ಅಜ್ಜಿ

ಅಜ್ಜಿ

ಹೆದರಿಕೆ ಅನ್ನುವುದು ಈಗ ನನ್ನ ಬದುಕಿನಲ್ಲಿಲ್ಲ- ಮುಂದೆಯೂ ಇರುವುದಿಲ್ಲ!

ಯಾಕೆಂದೋ....

ಇತ್ತು!

ಸುಮಾರು ಹತ್ತು ಹನ್ನೆರಡು ವರ್ಷದ ಹುಡುಗನಾಗುವವರೆಗೆ- ಅತಿ ಎಂದರೆ ಅತಿ ಹೆದರಿಕೆ.

ಸಂಜೆ ಏಳು ಗಂಟೆಯಾಗುವಷ್ಟರಲ್ಲಿ ಮನೆಯೊಳಗೆ ಸೇರಿಕೊಂಡು ಬಿಡುತ್ತಿದ್ದೆ.

ಕತ್ತಲೆಂದರೆ ಅಷ್ಟು ಹೆದರಿಕೆ...

ನಮಗಿಂತ ಹಿರಿಯ ಹುಡುಗರು ಹೇಳುತ್ತಿದ್ದ ಕಥೆಗಳು- ಪುಸ್ತಕಗಳಲ್ಲಿ ಬರುತ್ತಿದ್ದ ದೆವ್ವ ಭೂತದ ಕಥೆಗಳನ್ನು ನಿಜವೆಂದು ನಂಬಿ- ನೆರಳು ಕಂಡರೂ ಓಡುವಷ್ಟು ಹೆದರಿಕೆ.

ಒಂದು ದಿನ ಹಾಗೆಯೇ ಆಯಿತು...

ಐದನೇ ತರಗತಿಯೇನೋ...

ರಾತ್ರಿ ನಿದ್ರೆ ಮಾಡುವಾಗ "ಅರ್ಜೆಂಟ್" ಆದರೆ ಮಂಚದಲ್ಲಿಯೇ "ಮಾಡುತ್ತಿದ್ದ" ದಿನಗಳನ್ನು ದಾಟಿ- ಎಚ್ಚರವಾಗತೊಡಗಿದ್ದ ವಯಸ್ಸು!

ಅಂದೂ ಕೂಡ ಎಚ್ಚರವಾಯಿತು...

ಅಮ್ಮ ಟೀಚರ್... ಯಾವುದೋ ಟ್ರೈನಿಂಗಿಗೆ ಹೋದ ನೆನಪು- ಅಥವಾ ಎಲೆಕ್ಷನ್ ಡ್ಯೂಟಿಯಿರಬೇಕು....ಅಪ್ಪ ಅವರೊಂದಿಗೆ ಹೋಗಿದ್ದರು...

ನಾನು, ಅಜ್ಜಿ- ಅಮ್ಮನ ಅಮ್ಮ- ಅಕ್ಕಂದಿರಿಬ್ಬರು.

ಅಜ್ಜಿ ಮತ್ತು ಅಕ್ಕಂದಿರು ಒಳ್ಳೆಯ ನಿದ್ರೆ- ಡಿಸ್ಟರ್ಬ್ ಮಾಡಬೇಕು ಅನ್ನಿಸಲಿಲ್ಲ.

ನಿದ್ದೆಯಲ್ಲಿ ಮಾಡಿದವನಂತೆ ಮಂಚದಲ್ಲಿಯೇ!- ಮಾಡಿಬಿಡಲೆ ಅನ್ನಿಸಿದರೂ- ಎಲ್ಲಿಲ್ಲದ ಧೈರ್ಯವನ್ನು ತಂದುಕೊಂಡು ಎದ್ದು ಹೊರಬಂದೆ.

ಎಷ್ಟು ಹೊತ್ತಾದರೂ ಮುಗಿಯುತ್ತಿಲ್ಲ ಅನ್ನುವ ಭಾವ!

ತಟ್ಟನೆ ಹಿಂದೆ ಏನೋ ಚಲಿಸಿದಂತಾಯಿತು!

ಮೊದಲೇ ಮನದಲ್ಲಿ ಸಂಶಯ ಪಿಶಾಚಿ...

ಬಾಗಿಲು ಕೂಡ ಹಾಕದೆ- ಉಳಿದದ್ದು ಬೇಕಾದರೆ ಬೆಡ್ಡಿನಲ್ಲಿಯೇ ಆಗಲಿ ಎಂದು ಓಡಿ... ಓಡಿಯಲ್ಲ... ಲಾಂಗ್‌ಜಂಪ್ ಮಾಡುತ್ತಾ ಬಂದು ಅದೇ ವೇಗದಲ್ಲಿ ಮಂಚಕ್ಕೆ ಹಾರಿ ಕಂಬಳಿ ಎಳೆದುಕೊಂಡೆ.

ಏನಾಯ್ತೋ?” ಎಂದ ಅಜ್ಜಿಯ ಪ್ರಶ್ನೆಗೆ ಉತ್ತರಿಸಲಿಲ್ಲ!!

ಎರಡು ದಿನ ಜ್ವರ!!

ನನಗೆ ಹೆದರಿಕೆಯನ್ನು ಹೊಡೆದೋಡಿಸಬೇಕಿತ್ತು! ಧೈರ್ಯವನ್ನು ಸಂಬರಿಸಿಕೊಳ್ಳಬೇಕಿತ್ತು...

ಮನದಲ್ಲೆಲ್ಲಾ ದೇವರ ನಾಮ- ಧೈರ್ಯಕೊಡು ಅನ್ನುವ ಪ್ರಾರ್ಥನೆ...

ಜ್ವರ ಬಂದ ಎರಡನೆಯ ದಿನ ರಾತ್ರಿ ಒಂದು ಕನಸು...

ಈಗಲೂ ಆ ಕನಸನ್ನು ನಾನು ಅನುಭವಿಸುತ್ತೇನೆ- ಅನುಭಾವಿಸುತ್ತೇನೆ....

ನಾನು ಮತ್ತು ನನ್ನ ಚಿಕ್ಕಪ್ಪನ ಮಗ- ಪ್ರಕಾಶ ಕ್ರಿಕೆಟ್ ಆಡುತ್ತಿದ್ದೆವು.

ಒಂದುಕಡೆ ಹುಣಸೆ ಮರ ಮತ್ತೊಂದು ಕಡೆ ಮಾವು- ನಮ್ಮ ವಿಕೆಟ್‌ಗಳು!

ನಾನು ಬ್ಯಾಟಿಂಗ್ ಮಾಡುತ್ತಿದ್ದೆ.

ಬೌಲಿಂಗ್ ಮಾಡಲು ಪ್ರಕಾಶ ಓಡಿ ಬರುತ್ತಿದ್ದಾಗ ಒಂದು ಅದ್ಭುತ ನಡೆಯಿತು....

ಎರಡು ವಿಕೆಟ್‌ಗಳ (ಮರಗಳ) ಮಧ್ಯೆ ಮಣ್ಣು ಕುದಿಯಲಾರಂಬಿಸಿತು- ಸೂರ್ಯನ ಪ್ರಖರ ಕಿರಣಗಳಿಗೆ ಸುಟ್ಟ ಮರುಭೂಮಿಯಂತೆ!!

ಕುದಿಯುತ್ತಿರುವ ಮಣ್ಣಿನೊಳಗಿನಿಂದ ಅಜ್ಜಿ - ಅಮ್ಮನ ಅಮ್ಮ- ಹೊರಬಂದರು!

ಛೆ! ಇವರೇಕೆ? ಇವರಿನ್ನೂ ಬದುಕಿದ್ದಾರಲ್ಲಾ? ಅನ್ನಿಸಿತು!

ಕೆನ್ನೆಯನ್ನು ತಟ್ಟಿ- ಬೇಗ ಬಾ ಎಂದು ಹೇಳಿ ಹೊರಟು ಹೋದರು!

ಅದೋ....ಅವರ ಹಿಂದೆಯೇ ಮಣ್ಣಿನೊಳಗಿಂದ ಎದ್ದು ಬರುತ್ತಿದ್ದಾರೆ- ಅಪ್ಪನ ಅಮ್ಮ- ಅಜ್ಜಿ!!

ಅವರು ತೀರಿಕೊಂಡು ಮೂರುನಾಲ್ಕು ವರ್ಷಗಳಾಗಿತ್ತು!

ಅವರನ್ನು ಕಂಡು ಪ್ರಕಾಶ ಓಡಿಹೋದ.

ನನ್ನ ಅಜ್ಜಿ ನನಗೇನು ಮಾಡುತ್ತಾರೆ ಅನ್ನುವ ಭಂಡ ಧೈರ್ಯ ನನಗೆ!

ಹತ್ತಿರ ಬಂದರು- ಮುಗುಳುನಗು- ಕೈಯ್ಯಲ್ಲಿ ಸಣ್ಣ ತಟ್ಟೆ!

ಏನೆಂದು ಇಣುಕುವಾಗ ಅವರೇ ಅದರಿಂದ ಎರಡು ಬೆರಳುಗಳಲ್ಲಿ- ಹೆಬ್ಬೆರಳು ಮತ್ತು ತೋರುಬೆರಳು- (ಬದುಕಿದ್ದಾಗ ಮಾಡುತ್ತಿದ್ದರು) ಬಸ್ಮವನ್ನು ತೆಗೆದು ನನ್ನ ಬಾಯಿಗೆ ಹಾಕಿದರು.

ಆಶೀರ್ವದಿಸುವಂತೆ ಎರಡೂ ಕೈಗಳಿಂದ ತಲೆಯನ್ನು ಹಿಡಿದು ನೆತ್ತಿಯ ಮೇಲೆ ಮುತ್ತು ಕೊಟ್ಟು-

ಇನ್ನು ಮುಂದೆ ಯಾವ ಕಾರಣಕ್ಕೂ ನೀನು ಹೆದರಬಾರದು! ನೀನು ನಮ್ಮೆಲ್ಲರ? ಸಂರಕ್ಷಣೆಯಲ್ಲಿದ್ದೀಯ....!” ಎಂದರು.

ನಂತರ ಮತ್ತೊಮ್ಮೆ ಹಣೆಗೆ ಮುತ್ತು ಕೊಟ್ಟು- ನಾಮದಂತೆ ಬಸ್ಮವನ್ನು ಹಚ್ಚಿ- ನನ್ನನ್ನು ಅವರ ಎದೆಗೆ ಒತ್ತಿಹಿಡಿದು ಹಾಗೆಯೇ ಗಾಳಿಯಲ್ಲಿ- ಪ್ರಕೃತಿಯಲ್ಲಿ ಲೀನವಾಗಿ ಹೋದರು....

ಕನಸಿನಿಂದ ಎಚ್ಚರವಾದಾಗ- ಬಾಯಲ್ಲಿ ಬಸ್ಮದ ರುಚಿ- ಹಣೆಯಲ್ಲಿ ಬಸ್ಮ!

ಕನಸಿನಲ್ಲಿ ಹಲುಬುವಾಗಲೋ- ಚಡಪಡಿಸುವಾಗಲೋ ಅಜ್ಜಿಯೋ- ಅಮ್ಮನ ಅಮ್ಮ- ಯಾರೋ ಹಚ್ಚಿರಬಹುದು....

ಅದನ್ನು ಕೇಳಲಿಲ್ಲ...

ನನ್ನೊಬ್ಬನ ಅನುಭೂತಿಯಾಗಿ ಹಾಗೆಯೇ ಉಳಿಸಿಕೊಂಡೆ.

ಅಂದಿನಿಂದ ಇಂದಿನವರೆಗೆ ನಾನು ಯಾವ ಕಾರಣಕ್ಕೂ ಹೆದರಿದವನಲ್ಲ! ಮುಂದೆ ಹೆದರುವವನೂ ಅಲ್ಲ...

ಅದೊಂದು ಫೀಲ್- ನಂಬಿಕೆ- ಫ್ಯಾಕ್ಟ್--

-- ನಾನೊಂದು ಸಂರಕ್ಷಣ ವಲಯದಲ್ಲಿದ್ದೇನೆ- ಯಾರದೋ ಕೈಗಳಲ್ಲಿ ಸುರಕ್ಷಿತನಾಗಿದ್ದೇನೆ- ಅನ್ನುವುದು!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!