೆಚ್ಚು ವಿದ್ಯಾಭ್ಯಾಸವಿಲ್ಲದ ಹೆಣ್ಣು ಅವಳು. ಆದರೆ-ಅವಳಿಗೆ ಏನು ಬೇಕು ಅನ್ನುವುದರ ಸ್ಪಷ್ಟ ಅವರಿವು ಅವಳಿಗಿತ್ತು!

ಮೂವತ್ತಾ ಏಳು ವರ್ಷ ವಯಸ್ಸು ಅವಳಿಗೆ! ಗಂಡನಿಗೆ ಐವತ್ತು!

ನನ್ನ ಗಂಡ ತುಂಬಾ ಒಳ್ಳೆಯವರು!” ಎಂದಳು.

ಮತ್ತೆ ಸಮಸ್ಯೆಯೇನು?” ಎಂದೆ.

ಸಮಸ್ಯೆ ನನ್ನದೇ- ವಯಸ್ಸು!” ಎಂದಳು.

ಕನಿಕರದಿಂದ ಅವಳ ಮುಖವನ್ನು ನೋಡಿದೆ.

ಅವಳ ಕಣ್ಣಿನಲ್ಲಿ ಆಸಕ್ತಿ! ಅರಿವಾಯಿತಾದರೂ...,

ನಾನೇನೂ ಪರಿಪೂರ್ಣನಲ್ಲ! ಒಬ್ಬಳೇ ಹೆಣ್ಣಿನೊಂದಿಗೆ ಅದು ಬೇಕು ಅನ್ನುವ ನಿಯಮವೂ ನನಗಿಲ್ಲ! ಆದರೆ ಸದ್ಯಕ್ಕೆ ನನಗದರಲ್ಲಿ ಆಸಕ್ತಿಯಿಲ್ಲ!” ಎಂದೆ.

ಅವಳು ಬೇರೆಯವನನ್ನು ಹುಡುಕಿಕೊಂಡಳು! ಇದರಲ್ಲಿ ದುರಾದೃಷ್ಟವೇನು?

ಅವನು ಅದನ್ನು ವೀಡಿಯೋ ಮಾಡಿದ! ಅವಳು ಆತ್ಮಹತ್ಯೆ ಮಾಡಿಕೊಂಡಳು!

ಅವಳ ವಾಂಛೆಯನ್ನು ನಾನು ಈಡೇರಿಸಬಹುದಾಗಿತ್ತು!

ನನ್ನ ಅಹಂಕಾರವೋ- ಅಥವಾ.....

*

ನನ್ನ ಭಾವ ತೀವ್ರತೆ ನಿನಗೆ ಅರ್ಥವಾಗುವುದಿಲ್ಲ!” ಎಂದಳು.

ನಿಜವೇ! ನನಗೆ ಅರ್ಥವಾಗುವುದಿಲ್ಲ! --ಳ ಭಾವತೀವ್ರತೆ!

ನೀನು ಅವಳೊಂದಿಗೆ ಸೇರುವುದು ನನಗೆ ಇಷ್ಟವಿಲ್ಲ!” ಎಂದಳು.

ಯಾಕೆ?”

ಯಾಕೆ ಅಂದ್ರೆ? ನೀನು ಅವಳೊಂದಿಗೆ ಬೆರೆತಷ್ಟೂ ನನ್ನಿಂದ ದೂರವಾಗುತ್ತೀಯ!” ಎಂದಳು.

ಹೇಗೆ?” ಎಂದೆ.

ಹೇಗೇನಾ? ಅವಳು ನಿನ್ನನ್ನು ಸೆಳೆಯುತ್ತಾಳೆ!”

ಅದೇ.... ಹೇಗೆ?”

ಅವಳ ಅಂದ ಚಂದ ಬಿನ್ನಾಣ ತೋರಿಸಿ!”

ನೀನು ಯಾರನ್ನೆಲ್ಲಾ ಸೆಳೆದಿದ್ದೀಯ ಹಾಗೆ?” ಎಂದೆ.

ನಾನ್ಯಾಕೆ ಸೆಳೆಯಲಿ?”

ಮತ್ತೆ ಅವಳು ಯಾಕೆ ಸೆಳೆಯಬೇಕು?”

ಅವಳಿಗೆ ನಿನ್ನಮೇಲೆ ಇಂಟ್ರಸ್ಟ್ ಇದೆ!” ಎಂದಳು.

ನಿನಗೆ?” ಎಂದೆ.

ಪ್ರೇಮ!” ಎಂದಳು.

ಪ್ರೇಮ!” ಎಂದು ಹೇಳಿ ನಕ್ಕು,

ಅವಳೊಂದಿಗೆ ನಾನು ದೈಹಿಕವಾಗಿ ಸೇರಿದ್ದೇನೆ ಅನ್ನುವುದು ನಿನಗೆ ಗೊತ್ತು ತಾನೆ?” ಎಂದೆ.

ಹೂಂ!” ಎಂದಳು.

ಅದನ್ನು ನಿನಗೆ ಹೇಳಿದವರಾರು?” ಎಂದೆ.

ನೀನೇ...!” ಎಂದಳು.

ಇದುವರೆಗೂ ನಾನು ಚರ್ಚೆಯೇ ಮಾಡದಿರುವ- ನೀನೇ ಹೇಳಿದ ವಿಷಯವಿದೆ! ನೀನೂ ಕೂಡ ಒಬ್ಬರಿಗಿಂತ ಹೆಚ್ಚು ಗಂಡಸರೊಂದಿಗೆ ಸೇರಿದ್ದೀಯ! ನಮ್ಮ ಮಧ್ಯೆ ಅದು ಒಂದು ಸಮಸ್ಯೆಯೇ ಅಲ್ಲ!” ಎಂದೆ.

ನೀನು ಸಿಕ್ಕಮೇಲೆ ನಾನು ಅವರನ್ನು ಬಿಟ್ಟಿದ್ದೇನೆ!” ಎಂದಳು.

ಯಾಕೆ?” ಎಂದೆ.

ಯಾಕೆಂದರೆ... ನಾನು ನಿನ್ನನ್ನು ಪ್ರೇಮಿಸುತ್ತಿದ್ದೇನೆ!” ಎಂದಳು.

ಅದಕ್ಕೆ?”

ನೀನೂ ಕೂಡ ಎಲ್ಲರನ್ನು ಬಿಟ್ಟು ನನ್ನವನಾಗಬೇಕು!” ಎಂದಳು.

ಹೀಗೆ ಹಠದಿಂದ ಸಾಧಿಸಿಕೊಳ್ಳುವುದು ಪ್ರೇಮವೇ?” ಎಂದೆ.

ಅದೆಲ್ಲಾ ನನಗೆ ಗೊತ್ತಿಲ್ಲ! ನೀನು ನನಗೆ ಬೇಕು!” ಎಂದಳು.

ನನ್ನ ಸ್ವಾತಂತ್ರ್ಯಕ್ಕೆ ದಕ್ಕೆಯನ್ನು ತರದಿದ್ದರೆ.... ನಿನ್ನ ಪ್ರೇಮವನ್ನು ನಾನು ಒಪ್ಪಿಕೊಳ್ಳುತ್ತೇನೆ!” ಎಂದೆ.

ಬೇರೆ ಹೆಣ್ಣಿನೊಂದಿಗೆ ಸೇರಬೇಕೆನ್ನುವ ನಿನ್ನ ಪೈಶಾಚಿಕ ಸ್ವಾತಂತ್ರ್ಯಕ್ಕೆ ದಿಕ್ಕಾರವಿರಲಿ!” ಎಂದಳು.

ಮುಗುಳು ನಕ್ಕೆ!

ಅವಳ ಎಲ್ಲಾ ಶರತ್ತುಗಳನ್ನು - ಅವಳ ಮುಂದೆಯಾದರೂ- ಒಪ್ಪಿಕೊಂಡ ಪರಿಪೂರ್ಣ ಪ್ರೇಮಿಯೊಂದಿಗೆ ಅವಳು ನೆಮ್ಮದಿಯಿಂದ ಬದುಕುತಿದ್ದಾಳೆ!

*

ತನ್ನ ಎದೆಯೊಳಕ್ಕೆ ನನ್ನ ಮುಖವನ್ನು ಒತ್ತಿ ಹಿಡಿದು ಹೇಳಿದಳು,

ನೀನು ನನ್ನ ಮುದ್ದು ಬಂಗಾರಿ!”

ನಾನು ಮುಖವನ್ನು ಬೇರ್ಪಡಿಸಲಿಲ್ಲ- ಅವಳೂ! ಹಾಗೆಯೇ ಎಷ್ಟು ಹೊತ್ತೋ.... ಮನಸ್ಸು ಬಾಹ್ಯಾಕಾಶದಲ್ಲಿ ಹಾರಾಡುತ್ತಿರುವಂತೆ!

ದತ್ತಾ.... ಐ ಲವ್ ಯು!” ಎಂದಳು.

ಸೊಂಟದ ಸುತ್ತ ಕೈ ಹಾಕಿ ಮತ್ತಷ್ಟು ಒತ್ತಿಕೊಂಡೆ. ತಲೆಯಮೇಲೆ ತುಟಿಯೊತ್ತಿ ನೇವರಿಸಿದಳು.

ಅವಳು ನನ್ನ ಪ್ರಾಣ! ನನ್ನನ್ನೇ ಅವಳೊಳಕ್ಕೆ ಆವಾಹಿಸಿಕೊಂಡು ಆನಂದ ಸಾಗರದಲ್ಲಿ ಈಜಾಡಿದಳು.

ನನ್ನೊಳಗಿನ ಭಾವನಾ ತರಂಗಗಳನ್ನು ಮೀಟಿ- ಶೃತಿಗೊಳಿಸಿ- ಒಂದದ್ಭುತ ಪ್ರಪಂಚವನ್ನೇ ಸೃಷ್ಟಿಸಿದಳು.

ಅವಳ ಪ್ರೇರಣೆಯಿಂದ- ಅದ್ಭುತ ಭಾವ ಪ್ರಕಟಣೆಯಿಂದ-ಪ್ರೇಮದಿಂದ ಪ್ರೇರಿತನಾಗಿ, ಪ್ರೇಮಮಯ ಮಾಯಾ ಪ್ರಪಂಚವೊಂದನ್ನು ಸೃಷ್ಟಿಸಿದೆ. ಅದ್ಭುತವೆನಿಸುವ ಕಥೆಗಳನ್ನು ಬರೆದೆ. ಬರೆಯುವವನಿಗೆ ಅವನ ಬರಹಗಳು ಅದ್ಭುತವೇ...!

ನಾನು ಬರೆದ ತೊಂಬತ್ತ ಒಂಬತ್ತು ಕಥೆಗಳನ್ನು ಅವಳು ಅನುಭವಿಸಿದಳು! ಆನಂದಿಸಿದಳು!

ನೂರನೆಯ ಕಥೆ! ನನ್ನ ಪ್ರಮಾದ! ಕಥಾನಾಯಕಿಯೂ- ನಾಯಕನೂ ಶುದ್ಧರಲ್ಲವೇನೋ ಎಂಬಂತೆ ಬಿಂಬಿತವಾದ ಕಥೆ!

ಕಥೆಗಾರನಾಗಿ- ಬರೆಯುವಾಗ ಆ ತೊಂಬತ್ತೊಂಬತ್ತು ಕಥೆಗಳಲ್ಲಿ ಅವಳೇ ತುಂಬಿದ್ದಳು!

ಅವಳಿಲ್ಲದ ಆ ಒಂದು ಕಥೆಯಲ್ಲಿ- ಅವಳನ್ನು ಅವಳು ಕಂಡಳು....!

*

ನೂರಾ ಒಂದನೆಯ ಕಥೆಯನ್ನು ಕಥೆಗಾರನಿಗೆ ಮುಗಿಸಲಾಗಲಿಲ್ಲ... ಏನೋ ಸಂಶಯವಾಗಿ ಹೃದಯ ಭಾಗವನ್ನೊಮ್ಮೆ ಮುಟ್ಟಿನೋಡಿದ! ಹೃದಯ ಕೊನೆಯ ಕಥೆಯೊಂದಿಗೆ ಹೊರಟು ಹೋಗಿತ್ತು!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!