ಗಾಳಿಸುದ್ದಿ- ಕಥೆ
ಗಾಳಿ ಸುದ್ದಿ
ಕಥೆಯೊಂದು ಪ್ರಚಲಿತದಲ್ಲಿತ್ತು! ಕಥೆ ಎಂದರೆ.... ಗಾಳಿಸುದ್ದಿ- ಪ್ರಚಲಿತದಲ್ಲಿರುವ ಕಥೆ!
ಕಥೆಯ ನಾಯಕ ಯಾವುದೋ ಒಬ್ಬ ಓದುಗ!
ಪುಸ್ತಕಗಳನ್ನು ಓದುವುದು.... ಅದರಲ್ಲಿನ ವಾಸ್ತವತೆಗಳನ್ನು ಪರೀಕ್ಷಿಸುವುದು ಅವನ ಹವ್ಯಾಸವಂತೆ!
ಹೇಳಿದ್ದೇನೆ- ಗಾಳಿಸುದ್ದಿ ಇದು- ವಾಸ್ತವ ಕಂಡು ಹಿಡಿಯಲಾಗದೇ ಹೋದ- ಗಾಳಿಸುದ್ದಿ!
೧
ಪುಸ್ತಕವೊಂದನ್ನು ಓದಿದನಂತೆ! ಬ್ಯಾಂಕನ್ನು ಕೊಳ್ಳೆಹೊಡೆಯುವ ಕಥೆ! ತಿಂಗಳುಗಟ್ಟಲೆ ಯಾರಿಗೂ ತಿಳಿಯದಂತೆ ಕಂದಕವೊಂದನ್ನು ಕೊರೆದು....
ಹಾಗೆಯೇ ಮಾಡಿದ!
೨
ಮತ್ತೊಂದು ಪುಸ್ತಕ... ಜನರ ನಡುವೆಯಿರುವ ಸಾಮಾನ್ಯ ಪ್ರಜೆಯೊಬ್ಬ ಕೊಲೆ ಮಾಡಿದರೆ ಸಿಕ್ಕಿಕೊಳ್ಳುವ ಅವಕಾಶ ಕಮ್ಮಿ ಅನ್ನುವ ಕಥಾವಸ್ತು!!
ಅವನ ಮೂವರು ಶತ್ರುಗಳನ್ನು- ವೈಮನಸ್ಯ ಇರುವವರನ್ನು ಕೊಂದ- ಅವರ ಮರಣಕ್ಕೆ ಕಾರಣ ನಿಜ ಪ್ರಪಂಚಕ್ಕೆ ತಿಳಿಯದು! ಎಲ್ಲವೂ ಪುಸ್ತಕವೊಂದರ ಪ್ರೇರಣೆ ಎಂದಷ್ಟೇ ತಿಳಿದಿದೆ! ಲೇಖಕನನ್ನು ಸಂಶಯಿಸುವುದು ಹೇಗೆ- ಕಾರಣ ಮಾಡುವುದು ಹೇಗೆ?
೩
ಸುಮಾರು ಹದಿನೇಳು ಪುಸ್ತಕಗಳನ್ನು ತನ್ನ ಜೀವನದಲ್ಲಿ ಪ್ರಯೋಗಿಸಿದ- ಓದುಗ!
ಈಗ... ಹದಿನೆಂಟು-
ಹೆಣ್ಣನ್ನು ಸೆಳೆಯುವುದು ಹೇಗೆ ಅನ್ನುವ ಪುಸ್ತಕ!!
ಸೆಳೆದೇ ಸೆಳೆದ! ಹಾರಿಸಿಕೊಂಡು ಹೋಗಿ ಮದುವೆಯೂ ಆದ!
ಪ್ರಾಣ ಪ್ರಿಯೆಯ ಪ್ರಶ್ನೆ-
“ಒಂದೇ ಒಂದು ಪ್ರಶ್ನೆ! ಒಂದೇ ಒಂದು ವಾಕ್ಯದಲ್ಲಿ ಉತ್ತರ ಕೊಡಿ- ಇಷ್ಟೊಂದು ಹಣ ಹೇಗೆ ಸಂಪಾದನೆ ಮಾಡಿದಿರಿ?”
ಕೇಳುತ್ತಿರುವುದು ಹೆಂಡತಿ- ಚತುರೆ! ಅಷ್ಟಿಲ್ಲದೆ ಹಾರಿಸಿಕೊಂಡು ಬರುತ್ತಿದ್ದನೆ?
ಉತ್ತರವೂ ಸಿದ್ದ!
“ನೀನು ನನ್ನ ಹದಿನೆಂಟನೆಯ ಪುಸ್ತಕ!”
“ಅರ್ಥವಾಗಲಿಲ್ಲ!” ಎಂದಳು.
“ಒಂದೇ ಪ್ರಶ್ನೆ ಒಂದೇ ಉತ್ತರ! ಅರ್ಥವಾದರೂ ಆಗದಿದ್ದರೂ!” ಎಂದ.
“ಓ...” ಎಂದಳು- ಏನೋ ಅರಿತವಳಂತೆ.
ಏನು ಅನ್ನುವಂತೆ ನೋಡಿದ.
“ನೀವೂ ಕೂಡ ಆ ಲೇಖಕನ ಅಭಿಮಾನಿಯೋ...?” ಎಂದಳು.
ಮುಗುಳು ನಕ್ಕ.
“ಆ ಲೇಖಕ ಬರೆದ ಒಂದೊಂದು ಪುಸ್ತಕದಂತೆಯೂ ಘಟನೆಗಳು ನಡೆದಿದೆ!! ಹೆಚ್ಚಾಗಿ ಯಾರಿಗೂ ಆತನಬಗ್ಗೆ ತಿಳಿಯದು! ಆ ಲೇಖಕನನ್ನು ಯಾರಾದರೂ- ಎಷ್ಟು ಪುಸ್ತಕ ಬರೆದಿದ್ದೀರ ಎಂದು ಕೇಳಿದರೆ ಆತ ಕೊಡುವ ಉತ್ತರದಂತಿದೆ- ನಿಮ್ಮ ಉತ್ತರ!” ಎಂದಳು.
ಅವನ ಮುಗುಳುನಗು ಮಾಸಲಿಲ್ಲ- ಕಣ್ಣುಗಳು ಮಿನುಗಿದವು!
ಮುಂದೆ ಆ ಲೇಖಕನ ಪುಸ್ತಕಗಳು ಬರಲಿಲ್ಲ!
ಅರ್ಥ ಆಗಿಲ್ಲ
ReplyDeleteಲೇಖಕ ಅವನೇ...
Deleteಪುಸ್ತಕ ಬರೆದು ಅದರಂತೆ ನಡೆದು ಕೊಳ್ಳುತ್ತಿದ್ದ ಅಥಾವ ಘಟಿಸಿದ ನಂತರ ಆ ರೀತಿ ಪುಸ್ತಕ ಬರೆಯುತ್ತಿದ್ದ. ಹೌದೇ..!?
ಹೆಂಡತಿಗೆ ಮುಂಚೆಯೇ ಪುಸ್ತಕಗಳ ಬಗ್ಗೆ ಗೊತ್ತಿರುವಂತಿದೆ.... ಆದ್ದರಿಂದ ಬರೆದನಂತರ ನಡೆದುಕೊಳ್ಳುತ್ತಿದ್ದ ಅನ್ನಿಸುತ್ತದೆ!!!
Deleteಹಾಗಿದ್ದರೆ ಅಷ್ಟೂ ಪುಸ್ತಕಗಳನ್ನು ಅವಳೂ ಓದಿದ್ದಳು!!. ಹಾಗೆ ಅವಳೂ ಆ ಲೇಖಕನ ಫ್ಯಾನ್. ಇವನೂ ಆ ಪುಸ್ತಕಗಳಲ್ಲಿ ಇದ್ದ ಹಾಗೆ ಮಾಡುತ್ತಿದ್ದ! ಇವನೇ ಆ ಲೇಖಕ ಸಹ!!. ಇದು ಸರಿಯೊ??! ಅದಕ್ಕೆ ಮತ್ತೊಂದು ಪುಸ್ತಕ ಬರುವುದಿಲ್ಲ! ಸರಿಯೊ??
ReplyDeleteಸರಿ 😊
Delete