ಕರ್ಮ
ಕರ್ಮ!
“ಇನ್ನೂ ಸಾಕಾಗಲಿಲ್ಲವೇನೋ- ಕರ್ಮ!”
"ಕರ್ಮ ಎಂದರೇನು?"
"ಕೇಳಿದ್ದಕ್ಕೆ ಉತ್ತರಕೊಡು- ನಿನ್ನ ಪ್ರಶ್ನೆಗೂ!"
“ಸಾಕಾಗುವಂತಹುದೇ ಅದು?”
“ಇನ್ನೂ ಎಷ್ಟುದಿನ....? ಪ್ರೇಮ ಪ್ರೇಮವೆಂದು?”
“ಎಷ್ಟು ದಿನ ಎಂದರೆ?”
“ಹಾ... ಇನ್ನೂ ಹರೆಯದ ಹುಡುಗರಂತೆ.... ಹೆಣ್ಣು- ಪ್ರೇಮ ಎಂದು?”
“ನಿನಗೆ ಗೊತ್ತೇ?”
“ಏನು?”
“ಪ್ರೇಮಕ್ಕೂ ಆಧ್ಯಾತ್ಮಕ್ಕೂ ನೇರವಾದ ಸಂಬಂಧವಿದೆ!”
“ನಿನ್ನ ತಲೆ!”
“ನಿಜಾನೇ.... ಪ್ರೇಮದ- ನಿನ್ನ ಹಿಂದೆ ಬಿದ್ದು ನಾನು ಕಂಡುಕೊಂಡ 'ನಿಜ' ಅದು! ಪ್ರೇಮಕ್ಕೂ ಆಧ್ಯಾತ್ಮಕ್ಕೂ ನೇರವಾದ ಸಂಬಂಧವಿದೆ! ಇನ್ನೂ ಹೇಳಬೇಕೆಂದರೆ.... ಪ್ರೇಮವಿಲ್ಲದೆ ಆಧ್ಯಾತ್ಮವಿಲ್ಲ- ಆಧ್ಯಾತ್ಮವಿಲ್ಲದ ಪ್ರೇಮವಿಲ್ಲ!”
“ಸರಿ... ಹೇಳೀಗ, ಪ್ರೇಮ ಎಂದರೇನು?”
“ಯಾರಿಗ್ಗೊತ್ತು!”
“ಕರ್ಮ!”
“ಅಲ್ಲವೇ... ಒಂದೇಬಾರಿಗೆ ಪ್ರೇಮ ಎಂದರೇನೆಂದು ಕೇಳಿದರೆ ಏನು ಹೇಳಲಿ? ಸಾವೀರಾರು ವರ್ಷಗಳಿಂದ- ಕೋಟ್ಯಾನು ಕೋಟಿ ಗ್ರಂಥಗಳಲ್ಲಿ ಪ್ರೇಮಕ್ಕೆ ವ್ಯಾಖ್ಯಾನವಾಗಿದೆ- ಆಗುತ್ತಿದೆ! ಆದರೂ ಮುಗಿಯುತ್ತಿಲ್ಲ!”
“ಅದೆಲ್ಲಾ ಗೊತ್ತಿಲ್ಲ! ನನಗೀಗ ಅರ್ಥಮಾಡಿಸಲೇ ಬೇಕು ನೀನು!”
“ಚಿಕ್ಕ ಹುಡುಗ ಕಣೇ.... ಹಿರಿಯೆ ನೀನು-ನನ್ನ ಪ್ರೇಮ!”
“ಆಹಾ....! ಬೆಣ್ಣೆ! ಹೀಗೆ ಹೇಳಿ ಹೇಳಿಯೇ ನಿನ್ನ ಬಿಟ್ಟಿರಲಾರದಂತೆ ಮಾಡಿದ್ದೀಯ! ನನಗೀಗ ನೀ ಹೇಳಿದ ಪ್ರೇಮ- ಆಧ್ಯಾತ್ಮದ ಊಹೆಯಾದರೂ ಬೇಕು!”
“ಸರಿ... ಉಲ್ಟಾ ರೀತಿಯಲ್ಲಿ ಶ್ರಮಿಸೋಣ! ಧರ್ಮ ಎಂದರೇನು?”
“ನನ್ನ ಸಾವು!”
“ಹಹ್ಹಾ...! ಹೇಳೆ- ಪ್ಲೀಸ್!”
“ರಿಲೀಜಿಯನ್!”
“ರಿಲೀಜಿಯನ್‌ಗೂ ಧರ್ಮಕ್ಕೂ ಏನು ಸಂಬಂಧ?”
“ಇನ್ನೇನು? ಹಿಂಧೂ ಧರ್ಮ, ಕ್ರಿಶ್ಚಿಯನ್ ಧರ್ಮ, ಇಸ್ಲಾಂಧರ್ಮ!”
“ಯಾವ ಮಹಾ ಪಂಡಿತ ಹೇಳಿಕೊಟ್ಟನೋ....? ಇದೆಲ್ಲಾ ಒಂದೊಂದು ಮತಗಳು! ಧರ್ಮವಲ್ಲ!”
“ಸರಿ, ನೀನೇ ಹೇಳು!!”
“ವಾ...! ಧರ್ಮವನ್ನಿಟ್ಟು ಪ್ರೇಮವನ್ನು ಅರ್ಥಮಾಡಿಸೋಣವೆಂದರೆ....”
“ನಿಜವಾಗಿಯೂ ನಾನು ನಿನ್ನ ಪ್ರೇಮವೇ ಆದರೆ- ಅರ್ಥಮಾಡಿಸುತ್ತೀಯ!!”
“ವ್ಹಾರೇವ್ಹಾ!! ನಿಜವಾದ ಹೆಣ್ಣು ಅನ್ನಿಸಿಕೊಂಡುಬಿಟ್ಟೆ!”
“ಹೇಳು! ಪ್ರೇಮಕ್ಕೂ, ಆಧ್ಯಾತ್ಮಕ್ಕೂ, ಧರ್ಮಕ್ಕೂ ಏನು ಸಂಬಂಧ?”
“ಪ್ರೇಮಕ್ಕೂ ಆಧ್ಯಾತ್ಮಕ್ಕೂ ನೇರವಾದ ಸಂಬಂಧವಿದೆ! ಧರ್ಮ ಇದೆರಡರೊಂದಿಗೆ ಹೆಣೆದುಕೊಂಡಿದೆ!”
“ತಲೆಗೆ ಹುಳ ಬಿಡುವುದರಲ್ಲಿ ನೀನು ಎಕ್ಸ್‌ಪರ್ಟ್! ಈಗ ವಿಷಯವೇನೋ ಹೇಳಿ ಮುಗಿಸು!”
“ಧರ್ಮ.... ಸಂದರ್ಭಕ್ಕೆ ತಕ್ಕಂತೆ ಅರ್ಥವನ್ನು ಪಡೆಯುವ ಪದ! ಮಕ್ಕಳನ್ನು ಪಾಲಿಸುವುದು ಹೆತ್ತವರ ಧರ್ಮ! ಹೆತ್ತವರನ್ನು ಪಾಲಿಸುವುದು ಮಕ್ಕಳ ಧರ್ಮ! ಹಸಿದವರಿಗೆ ಆಹಾರವನ್ನು ನೀಡುವುದು ಮಾನವ ಧರ್ಮ! ಹೀಗೆ- ಎಷ್ಟೋ ಸಾವಿರ ಉದಾಹರಣೆಗಳನ್ನು ಹೇಳಬಹುದು! ಅಂದರೆ ಯಾವುದೇ ನೆಪ ಅಥವಾ ಕಾರಣಗಳನ್ನು ಹೇಳದೆ ನಾವು ಮಾಡಲೇ ಬೇಕಾದ ಕರ್ತವ್ಯವನ್ನು ಧರ್ಮ ಎಂದು ಹೇಳಬಹುದು!”
“ಇದಕ್ಕೂ ಪ್ರೇಮಕ್ಕೂ ಏನು ಸಂಬಂಧ?”
“ಇರೆ! ಆತುರಗಾತಿ! ತನ್ನ ಧರ್ಮವನ್ನು ನೆರವೇರಿಸುವ ತಾಯಿಯ ಭಾವ- ಪ್ರೇಮ!”
“ಕೊಲ್ಲು!”
“ಹು! ಮೊದಲ ನೋಟದಲ್ಲಿ ಹದಿ ಹರೆಯದ ಹುಡುಗ ಹುಡುಗಿಯ ನಡುವೆ ಉಂಟಾಗುವ ಆಕರ್ಷಣೆ ಹೇಗೆ ಪ್ರೇಮವೋ.... ಪಕ್ವವಾದ ವಯಸ್ಸಿನಲ್ಲಿ ಒಬ್ಬರ ಕಣ್ಣನ್ನು ನೋಡಿದಾಗ ಉಂಟಾಗುವ ಆವೇಗವೂ ಪ್ರೇಮವೇ... ಇದೇನು ಬರೀ ಗಂಡು ಹೆಣ್ಣಿನ ನಡುವಿನದ್ದೇ ಹೇಳುತ್ತಿದ್ದೀಯ ಅನ್ನಬೇಡ! ಗುರುತಿಸಲು ಅಷ್ಟೇ ಈ ಉದಾಹರಣೆ! ಪ್ರೇಮಮಯಿ- ತಾಯಿ! ನನ್ನಪ್ಪನ ಪ್ರೇಮಕ್ಕೆ ಸಾಟಿಯಾವುದು- ಅನ್ನುವಂತ ಮಾತುಗಳು ಕೇಳಿರುತ್ತೀಯ! ಪಿತೃಪ್ರೇಮ, ಮಾತೃಪ್ರೇಮ, ಬ್ರಾತೃಪ್ರೇಮ, ದೇಶಪ್ರೇಮ.... ಎಲ್ಲವೂ ಪ್ರೇಮವೇ!”
“ಊಹೆ ಸಿಕ್ಕಿತು! ಇನ್ನು ಆಧ್ಯಾತ್ಮದ ಬಗ್ಗೆ ಹೇಳು!”
“ಯಾವುದರಿಂದ ನಮ್ಮಲ್ಲಿ ಪ್ರೇಮ ಉಕ್ಕುತ್ತದೋ.... ಅದು ಆಧ್ಯಾತ್ಮ! ಅದನ್ನು ತನ್ಮಯೀಭಾವ ಎಂದು ಹೇಳಬಹುದು....! ಸೂರ್ಯೋದಯ- ಅಸ್ತಮಾನಗಳನ್ನು ನೋಡುವಾಗ ಉಂಟಾಗುವ ತನ್ಮಯೀಭಾವ! ಅಮ್ಮ ಎದೆಗೊತ್ತಿಕೊಂಡಾಗ ಉಂಟಾಗುವ ತನ್ಮಯೀಭಾವ! ಅಣ್ಣನ ಕೆನ್ನಗೆ ಮುತ್ತು ಕೊಡುತ್ತಿರುವ ತಂಗಿಯನ್ನು ಕಂಡಾಗ 'ನಮ್ಮಲ್ಲಿ' ಉಂಟಾಗುವ ತನ್ಮಯೀ ಭಾವ! ಪ್ರತಿಯೊಂದರಲ್ಲೂ ಪ್ರೇಮವೇ ಕಾಣಿಸಿ, ಅದ್ಭುತ ಶಾಂತಿ- ಆನಂದವೇ ವ್ಯಕ್ತವಾದರೆ ಅದು ಆಧ್ಯಾತ್ಮ!”
“ಪ್ರೇಮ- ಆಧ್ಯಾತ್ಮದೊಂದಿಗೆ ಧರ್ಮ ಹೇಗೆ ಬೆಸೆದುಕೊಂಡಿದೆ?”
“ನಿನಗೆ ಶ್ರವಣಕುಮಾರನ ಕಥೆ ಗೊತ್ತೆ?”
“ಇಲ್ಲ!”
“ಗೊತ್ತಿರುತ್ತೆ! ಆ ಕಥೆ ತಿಳಿಯದ ಭಾರತೀಯನಿಲ್ಲ! ಅಂದರೆ- ಕಥೆ ಗೊತ್ತು- ಕಥಾನಾಯಕನ ಹೆಸರು ಗೊತ್ತಿಲ್ಲ!”
“ಸುಮ್ಮನೆ ಹೇಳು ನೀನು!”
“ಕಾಶೀಯಾತ್ರೆ ಮಾಡಬೇಕೆಂಬ- ಕಣ್ಣು ಕಾಣದ, ನಡೆಯಲಾಗದ ವೃದ್ಧ ತಂದೆ ತಾಯಿಯ ಆಸೆಯನ್ನು ನೆರವೇರಿಸಲು ಅವರನ್ನು ಹೆಗಲಮೇಲೆ ಹೊತ್ತು ನಡೆದ ಮಗನ ಕಥೆ ಗೊತ್ತಿಲ್ಲವೇ?”
“ಹಾ...! ಗೊತ್ತು ಗೊತ್ತು!”
“ಗೊತ್ತು ಗೊತ್ತು!! ಹಾಗಿದ್ದರೆ ಹೇಳು! ಅವರ ಆಸೆ ನೆರವೇರಿತೇ?”
“..............”
“ದಶರಥನ ಶಬ್ಧವೇದಿ ವಿದ್ಯೆಯಿಂದಾಗಿ ಶ್ರವಣಕುಮಾರನ ವಧೆಯಾಯಿತು!”
“ಓಹ್! ಆ ಶ್ರವಣಕುಮಾರನೂ ಈ ಶ್ರವಣಕುಮಾರನೂ ಒಬ್ಬನೇ...!”
“ಹು!”
“ಅದನ್ನೆಲ್ಲಾ ಈಗ ಯಾಕೆ ಹೇಳುತ್ತಿದ್ದೀಯ?”
“ಅಪ್ಪ ಅಮ್ಮನ ಆಸೆಯನ್ನು ನೆರವೇರಿಸುವುದು ಮಗನ ಧರ್ಮ! ಧರ್ಮವನ್ನು ನೆರವೇರಿಸುತ್ತಿರುವ ಮಗನಲ್ಲಿ ನಮಗುಂಟಾಗುವ ಪ್ರೇಮ- ಆಧ್ಯಾತ್ಮ!!!”
“ಅಪ್‌ಪ್ಪ! ಎಲ್ಲಿಂದ ಎಲ್ಲಿಗೆ?? ನೀನೊಬ್ಬ ಅಸಾಮಾನ್ಯನೋ...!”
“ಮತ್ತೆ? ನಾನು ಯಾರೆಂದುಕೊಂಡಿದ್ದೀಯ?”
“ಯಾರು?!”
“ಅಹಂಬ್ರಹ್ಮಾಸ್ಮಿ!!!!”
“ಕರ್ಮ!”
“ಹು! ಯಾವುದೇ ಫಲಾಪೇಕ್ಷೆಯಿಲ್ಲದೆ ನೆರವೇರಿಸಬೇಕಾದ ಧರ್ಮ!”
“ಆ?”
“ಕರ್ಮ!”
-O-
Comments
Post a Comment