ಅನುಮಾನ- ಕಥೆ
೧
ಐದು ವರ್ಷದ ಪಾಪು ನಾನು. ಹೆಣ್ಣು ಪಾಪು! ಅಪ್ಪ ಅಮ್ಮ ಸೇರಿ ಶಾಲೆಗೆ ಕಳಿಸುವಾಗ ಜೋರಾಗಿ ಅತ್ತೆ.
ಅವರಿಗೆ ಆಶ್ಚರ್ಯ. ಶಾಲೆಗೆ ಸೇರಿದ ಮೊದಲದಿನಕೂಡ ಅಳದ ನಾನು ಇಂದೇಕೆ ಅಳುತ್ತಿದ್ದೇನೆ?
ಕಾರಣ ನನಗೂ ತಿಳಿಯದು!
ಟಾಟಾಮಾಡಿ ಹೊರಟುಹೋದರು.
ಕಣ್ಣಿನಿಂದ ಮರೆಯಾಗುವವರೆಗೂ ಅವರನ್ನೇ ನೋಡುತ್ತಾ ನಿಂತೆ. ಇಂದೇಕೋ ಅವರೊಂದಿಗೆ ನಾನೂ ಹೋಗಬೇಕೆನ್ನಿಸಿತು. ನನ್ನಿಂದ ಬಹಳ ದೂರ ಹೋಗುತ್ತಿದ್ದಾರೆನ್ನುವ ಭಾವನೆ. ನಿಟ್ಟುಸಿರುಬಿಟ್ಟು ತರಗತಿಗೆ ನಡೆದೆ.
ಇಂದಿನ ತರಗತಿಗಳು ತುಂಬಾ ದೀರ್ಘವಾಗಿ ಕಳೆಯಿತು. ಬಿಟ್ಟಕೂಡಲೇ ಗೇಟಿನಬಳಿಗೆ ಓಡಿಬಂದೆ.
ಎಂದಿನಂತೆ ಅಪ್ಪ ಅಮ್ಮ ಇರಲಿಲ್ಲ. ಆ ಅಂಕಲ್ ಇದ್ದರು.
ಆ ಅಂಕಲ್ ಎಂದರೆ ನನಗೆ ತುಂಬಾ ಇಷ್ಟ. ಯಾವಾಗಲೂ ನಗುತ್ತಾ ನಗಿಸುತ್ತಾ ಇರುತ್ತಾರೆ. ನಾನೆಂದರೆ ಅವರಿಗೆ ಪ್ರಾಣ.
ನನ್ನನ್ನು ಕಂಡು ನಗುತ್ತಾ ಕೈಯ್ಯಗಲಿಸಿದರು. ಓಡಿಬಂದು ಅವರ ತೆಕ್ಕೆಗೆ ಬಿದ್ದೆ.
ನನ್ನನ್ನು ಎತ್ತಿಕೊಂಡು ನಡೆದರು. ಅವರ ಮುಖದಲ್ಲಿ ಏನೋ ಅಸ್ವಾಭಾವಿಕತೆ. ಯಾವುದೋ ಘನವಾದ ಯೋಚನೆಯಲ್ಲಿರುವಂತೆ, ತುಂಬಾ ಕಷ್ಟದಿಂದ ನಗುತ್ತಿರುವಂತೆ...
“ಎಲ್ಲಿಗೆ ಹೋಗುತ್ತಿದ್ದೇವೆ ಅಂಕಲ್?”ಕೇಳಿದೆ.
“ನಮ್ಮ ಮನೆಗೆ, ನಿನ್ನ ಅಪ್ಪ ಅಮ್ಮ ಬೇರೆ ಊರಿಗೆ ಹೋಗಿದ್ದಾರೆ, ಅವರು ಬರುವವರೆಗೆ ನೀನು ನನ್ನೊಂದಿಗೆ ಇರಬೇಕು, ಬೇಸರವಿಲ್ಲ ತಾನೆ?”ಎಂದರು.
ಇಲ್ಲ ಎನ್ನುವಂತೆ ತಲೆಯಾಡಿಸಿದೆ. ಆದರೂ ನನ್ನನ್ನು ಬಿಟ್ಟು ಹೋದ ಅಪ್ಪ ಅಮ್ಮನ ಮೇಲೆ ಸಿಟ್ಟು ಬಂತು.
೨
ದಿನಗಳು, ವಾರಗಳು, ತಿಂಗಳುಗಳುರುಳಿ..., ವರ್ಷಗಳೇ ಕಳೆದವು, ಅಪ್ಪ ಅಮ್ಮನ ಸುಳಿವಿಲ್ಲ.
ಮೊದಲಿದ್ದ ಜಾಗದಿಂದ ತುಂಬಾ ದೂರವಾಗಿ ಅಂಕಲ್ ನನ್ನನ್ನು ಕರೆತಂದಿದ್ದರು. ಬರುಬರುತ್ತಾ ಅಪ್ಪ ಅಮ್ಮನನ್ನು ಮರೆತೆ, ಮೊದಲಿದ್ದ ಜಾಗವನ್ನು ಮರೆತೆ, ಅಂಕಲ್‌ನ ಸ್ವಂತ ಮಗಳಂತೆ ಬೆಳೆದೆ. ಆ ಅಂಕಲ್ ನನಗೆ ಎಲ್ಲವೂ ಆದರು.
ವಯಸ್ಸಿಗೆ ಬಂದೆ. ವಯಸ್ಸಿಗೆ ಬಂದು ನಾಲಕ್ಕು ವರುಷಗಳು....
ಅಂಕಲ್‌ನ ವರ್ತನೆಯಲ್ಲಿ ಏನೋ ಬದಲಾವಣೆ!
ನನಗೆ ಗಂಡು ಹುಡುಕುತ್ತಿದ್ದಾರೆ ಅನ್ನಿಸಿತು. ಹಲವರು ಬಂದು ನೋಡಿ ಹೋದರು. ಯಾವುದೂ ನಡೆಯಲಿಲ್ಲ.
ಅದರಮದ್ಯೆ ಯಾರೋ- ನಮ್ಮ ಬಗ್ಗೆ ಸ್ಪಷ್ಟ ಅರಿವಿರುವವರು ಬಿತ್ತಿದ ಅನುಮಾನದ ಬೀಜ...,
“ನಿನ್ನಮೇಲೆ ನಿನ್ನ ಅಂಕಲ್ ಕಣ್ಣಿಟ್ಟಿರುವ ಹಾಗಿದೆ! ನಿನ್ನ ಅಪ್ಪ ಅಮ್ಮ ನೆನಪಿದ್ದಾರ? ಏನಾದರು? ನೀನು ಹೇಗೆ ಈ ವ್ಯಕ್ತಿಯ ಮಗಳಾದೆ? ನಿನ್ನ ಅಪ್ಪ ಅಮ್ಮನ ಆಸ್ತಿ ಏನಾಯಿತು?”
ಅಷ್ಟು ವರ್ಷದಿಂದ ಅಂಕಲ್ ನನಗೆ ಗೊತ್ತು..., ಅವರ ವಾತ್ಸಲ್ಯವನ್ನು ಅರಿತಿದ್ದೇನೆ! ಆದರೂ..., ಈ ಮನಸ್ಸೇ ಹಾಗೇ...! ಕೆಟ್ಟಚಿಂತೆಗಳ ಪ್ರಭಾವಕ್ಕೆ ಒಳಗಾಗುವಷ್ಟು ಬೇಗ- ಒಳ್ಳೆಯ ಪ್ರಭಾವಗಳು ಪರಿಣಾಮ ಬೀರುವುದಿಲ್ಲ!
ಇನ್ನೊಬ್ಬರು ಬಿತ್ತಿದ ಅನುಮಾನದ ಬೀಜ... ಪ್ರತ್ಯಕ್ಷ ಕಂಡರೂ ಪ್ರಮಾಣಿಸಿನೋಡು ಎಂದು ನನ್ನ ಅಂಕಲ್ ಹೇಳಿಕೊಟ್ಟ ಪಾಠವನ್ನು ಮರೆತೆ.
೩
ಆ ಅಂಕಲ್ ಮರಣಿಸಿದರು! ಅಕಾಲ ಮರಣ! ನನಗೇನೂ ದುಃಖವಾಗಲಿಲ್ಲ.
ನನ್ನಬಗ್ಗೆಯಂತೂ ಯಾರಿಗೂ ಸಂಶಯ ಹುಟ್ಟುವುದಿಲ್ಲ!!
ಆದರೂ ಅವರು ಮರಣಿಸಿದ್ದರಿಂದ ನನಗಾದ ಪ್ರಯೋಜನವೇನೋ ತಿಳಿಯಲಿಲ್ಲ!
ಮುಂದೆ ಅವರಿಂದ ಆಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿಕೊಂಡೆನೆಂಬ ಆತ್ಮವಂಚನೆ!
ಹೀಗಿರುವಾಗ ಒಂದುದಿನ ಒಬ್ಬರು ಸ್ತ್ರೀ ಬಂದು ನನ್ನನ್ನು ಭೇಟಿಯಾದರು.
“ನಾನು ನಿನ್ನ ಅಪ್ಪನ ಹೆಂಡತಿ, ನಿನ್ನ ಅಂಕಲ್‌ನ ಸಹೋದರಿ”ಎಂದರು!
ನನಗೇನೂ ಅರ್ಥವಾಗಲಿಲ್ಲ, ಸಂಶಯದಿಂದ ನೋಡಿದೆ.
“ನಿನ್ನ ಅಪ್ಪ ನನ್ನೊಂದಿಗೂ ನಿನ್ನ ಅಮ್ಮ ಆಕೆಯ ಗಂಡನೊಂದಿಗೂ ಸಂಸಾರ ನಡೆಸುತ್ತಿದ್ದಾರೆ!” ಎಂದರು.
ಎರಡು ಕ್ಷಣಗಳ ಮೌನ.
“ನಿನ್ನ ಅಪ್ಪ ಅಮ್ಮ ನಿನ್ನನ್ನು ಯಾರು ನೋಡಿಕೊಳ್ಳಬೇಕೆಂದು ಜಗಳವಾಡುತ್ತಿದ್ದಾಗ ನನ್ನ ಅಣ್ಣ ತಾನು ನೋಡಿಕೊಳ್ಳುವುದಾಗಿ ಹೇಳಿ ನಿನ್ನನ್ನು ಕರೆತಂದ! ಆತ ಮರಣಿಸಿದನೆಂದು ತಿಳಿದು ಬಂದೆ! ಪರವಾಗಿಲ್ಲ ನಿನ್ನನ್ನು ಚೆನ್ನಾಗಿಯೇ ಬೆಳೆಸಿದ್ದಾನೆ. ಪ್ರಪಂಚದ ದೃಷ್ಟಿಯಲ್ಲಿ ನಾನು ಕೆಟ್ಟವಳಿರಬಹುದು, ಆದರೆ ನನ್ನಣ್ಣನ ತಂಗಿಯಾಗಿ ಅವನಲ್ಲಿದ್ದ ಒಂದಿಷ್ಟು ಒಳ್ಳೆಯ ಗುಣಗಳು ನನ್ನಲ್ಲೂ ಇದೆ ಅಂದುಕೊಂಡಿದ್ದೇನೆ! ನಿನಗೆ ಯಾವುದೇ ಅಗತ್ಯವಿದ್ದರೂ ನನ್ನನ್ನು ಕೇಳು”ಎಂದರು.
ನನ್ನೊಳಗೆ ವಿಷಬೀಜ ಬಿತ್ತಿದ ವ್ಯಕ್ತಿ ನೆನಪಾದರು...,
“ನನ್ನ ಅಪ್ಪ ಅಮ್ಮ- ನನಗೋಸ್ಕ ಆಸ್ತಿಯೇನಾದರೂ ಮಾಡಿಟ್ಟಿದ್ದಾರ?” ಎಂದೆ.
ನಕ್ಕರು ಅವರು...,
“ಅವರ ಯೋಗ್ಯತೆಗೆ ಅದು ಬೇರೆ ಕೇಡು!” ಎಂದರು.
“ಅಂಕಲ್?” ಎಂದೆ.
“ಅಣ್ಣನಾ...? ಅವನದ್ದು ವಿಚಿತ್ರವಾದ ಯೋಚನೆ! ಯಾವತ್ತಾದರೂ ಒಂದು ದಿನ ನಿನ್ನ ಅಪ್ಪ ಅಮ್ಮ ನಿನ್ನನ್ನು ಹುಡುಕಿ ಬರಬಹುದು ಅನ್ನುವ ನಂಬಿಕೆ ಅವನಿಗೆ! ಆದ್ದರಿಂದ ತಾನು ಮಾಡಿದ ಆಸ್ತಿಯನ್ನೆಲ್ಲಾ ಒಂದು ಅನಾಥಾಲಯಕ್ಕೆ ಬರೆದಿಟ್ಟಿದ್ದಾನೆ! ಆದರೆ..., ನಿನ್ನ ಮದುವೆ ತಾನೇ ಮಾಡಿಸಿದರೆ..., ಮದುವೆಯ ನಂತರ ಆಸ್ತಿ ನಿನ್ನ ಹೆಸರಿಗೆ ಬರುತ್ತಿತ್ತು!” ಎಂದರು.
“ಯಾವ ಅನಾಥಾಲಯಕ್ಕೆ...?” ಎಂದೆ ಸಂಶಯದಿಂದ!
ಅವರು ಹೇಳಿದ ಹೆಸರು ಕೇಳಿ ನಡುಗಿದೆ! ನನ್ನೊಳಗೆ ಅನುಮಾನದ ಬೀಜ ನೆಟ್ಟ ವ್ಯಕ್ತಿ ನಡೆಸುತ್ತಿರುವ ಅನಾಥಾಲಯ!
ಅಂಕಲ್‌ಬಳಿಗೆ ಹೋಗಲು ಮಾನಸಿಕವಾಗಿ ತಯಾರಾದೆ!
Comments
Post a Comment