ನಾನು- ಕಥೆ
ನಾನು
೧
ನನ್ನ ನಾ ಹುಡುಕಿಕೊಳ್ಳಲು ಕಥೆಯೊಂದು ಬರೆಯತೊಡಗಿದೆ!
ಅರ್ಧ ಮುಗಿದಾಗ ಅನ್ನಿಸಿತು- ಕಥೆಯಲ್ಲಿ ನಾನಿಲ್ಲ!
ಮತ್ತಷ್ಟು ಮಗದಷ್ಟು ವಿಷಯಗಳನ್ನು ಕಲೆಹಾಕಲು ಹೊರಟೆ.
ಮರಳಲಾಗಲಿಲ್ಲ!
೨
ಬುಳ್ಕ್ ಬುಳ್ಕ್.... ಶಬ್ದ!
ಹೆಣ್ಣೊಬ್ಬಳು ವಯ್ಯಾರವಾಗಿ ನಡೆದು ಬರುತ್ತಿದ್ದಳು! ತಲೆಯಲ್ಲಿ ಬಿಂದಿಗೆ! ನನ್ನ ಜ್ಞಾನದಂತೆ- ಅರ್ಧ ತುಂಬಿದ್ದುದ್ದರಿಂದ ಅವಳ ವಯ್ಯಾರಕ್ಕೆ ಅನುಸಾರವಾಗಿ ನೀರು ಚೆಲ್ಲುತ್ತಿತ್ತು- ಶಬ್ದದೊಂದಿಗೆ!
ಚೆಲ್ಲಿದ ನೀರು ಅವಳ ತಲೆಯಿಂದ ಕೆನ್ನೆ ಕುತ್ತಿಗೆಗಳನ್ನು ದಾಟಿ ಕೆಳಕ್ಕೆ ಹರಿದು ಹೋಗುತ್ತಿತ್ತು.
ಆ ನೆನೆಯುವಿಕೆಯನ್ನು ಆಸ್ವಾದಿಸುತ್ತಿರುವಂತೆ ಅದ್ಭುತ ಕಳೆ- ಅವಳ ಮುಖದಲ್ಲಿ.
ಮೈಗಂಟಿದ ಒದ್ದೆ ವಸ್ತ್ರ.... ನನ್ನನ್ನು ದಾಟಿ ಮುಂದಕ್ಕೆ ಹೋದ ಅವಳ ಹಿಂಬಾಗ...
ನೋಡುತ್ತಾ ನಿಂತೆ!
ಅವಳ ಹಿಂದೆಯೇ ಹೋಗಲೆ?
ಯಾಕೆ?
ನಿಜವೇ....! ಯಾಕೆ?
ತಲೆ ಕೊಡವಿ ಮುಂದಕ್ಕೆ ಹೆಜ್ಜೆ ಹಾಕಿದೆ.
೩
ಸ್ಮಶಾನ!
ಸ್ಮಶಾನ ಮೌನ!
ಸ್ಮಶಾನ ಮೌನವೆಂದರೆ ಗಾಢ ಮೌನವೇ?
ಅಲ್ಲ! ಸ್ಮಶಾನ ಮೌನ!
ಗಾಳಿಯ ಶಬ್ದ- ಎಲೆಗಳು ಕದಲುವ ಶಬ್ದ- ಮರದ ಅಲುಗಾಟ- ರಾತ್ರಿಕೀಟಗಳ ಶಬ್ದ- ಶಬ್ದದ ಗುಂಪಿಗೆ ಸೇರದ ಗುಂ ಎನ್ನುವ ನೀರವ ಶಬ್ದ- ಭಾವನೆ!
ಮಧ್ಯರಾತ್ರಿ ಹನ್ನೆರಡು ಗಂಟೆ!
ನನ್ನನ್ನು ನಾನು- ನನ್ನ ಧೈರ್ಯವನ್ನು ನಾನು ಪರೀಕ್ಷಿಸಿಕೊಳ್ಳಲು ಬಂದಿದ್ದೆ.
ಸ್ವಲ್ಪ ದೂರದಲ್ಲಿ ಯಾರೋ ಇದ್ದಾರೆನ್ನುವ ಭಾವನೆ.
ಹೆದರಿಕೆಯಾಗಲಿಲ್ಲ.
ಯಾವ ದಿಕ್ಕಿನಲ್ಲಿದ್ದಾರೆಂದು ಊಹಿಸದಾದೆ.
ಯಾರೋ ಇದ್ದಾರೆ... ಕ್ರಮೇಣ ಗುಡಿಸುತ್ತಿರುವ ಶಬ್ದ.... ಒಣಗಿದ ಎಲೆಗಳನ್ನು ಸೇರಿಸುತ್ತಿದ್ದಾರೇನೋ... ಕಿವಿಯಾನಿಸಿದೆ.
ಸ್ವಲ್ಪ ಸಮಯದ ನಂತರ ಬೆಂಕಿ ಕಾಣಿಸಿಕೊಂಡಿತು.
ಅದರ ಸಮೀಪಕ್ಕೆ ಹೋದೆ.
೪
ಜೀವನದಲ್ಲಿ ನಡೆಯುವ ಕೆಲವೊಂದು ವಾಸ್ತವಗಳನ್ನು ಕನಸಿನಲ್ಲಿಯೂ ಊಹಿಸಲು ಸಾಧ್ಯವಾಗುವುದಿಲ್ಲ- ನಂಬಲೂ ಕಷ್ಟವಾಗುವಷ್ಟು ಅದ್ಭುತವಾಗಿರುತ್ತದೆ.
“ಆ ಹೆಣ್ಣನ್ನು ನೋಡಿದೆಯಾ?” ಎಂದರು.
ಬೆಂಕಿ ಹೊತ್ತಿಸಿದ- ಮೂರು ಕಲ್ಲುಗಳನ್ನುಸೇರಿಸಿ ಮಾಡಿದ್ದ ಒಲೆಯಮೇಲೆ ಮಣ್ಣಿನ ಪಾತ್ರೆ!
“ನೋಡಿದೆ!” ಎಂದೆ.
“ಅವಳ ಹಿಂದೆ ಹೋಗಬೇಕು ಅನ್ನಿಸಿತೇ?”
“ಒಂದು ಕ್ಷಣ ಅನ್ನಿಸಿತು!”
“ಆದರೂ ಹೋಗದೆ ಈಕಡೆ ಯಾಕೆ ಬಂದೆ?” ಎಂದರು.
“ಹುಡುಕಾಟದಲ್ಲಿದ್ದೇನೆ!” ಎಂದೆ.
“ಸ್ಮಶಾನದಲ್ಲಿ!?” ಎಂದರು.
ಅವರನ್ನೇ ನೋಡಿದೆ. ವಯಸ್ಸಿನ ಅಂದಾಜು ಸಿಗಲಿಲ್ಲ.
ಎದೆಯವರೆಗೆ ಗಡ್ಡ. ಬೆನ್ನು ಪೂರ್ತಿ ಹರಡಿರುವ ಕೂದಲು. ಅದ್ಭುತ ಕಾಂತಿಯಿಂದ ಹೊಳೆಯುತ್ತಿರುವ ಕಣ್ಣುಗಳು.
“ನೂರ ಹತ್ತು ವರ್ಷ ನನಗೆ!” ಎಂದರು.
ಆಶ್ಚರ್ಯವಾಗಲಿಲ್ಲ. ಅವರ ವಯಸ್ಸನ್ನು ಕೇಳಿಯೂ- ನನ್ನ ಮನಸ್ಸನ್ನು ಅರಿತದ್ದಕ್ಕೂ!
ಪುರಾಣಗಳಲ್ಲಿ ಓದಿದ್ದೇನೆ... ಸಿದ್ಧರ ಕುರಿತು- ತಪಸ್ವಿಗಳ ಕುರಿತು!
ಯಾಕೋ ನನಗೆ ನಾರಾಣತ್ ಬ್ರಾನ್ದನ್ ನೆನಪಾದರು! ಐತಿಹ್ಯವೋ ಐತಿಹಾಸಿಕವೋ ತಿಳಿಯದು....
ಕೇರಳದ ಪಟ್ಟಾಂಬಿ ಎನ್ನುವ ಜಾಗದಲ್ಲಿ ಆತನ ನೆಲೆ!
ಕುಂಟ! ಎಡಗಾಲಿನಲ್ಲಿ ಊತ. ಹುಟ್ಟಿದಾಗಿನಿಂದಲೂ ಹಾಗೆಯೇ.
ಬಂಡೆ ಕಲ್ಲೊಂದನ್ನು ಬೆಟ್ಟದ ಮೇಲಕ್ಕೆ ಕಷ್ಟದಲ್ಲಿ ತಲುಪಿಸಿ- ಅಲ್ಲಿಂದ ಅದನ್ನು ಕೆಳಕ್ಕೆ ಉರುಳಿಸುವುದು ಅವನ ದಿನಚರಿ! ಬ್ರಾನ್ದನ್- ಪ್ರಾನ್ದನ್ ಎಂದರೆ ಹುಚ್ಚ ಎಂದು ಅರ್ಥ!
ಯಾಕೆ ಹೀಗೆ ಮಾಡುತ್ತೀಯ ಎಂದರೆ....
“ನಮ್ಮ ಜೀವನವೇ ಇಷ್ಟಲ್ಲವೇ....!” ಅನ್ನುತ್ತಿದ್ದನಂತೆ.
ವಿಷಯ ಅದಲ್ಲ!
ಒಂದು ರಾತ್ರಿ...
ಅನ್ನ ಬೇಯಿಸಲು ಬೆಂಕಿಗಾಗಿ ಹುಡುಕುತ್ತಿರುವಾಗ ಸ್ಮಶಾನವೊಂದರಲ್ಲಿ ಚಿತೆಯೊಂದು ಉರಿಯುತ್ತಿರುವುದು ಕಾಣಿಸಿತಂತೆ.
ಸಮೀಪಕ್ಕೆ ಹೋಗಿ ನೋಡಿದರೆ ಬೆಂಕಿ ಸಿಕ್ಕಿದ ತೃಪ್ತಿ ಮಾತ್ರವಲ್ಲ- ಅದ್ಭುತವಾದ ಜಾಗ- ರಾತ್ರಿಯನ್ನು ಕಳೆಯಲು!
ಜೋಳಿಗೆಯನ್ನು ಇಳಿಸಿ ಮೂರು ಕಲ್ಲನ್ನು ಸೇರಿಸಿ ಬೆಂಕಿ ಹೊತ್ತಿಸಿ ಅನ್ನಕ್ಕಿಟ್ಟು....
ತೃಪ್ತಿಯಿಂದ ಊಟವಾದ ನಂತರ ಜೋಳಿಗೆಗೆ ತಲೆಯಾನಿಸಿ ಇನ್ನೇನು ನಿದ್ರೆಗೆ ಜಾರಬೇಕು....
“ಯಾರು ನೀನು!” ಹೆಣ್ಣು ದನಿ!
“ಒಬ್ಬ ಹುಚ್ಚ!”
“ಓ.... ನಾರಾಯಣನೋ....?”
“ಹಾಗೆಂದು ಗುರುತಿಸುತ್ತಾರೆ!”
“ನಿನಗೆ ಇಲ್ಲೇನು ಕೆಲಸ!”
“ಕೆಲಸವೇನೂ ಇಲ್ಲದ್ದರಿಂದ ಇಲ್ಲಿ!”
“ಇದು ನನ್ನ ಜಾಗ! ರಾತ್ರಿಗಳಲ್ಲಿ ಇಲ್ಲಿ ಮನುಷ್ಯರಿಗೆ ಪ್ರವೇಶವಿಲ್ಲ!”
“ನನಗೆ ಇಂಥಾ ಜಾಗವೆಂದಿಲ್ಲ!”
ಸ್ಮಶಾನ ಪಾಲಕಿಯ- ದೇವಿಯ ದನಿ ಪೌರುಷದಿಂದ ಶಾಂತತೆಗೆ ಇಳಿಯಿತು!
“ನಾರಾಯಣ- ನನ್ನ ಗಣಗಳ ಸ್ವೇಚ್ಛೆಗೆ ನಿನ್ನಿಂದ ಧಕ್ಕೆಯಾಗುತ್ತದೆ... ದಯವಿಟ್ಟು ಇಲ್ಲಿಂದ ಹೊರಡು!”
“ಹೊರಡದಿದ್ದರೆ?”
“ಹೊರಟರೆ- ನೀನು ಕೇಳಿದ ವರ ಕೊಡುತ್ತೇನೆ!”
“ಯಾರಿಗೆ ಬೇಕು ನಿನ್ನ ವರ!”
ವಾದ ವಿವಾದ ಚರ್ಚೆಗಳ ಕೊನೆಗೆ....
“ಸ್ಮಶಾನದಲ್ಲೂ ನೆಮ್ಮದಿಯಿಲ್ಲ! ಸ್ಮಶಾನ ವಾಸಿಗಳು!” ಎಂದು ಜೋಳಿಗೆಯನ್ನು ತೆಗೆದು ಹೊರಡುವಾಗ....
“ಏನು ವರ ಬೇಕು ಕೇಳು!” ಎಂದಳು ದೇವಿ.
ಮೂತಿ ತಿರುವಿ ಹೊರಟ ಬ್ರಾನ್ದನನ್ನು ಬಿಡಲಿಲ್ಲ ದೇವಿ!
“ಹೊರಟರೆ ವರ ಕೊಡುತ್ತೇನೆ ಅಂದುಬಿಟ್ಟಿದ್ದೇನೆ! ಕೇಳು...!” ಎಂದರು.
“ಇದೆಲ್ಲಿಯ ತಲೆನೋವು....!” ಎಂದು ಯೋಚಿಸಿ....
“ನನ್ನ ಎಡಗಾಲಿನ ಊತವನ್ನು ಬಲಗಾಲಿಗೆ ಮಾಡಿಕೊಡು!” ಎಂದನಂತೆ.
ಯೋಚನೆಯಿಂದ ಹೊರಬಂದ ನನ್ನ ಯೋಚನೆಯನ್ನು ತಿಳಿದಂತೆ- ಆತ ನಕ್ಕ- ಸ್ಮಶಾನ ವಾಸಿ!
ಮನಸ್ಸನ್ನು ಖಾಲಿಯಾಗಿಡುವುದೊಂದು ಸಿದ್ಧಿ! ನನಗದಿಲ್ಲ.
“ಹೆದರಿಕೆಯಾಗುವುದಿಲ್ಲವೆಂದು ತಿಳಿದುಕೊಂಡೆಯಲ್ಲಾ? ಹೊರಡು- ಆ ಹೆಣ್ಣನ್ನು ಭೇಟಿಯಾಗು!” ಎಂದರು.
“ಇಲ್ಲಿಂದ ಹೊರಡುತ್ತೇನೆ... ಆದರೆ ಅವಳಬಳಿ ಹೋಗಲಾರೆ!” ಎಂದೆ.
“ವರದನ ಕಥೆ ಗೊತ್ತಿದ್ದೂ....!?” ಎಂದರು.
“ಆ ಹೆಣ್ಣು ದೇವಿಯೇ ಆಗಿರಲಿ.... ನಾನು ಹೋಗುವುದಿಲ್ಲ! ಅನುಗ್ರಹಿಸುವವಳಾಗಿದ್ದರೆ ನನ್ನನ್ನು ದಾಟಿ ಮುಂದಕ್ಕೆ ಹೋಗುತ್ತಿರಲಿಲ್ಲ- ನನ್ನ ಬಳಿಗೆ ಬರುತ್ತಿದ್ದಳು!” ಎಂದೆ.
ಮುಗುಳುನಕ್ಕ ಆತ.... ಎದ್ದುಹೋಗಿ ಎರಡು ತಾಳೆಯ ಎಲೆಗಳನ್ನು ತಂದ.
ಕುದಿಯುತ್ತಿರುವ ಪಾತ್ರೆಯೊಳಗೆ ಕೈಹಾಕಿ ಗಂಜಿಯನ್ನು ಎರಡೂ ಎಲೆಗಳಿಗೆ ಸುರಿದ- ನಾರಾಣತ್ ಬ್ರಾನ್ದನಂತೆ!
ನನ್ನ ಮನವನ್ನು ವರದ ಆವರಿಸಿದ!
೫
ಸಾವಿರಾರು ವರ್ಷಗಳ ಹಿಂದೆ.
ಅರಣ್ಯ ಭೂಮಿಯನ್ನು ಸಮೃದ್ಧವಾಗಿ ಆವರಿಸಿಕೊಂಡಿದ್ದ ಸಮಯ!
ಅಲ್ಲಲ್ಲಿ ಜನವಾಸ!
ಮನುಷ್ಯನ ಗುರಿ ಒಂದೇ... ಮನಸ್ಸನ್ನು ನಿಯಂತ್ರಿಸುವುದು!
ಕೋಟಿಲೆಕ್ಕದಲ್ಲಿ ಜನವಿದ್ದರೂ.... ಬೆರಳೆಣಿಕೆಯ ಜನರಿಗೆ ಮಾತ್ರ ಸಾಧ್ಯ!
ಮಾನಸಿಕ ನಿಯಂತ್ರಣ- ಮನವನ್ನು ಅರಿಯುವುದು ಎಷ್ಟು ಕಷ್ಟವೆಂದರೆ- ಕಣ್ಣಮುಂದೆ ದೇವರೇ ಬಂದು ನಿಂತಿದ್ದರೂ ನಾವು ಗುರುತಿಸುವುದಿಲ್ಲ! ಅಷ್ಟರಮಟ್ಟಿಗೆ ಮಾಯೆಯಿಂದ ಆವರಿಸಲ್ಪಟ್ಟಿರುತ್ತೇವೆ...
ಎಷ್ಟರ ಮಟ್ಟಿಗೆಂದರೆ....
ಪ್ರಕೃತಿಯ ಮಧ್ಯೆ.... ಅದ್ಭುತ ಶಾಂತಿಯನ್ನು ನೀಡುತ್ತಾ.... ದೇವಸ್ಥಾನ.
ಪ್ರಧಾನ ಅರ್ಚಕ... ಮಹಾ ಭಕ್ತ.... ದೇವೀನಾಮಸ್ಮರಣೆ ಮಾಡುತ್ತಾ... ಅಭಿಷೇಕವನ್ನು ಮಾಡುತ್ತಿದ್ದರು.
ತಡವಾಗಿ ಬಂದ ಸಹಾಯಕ- ವರದನಮೇಲೆ ಎಲ್ಲಿಲ್ಲದ ಕೋಪ!
ತನ್ನಂತಾ ದೇವೀಭಕ್ತನನ್ನು ದಿಕ್ಕರಿಸುವ ಇವನೆಂತಾ ಪಾಪಿ!
ವರದನಿಗಾದರೋ.... ಹೆಣ್ಣನ್ನು ಕಂಡಾಗ- ದೇವೀ... ಅನ್ನುವ ಶಬ್ದ ಕೇಳಿದರೆ- ಚಿಂತೆ ಬಂದರೂ ಸಾಕು... ಕಿಬ್ಬೊಟ್ಟೆಯಿಂದ ಅದ್ಭುತವಾದ ಪುಳಕ!
ಮನದಲ್ಲಿಯೇ ದೇವೀ ಸ್ಮರಣೆ....
ಹಾಗೆಂದು ಅರ್ಚಕನ ಭಕ್ತಿಯೇನು ಕಮ್ಮಿಯೇ....?
ಅಲ್ಲ... ಆತನೂ ದೇವಿಯ ಪರಮ ಭಕ್ತನೇ.... ಆದರೆ.... ಸ್ವಲ್ಪವೇ ಸ್ವಲ್ಪ ಅಹಂ!
ಒಮ್ಮೆ... ಆ ಅರ್ಚಕನ ಭಕ್ತಿಗೆ ಮೆಚ್ಚಿದ ದೇವಿ.... ಸಾಮಾನ್ಯ ಹೆಣ್ಣೊಬ್ಬಳ ವೇಶದಲ್ಲಿ ಪ್ರತ್ಯಕ್ಷಳಾದಳು- ದೇವೀ ದರ್ಶನಕ್ಕೆ!
ಗಡಿಬಿಡಿಯಲ್ಲಿ ಬಂದು ಅರ್ಚನೆ ಪ್ರಾರಂಭಿಸಿದ ಅರ್ಚಕ ಆಕೆಯನ್ನು ಗಮನಿಸಲಿಲ್ಲ. ಆಕೆಯೇ...
“ಅರ್ಚಕರೇ.... ಬಾಯಲ್ಲಿರುವ ತಾಂಬೂಲವನ್ನು ಉಗಿಯಬೇಕು! ಎಲ್ಲಿ ಉಗಿಯಲಿ?” ಎಂದಳು.
ಕೋಪದಿಂದ ತಿರುಗಿ ನೋಡಿದ ಅರ್ಚಕ- ದೂರದಲ್ಲಿ ನಡೆದು ಬರುತ್ತಿರುವ ವರದನನ್ನು ಕಂಡು....
“ಅದೋ ಬರುತ್ತಿದ್ದಾನಲ್ಲ ಮಡಯ- ಅವನನ್ನು ಕೇಳು!” ಎಂದರು!
ಇವನಿಗಿನ್ನೂ ಸಮಯವಾಗಿಲ್ಲ ಎಂದು ಅರಿತ ದೇವಿ ಮುಗುಳುನಕ್ಕು ವರದನೆಡೆಗೆ ನಡೆದಳು.
“ಬಾಯಲ್ಲಿರುವ ತಾಂಬೂಲವನ್ನು ಎಲ್ಲಿ ಉಗಿಯಲಿ?” ಎಂದಳು.
ಹೆಣ್ಣು... ದೇವಿ.... ಅವಳನ್ನು ನೋಡಿದಾಗ ಕಿಬ್ಬೊಟ್ಟೆಯಿಂದ ಅದ್ಭುತವಾದ ಆನಂದ... ಇವಳು ಸಾಮಾನ್ಯಳಲ್ಲಾ...
“ಇದಕ್ಕಿಂತಲೂ ಯಾವ ಜಾಗ ಬೇಕು ದೇವಿ? ನನ್ನ ಬಾಯಿಗೆ ಉಗಿದುಬಿಡು!” ಎಂದನಂತೆ- ಬಾಯಗಲಿಸಿ!
ಮುಂದೆ- ಅವನಂಥಾ ಜ್ಞಾನಿ ಯಾರಿದ್ದರು?
೬
ಹುಡುಕಾಟವನ್ನು ನಿಲ್ಲಿಸಿದೆ.
ಮರಣದವರೆಗೆ ಜೀವನ! ಸಾವು ನಿಶ್ಚಿತ!
ಮರಣಿಸುವವರೆಗೆ ಹೇಗೆ ಬದುಕಿದೆ ಅನ್ನುವುದು ಮುಖ್ಯ!
ನನ್ನನ್ನು ನಾನು ಕಂಡುಕೊಂಡು ಏನುಮಾಡಲಿ?
ಅಥವಾ....
ಸಂತೋಷಕ್ಕಾಗಿ ಬದುಕಬೇಡ, ಸಂತೋಷದಿಂದ ಬದುಕು ಅನ್ನುವಂತೆ
- ಇದುವರೆಗಿನ ನನ್ನ ಹುಡುಕಾಟವೇ ನಾನು!
ಪ್ರಕೃತಿಯ ತೆಕ್ಕೆಯೊಳಕ್ಕೆ- ತಪಸ್ಸಿಗೆ ಮನಸ್ಸು ಮಾಡಿ ಸ್ಮಶಾನದಿಂದ ನಡೆದೆ!
ಅದೋ... ಅಲ್ಲಿ.... ಅದೇ ಹೆಣ್ಣು... ಅದೇ ವೈಯ್ಯಾರ!
ನೋಡುತ್ತಾ ನಿಂತೆ.
ನಡೆದುಬಂದಳು.
ಮುಗುಳುನಕ್ಕಳು.
“ಆಗಲೆ ಯಾಕೆ ದಾಟಿ ಹೋದೆ?” ಎಂದೆ.
“ಆತನನ್ನು ನಿನಗೆ ಭೇಟಿಮಾಡಿಸಲು!” ಎಂದಳು.
“ನಿನಗಿಂತಲೂ ಆತನೇ?” ಎಂದೆ.
“ಕೆಲವೊಮ್ಮೆ!” ಎಂದಳು.
“ಅರ್ಥವಾಗಲಿಲ್ಲ!” ಎಂದೆ.
“ಕೆಲವೊಮ್ಮೆ ನನ್ನ ಭಕ್ತರ ಮಹಿಮೆ ನನಗಿಂತಲೂ ಹೆಚ್ಚು!” ಎಂದಳು.
“ಯಾರಾತ?”
“ಆತನ ಸಾನ್ನಿಧ್ಯದಲ್ಲಿ ನಿನ್ನ ಮನಸ್ಸಿಗೆ ಬಂದ ಇಬ್ಬರೂ...!”
“ಆದರೆ ನಾರಾಣತ್ ಬ್ರಾನ್ದನ್ ನಿನ್ನ ಭಕ್ತನೇನಲ್ಲ!”
“ಯಾರು ಹೇಳೀದರು? ಸ್ಮಶಾನದ ಕಾವಲಿಗೆ ನಿಂತ ನನ್ನ ಭಕ್ತನಲ್ಲ! ನಿಜವಾದ ನನ್ನ ಭಕ್ತ!”
“ಅಂದರೆ?”
“ವಿವಿಧ ರೂಪಗಳಿದ್ದ- ನನ್ನ ಅಂಗಗಳ ಭಕ್ತನಲ್ಲ! ನಿರ್ವಿಕಾರ ನಿರಾಕಾರ ವಿರಾಡ್ ಪ್ರಪಂಚದ ಮೂಲದ ಅರಿವಿದ್ದ ಜ್ಞಾನಿ- ಆ ವಿರಾಡ್ ರೂಪದ ಭಕ್ತ!” ಎಂದಳು.
“ಆ ಇಬ್ಬರೂ ಆತ ಎಂದಾದ ಮೇಲೆ.... ನಾನು?” ಎಂದೆ.
ತೆಕ್ಕೆಯಗಲಿಸಿ
“ನನ್ನ ಮಗ! ಏಕ ಜನ್ಮಿ! ದೇವೀಪುತ್ರ!” ಎಂದಳು.
ಅವಳಲ್ಲಿ ಲೀನವಾದೆ!
-------------
Comments
Post a Comment