ತತ್ವ- ಕಥೆ
ತತ್ತ್ವ!
ನಷ್ಟ ಯಾರಿಗೆ ಅನ್ನುವ ಚಿಂತೆ!
ಲಾಭ ನಷ್ಟಗಳ ಲೆಕ್ಕವೇಕೆ- ಸಂಬಂಧಗಳಲ್ಲಿ?
ನನ್ನ ವಿಚಾರಧಾರೆಗಳು ನನ್ನದು! ಅದನ್ನು ಒಪ್ಪದವರನ್ನು ನಾನೆಂದೂ ವಿರೋಧಿಸಲಾರೆ- ಹಾಗೆಯೇ ಅದನ್ನು ಇನ್ನೊಬ್ಬರಮೇಲೆ ಹೇರಲಾರೆ ಕೂಡ! ಹಾಗಿರುವಾಗ- ನನ್ನ ತತ್ತ್ವಗಳಿಂದಾಗಿ ಒಬ್ಬರು ನನ್ನನ್ನು ವಿರೋಧಿಸಿದರೆ ನಾನೇನು ಮಾಡಲಿ?
೧
“ನಿನ್ನನ್ನು ನಾನು ಬ್ಲಾಕ್ ಮಾಡುತ್ತಿದ್ದೇನೆ!” ಎಂದಳು.
“ಯಾಕೆ?” ಎಂದೆ.
“ಇನ್ನೊಬ್ಬರ ವೀರ್ಯ ಮೂಸುವ ನಿನ್ನಂಥ ಅಲ್ಪ ಮನಸ್ಸಿನವನನ್ನು ನನ್ನಿಂದ ಒಪ್ಪಲಾಗುವುದಿಲ್ಲ!”ಎಂದಳು.
“ಸರಿ!” ಎಂದೆ.
“ಅಷ್ಟೆ ಹೊರತು ನಿನ್ನ ಅಭಿಪ್ರಾಯವನ್ನು ಬದಲಿಸುವುದಿಲ್ಲವೇ?” ಎಂದಳು.
“ಯಾರೊಬ್ಬರ ವೈಯುಕ್ತಿಕ ಬದುಕಿಗೆ ನಾನು ತಲೆಹಾಕಿದವನಲ್ಲ!” ಎಂದೆ.
“ಮತ್ತೆ ರಾಹುಲನ ವಿಷಯ?” ಎಂದಳು.
“ಕಣ್ಮಣಿ... ಹಲವು ಸಾರಿ ಹೇಳಿರುವುದೇ... ವೈಯುಕ್ತಿಕ ರಹಸ್ಯಗಳಿರುವವನು ನಾಯಕ ಹೇಗಾಗುತ್ತಾನೆ? ಸೇವಕ ಹೇಗಾಗುತ್ತಾನೆ?” ಎಂದೆ.
ಅಸಹನೆಯಿಂದ ನೋಡಿದಳು.
“ವಾಸ್ತವವನ್ನು ಒಪ್ಪಿಕೊಳ್ಳದಿರುವುದು ಗುಲಾಮತೆಯ ಸಂಕೇತ!” ಎಂದೆ.
“ಯಾಕೆ ಒಪ್ಪಿಕೊಳ್ಳಬೇಕು?”
“ನನ್ನನ್ನು ನಿಮ್ಮ ನಾಯಕನನ್ನಾಗಿ ಆರಿಸಿ ಎಂದು ಅವನೇ ಹೇಳಿಕೊಳ್ಳುತ್ತಿದ್ದಾನೆ- ಅದಕ್ಕೆ!” ಎಂದೆ.
“ಅದಕ್ಕೆ ಪಿತೃತ್ವವೇ ಯಾಕೆ?”
“ಯಾಕೆಂದರೆ.... ಅವನ ತಂದೆ ಯಾರೋ ವಿದೇಶಿ ಅನ್ನುವ ಆರೋಪವಿದೆ!”
“ಅದು ಅವನ ವೈಯುಕ್ತಿಕ ವಿಷಯ!” ಎಂದಳು.
“ವೈಯುಕ್ತಿಕ ವಿಷಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುವವನು ನಾಯಕನಾಗುತ್ತೇನೆಂದು ಬರಬಾರದು!” ಎಂದೆ.
“ಈಗ ಅವನು ಏನು ಮಾಡಬೇಕೆಂದು ನಿನ್ನ ಅಭಿಪ್ರಾಯ?”
“ಒಂದೋ ಅವನು ಅವನ ಮೇಲಿನ ಆರೋಪವನ್ನು ವಿರೋಧಿಸಬೇಕು! ಅಥವಾ ಒಪ್ಪಿಕೊಂಡು ಅದಕ್ಕೂ ತನ್ನ ನಾಯಕತ್ವಕ್ಕೂ ಸಂಬಂಧವಿಲ್ಲ ಅನ್ನುವುದನ್ನು ನಿರೂಪಿಸಬೇಕು! ಜೊತೆಗೆ....” ಎಂದೆ.
ಏನು ಎನ್ನುವಂತೆ ನೋಡಿದಳು.
“ತನ್ನನ್ನು ಯಾಕೆ ನಾಯಕನನ್ನಾಗಿ- ಪ್ರತಿನಿಧಿಯನ್ನಾಗಿ ಆರಿಸಬೇಕು ಅನ್ನುವುದನ್ನು- ತನ್ನಲ್ಲಿನ ನಾಯಕತ್ವವನ್ನು ಸಾಬೀತು ಪಡಿಸಬೇಕು!” ಎಂದೆ.
ಗೊಂದಲದಿಂದ ನೋಡಿದಳು.
೨
ಯಥಾ ರಾಜ- ತಥಾ ಪ್ರಜ!
ಈ ತತ್ತ್ವವನ್ನು ಅರ್ಥೈಸಿಕೊಳ್ಳುವುದು ಸ್ವಲ್ಪ ಕಷ್ಟ! ಅರ್ಥೈಸಿಕೊಂಡರೂ- ಯಾವ ಕಾರಣಕ್ಕೂ ಪ್ರಜೆ ರಾಜನಂತೆ ಬದುಕಲಾರ! ಬದುಕಿದರೆ ಅವನೂ ರಾಜನೆಂದೇ ಅರ್ಥ!
ಆದರೆ ರಾಜಮಾತ್ರ ರಾಜನಂತೆಯೇ ಇರಬೇಕೆಂದುಕೊಳ್ಳುತ್ತಾನೆ ಪ್ರಜೆ!
ಸಾಮಾನ್ಯ ಪ್ರಜೆಯಂತೆ ಬದುಕುವುದಾದರೆ ಅವನೇಕೆ ರಾಜನಾಗುತ್ತಾನೆ?
ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ಅನ್ನುವ ರಾಜನಿದ್ದನಂತೆ! ಅವನ ಆಢಳಿತಾವಧಿಯಲ್ಲಿ ನಡೆದ ಎರಡು ಘಟನೆಗಳು ಕಾಲಾನಂತರದಲ್ಲಿ ಬಹಳ ವಿವಾದಕ್ಕೆ ಎಡೆಮಾಡಿಕೊಟ್ಟಿತು!
ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ನಾಯಕತ್ವದಲ್ಲಿ ರಚಿಸಲ್ಪಟ್ಟ ಭಾರತದ ಸಂವಿಧಾನ- ಅಂಗೀಕಾರಗೊಂಡ ಸಮಯದಲ್ಲಿ ಯಾವ ರೂಪದಲ್ಲಿತ್ತೋ ಈಗಲೂ ಅದೇ ರೂಪದಲ್ಲಿದೆ ಎಂದು ಹೇಳಲಾಗುವುದಿಲ್ಲ! ಸಣ್ಣಪುಟ್ಟ ಬದಲಾವಣೆಗಳಿಗೆ ಒಳಗಾಗುತ್ತಲೇ ಇರುತ್ತವೆ. ಅದು ಕಾಲ ಕಾಲಕ್ಕೆ ನಡೆಯುವ ಘಟನೆಗಳಿಗೆ ಅನುಗುಣವಾಗಿರುತ್ತದೆ! ಆ ಘಟನೆಗಳು ಚರ್ಚೆಗೊಳಪಟ್ಟು ಮೇಧಾವಿ ವರ್ಗಗಳ ವಿಚಾರಧಾರೆಗಳಿಂದ ತಿದ್ದಿ ತೀಡಿ ನಿಯಮಗಳು ರೂಪಗೊಳ್ಳುತ್ತವೆ- ಬದಲಾವಣೆಗೊಳ್ಳುತ್ತದೆ.
ಮತ್ತೊಂದು ರೀತಿಯಲ್ಲಿ ಹೇಳಬೇಕೆಂದರೆ- ಘಟನೆಯೊಂದು ನಡೆದು- ವ್ಯಕ್ತಿಯೊಬ್ಬ ಸಂವಿಧಾನಬದ್ಧವಾಗಿ ತಪ್ಪು ಮಾಡಿರುವುದಾಗಿ ತೀರುಮಾನವಾಗಿರುತ್ತದೆ. ಆದರೆ ಪ್ರಪಂಚದ ದೃಷ್ಟಿಯಲ್ಲಿ ಅದು ತಪ್ಪಾಗಿರುವುದಿಲ್ಲ! ಆದರೂ ಆತ ಶಿಕ್ಷಿಸಲ್ಪಡುತ್ತಾನೆ. ನಂತರ ಆ ಘಟನೆ ಚರ್ಚೆಗೆ ಒಳಗಾಗುತ್ತದೆ. ಹಲವಾರು ದೃಷ್ಟಿಕೋನಗಳಿಂದ ಪರಿಶೀಲಿಸಿ ಆ ವಿಷಯ ತಿದ್ದುಪಡಿಗೆ ಯೋಗ್ಯವಾಗಿದೆಯೆಂದು ಕಂಡು ಬಂದರೆ.... ಸಂವಿಧಾನವು ತಿದ್ದಲ್ಪಡುತ್ತದೆ. ಆದರೆ.... ಘಟನೆ ನಡೆದಾಗ ಸಂವಿಧಾನಿಕವಾಗಿ ತಪ್ಪಿನ ವ್ಯಾಪ್ತಿಗೆ ಬರುವುದರಿಂದ- ಘಟನೆಗೆ ಕಾರಣನಾದವನು ತಪ್ಪಿತಸ್ತನೆಂದು ತೀರುಮಾನವಾಗಿರುತ್ತದೆ!
ಸಂವಿಧಾನ ರೂಪುಗೊಂಡು- ಅಂಗೀಕಾರಗೊಂಡ ಈ ಅರವತ್ತು ಎಪ್ಪತ್ತು ವರ್ಷಗಳ ಅವಧಿಯಲ್ಲಿಯೇ ಇಷ್ಟೊಂದು ಬದಲಾವಣೆಗೆ ಒಳಗಾಗಿರುವಾಗ.... ತ್ರೇತಾಯುಗದ ಘಟನೆಯನ್ನು ಈಗಿನ ಸಂದರ್ಭಕ್ಕೆ ಹೋಲಿಸಿ ಆರೋಪಿಸುವುದು ಸರಿಯೇ ಅನ್ನುವುದು ಪ್ರಶ್ನೆ!!
ಆ ಕಾಲಕ್ಕೆ ಆ ಘಟನೆಗಳು ಯಾಕೆ ತಪ್ಪಾಗಿರಲಿಲ್ಲ ಅನ್ನುವುದು ತೀರುಮಾನವಾಯಿತು ಆದರೂ.... ಮತ್ತೊಮ್ಮೆ ಅದನ್ನು ಪರಿಶೀಲಿಸುವುದರಿಂದ ತಪ್ಪೇನೂ ಇಲ್ಲ!
ಶ್ರೀರಾಮಚಂದ್ರನ ಆಢಳಿತಾವಧಿಯಲ್ಲಿ ಅಂದಿದ್ದೇನೆ! ಅಂದರೆ ಅವನು ರಾಜನಾಗುವುದಕ್ಕಿಂತ ಮುಂಚಿನ ಕೆಲವು ಘಟನೆಗಳನ್ನು ಬಿಟ್ಟಿದ್ದೇನೆ! ವಾಲಿ ವಧೆಯಾಗಿರಬಹುದು- ಸೀತಾಗ್ನಿಪ್ರವೇಶವಾಗಿರಬಹುದು! ಅದನ್ನು ಕೈಬಿಡಲು ನನ್ನದೇ ಆದ ಎರಡು ಕಾರಣಗಳಿದೆ! ಒಂದು- ಆಗ ಶ್ರೀರಾಮಚಂದ್ರ ರಾಜನಾಗಿರಲಿಲ್ಲ! ಎರಡು- ನಾನು ನಿರೂಪಿಸ ಹೊರಟಿರುವ ತತ್ತ್ವಕ್ಕೂ ಅದಕ್ಕೂ ಸಂಬಂಧವಿಲ್ಲ!!
೩
ಶ್ರೀರಾಮಚಂದ್ರನ ಪಟ್ಟಾಭಿಷೇಕವಾದ ಕೆಲವು ಕಾಲದ ನಂತರ... ಧರ್ಮದೊರೆ ಎಂದು ಹೆಸರು ಪಡೆದಿದ್ದ ಕಾಲದಲ್ಲಿ... ಸಣ್ಣ ಘಟನೆಯೊಂದು ನಡೆಯಿತು! ಸಣ್ಣ ಘಟನೆಯೇ ಎಂದು ಕೇಳಿದರೆ ಉತ್ತರಿಸಲಾರೆ!
ಘಟನೆಯೊಂದು ನಡೆಯಿತು...
ಶೂದ್ರನೊಬ್ಬ ತಪಸ್ಸು ಮಾಡಿದನೆಂಬ ಆರೋಪ!!
ಅಂದಿನ ನಿಯಮಕ್ಕೆ ಅದು ವಿರುದ್ಧವಾಗಿತ್ತು!
ಅಂದಿನ ಸಂವಿಧಾನಕ್ಕೆ ಅನುಗುಣವಾಗಿ ಆ ಶೂದ್ರನಿಗೆ ಮರಣ ದಂಡನೆಯನ್ನು ವಿಧಿಸಿದರು!
ಅದಕ್ಕೆ ಅವರು ಕೊಟ್ಟ ಕಾರಣಗಳು ಎರಡು!
ಒಂದು- ಶೂದ್ರ ತಪಸ್ಸು ಮಾಡುವಂತಿಲ್ಲ! ಅವನ ಧರ್ಮ- ಬ್ರಾಹ್ಮಣ, ಕ್ಷತ್ರಿಯ, ವೈಶ್ಯರ ಸೇವೆಯನ್ನು ಮಾಡುವುದು!
ಎರಡು- ಅವನ ತಪಸ್ಸಿನ ಉದ್ದೇಶ! ಭೋಗೇಚ್ಛೆಯಿಂದ- ಅಂದರೆ- ಹೆಣ್ಣಿಗಾಗಿ- ಆಸ್ತಿ ಅಂತಸ್ತಿಗಾಗಿ ಅವನು ತಪಸ್ಸು ಕೈಗೊಂಡಿದ್ದ!
ಶೂದ್ರ ತಪಸ್ಸು ಮಾಡುವುದು ತಪ್ಪೇ ಎಂದು ಕೇಳಿದರೆ.... ಇಂದು ತಪ್ಪಲ್ಲ! ಇಂದು ಯಾರು ಏನು ಬೇಕಿದ್ದರೂ ಮಾಡಬಹುದು- ಇಂದಿನ ಸಂವಿಧಾನಕ್ಕೆ ಅನುಗುಣವಾಗಿ!
ಆದರೆ ಆ ಶೂದ್ರ ತಪಸ್ಸು ಮಾಡುವ ಕಾಲಕ್ಕೆ ಸಂವಿಧಾನ ಹಾಗಿತ್ತು. ಬ್ರಾಹ್ಮಣ- ಕ್ಷತ್ರಿಯ- ವೈಶ್ಯ- ಶೂದ್ರ ಪ್ರತಿಯೊಬ್ಬರೂ ಅವರವರ ಧರ್ಮವನ್ನು ಆಚರಿಸಬೇಕೇ ಹೊರತು ಅದರಿಂದ ಆಚೆ ಹೋಗಬಾರದು... ಹೋದರೆ ಅಂದಿನ ಸಂವಿಧಾನಕ್ಕೆ ಅನುಗುಣವಾಗಿ ಶಿಕ್ಷೆಯನ್ನು ಅನುಭವಿಸಲೇ ಬೇಕಿತ್ತು!
ಈ ಘಟನೆ ಶ್ರೀರಾಮಚಂದ್ರನನ್ನು ಯೋಚನೆಗೀಡುಮಾಡಿತು. ಸಂವಿಧಾನದ ತಿದ್ದುಪಡಿಗೆ ಸೂಚಿಸಿದ!
ಕಾಲಾನಂತರದಲ್ಲಿ ಬದಲಾವಣೆಯಿಂದ ಬದಲಾವಣೆಗೆ ಒಳಪಟ್ಟು ಈಗ- ಪ್ರತಿಯೊಬ್ಬರೂ ಸಮಾನರು ಅನ್ನುವ ಹಂತಕ್ಕೆ ಸಂವಿಧಾನ ಬಂದು ನಿಂತಿದೆ!
ಇದನ್ನು ಹೇಳಿದ ಉದ್ದೇಶವೆಂದರೆ.... ನಾಯಕನ ಲಕ್ಷಣವನ್ನು ತಿಳಿಸುವುದು!
ನಾಯಕನಾದವನು ಸಾಮಾನ್ಯನಂತೆ ಯೋಚಿಸಿದ್ದರೆ ಆ ಶೂದ್ರನಿಗೆ ಶಿಕ್ಷೆಯನ್ನು ವಿಧಿಸುತ್ತಿರಲಿಲ್ಲ! ಆದರೆ ಶ್ರೀರಾಮಚಂದ್ರ ಸಂವಿಧಾನಕ್ಕೆ ಅಷ್ಟು ಬೆಲೆ ಕೊಡುತ್ತಿದ್ದ- ಜನನಾಯಕ!
ಎಷ್ಟೇ ಕಠೋರವಾದ ಕ್ರಿಯೆಯನ್ನಾದರೂ ಅವನು ಮಾಡಲೇ ಬೇಕಿತ್ತು! ಮಾಡಿದ ಕೂಡ!
ಅವನ ಆಳ್ವಿಕೆಯಲ್ಲಿ ಸಂಶಯಗಳಿಗೆ ಎಡೆಯಿರಲಿಲ್ಲ!
ಶ್ರೀರಾಮಚಂದ್ರ ಮುಕ್ತನಾಗಿದ್ದ! ಅವನ ಬಗೆಗಿನ ಪ್ರತಿಯೊಂದು- ಅಣು ವಿಷಯವೂ ಕೂಡ- ಪ್ರತಿಯೊಬ್ಬರಿಗೂ ತಿಳಿದಿತ್ತು!
ತಿಳಿಯದೇ ಇದ್ದ ಒಬ್ಬನೇ ಒಬ್ಬ ಅ-ಗ-ಸ ರಾಮನ ಮೇಲೆ ಆರೋಪವೊಂದನ್ನು ಹೊರೆಸಿದ!
ಚರ್ಚೆಯಾದ ಎರಡನೆಯ ವಿಷಯ!
ಶ್ರೀರಾಮಚಂದ್ರ ಒಬ್ಬ ಸ್ತ್ರೀವ್ಯಾಮೋಹಿ ಅನ್ನುವುದು ಅವನ ಆರೋಪ!
ಅದಕ್ಕೆ ಅವನು ಕೊಟ್ಟ ವಿವರಣೆ- ಶ್ರೀರಾಮಚಂದ್ರ ಸ್ತ್ರೀವ್ಯಾಮೋಹಿಯಾಗಿದ್ದುದರಿಂದಲೇ.... ಒಂದು ವರ್ಷಕಾಲ ತನ್ನನ್ನು ಬಿಟ್ಟು ಬೇರೊಬ್ಬರ ಆಶ್ರಯದಲ್ಲಿದ್ದ ಸೀತೆಯನ್ನು ವರಿಸಿಕೊಂಡ- ಎನ್ನುವುದು!
ಸೀತೆಯಲ್ಲಿ ರಾಮನಿಗೆ ಅಷ್ಟು ವ್ಯಾಮೋಹವಂತೆ!
ಅಂದಿನ ಸಂವಿಧಾನಕ್ಕೆ ಅನುಗುಣವಾಗಿ ಶ್ರೀರಾಮಚಂದ್ರನಮುಂದೆ ಎರಡು ಮಾರ್ಗಗಳಿದ್ದವು!
ಒಂದು- ತಾನೊಬ್ಬ ಸ್ತ್ರೀವ್ಯಾಮೋಹಿ ಎನ್ನುವುದನ್ನು ಒಪ್ಪಿಕೊಂಡು- ಸೀತೆಗಾಗಿ ತನ್ನ ರಾಜತ್ವವನ್ನು ತ್ಯಜಿಸಿ ಸಾಮಾನ್ಯ ಪ್ರಜೆಯಂತೆ ಬದುಕುವುದು! ಅಥವಾ...
ಎರಡು- ಸೀತೆಯನ್ನು ತ್ಯಜಿಸಿ ತಾನೊಬ್ಬ ಸ್ತ್ರೀವ್ಯಾಮೋಹಿ ಅಲ್ಲ ಅನ್ನುವುದನ್ನು ನಿರೂಪಿಸಿ ರಾಜನಾಗಿ ಉಳಿಯುವುದು!
ಅವನು ಎರಡನೆಯ ಮಾರ್ಗವನ್ನು ಆರಿಸಿಕೊಂಡ!
ಸೀತೆ ಏನು ಮಾಡಿದ್ದಳು ಎಂದು ಕೇಳಿದರೆ.... ಅಂದಿನ ಕಾಲಕ್ಕೂ ಇಂದಿಗೂ ಯಾವ ವ್ಯತ್ಯಾಸವೂ ಇಲ್ಲ ಅನ್ನುವುದೇ ನನ್ನ ಉತ್ತರ! ಹೇಗೆಂದೋ....
ರೇಪ್ ನಡೆದಿರಲಿ- ನಡೆಯದೇ ಇರಿಲಿ- ಹಾಗೊಂದು ಆರೋಪವಿರುವ ಹೆಣ್ಣಿನಬಗ್ಗೆ ನೆನಸಿಕೊಂಡರೆ ಸಾಕು!!
ಇದರ ಬಗ್ಗೆ ಹೆಚ್ಚು ವಿವರಣೆ ಬೇಡ ಅಂದುಕೊಳ್ಳುತ್ತೇನೆ!!
ಶ್ರೀರಾಮಚಂದ್ರ ರಾಜನಾಗಿದ್ದ! ಅವನೊಬ್ಬ ಸಾಮಾನ್ಯ ಪ್ರಜೆಯಾಗಿದ್ದರೆ... ಯಾವ ಆರೋಪವಿದ್ದರೂ ಅವಳಮೇಲೆ ಪ್ರೀತಿಯಿದ್ದರೆ- ತನ್ನ ಹೆಂಡತಿಯೊಂದಿಗೆ ಸಾಮಾನ್ಯನಂತೆ ಇದ್ದುಬಿಡುತ್ತಿದ್ದ!
ನಾಯಕನಾದವನಿಗೆ ಆ ಸ್ವಾತಂತ್ರ್ಯವಿಲ್ಲ!
೪
ಗೊಂದಲ ಸಂಶಯವಾಗಿ....
“ಇದನ್ನೆಲ್ಲಾ ಯಾಕೆ ಹೇಳಿದೆ?” ಎಂದು ಕೇಳಿದಳು!
“ಕರ್ಮ!” ಎಂದು ತಲೆ ಬಡಿದುಕೊಂಡು,
“ಕಣ್ಮಣಿ... ಕೇಳು... ನಾನು- ತತ್ತ್ವ- ಹುಟ್ಟಿದೆ. ನನ್ನ ಪಾಡಿಗೆ ನಾನು ಬೆಳೆದೆ. ಒಂದು ಉದ್ಯೋಗವನ್ನು ಕಂಡುಕೊಂಡೆ. ನಿನ್ನೊಂದಿಗೆ ಸೇರಿದೆ! ಮತ್ತೊಬ್ಬಳೊಂದಿಗೂ ಸೇರಿದೆ. ಗಮನವಿರಲಿ- ನಿನಗೆ ನನ್ನಬಗ್ಗೆ ಪೂರ್ತಿಯಾಗಿ ತಿಳಿಸಿ- ನಿನ್ನೊಬ್ಬಳೊಂದಿಗೆ ಮಾತ್ರ ಸೇರುವವನಲ್ಲ ಎಂದು ತಿಳಿಸಿಯೇ ಇನ್ನೊಬ್ಬಳೊಂದಿಗೆ ಸೇರಿದೆ! ನಾನೂ ನೀನು ಸೇರಿದ್ದು ನನ್ನ ನಿನ್ನ ವಿಷಯ! ಯಾರೂ ಕೇಳುವಂತಿಲ್ಲ! ಇನ್ನೊಬ್ಬಳೊಂದಿಗೆ ಸೇರಿದ್ದು ನನ್ನ ಅವಳ ವಿಷಯ! ಯಾರೂ ಕೇಳುವಂತಿಲ್ಲ! ನನಗೆ ಭೋಗವೇ ಹೆಚ್ಚು! ನಾನು ಹೀಗೆಯೇ ಇದ್ದುಬಿಡುತ್ತೇನೆ ಅನ್ನುವುದು ನನ್ನ ತತ್ತ್ವ!
ಇನ್ನು... ನನಗೊಬ್ಬ ಆಳಿನ ಅಗತ್ಯವಿದೆ ಅಂದುಕೋ... ನಾನು ಜಾಹೀರಾತು ಹೊರಡಿಸುತ್ತೇನೆ! ಅದನ್ನು ನೋಡಿ ಕೆಲವರು ಬರುತ್ತಾರೆ. ಅದರಲ್ಲಿ ಒಬ್ಬನಮೇಲೆ ಒಂದು ಆರೋಪವಿರುತ್ತದೆ! ಅವನು ಕೆಲಸ ಮಾಡಿದ ಮನೆಗಳಲ್ಲೆಲ್ಲಾ ಕಳುವಾಗಿದೆಯೆಂದು! ನಾನು ಅದರಬಗ್ಗೆ ಕೇಳಬೇಕೋ ಬೇಡವೋ?”
“ಕೇಳಬೇಕು!” ಎಂದಳು.
“ಕೇಳಬೇಕು! ಕೇಳಿದಾಗ ಒಂದೋ ಅವನದನ್ನು ನಿಷೇಧಿಸಬೇಕು- ಅಥವಾ- ಒಪ್ಪಿಕೊಂಡು ಇನ್ನುಮುಂದೆ ಹಾಗೆ ಆಗುವುದಿಲ್ಲ ಅನ್ನಬೇಕು! ಅಲ್ಲವೇ?” ಎಂದೆ.
ಹೌದೆನ್ನುವಂತೆ ತಲೆಯಾಡಿಸಿದಳು!
“ಹಾಗೆಯೇ ನಿನ್ನ ರಾಹುಲನ ವಿಷಯ! ನಾನೇನೂ ಅವನನ್ನು ನನ್ನ ಪ್ರತಿನಿಧಿಯಾಗು ಎಂದು ಹೇಳಲಿಲ್ಲ! ಅವನೇ ಹೇಳುತ್ತಿದ್ದಾನೆ! ಅವನು ನನ್ನ ಪ್ರಶ್ನೆಗಳಿಗೆ ಉತ್ತರಿಸಬೇಕೆಂಬ ಯಾವ ಒತ್ತಡವೂ ಇಲ್ಲ- ಸಾಮಾನ್ಯ ಪ್ರಜೆಯಂತೆ- ನನ್ನಂತೆ ಇದ್ದುಬಿಡುವುದಾದರೆ! ಆದರೆ ಅವನು ತಾನು ನಾಯಕನಾಗಬೇಕು ಅನ್ನುತ್ತಿದ್ದಾನೆ! ಇದುವರೆಗೂ ಅವನ ಮೂರ್ಖತನಗಳನ್ನು ಮಾತ್ರ ನೋಡಿದ್ದೇನೆ! ನಾಯಕತ್ವದ ಯಾವೊಂದು ಲಕ್ಷಣವನ್ನೂ ನೋಡಿಲ್ಲ! ಜೊತೆಗೆ ಅವನ ತಂದೆಯಬಗ್ಗೆ ಒಂದು ಆರೋಪವಿದೆ! ಆರೋಪವಿಷ್ಟೆ- ಅವನ ತಂದೆ ಬಾಂಬ್ ಬ್ಲಾಸ್ಟಿನಲ್ಲಿ ಛಿದ್ರವಾಗಿ- ಮರಣಿಸಿದಾಗ- ಆತನನ್ನು ಗುರುತಿಸಲು ರಾಹುಲನ ರಕ್ತವನ್ನು ಕೇಳಿದರಂತೆ! ಡಿಎನ್‌ಎ ಟೆಸ್ಟಿಗೆ ಕೊಡಲು! ಅವನ ತಾಯಿ ರಾಹುಲನದು ಬೇಡ- ಅವನ ತಂಗಿಯದ್ದು ತೆಗೆದುಕೊಳ್ಳಿ ಅಂದರಂತೆ! ಅಂತೆ-ಯೇ! ಅಗಸ ರಾಮನ ಬಗ್ಗೆ ಮಾಡಿದಂತೆ!
ಇದು ನಿಜವೇ? ನಿಜವಾಗಿದ್ದರೆ ಯಾಕೆ?
ನಾಯಕತ್ವದ ಗುಣಗಳೋ ಇಲ್ಲ! ಇದಕ್ಕಾದರೂ ಉತ್ತರಿಸು- ನಿನ್ನ ಚಾರಿತ್ರ್ಯವಾದರೂ ಉತ್ತಮವಾಗಿದ್ದರೆ ಆ ಕುಟುಂಬದ ಮಹಿಮೆಯಿಂದಲಾದರೂ ನಾಯಕನಾಗಿಸುತ್ತೇನೆ ಅಂದರೆ.... ಹೇಳಲಾರೆ ಅನ್ನುತ್ತಾನೆ! ಅವನು ಹೇಳಬೇಕೆಂಬ ಯಾವ ಒತ್ತಡವೂ ಇಲ್ಲ! ನಾಯಕತ್ವದ ಗುಣವೂ ಇಲ್ಲ! ಚಾರಿತ್ರ್ಯ ಶುದ್ಧಿಯನ್ನೂ ನಿರೂಪಿಸುವುದಿಲ್ಲ ಅಂದಮೇಲೆ....” ಎಂದು ಹೇಳಿ ಅವಳ ಮುಖವನ್ನು ನೋಡಿದೆ!
“ಆದರೂ ಅದು ಅವನ ವೈಯುಕ್ತಿಕ ವಿಷಯ!” ಎಂದಳು.
“ಹೌದು... ಅವನಿಗೆ ಅವನ ವೈಯುಕ್ತಿಕ ವಿಷಯವೇ ದೊಡ್ಡದು ಅನ್ನುವುದಾದರೆ... ಅವನನ್ನು ಯಾರೂ ಏನೂ ಪ್ರಶ್ನಿಸುವಂತಿಲ್ಲ! ಹಾಗೆ ಪ್ರಶ್ನಿಸುವವರನ್ನು ಕಂಡರೆ ನನಗೆ ಅಸಹ್ಯ!” ಎಂದೆ.
“ಮತ್ತೆ ನೀನೇ ಪ್ರಶ್ನಿಸುತ್ತಿದ್ದೀಯಲ್ಲಾ....!!!” ಎಂದಳು.
“ನಾ-ಯ-ಕ-ನಾ-ಗು-ತ್ತೇ-ನೆ ಅನ್ನುವುದಾದರೆ! ನನ್ನ ಪ್ರತಿನಿಧಿ- ನಾಯಕ- ಆರೋಪಮುಕ್ತನಾಗಿರಬೇಕು- ಪಾರದರ್ಶಕನಾಗಿರಬೇಕು- ಎಂಥಾ ಕೀಳು ವಿಷಯವಾದರೂ ಸರಿ!!” ಎಂದೆ.
ನನ್ನ ಜೀವನದಿಂದಲೇ ದೂರ ಹೊರಟುಹೋದಳು!
👌🏻💐
ReplyDeleteNice
Deleteಇನ್ನಷ್ಟು ತತ್ವಗಳ ಬಗ್ಗೆ ಚರ್ಚೆಯಾಗ ಬೇಕು
ReplyDeleteಶೂದ್ರಕನ ಬಗ್ಗೆ ನನಗೂ ಸಂಶಯವಿತ್ತು ಆದರೆ ನೀವು ಹೇಳಿದ್ದರಲ್ಲಿ ಲಾಜಿಕ್ ಇದೆ ಅನ್ನಿಸುತ್ತೆ.
ReplyDeleteಇದು ಬಹುಜನರ ಸಂಶಯ.... ಅಂದಿನ ಕಾಲವನ್ನು ಇಂದಿಗೆ ಹೋಲಿಸಿ ರಾಮ ತಪ್ಪು ಮಾಡಿದ ಎಂದು ತೀರ್ಮಾನಿಸುತ್ತಾರೆ.... ಇದಲ್ಲದೆ ಬೇರೆಯ ಕಾರಣಗಳೂ ಇರಬಹುದು.... ನಮಗೆ ತಿಳಿಯದು.... ರಾಮಾಯಣವನ್ನು ಒಂದು ಕಥೆ ಅಥವಾ ಮಹಾ ಕಾವ್ಯದಂತೆ ಓದಿ ಮುಚ್ಚಿ ಇಟ್ಟುಬಿಡುತ್ತೇವೆ.... ಆಳವಾಗಿ ಇಳಿದರೆ ಪ್ರತಿ ವಾಕ್ಯಕ್ಕೂ ಹೊಸ ಅರ್ಥ ವ್ಯಾಖ್ಯಾನಗಳು ಸಿಗುತ್ತದೆ....
Deleteನಾಥೂರಾಮ್ ಘೋಡ್ಸೆಯವರು ಕೋರ್ಟಿನಲ್ಲಿ ಮಾಡಿದ ಭಾಷಣವನ್ನು ಕೇಳಿದ್ದೀರಾ ? ನಿಮ್ಮ ಅನಿಸಿಕೆ ಏನು ? ಸಾಧ್ಯವಾದರೆ ನಿಮ್ಮ ಶೈಲಿಯ ಕಥೆ ಬರೆಯಿರಿ.
ReplyDeleteನಾಥೂರಾಂ ಘೋಡ್ಸೆಯವರ "ನಾನೇಕೆ ಗಾಂಧೀಜಿಯ ಹತ್ಯೆ ಮಾಡಿದೆ" ಅನ್ನುವ ಪುಸ್ತಕವಿದೆ- ಮನು ಕಲೆಕ್ಷನ್‌ನಲ್ಲಿ.... ಅದನ್ನು ಓದಿದ ನಂತರವೇ ಮನು ಸನಾತನ ಧರ್ಮವನ್ನು ಎತ್ತಿ ಹಿಡಿಯುವಂತಾ ಕಥೆಗಳನ್ನು ಬರೆಯಲು ಶುರು ಮಾಡಿದ್ದು.... ಖಂಡಿತಾ ಮುಂದೊಮ್ಮೆ ಶ್ರಮಿಸುತ್ತೇನೆ... ಇದು ಮನಸ್ಸಿಗೆ ಬಂದಿರಲಿಲ್ಲ.... ಇನ್ನು ಕೊರೆಯಲು ಶುರು ಮಾಡುತ್ತದೆ...! ಹೀಗೊಂದು ಆಶಯ ಕೊಟ್ಟಿದ್ದಾಕ್ಕಾಗಿ ಧನ್ಯವಾದಳು ನಿಮಗೆ
Delete