ಹೆಣ್ಣು- ನಾನು!
ಹೆಣ್ಣು-ನಾನು!
ನಾ ಹೆಣ್ಣು!
ಕಲಿತವಳು!
ನನ್ನದೇ ಆದ ಸ್ಪಷ್ಟ ಅವಕಾಶ- ಸ್ಥಾನ ಮಾನ ಇರುವವಳು- ಸ್ಥಾನಮಾನಕ್ಕೆ ಅರ್ಹಳಾದವಳು!
ಇರುವವಳು, ಅರ್ಹಳಾದವಳು- ಅಷ್ಟೆ!
ಸ್ಥಾನಮಾನ ಹೊಂದಿದ್ದೇನೆಯೇ? ಅರ್ಹತೆಗೆ ತಕ್ಕ ಸ್ಥಾನದಲ್ಲಿದ್ದೇನೆಯೇ ಎಂದರೆ....
ಏನು ಹೇಳಲಿ?
ನಾನು ಸತ್ತು ಎಷ್ಟೋ ಆಯಿತು! ಆಗಾಗ ಸಾಯುತ್ತಿರುತ್ತೇನೆ.... ತೇಜೋವಧೆ ಮಾಡುತ್ತಾರೆ....!
ಯಾರು? ಯಾರು ಮಾಡುತ್ತಾರೆ?
ಪುರುಷವರ್ಗ!
ಯಾಕೆ ಮಾಡುತ್ತಾರೆ?
ಇದೊಂದು ಸಮಸ್ಯೆ ನನಗೆ!
ಆ ಸಮಸ್ಯೆಗೆ ಉತ್ತರವೆಂಬಂತೆ ಆತ ನನಗೆ ಪರಿಚಯವಾದ!
*
“ಹೆಣ್ಣು ಯಾವ ಗಂಡಿಗೂ ಕಡಿಮೆಯಿಲ್ಲ! ಗಂಡು ಹೆಣ್ಣು ಸಮಾನರು!” ಎಂದೆ.
“ಹೇಗೆ?” ಎಂದ.
“ಹೇಗೆ ಅಂದರೆ? ಪ್ರತಿಯೊಂದರಲ್ಲೂ... ನೀನೂ ಮಾಮೂಲಿ ಗಂಡಸರಂತೇನ?” ಎಂದೆ.
“ಅದು ಗೊತ್ತಿಲ್ಲ! ಆದರೆ ಹೆಣ್ಣು ಹೇಗೆ ಗಂಡಿಗೆ ಸಮ? ಅಥವಾ ಅದೇ ಪ್ರಶ್ನೆಯನ್ನು ತಿರುವು ಮುರುವಾಗಿ ಕೇಳೋಣ! ಗಂಡು ಹೇಗೆ ಹೆಣ್ಣಿಗೆ ಸಮಾನ?” ಎಂದ.
ನನಗರ್ಥವಾಗಲಿಲ್ಲ.... ಸಂಶಯದಿಂದ ನೋಡಿದೆ. ನಕ್ಕ,
“ಇದೊಂದು ಟ್ರೆಂಡ್!” ಎಂದ.
“ಏನು?”
“ಗಂಡು ಹೆಣ್ಣಿನ ನಡುವಿನ ಹೋಲಿಕೆ!”
“ಹೋಲಿಕೆ ಮಾಡೋದರಲ್ಲೇನು ತಪ್ಪು? ಹೆಣ್ಣೂ ಕೂಡ ಯಾವ ಗಂಡಿಗೂ ಕಡಿಮೆಯಲ್ಲ!” ಎಂದೆ.
ಅವನು ನನ್ನ ಕಣ್ಣುಗಳನ್ನೇ ನೋಡಿದ. ಅವನ ಕಣ್ಣಿನ ಭಾವನೆ ನನಗರ್ಥವಾಗಲಿಲ್ಲ.
“ಅಂದರೆ ಗಂಡು ಹೆಣ್ಣು ಸಮಾನರಲ್ಲ ಎಂದು ನಿನ್ನ ಅಭಿಪ್ರಾಯವೇ?” ಎಂದೆ.
“ನನ್ನ ಕಥೆಯೊಂದರಲ್ಲಿ ಈ ವಿಷಯವನ್ನು ಅತಿ ಕೆಟ್ಟ ರೀತಿಯಲ್ಲಿ ವಿವರಿಸಿದ್ದೇನೆ!” ಎಂದ.
ಖಂಡಿತ... ನನ್ನ ನಾಚಿಕೆ ಮುಖದಲ್ಲಿ ಸ್ಪಷ್ಟವಾಗಿ ಕಾಣಿಸಿರುತ್ತದೆ!!
“ಅಷ್ಟೆ!” ಎಂದ.
“ಅದರಬಗ್ಗೆ ನನಗೆ ಸ್ವಲ್ಪ ವಿವರಣೆ ಬೇಕು!” ಎಂದೆ.
ಅವನ ನಗು ಕಂಡು,
“ಕೆಟ್ಟ ರೀತಿಯಲ್ಲಿ ಅಲ್ಲ... ಸ್ವಲ್ಪ ಡೀಸೆಂಟಾಗಿ ಹೇಳು! ನಾ ಮದುವೆಯಾದವಳು! ನಾಚಿಕೆ ಮಾನ ಮರ್ಯಾದಿ ಎಲ್ಲಾ ಇದೆ! ಅಲ್ಲದೇ.... ನಿನ್ನೊಂದಿಗೆ ಮಾತುಕಥೆ ಆಡುತ್ತೇನೆಂದು ಗಂಡನಿಗೆ ತಿಳಿದರೆ....!” ಎಂದೆ.
ಗಹಗಹಿಸಿ ನಕ್ಕ!
“ಇದು ನಿನ್ನ ಸಮಾನತೆ!!” ಎಂದ.
ಮುನಿಸಿನಿಂದ ನೋಡಿದೆ. ಅವನು ಒಂದು ಕ್ಷಣ ಏನೋ ಯೋಚಿಸುತ್ತಿದ್ದು...
“ಗೆಳತಿ... ಗಂಡು ಹೆಣ್ಣಿನ ನಡುವೆ ಏನು ಹೋಲಿಕೆ? ಗಂಡು ಗಂಡೇ... ಹೆಣ್ಣು ಹೆಣ್ಣೇ... ಅವರವರ ಅಳತೆಯಲ್ಲಿ ಅವರವರು ಸಮಾನರು ಹೊರತು... ಗಂಡಿಗೆ ಹೆಣ್ಣು ಸಮಾನ ಹೆಣ್ಣಿಗೆ ಗಂಡು ಸಮಾನ ಎಂಬುದಿಲ್ಲ... ಗರ್ಭಧರಿಸಲು ಹೆಣ್ಣಿಗೆ ಮಾತ್ರ ಸಾಧ್ಯ... ಹಾಗಯೇ, ಗರ್ಭಧರಿಸುವಂತೆ ಮಾಡಲು ಗಂಡಿಗೆ ಮಾತ್ರ ಸಾಧ್ಯ!” ಎಂದ.
ನಾನೇನೂ ಮಾತನಾಡಲಿಲ್ಲ! ಅವನೇ ಮುಂದುವರೆಸಿದ....,
“ಇನ್ನು... ಗಂಡು ನಿನ್ನನ್ನು ಅಂದರೆ ಹೆಣ್ಣನ್ನು ತುಳಿಯುವ ಬಗೆ...” ಎಂದು ನನ್ನ ಮುಖವನ್ನು ನೊಡಿ,
“ನನ್ನ ಗೆಳೆಯನೊಬ್ಬ ಬಂದಿದ್ದ.... ಸುಮಾರು ನಲವತ್ತೈದು ವರ್ಷ ಅವನಿಗೆ. ಸಿನೆಮಾದಲ್ಲಿ ನಟಿಸಬೇಕೆಂಬುದು ಅವನ ಆಸೆ. ಅದೇಕೆ ಸಾಧ್ಯವಾಗಲಿಲ್ಲ ಅನ್ನುವುದಕ್ಕೆ ಹಲವಾರು ಕಾರಣಗಳನ್ನು ಹೇಳಿದ... ಮನೆಯವರ ಸೆಂಟಿಮೆಂಟ್, ಸಪೋರ್ಟ್ ಇಲ್ಲದಿರುವಿಕೆ, ಹೆಂಡತಿಯ ಅಸಹಕಾರ, ಯಾರಿಗೂ ಇವನು ನಟನಾಗುತ್ತಾನೆನ್ನುವ ನಂಬಿಕೆ ಇಲ್ಲದಿರುವಿಕೆ.... ಹೀಗೆ... ನನಗೂ ಇದೆಲ್ಲಾ ಕಾರಣಗಳೇ.... ಆದರೂ ನಾನು ಸಿನೆಮಾ ನಿರ್ದೇಶನ ಮಾಡುತ್ತಿದ್ದೇನೆ- ಎಂದೆ. ಅವನಿಗೆ ಏನು ಹೇಳಬೇಕೋ ತಿಳಿಯಲಿಲ್ಲ.... ನಾನೇ ಹೇಳಿದೆ, ಗೆಳೆಯಾ.... ನಿನಗೆ ನಟನಾಗಬೇಕೆಂದರೆ ನೀನು ಶ್ರಮಿಸಬೇಕೆ ಹೊರತು ಅವರಲ್ಲ! ಅವನು ಪುನಃ ನೆಪ ಹೇಳಿದ- ಮನೆಯವರು ಒಪ್ಪದಿದ್ದರೆ ಹೇಗೆ? ನಾನೂ ಹೇಳಿದೆ... ನನ್ನ ಮನೆಯವರೂ ಒಪ್ಪಲಿಲ್ಲ, ನೀವು ಒಪ್ಪದಿದ್ದರೆ ನಾನು ಮನೆಬಿಟ್ಟು ಹೋಗುತ್ತೇನೆ ಎಂದು ಹೆದರಿಸಿದೆ- ಎಂದು. ಅದಕ್ಕವನು- ನಾನೂ ಹೆದರಿಸಿದೆ! ಎಂದ. ನಾನಾದರೆ ನಿಜವಾಗಿಯೂ ಮನೆಬಿಟ್ಟು ಹೋಗುತ್ತಿದ್ದೆ ಎಂದೆ.... ಅವನು ಸೈಲೆಂಟ್... ಏನೆಂದರೆ ಏನೂ ಮಾತನಾಡಲಿಲ್ಲ... ಹಾಗೆಯೇ ನಿನ್ನ ವಿಷಯ!” ಎಂದು ಹೇಳಿ ನನ್ನ ಮುಖ ನೋಡಿದ.
ಅವನ ಉದ್ದೇಶ ಅರಿವಾಯಿತು! ಒಂದು ಮುಗುಳುನಗು ನಕ್ಕು ಮುಂದುವರೆಸಿದ....,
“ಕಲಿತ ಹೆಣ್ಣು ನೀನು! ಹೃದಯವಿದೆ- ಮಿದುಳಿದೆ- ಭಾವನೆಗಳಿದೆ... ಆದರೂ ನಿನ್ನ ಅನಗತ್ಯ ಚಿಂತೆಗಳು...” ಅವನನ್ನು ತಡೆದು ಹೇಳಿದೆ....,
“ಅನಗತ್ಯ ಚಿಂತೆಗಳ? ನಿನಗೇನು ಗೊತ್ತು ನನ್ನ ಕಷ್ಟ?”
ನಕ್ಕ. ಇನ್ನೇನಾದರೂ ಇದೆಯಾ ಅನ್ನುವಂತೆ ನೋಡಿದ. ಮೌನವಾದೆ. ಅವನೇ ಹೇಳಿದ,
“ಈಗತಾನೆ ನೀನು ಹೇಳಿದೆ, ಮದುವೆಯಾದವಳು! ನಾಚಿಕೆ ಮಾನ ಮರ್ಯಾದಿ ಎಲ್ಲಾ ಇದೆ! ನಿನ್ನೊಂದಿಗೆ ಮಾತುಕಥೆ ಆಡುತ್ತೇನೆಂದು ಗಂಡನಿಗೆ ತಿಳಿದರೇ....! ಎಂದು. ವಯಸ್ಸಿಗೆ ಬಂದವಳು, ಮದುವೆ ಆದವಳು, ನೀನೇ... ಗಂಡು ಹೆಣ್ಣಿನ ಸಂಬಂಧದಬಗ್ಗೆ ಮಾತನಾಡಲು ಇಷ್ಟು ಹಿಂಜರಿಯುವಾಗ ಯಾರೇನು ಮಾಡಲು ಸಾಧ್ಯ? ಸಮಾನತೆಯಬಗ್ಗೆ ಮಾತನಾಡಲು ನಿನಗೇನು ಹಕ್ಕು? ಗಂಡಸರೆಲ್ಲಾ ಮೂರೂ ಬಿಟ್ಟವರೆಂದು ನಿನ್ನ ಅಭಿಪ್ರಾಯವೇ? ಹಾಗಿದ್ದರೆ ಹೆಂಗಸೂ ಮೂರನ್ನೂ ಬಿಡುವವರೆಗೆ ಸಮಾನತೆ ಹೇಗೆ ಸಾಧ್ಯ? ಇನ್ನು..., ನನ್ನೊಂದಿಗೆ ಮಾತನಾಡುವುದು ಗಂಡನಿಗೆ ತಿಳಿದರೆ ಏನು ಮಾಡುತ್ತಾರೆ?” ಎಂದ.
ನಿಜ, ಏನು ಮಾಡುತ್ತಾರೆ? ಬೈಯುತ್ತಾರೆಯೇ? ಮನೆಯಿಂದ ಹೊರಹಾಕುತ್ತಾರೆಯೇ....? ಯೋಚನೆಯಲ್ಲಿರುವಾಗ,
“ವಯಸ್ಸಿಗೆ ಬಂದ ಗಂಡು ಹೆಣ್ಣು ದೈಹಿಕವಾಗಿ ಸೇರುವುದು ತಪ್ಪಲ್ಲ ಎಂದು ನ್ಯಾಯಾಂಗವೇ ಹೇಳಿರುವ ಈ ಯುಗದಲ್ಲಿ...” ಎಂದು ನಿಲ್ಲಿಸಿ ನನ್ನ ಮುಖವನ್ನು ನೋಡಿ ಮುಗುಳುನಕ್ಕು....,
“ಹಾಗೆ ಸೇರಬೇಕೆಂದು ಹೇಳುತ್ತಿಲ್ಲ- ಫ್ಯಾಕ್ಟ್ ಹೇಳಿದೆ.... ಹಾಗಿರುವ ಈ ಯುಗದಲ್ಲಿ.... ನೀನು- ನಿನ್ನಿಷ್ಟದಂತೆ ಬದುಕಲಾಗದಿರುವುದಕ್ಕೆ- ಮನಸ್ಸಿಗೆ ಬಂದಂತೆ ಬರೆಯಲು ಸಾಧ್ಯವಾಗದಿರುವುದಕ್ಕೆ- ಬೇರೆಯವರನ್ನು ನೆಪ ಮಾಡುತ್ತೀಯಲ್ಲಾ, ಸರಿಯೇ?” ಎಂದ.
ಒಂದು ಕ್ಷಣ ಗೊಂದಲಗೊಂಡೆ. ಅವನೇನು ಹೇಳಿದನೆಂದು ಅರ್ಥವಾಗಲಿಲ್ಲ. ನನ್ನ ಗೊಂದಲವನ್ನು ಅರಿತುಕೊಂಡನೇನೋ....,
“ಮದುವೆಯಾಯಿತು! ಗಂಡ ಕೆಲಸಕ್ಕೆ ಹೋಗಬೇಡವೆಂದ- ನೀನೂ ಹೋಗಲಿಲ್ಲ, ಯಾಕೆ?” ಎಂದ.
ನಿಜವೇ....! ಯಾಕೆ?
“ಕುಟುಂಬ, ಅತ್ತೆ- ಮಾವ- ಮಕ್ಕಳು ಅನ್ನುವ ನೆಪ ಹೇಳಬೇಡ... ನಿನಗೆ ಕೆಲಸಕ್ಕೆ ಹೋಗಬೇಕೆಂದಿದ್ದರೆ ನೀನು ಹೋಗಬೇಕು! ಅದು ನಿನ್ನ ಹಕ್ಕು! ಯಾರು ಬೇಡವೆಂದರೂ ನೀನೇ ತೆಗೆದುಕೊಳ್ಳಬಹುದಾದ ತೀರುಮಾನ! ಇರಲಿ... ಗಂಡ ನಿನಗೇನು ಮಾಡಿದ ಅನ್ನುವುದಕ್ಕಿಂತ ಇನ್ನೊಬ್ಬರಿಗೆ ಏನು ಮಾಡಿದ ಅನ್ನುವುದು ನಿನ್ನ ಮತ್ತೊಂದು ಸಮಸ್ಯೆ!” ಎಂದ. ನಿಜವಾಗಿಯೂ ಅವನ ಮೇಲೆ ಕೋಪ ಬಂತು! ನಕ್ಕ...,
“ಬೆಳಗ್ಗೆ ಎದ್ದೆ. ಅಡಿಗೆ ಮಾಡಿದೆ. ಮಕ್ಕಳನ್ನು ಸ್ನಾನಮಾಡಿಸಿ ಅವರ ಉಪಚಾರ ಮಾಡಿದೆ. ಮನೆ ಒರೆಸುವುದು, ಪಾತ್ರೆ ತೊಳೆಯುವುದು, ಇನ್ನಿತರೆ- ಮಧ್ಯಾಹ್ನದ ಅಡಿಗೆ. ಆಮೇಲೆ?” ಎಂದ.
ನಾನೇನು ಹೇಳಲಿ? ಅವನೇ...,
“ಇದು ಹೀಗೆಯೇ ಎಂದು ಹೇಳಲಾಗದಿದ್ದರೂ ಒಂದು ಮನೆ ಅಂದಮೇಲೆ ಇಷ್ಟೆಲ್ಲಾ ಮಾಡಬೇಕಾದ್ದೆ...! ಇಪ್ಪತ್ತ ನಾಲ್ಕು ಗಂಟೆ ಸಮಯವಿದೆ! ಎಂಟು ಗಂಟೆಸಮಯ ನಿದ್ರೆ! ಎಂಟು ಗಂಟೆ ಸಮಯ ಇದೆಲ್ಲದ್ದಕ್ಕೆ ಅಂದರೂ... ಉಳಿದ ಸಮಯ ನಿನ್ನದೇ.... ಆದರೂ ನಾನು ಬರೆಯುತ್ತಿಲ್ಲ- ಬರೆಯಲಾಗುತ್ತಿಲ್ಲ- ನಾನು ಬರೆಯುವುದು ಅವರಿಗೆ ಇಷ್ಟವಿಲ್ಲ...! ಅವರ ಸಪೋರ್ಟ್ ಇಲ್ಲ... ಅವರು ಹಾಗೆ, ಇವರು ಹೀಗೆ, ಮಕ್ಕಳು ಮರಿಗಳು...! ಕರ್ಮ! ನೀನು ನಿನಗಾಗಿ ಬರೆ ಹೊರತು- ನಿನ್ನ ಸೋಮಾರಿತನಕ್ಕೆ ಬೇರೆಯವರನ್ನು ಯಾಕೆ ಕಾರಣ ಮಾಡುತ್ತೀಯೆ? ನಿನ್ನ ಜೀವನವನ್ನು ನೀನು ನೋಡಿಕೊಳ್ಳಲು ನೆಪಗಳನ್ನು ಹುಡುಕು ಹೊರತು...” ಎಂದ.
“ಅದೇ ಕೆಲಸಕ್ಕೆ ಹೋಗುವವಳಾದರೆ?” ಎಂದೆ- ಗೆದ್ದವಳಂತೆ! ನಕ್ಕ...,
“ಆಗ... ಗಂಡನೂ ನಿನಗೆ ಸಹಾಯ ಮಾಡಬೇಕು!” ಎಂದ. ನಾನೂ ನಗುತ್ತಾ ಹೇಳಿದೆ,
“ಅವರು ಮಾಡಲಾರರು!”
“ಅಷ್ಟೆ! ಅವರು ಮಾಡಲಾರರು...! ಯಾಕೆ? ನೀನು ಮಾಡುತ್ತೀಯ! ನೀನೂ ಮಾಡದಿದ್ದರೆ?”
“ಜಗಳ!” ಎಂದೆ... ನಾನೇ ಗೆಲ್ಲತೊಡಗಿದ್ದೆ.
“ಜಗಳ ಇಲ್ಲದಂತೆ- ನಿನ್ನಿಷ್ಟದಂತೆ ಬದುಕಲು, ಅಂದರೆ... ಮನೆಯವರ, ನಿನ್ನ, ಎಲ್ಲರ ಕಾರ್ಯಗಳನ್ನೂ ಮಾಡಿ ನೀನೂ ಕೆಲಸಕ್ಕೆ ಹೋಗುವವಳಾದ್ದರಿಂದ....” ಎಂದು ನಿಲ್ಲಿಸಿ ನನ್ನ ಕಣ್ಣುಗಳನ್ನೇ ನೋಡುತ್ತಾ....,
“ನಿನ್ನ ಜೀವನವನ್ನು ನೀನು ನೋಡಿಕೊಳ್ಳುವುದು ಒಳ್ಳೆಯದು! ಅದೇ ವ್ಯಕ್ತಿ ಸ್ವಾತಂತ್ರ್ಯ! ಸಮಾನತೆ! ಅದನ್ನು ಮಾಡಲಾಗದಿರುವಷ್ಟು ಕಾಲ.... ವಾದಕ್ಕೆ ಬರಬೇಡ!” ಎಂದ.
ಎಷ್ಟು ಸುಲಭದಲ್ಲಿ ಹೇಳಿಬಿಟ್ಟ! ಆದರೆ ವಾಸ್ತವದಲ್ಲಿ ಸಾಧ್ಯವೇ? ನನ್ನ ಯೋಚನೆಯನ್ನು ಕಂಡು,
“ಗೆಳತಿ.... ನೀನು ಒಪ್ಪಿಸುವವಳಾಗಬೇಕು.... ಕೆಲಸಕ್ಕೆ ಹೋಗುವುದರ ಅಗತ್ಯ, ನಿನ್ನ ವ್ಯಕ್ತಿಗತ ಜೀವನದ ಮಹತ್ವ... ಅರ್ಥವಾಗಿ ಒಪ್ಪಿಕೊಂಡರೆ ಓಕೆ... ಇಲ್ಲಾ ಅವರೇ ನಿನ್ನನ್ನು ಕನ್ವಿನ್ಸ್ ಮಾಡಿದರೆ.... ಆ ಜೀವನವನ್ನು ಒಪ್ಪಿಕೊಂಡು ಬಿಡು ಹೊರತು... ದೂಷಿಸುತ್ತಾ ನಿನ್ನ ಜೀವನವನ್ನು ಹಾಳು ಮಾಡಿಕೊಳ್ಳಬೇಡ! ಆ ಜೀವನ ನಿನಗಿಷ್ಟವಿಲ್ಲವಾ.... ಹೊರಕ್ಕೆ ಬಾ!! ಪ್ರಪಂಚ ವಿಶಾಲವಾಗಿದೆ! ನಿನ್ನಿಷ್ಟದ ಜೀವನ ನಡೆಸುವುದಕ್ಕೆ ನಿನಗೆ ಎಲ್ಲಾ ರೀತಿಯ ಅವಕಾಶಗಳೂ ಇದೆ...” ಎಂದ.
ನಿಜವೇ...! ಆಯ್ಕೆ.... ಅದು ಸಂಪೂರ್ಣವಾಗಿ ಅವರವರ ಕೈಯ್ಯಲ್ಲೇ....! ಧೈರ್ಯ- ತೀರುಮಾನ ತೆಗೆದುಕೊಳ್ಳುವ ಧೈರ್ಯವಿದ್ದರೆ ನಾವು ಯಾರನ್ನೂ ದೂಷಿಸುವ ಅವಕಾಶವಿಲ್ಲ...! ಪ್ರತಿಯೊಬ್ಬರಿಗೂ ಅವರವರೇ ಸರಿಯಿರುವಾಗ... ಇನ್ನೊಬ್ಬರನ್ನು ತಪ್ಪು ಎಂದು ಹೇಳುವುದು ಹೇಗೆ?
ಪುರುಷಾಧಿಪತ್ಯಕ್ಕೆ ಕಾರಣವೇನು?
ಸ್ತ್ರೀ..... ಅವನ ಆಧಿಪತ್ಯವನ್ನು ಒಪ್ಪಿಕೊಂಡಿರುವುದೇ ಹೊರತು ಬೇರೆಯಲ್ಲ!!
ಕೊನೆಯ ವಾಕ್ಯವಾಗಿ....,
“ತುಳಿಸಿಕೊಳ್ಳುವವರು ಇರುವಷ್ಟು ಕಾಲವೂ.... ತುಳಿತವಿರುತ್ತದೆ! ಅದು ತುಳಿಯುವವರ ತಪ್ಪಲ್ಲ!” ಎಂದ.
ನಾನೇನೂ ಮಾತನಾಡಲಿಲ್ಲ.
ಇದು ನನ್ನ ಸ್ವಾತಂತ್ರ್ಯ ಅನ್ನುವಂತೆ.... ಹತ್ತಿರಕ್ಕೆ ಬಂದು.... ನನ್ನನ್ನಪ್ಪಿ.... ತಲೆಗೊಂದು ಮುತ್ತುಕೊಟ್ಟು.... ಹೊರಟು ಹೋದ!
ಪ್ರಪಂಚವನ್ನೇ ಮರೆತೆ ಹೊರತು- ಆ ಭಾವಕ್ಕೆ ಅರ್ಥವನ್ನು ಹುಡುಕಲು ಹೋಗಲಿಲ್ಲ.... ಕಾರಣ....
ಹೆಣ್ಣು ನಾನು!
ಹೆಣ್ಣು ನಾನು!! ಹೆಣ್ಣಿನ ಮನದ ಪರಕಾಯ ಪ್ರವೇಶ!! ನಿಜ.. ಹೆಣ್ಣು ಯಾವತ್ತೂ ಹೆಣ್ಣೇ.. ನಾನು ಹೆಣ್ಣು ಎಂದು ತನ್ನ ಸುತ್ತ ಸೃಷ್ಟಿಸಿಕೊಂಡಿರುವ ವರ್ತುಲದಿಂದ ಮುಕ್ತವಾಗಿ ಹೊರಬರಲು, ತೆರೆದುಕೊಳ್ಳಲು ಸಾಧ್ಯವಿಲ್ಲವೇನೋ..
ReplyDeleteನಿಮ್ಮ ನಿರೂಪಣೆ ಚಂದ.
ತನ್ನ ಸುತ್ತ ಯಾಕೆ ವರ್ತುಲ ಸೃಷ್ಟಿಸಿಕೊಳ್ಳುವುದು? ಸೃಷ್ಟಿಸಿಕೊಂಡವರಿಗೆ ಹೊರಬರಲಾಗದೆ...? ಖಂಡಿತಾ ಅಸಾಧ್ಯವಲ್ಲ...!
Deleteಕಾರಣ ಅದೇ..ನಾನು ಹೆಣ್ಣು!!
Delete