ಉದ್ಧವ- ಕಥೆ
ಉದ್ಧವ
೧
“ಹೇಳು!”
“ಏನು?”
“ಅರ್ಜುನನಿಗೆ ಹೇಳಿದ್ದು!”
“ಅದರ ಅಗತ್ಯ ನಿನಗಿಲ್ಲ!”
“ಯಾಕೆ?”
“ಅವಕಾಶ ನನಗೆ ಸಿಕ್ಕಿದ್ದರಿಂದ ನಾನು ಹೇಳಿದೆ! ನಿನಗೆ ಸಿಕ್ಕಿದ್ದಿದ್ದರೆ ನನಗಿಂತಲೂ ಅದ್ಭುತವಾಗಿ ವಿವರಿಸುತ್ತಿದ್ದೆ!”
ನಕ್ಕ!
“ಅಗತ್ಯಕ್ಕಿಂತಲೂ ಹೆಚ್ಚು ಹೊಗಳುತ್ತಿದ್ದೀಯ ಕೃಷ್ಣ!” ಎಂದ.
“ನಿನ್ನ ವಿಷಯದಲ್ಲಿ ಅಗತ್ಯಕ್ಕಿಂತ ಹೆಚ್ಚು ಅನ್ನುವುದು ಇಲ್ಲ!” ಎಂದೆ.
ನನ್ನ ಮುಖವನ್ನೇ ನೋಡಿದ. ಎಷ್ಟೋಬಾರಿ.... ನನ್ನ ಎದುರಿಗೆ ಅವನಿದ್ದರೆ- ಕನ್ನಡಿಯ ಮುಂದೆ ನಿಂತಿರುವ ಭಾವನೆ ಬರುತ್ತಿತ್ತು- ಅಷ್ಟು ಸಾಮ್ಯ ನಮಗೆ!
ಒಮ್ಮೊಮ್ಮೆ- ನನ್ನಿಂದಾಗಿ ಅವನ ಮಹತ್ವ ಕಡಿಮೆಯಾಯಿತೇನೋ ಅನ್ನಿಸುತ್ತಿತ್ತು!
ಉದ್ಧವ!
ಈಗಲೂ ನೆನಪಿದೆ ನನಗೆ- ನಾವು ಮೂವರ ನಡುವಿನ ಒಡನಾಟ!
ಸುಧಾಮ- ಉದ್ಧವ- ಕೃಷ್ಣ!
ಆರ್ಥಿಕವಾಗಿ ಬಡವ- ಮಧ್ಯಮ- ಶ್ರೀಮಂತ!
ಜ್ಞಾನವನ್ನು ಅಳೆತಗೋಲಾಗಿ ತೆಗೆದುಕೊಂಡರೆ.... ಶ್ರೀಮಂತ- ಶ್ರೀಮಂತ- ಬಡವ!
ಇಲ್ಲೊಂದು ಸೂಚ್ಯವಿದೆ! ಜ್ಞಾನವಾದರೂ ಆರ್ಥಿಕತೆಯಾದರೂ... ಅತ್ತ ಸುಧಾಮನಿಂದಲೂ ಇತ್ತ ನನ್ನಿಂದಲೂ ಸಂಪೂರ್ಣವಾಗಿ ಪಡೆದುಕೊಂಡರೆ ಏನೋ ಅದೇ- ಉದ್ಧವ- ನಮ್ಮಿಬ್ಬರಿಗಿಂತಲೂ ಉತ್ತಮ!
ಆದರೆ ನಮಗೆ ದೊರೆತಷ್ಟು ಮಹತ್ವ ಅವನಿಗೆ ದೊರೆತಿಲ್ಲ!
೨
ಲೇಖನಿಯನ್ನು ಕೆಳಗಿಟ್ಟು ಎದ್ದೆ! ಅಸಾಧ್ಯ ಅನ್ನಿಸಿತು! ಉದ್ಧವನಾದ ನಾನು ಕೃಷ್ಣನಾಗಿ ಬರೆಯುವುದು! ಅದರಲ್ಲೂ ನನ್ನನ್ನೇ ನಾನು ಹೊಗಳಿಕೊಂಡಂತೆ!
ಪುರಾಣ! ಕೆದಕಲು ಹೋದಷ್ಟೂ ಆಳವಾಗಿ- ಗೊಂದಲಗೊಳಿಸುತ್ತಾ....!
ಹುಡುಕಾಟ ಶುರು ಮಾಡಿದ್ದು ಎರಡು ಕಾರಣಗಳಿಂದ!
ಒಂದು- ನನ್ನ ಹೆಸರು! ಉದ್ಧವ! ಅವನಾರು- ಯಾವ ಪುರುಷಾರ್ಥಕ್ಕೆ ನನಗಾ ಹೆಸರಿಟ್ಟರೋ ಅನ್ನುವ ಕುತೂಹಲ!
ಎರಡು- ಕೃಷ್ಣನ ಉಪದೇಶ! ಭಗವತ್ಗೀತೆಯ ಮೂಲಕ ಅರ್ಜುನನಿಗೂ- ಉದ್ಧವೋಪದೇಶದ ಮೂಲಕ ನ-ನ-ಗೂ!!
ನ-ನ-ಗೂ!! ಹ್ಹ! ಉದ್ಧವ ಅನ್ನುವ ಹೆಸರಿನಿಂದಾಗಿ ದ್ವಾಪರ ಯುಗದ ಉದ್ಧವ ನಾನೇ ಅನ್ನುವ ಭ್ರಮೆ- ನನಗೆ!!
ಕೃಷ್ಣನ ಉಪದೇಶದಲ್ಲಿ ನನ್ನ ತಲೆ ಕೆಡಿಸುತ್ತಿರುವುದು- ನಿಷ್ಕಾಮ ಕರ್ಮ!
ಫಲಾಪೇಕ್ಷೆಯಿಲ್ಲದ ಕರ್ಮವಂತೆ!!
ಹೇಗೆ ಸಾಧ್ಯ?
ಮಾಡಿದ ಕೆಲಸಕ್ಕೆ ಪಕ್ಕಾ ಲೆಕ್ಕ ಹೇಳಿ ಪ್ರತಿಫಲವನ್ನು ಪಡೆದುಕೊಳ್ಳುವವನು ನಾನು!
ಅದೆಷ್ಟುಬಾರಿ ಓದಿದೆ- ಭಗವತ್ಗೀತೆ... ಅರ್ಥವಾಗುವುದಿಲ್ಲ! ಆದರೂ ಹಠ!
ಮತ್ತೊಮ್ಮೆ ಎತ್ತಿಕೊಂಡೆ. ಮಗದೊಮ್ಮೆ....
ಫಲಾಪೇಕ್ಷೆಯಿಲ್ಲದೆ ನೀ-ನು ಮಾಡಬೇಕಾದ ಕರ್ಮ.... ತಲೆಯೊಳಗೆ ಮಿಂಚು.... ಏನೋ ಅರ್ಥವಾಗುತ್ತಿರುವಂತೆ... ಅದರ ಅರ್ಥದ ತೀರಾ ಹತ್ತಿರ ತಲುಪಿದ್ದೇನೆನ್ನುವ ಭಾವ!
ಯಾರೋ ಬಾಗಿಲು ತಟ್ಟಿದರು!
೩
“ಎಷ್ಟು ದಿನ ಬೇಕು?” ಎಂದರು.
“ಒಂದು ತಿಂಗಳು!” ಎಂದೆ.
“ಸರಿ.... ಅಡ್ವಾನ್ಸ್ ಎಷ್ಟು ಕೊಡಲಿ?”
“ಐದು ಲಕ್ಷ!” ಎಂದೆ.
“ಸರಿ! ಅಕೌಂಟಿಗೆ ಟ್ರಾನ್ಸ್‌ಫರ್ ಮಾಡುತ್ತೇನೆ.... ಒಂದು ತಿಂಗಳು.... ಸ್ಕ್ರಿಪ್ಟ್ ಮುಗಿದ ಮೇಲೆ ಬಾಕಿ!” ಎಂದರು.
ಲೇಖಕ ನಾನು! ಬರೆಯುವುದೇ ನನ್ನ ಧರ್ಮ! ಫಲಾಪೇಕ್ಷೆಯಿಲ್ಲದೆ ಬರೆಯಲೆ?
ನಗುಬಂತು! ಈ ಮೆಟಿರಿಯಲಿಸ್ಟಿಕ್ ಪ್ರಪಂಚದಲ್ಲಿ ಫಲಾಪೇಕ್ಷೆಯಿಲ್ಲದೆ ಏನನ್ನೇ ಆದರೂ ಮಾಡಲು ಸಾಧ್ಯವೇ?
ಆದರೂ.... ಈ... ನೀ-ನು ಮಾಡಬೇಕಾದ ಧರ್ಮ ಅನ್ನುವಕಡೆ ನನ್ನ ಯೋಚನೆಗಳು ಕೇಂದ್ರೀಕರಿಸಿದವು!
೪
ಹೆಣ್ಣು ಪಾತ್ರವೇ ಪ್ರಧಾನವಾಗಿರಬೇಕಂತೆ!
ಹೆಣ್ಣು- ಹುಟ್ಟಿದಳು- ಅಪ್ಪ ಅಮ್ಮನಿಗೆ ಖುಷಿನೀಡಿ ಬೆಳೆದಳು- ಪ್ರೇಮದ ಖನಿ ಅವಳು- ಓದಿದಳು- ಕೆಲಸಕ್ಕೆ ಸೇರಿದಳು- ಮದುವೆಯಾದಳು- ಕೆಲಸವೂ ಮನೆಕೆಲಸವೂ ಗಂಡನೂ ಗಂಡನ ಕುಟುಂಬವೂ! ಮಕ್ಕಳನ್ನು ಹೆತ್ತಳು! ಸಾಕಿದಳು! ಪ್ರೇಮದ ಧಾರೆಯನ್ನೇ ಎರೆದಳು. ವಯಸ್ಸಾಯಿತು! ಜೀವನವನ್ನು ಮುಗಿಸಿದಳು!
ತಲೆ ಸಿಡಿಯುತ್ತಿದೆ ಅನ್ನಿಸಿತು! ನಿರ್ಮಾಪಕರಿಗೆ ಕರೆಮಾಡಿದೆ.
“ಒಂದು ತಿಂಗಳು ಸಾಕಾಗುವುದಿಲ್ಲ ಸರ್! ಆರುತಿಂಗಳಾದರೂ ಬೇಕು!” ಎಂದೆ.
ಅತ್ತಲಿಂದ ಮೌನ.
“ನಿಮ್ಮ ಅಡ್ವಾನ್ಸ್ ವಾಪಸ್ ಕೊಡಲು ಸಿದ್ದನಿದ್ದೇನೆ.... ಬೇರೆ ಯಾರಿಂದಲಾದರೂ ಬರೆಸಿ!” ಎಂದೆ.
“ಇಲ್ಲ.... ಕಾಯುತ್ತೇನೆ! ನೀನಲ್ಲದೆ ಬೇರೆ ಯಾರೂ ನನ್ನ ಸಿನೆಮಾಗೆ ಕಥೆ ಬರೆದಿಲ್ಲ! ನೀನೇನೆಂದು ನನಗೆ ಗೊತ್ತು!” ಎಂದರು.
೫
“ಬಾ!” ಎಂದು ಆಹ್ವಾನಿಸಿದಳು.
ಅದ್ಭುತ ಸುಂದರಿ ಅವಳು- ಚಾರುಮತಿ!!
ಮುಖದ ಮುಕ್ಕಾಲು ಬಾಗ ಸುಟ್ಟು ಹೋಗಿತ್ತು! ಬೋಳು ತಲೆಯಲ್ಲಿ ಕೂದಲು ಬೆಳೆಯುವುದಿಲ್ಲವಂತೆ! ಆದರೂ ಅದನ್ನು ಮರೆಮಾಚುವ ಪ್ರಯತ್ನ ಮಾಡಿದವಳಲ್ಲ!
ಅವಳ ಅದ್ಭುತ ನಗು- ಕಣ್ಣಿನ ಹೊಳಪು....
“ಏನಾಯಿತು ಉದ್ಧವಾ?” ಎಂದಳು.
ಅವಳನ್ನೇ ದಿಟ್ಟಿಸಿ ನೋಡಿದೆ. ನನ್ನ ನೋಟದ ಅರ್ಥ ತಿಳಿದಂತೆ ನಕ್ಕಳು.
“ಮನಸ್ಸು ನಿರ್ಮಲವಾಗಿದ್ದಾಗ ಖಂಡಿತಾ ನಿನಗೆ ನನ್ನ ನೆನಪಾಗುತ್ತದೆ! ಆದರೆ ನೋಡಬೇಕೆನ್ನಿಸುವುದು ಮಾತ್ರ ಮನಸ್ಸು ಚಂಚಲಗೊಂಡಾಗಲೇ!” ಎಂದಳು.
“ನಿನ್ನನ್ನು ಅಲ್ಲಿಯೇ ಸಾಯಲು ಬಿಡಬೇಕಿತ್ತು!” ಎಂದೆ.
ನಕ್ಕಳು.
“ನಿನ್ನಿಂದ ಸಾಧ್ಯವಿಲ್ಲದ್ದು ಹೇಳಬೇಡ!- ಹೇಳು, ಏನು ವಿಷಯ?” ಎಂದಳು.
“ನೀನೇ!” ಎಂದೆ.
೬
“ಉದ್ಧವಾ.... ಪರಮಾತ್ಮ ಬೇರೆಯಲ್ಲ- ನಿನ್ನ ಆತ್ಮವೇ ಎಂದು ಅರಿತು ಬದುಕುವುದೇ ಯೋಗ!” ಎಂದೆ.
“ಓಹೋ.... ಅಹಂಬ್ರಹ್ಮಾಸ್ಮಿಯೋ?” ಎಂದು ನಿಲ್ಲಿಸಿ,
“ಆತ್ಮಾನಂದ ಎಂದರೆ ಅರ್ಥವಾಯಿತು! ಆದರೆ ಕೃಷ್ಣಾ.... ಕಣ್ಣು ತೆರೆದರೆ ದುಃಖಮಾತ್ರ ಕಾಣಿಸುವ ಪ್ರಪಂಚದಲ್ಲಿ ಆತ್ಮಾನಂದ ಹೇಗೆ ಸಾಧ್ಯ?” ಎಂದ ಉದ್ಧವ.
ನಕ್ಕೆ! ಯಾರಿಗೆಷ್ಟೇ ವಿವರಿಸಿದರೂ ಅರ್ಥವಾಗದ ವಿಷಯ!
“ಪ್ರಪಂಚದ ದುಃಖಕ್ಕೆ ವಿಮುಖನಾಗಿದ್ದು ಅನುಭವಿಸುವುದಲ್ಲ ಆತ್ಮಾನಂದ! ಲೋಕದ ದುಃಖಕ್ಕೆ ಮಿಡಿಯುವುದರಲ್ಲಿದೆ ಆತ್ಮಾನಂದ!” ಎಂದೆ.
ಓದುವುದನ್ನು ನಿಲ್ಲಿಸಿ ನನ್ನ ಮುಖವನ್ನು ನೊಡಿದಳು ಚಾರುಮತಿ.
ಏನು ಅನ್ನುವಂತೆ ಹುಬ್ಬು ಕುಣಿಸಿದೆ.
“ಇತ್ತೀಚೆಗೆ ನಿನ್ನ ಬರಹ ತುಂಬಾ ಕ್ಲಿಷ್ಟವಾಗುತ್ತಿದೆ!” ಎಂದಳು.
“ನಿಲ್ಲಿಸಿಬಿಡು ಅನ್ನುತ್ತೀಯೋ?” ಎಂದೆ.
“ಹಾಗಲ್ಲ! ಇಷ್ಟು ತಿಳಿವಳಿಕೆ ಇರುವ ನಿನಗೆ.... ನಿಷ್ಕಾಮ ಕರ್ಮದ ಅರ್ಥ ಗೊತ್ತಾಗುತ್ತಿಲ್ಲವೆಂದರೆ ಆಶ್ಚರ್ಯ!” ಎಂದಳು.
“ಗೊತ್ತಿಲ್ಲದೆ ಏನು? ಫಲಾಪೇಕ್ಷೆಯಿಲ್ಲದ ಕರ್ಮ!” ಎಂದೆ.
“ನಿನ್ನ ತಲೆ!” ಎಂದು ಹತ್ತಿರಕ್ಕೆ ಬಂದು ಕಣ್ಣಿನಾಳಕ್ಕೆ ದಿಟ್ಟಿಸಿ ನೋಡಿದಳು. ನಾನೂ ನೋಡಿದೆ!
“ಉದ್ಧವಾ.... ಹೇಳು, ಏನು ವಿಷಯ ಅಂದಾಗ ನೀನೇ ಅಂದೆ! ಯಾಕೆ?” ಎಂದಳು.
“ಹೆಣ್ಣುಪಾತ್ರವೇ ಪ್ರಮುಖವಾಗಿರುವ ಸ್ಕ್ರಿಪ್ಟ್!” ಎಂದೆ.
“ಆ ಹೆಣ್ಣು ಬದುಕಿರುವುದಕ್ಕೆ ಕಾರಣವೇನು?” ಎಂದಳು.
ಅವಳ ಅಭಿಮಾನ ನನಗೆ ತಿಳಿಯಿತು. ಅವಳ ಭಾವವೂ ತಿಳಿಯಿತು! ಆದರೆ ಅವಳ ಉದ್ದೇಶದಂತೆ ನಾನು ಕಥೆ ಬರೆಯುವುದಿಲ್ಲ! ನಾನು ಬರೆಯುವ ಕಥೆಯಲ್ಲಿ ಅವಳೇ ನಾಯಕಿಯಾಗಿರಬೇಕು- ಅವಳದೇ ಪ್ರಾಧಾನ್ಯವಿರಬೇಕು- ನನ್ನದಲ್ಲ!
ನನ್ನ ಭಾವವೂ ಅವಳಿಗೆ ತಾಕಿತೇನೋ....,
“ನಿಷ್ಕಾಮ ಕರ್ಮದ ಅರ್ಥ ನಿನಗಿಂತಲೂ ಸ್ಪಷ್ಟವಾಗಿ ಯಾರಿಗೂ ತಿಳಿದಿರಲಾರದು! ಅದನ್ನು ನಿನ್ನ ಮನಸ್ಸು ಒಪ್ಪಿಕೊಳ್ಳುತ್ತಿಲ್ಲ ಅಷ್ಟೆ! ಆದರೆ ಅದೇ ನಿಜ!” ಎಂದಳು.
೭
ಶಾರೀರಿಕ ದೃಢತೆ ಮಾನಸಿಕ ಸ್ಥಿರತೆಯನ್ನು ಹೆಚ್ಚಿಸುತ್ತದೆ. ಹಾಗೆಯೇ.... ಮಾನಸಿಕ ದೃಢತೆ ಶಾರೀರಿಕ ದೌರ್ಬಲ್ಯವನ್ನು ಮೆಟ್ಟಿ ನಿಲ್ಲುತ್ತದೆ!
ದಿನಕ್ಕೆ ಆರುಗಂಟೆ ಸಮಯ ನಿದ್ರೆ! ಅರ್ಧಗಂಟೆಯ ವ್ಯಾಯಾಮ- ಪುಸ್ತಕಗಳ ಓದು- ಬರವಣಿಗೆ- ಸಂಚಾರ- ನನ್ನ ಆಜನ್ಮಸಿದ್ಧ ಹಕ್ಕು!
ಹೇಳಿದೆನಲ್ಲಾ? ಉದ್ಧವ ಅನ್ನುವ ಹೆಸರಿನಿಂದಾಗಿ ಪ್ರಾರಂಭವಾದ ಹುಡುಕಾಟ ನನ್ನದು!
ಹುಡುಕುತ್ತಿರುವುದು ಏನನ್ನು?
ಬದುಕನ್ನು!
ಬದುಕನ್ನು ಸಾರ್ಥಕ ಪಡಿಸಿಕೊಳ್ಳುವುದು ಹೇಗೆ?
ತಿಳಿಯದು! ಆದರೆ ಬದುಕನ್ನು ಸಾರ್ಥಕ ಪಡಿಸಿಕೊಂಡವಳೊಬ್ಬಳಬಗ್ಗೆ ಹೇಳಲೇ ಬೇಕು ನಾನು!
ಚಾರುಮತಿ!
೮
“ಇದು ನಿಮ್ಮ ಮನೆಯೇ?”
“ಹೌದು!”
“ಏನು ಮಾಡುತ್ತಿದ್ದೀರಿ?”
“ನೀನು ಯಾರು?”
“ನಾನು ಉದ್ಧವ!”
“ನಿನಗೇನು ಕೆಲಸ ಇಲ್ಲಿ?”
“ನಿಮ್ಮ ಕೆಲಸವನ್ನು ತಡೆಯುವುದು!”
“ಪರಮಾತ್ಮನಿಂದಲೂ ಸಾಧ್ಯವಿಲ್ಲ!”
“ಅದಕ್ಕೇ ನಾನು ಬಂದಿದ್ದೇನೆ!”
ವ್ಯಂಗ್ಯವಾಗಿ ನಕ್ಕ ಆತ!
“ದ್ವಾಪರ ಯುಗದಲ್ಲಿ ಯಾದವರ ಸಂರಕ್ಷಣೆಯನ್ನು ಉದ್ಧವನಿಗೆ ಒಪ್ಪಿಸಿ ಶ್ರೀಕೃಷ್ಣ ನಿರ್ವಾಣ ಹೊಂದಿದನಂತೆ! ಉದ್ಧವ ಸಂರಕ್ಷಿಸಿದನೇ?” ಎಂದ.
ಗಲಿಬಿಲಿಗೊಂಡೆ. ಆತ ಮುಂದುವರೆಸಿದ,
“ಇಲ್ಲ! ಸಾಧ್ಯವಾಗಲಿಲ್ಲ! ಹಾಗೆಯೇ ನಿನಗೂ!”
ನನ್ನ ಗೊಂದಲವನ್ನು ನೋಡಿ,
“ನಿಮ್ಮ ಕೆಲಸವನ್ನು ತಡೆಯುವುದು ಎಂದೆ! ನಾನೇ ತಡೆಯಲಾರದಷ್ಟು ನಿಸ್ಸಹಾಯಕ! ನೀನಾದರೂ ತಡೆದರೆ ನನ್ನಷ್ಟು ಸಂತೋಷಿಸುವವನು ಯಾರೂ ಇರುವುದಿಲ್ಲ! ಆದರೆ ನಾನು ಮಾಡುತ್ತಿರುವುದು- ಅವಳ ಸಂರಕ್ಷಣೆ!” ಎಂದ.
“ಯಾರ ಸಂರಕ್ಷಣೆ? ಯಾರು ನೀವು?”
“ಅವಳ ತಂದೆ!”
ಸಂಶಯದಿಂದ ಆತನನ್ನು ನೋಡಿದೆ. ವಿಶಾದದಿಂದ ನಕ್ಕ! ಕಣ್ಣೀರು ಧಾರಾಕಾರವಾಗಿ ಹರಿಯಲಾರಂಭಿಸಿತು.
“ಯಾರ ತಂದೆ?” ಎಂದೆ.
“ಚಾರುಮತಿ!” ಎಂದರು.
ಆತನೊಬ್ಬ ಹುಚ್ಚ ಅನ್ನಿಸಿತು!
ಹೇಳಿದೆನಲ್ಲಾ? ಸಂಚಾರ ನನ್ನ ಆಜನ್ಮಸಿದ್ಧ ಹಕ್ಕು! ಸಮಯದ ಲೆಕ್ಕವಿಡದೆ ಒಂದು ಪ್ರಯಾಣ ಹೊರಟಿದ್ದೆ. ಎಷ್ಟುದಿನ ಕಳೆದಿರಬಹುದೋ ತಿಳಿಯದು! ಹಳ್ಳಿಯೊಂದನ್ನು ದಾಟಿ ಹೋಗುತ್ತಿರುವಾಗ ಈ ವ್ಯಕ್ತಿಯ ದರ್ಶನವಾಯಿತು! ಅದೂ ಆಕಸ್ಮಿಕವಾಗಿ- ಮೂಗಿಗೆ ಪೆಟ್ರೋಲಿನ ವಾಸನೆ ಬಡಿದದ್ದರಿಂದ!
ಪೆಟ್ರೋಲಿನ ವಾಸನೆ ಜೊತೆಗೆ ವ್ಯಕ್ತಿಯೊಬ್ಬ ಮನೆಯಸುತ್ತಾ ಕ್ಯಾನಿನಿಂದ ಪೆಟ್ರೋಲನ್ನು ಎರಚುತ್ತಿರುವುದು ಕಂಡು ಗಾಡಿ ನಿಲ್ಲಿಸಿ ಬಂದಿದ್ದೆ!
ಆತನೊಬ್ಬ ಹುಚ್ಚ ಅನ್ನುವ ತೀರುಮಾನಕ್ಕೆ ಬಂದಮೇಲೆ- ಏನಾದರೂ ಮಾಡಿಕೊಳ್ಳಲಿ ಎಂದು ಮರಳಲು ತಿರುಗಿದೆ.
ಆತ ಬೆಂಕಿಕಡ್ಡಿಯನ್ನು ಗೀರಿ ಮನೆಯಕಡೆ ಎಸೆದ!
ನಾನು ನೋಡುತ್ತಾ ನಿಂತೆ.
ಬೆಂಕಿ ಪೂರ್ತಿಯಾಗಿ ಮನೆಯನ್ನು ಆವರಿಸಿತು.
ಆತ ಅಳುತ್ತಿದ್ದ.
ವಿಲಕ್ಷಣ ಘಟನೆ! ಏನು ಮಾಡಬೇಕೆಂದು ತಿಳಿಯದೆ ನೋಡುತ್ತಾ ನಿಂತೆ. ತಟ್ಟನೆ,
“ಅಯ್ಯೋ ಮಗಳೇ....!” ಎನ್ನುತ್ತಾ ಆತ ಮನೆಯಕಡೆ ಓಡಿದ.
ಗಾಭರಿಗೊಂಡೆ. ಆತನೆಡೆಗೆ ಓಡಿದೆ. ಜನ ಸೇರಿದರು.
ಪಂಪ್‌ಸೆಟ್ ಆನ್ ಮಾಡಿದರು. ಅಲ್ಲಿಂದ ಇಲ್ಲಿಂದ ನೀರುತಂದು ಸುರಿದರು. ಮಣ್ಣನ್ನು ಎರಚಿದರು. ಬೆಂಕಿಯ ಆವೇಶ ಇಳಿದಾದಮೇಲೆ ಮನೆಯೊಳಕ್ಕೆ ಹೋದೆ.
ಬಾಯಿಗೆ ಬಟ್ಟೆ ತುರುಕಿ- ಕೈಕಾಲುಗಳನ್ನು ಕಟ್ಟಿದ ಅವಸ್ತೆಯಲ್ಲಿ ಯುವತಿಯೊಬ್ಬಳು ಹೊರಳಾಡುತ್ತಿದ್ದಳು! ವ್ಯಕ್ತಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದ! ಬೆಂಕಿಗೆ ಅವಳಮೇಲೆ ಕರುಣೆ ಇದ್ದಂತೆ ತೋರಲಿಲ್ಲ- ಆತನಮೇಲೂ!
ಕೆಲವು ಯುವಕರು ಧೈರ್ಯಮಾಡಿ ಒಳನುಗ್ಗಿದರು. ಎಲ್ಲರೂ ಸೇರಿ ಅವಳನ್ನೂ ಆತನನ್ನೂ ಆಸ್ಪತ್ರೆಗೆ ಸಾಗಿಸಿದೆವು. ಅಷ್ಟೇ.... ಜನ ಹೇಗೆ ಮಾಯವಾದರೋ ತಿಳಿಯಲಿಲ್ಲ!
ನಾಲಕ್ಕನೇಯ ದಿನ ಆತ ಆಸ್ಪತ್ರೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ!
ನಾನು ಅಲ್ಲಿಯೇ ಉಳಿದೆ! ಜೊತೆಗೆ ಅವಳು-
ಚಾರುಮತಿ!
೯
ವ್ಯಕ್ತಿತ್ವವಿರುವ ಹೆಣ್ಣು ಎಂದಿಗೂ ಸುಂದರಿಯೇ!
ಒಂದು ತಿಂಗಳು ಕಾಯಬೇಕಾಯಿತು- ಅವಳ ವ್ಯಕ್ತಿತ್ವದ ಪರಿಚಯವಾಗಲು!
“ನಾನು ಅಪ್ಪನನ್ನು ದೂರುವುದಿಲ್ಲ!” ಎಂದಳು.
ಅರ್ಥವಾಗದೆ ನೋಡಿದೆ.
“ನೀವು ಬರಬಾರದಿತ್ತು!” ಎಂದಳು.
“ನಿಮ್ಮಬಗ್ಗೆ ಹೇಳಿ!” ಎಂದೆ.
ದೇಹದ ಮುಕ್ಕಾಲುಬಾಗ ಸುಟ್ಟಿದ್ದರೂ ಆ ಹೆಣ್ಣು ನನ್ನನ್ನು ನೋಡಿದ ನೋಟ.... ನಕ್ಕ ನಗು....
“ಚಾರುಮತಿ ಅನ್ನೋ ಹೆಸರು ಕೇಳಿಲ್ಲವೇ? ಐದಾರು ತಿಂಗಳ ಮುಂಚೆ.... ಇಷ್ಟು ಪ್ರಸಿದ್ಧವಾದ ಹೆಸರು ಯಾವುದೂ ಇರಲಾರದು!” ಎಂದಳು.
ಸಣ್ಣ ನಡುಕ ನನ್ನೊಳಗೆ! ನನ್ನ ಕಣ್ಣುಗಳಲ್ಲಿ ಯಾವ ಭಾವವನ್ನು ಕಂಡಳೋ....
“ಆಸಕ್ತಿ ಮಾಯವಾಯಿತೆ?” ಎಂದಳು.
“ಇಲ್ಲ ಇಲ್ಲ... ಪ್ರಪಂಚವನ್ನು ನಾನು ನಂಬುವುದಿಲ್ಲ! ನಿಜವಾದ ನಿಜವೇನೋ ತಿಳಿಯಬೇಕೆನ್ನುವ ಆಸಕ್ತಿಯಿದೆ!” ಎಂದೆ.
೧೦
ಸುಮಾರು ಒಂದೂವರೆ ವರ್ಷ ಮುಂಚೆ ಒಂದು ಘಟನೆ ನಡೆಯಿತು!
ಹದಿನೇಳು, ಹತ್ತೊಂಬತ್ತು, ಇಪ್ಪತ್ತೊಂದು ವರ್ಷದ ಅಣ್ಣ ತಮ್ಮಂದಿರು ಸೇರಿ ಒಬ್ಬಳು ಹೆಣ್ಣನ್ನು- ನಲವತ್ತೈದು ವರ್ಷದ ಹೆಣ್ಣನ್ನು- ರೇಪ್ ಮಾಡಿದರು!
ಆಕೆಯ ಹೆಸರು ಈ ಕಥೆಗೆ ಅಗತ್ಯವಿಲ್ಲ!
ಆ ಯುವಕರ- ಯುವಕರ ಮನೆಯವರ- ಅರಿಯದೆ ಆ ಸಮಯದಲ್ಲಾದ ತಪ್ಪೆನ್ನುವ ಬೇಡಿಕೆಯನ್ನು ಮನ್ನಿಸಿ ಅವರನ್ನು ಕ್ಷಮಿಸಿದರು ಮಹಾತಾಯಿ!
ಆದರೆ ಪ್ರಪಂಚ ಪರೋಕ್ಷವಾಗಿ ಆಕೆಯನ್ನು ಬಹಿಷ್ಕರಿಸಿತು! ಆ-ಕೆ-ಯ-ನ್ನು!
ಗಂಡ- ಮಗಳು- ತಾನು! ಚಿಕ್ಕದಾದ ಚೊಕ್ಕ ಕುಟುಂಬವದು.
ಆಕೆಯನ್ನು ನೋಡುವ ಪ್ರಪಂಚದ ದೃಷ್ಟಿ ಬದಲಾಯಿತು- ಕ್ರೂರವಾಯಿತು- ಅವಳೇ ತಪ್ಪು ಮಾಡಿದಂತೆ!
ಆದರೂ ಹೇಗೋ ಬದುಕನ್ನು ದೂಕಿದರು.
ಯುವಕರೊಳಗಿನ ಕಾಮ ಪಿಶಾಚಿ ಮತ್ತೊಮ್ಮೆ ವಿಜೃಂಭಿಸಿದಾಗ- ಪ್ರತಿಕ್ರಿಯಿಸಿದಳು ಆಕೆ- ಪೋಲೀಸರಿಗೆ ದೂರು ನೀಡಿದಳು!
ಅವಳು ಮಾಡಿದ ತಪ್ಪು!
ವಿಚಾರಣೆಯ ನೆಪದಲ್ಲಿ....
ಜೀವನ ದುಸ್ತರವಾಯಿತು!
ಕೇಸನ್ನು ವಾಪಸ್ ಪಡೆದುಕೊಳ್ಳದಿದ್ದರೆ ಮಗಳನ್ನೂ ರೇಪ್ ಮಾಡುವುದಾಗಿ ಹೆದರಿಸಿದರು ಯುವಕರು!
ಆಕೆ ಹೆದರಲಿಲ್ಲ... ಕೇಸನ್ನು ಮುಂದುವರೆಸಿದರು.
ಯುವಕರು ಹೇಳಿದಂತೆ ಮಾಡಿದರು!
ಆರುತಿಂಗಳ ಕೆಳಗೆ.... ಅಪ್ಪ ಅಮ್ಮನ ಕೈಕಾಲುಗಳನ್ನು ಕಟ್ಟಿ ಅವರ ಕಣ್ಣೆದುರಿಗೆ ಚಾರುಮತಿಯನ್ನು ರೇಪ್ ಮಾಡಿದರು!
ಇದನ್ನು ಹೇಗೆ ಕ್ಷಮಿಸುವುದು?
ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಅಮ್ಮ ಕ್ರಮವನ್ನು ಕೈಗೊಂಡರು- ಆ ಮೂರು ಜನ ಯುವಕರನ್ನು ಮುಗಿಸಿದರು!
ಆದರೂ ಅಪ್ಪ ಮಗಳಿಗೆ ಜೀವನ ಸುಗಮವಾಗಲಿಲ್ಲ! ಜನರ ನೋಟ- ಕೆಲವರು ದುಡ್ಡುಕೊಡಲೂ ತಯಾರು- ಅಮ್ಮ ಮಗಳು ನಾಟಕವಾಡುತ್ತಿದ್ದಾರೆಂದು!
ಅಪ್ಪ ನಿಸ್ಸಹಾಯಕ! ಕೊನೆಗೆ ತೀರುಮಾನವೊಂದನ್ನು ತೆಗೆದುಕೊಂಡರು- ಆ ತೀರುಮಾನದಂದೇ.... ನಾನವರನ್ನು ಭೇಟಿಯಾಗಿದ್ದು!
೧೧
“ಹೇಳಿದೆನಲ್ಲಾ? ನೀವು ಬರಬಾರದಿತ್ತು!” ಎಂದಳು ಚಾರುಮತಿ.
ನಾನವಳ ಮುಖವನ್ನೇ ನೋಡಿದೆ.
ಹೇಗೆ? ಹೇಗೆ? ಹೇಗೆ? ಅವಳ ಜೀವನ....
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದಮೇಲೆ ಅವಳನ್ನು ನನ್ನೊಂದಿಗೆ ಕರೆತಂದೆ.
ಸಹಾಯ ಮಾಡುವ ಉದ್ದೇಶ ನನಗಿರಲಿಲ್ಲ! ಕಷ್ಟ ಕೊಡುವ ಉದ್ದೇಶವಷ್ಟೇ...!
ನಾನು ನಡೆಸುತ್ತಿದ್ದ ಅನಾಥಾಲಯದ ಸಂಪೂರ್ಣ ಹೊಣೆಗಾರಿಕೆಯನ್ನು ಅವಳಿಗೆ ವಹಿಸಿದೆ!!
ಅದರ ಹೊಣೆಗಾರಿಕೆಯೊಂದಿಗೆ... ಅವಳೇ ಸೈಕಾಲಜಿಯಲ್ಲಿ ಡಾಕ್ಟರೇಟ್ ಮಾಡಿದಳು! ಆನ್ಲೈನ್‌ನಲ್ಲಿ ನೋಡಿ ಆಯೋಧನ ವಿದ್ಯೆಯನ್ನು ಕಲಿತಳು.
ಹೆಣ್ಣುಮಕ್ಕಳಿಗೆ ಉಚಿತವಾಗಿ ಪಾಠವನ್ನು ಮಾಡಿದಳು.... ಟೈಪಿಂಗ್, ಸ್ಟಿಚಿಂಗ್... ಏನು ಹೇಳಲಿ? ಅವಳಿಗೆ ತಿಳಿಯದ ವಿದ್ಯೆಯಿದೆಯೇ....
ಈಗಿನ ನನ್ನ ಆದಾಯದ ಅರ್ಧಕ್ಕಿಂತ ಹೆಚ್ಚು ಅವಳ ಅಧ್ವಾನ...!
೧೨
ಓದುವುನ್ನು ನಿಲ್ಲಿಸಿ ನನ್ನೊಂದಿಗೆ ಜಗಳಕ್ಕೆ ನಿಂತಳು ಚಾರುಮತಿ!
“ನಮ್ಮಮ್ಮ ಸಾಯುವಾಗ ಆ ಮೂರು ಜನ ರೇಪಿಸ್ಟ್‌ಗಳು ಬದುಕಿದ್ದರು! ಅಮ್ಮ ಸಾಯುವಾಗ ಏನು....? ನಮ್ಮಪ್ಪ ನನ್ನ ಸುಡುವಾಗಲೂ... ನೀನು ನನ್ನ ಆಸ್ಪತ್ರೆಯಿಂದ ಕರೆತರುವಾಗಲೂ ಬದುಕಿದ್ದರು!!” ಎಂದಳು.
“ಕಥೆ ಕಣೆ!” ಎಂದೆ.
ನನ್ನ ತೀರಾ ಸಮೀಪಕ್ಕೆ ಬಂದು- ಅವಳ ಎದೆ ನನಗೆ ತಾಕುವಂತೆ ನಿಂತು... ತಲೆಯೆತ್ತಿ ನನ್ನ ಕಣ್ಣುಗಳನ್ನೇ ನೋಡುತ್ತಾ....,
“ಸಂಶಯವಿತ್ತು ನನಗೆ! ಏನಂದುಕೊಂಡಿದ್ದೀಯ ಉದ್ಧವಾ? ನಾನವರಬಗ್ಗೆ ವಿಚಾರಿಸುವುದಿಲ್ಲ ಅಂದುಕೊಂಡೆಯಾ? ಅವರು ಬದುಕಿಲ್ಲ! ನಿಜ ಹೇಳು....!” ಎಂದಳು.
“ನನಗೆ ತಿಳಿಯದು.... ಮೂರು ಜನರಿಂದ ರೇಪ್‌ಗೆ ಒಳಗಾದರೂ.... ಎಪ್ಪತ್ತು ಭಾಗ ಸುಟ್ಟು ಕರಕಲಾದರೂ.... ಜೀವನವನ್ನು ಗೆದ್ದ ಹುಡುಗಿಯೇ ನನ್ನ ಕಥೆಯ ನಾಯಕಿ!” ಎಂದೆ.
ಅವಳ ಕಣ್ಣಿನಿಂದ ಜಾರಿದ ಕಣ್ಣೀರಿನಕಡೆಗೆ ನನ್ನ ತುಟಿ ಚಲಿಸಿತು!
೧೩
ಆರು ತಿಂಗಳಲ್ಲ! ಒಂದುವರ್ಷ ಬೇಕಾಯಿತು ಸ್ಕ್ರಿಪ್ಟ್ ಮುಗಿಸಲು!
ಹಾಗೆ.... ಸುಮಾರು ಹತ್ತುಸಾವಿರ ಹೆಣ್ಣುಮಕ್ಕಳ ಪೋಷಣೆಯನ್ನು ಅವಳೊಬ್ಬಳೇ ಮಾಡುತ್ತಿದ್ದಾಳೆ- ಎಂದು ನಿಲ್ಲಿಸಿದೆ.
ಮುಂದೆ? ಎಂದರು ಪ್ರೊಡ್ಯೂಸರ್!
ಚಾರುಮತಿಯನ್ನು ಮದುವೆಯಾಗಲಿದ್ದೇನೆ ಎಂದು ಹೇಳಲಿಲ್ಲ! ಹೇಳಿದರೆ ಮತ್ತೆ ಕಥೆಯ ಕ್ಲೈಮಾಕ್ಸ್ ಬದಲಾಗುವ ಅವಕಾಶವಿದೆ!
“ಕೃಷ್ಣನ ದೃಷ್ಟಿಯಲ್ಲಿ ಉದ್ಧವನ ಕಥೆ ಬರೆಯಬೇಕೆಂದುಕೊಂಡಿದ್ದೇನೆ!” ಎಂದೆ.
೧೪
ನಾನು ಉದ್ಧವನಿಗೆ- ಅರ್ಜುನನಿಗೆ- ಆ ಮೂಲಕ ಪ್ರಪಂಚಕ್ಕೆ ಹೇಳಿದ್ದೇ ಅದು!
ನಿಷ್ಕಾಮ ಕರ್ಮವೆಂದರೆ-
-ನಿನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಸ್ವಾರ್ಥವನ್ನು ಬಿಟ್ಟು ನೀನು ಪ್ರಪಂಚಕ್ಕಾಗಿ ಮಾಡಲೇಬೇಕಾದ ಧರ್ಮ!
ಯಾಕೆ ಮಾಡಬೇಕು?
ನಿನ್ನಿಂದ ಸಾಧ್ಯ ಅದಕ್ಕೆ!
ಓದುವುದನ್ನು ನಿಲ್ಲಿಸಿ,
“ಉದ್ಧವಾ.... ಧರ್ಮ ನಶಿಸುವಾಗ ಅವತಾರವೆತ್ತುತ್ತೇನೆ ಎಂದು ಶ್ರೀಕೃಷ್ಣ ಹೇಳಿದ್ದರ ಅರ್ಥ... ಸತ್ತು ಮಲಗಿರುವ ಮನುಷ್ಯ ಮನಸ್ಸಿನ ಅರಿವು ಎಚ್ಚರಗೊಳ್ಳುವುದು ಎಂದು ಕೂಡ ಆಗಿರಬಹುದು- ಅಲ್ಲವೇ?” ಎಂದಳು ಚಾರುಮತಿ.
“ಅದನ್ನು ಹೇಳತೊಡಗಿದರೆ ಅದು ಮತ್ತೊಂದು ಮಹಾಕಾವ್ಯವಾಗುತ್ತದೆ! ಮಲಗು!” ಎಂದೆ.
ಕಣ್ಣುಮುಚ್ಚಿ ಮಲಗಿದಳು. ಅವಳ ಮುಖದಮೇಲಿನ ಪ್ರಶಾಂತತೆಯೇ....
ನನ್ನ ನಿಷ್ಕಾಮ ಕರ್ಮದ ಫಲ- ಅದಕ್ಕಿಂತ ಏನು ಬೇಕು?
-----------
Comments
Post a Comment