ದ್ವೈತಾದ್ವೈತ!- ಕಥೆ

ದ್ವೈತಾದ್ವೈತ!

ಕೆಲವೊಮ್ಮೆ ಅನ್ನಿಸುತ್ತದೆ- ಏಕಾಂಗಿ ನಾನೆಂದು!

ಆದರೆ ಹೇಗೆ?

ಯಾರದೋ ಸಂರಕ್ಷಣೆಯಲ್ಲಿರುವಂತೆಯೂ ಅನ್ನಿಸುತ್ತದಲ್ಲ?

ಹೊರಗೆ ನಿಂತು ನೋಡಿದರೆ..., ಯಾವುದರಿಂದ ಹೊರಗೆ? ನನ್ನಿಂದ ನಾನೇ- ಹೊರಗೆ ನಿಂತು ನೋಡಿದರೆ ಯಾವ ಕ್ಷಣದಲ್ಲಿಯೂ ನಾನು ಏಕಾಂಗಿಯಾಗಿರಲಿಲ್ಲ!

ಈ ಯೋಚನೆಯಿಂದ ಪ್ರಾರಂಭವಾಗಿ ಕ್ಷಣಕ್ಷಣಕ್ಕೂ ಅದಲುಬದಲಾಗುತ್ತಿದ್ದ ಮತ್ತೊಂದು ಯೋಚನೆ, ಯೋಚನೆಗಿಟ್ಟುಕೊಂಡಿತು!!

ದ್ವೈತ- ಅದ್ವೈತ!

ದ್ವೈತ ಅಂದರೆ ದ್ವಿ- ಅಂತೆ! ಅಂದರೆ ಎರಡು ಎಂದು!

ಅದ್ವೈತ ಅಂದರೆ ದ್ವಿ- ಅಲ್ಲದ್ದು ಅಂತೆ! ಅಂದರೆ ಒಂದು ಎಂದು!

ತತ್ತ್ವರೂಪವಾದ ವಿಶದೀಕರಣವನ್ನು ಬಿಡುತ್ತೇನೆ!

ನನ್ನ ಯೋಚನೆ...,

ಅಹಂ ಬ್ರಹ್ಮಾಸ್ಮಿ!

ನಾನೇ ಬ್ರಹ್ಮ ಅನ್ನುವುದಾದರೆ..., ನಾನೂ ನನ್ನ ಯೋಚನೆಯೂ ಎಲ್ಲವೂ ಒಂದೇ..., ಕೆಟ್ಟ ಯೋಚನೆ ಬಂದರೆ ಅದೂ ದೈವ ಪ್ರೇರಿತವೇ!

ಬ್ರಹ್ಮ ಬೇರೆ ನಾನು ಬೇರೆ ಅನ್ನುವುದಾದರೆ..., ಯೋಚನಾರೂಪೇಣ ನಾನು ಸ್ವತಂತ್ರ!

ಸರಿ..., ದ್ವೈತವನ್ನು ಆಚರಿಸುವ ಅದ್ವೈತಿ ನಾನು ಅನ್ನುವುದಾದರೆ...,

ಯಾರು?” ಹೆಣ್ಣು ಶಬ್ದ!

ನಾನು!” ಎಂದೆ.

ನೀನು ಯಾರು? ನಿನಗಿಲ್ಲೇನು ಕೆಲಸ?”

ನೀನು ದೇವಿಯೇ?”

ಸಂಶಯವೇನು?”

ನೀನು ಯಾರೆಂದು ಕೇಳಿದ್ದೇ ಸಂಶಯ!” ಎಂದೆ.

ಮುಗುಳುನಕ್ಕರು ತಾಯಿ!

ವೀರ....!” ಎಂದರು.

ತಿಳಿದಿದ್ದೂ ಯಾಕೆ ಕೇಳಿದಿರಿ ತಾಯಿ?” ಎಂದೆ.

ಪ್ರಪಂಚ ಒಂದು ನಿಯಮಕ್ಕೆ ಬದ್ಧವಾಗಿದೆ!” ಎಂದರು.

ತಾಯಿ....” ಎಂದೆ. ಆದಷ್ಟು ಬೇಗ ನನ್ನ ಸಂಶಯವನ್ನು ನಿವಾರಿಸಿಕೊಳ್ಳಬೇಕೆಂಬ ಆತುರ!

ಮುಗುಳುನಕ್ಕರು. ನನ್ನ ಮನಸ್ಸಿನ ಭಾವನೆ ತಿಳಿಯದಿರಲು ಅವರೇನು ಸಾಮಾನ್ಯ ಮನುಷ್ಯಳೇ?

ನೀನಿಲ್ಲಿಗೆ ಮೊದಲ ಬಾರಿ ಬಂದ ದಿನ ನೆನಪಿದೆಯೇ?” ಎಂದರು.

ಇಲ್ಲಿಗೆ ಎಂದರೆ ದೇವಸ್ಥಾನ! ಅದು ಯಾವ ದೇವಸ್ಥಾನವಾದರೂ ಆಗಿರಬಹುದು! ಎಲ್ಲರೂ ಒಂದೇ ಅಲ್ಲವೇ?

ನೆನಪಿದೆ!” ಎಂದೆ.

ಯಾಕೆ ಬಂದೆ?”

ಅದು ನನ್ನ ಪ್ರಶ್ನೆ ದೇವಿ!!!”

ನಿಯಮ!

ಸಿಂಹ ಜಿಂಕೆಯನ್ನು ಬೇಟೆಯಾಡಿ ಕೊಂದು ತಿನ್ನುತ್ತದೆ! ಅದು ನಿಯಮ, ಪ್ರಕೃತಿದತ್ತವಾದ ನಿಯಮ!

ಮನುಷ್ಯ ಮದುವೆಯಾಗುತ್ತಾನೆ!! ಅದೂ ನಿಯಮವೇ..., ಮನುಷ್ಯನೇ ರೂಪಿಸಿಕೊಂಡ ನಿಯಮ!

ಮನುಷ್ಯನಿಗೇಕೆ ಆ ಚಿಂತೆ ಬರಬೇಕು?

ಮದುವೆ- ಒಂದು ಉದಾಹರಣೆ ಅಷ್ಟೆ...!

ಅದು ಮಾಡಬೇಕು ಇದು ಮಾಡಬೇಕು..., ಹೀಗೆಯೇ ಇರಬೇಕು....?

ಅವನೊಳಗೆ ಆ ಚಿಂತೆ ಬರುವುದೂ ದೈವ ಪ್ರೇರಿತವಲ್ಲವೇ?

ದೇವರೇ ಅವನಿಂದ ಹಾಗೆ ಯೋಚಿಸುವಂತೆ ಮಾಡುವುದಲ್ಲವೇ?

ಒಬ್ಬ ಮನುಷ್ಯ ಕೆಟ್ಟ ರೀತಿಯಲ್ಲಿ ಯೋಚಿಸುವಂತೇಕೆ ಮಾಡಬೇಕು?

ವೀರಾ...!” ಎಂದರು ದೇವಿ.

ಏನು ದೇವಿ...?”

ನಿನ್ನ ಯೋಚನಾ ಪಥದಲ್ಲಿ ಏನೋ ಕೊರತೆಯಿದೆ!”

ಅದೇ..., ಅದೇನು ಅನ್ನುವುದೇ ನನ್ನ ಪ್ರಶ್ನೆ!”

ದ್ವೈತಾದ್ವೈತಗಳಲ್ಲಿ, ನಿನ್ನ ಯೋಚೆನೆ ಏನು- ಅನ್ನವುದು ಪ್ರಸಕ್ತಿಯಲ್ಲ!” ಎಂದರು.

ಅರ್ಥವಾಗಲಿಲ್ಲ.

ಮುಗುಳುನಕ್ಕರು ದೇವಿ.

ವೀರಾ..., ಈಗ ನಿನ್ನೊಳಗಿನ ಭಾವನೆ ನನಗೆ ತಿಳಿಯಿತು! ಪ್ರಪಂಚದಲ್ಲಿ ಇಷ್ಟೊಂದು ನಿರೀಶ್ವರವಾದಿಗಳಿದ್ದಾರೆ ಯಾಕೆ? ಅವರೂ ದೇವರನ್ನು ನಂಬುವಂತೆ ದೇವರೇ ಅವರಮೂಲಕ ಹೊಳೆಯಿಸಬಹುದಲ್ಲವೇ? ಅನ್ನುವುದೇ ಅಲ್ಲವೇನು ನಿನ್ನ ಚಿಂತೆ?”

ಮುಗುಳುನಕ್ಕೆ.

ಹೇಳುತ್ತೇನೆ ಕೇಳು.....! ಈ ಬ್ರಹ್ಮಾಂಡವು ಕೇವಲ ಮಾನವನ ಕಲ್ಪನೆಗೆ ಅತೀತ! ಅವನ ಅರಿವಿಗೆ ಬಂದಿರುವುದು ಸಾವಿರ ಕೋಟಿಯಲ್ಲಿ ಒಂದು ಪಾಲೂ ಇಲ್ಲವೇನೋ....!” ಎಂದು ನಿಲ್ಲಿಸಿ...,

ದೇವರ ಸೃಷ್ಟಿ ಅಂದಮೇಲೆ..., ಇಂತದ್ದು ಇಂತದ್ದಕ್ಕೆ ಅನ್ನುವುದು ನಿಯಮವಲ್ಲವೇ?” ಎಂದು ನನ್ನ ಕಣ್ಣಿನಲ್ಲಿ ಸಂಶಯವನ್ನು ಕಂಡು...,

ನೀರು- ಕುಡಿಯಲು, ವಾಯು- ಉಸಿರಾಟಕ್ಕೆ, ಆಹಾರ- ಸೇವನೆಗೆ....!” ಎಂದು ನಿಲ್ಲಿಸಿದರು.

ಏನೋ ಹೊಳೆಯಿತು. ನನಗೆ ಅರ್ಥವಾಯಿತೆಂದು ದೇವಿಗೂ ಅರ್ಥವಾಯಿತು!

ನನ್ನ ಮನದಲ್ಲಿನ ಆಸೆಯನ್ನು ತಿಳಿದು.... ನನ್ನನ್ನು ತಮ್ಮೆದೆಗೆ ಒತ್ತಿಕೊಂಡು ಮುತ್ತೊಂದನ್ನು ಕೊಟ್ಟು ಕಾಣೆಯಾದರು ದೇವಿ!

ದ್ವೈತ- ಅದ್ವೈತ!

ನಾನೇಕೆ ಏಕಾಂಗಿಯಲ್ಲ?

ನಿಯಮ!!

ಹುಲಿಗೆ ಜಿಂಕೆ ಆಹಾರ! ಜಿಂಕೆಗೆ ಹುಲ್ಲು ಆಹಾರ! ಇದೊಂದು ನಿಯಮವಾದರೆ...,

ಕಾಲು ನಡೆಯಲು! ಕೈ ಅಗತ್ಯಗಳನ್ನು ಪೂರೈಸಿಕೊಳ್ಳಲು! ಆಹಾರಕ್ಕಾಗಿ ಹೊಟ್ಟೆ....!

ಹಾಗೆಯೇ...,

ಮಿದುಳು- ಯೋಚಿಸಲು!!

ಇದೇ ದೇವಿ ನನಗೆ ಕೊಟ್ಟ ಅರಿವು!

ದೇವರು ಮಿದುಳನ್ನು ಕೊಟ್ಟಿರುವುದು ಯೋಚಿಸಲು! ದೇವರೇ ಯೋಚಿಸುವುದಾದರೆ ನಮಗೇಕೆ ಮಿದುಳು?

ದೇವರೇಕೆ ಕೈ ಕೊಟ್ಟ ಎಂದು ಕೇಳುವುದಿಲ್ಲ..., ಅದನ್ನು ಆಯಾಚಿತವಾಗಿ ಬಳಸಿಕೊಳ್ಳುತ್ತೇವೆ.

ಹಾಗೆಯೇ..., ಮಿದುಳನ್ನು ಕೊಡುವುದಷ್ಟೇ ದೇವರ ಕೆಲಸ! ಅದನ್ನು ಯಾವ ರೀತಿಯ ಯೋಚನೆಗಳಿಂದ ತುಂಬಿಸಿಕೊಳ್ಳಬೇಕೆನ್ನವುದು ನಮಗೆ ಬಿಟ್ಟದ್ದು- ನಮ್ಮ ಮಿದುಳಿಗೆ ಬಿಟ್ಟದ್ದು!!

ಹಾಗಿದ್ದರೆ ಅದ್ವೈತ ಅಂದರೆ ಏನು?

ನಾನು ದೇವರ ಅಂಶ ಅನ್ನುವ ಅರಿವು!

ಅದನ್ನು ಹೇಗೆ ಸ್ಥಿರೀಕರಿಸುವುದು....?

ಒಂದೇ ಒಂದು ಸಣ್ಣ ಉದಾಹರಣೆಯ ಮೂಲಕ....!

ಏನದು ಉದಾಹರಣೆ?

ಪ್ರಕೃತಿ- ಪುರುಷ ಅನ್ನುವುದು!

ಪ್ರಪಂಚವನ್ನು, ಬ್ರಹ್ಮಾಂಡವನ್ನು ಪೂರ್ತಿಯಾಗಿ ಪ್ರಕೃತಿ ಎಂದು ತೆಗೆದುಕೊಂಡರೆ..., ಅದನ್ನು ಚಾಲಯಿಸುವ ಶಕ್ತಿ, ಅದರೊಳಗಿನ ಚೈತನ್ಯ ಪುರುಷ!

ದೃಷ್ಟಿಗೋಚರವಾದದ್ದು ಪ್ರಕೃತಿಯಾದರೆ, ದೃಷ್ಟಿಗೆಟುಕದೆ ಪ್ರಕೃತಿಯನ್ನು ನಿಯಂತ್ರಿಸುವ ಶಕ್ತಿ ಪುರುಷ!

ಪ್ರಕೃತಿಯಿಲ್ಲದೆ ಪುರುಷನಿಲ್ಲ! ಪುರುಷನಿಲ್ಲದೆ ಪ್ರಕೃತಿಯಿಲ್ಲ! ಅದೆರಡೂ ಒಂದನ್ನೊಂದು ಬೆಸೆದುಕೊಂಡಿದೆಯಲ್ಲಾ..., ಅದೇ ಅದ್ವೈತ!

ದ್ವೈತ ಎಂದರೇನು?

ಪ್ರಕೃತಿ ಮತ್ತು ಪುರುಷನನ್ನು ಬೇರೆ ಬೇರೆಯಾಗಿಯೇ ಕಾಣುವುದು, ಅರಿಯುವುದು!!!

ನಾವು ಪ್ರಕೃತಿಯಾದರೆ ನಮ್ಮೊಳಗಿನ ಚೈತನ್ಯ ಪುರುಷ!

ಅದೆರಡನ್ನೂ ಒಂದೇ ಆಗಿ ತೆಗೆದುಕೊಳ್ಳುವುದೇ ಅದ್ವೈತ!

ನಮ್ಮೊಳಗಿನ ಚೈತನ್ಯಕ್ಕೆ ಒಂದು ಕಾಲ್ಪನಿಕ ರೂಪವನ್ನು ಕೊಟ್ಟು, ಹೊರಕ್ಕೆ ತಂದು ಪ್ರತಿಷ್ಠಾಪಿಸಿ, ಆರಾಧಿಸಿ, ನಮ್ಮ ಚೈತನ್ಯವನ್ನು ಮತ್ತಷ್ಟು ಬೆಳಗುವಂತೆ ಮಾಡುವುದು- ಸಕಾರಾತ್ಮಕ ಶಕ್ತಿಯನ್ನು ತುಂಬುವುದು ದ್ವೈತ!

ನಮ್ಮೊಳಗೆ ನಾವು ದೇವರನ್ನು ಕಾಣುವುದು ಅದ್ವೈತ!

ನಮ್ಮೊಳಗೆ ದೇವರನ್ನು ಕಾಣಲಾಗದಿದ್ದರೆ ಒಂದು ರೂಪವನ್ನು ಕೊಟ್ಟು, ಹೊರಗೆ ನೋಡೋಣ ಅನ್ನವುದೇ ದ್ವೈತ!

ಪರಮಾತ್ಮನ ಅಂಶ ಜೀವಾತ್ಮ..., ಪರಮಾತ್ಮ, ಜೀವಾತ್ಮ ಎರಡೂ ಒಂದೇ ಅನ್ನುವುದು ಅದ್ವೈತ!

ಪರಮಾತ್ಮ ಮತ್ತು ಜೀವಾತ್ಮವನ್ನು ಬೇರೆಬೇರೆಯಾಗಿ ಕಾಣುವುದು ದ್ವೈತ!

ನೀನೇಕೆ ನನ್ನಲ್ಲಿಗೆ ಬಂದೆ- ಅನ್ನುವ ದೇವಿಯ ಪ್ರಶ್ನೆಗೆ ದೇವಿಯೇ ಕೊಟ್ಟ ಉತ್ತರ...,

ನಾನು ಮತ್ತು ದೇವಿ ಬೇರೆಯಲ್ಲ ಅನ್ನುವ ಅರಿವು!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!