ಆತ್ಮಹತ್ಯೆ!
ಆತ್ಮ ಹತ್ಯೆ!
“ನಿನ್ನ ಸಮಸ್ಯೆಯೇನು?”
“ನೀನೇ!”
“ಏನು ಮಾಡಲಿ?”
“ಬಿಟ್ಟು ಹೋಗು!”
“ಸರಿ!”
*
ಎಷ್ಟು ಸುಲಭದಲ್ಲಿ ಹೋದ! ಪ್ರೇಮಿಸಿದ್ದು ನಿಜವಾಗಿದ್ದರೆ ಹೋಗುತ್ತಿದ್ದನೇ? ಇನ್ನು ನಾನೇಕೆ ಬದುಕಿರಲಿ?
ಮರುಭೂಮಿಯಂತೆ ಮನಸ್ಸು!
ನಾನೇಕೆ ಸಾಯಬೇಕು?
ಮರಳಿ ಬಾರದವನಿಗಾಗಿ ಕಾಯಲೇ?
ಹೋದರೆ ಹೋಗಲಿ! ನನ್ನ ಬದುಕು ನನ್ನದು!!
ಇಷ್ಟಕ್ಕೂ ಯಾಕೆ ಬಿಟ್ಟು ಹೋದ??
*
“ನೋಡೂ....” ಎಂದ- ಕಣ್ಣಿನಲ್ಲಿ ಕಣ್ಣು ನಟ್ಟು!
“ಏನೋ?” ಎಂದೆ.
“ನೀನಿಲ್ಲದ ಬದುಕು ಬರಡು!”
“ಓಹೋ...”
“ಹಾ.... ಕೈಬಿಡದಿರು! ಪ್ರೇಮಿಸುತ್ತಿದ್ದೇನೆ!”
“ಪ್ರೇಮದ ಬಲದಲ್ಲಿ ಬಂಧಿಸಿಕೊ ಹೊರತು- ಕೈಬಿಡದಿರು ಅನ್ನುವ ವಿಲಾಪವೇಕೆ? ಬೇಡಿಕೆಯೇಕೆ?”
“ನಾನು ನಂಬಿಕೆಗೆ ಅರ್ಹನಲ್ಲ!”
“ಓ.... ನಾನು ಸಂಶಯಿಸುತ್ತೇನೆ- ಬಿಟ್ಟು ಹೋಗುತ್ತೇನೆ ಅನ್ನುತ್ತಿದ್ದೀಯ?”
“ಅವಕಾಶ ಹೆಚ್ಚಿದೆ!”
*
ಭೂಮಿ ಒಂದು ಕ್ಷಣ ಬಾಯಿ ಬಿಟ್ಟಿತು ಅಂದರೆ ನಂಬುತ್ತೇನೆ! ಅವನಿಗೆ ಇನ್ನೊಂದು ಹೆಣ್ಣಿನೊಂದಿಗೆ ಸಂಬಂಧವಿಲ್ಲ ಅಂದರೆ ನಂಬಲಾರೆ!
ಅವನು ಹೇಳಿದ್ದ!
*
ಮೊದಲಬಾರಿ- ರೈಲ್ವೇ ಸ್ಟೇಷನ್‌ನಲ್ಲಿ ನೋಡಿದ್ದೆ. ಉದ್ದ ಕೂದಲು... ಎದೆವರೆಗೆ ಬೆಳೆದ ಗಡ್ಡ... ಸಾಮಾನ್ಯವಾಗಿ ಹುಚ್ಚ ಅನ್ನಿಸಬೇಕು- ಅನ್ನಿಸಲಿಲ್ಲ!
ಕಣ್ಣಿನಲ್ಲೇನೋ ಹೊಳಪು!
ವಿದ್ವತ್ತೇ?
ವಿಶಾದವೇ?
ತಿಳಿಯಲಿಲ್ಲ...
ನೋಡುತ್ತಾ ಕುಳಿತೆನಾದರೂ ಮಾತನಾಡಿಸಬೇಕು ಅನ್ನಿಸಲಿಲ್ಲ!
ನನ್ನನ್ನು ನೋಡಿದ- ಆದರೆ ನೋಡಿದಂತೆ ಕಾಣಲಿಲ್ಲ!
ಅದೊಂದು ನೋಟವಿದೆಯಲ್ಲಾ...?
ನಮ್ಮನ್ನೇ ನೋಡುತ್ತಿದ್ದರೂ- ನಿಜವಾಗಿ ನೋಡುತ್ತಿದ್ದಾರೆಯೇ ಎಂದು ಸಂಶಯ ಹುಟ್ಟಿಸುವ ನೋಟ?
ಹಾಗೆ...
ಕಾವಿ ಪಂಚೆ- ಟೀಷರ್ಟ್....
ನಾಳೆಯೂ ಕಾಣಿಸಿದರೆ ಮಾತನಾಡಿಸುವುದು ಎಂದು ತೀರುಮಾನಿಸಿ ಹೊರಟೆ!
*
“ಹಲೋ...” ಎಂದೆ.
ನೋಡಿ- ಮುಗುಳುನಕ್ಕ!
ಕಣ್ಣಿನಲ್ಲಿ ನಗುವಿತ್ತೆ?
ತಿಳಿಯಲಿಲ್ಲ....!
ಹಾಳು ಮನಶ್ಶಾಸ್ತ್ರ! ಎಲ್ಲರನ್ನೂ ಸುಲಭವಾಗಿ ಅಳೆದುಬಿಡಬಹುದೆಂಬ ನಂಬಿಕೆಗೆ ಬಿದ್ದ ಪೆಟ್ಟು!!
“ನಾನು ಮೂಕಾಂಬಿಕ!” ಎಂದೆ.
“ನಾನು ಶಂಕರ!” ಎಂದ.
ಗೇಲಿ ಮಾಡುತ್ತಿದ್ದಾನೆಯೇ? ಸೂಕ್ಷ್ಮವಾಗಿ ನೋಡಿದೆ- ನನಗಿಂತ ಸೂಕ್ಷ್ಮವಾದ ನೋಟ!!
“ನಿನ್ನೆಯಿಂದ ಇಲ್ಲಿಯೇ ಕುಳಿತಿದ್ದೀರಿ....” ಎಂದೆ.
“ಮೊನ್ನೆ ರಾತ್ರಿಯಿಂದ!” ಎಂದ.
ಮುಂದೆ ಏನು ಕೇಳಲಿ?
“ಎಲ್ಲಿಗೆ ಹೋಗಬೇಕು? ಯಾಕೆ ಇಲ್ಲಿಯೇ ಕುಳಿತಿದ್ದೀರ?” ಎಂದೆ.
“ಅನ್ನಿಸಿತು!”
ತೀರಾ ಗೊಂದಲಕ್ಕೆ ಬಿದ್ದೆ!
ಅಧಿಕ ಪ್ರಸಂಗಿ ಅಂದುಕೊಳ್ಳೋಣ ಅಂದರೆ.... ಅವನ ಮುಖ.... ಅಯ್ಯೋ ಎಂದು ಎದೆಗೆ ಒತ್ತಿಕೊಳ್ಳುವಂತಿದೆ!!
“ಏನಾದರೂ ಸಹಾಯ ಬೇಕೆ? ದುಡ್ಡು? ತಿಂಡಿ? ಟಿಕೆಟ್...?” ಎಂದೆ.
“ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂದುಕೊಂಡಿದ್ದೇನೆ!” ಎಂದ.
*
“ಹೆಣ್ಣು ನನ್ನ ಪ್ರಾಣ!” ಎಂದ.
“ಯಾಕೆ ಹೇಳುತ್ತಿದ್ದೀಯ?” ಎಂದೆ.
“ಗೊತ್ತಿಲ್ಲ! ಸಾಯಬೇಡ ಎಂದು ಹೇಳಿ ಕರೆತಂದವಳು- ನೀನೂ ಸಾಯುವಂತಾಗಬಾರದು!” ಎಂದ.
“ಸಾಯೋದ? ನಾನ? ಛಾನ್ಸ್‌ಏ ಇಲ್ಲ!” ಎಂದೆ.
“ಆಲ್‌ದಿ ಬೆಸ್ಟ್!” ಎಂದ.
“ಕೊಲೆ ಮಾಡಬೇಕು ಹೊರತು- ಸಾಯುವ ಹೆಣ್ಣು ನಾನಲ್ಲ!” ಎಂದೆ.
“ಸೇಂ ವಿಷ್- ಎಗೈನ್!” ಎಂದ.
*
ಅವನೊಂದು ಅದ್ಭುತ! ಅವನನ್ನು ಕಲಿತರೆ ಸೈಕಾಲಜಿ ಪೂರ್ತಿ ಕಲಿತಂತೆ ಅನ್ನಿಸಿತು! ಆದರೆ.... ಎಷ್ಟು ಕಲಿತರೂ....!
“ನಾನೊಂದು ಸಮಸ್ಯೆಯಲ್ಲಿ ಸಿಕ್ಕಿಕೊಂಡಿದ್ದೇನೆ!” ಎಂದೆ.
“ಏನು?”
“ನಾನೊಬ್ಬನನ್ನು ಲವ್ ಮಾಡುತ್ತಿದ್ದೇನೆ...!”
ಅವನ ಮುಖದಲ್ಲಿ ಆಶ್ಚರ್ಯವೂ ಅಸೂಯೆಯೂ ಸಿಟ್ಟೂ ಕಾಣಿಸುತ್ತದೆ ಅಂದುಕೊಂಡೆ- ಬದಲಿಗೆ- ನಕ್ಕ!
“ಪಾಪ!” ಎಂದ.
ರೂಕ್ಷವಾಗಿ ನೋಡಿ,
“ಯಾರು ಪಾಪ?” ಎಂದೆ.
“ಸಮಸ್ಯೆಯ ಬಗ್ಗೆ ಹೇಳು!” ಎಂದ.
“ಅವನಿಗೆ ಅವನ ಮನೆಯವರನ್ನು ಒಪ್ಪಿಸಲಾಗುತ್ತಿಲ್ಲ!”
“ಸಮಸ್ಯೆಯೇ.... ಈಗ ಪರಿಹಾರವೇನು?” ಎಂದ.
“ಪರಿಹಾರ ಏನು ಅಂದರೆ?”
“ಮೊದಲು ಕ್ಲಿಯರ್ ಮಾಡು.... ನೀನು ಅವನನ್ನು ಪ್ರೇಮಿಸುತ್ತಿದ್ದೀಯ- ಅವನು?” ಎಂದ.
“ಮತ್ತೆ? ಅವನೂ.... ಅದಕ್ಕೇ ಮನೆಯವರನ್ನು ಒಪ್ಪಿಸಲಾಗದೆ ತೊಳಲಾಡುತ್ತಿದ್ದಾನೆ!”
“ಈ ಸಮಸ್ಯೆಯ ಅರಿವು ಮುಂಚೆ ಇರಲಿಲ್ಲವೇ?” ಎಂದ.
“ಹೇಗೋ ಸಾಲ್ವ್ ಮಾಡಬಹುದು ಅಂದುಕೊಂಡೆವು!”
“ಮಾಡಿ!” ಎಂದ.
“ಅದೇ ಹೇಗೆ?”
“ಮದುವೆಯಾಗಿ!”
“ಮನೆಯವರು ಒಪ್ಪದೆ ಅವನು ಮದುವೆ ಆಗಲಾರನಂತೆ!”
“ಹಾಗಿದ್ದರೆ ಅವನು ನಿನ್ನ ಪ್ರೇಮಿಸುತ್ತಿಲ್ಲ!”
ಗೊಂದಲಕ್ಕೆ ಬಿದ್ದೆ.
“ಈಗ ಏನು ಮಾಡು ಅನ್ನುತ್ತೀಯ?” ಅವನನ್ನೇ ಕೇಳಿದೆ.
“ತೀರುಮಾನ ತೆಗೆದುಕೋ!” ಎಂದ.
“ಅಂದರೆ?”
“ಗೊಂದಲದಲ್ಲಿರುವುದಕ್ಕಿಂತ- ಏನೋ ಒಂದು ತೀರುಮಾನಿಸುವುದು ಒಳ್ಳೆಯದು!” ಎಂದ.
ಅರ್ಥವಾಗದವಳಂತೆ ನೋಡಿದೆ- ಇದರಲ್ಲೇನು ತೀರುಮಾನ?
“ಇಬ್ಬರೂ ಕುಳಿತು ಸ್ಪಷ್ಟವಾಗಿ ಚರ್ಚಿಸಿ! ಎಷ್ಟು ದಿನ ಕಾಯಬೇಕು? ಕಾದರೂ ಮದುವೆ ನಡೆಯುತ್ತದೆ ಅನ್ನಿಸುತ್ತಿದೆಯೇ? ಮನೆಯವರು ಒಪ್ಪದೇ ಇದ್ದರೆ ಏನು ಮಾಡುವುದು? ಒಪ್ಪಿಸಲು ಪ್ರಯತ್ನ ಹೇಗೆ ನಡೆಯುತ್ತಿದೆ? ಮುಂತಾಗಿ...” ಎಂದ.
“ನೀನೂ ಇರುತ್ತೀಯ?” ಎಂದೆ.
“ಅದೇ ತೀರುಮಾನವಾಗುತ್ತದೆ!”ಎಂದ.
ಅರ್ಥವಾಗದೆ ನೋಡಿದೆ. ನಕ್ಕ.
“ನಾನಿದ್ದರೆ- ನಿಮ್ಮ ಮದುವೆ ನಡೆಯುವುದಿಲ್ಲ! ನಾನೇ ಸೊಲ್ಯುಷನ್! ಕಾರಣ ಹುಡುಕುತ್ತಿರುವ ಅವನಿಗೆ ನೀನೇ ಕಾರಣ ಕೊಟ್ಟಂತೆ ಆಗುತ್ತದೆ!” ಎಂದ.
“ಹೇಗೆ ಹೇಳುತ್ತೀಯ?”
“ನಾನು ಹುಡುಗ!” ಎಂದ.
*
ಶಂಕರನನ್ನು ಕಂಡು- ನನ್ನ ಹುಡುಗನ ಕಣ್ಣುಗಳಲ್ಲಿ ಅಸಹನೆ!
“ಯಾರಿದು?” ಎಂದ.
“ಹೇಳಿದ್ದೆನಲ್ಲಾ? ರೈಲ್ವೇಸ್ಟೇಷನ್‌ನಲ್ಲಿ ಒಬ್ಬರನ್ನು ಪರಿಚಯವಾದೆನೆಂದು- ಇವರೇ!” ಎಂದೆ.
ಶಂಕರ ಅವನ ಮುಖವನ್ನೇ ನೋಡುತ್ತಿದ್ದ. ಅವನು- ಫಾರ್ಮಾಲಿಟಿಗಾದರೂ ನೋಡದೆ-
“ಇವನಿದ್ದರೆ ನಾನು ಮಾತನಾಡುವುದಿಲ್ಲ! ನನಗೆ ಪ್ರೈವಸಿ ಬೇಕು!” ಎಂದ.
ಶಂಕರನನ್ನು ನೋಡಿದೆ.
ಆಲ್‌ದಿ ಬೆಸ್ಟ್ ಅನ್ನುವಂತೆ ಥಂಪ್ಸ್‌ಅಪ್ ತೋರಿಸಿ ಹೊರಟು ಹೋದ.
*
“ಒಂದು ವಾರ ಟೈಂ ಕೇಳಿದ್ದಾನೆ!” ಎಂದೆ- ಶಂಕರನಿಗೆ.
ಅವನೇನೂ ಮಾತನಾಡಲಿಲ್ಲ!
“ಮನೆಯವರನ್ನು ಒಪ್ಪಿಸುವುದು ಅಷ್ಟು ಕಷ್ಟವೇ?” ಎಂದೆ.
ನೋಡಿ ನಕ್ಕ!
“ಸುಮ್ಮನೆ ಕೋಪ ಬರಿಸಬೇಡ! ಹೇಳು!” ಎಂದೆ.
“ನಿಜವಾದ ಪ್ರೇಮದಲ್ಲಿ ಇದೆಲ್ಲಾ ಒಂದು ನೆಪವೇ ಅಲ್ಲ!” ಎಂದ.
ಮೂಗಿಗೆ ಒಂದು ಗುದ್ದು ಕೊಡಲೇ ಅನ್ನಿಸಿತು!
“ನೀನು ಯಾರನ್ನಾದರೂ ಪ್ರೇಮಿಸಿದ್ದೀಯ?” ಎಂದೆ.
“ಶ್ರಮಿಸಿದೆ- ಸಾಧ್ಯವಾಗಲಿಲ್ಲ!” ಎಂದ.
“ಅಂದರೆ?”
“ಪ್ರೇಮ- ಸ್ವಾರ್ಥ!” ಎಂದ.
“ಮನುಷ್ಯರಿಗೆ ಅರ್ಥವಾಗುವಂತೆ ಹೇಳು!” ಎಂದೆ.
“ಪ್ರೇಮ- ಒಂದು ಬಂಧನ!” ಎಂದ.
“ನಿನ್ನ ತಲೆ!” ಎಂದೆ -ನಿಜವಾಗಿಯೂ ಕೋಪ ಬಂತು!
ಅವನ ಮುಖದಲ್ಲಿ ನಗು.
“ನನ್ನನ್ನು ನನ್ನಂತೆಯೇ ಪ್ರೇಮಿಸಲು ಯಾರೂ ತಯಾರಿಲ್ಲ!” ಎಂದ.
“ಇದು ಎಲ್ಲಾ ಹುಡುಗರ ಅಳಲು- ಅವರು ಮಾತ್ರ ಭಾರಿ- ಇದು! ಹೆಣ್ಣುಮಕ್ಕಳೇನು ಭೋಗವಸ್ತುಗಳ? ಅವರನ್ನು ಗಂಡೂ ಅವರಂತೆಯೇ ಪ್ರೇಮಿಸಲಾರರು!”
“ನಾ ಪ್ರೇಮಿಸಬಲ್ಲೆ!” ಎಂದ.
*
“ಯಾವ ಕಾರಣಕ್ಕೂ ನಿನ್ನನ್ನು ಮನೆಯವರು ಒಪ್ಪುವುದಿಲ್ಲ- ಎಂದರಂತೆ!” ಎಂದೆ.
ನೋಡಿ ನಕ್ಕ. ನಾ ಹೇಳಲಿಲ್ಲವೇ ಅನ್ನುವ ಮುಖಭಾವ!
“ಮುಂದೆ?” ಎಂದೆ!
“ಮುಂದೆ?” ಎಂದ- ಸಂಶಯದಿಂದ ನೋಡುತ್ತಾ...
“ಏನು ಮಾಡಲಿ?” ಎಂದೆ.
“ನನ್ನನ್ನು ನಾನು ತೀರುಮಾನಿಸಬಲ್ಲೆನೆ ವಿನಃ....” ಎಂದು ಮುಖ ನೋಡಿದ.
“ಸರಿ... ನಿನ್ನ ಬಗ್ಗೆಯೇ ಹೇಳು- ಮುಂದೆ?” ಎಂದೆ.
“ಅಲೆದಾಟ- ತಪ್ಪಿದರೆ ಸಾವು!”
“ಎಲ್ಲಿಯವರೆಗೆ ಅಲೆಯುತ್ತೀಯ?”
“ಸಾಯುವವರೆಗೆ -ಸಾಯಬೇಕು ಎಂದು ಮತ್ತೊಮ್ಮೆ ಅನ್ನಿಸುವವರೆಗೆ!”
“ಅಥವಾ ಸಾಯಬೇಕು ಅನ್ನಿಸಿದರೂ.... ಎಲ್ಲಿ ಸಾಯಬೇಕೆಂದು ನಿನ್ನಾಸೆ?”
“ಮೂಕಾಂಬಿಕಾ...!” ಎಂದ.
ಅವನು ಹೇಳಿದ ಧಾಟಿಗೆ ಮುಗುಳುನಕ್ಕು-
“ಶಂಕರಾ.... ಸ್ವಲ್ಪದಿನ ನನ್ನೊಂದಿಗೆ ಇರು...!” ಎಂದೆ.
“ಇದ್ದು?”
“...........”
*
ನನಗರ್ಥವಾಗಲಿಲ್ಲ!
“ಇದರಲ್ಲಿ ಗೊಂದಲವೇನು? ಅವಳು ಕೇಳಿದ್ದು ಸರಿ ತಾನೆ?” ಎಂದೆ.
“ಸರಿ ಅನ್ನುತ್ತೀಯ?” ಎಂದ.
“ಮತ್ತೆ? ಅವಳನ್ನು ಪ್ರೇಮಿಸುವ ನೀನು- ಇನ್ನೊಬ್ಬಳೊಂದಿಗೆ ಸಲಿಗೆಯಿಂದಿದ್ದರೆ ಹೇಗೆ ಕೇಳದಿರುವುದು!”
“ಅಂದರೇ.... ಅವಳನ್ನು ಪ್ರೇಮಿಸುವ ನಾನು ಬೇರೆ ಯಾರೊಂದಿಗೂ ಮಾತನಾಡಬಾರದೆ?”
“ಮಾತನಾಡಬಹುದು! ಸಲಿಗೆ ಬೆಳೆಸಬಾರದು!”
“ಅರ್ಥವಾಗಲಿಲ್ಲ!” ಎಂದ.
ನಾನೂ ಗೊಂದಲಗೊಂಡೆ!! ಏನುತ್ತರ ನೀಡಲಿ? ಸಲಿಗೆಯ ಮಾನದಂಡವೇನು?
“ಯಾವ ಹೆಣ್ಣೂ ಕೂಡ- ತನ್ನ ಪ್ರೇಮಿ ಮತ್ತೊಬ್ಬಳು ಹೆಣ್ಣಿನೊಂದಿಗೆ ಸಲಿಗೆಯಿಂದಿರುವುದು ಸಹಿಸುವುದಿಲ್ಲ!” ಎಂದೆ.
“ಯಾಕೆ?” ಎಂದ.
“ಯಾಕೆಂದರೆ....? ಆಮೇಲೆ ಅವನು ಕೈಬಿಟ್ಟು ಹೋದರೆ....?”
“ಅಷ್ಟೇ...!” ಎಂದ.
“ಏನು- ಅಷ್ಟೆ?”
“ನನ್ನ ಮೇಲೆ ನಂಬಿಕೆಯಿಲ್ಲದಿರುವುದಕ್ಕೆ ಹೆಸರು- ಪ್ರೇಮ!” ಎಂದ.
ಗೊಂದಲಗೊಂಡೆ! ಅವನ ಉದ್ದೇಶ ಅರ್ಥವಾಯಿತು! ನಾನೇನೂ ಮಾತನಾಡಲಿಲ್ಲ- ಅವನೇ ಹೇಳಿದ.
“ಕಣ್ಮಣಿ.... ನಾನವಳಿಗೆ ಹೇಳಿದ್ದೆ- ನಾನೇನೂ ಅಷ್ಟು ಒಳ್ಳೆಯವನಲ್ಲ! ಬೇಕಾದಷ್ಟು ಹೆಣ್ಣಿನೊಂದಿಗೆ ಸಂಬಂಧ 'ಇರುವವನೆ!’ ಇನ್ನುಮುಂದೆ ಅದು ಸಂಬಂಧ 'ಇದ್ದವನೆ' ಆಗುತ್ತದೆ! ಕಾರಣ..., ನಿನ್ನಲ್ಲಿ ಮೂಡಿದ ಪ್ರೇಮ! ಈಗ ನಿನ್ನನ್ನು ಪ್ರೇಮಿಸುತ್ತಿದ್ದೇನೆ- ನಿನ್ನ ಹೊರತು ಯಾರನ್ನೂ ನಾ ಪ್ರೇಮಿಸುವುದಿಲ್ಲ! ಆದರೆ ಹೆಣ್ಣೆಂದರೆ ನನಗೆ ಪ್ರಾಣ! ಎಲ್ಲ ಹೆಣ್ಣೂ ನನಗೆ ಬೇಕು- ನನ್ನನ್ನು ಬೇಕಾದ ಎಲ್ಲಾ ಹೆಣ್ಣಿಗೂ ನಾನಿರುತ್ತೇನೆ... ಆದರೆ ದೈಹಿಕವಾಗಿ ಅಲ್ಲ- ಎಂದು!”
ನನ್ನ ಮುಖವನ್ನು ನೋಡಿದ. ನಾನೇನೂ ಮಾತನಾಡಲಿಲ್ಲ- ಅವನೇ....,
“ಈಗ ನೋಡು.... ನಿನ್ನೊಂದಿಗೆ ನಾನು ಬೆರೆತಿದ್ದೇನೆ... ನಿನಗೆ ಹೇಗೆ ಬೇಕೋ ಹಾಗೆ ನಿನ್ನೊಂದಿಗಿದ್ದೇನೆ... ಇದನ್ನು ನೊಡಿ ನನ್ನ ಹುಡುಗಿ ನನ್ನೊಂದಿಗೆ ಬ್ರೇಕಪ್ ಮಾಡಿದರೆ- ಹೊಣೆ ಯಾರು?” ಎಂದ.
ನಿಜವೇ ಅನ್ನಿಸಿತು. ಅಯೋಮಯವಾಗಿ ಅವನ ಮುಖವನ್ನು ನೊಡಿದೆ.
“ನಿನಗೆ ನಾನು ಸ್ಪಂದಿಸುತ್ತೇನೆ- ನಿನ್ನ ಸಮಸ್ಯೆಗಳಿಗೆ- ನನ್ನರಿವಿನ ಪರಿಹಾರವನ್ನು ಸೂಚಿಸುತ್ತೇನೆ- ನಿನ್ನೊಂದಿಗೆ ನಾನಿರುತ್ತೇನೆ- ಆದರೆ ನಿನ್ನನ್ನು ನಾನು ಪ್ರೇಮಿಸಲಾರೆ! ಯಾಕೆಂದರೆ... ನನ್ನ ಪ್ರೇಮ ಅವಳಿಗೆ ಮೀಸಲು- ಅನ್ನುವುದರಲ್ಲಿ ಸಮಸ್ಯೆಯೇನು?” ಎಂದ.
ತಲೆ ತಗ್ಗಿಸಿದೆ.
*
“ಶಂಕರಾ.... ಒಂದು ತತ್ತ್ವವನ್ನು ಹೇಳು! ಪ್ರೇಮಕ್ಕೆ ಸಂಬಂಧಿಸಿದ್ದಾದರೆ ಒಳ್ಳೆಯದು!” ಎಂದೆ.
ನೋಡಿ ನಕ್ಕ.
“ನಾನಿನ್ನೂ ಹುಡುಗ!” ಎಂದ.
“ನಿನ್ನರಿವಿನ ಅಳತೆಯಲ್ಲಿಯೇ ಹೇಳು!” ಎಂದೆ.
ಒಂದು ಕ್ಷಣ ಮೌನ! ನಂತರ ಅವನ ವಾಗ್ಜರಿ....
“ಈ ಪ್ರೇಮ ಅನ್ನುವುದು ವಿಶ್ವಜನೀಯವಾದದ್ದು! ನಿನ್ನಮೇಲಿರುವುದೂ ಪ್ರೇಮವೇ ಇನ್ನೊಬ್ಬರ ಮೇಲಿರುವುದೂ ಪ್ರೇಮವೇ.... ಆದರೆ ಮನುಷ್ಯನ ಮನಸ್ಸು ಸ್ವಾರ್ಥಪೂರಿತ! ಅವನು ಪ್ರೇಮದ ಅರ್ಥವನ್ನು ಸಂಕುಚಿತಗೊಳಿಸಿದ! ಕೇವಲ ಗಂಡು ಹೆಣ್ಣಿನ ನಡುವಿನದ್ದು ಪ್ರೇಮ- ಎಂದ! ಅದಲ್ಲ ಪ್ರೇಮ... ಪರಮಾನಂದವನ್ನು ನೀಡುವುದು ಪ್ರೇಮ! ಸಂಶಯಕ್ಕೆ ಎಡೆಯಿಲ್ಲದ್ದು ಪ್ರೇಮ! ಇರುವುದನ್ನು ಕಾಣುವುದು ಪ್ರೇಮ.... ದೇವರಮೇಲಿನ ಕಳಂಕ ರಹಿತ ಭಕ್ತಿ ಪ್ರೇಮ! ಅಮ್ಮನ ಮೇಲಿನ ಅತಿಶಯವಾದ ಅಭಿಮಾನ ಪ್ರೇಮ! ಮಗಳಮೇಲಿನ ವಾತ್ಸಲ್ಯವೂ ಪ್ರೇಮವೇ.... ಹೀಗಿರುವಾಗ- ನಿನ್ನ ಪ್ರೇಮ ಸುಳ್ಳು ಅನ್ನುವುದರ ಪ್ರಸಕ್ತಿಯೇನು? ಅಮ್ಮನನ್ನು- ಮಗಳನ್ನು- ಸಹೋದರಿಯನ್ನು ಇಷ್ಟಪಡುವಂತೆಯೇ ಹೆಣ್ಣೊಬ್ಬಳನ್ನು ಇಷ್ಟಪಟ್ಟರೆ- ನೀನು ಸ್ವಾರ್ಥಿ! ನೀನು ನನಗೆ ಮೋಸ ಮಾಡಿದೆ! ಅನ್ನುವಂತಹ ಮಾತುಗಳು ಬಂದರೆ ಏನರ್ಥ? ನಾನೂ ಕೂಡ ಸಂಕುಚಿತ ವರ್ತನೆಯವನೇ.... ಎಲ್ಲವನ್ನೂ ಒಂದು ಹೆಣ್ಣಿನಲ್ಲಿ ಕಾಣಲು ಶ್ರಮಿಸಿ- ನೋಡೂ.... ನಿನ್ನೊಬ್ಬಳೊಂದಿಗೆ ದೈಹಿಕವಾಗಿ ಸೇರುತ್ತೇನೆ ಅನ್ನುವುದು ನನ್ನ ತೀರ್ಮಾನವೇ ಹೊರತು- ನಿಯಮವಲ್ಲ- ಎಂದೆ! ಒಪ್ಪಿದರೂ- ಅಪನಂಬಿಕೆ! ಬೇರೆಯವರೊಂದಿಗೆ ಮಾತನಾಡಿದೆ- ಅವರನ್ನೂ ಇಷ್ಟಪಟ್ಟೆ- ಅವರೊಂದಿಗೂ 'ಸಲಿಗೆಯಿಂದಿದ್ದೆ'- ನಿನ್ನ ಪ್ರೇಮ ಸುಳ್ಳು ಅಂದರೆ ಏನು ಮಾಡುವುದು?” ಎಂದು ನಿಲ್ಲಿಸಿ ನನ್ನ ಮುಖವನ್ನು ನೋಡಿದ.
“ನೀನು ಹುಡುಗನೇ?!” ಎಂದೆ.
“ಏನಾಯಿತು?” ಎಂದ.
“ಏನಿಲ್ಲ! ಮುಂದುವರೆಸು!” ಎಂದೆ.
“ಇಷ್ಟೇ.... ನಾನು ನಿನ್ನನ್ನು ಪ್ರೇಮಿಸುತ್ತೇನೆ. ದುಃಖವಾದಾಗ ನಿನ್ನೆದೆಯೊಳಗೆ ಹುದುಗುತ್ತೇನೆ. ನಿನ್ನ ಭಾವನೆಗಳನ್ನು ನನ್ನದೆಂದು ಕೊಂಡಾಡುತ್ತೇನೆ. ಸಂತೋಷವಾದಾಗ ಅಪ್ಪಿಕೊಳ್ಳುತ್ತೇನೆ. ಮಾನವನ ಸಹಜ ವಾಂಛೆ ಮೂಡಿದಾಗ ನಿನ್ನ ದೇಹವನ್ನು ಆಕ್ರಮಿಸುತ್ತೇನೆ. ನನ್ನ ಪ್ರತಿ ಭಾವನೆಗಳಿಗೆ ನೀನೇ ಆಧಾರವೆಂದು ನಿನ್ನನ್ನಾಶ್ರಯಿಸುತ್ತೇನೆ- ಇದೆಲ್ಲವೂ ನಿನ್ನೊಬ್ಬಳೊಂದಿಗೆ ಮಾತ್ರ... ಆದರೆ ಬೇರೆ ಹೆಣ್ಣನ್ನೂ ನಾನು ಗೌರವಿಸುತ್ತೇನೆ- ಅವಳೊಂದಿಗಿರುತ್ತೇನೆ- ಅರ್ಥಮಾಡಿಕೋ.... ಅವಳಿಗೆ ಅಗತ್ಯವಿದ್ದರೆ ಅವಳಿಗೆ ಆಧಾರವಾಗುತ್ತೇನೆ ಹೊರತು- ನನ್ನ ಆಧಾರ ಮಾತ್ರ ನೀನೇ...!” ಎಂದ.
“ಸರಿ!” ಎಂದೆ.
ತಟ್ಟನೆ ಮುಖ ನೋಡಿದ. ನಕ್ಕು,
“ಸರಿ! ನಾನು ಒಪ್ಪಿದ್ದೇನೆ!” ಎಂದೆ.
“ನಾನು ನಿನಗೆ ಪ್ರಪೋಸ್ ಮಾಡಲಿಲ್ಲ ಕಣ್ಮಣಿ! ತತ್ತ್ವ ಹೇಳಿದೆ ಅಷ್ಟೆ!” ಎಂದ.
“ಪರವಾಗಿಲ್ಲ! ನಾನು ಒಪ್ಪಿದ್ದೇನೆ!” ಎಂದೆ.
*
ಹೊಟ್ಟೆ ಉರಿದು ಹೋಯಿತು!
“ಥ್ಯಾಂಕ್ಯು ಶಂಕರ್!” ಎಂದು ಹೇಳಿ ಅವನನ್ನೊಮ್ಮೆ ಅಪ್ಪಿ- ಅವಳು ಹೋದಾಗ!
ಅಪ್ಪುವ ಅಗತ್ಯವೆನಿತ್ತು?
ಅವಳನ್ನು ಯಾರೋ ಬ್ಲಾಕ್‌ಮೇಲ್ ಮಾಡುತ್ತಿದ್ದರಂತೆ! ಪ್ರೇಮಿಸು ಪ್ರೇಮಿಸೂ ಎಂದು! ಅದು ಬ್ಲಾಕ್‌ಮೇಲ್ ಅಲ್ಲ! ಅವಳೂ ಅವನನ್ನು ಪ್ರೇಮಿಸುತ್ತಿದ್ದಳು- ಆದರೆ ಒಂದು ಕಂಡಿಷನ್!
ಸಿಗರೇಟು ಸೇದಬಾರದು- ಕುಡಿಯಬಾರದು- ಕ್ರಿಮಿನಲ್ ಗೆಳೆಯರೊಂದಿಗೆ ಸೇರಬಾರದು!
ಅವನು ಒಪ್ಪಿದ್ದ! ಆದರೆ ಮಾತು ತಪ್ಪಿ- ಸಿಕ್ಕಿಬಿದ್ದ! ನಂಬಿಕೆ ದ್ರೋಹವೇ... ನಾನಾದರೂ ಬಿಡುವವಳೇ... ಅವಳು ಶಂಕರನಿಗೆ ಹೇಳಿಕೊಂಡಳು. ಶಂಕರ ಆ ಹುಡುಗನನ್ನು ತರಾಟೆಗೆ ತೆಗೆದುಕೊಂಡು-
“ನೋಡು ಗೆಳೆಯ... ಅವಳಿಗೆ ನಿನ್ನ ಮೇಲೆ ಪ್ರೀತಿಯಿದೆ. ಈಗಲೂ ನೀನು ಅವಳಿಗೆ ಕೊಟ್ಟ ಮಾತಿನಂತೆ ನಡೆದುಕೊಂಡರೆ ಅವಳು ನಿನ್ನೊಂದಿಗೆ ಇರುತ್ತಾಳೆ- ಆದರೆ ನಿನಗದು ಸಾಧ್ಯವಿಲ್ಲ! ಆದರೂ ನಿನ್ನ ಪ್ರೇಮಿಸಬೇಕು ಅನ್ನುವುದು ತಪ್ಪಲ್ಲವೇ? ಪ್ರೇಮದಲ್ಲಾದರೂ ಬ್ಯುಸಿನೆಸ್‌ನಲ್ಲಾದರೂ ಡೀಲು ಡೀಲೆ! ನಂಬಿಕೆದ್ರೋಹ ಮಾಡಿಯೂ- ಮುಂದೆ ಮಾಡುವವನಾಗಿದ್ದೂ- ಜೊತೆಗಿರು ಅಂದರೆ ಹೇಗೆ?” ಎಂದ.
ಅವನು ಜಗಳಕ್ಕೆ ನಿಂತನಾದರೂ.... ಇದು ಶಂಕರ!
ಮತ್ತೆ ಆ ಹುಡುಗ ಅವಳ ತಂಟೆಗೆ ಹೋಗಲಿಲ್ಲ!
ಒಂದು ಕ್ಷಣ- ಕಣ್ಣ ಮುಂದೆಯೇ ತಬ್ಬಿ ಹೋದವಳು- ಕಣ್ಣ ಮರೆಯಲ್ಲಿ....? ಅನ್ನಿಸಿತು!
*
“ಏನಂತೆ ಅವಳದ್ದು?” ಎಂದೆ.
“ಗೊತ್ತಿಲ್ಲವೇ.... ಪಾಪ! ಡಿಪ್ರೆಶನ್ನಿಗೆ ಹೋಗುತ್ತಿದ್ದಾಳೆ!”
“ಅದಕ್ಕೆ?” ಎಂದೆ.
ಅವನು ನೋಡಿದ ನೋಟ....!
ಹೇಗೆ ಸಂಶಯಿಸದಿರಲಿ?
*
ಹೀಗಾದರೆ ಹೇಗೆ?
ಪ್ರಪಂಚವೇ ಮುಖ್ಯ!!!
ದುಃಖ ಬಂದಾಗ ನನ್ನೆದೆಯೊಳಗೆ ಹುದುಗುತ್ತಾನೆ ಎಂದರೇ..... ಅವನಿಗೆ ದುಃಖವೇ ಇಲ್ಲ!!
ಸಂತೋಷ ಬಂದಾಗ ಅಪ್ಪಿಕೊಳ್ಳುತ್ತಾನೆಂದರೆ.... ಅವ ಅಲ್ಪ ಸಂತೋಷಿ!!
ಇನ್ನು ದೈಹಿಕವಾಗಿ ಸೇರುವುದು.... ಇಬ್ಬರೂ ಒಟ್ಟಿಗೆ ಇದ್ದು.... ನಮ್ಮರಿವಿಲ್ಲದೆ ಅದರೆಡಗೆ ಹೋಗುತ್ತೇವೆಯೇ ಹೊರತು ಅದರಲ್ಲವನಿಗೆ ಸಪರೇಟಾಗಿ ಆಸಕ್ತಿಯಿದ್ದಂತೆಯೂ ಕಾಣಲಿಲ್ಲ!
ಮತ್ತೆ ಅವನ ಅಗತ್ಯವಾದರೂ ಏನು?
ಅವನನ್ನು ಕೇಳಿದರೆ-
“ಪ್ರೇಮ ಯಾವುದೇ ಅಗತ್ಯಗಳನ್ನು ಅವಲಂಬಿಸಿಲ್ಲ...” ಎಂದು ಪ್ರಾರಂಭಿಸುತ್ತಾನೆ!
ಏನು ಮಾಡಲಿ?
*
ಅಹಂಕಾರದಿಂದ- ಮನೆಯವರನ್ನು ಎದುರಿಸಿ- ಯಾವುದೋ "ಆವೇಶದಲ್ಲಿ"- ಅವನೊಂದಿಗೆ ಬಂದಾಗಿದೆ!
ಈಗ ಜೀವನ- ನಿಜ ಹೇಳಬೆಂಕೆಂದರೆ- ನೀರಸ!!
ಅವನನ್ನು ಬಿಟ್ಟು ಹೋದರೆ ಪ್ರಪಂಚ ನಗುತ್ತದೆ!
ಪ್ರಪಂಚ!!
ಅದಕ್ಕೇನು?
ರೇಪ್ ನಡೆದಿದೆ... ರೇಪ್ ಮಾಡಿದವರನ್ನು ಬಿಟ್ಟು ರೇಪಿಗೆ ಒಳಗಾದವಳನ್ನು ದೂಷಿಸುವ ಪ್ರಪಂಚ!
ಹಾಗೆಂದು ರೇಪಿಗೆ ಒಳಗಾದವಳು ಸಾಯಬೇಕೆ?
ಬೇಡ- ಹೆಣ್ಣಿನ ತಪ್ಪಿಲ್ಲದಿದ್ದರೆ ಅರಿತು- ಕೈ ಹಿಡಿದು ನಡೆಸುವವರೂ ಇದ್ದಾರೆ!!
ಪ್ರಪಂಚಕ್ಕೆ ಹೆದರಿ ತೀರುಮಾನಗಳನ್ನು ತೆಗೆದುಕೊಳ್ಳಲಾರೆ!!
*
“ನಿನ್ನ ಸಮಸ್ಯೆಯೇನು?” ಎಂದ.
“ನೀನೇ!” ಎಂದೆ.
“ಏನು ಮಾಡಲಿ?” ಎಂದ.
“ಬಿಟ್ಟು ಹೋಗು!” ಎಂದೆ.
“ಸರಿ!” ಎಂದ.
ಅವನಿಗೆ ನನ್ನ ಸಂಶಯದ ಅರಿವಾಗಿತ್ತು!!
*
ತಪ್ಪು ಯಾರದು?
ಅವನ ಬಗ್ಗೆ ಪರಿಪೂರ್ಣ ಅರಿವಿದ್ದೂ ತೀರುಮಾನ ತೆಗೆದುಕೊಂಡವಳು- “ನಾನು!”
ಈಗ ಅವನನ್ನು ದೂಷಿಸುತ್ತಿದ್ದೇನೆ!
ಅವನು ಮಾಡಿದ ತಪ್ಪೇನು?
ನನ್ನನ್ನು ನಂಬಿದ್ದು!
ಆದರೆ.... ಆದರೆ.... ಅವನೂ ನನ್ನನ್ನು ಅರಿತುಕೊಂಡು ಅದಕ್ಕನುಗುಣವಾಗಿ ನಡೆದುಕೊಳ್ಳಬಹುದಾಗಿತ್ತು....!
ನನ್ನ ಬಗ್ಗೆ ಅವನಿಗೆ ತಿಳಿದಿರಲಿಲ್ಲವೇ? ಹೇಗೆ ನಡೆದುಕೊಂಡರೆ ನಾನು ಖುಷಿಯಾಗುತ್ತೇನೆಂಬ ಅರಿವು ಬುದ್ಧಿವಂತನಾದ ಅವನಿಗಿಲ್ಲವೇ? ಈ ಪ್ರಪಂಚ ಭಾವನೆಗಳಿಗೆ ಒತ್ತು ಕೊಟ್ಟು ಪ್ರವರ್ತಿಸುತ್ತಿದೆಯೆನ್ನುವ ಸಾಮಾನ್ಯ ಜ್ಞಾನ ಅವನಿಗೆ ಬೇಡವೇ?
ಬೇಕು! ಅವನಿಗೆ ಅರಿವಿದೆ! ಆದರೆ ಅಭಿನಯಿಸಲಾರ...!
ಈಗ ನಾನೇನು ಮಾಡಲಿ?
ಎಷ್ಟು ಸುಲಭದಲ್ಲಿ ಹೋದ! ಪ್ರೇಮಿಸಿದ್ದು ನಿಜವಾಗಿದ್ದರೆ ಹೋಗುತ್ತಿದ್ದನೇ? ಇನ್ನು ನಾನೇಕೆ ಬದುಕಿರಲಿ?
ಮರುಭೂಮಿಯಂತೆ ಮನಸ್ಸು!
ನಾನೇಕೆ ಸಾಯಬೇಕು?
ಮರಳಿ ಬಾರದವನಿಗಾಗಿ ಕಾಯಲೇ?
ಹೋದರೆ ಹೋಗಲಿ! ನನ್ನ ಬದುಕು ನನ್ನದು!!
ಇಷ್ಟಕ್ಕೂ ಯಾಕೆ ಬಿಟ್ಟು ಹೋದ??
ಕೇವಲ ನನ್ನ ಮಾತಿಗೆ??
ಅಲ್ಲ.... ನಾನವನನ್ನು ಸಂಶಯಿಸಿದ್ದಕ್ಕೆ!
ಇದನ್ನವನು ತಡೆದುಕೊಳ್ಳಲಾರ!
ಏನು ಮಾಡಲಿ?
*
ಮೂಕಾಂಬಿಕ!
“ಕಾಯುತ್ತಿದ್ದೆ!” ಎಂದ.
“ಅಷ್ಟು ನಂಬಿಕೆಯೇ?” ಎಂದೆ.
“ಮೂಕಾಂಬಿಕೆ ನೀನು- ಅರ್ಥವಾಗುತ್ತದೆ!” ಎಂದ.
“ಭ್ರಮೆ ಬೇಡ! ಸಾಮಾನ್ಯ ಹೆಣ್ಣು ನಾನು!” ಎಂದೆ.
“ಹಾಗಿದ್ದರೆ ಬರುತ್ತಿರಲಿಲ್ಲ!” ಎಂದ.
“ಶಂಕರಾ... ತೀರಾ ಗೊಂದಲದಲ್ಲಿದ್ದೇನೆ! ಏನು ಮಾಡಲಿ?” ಎಂದೆ.
“ನಿನ್ನನ್ನು ನಾನು ನಂಬುತ್ತೇನೆ- ನೀನೂ ನಂಬಿಬಿಡು!” ಎಂದ.
“ಮತ್ತೂ ನಾನು ನೋಯಿಸಿದರೆ?”
“ಅದು ನಿನ್ನನ್ನೂ ಒಳಗೊಳ್ಳುವುದಿಲ್ಲವೇ? ನೋಯಿಸಿದರೂ ಚಿಂತೆಯಿಲ್ಲ- ದೂರ ಹೋಗಬೇಡ- ಮಾಡಬೇಡ!!”
“ಹೋದರೆ?”
“ಆತ್ಮಹತ್ಯೆ!”
************
Comments
Post a Comment