ತಾಯಿ- ಕಥೆ

ಕೀಳಬೇಡವೋ, ಅದು ಗಿಡದಲ್ಲಿದ್ದರೇನೇ ಚಂದ”ಎಂದರು ಅಮ್ಮ.

ಹೊಸ್ತಿಲಿನಮೇಲೆ ಕುಳಿತು ನನ್ನ ಚಟುವಟಿಕೆಯನ್ನೇ ಗಮನಿಸುತ್ತಿದ್ದರು!

ಹೂತೋಟದಮಧ್ಯೆ ನಿಂತು ಗಿಡಗಳೊಂದಿಗೆ ಸಂಭಾಷಣೆ ನಡೆಸುತ್ತಿದ್ದನಾನು, ಆ ಹೂವನ್ನು ಕಂಡು, ಮುದಗೊಂಡು, ಕೀಳಲು ಕೈ ಚಾಚಿದ್ದೆ! ಅಮ್ಮನ ಮಾತು ಕೇಳಿ, ಅವರತ್ತ ತಿರುಗಿ, ಅಮಾಯಕ ನಗು ನಕ್ಕೆ! ನಡೆದುಬಂದು ಅವರ ಪಾದದಬಳಿ ಕುಳಿತೆ. ಪ್ರೀತಿಯಿಂದ ತಲೆ ನೇವರಿಸಿದರು.

ಅಲ್ಲಮ್ಮಾ... ಒಂದು ಹೂ ಕಿತ್ತರೆ ನಿಮ್ಮ ಗಂಟೇನು ಹೋಗುತ್ತದೆ?”ಎಂದೆ.

ನನ್ನ ನಿನ್ನ ಗಂಟೇನೂ ಹೋಗುವುದಿಲ್ಲ. ಆದರೂ ಕೀಳಬೇಡ ಅಷ್ಟೆ. ಪ್ರಕೃತಿಯೊಂದಿಗೆ ಸಂಭಾಷಣೆ ನಡೆಸುವ ನಿನಗೆ ನಾನು ಹೇಳಿಕೊಡಬೇಕೆ?”ಎಂದರು.

ನಕ್ಕೆ. ತಲೆಯೆತ್ತಿ ಅವರ ಮುಖವನ್ನು ನೋಡಿದೆ.

ಅಮ್ಮಾ..... ವ್ಯಕ್ತಿತ್ವದ ಮೇರು ಪರ್ವತ.

ಒಂದು ಹೂವನ್ನು ಕಿತ್ತರೆ ದುಃಖಿಸುವ ಈ ತಾಯಿ, ಬದುಕಿಬಂದ ದಾರಿಯನ್ನು ನೆನಸಿಕೊಂಡರೆ..... ಅಬ್ಬಾ...

ನಾನರಿಯದೆ ನನ್ನ ಕಣ್ಣು ತುಂಬಿತು.

ಯಾಕೋ?”ಎಂದರು, ವಾತ್ಸಲ್ಯದಿಂದ ನನ್ನ ತಲೆ ನೇವರಿಸುತ್ತಾ.

ಅವರ ಮಡಿಲಿನಲ್ಲಿ ತಲೆಯಾನಿಸಿದೆ. ಕೂದಲನಡುವೆ ಬೆರಳಾಡಿಸಿದರು.

ಅವರ ಪಾದವನ್ನು ಮುಟ್ಟಿ,

ಅಮ್ ಮ್ ಮ್ಮಾ...”ಎಂದೆ.

ಏನೋ”ಎಂದರು.

ನಾನೇನೂ ಮತನಾಡಲಿಲ್ಲ.... ಕಣ್ಣು ಮುಚ್ಚಿದೆ.

ಬಂದ ದಾರಿಯನ್ನು ನೆನೆಸಿಕೊಂಡರೆ ಕಣ್ಣು ತುಂಬಿಬರುತ್ತದೆ, ಅಲ್ಲವೇ ಅರುಣಾ...”ಎಂದರು.

ಅಮ್ಮನೂ ನನ್ನ ಭಾವನೆಗಳೊಂದಿಗೆ ಏಕೀಭವಿಸುತ್ತಿದ್ದರು. ಇಬ್ಬರೂ ಒಟ್ಟಿಗೆ ಗತಕಾಲದೊಳಕ್ಕೆ ಚಲಿಸುತ್ತಿದ್ದೆವು.

ಹಿಂದಕ್ಕೆ... ಹಿಂದಕ್ಕೆ... ಇಪ್ಪತ್ತು ವರ್ಷಗಳಷ್ಟು ಹಿಂದಕ್ಕೆ...

ನನ್ನ ಐದನೆಯ ವಯಸ್ಸಿಗೆ!

ಏನು ಪುಟ್ಟ ನಿನ್ನ ಹೆಸರು?” ವಾತ್ಸಲ್ಯಪೂರಿತ ಶಬ್ದವನ್ನು ಕೇಳಿ ತಲೆಯೆತ್ತಿ ನೋಡಿದೆ. ಪ್ರೀತಿತುಂಬಿದ, ಸೆಳೆಯುವ ಕಣ್ಣುಗಳು. ದಿಗಿಲುಗೊಂಡೆ.

ಅನಾಥ ನಾನು. ಹುಟ್ಟಿನಿಂದ ಈ ಐದುವರ್ಷದವರೆಗೆ ನಾನನುಭವಿಸದ ನರಕವಿಲ್ಲ. ಏಟುಗಳು, ಒದೆಗಳು, ಉಪವಾಸ, ಬಿದ್ದು ಹಣೆಯಮೇಲಾಗಿರುವ ಗಾಯ....

ಬೈಗುಳವಲ್ಲದೆ ಪ್ರೀತಿಯಿಂದ ಒಂದು ಮಾತನ್ನೂ ಕೇಳಿರದ ನಾನು, ವಾತ್ಸಲ್ಯದ ಶಬ್ದಕೇಳಿ ನಿಜಾರ್ಥದಲ್ಲಿ ದಿ.ಗಿ.ಲು.ಗೊಂ.ಡೆ.

ನನ್ನ ಮುಂದೆ ಮಂಡಿಯೂರಿಕುಳಿತು ಪುನಹ ಕೇಳಿದರು,

ಸುಮಾರು ದಿನದಿಂದ ಗಮನಿಸುತ್ತಿದ್ದೇನೆ, ಒಬ್ಬನೇ ಇದ್ದೀಯಾ... ಏನು ನಿನ್ನ ಹೆಸರು?”

ಹೆಸರಿಲ್ಲ”ಎಂದೆ.

ಅಪ್ಪಾ ಅಮ್ಮಾ?”

"ಇಲ್ಲ' ಎನ್ನುವಂತೆ ತಲೆಯಾಡಿಸಿದೆ.

ಎರಡು ಕ್ಷಣಗಳ ಮೌನ.

ನನ್ನೊಂದಿಗೆ ಬರುತ್ತೀಯ?”ಕೇಳಿದರು.

ಅದಕ್ಕೂ "ಇಲ್ಲ' ಎನ್ನುವಂತೆ ತಲೆಯಾಡಿಸಿದೆ.

ಯಾಕೆ?”ಎಂದರು.

ಹೆದರಿಕೆ”ಎಂದೆ.

ಯಾಕೆ ಹೆದರಿಕೆ? ಹೆದರಬೇಡ, ನಿನ್ನನ್ನು ನಾನು ಚೆನ್ನಾಗಿ ನೋಡಿಕೊಳ್ಳುತ್ತೇನೆ”ಎಂದರು.

ಅವರ ಮುಖವನ್ನು ನೋಡಿದೆ. ಕಣ್ಣು ತುಂಬಿತ್ತು. ಬಾ ಎನ್ನುವ ಕೋರಿಕೆ...

ಅವರೊಂದಿಗೆ ಹೋಗುವುದರಿಂದ ನನಗೇನೂ ನಷ್ಟವಿಲ್ಲ. ಅನಾಥ. ಆದರೂ ಕರೆದುಕೊಂಡು ಹೋಗಿ ಏನು ಮಾಡುತ್ತಾರೆ?

ಮೌನವಾಗಿ ನಿಂತೆ. ನನ್ನ ಮೌನವನ್ನು ಸಮ್ಮತಿ ಎಂದು ತಿಳಿದುಕೊಂಡು ಕೈ ಹಿಡಿದು ನಡೆದರು, ಅವರ ಮನೆಗೆ.

ಎರಡು ಕೋಣೆಯ ಒಂದು ಸಣ್ಣ ಮನೆ. ಬಾಡಿಗೆಮನೆ. ಒಂದು ಮಂಚ, ಒಂದು ಮೇಜು, ಕೋಣೆಯ ತುಂಬಾ ಹರಡಿರುವ ಪುಸ್ತಕಗಳು, ಅಡಿಗೆಮನೆಯಲ್ಲಿ ಕೆಲವು ವಸ್ತುಗಳನ್ನು ಬಿಟ್ಟರೆ ಬೇರೆ ಏನೂ ಇಲ್ಲ.

ಮಂಚದಡಿಯಲ್ಲಿ ಒಂದು ಪೆಟ್ಟಿಗೆಯಿತ್ತು. ಅದನ್ನು ಎಳೆದರು. ಅದರಲ್ಲಿ ನನ್ನ ವಯಸ್ಸಿನ ಹುಡುಗನಿಗೆ ಹೊಂದುವ ಹಳೆಯ ಬಟ್ಟೆಗಳಿದ್ದವು.

ಸ್ನಾನ ಮಾಡಿಸಿ ಆ ಬಟ್ಟೆಗಳನ್ನು ತೊಡಿಸಿದರು. ನನಗಾಗಿ ಹೊಲಿಸಿದಂತಿತ್ತು.

ಊಟಮಾಡಿ ಮಲಗಿದೆವು.

ಅಮ್ಮನೊಂದಿಗೆ.... ಅಮ್ಮನ ವಾತ್ಸಲ್ಯದಲ್ಲಿ.

ಜೀವನದಲ್ಲಿ ಮೊದಲಬಾರಿ... ಅದ್ಭುತವಾದ ಅನುಭವ.

ನನ್ನ ಜೀವನದಲ್ಲಿ ನಾನು ಮರೆಯಲಾರದ, ಮರೆಯಬಾರದ ದಿನ.

ನನ್ನನ್ನು ಅಪ್ಪಿ ಹಿಡಿದು, ತಮ್ಮ ಎದೆಯೊಳಗೆ ಹುದುಗಿಸಿಕೊಂಡು ಮಲಗಿದರು ಅಮ್ಮ!

ವಾತ್ಸಲ್ಯ... ಅಮ್ಮನ ವಾತ್ಸಲ್ಯ.... ಅಯ್ಯೋ.... ಅದನ್ನು ನಾನು ಹೇಗೆ ವಿವರಿಸಲಿ??

ಅಂದಿನಿಂದ ಶುರುವಾಯಿತು ನಮ್ಮ ನಿಜವಾದ ಜೀವನ.

ಮಾರನೆಯ ದಿನ ಯಾರೋ ಕರೆಯುತ್ತಿರುವಂತೆನ್ನಿಸಿ ಕಣ್ಣು ಬಿಟ್ಟೆ. ನಗು ಮುಖದೊಂದಿಗೆ ಅಮ್ಮ ನನ್ನನ್ನು ಕರೆದೆಬ್ಬಿಸುತ್ತಿದ್ದರು! ಹಣೆಗೊಂದು ಹೂ ಮುತ್ತುಕೊಟ್ಟರು. ಸ್ನಾನ ಮಾಡಿಸಿದರು. ಹೊಸ ಬಟ್ಟೆಗಳನ್ನು ತೊಡಿಸಿದರು. ನಂತರ ತಯಾರಾಗಿ, ತಿಂಡಿತಿಂದು, ಇಬ್ಬರೂ ಹೊರಟೆವು. ಅಮ್ಮ ನನ್ನನ್ನು ಶಾಲೆಗೆ ಕರೆತಂದಿದ್ದರು! ಇಷ್ಟುದಿನ ನಾನು ಕುತೂಹಲದೊಂದಿಗೆ ನೋಡುತ್ತಿದ್ದ ಶಾಲೆ!

ಶಾಲೆಗೆ ಸೇರಿಸಿ, ಮಾರನೆಯ ದಿನದಿಂದ ಕಳಿಸುವುದಾಗಿ ಹೇಳಿ, ಕರೆತಂದರು. ಬರುವಾಗ ಇನ್ನೆರಡು ಜೊತೆ ಹೊಸಾ ಬಟ್ಟೆಗಳನ್ನು ಕೊಂಡರು. ಪುಸ್ತಕಗಳನ್ನು ಕೊಂಡರು. ಮನೆಗೆ ಬಂದು ರುಚಿರುಚಿಯಾದ ಅಡುಗೆ ಮಾಡಿದರು. ಮಾತನಾಡುತ್ತಾ ಆಟವಾಡುತ್ತಾ ಆ ದಿನವನ್ನು ಕಳೆದೆವು. ರಾತ್ರಿ ಮಲಗುವಾಗ,

ನಾಳೆಯಿಂದ ನೀನು ಶಾಲೆಗೆ ಹೋಗಬೇಕು, ಚೆನ್ನಾಗಿ ಓದಬೇಕು, ಎಲ್ಲರಿಗಿಂತ ಬುದ್ದಿವಂತನಾಗಬೇಕು, ಪ್ರಪಂಚವೆಲ್ಲಾ ನಮ್ಮನ್ನು ನೋಡುವಂತಾಗಬೇಕು, ಮನುಷ್ಯ ಸಾಧಿಸಲಾಗದ್ದು ಏನೂ ಇಲ್ಲವೆಂದು ತೋರಿಸಿಕೊಡಬೇಕು,.....”ಅಮ್ಮ ಮಾತನಾಡುತ್ತಲೇ ಇದ್ದರು. ನಾನು ಅವರ ಮುಖವನ್ನೇ ನೋಡುತ್ತಿದ್ದೆ.

ತಟ್ಟನೆ ಅವರ ಶಬ್ದ ಗದ್ಗದವಾಯಿತು.

ನನಗೊಬ್ಬ ಮಗನಿದ್ದ, ಅರುಣ... ಈಗ ಇದ್ದಿದ್ದರೆ ಅವನಿಗೆ ಎಂಟು ವರ್ಷ ವಯಸ್ಸಾಗುತ್ತಿತ್ತು. ಮೂರು ವರ್ಷದ ಹಿಂದೆ ಅವನ ಅಪ್ಪ ಕೊಂದುಬಿಟ್ಟ! ನನಗಿಂತ ಓದು ಕಡಿಮೆ ಆತನಿಗೆ... ದಿನವೂ ಕುಡಿದುಬಂದು... ಆತನನ್ನು ನಾನೇ ಕೊಂದೆ. ಊಟದಲ್ಲಿ ವಿಷವಿಕ್ಕಿ.... ಮಗನನ್ನು ಕೊಂದನೆಂದು ಮಾತ್ರವಲ್ಲ... ಎಷ್ಟು ಹೆಣ್ಣುಮಕ್ಕಳ ಬಾಳು...? ನಂತರ ಆ ಊರುಬಿಟ್ಟು ಬಂದುಬಿಟ್ಟೆ! ಇಲ್ಲಿ ಯಾರಿಗೂ ನನ್ನನ್ನು ತಿಳಿಯದು. ನಾನೂ ಅನಾಥಾಲಯದಲ್ಲಿ ಬೆಳೆದವಳು, ನನ್ನ ಗಂಡನೂ ಅಷ್ಟೆ... ನಮ್ಮದು ಪ್ರೇಮವಿವಾಹ... ನಮಗೆ ಕೇಳುವವರು ಹೇಳುವವರು ಯಾರೂ ಇಲ್ಲ...” ಅಮ್ಮ ಹೇಳುತ್ತಲೇ ಇದ್ದರು. ನಾನು ಬಾಗಿ ಅವರ ಕೆನ್ನೆಯಮೇಲೆ ಮುತ್ತಿಟ್ಟೆ. ಬಾಚಿ ತಬ್ಬಿಕೊಂಡರು.

ಪ್ರತಿದಿನ ನಾನೂ ಅಮ್ಮನೊಂದಿಗೆ ಏಳುತ್ತಿದ್ದೆ. ಅಮ್ಮ ವ್ಯಾಯಾಮವನ್ನು ಮಾಡುವುದುನೋಡಿ ನಾನೂ ಮಾಡುತ್ತಿದ್ದೆ. ಇಬ್ಬರೂಸೇರಿ ಮನೆಕೆಲಸವನ್ನೆಲ್ಲಾ ಮುಗಿಸಿ ಹೊರಡುತ್ತಿದ್ದೆವು. ಅಮ್ಮ ಬಟ್ಟೆ ಅಂಗಡಿಯೊಂದರಲ್ಲಿ ಬಟ್ಟೆ ಒಲಿದುಕೊಡುತ್ತಿದ್ದರು. ನಾನು ಶಾಲೆಗೆ...

ಮರಳಿಬಂದಮೇಲೆ ಅಮ್ಮ ಕೆಲವು ಮಕ್ಕಳಿಗೆ ಮನೆಪಾಟ ಹೇಳಿ ಕೊಡುತ್ತಿದ್ದರು, ಜೊತೆಗೆ ನನಗೂ! ಆ ಮಕ್ಕಳು ಹೊದಮೇಲೆ ಇಬ್ಬರೂ ಅಂದಂದಿನ ವಿಶೇಷಗಳನ್ನು ಮಾತನಾಡಿಕೊಳ್ಳುತ್ತಿದ್ದೆವು.

ದಿನಗಳೂ ವಾರಗಳೂ ತಿಂಗಳುಗಳೂ ವರ್ಷಗಳೂ ಉರುಳುತ್ತಿದ್ದವು.

ಅಮ್ಮ ಸ್ವಂತವಾಗಿ ಬಟ್ಟೆ ಒಲಿದುಕೊಡಲಾರಂಭಿಸಿದ್ದರು. ಮನೆಪಾಠಕ್ಕೆ ಮಕ್ಕಳ ಸಂಖ್ಯೆಯೂ ಹೆಚ್ಚಿತು. ನಾನೂ ಪ್ರೌಢಶಾಲಾ ಹಂತಕ್ಕೆ ಬಂದೆ. ನನಗಿಂತ ಚಿಕ್ಕ ಮಕ್ಕಳಿಗೆ ನಾನೇ ಪಾಠ ಹೇಳಿಕೊಡುತ್ತಿದ್ದೆ.

ಒಂದು ದಿನ, ಶಾಲೆಯಿಂದ ಬಂದ ನಾನು,

ಅಮ್ಮಾ... ನಮ್ಮ ಶಾಲೆಯಲ್ಲಿ ನನಗಿಂತಾ ವೇಗವಾಗಿ ಓಡುವ ಹುಡುಗನಿದ್ದಾನಮ್ಮ”ಎಂದೆ.

ನಿನಗಿಂತಲೂ ದೊಡ್ಡವನೇ?”

ಅಲ್ಲ, ನನ್ನಷ್ಟೇ ಇದ್ದಾನೆ”

ಅಮ್ಮನ ಹಣೆಯಲ್ಲಿ ಗೆರೆಗಳು! ಸಂಶಯದಿಂದ ನನ್ನನ್ನು ನೋಡುತ್ತಾ...

ನನ್ನ ಮಗನಿರುವ ಶಾಲೆಯಲ್ಲಿ ಅವನಿಗಿಂತಲೂ ವೇಗವಾಗಿ ಓಡುವ ಹುಡುಗನೇ? ಎಲ್ಲೋ ಅವನಿಗೆ ನಿನಗಿಂತಲೂ ಹೆಚ್ಚು ಆತ್ಮವಿಶ್ವಾಸವಿರಬೇಕು, ಪ್ರಯತ್ನಶೀಲತೆಯಿರಬೇಕು, ಹಠಮಾರಿತನವಿರಬೇಕು... ಅಲ್ಲವೇ..?”ಎಂದರು.

ಅಷ್ಟೇ.....

ಶಾಲೆಯಲ್ಲಿ ನನ್ನನ್ನು ಮೀರಿಸುವವರು ಯಾರೂ ಇಲ್ಲವಾದರು. ಓದಿನಲ್ಲೂ ಪಠ್ಯೇತರ ವಿಷಯಗಳಲ್ಲೂ....!

ದಿನಗಳುರುಳಿದಂತೆ ಮನೆಮನೆಗೆ ಪೇಪರ್ ಹಾಕಲಾರಂಭಿಸಿದೆ. ಬೇರೊಬ್ಬರ ಕೈಕೆಳಗೆ ಪ್ರಾರಂಭಿಸಿ ನನ್ನದೇ ಆದ ಏರಿಯಾವನ್ನು ಹಿಡಿದೆ. ಬರುಬರುತ್ತಾ ಪೇಪರ್ ಅಲ್ಲದೆ ಹಾಲನ್ನೂ ಹಾಕಲಾರಂಭಿಸಿದೆ.

ಬೆಳಗ್ಗೆ ಹಾಲು ಮತ್ತು ಪೇಪರನ್ನು ಹಾಕಲು ಹೋಗುವುದು, ಶಾಲೆಗೆ ಹೋಗುವುದು... ಸಂಜೆ ಮನೆಪಾಠ ಹೇಳಿಕೊಡಲು ಅಮ್ಮನಿಗೆ ಸಹಾಯ ಮಾಡುವುದು...

ಅಮ್ಮ, ಪ್ರೈವೇಟಾಗಿ ಡಿಗ್ರಿಯನ್ನು ಮುಗಿಸಿದರು, ಮಾಸ್ಟರ್ ಡಿಗ್ರಿಯನ್ನು ಮುಗಿಸಿದರು, ಪಿ ಹೆಚ್ ಡಿ ಮಾಡಿದರು.

ಅವರ ಮೇಧಾವಿತನದ ಅರಿವಾಗಿ ಅವಕಾಶಗಳು ಹುಡುಕಿ ಬರಲಾರಂಭಿಸಿದವು...

ದೇಶವಿದೇಶಗಳನ್ನು ಸುತ್ತಿದೆವು...

ಅಮ್ಮನ ದಾರಿಯಲ್ಲೇ ನಾನೂ... ಡಾಕ್ಟರೇಟ್ ಪಡೆದುಕೊಂಡೆ...

ಅಮ್ಮ ಹೂ ಕೀಳಬೇಡವೆಂದು ಹೇಳಿದಾಗ ಅವರ ಪಾದದ ಬಳಿ ಬಂದು ಕುಳಿತೆ. ಮಡಿಲಿನಲ್ಲಿ ತಲೆಯಿಟ್ಟು ಮಲಗಿದೆ. ಅಮ್ಮ ನನ್ನ ಕೂದಲನಡುವೆ ಬೆರಳಾಡಿಸುತ್ತಿದ್ದರು. ಈಗ ನನ್ನ ಮನದಲ್ಲಿರುವ ಸಂಶಯ ಒಂದೇ...

ನಾವು ಅನಾಥರೆ?

ನಿಜವಾದ ಅನಾಥತ್ವ ಅಂದರೆ ಏನು?

ತಿಳಿಯದು...!!!

Comments

Post a Comment

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!