ಬೀಜ- ಕಥೆ
ಬೀಜ!
೧
“ನಿಮಗಾಗಿ ಏನು ಮಾಡಲಿ?” ಎಂದೆ.
ತಲೆಯೆತ್ತಿ ನೋಡಿದರು. ಸಂಶಯ- ಯಾರೆಂದು.
“ನನ್ನ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ... ಹೇಳಿ, ನಿಮಗಾಗಿ ಏನು ಮಾಡಲಿ?” ಎಂದೆ.
“ನನಗಾಗಿ ಏನನ್ನಾದರೂ ನಾನೇ ಮಾಡಿಕೊಳ್ಳಬಲ್ಲೆ! ಇವರಿಗಾಗಿ ಏನಾದರೂ ಮಾಡಲು ಸಾಧ್ಯವೇ ನೋಡಿ!” ಎಂದರು.
“ಖಂಡಿತ ಸಾಧ್ಯ! ಏನು ಮಾಡಲಿ ಹೇಳಿ...” ಎಂದೆ.
“ಇವರೆಲ್ಲರ ಖರ್ಚು ವೆಚ್ಚಗಳನ್ನು ನಾನೊಬ್ಬನೇ ಭರಿಸಲಾರೆ!” ಎಂದರು.
“ನಾನು ಭರಿಸಬಲ್ಲೆ!” ಎಂದೆ.
ಮುಗುಳುನಕ್ಕು,
“ಏನೂ ಸಮಸ್ಯೆಯಿಲ್ಲಮ್ಮ! ಮಗ ಹುಷಾರಾಗಿದ್ದಾನೆ! ನಾಳೆ ಡಿಸ್ಚಾರ್ಜ್‌ಮಾಡೋಣ!” ಎಂದು ರೋಗಿಯ ತಾಯಿಗೆ ಹೇಳಿ ನನ್ನೊಂದಿಗೆ ಹೆಜ್ಜೆ ಹಾಕಿದರು.
೨
ನನಗಾಗ ಹನ್ನೆರಡು ವರ್ಷ ವಯಸ್ಸು!
ವಾರ ಕಳೆದರೂ ವಾಸಿಯಾಗದ ಜ್ವರ- ಅಮ್ಮನಿಗೆ. ದಿನದಿಂದ ದಿನಕ್ಕೆ ನಿಶ್ಶಕ್ತಿ! ಅವರನ್ನು ಕಾಪಾಡಿಕೊಳ್ಳಲಾರದ ನಿಸ್ಸಹಾಯಕತೆಯೊಂದಿಗೆ- ಆಸ್ಪತ್ರೆಯ ಮುಂದೆ ನಿಂತಿದ್ದೆ! ಅಮ್ಮ ಉಳಿಯಬೇಕೆಂದರೆ ಡಾಕ್ಟರ್ ಮನೆಗೆ ಬರಬೇಕು! ಮೂರು ದಿನದಿಂದ ಕಾಯುತ್ತಿದ್ದೇನೆ. ಡಾಕ್ಟರ್ ಕಣ್ಣಿಗೆ ನಾನು ಬಿದ್ದಿಲ್ಲ! ಒಳಹೋಗಲಾರೆ- ಹೆದರಿಕೆ!
ನಾಲ್ಕನೆಯ ದಿನ- ಹೆದರಿ ನಿಂತರೆ ಇಂದೇ ಅಮ್ಮನ ಕೊನೆಯೇನೋ ಅನ್ನಿಸಿ ಒಳನುಗ್ಗಿದೆ.
ಸಂಶಯದಿಂದ ನೋಡಿದರು ಡಾಕ್ಟರ್.
“ಅ.... ಅಮ್ಮ ಜ್ವರಹಿಡಿದು ಮಲಗಿದ್ದಾರೆ...!” ಎಂದೆ.
“ಎಲ್ಲಿ?” ಎಂದರು.
“ಮನೆಯಲ್ಲಿ!” ಎಂದೆ.
ಒಂದು ಕ್ಷಣದ ಯೋಚನೆ.
“ಎಷ್ಟುದಿನವಾಯಿತು?” ಎಂದರು.
“ಒಂದುವಾರ!” ಎಂದೆ.
ಏನೋ ಯೋಚಿಸಿ,
“ಹೊರಗೆ ನಿಂತಿರು ಬರುತ್ತೇನೆ!” ಎಂದರು.
ಐದು ನಿಮಿಷದ ನಂತರ ಹೊರಬಂದು ನನ್ನ ಕೈಹಿಡಿದು ತಮ್ಮ ಕಾರಿನ ಬಳಿಗೆ ನಡೆದರು.
೩
ಒಂದು ವಾರದ ಚಿಕಿತ್ಸೆಯ ಫಲ! ಅಮ್ಮ ಸುಧಾರಿಸಿಕೊಂಡರು.
ಪ್ರತಿದಿನ ಸಂಜೆ ಮನೆಗೆ ಬಂದು ಅಮ್ಮನ ಆರೋಗ್ಯವನ್ನು ವಿಚಾರಿಸಿ ಹೋಗುತ್ತಿದ್ದರು ಡಾಕ್ಟರ್.
ಒಂದು ದಿನ..... ಎಲ್ಲೋ ಹೊರಗೆ ಹೋಗಿದ್ದ ನಾನು ಮನೆಗೆ ಬರುವಾಗ ನೋಡಿದೆ- ಡಾಕ್ಟರ್ ಅಮ್ಮನನ್ನು ವಿಚಾರಿಸಲು ಕಾರಿನಿಂದಿಳಿದು ಮನೆಯ ಒಳಕ್ಕೆ ಹೋಗುತ್ತಿದ್ದರು. ಖುಷಿಯಿಂದ ಮನೆಯ ಹತ್ತಿರ ಬಂದೆ.
“ಹೇಗಿದ್ದೀರ?” ಎಂದರು.
“ನಿಮ್ಮ ದಯೆಯ ಫಲ- ಬದುಕಿದ್ದೇನೆ!” ಎಂದರು ಅಮ್ಮ.
“ಹಾಗೆಲ್ಲಾ ಹೇಳಬೇಡಿ- ನನ್ನ ಕರ್ತವ್ಯ ನಾನು ಮಾಡಿದೆ!” ಎಂದರು.
“ಹೌದು.... ಆದರೆ ನನ್ನ ಕರ್ತವ್ಯವನ್ನು ನಾನು ನೆರವೇರಿಸಲಾರೆ!” ಎಂದರು ಅಮ್ಮ.
ಸಂಶಯದಿಂದ ನೋಡಿದರು ಡಾಕ್ಟರ್.
“ನಿಮ್ಮ ಫೀಸ್!” ಎಂದರು ಅಮ್ಮ.
ಮುಗುಳುನಕ್ಕರು ಡಾಕ್ಟರ್.... ಏನೋ ಮಾತನಾಡುವುದಕ್ಕೆ ಮುಂಚೆ ಅಮ್ಮ,
“ಬದುಕಬೇಕೆಂಬ ಆಸೆ ನನಗಿಲ್ಲ! ಆದರೆ ಮಗನಿಗಾಗಿ ಬದುಕಬೇಕಾಗಿರುವುದು ನನ್ನ ಕರ್ತವ್ಯ! ಅದಕ್ಕಾಗಿ ಯಾವ ತ್ಯಾಗಕ್ಕೂ ನಾನು ಸಿದ್ಧ!” ಎಂದರು.
ಡಾಕ್ಟರ್ ಮುಖದಲ್ಲಿ ಸಂಶಯ.
“ನಿಮ್ಮ ಫೀಸಿಗೆ ಬದಲಾಗಿ ಕೊಡಲು ನನ್ನ ಶೀಲದ ಹೊರತು ಬೇರೆ ಏನೂ ಇಲ್ಲ!” ಎಂದರು ಅಮ್ಮ.
ಒಂದು ಕ್ಷಣ ಗಾಢ ಮೌನ.
“ತಾಯಿ.... ಗಂಡಸರೆಂದರೆ ತುಂಬಾ ಹಗುರವಾದ ಅಭಿಪ್ರಾಯ ಇರುವಂತಿದೆ. ಅದು ನಿಮ್ಮ ತಪ್ಪಲ್ಲ! ಜಗದ ನಿಯಮ! ನಿಮ್ಮ ಜ್ವರ ವಾಸಿಯಾಗಲು ನಾನೇ ಕಾರಣನಾಗಿದ್ದರೆ- ನನಗೆ ಆ ತೃಪ್ತಿಯೇ ಸಾಕು! ಅದಕ್ಕಾಗಿ ನಿಮ್ಮ ಶೀಲವನ್ನು- ಜೀವನವನ್ನೇ ನಾಶಮಾಡಿದೆನೆಂಬ ಕೊರಗು ನನಗುಂಟಾಗದಿರಲಿ!” ಎಂದರು.
ಅಮ್ಮನ ಕಣ್ಣಿನಿಂದ ಸುರಿದ ಕಣ್ಣೀರು....
“ಕ್ಷಮೆಯಿರಲಿ... ಗಂಡ ಮರಣಿಸಿದ ನಂತರ.... ಎಷ್ಟೋ ಗಂಡಸರ ನೋಟ- ಕಾಟ- ನನಗೆ ಗಂಡಸರೆಂದರೆ ಹೇಸಿಕೆ ಹುಟ್ಟುವಂತೆ ಮಾಡಿತ್ತು! ಇದುವರೆಗೆ ಯಾರಿಗೂ ನಾ ಬಗ್ಗಿದವಳಲ್ಲ! ಕೂಲಿ ನಾಲಿ ಮಾಡಿ ಮಗನನ್ನು ಬೆಳೆಸಿದೆ. ಇನ್ನು ಮುಂದೆಯೂ ಬೆಳೆಸುತ್ತೇನೆ... ತಮ್ಮಂತವರೂ ಇದ್ದಾರೆಂಬ ಅರಿವು ಸಾಕು ನನಗೆ!” ಎಂದರು.
ಮುಗುಳುನಕ್ಕರು ಡಾಕ್ಟರ್....,
“ಮಗನನ್ನು ಸಮರ್ಥನನ್ನಾಗಿ ಬೆಳೆಸಿ. ಒಳ್ಳೆಯದಾಗಲಿ ನಿಮಗೆ. ನಾನು ವರ್ಗವಾಗಿ ಹೋಗುತ್ತಿದ್ದೇನೆ. ಈ ಊರಿನಲ್ಲಿ ನೀವೇ ನನ್ನ ಕೊನೆಯ ಪೇಷೆಂಟ್!” ಎಂದರು.
೪
ನನ್ನನ್ನೇ ದಿಟ್ಟಿಸಿ ನೋಡಿದರು ಡಾಕ್ಟರ್. ಅವರ ಕಣ್ಣು ತುಂಬಿತ್ತು.
“ಅಂದು ನೀವು ನಾಟಿದ ಮಾನವೀಯತೆಯ ಬೀಜ.... ಇಂದು ಹೆಮ್ಮರವಾಗಿ ನಿಮ್ಮ ಮುಂದೆ ನಿಂತಿದೆ!” ಎನ್ನುತ್ತಾ ಒಳಬಂದರು ಅಮ್ಮ.
“ಡಾಕ್ಟರ್ ಆಗಿ ಇಂದು ಜಾಯನ್ ಆಗುತ್ತಿದ್ದಾನೆ- ಆಶೀರ್ವದಿಸಿ!” ಎಂದರು.
ನಾನು ಬಾಗಿ ಅವರ ಪಾದವನ್ನು ಮುಟ್ಟಿ ಕಣ್ಣಿಗೆ ಒತ್ತಿಕೊಂಡೆ!
ಯಾಕೋ.... ಮೇರು ಪರ್ವತ ನೆನಪಾಯಿತು!
👌👌 super manu 😊
ReplyDeleteಚಂದವಿದೆ ಕಥೆ ಮನು...
ReplyDeleteಯಾರೋ ಒಬ್ರು ನಮಗೆ ಒಳ್ಳೆಯದು ಮಾಡಿದ್ರೆ..ಅದರ ಹತ್ತರಷ್ಟು ಒಳಿತು ಮತ್ತೊಬ್ಬರಿಗೆ ಒಳ್ಳೆಯದು ಮಾಡಲು ಪ್ರೇರೆಪಿಸುತ್ತದೆ ಅಲ್ವಾ..
ಮನ ತಟ್ಟುವ ಕಥೆ
ReplyDeleteಥ್ಯಾಂಕ್ಯು.....
DeleteThis comment has been removed by the author.
ReplyDelete