ಸ್ವಾರ್ಥ- ಕಥೆ
ನಿನ್ನನ್ನು ನಾನು ಮರಯಲಾರೆ ಗೆಳೆಯ. ಮರೆಯಲು ಸಾಧ್ಯವೂ ಇಲ್ಲ. ಕಾರಣ ನೀನೇ ನನ್ನ ನೆನಪು. ನೆನಪಿನ ಸರಳುಗಳ ಹಿಂದೆ ಕಹಿ.
ಮೊದಲಬಾರಿ ನಾನು ನಿನ್ನನ್ನು ಕಂಡಾಗ ನೀನು ಅಂಧನಾಗಿದ್ದೆ. ಇಂದು ನೀನು ನನ್ನನ್ನು ನೋಡುತ್ತಿರುವೆ, ನಾನು ಅಂಧಳಾಗಿದ್ದೇನೆ. ಇದು ಕಾಲದ ಮಹಿಮೆ. ಇಲ್ಲದಿದ್ದರೆ ಅಂದು ಅಂಧನಾಗಿದ್ದ ನಿನ್ನನ್ನು ಕೀಳಾಗಿ ಕಂಡ ನಾನು ಇಂದು ನಿನ್ನ ದೆಸೆಯಿಂದ ಬದುಕುತ್ತಿರುವುದೇಕೆ?
ನೆನಪಿದೆ ನನಗೆ.... ಅಂದೊಂದುದಿನ ಅಮ್ಮನಿಗೆ ಔಷಧಿಯನ್ನು ತರಲು ನೀನು ನನ್ನನ್ನೂ ಕರೆದುಕೊಂಡುಹೋಗಿದ್ದು. ಔಷಧಿಯನ್ನು ಕೊಂಡು ಜೇಬಿಗೆ ಕೈ ಹಾಕಿದಾಗ ದುಡ್ಡಿಲ್ಲ!
“ಆಟವಾಡಬೇಡ ಗೀತಾ... ಕೊಟ್ಟುಬಿಡು" ಎಂದೆ.
ನಾನು ಕೊಡಲಿಲ್ಲ! ನನಗೆ ತಿಳಿದೇ ಇಲ್ಲವೆಂದೆ. ನೀನು ನಂಬಿದೆ. ನಂಬಿದೆಯೋ ಇಲ್ಲವೋ- ಸುಮ್ಮನಾದೆ. ನನಗಂತೂ ಪೈಶಾಚಿಕವಾದ ಆನಂದ!
ನಾನೇಕೆ ಹಾಗಾದೆನೋ ತಿಳಿಯದು, ಕುರುಡನಾದ ನಿನ್ನ ಸಾಮರ್ಥ್ಯವನ್ನು ಕಂಡು ಕರುಬದ ದಿನವಿಲ್ಲ. ಅಂಧನಾಗಿರುವಾಗಲೇ ನಿನಗಿಷ್ಟು ಸಾಮರ್ಥ್ಯ, ಇನ್ನು ದೃಷ್ಟಿ ಬಂದುಬಿಟ್ಟರೆ? ಆ ಚಿಂತೆಯೇ ನನ್ನ ಹೊಟ್ಟೆಯಲ್ಲಿ ಅಸೂಯೆಯ ಬೆಟ್ಟವನ್ನು ಸೃಷ್ಟಿಸಿತ್ತು.
ನಡೆಯುವಾಗ ಕಾಲುಕೊಟ್ಟು ಬೀಳಿಸುತ್ತಿದ್ದೆ. ಬೇರೆಯವರಿಂದ ಹೊಡೆಸುತ್ತಿದ್ದೆ. ಕದಿಯುತ್ತಿದ್ದೆ. ನಿನ್ನಬಗ್ಗೆ ಅಮ್ಮನಲ್ಲಿ ಸುಳ್ಳು ಹೇಳುತ್ತಿದ್ದೆ. ಕೊನೆಗೊಂದುದಿನ ಗೆಳೆಯರೊಂದಿಗೆ ನಡೆಯುವಾಗ ನೀನು ಮರಕ್ಕೆ ಡಿಕ್ಕಿ ಹೊಡೆಯುವಂತೆ ಮಾಡಿ ನಕ್ಕೆ.
ಅಂದುನೀನು ರೊಚ್ಚಿಗೆದ್ದೆ.
ಎರಡನೆಯ ಬಾರಿ ನೀನು ರೊಚ್ಚಿಗೆದ್ದಿದ್ದು, ಬ್ರೈಲ್ ಲಿಪಿಯ ಪುಸ್ತಕವೊಂದನ್ನು ಕೊಳ್ಳಲು ನೀನು ಸೇರಿಸಿಟ್ಟ ದುಡ್ಡು ಕಾಣೆಯಾದಾಗ. ಆ ದುಡ್ಡನ್ನು ಕದ್ದವಳು ನಾನೇ ಎಂದು ನಿನಗೆ ತಿಳಿದಿತ್ತು. ಆದರೆ ನೀನು ನನ್ನನು ಕೇಳಲಿಲ್ಲ.
ಮನೆಗೆ ಬಂದವನೇ,
“ಅಮ್ಮಾ... ಎಷ್ಟೇ ಕಷ್ಟವಾದರೂ ಸರಿ, ನನಗೆ ಒಂದುಜೊತೆ ಕಣ್ಣು ಬರುವಂತೆ ಮಾಡಮ್ಮ. ಈ ಹಾಳು ಪ್ರಪಂಚವನ್ನು ನಾನೊಮ್ಮೆ ನೋಡಬೇಕು" ಎಂದೆ.
ಅಮ್ಮ ಯಾವ ಮಾತನ್ನೂ ಆಡಲಿಲ್ಲ. ಆದರೆ ಅವರು ಕೈಗೊಂಡ ಕ್ರಮ?
“ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಮಗನಿಗೆ ಕಣ್ಣುಗಳು ಬರುವಂತೆ ಮಾಡಲು ಬೇರೆ ದಾರಿ ಕಾಣದೆ ಮರಣಿಸುತ್ತಿದ್ದೇನೆ. ದಯವಿಟ್ಟು ನನ್ನ ಕಣ್ಣುಗಳನ್ನು ನನ್ನ ಮಗನಿಗೆ ಅಳವಡಿಸಿ'' ಎಂದು ಬರೆದಿಟ್ಟು ಸ್ವರ್ಗವನ್ನು ಸೇರಿದರು. ಸ್ವಾರ್ಥಳಾದ ನನಗೆ ಅಂದು ನಿನ್ನ ದುಃಖ ಕಾಣಿಸಲಿಲ್ಲ.
"ದೇವರೇ ಅವನಿಗೆ ಕಣ್ಣು ಬರದಿರುವಂತೆ ಮಾಡಪ್ಪಾ' ಎಂದು ದೇವರನ್ನು ಬೇಡಿಕೊಂಡಿದ್ದೆ!
ಆದರೆ, ಚರ್ಚ್ ಫಾದರ್ ಒಬ್ಬರ ದೆಸೆಯಿಂದ ನಿನಗೆ ನಿನ್ನಮ್ಮನ ಕಣ್ಣುಗಳನ್ನು ಅಳವಡಿಸಿದರು.
ಬುದ್ದಿವಂತನಾದ ನೀನು ಮತ್ತಷ್ಟು ಬೆಳಗಿದೆ. ಗುರಿಯೊಂದನ್ನು ನಿಶ್ಚಯಿಸಿಕೊಂಡು ನಿಖರವಾಗಿ ಅದರತ್ತ ಮುನ್ನುಗ್ಗುತ್ತಿದ್ದೆ. ಅಲ್ಲಿಯೂ ನಾನು ನಿನಗೆ ಅಡ್ಡಗಾಲಾದೆ.
ಕಾಲೇಜಿನಲ್ಲಿ ಓದುವಾಗ ಹುಡುಗರಿಬ್ಬರು ಹುಡುಗಿಯೊಬ್ಬಳಿಗೆ ತೊಂದರೆ ಕೊಡುತ್ತಿದ್ದರು. ನೀನವರನ್ನು ತದುಕಿದೆ. ನಾನೇನು ಮಾಡಿದೆ? ನೀನೇ ಆ ಹುಡುಗಿಯೊಂದಿಗೆ ಕೆಟ್ಟದ್ದಾಗಿ ವರ್ತಿಸಿದೆಯೆಂದೂ ಆ ಹುಡುಗರು ಅವಳಿಗೆ ಸಹಾಯಕ್ಕೆ ಬಂದರೆಂದೂ ಹೇಳಿದೆ! ಸಧ್ಯ, ಆ ಹುಡುಗಿ ನಿನ್ನೊಂದಿಗಿದ್ದಳು! ಇಲ್ಲದಿದ್ದರೆ?
ಮತ್ತೊಂದು ದಿನ ಲೈಬ್ರರಿಯಲ್ಲಿ ಅದೇ ಹುಡುಗರು ನನ್ನನ್ನು ಕೆಣಕಲು ಬಂದಾಗ ನೀನು ಎದುರಿಸಿದೆ. ಮತ್ತೊಮ್ಮೆ ಹುಡುಗಿಯರ ತಂಟೆಗೆ ಬಂದರೆ ಕೊಂದುಬಿಡುವುದಾಗಿ ಹೇಳಿದೆ! ಅಂದು ನನ್ನ ಪಾಳಿ! ನೀನೇ ನನ್ನೊಂದಿಗೆ ಕೆಟ್ಟದ್ದಾಗಿ ವರ್ತಿಸಿದೆಯೆಂದೂ ಆ ಹುಡುಗರು ನನಗೆ ಸಹಾಯಕ್ಕೆ ಬಂದರೆಂದೂ ಹೇಳಿದೆ! ಅಂದು ನೀನು ನೋಡಿದ ನೋಟ, ಅಬ್ಬಾ... ಮುದುಡಿಹೋದೆ!
ಬುದ್ದಿವಂತ ನೀನು. ಅಂದು ಅಲ್ಲೇ ಎಲ್ಲರೆದುರಿಗೆ ಕ್ಷಮೆ ಕೇಳಿ ಬಚಾಯಿಸಿಕೊಂಡೆ.
ಇನ್ನೂ ನಿನಗೆ ಏನೇನು ತೊಂದರೆ ಕೊಡುತ್ತಿದ್ದೆನೋ ಏನೋ? ಆಗಲೇ ಅಲ್ಲವೆ ಕೆಮಿಸ್ಟ್ರಿ ಲ್ಯಾಬ್‌ನಲ್ಲಿ ಪ್ರಯೋಗವೊಂದನ್ನು ಮಾಡುತ್ತಿದ್ದಾಗ ಆಕಸ್ಮಿಕವಾಗಿ ಆಸಿಡ್ ಬಾಟಲ್ ಒಡೆದು ನನ್ನ ಕಣ್ಣುಗಳು ನಷ್ಟವಾಗಿದ್ದು?
ನೀನು ಎರಡೂ ಕೈಗಳನ್ನು ನೀಡಿ ನನ್ನನ್ನು ಸ್ವೀಕರಿಸಿದೆ. ಹೂವಿನಂತೆ ನೋಡಿಕೊಂಡೆ.
ಆದರೇನು ಫಲ?
ನೀನಿಲ್ಲದ ವೇಳೆಯಲ್ಲಿ ಬಂದು ನನ್ನನ್ನು ರೇಪ್ ಮಾಡಿದ ಅವರನ್ನು ಕೊಂದು ನೀನು ಜೈಲುಸೇರಿದೆ.
ಸದ್ಯ! ಈಗಲಾದರೂ ನಿನಗೆ ಒಳಿತು ಮಾಡಬೇಕೆನ್ನಿಸಿತಲ್ಲಾ?
ನೀನೇನೋ ಹೇಳಿದೆ, ನನ್ನ ರೇಪ್ ಆದ ವಿಷಯ ಪ್ರಪಂಚ ತಿಳಿಯುವುದು ಬೇಡವೆಂದು, ಕಾಲೇಜು ಜೀವನದಲ್ಲಿನ ಪೂರ್ವ ವೈರಾಗ್ಯದಿಂದ ಆ ಹುಡುಗರನ್ನು ಕೊಂದದ್ದಾಗಿ ಹೇಳುವೆಯೆಂದು.
ಪ್ರಯೋಜನವೇನು ಗೆಳೆಯ? ಪ್ರಪಂಚಕ್ಕೆ ತಿಳಿಯದೇ ಹೋದರೆ ಕಳೆದುಕೊಂಡ ನನ್ನ ಶೀಲ ಮರಳಿ ದೊರಕುವುದೇ?
ನನ್ನ ಕೆಟ್ಟುಹೋದ ಹಾಳು ಶೀಲಕ್ಕೆ ಬದಲಾಗಿ ನಿನ್ನ ತುಂಬು ಜೀವನ? ಬೇಡ.
ನೀನು ಬದುಕಬೇಕು. ಈ ಪ್ರಪಂಚವನ್ನು ನಯಿಸುವ ನಾಯಕನಾಗಬೇಕು. ಹಾಗಾಗಬೇಕೆಂದರೆ ನಾನೆನ್ನುವ ಈ ಹೊರೆ ಇರಬಾರದು. ಇನ್ನು ಕೆಲವೇ ದಿನಗಳಲ್ಲಿ ನೀನು ಜೈಲಿನಿಂದ ಹೊರಬರುತ್ತೀಯೇ.... ಆದರೆ ನಾನಿರುವುದಿಲ್ಲ, ಇರಬಾರದು.
ವಂದನೆಗಳನ್ನು ಹೇಳಲಾರೆ, ಪ್ರಾರ್ಥಿಸುತ್ತೇನೆ, ನಿನ್ನ ಒಳಿತಿಗಾಗಿ.
ಮರಣದ ನಂತರ ಮನುಷ್ಯ ದೇವರಾಗುತ್ತಾನಂತೆ! ಹಾಗೇನಾದರೂ ಆದರೆ ನಿನ್ನ ಸಂರಕ್ಷಣೆಯ ಸಂಪೂರ್ಣ ಹೊಣೆ ನನ್ನದೇ...!
ಹೋಗುತ್ತಿದ್ದೇನೆ ಗೆಳೆಯ, ಹೋಗುತ್ತಿದ್ದೇನೆ ಅಲ್ಲ, ಹೋಗಿ ನಿನ್ನೊಂದಿಗೇ ಇರುತ್ತೇನೇ.....
ಕ್ಷಮಿಸು.
Comments
Post a Comment