ಸಾತ್ವಿಕ, ರಾಜಸಿಕ, ತಾಮಸಿಕ

ನಾನು ಬರೆದ ಕಥೆಯೊಂದರ ಬಗ್ಗೆ ವಿಮರ್ಶೆ ನಡೆಯುತ್ತಿತ್ತು! ಸಣ್ಣ ಕಥೆ! ಕಥೆಯ ಹೆಸರು- ಸಮಸ್ಯೆ! ಸಂಭಾಷಣೆಯ ಹೊರತು ಯಾವುದೇ ವಿವರಣೆಯಿಲ್ಲದ ಕಥೆ! ಇದು-
“ಮಗು, ನಿನ್ನ ತಪ್ಪಿಲ್ಲ ಅಂದಮೇಲೆ ಯಾಕೆ ಇಷ್ಟು ಕೊರಗುತ್ತೀಯೋ?”
“ನನ್ನದು ತಪ್ಪಲ್ಲ ಅನ್ನುವುದು ನನ್ನ ನಂಬಿಕೆ ಅಷ್ಟೆ ಹೊರತು- ಅವಳ ಪ್ರಕಾರ ನಾನು ತಪ್ಪುಗಾರನಲ್ಲವೇ?”
“ಅವಳಿಗೆ ಅವಳು ಸರಿ! ನಿನಗೆ ನೀನು... ಚಿಂತೆಯೇಕೆ?”
“ಯೋಚಿಸುತ್ತಿದ್ದೇನೆ! ಅವಳದೇ ಸರಿ ಎಂದು ಸಮರ್ಥಿಸಲಾದರೂ ಕಾರಣವೇನೂ ಸಿಗುತ್ತಿಲ್ಲ!”
“ಹಾ.... ನೀನು ಗುಲಾಮನಲ್ಲ! ಅವಳು ಹೇಳಿದಂತೆ ನೀನು ಕೇಳಬೇಕಾಗಿಲ್ಲ!”
“ಅದೇ.... ನಾನು ಹೇಳಿದ್ದೇನೂ ಅವಳು ಕೇಳುತ್ತಿಲ್ಲ- ಕೇಳಲಿಲ್ಲ!”
“ಅಷ್ಟೆ! ಅವಳು ಹೇಳಿದ್ದನ್ನು ಕೇಳಿ ನೀನು ನಿನ್ನ ಪ್ರೇಮವನ್ನು ಸಾಭೀತುಪಡಿಸಬೇಕಿಲ್ಲ!”
“ಎಷ್ಟೆಲ್ಲಾ ಮಾಡಿದೆ!!”
“ಕೊರಗದಿರು! ಅಷ್ಟು ಮಾಡಿದ್ದು ನಿನ್ನ ಒಳ್ಳೆಯತನ! ಅದನ್ನೇ ಇಟ್ಟುಕೊಂಡು ತನ್ನ ಸ್ವಾರ್ಥ ಸಾಧಿಸುವುದು ಅಷ್ಟು ಒಳ್ಳೆಯದಲ್ಲ!”
“ಇದನ್ನು ಹೇಗೆ ಸಹಿಸಲಿ? ಮಾಡಲಿ? ಸಾಧ್ಯವಿಲ್ಲ! ನಾನೂ ಮನುಷ್ಯನೇ....!”
“ಇಷ್ಟಕ್ಕೂ ಅವಳ ಕೋರಿಕೆಯೇನು?”
“ಅದನ್ನು ಕೋರಿಕೆ ಅನ್ನಲಾಗದು! ಆಜ್ಞೆ ಎಂದೂ ಹೇಳಲಾಗದು! ವಿಚಿತ್ರ ರೀತಿಯ ಬೇಡಿಕೆ!”
“ಅದೇನಪ್ಪಾ ಅಂಥಾ ಬೇಡಿಕೆ....?!”
“ಅವಳ ಹಳೆಯ ಪ್ರಿಯತಮನನ್ನು ಭೇಟಿಯಾಗಬೇಕಂತೆ!”
“ಕೈ ಹಿಡಿಯಬೇಕಾದ ಸಮಯದಲ್ಲಿ ಕೈ ಕೊಟ್ಟು- ಮದುವೆಯಾಗದೆ ತಪ್ಪಿಸಿಕೊಂಡವನಲ್ಲವೇ?”
“ಹೌದು! ಆ ಅಪಮಾನದಿಂದ ತಪ್ಪಿಸಲೇ ಅಲ್ಲವೇ ನಾನು ಮದುವೆಯಾದದ್ದು?”
“ಹಾಗಿದ್ದರೆ ಅವಳ ಆ ಕೊರಗು ತಪ್ಪು!”
“ಇರಬಹುದು! ಆದರೂ ನಾನು ಒಪ್ಪಿಗೆ ಕೊಟ್ಟೆ! ಅದಕ್ಕೇನು... ಭೇಟಿಯಾಗೋಣ! ಅವನನ್ನು ನೀನು ಮಿಸ್ ಮಾಡಿಕೊಳ್ಳಬೇಕಾಗಿಲ್ಲ- ಎಂದು!”
“ವ್ಹಾಟ್? ನಿನಗೇನು ಹುಚ್ಚೇ....?”
“ಆದರೆ ಸಮಸ್ಯೆ ಅದಲ್ಲ!”
“ಇನ್ನೇನು? ಒಪ್ಪಿಕೊಂಡಮೇಲೆ ಕೊರಗೇಕೆ?”
“ಅವರು ಭೇಟಿಯಾಗುವಾಗ ನಾನು ಇರಬಾರದಂತೆ!”
“ನಾನು ಹೋಗುತ್ತೇನೆ! ಇದೆಲ್ಲಾ ಯೋಚನೆ ಮಾಡಲೂ ಅರ್ಹವಲ್ಲದ ವಿಷಯ! ನೀನು ಯೋಚಿಸುತ್ತಾ ಕುಳಿತಿದ್ದೀಯೆಂದರೆ..... ಬೈ!”
ಇಷ್ಟೇ ಕಥೆ! ಕಥೆಯನ್ನು ಓದಿದ ನನ್ನ ಗುರುಮಾತೆ,
“ನೀನೊಬ್ಬ ಮೂರ್ಖ!” ಎಂದರು.
ಅವರು ಹೇಳಿದಮೇಲೆ ಹಾಗೆಯೇ! ನನ್ನ ಮೌನವನ್ನು ಕಂಡು,
“ನಿನ್ನ ಇಷ್ಟವನ್ನು ಅವಳು ನಿರಾಕರಿಸಿದ್ದಳು?” ಪ್ರಶ್ನೆ!
ಹೌದು ಅನ್ನುವಂತೆ ತಲೆಯಾಡಿಸಿದೆ.
“ಅದೂ... ಬೇರೊಬ್ಬನನ್ನು ಪ್ರೇಮಿಸುತ್ತಿರುವುದರಿಂದ?”
ಅಲ್ಲ ಅನ್ನುವಂತೆ ತಲೆಯಾಡಿಸಿದೆ!
“ಅಲ್ವಾ? ಮತ್ತೆ?”
“ನಾನು ಪ್ರಪೋಸ್ ಮಾಡಿದಾಗ ನಿರಾಕರಿಸಿದಳು ಹೊರತು- ಕಾರಣ ಹೇಳಿರಲಿಲ್ಲ!”
“ಪ್ರೇಮವಿರುವುದೇ ಕಾರಣವೇನೋ?”
“ಅಲ್ಲ! ಆಗ ಅವಳಿಗೆ ಪ್ರೇಮವಿರಲಿಲ್ಲ!”
ಗೊಂದಲದಿಂದ ನೋಡಿದರು.
“ನಿಜ! ನಾನು ಪ್ರಪೋಸ್ ಮಾಡಿ ಎರಡು ವರ್ಷದ ನಂತರ ಪರಿಚಯವಾದವನು ಅವಳ ಪ್ರಿಯಕರ!”
ನನ್ನನ್ನೇ ನೋಡುತ್ತಿರುವ ಅವರ ಕಣ್ಣಿನಲ್ಲಿ ಕರುಣೆ! ನಾನೇ ಮುಂದುವರೆಸಿದೆ,
“ಅವನನ್ನು ಪರಿಚಯವಾದ ಒಂದು ವರ್ಷದ ನಂತರ ನನಗೆ ವಿಷಯವನ್ನು ತಿಳಿಸಿದಳು!”
“ಸರೀ.... ಆಮೇಲೆ?”
“ಆಮೇಲೇನು? ಮದುವೆಯಾಗಬೇಕೆಂಬ ಒತ್ತಡ ಹೆಚ್ಚಾದಾಗ ಪ್ರಿಯಕರ ಕೈಕೊಟ್ಟ!!”
“ಓ.... ಆಗ ನೀನು ಹೀರೋಥರ ಮುಂದೆ ಬಂದೆ?” ಕೇಳಿದರು.
“ಇಲ್ಲ! ನನಗದು ತಿಳಿದೇ ಇರಲಿಲ್ಲ!”
“ಮತ್ತೆ?”
“ಅವರ ಅಪ್ಪ ಅಮ್ಮ ಬೇರೊಬ್ಬನೊಂದಿಗೆ ಅವಳ ನಿಶ್ಚಿತಾರ್ಥ ಮಾಡಿದರು!”
ಅವರ ನೋಟದಲ್ಲಿದ್ದ ಕರುಣೆ ವ್ಯಂಗ್ಯವಾಯಿತು!
“ಅದೇನೋ ಪೂರ್ತಿ ಹೇಳಿ ಸಾಯಿ!” ಎಂದರು.
“ನಿಶ್ಚಿತಾರ್ಥವಾದ ಮೇಲೆ ಹುಡುಗಿಗೆ ಜ್ಞಾನೋದಯವಾಗಿದೆ!” ಎಂದೆ.
“ಏನಂತ?”
“ಹುಡುಗ ಅವಳಿಗಿಂತ ಹತ್ತುವರ್ಷ ಹಿರಿಯ! ಕಪ್ಪು! ಒರಟು ತುಟಿ! ಹೇಳಿಕೊಳ್ಳುವ ಕೆಲಸವಿಲ್ಲ!” ಎಂದೆ.
“ಅಂತ ಅವಳು ಹೇಳಿದಳು?” ಕೇಳಿದರು.
“ಹೂ!”
“ನೀನು ನಂಬಿದೆ!”
“ನೀವು ಪೂರ್ತಿ ಕೇಳಿ!” ಎಂದೆ. ನಂತರ ಮುಂದುವರೆಸಿದೆ,
“ಅವಳು ಪ್ರೇಮ ನಿರಾಕರಿಸಿದ ಮೇಲೆ- ಯಾಕೆ ನಿರಾಕರಿಸಿದಳೋ, ನಾನು ಪ್ರೇಮಕ್ಕೆ ಯೋಗ್ಯನಲ್ಲವೇನೋ ಎಂದು ತಿಳಿಯಲು....” ಎಂದು ಹೇಳಿ ಅವರ ಮುಖವನ್ನು ನೊಡಿದೆ.
“ತಿಳಿಯಲು...?”
“ನಾನು ಬೇರೆ ಹುಡುಗಿಯರ ಸೆರಗು ಹಿಡಿದು ನಡೆಯುತ್ತಿದ್ದೆ!” ಎಂದೆ.
ಅವರ ಅರಿವಿಲ್ಲದಂತೆ ತುಟಿಯಂಚಿನಲ್ಲಿ ಮುಗುಳುನಗು ಮೂಡಿತು.
“ಆಗ ಬಂತು ನೋಡಿ ಮೆಸೇಜ್!” ಎಂದೆ.
“ಏನು ಮೆಸೇಜ್?”
“ಓಡಿ ಹೋಗೋಣವಾ ಅಂತ!”
“ನೀನೇನಂದೆ?
“ನಾನು ಬೃಹದ್ರಥನಲ್ಲ- ಮಾಂಧಾತ ಎಂದೆ. ಅದಕ್ಕವಳು- ಮಾಂಧಾತನನ್ನೇ ಕೇಳುತ್ತಿರುವುದು!- ಎಂದಳು.”
ಅವರು ಮುಂದುವರೆಸು ಅನ್ನುವಂತೆ ನೋಡಿದರು.
“ಏನೋ ಸಮಸ್ಯೆಯಿದೆಯೆಂದು ನಾನು ಅವಳನ್ನು ಭೇಟಿಯಾಗಲು ಹೋದೆ! ಆಗ ಹೇಳಿದಳು ನೋಡಿ- ಅವಳ ಪ್ರಿಯಕರ ಕೈಕೊಟ್ಟದ್ದು- ಬೇರೆ ನಿಶ್ಚಿತಾರ್ಥವಾದದ್ದು!” ಎಂದೆ.
“ನೀನು ಪ್ರತಿ ಸಾರಿ ಹೀಗೆ ಬ್ರೇಕ್ ಕೊಡಬೇಡ! ಅದೇನೋ ಹೇಳಿ ಮುಗಿಸಿಬಿಡು! ಸಾಗರದ ಮುಂದೆ ನಿಂತು ವಿಲಪಿಸಿದಂತೆ!!” ಎಂದರು.
ಅನರ್ಘಳನಿರರ್ಘಳವಾಗಿ ಹರಿಯಿತು ನನ್ನ ವಾಕ್‌ಪ್ರವಾಹ! ನಾನು ಭಾರಿ ಒಳ್ಳೆಯವ ಅನ್ನುವುದನ್ನು ಸಾಭೀತು ಪಡಿಸಲು ಸಿಕ್ಕ ಅವಕಾಶವನ್ನು ಬಿಡುತ್ತೇನೆಯೇ....?
“ಅವರು ನನ್ನನ್ನು ಯಾವುದಕ್ಕೋ ತಯಾರು ಮಾಡುತ್ತಿದ್ದರು! ಅವಳ ಅಕ್ಕ ಬಂದು- ‘ಊರವರ ಮುಂದೆ ಹೇಗೆ ತಲೆಯೆತ್ತಿ ನಿಲ್ಲುವುದು?’ ಎಂದರು. ‘ಅದಕ್ಕೇನು ಸ್ವಲ್ಪ ದಿನ ನಮ್ಮೂರಿಗೆ ಬಂದು ಇದ್ದರಾಯಿತು!’ ಎಂದೆ. ‘ಅದು ಹೇಗೆ ಸಾಧ್ಯ? ಅಥವಾ ಹಾಗೆ ಬಂದರೂ ಅದೂ ಕೆಟ್ಟ ಹೆಸರಿಗೆ ಕಾರಣವಾಗುತ್ತದೆ!’ ಎಂದರು. ‘ಈಗ ಏನು ಮಾಡಬೇಕು ಅಂದುಕೊಂಡಿದ್ದೀರಿ?’ ಎಂದು ಕೇಳಿದೆ. ‘ನಿನಗೆ ಅಭ್ಯಂತರವಿಲ್ಲದಿದ್ದರೇ.....’ ಎಂದಾಗ ಯೋಚನೆಗೆ ಬಿದ್ದೆ! ಇದು ಸಾಮಾನ್ಯ ವಿಷಯವಲ್ಲ! ಅವಳ ಮೇಲೆ ಪ್ರೇಮವಿರುವುದು ನಿಜ, ಅವಳಿಗದನ್ನು ತಿಳಿಸಿರುವುದೂ ನಿಜ! ಹಾಗೆಂದು.... ಸಂದರ್ಭವನ್ನು ಬಳಸಿಕೊಳ್ಳಲು ನಾನು ತಯಾರಿರಲಿಲ್ಲ. ಅದನ್ನೇ ಹೇಳಿದೆ, ‘ನೋಡಿ.... ಇವಳನ್ನು ಮದುವೆಯಾಗುವುದು ನನಗೂ ಇಷ್ಟವೇ! ಹಾಗೆಂದು ಈ ಸಂದರ್ಭದಲ್ಲಿ ಆಗುವುದರಲ್ಲಿ ಅಭಿಪ್ರಾಯವಿಲ್ಲ! ಹಾಗೆಯೇ ನೀವೂ ಈ ಸಂದರ್ಭದಿಂದ ತಪ್ಪಿಸಿಕೊಳ್ಳಲು ನೋಡಬೇಡಿ! ಅಲ್ಲದೆ ನನಗೆ ಕೆಲಸವಿಲ್ಲ! ಸಿನೆಮಾ ನಿರ್ದೇಶಕನಾಗುವುದು ನನ್ನ ಕನಸು! ಅದಕ್ಕೆ ಎಷ್ಟು ಸಮಯ ಬೇಕೋ ನನಗೆ ತಿಳಿಯದು!’ ಎಂದೆ. ‘ನಾನು ಮಾಸ್ಟರ್ ಡಿಗ್ರಿ ಮಾಡಿರುವವಳು! ಕೆಲಸಕ್ಕೆ ಸೇರುತ್ತೇನೆ! ನೀನು ಗೆಲ್ಲವವರೆಗೆ ಜೊತೆಯಲ್ಲಿರುತ್ತೇನೆ!” ಎಂದಳು. ‘ಸ್ವಲ್ಪ ಸಮಯ ಕೊಡಿ!’ ಎಂದೆ. ‘ಇಲ್ಲಾ... ನಿಶ್ಚಯವಾದ ಮುಹೂರ್ತದಲ್ಲೇ ಆಗಿದ್ದರೇ....!’ ರಾಗ ಎಳೆದರು ಅಕ್ಕ! ‘ಹೇಳಿದೆನಲ್ಲಾ.... ಈ ಸಂದರ್ಭದಿಂದ ಎಸ್ಕೇಪ್ ಆಗಲು ನನ್ನನ್ನು ಬಳಸಿಕೊಳ್ಳಬೇಡಿ!’ ಎಂದೆ. ‘ಇಲ್ಲ ಇಲ್ಲ.... ಆ ಚಿಂತೆಯಿಲ್ಲ! ಏನಿದ್ದರೂ ನಿನಗಿವಳನ್ನು ಇಷ್ಟ! ಈಗನ್ನಿಸುತ್ತದೆ ಅದೇ ನಿಜವೆಂದು! ಸೋ ಎಸ್ಕೇಪ್ ಆಗಲು ಅಲ್ಲ!’ ಎಂದರು. ಅಪ್ಪ ಅಮ್ಮನಲ್ಲಿ ಪ್ರಸ್ತಾಪಿಸಿದೆ. ಅಪ್ಪ ಒಪ್ಪಿಗೆಯೂ ಕೊಡಲಿಲ್ಲ ತಿರಸ್ಕರಿಸಲೂ ಇಲ್ಲ. ಅಮ್ಮನಿಗೆ ಮಾಡುತ್ತಿರುವುದು ಒಳ್ಳೆಯ ಕೆಲಸ ಎಂಬ ಚಿಂತೆ. ‘ಜಾತಕವನ್ನು ತೆಗೆದುಕೊಂಡು ಬನ್ನಿ!’ ಎಂದರು. ಬಂದ ಮಾವ, ‘ಅವಳ ಜಾತಕ ನೋಡಿ ಮದುವೆಯಾದರೆ ಜೀವನ ಚೆನ್ನಾಗಿರುವುದಿಲ್ಲವಂತೆ!’ ಎಂದರು. ನಾನು ತಲೆ ಹಾಕಿದೆ! ‘ಜಾತಕ ಪಾತಕವೆಲ್ಲಾ ಯಾಕಮ್ಮಾ....? ಮದುವೆ ಆಗುತ್ತಿದ್ದೇನೆ... ಸುಮ್ಮನೆ ಗಂಟು ಮಾಡುವುದು ಬೇಡ!’ ಆಗ ಅಪ್ಪ ಹೇಳಿದರು... ‘ನನಗೇನೋ ಸಂಶಯವಿದೆ! ಅವರು ಕಳ್ಳಾಟವಾಡುತ್ತಿದ್ದಾರೆ! ಬೇಡವೇನೋ!’ ಎಂದು. ನನಗೋ ಹೀರೋಯಿಸಂ ಹುಚ್ಚು! ಅಮ್ಮನ ಮೂಲಕ ಅಪ್ಪನನ್ನು ಕನ್ವಿನ್ಸ್ ಮಾಡಿದೆ. ಹಾಗೆ ಮದುವೆ ನಡೆಯಿತು! ಬಂದಳು! ಬಂದೇ ಬಂದಳು! ಅವರ ಅಪ್ಪ ಅಮ್ಮ ಮಗಳು- ಮದುಮಗನನ್ನು ಬಿಟ್ಟು ಹೋದರು! ಪ್ರಯಾಣ ಬಸ್ಸಿನಲ್ಲಿ! ತಲುಪಿದ್ದು ರಾತ್ರಿ ಹನ್ನೆರಡು! ಆರತಿಯ ದೀಪ ಆರಿತು! ಬಲಗಾಲು ಒಳಕ್ಕಿಡುವಾಗ ಕರೆಂಟ್ ಹೋಯಿತು! ತಲೆ ಕೆಡಿಸಿಕೊಳ್ಳಲಿಲ್ಲ! ಅಂದು ಬಿಟ್ಟು ಹೋದ ಅವಳ ಅಪ್ಪ ಅಮ್ಮ ತಿರುಗಿ ನೋಡಲಿಲ್ಲ! ಕೆಲಸಕ್ಕೆ ಸೇರಿದೆ! ಯಾವುದೋ ಸಂದರ್ಭದಲ್ಲಿ ಕೇಳಿದ್ದೆ- ‘ಯಾವ ಕಾರಣಕ್ಕೂ ನೀನು ನನ್ನ ಬಿಟ್ಟು ಹೋಗುವುದಿಲ್ಲ ತಾನೆ?’ ಎಂದು. ‘ಪ್ರೇಮಿಸುತ್ತಿರುವುದು ನೀನು! ನಾನಲ್ಲ!’ ಅಂದಳು. ಏನೋ ಶಕುನ ತಿರುಗುತ್ತಿದೆಯಲ್ಲಾ ಅನ್ನಿಸಿತು. ಆಗಲೇ.... ಅವನ ಗೆಳೆಯನಾರೋ ಅವಳಿಗೆ ಗಂಡು ಹೆಣ್ಣಿನ ರಹಸ್ಯ ಭಾಗಗಳ ಪೋಟೋ ಕಳಿಸಿದ್ದು! ಅವಳ ಫೋನಿನಲ್ಲಿ ಇಬ್ಬರೂ ಏನನ್ನೋ ಕ್ಯಾಲಿಕ್ಯುಲೇಟ್ ಮಾಡುತ್ತಿದ್ದಾಗ ಬಂದ ಫೋಟೋ...! ಮುಚ್ಚಿಡಲಾಗಲಿಲ್ಲ! ಏನಿದು ಅನ್ನುವಂತೆ ಅವಳನ್ನು ನೊಡಿದೆ. ‘ಅವನು ಮುಂಚೆಯಿಂದಲೂ ಹಾಗೇ.... ಸೀರಿಯಸ್ಸಾಗಿ ತೆಗೆದುಕೊಳ್ಳಬೇಕಾಗಿಲ್ಲ!’ ಎಂದಳು. ನಂಬಿದೆ. ದಿನಗಳುರುಳುತ್ತಿದ್ದಂತೆ ಅವಳ ಪ್ರಿಯಕರ ಕರೆ ಮಾಡಿದ! ಸಾಮಾನ್ಯವಾಗಿ ನಡೆಯುವುದೇ.... ಪ್ರೇಯಸಿ ಮದುವೆಯಾಗಿ ಹೋದರೆ ಅರ್ಥ ಲೈಸನ್ಸ್ ಸಿಕ್ಕಿದೆಯೆಂದೇ...!! ಅವನ ನಿಸ್ಸಹಾಯಕತೆ ಹೇಳಿಕೊಂಡ. ಗಂಡನಿಂದ ಏನಾದರೂ ಹರ್ಟ್ ಆದರೆ ತಾನಿರುವುದಾಗಿ ಹೇಳಿದ! ಜೀವನ ಜಿಗುಪ್ಸೆ ಅಂದ! ಕೊನೆಗೆ- ಭೇಟಿಯಾಗಲು ಸಾಧ್ಯವೇ....? ಅಂದ! ಅವಳು ಅನುಮತಿ ಕೇಳುತ್ತಿದ್ದಾಳೆ!!!” ಎಂದು ನಿಲ್ಲಿಸಿದೆ.
“ನಾನಾಗಿದ್ದರೆ ಸೊಂಟ ಮುರಿದು- ಮನೆಗೆ ಕಳಿಸುತ್ತಿದ್ದೆ!” ಎಂದರು.
“ನೀವಲ್ಲವಲ್ಲಾ!” ಎಂದೆ.
ಅವರ ಮುಖದ ಭಾವವೇನೆಂದು ನನಗೆ ತಿಳಿಯಲಿಲ್ಲ. ನಗುವಾ? ಕೋಪವಾ...? ಪಾಪ!!
“ಅದನ್ನು ನೀನು ಕಥೆಯಾಗಿ ಬರೆದೆ..?”
ಹೌದು ಅನ್ನುವಂತೆ ತಲೆಯಾಡಿಸಿದೆ.
“ಯಾವ ಪುರುಷಾರ್ಥಕ್ಕೋ?” ಎಂದರು.
ನಾನೇನೂ ಹೇಳಲಿಲ್ಲ. ಅವರೇ..., 
“ಈಗ ನನಗೆ ಹೇಳಿದಂತೆ ಹೇಳುವುದು ಬಿಟ್ಟು ಅಷ್ಟು ಸಂಕ್ಷಿಪ್ತವಾಗಿ ಏಕೆ ಬರೆದೆ? ಅದರಿಂದ ನಿನಗೆ ಏನು ಸಿಕ್ಕಿತು?”
“ಈಗ ನಿಮಗೆ ಎಷ್ಟೊಂದು ಹೇಳಿದ್ದೀನಿ ನೋಡಿ- ಬೋರು ವಿಷಯ! ಇಷ್ಟುದ್ದ ಬರೆದರೆ ಯಾರು ಓದುತ್ತಾರೆ? ಚಿಕ್ಕ ಪುಟ್ಟ ಆದರೆ ಓದುತ್ತಾರೆ! ಅದಕ್ಕೇ ಹಾಗೆ ಬರೆದೆ!”
“ಆದರೆ ಕಥೆ ಗೊಂದಲಮಯವಾಗಿದೆ!” ಎಂದರು.
“ಗೊಂದಲಮಯ ಅನ್ನಲಾಗದು! ಈ ಕಥೆ ಬರೆದಿದ್ದರಿಂದ ನನಗೊಂದು ದೊಡ್ಡ ಉಪಯೋಗವಾಯಿತು!” ಎಂದೆ.
“ಏನಪ್ಪಾ ಅಂಥಾ ಘನಂಧಾರಿ ಉಪಯೋಗ!?”
“ಮನೋಗುಣಗಳ ಅವಲೋಕನ!”
“ಅರ್ಥವಾಗಲಿಲ್ಲ....!”
“ನಾನು ಮುಂಚಿನಿಂದ ನಿಮನ್ನು ಕೇಳುತ್ತಿದ್ದೆ- ಸಾತ್ವಿಕ ಅಂದರೇನು, ರಾಜಸಿಕ ಅಂದರೇನು, ತಾಮಸಿಕ ಅಂದರೇನು ಅಂತ! ಯಾವತ್ತಾದರೂ ಒಂದೊಳ್ಳೆಯ ಉದಾಹರಣೆ ಕೊಟ್ಟು ಹೇಳಿದ್ದೀರ?” ಎಂದೆ.
“ಅದಕ್ಕೂ ನಿನ್ನ ಕಥೆಗೂ ಏನು ಸಂಬಂಧ?”
“ಬಂದ ಅಭಿಪ್ರಾಯಗಳಿಂದ ಸಾತ್ವಿಕ ಅಂದರೇನು ಅನ್ನುವುದು ತಿಳಿಯಿತು! ಉಳಿದ ಎರಡನ್ನು ನಾನೇ ಊಹಿಸಿಕೊಂಡೆ!” ಎಂದೆ.
“ಅಂದರೆ?”
“ನಾನು ಈ ಕಥೆಯನ್ನು ಫೇಸ್‌ಬುಕ್ಕಿನಲ್ಲಿ ಹಾಕಿದೆ! ಬಂದ ಅಭಿಪ್ರಾಯಗಳೇನೆಂದು ನಿಮಗೂ ಗೊತ್ತು!”
ಹೌದು ಅನ್ನುವಂತೆ ತಲೆಯಾಡಿಸಿದರು.
“ಪ್ರತಿಯೊಬ್ಬರ ಅಭಿಪ್ರಾಯ.... ಪ್ರಿಯಕರನ ಬಳಿಗೆ ಅವಳನ್ನು ಕಳಿಸಿ- ಬೈದು ಬರಲಿ! ಎಂದು. ಅಂದರೆ ಅವರ ದೃಷ್ಟಿಯಲ್ಲಿ ಅವನ ಹೆಂಡತಿ ಅವನಿಗೆ ಋಣಿಯಾಗಿದ್ದು- ಕೈಕೊಟ್ಟ ಪ್ರಿಯಕರನಲ್ಲಿ ತನ್ನ ದ್ವೇಶವನ್ನು ಕಾರಿ ಬರುತ್ತಾಳೆಂದು! ಅದು ಸಾತ್ವಿಕರ ದೃಷ್ಟಿ!” ಎಂದೆ.
“ಮತ್ತೆ ರಾಜಸಿಕ?”
“ನನ್ನಂಥವನ ದೃಷ್ಟಿ!” ಎಂದೆ. ಅವರ ನೋಟವನ್ನು ಕಂಡು,
“ಹೆಂಡತಿ ಹೋಗುತ್ತಿರುವುದು ಪ್ರಿಯಕರನೊಂದಿಗೆ ಮಿಲನಕ್ಕಾಗಿ ಇರಬಹುದೇ....? ಅನ್ನುವ ಸಂಶಯ ಬಂದರೆ ರಾಜಸಿಕ!” ಎಂದೆ.
ಅವರ ಮುಖದಲ್ಲಿ ಅಭಿಮಾನ!
“ತಾಮಸಿಕ?” ಎಂದು ಕೇಳಿದರು.
“ಇನ್ನು ಯಾರು? ನನ್ನ ಹೆಂಡತಿಯಂತವರು!” ಎಂದೆ.
“ಹೇಗೆ?”
“ತಾವು ಕತ್ತಲಲ್ಲಿದ್ದೇವೆಂದು ಅವರಿಗೆ ತಿಳಿಯದು! ತಾವು ಮಾಡಿದ್ದು- ಮಾಡುತ್ತಿರುವುದೇ ಸರಿ ಎಂಬ ಭಾವದವರು. ಈ ಕಥೆಯನ್ನು ತಾಮಸಿ ಓದಿದರೆ....” ಎಂದು ಅವರ ಮುಖವನ್ನು ನೋಡಿದೆ. ಕುತೂಹಲವಿತ್ತು!
“ಅವಳಬಗ್ಗೆ ತಿಳಿದಿದ್ದೂ ಅವನೇಕೆ ಮದುವೆಯಾದ? ಅವನದೇ ತಪ್ಪು! ಅಷ್ಟು ಒಳ್ಳೆಯವನಾದರೆ ಅವಳನ್ನು ಕಳಿಸಬೇಕು!” ಅನ್ನುವ ಅಭಿಪ್ರಾಯ ಮೂಡುತ್ತದೆ. ಅವನು ಮಾಡಿದ ಕಾರ್ಯ ಮಹತ್ವದ್ದೆಂದೋ- ಅವಳದ್ದು ಕೀಳು ಎಂದೋ ಅವರ ಅರಿವಿಗೆ ಬರುವುದಿಲ್ಲ!” ಎಂದೆ.
ಪಕ್ಕಕ್ಕೆ ಬಂದು ತಲೆ ನೇವರಿಸಿ ಮುತ್ತೊಂದನ್ನು ಕೊಟ್ಟರು ಗುರುಮಾತೆ!
“ಮತ್ತೆ.... ಇಷ್ಟು ಅರಿವಿರುವ ನೀನು ಫೇಸ್‌ಬುಕ್ಕಿನಲ್ಲಿ ಕೊಟ್ಟ ಪ್ರತ್ಯುತ್ತರಗಳು....?” ಎಂದರು.
“ಅದು ಆ ಪಾತ್ರದ ಮನೋಭಾವ! ಪಾತ್ರದ ಬಗೆಗಿನ ಅವರ ಅಭಿಪ್ರಾಯಕ್ಕೆ ಪಾತ್ರವೇ ಕೊಟ್ಟ ಉತ್ತರ!” ಎಂದೆ.
“ಆದರೂ ಅದು ದಾರಿ ತಪ್ಪಿಸುವುದಲ್ಲವೇ...?” ಎಂದರು.
“ಇರಬಹುದು... ಕಥೆಯನ್ನು ಜೀವನವಾಗಿಯೂ, ಪಾತ್ರವನ್ನು ಲೇಖಕನೇ ಎಂದೂ ತೀರ್ಮಾನಿಸಿ ಕೊಟ್ಟ ಕಮೆಂಟುಗಳಿಗೆ ಇನ್ನು ಹೇಗೆ ಪ್ರತ್ಯುತ್ತರ ಕೊಡಲಿ? ಅದೊಂದು ರೀತಿಯಲ್ಲಿ ಕಥೆಗಾರನಾಗಿ ನನ್ನ ಗೆಲುವೇ ಅಲ್ಲವೇ...?!”
“ಅಹಂಕಾರ ಬೇಡ ಮರಿ!” ಎಂದರು.
“ಅಹಂಕಾರವಲ್ಲ ತಾಯಿ! ಪಾತ್ರದ ಮೂಲಕವಾದರೆ ಮಾತ್ರ ನಾನು ನ್ಯಾಯವಾದ ಉತ್ತರವನ್ನು ಕೊಡಬಲ್ಲೆ! ಪಾತ್ರಕ್ಕೆ ಭಾವನೆಗಳಿದೆ ಹೊರತು- ನಾನು ನಿರ್ವಿಕಾರಿ!” ಎಂದೆ.
ಮತ್ತೊಮ್ಮೆ ತಮ್ಮ ಎದೆಗಾನಿಸಿ- ತಲೆಗೊಂದು ಮುತ್ತು ಕೊಟ್ಟರು.
ಬಾಗಿ ಅವರ ಪಾದವನ್ನು ಮುಟ್ಟಿ ಹಣೆಗಿಟ್ಟುಕೊಂಡೆ.
“ಇದು ವಿಕಾರವಲ್ಲವೇ?” ಎಂದರು!
ಏನುತ್ತರ ಕೊಡಲಿ? ಜೀವನವೇ ಪ್ರಶ್ನೆಯಾಗಿರುವಾಗ....?
“ಇದು ವಿಕಾರವಲ್ಲ! ನೀವೇ ರೂಪಿಸಿದ ವ್ಯಕ್ತಿತ್ವ!” ಎಂದೆ.
ಎರಡೂ ಕೈಗಳನ್ನು ತಲೆಯಮೇಲಿಟ್ಟು ಆಶೀರ್ವದಿಸಿದರು.

Comments

  1. ಅದ್ಭುತ...
    .ಎಲ್ಲವೂ ಒಂದೇ ಚೌಕಟ್ಟಿನಲ್ಲಿ....

    ReplyDelete

Post a Comment

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!