ಮಾಂಧಾತ ವಿಲಾಪ- ಕಥೆ

ಮಾಂಧಾತ ವಿಲಾಪ!

ಪೀಠಿಕೆ!

ಕಥೆ ಕೇಳು ಹುಡುಗಿ! ಯಾರೂ ಹೇಳದ ಕಥೆ!”

ಬೇಡಪ್ಪಾ ನಿನ್ನ ಕಥೆ! ಕೇಳಿ ಕಿವಿ ಕಿತ್ತು ಹೋದರೆ ಕಷ್ಟ!”

ಯಾಕೆ ಹಾಗಂದುಕೊಳ್ಳುತ್ತೀಯೇ....?”

ಅನುಭವ!”

ಅನುಭವ? ಮುಂಚೆ ಏನು ಹೇಳಿದೆನೆಂದು?”

ಅದೆಲ್ಲ ಗೊತ್ತಿಲ್ಲ! ಓದಿದವರು- ಕೇಳಿದವರು ಹೇಳಿದ್ದಾರೆ!”

ಅವರಿಂದ ಕೇಳಬಹುದು- ಮಾಂಧಾತ- ನಾ ಹೇಳಿದರೆ ಕೇಳಲಾಗುವುದಿಲ್ಲವೇ?”

ನಿನ್ನ ತಲೆ... ಅವರು ಹೇಳಿದ್ದು ನಿನ್ನ ಕಥೆ ಕೇಳಿದರೆ ಕಿವಿ ಕಿತ್ತು ಹೋಗುತ್ತದಂತ!”

ಛೆ! ಎಂಥಾ ಕಾಲ ಬಂತಪ್ಪ! ಮಾಂಧಾತನ ಕಥೆ ಕೇಳುವವರೂ ಯಾರೂ ಇಲ್ಲವಲ್ಲಾ...!”

*

ಕಥೆ

ಓ ಸಾಗರವೇ ಕೇಳು! ಮನುಷ್ಯರಿಗೆ ಈ ಮಾಂಧಾತನ ಕಥೆ ಕೇಳಿ ಸಾಕಾಗಿದೆ! ಮರ ಗಿಡಗಳಿಗೆ ಹೇಳೋಣವೆಂದರೆ ಧೈರ್ಯ ಸಾಲದು! ಬಿರುಗಾಳಿ ಬಂದು ಉರುಳಿಹೋದರೆ ಕಷ್ಟ! ನೀನೇ ಸರಿ... ವಿಶ್ವ ರಹಸ್ಯಗಳನ್ನೆಲ್ಲಾ ಹೊಟ್ಟೆಯಲ್ಲಿ ಹುದುಗಿಸಿಕೊಂಡಿದ್ದೀಯೇ.... ಇದನ್ನೂ ಕೇಳಿಬಿಡು! ನಿನ್ನ ಕಥೆಗೆ ನಾನೂ ಸಾಕಾಗುವುದಿಲ್ಲ ಬ್ರಹ್ಮಾಂಡಕ್ಕೆ ಹೇಳು ಅನ್ನಬೇಡ! ಸುಮ್ಮನೆ ಕೇಳು.... ಒಂದಾನೊಂದು ಕಾಲದಲ್ಲಿ... ದಶಮಾನಗಳ ಹಿಂದೆ... ನಾನಾಗ ತುಂಬಾ ಚಿಕ್ಕವ...! ಹುಡುಗಿಯೊಬ್ಬಳನ್ನು ಕಂಡು ಮೋಹಗೊಂಡೆ! ಒಬ್ಬಳೇ....? ಅಲ್ಲ ಇಬ್ಬರು! ಒಬ್ಬಳು ಹಿರಿಯೆ.... ಒಬ್ಬಳು ಕಿರಿಯೆ! ಅವರಲ್ಲಿ ನನಗೇನೋ ಮೋಹ...! ಹಿರಿಯಳನ್ನು ಬಿಡೋಣ.... ನಾ ಕಿರಿಯಳ ಹಿಂದೆ ಬಿದ್ದೆ! ಅವಳೇ ನನ್ನವಳೆನ್ನುವ ಭಾವ! ಮೊದಲಬಾರಿ ಕಂಡು- ಹತ್ತು ವರ್ಷಗಳ ನಂತರ ಎರಡನೆಯ ಬಾರಿ ನೋಡಿದ್ದು! ನೋಡಿದ್ದೇ ನೋಡಿದ್ದು- ಪ್ರೇಮ ನಿವೇದನೆಯನ್ನು ಮಾಡಿದೆ! ಹಹ್ಹಾ... ಪ್ರೇಮ ನಿವೇದನೆ ಮಾಡಿದಕ್ಷಣ ಸಿಗಲು ಅವಳೇನು ವ್ಯಕ್ತಿತ್ವ ಇಲ್ಲದ ಹೆಣ್ಣೇ....? ವಿವರಣೆ ಕೊಟ್ಟೆ! “ಮದುವೆಯಾದರೆ ನಿನ್ನನ್ನೇ... ನಿನ್ನನ್ನಾದರೆ ಮದುವೆ ಮಾಂಧಾತನ ಬದುಕಿನಲ್ಲಿ! ಹಾಗೆಂದು ನೀ ನನನ್ನೇ ಮದುವೆಯಾಗಬೇಕೆಂದೇನೂ ಇಲ್ಲ! ಭವಿಷ್ಯದಲ್ಲಿ ಅನ್ನಿಸಬಾರದಲ್ಲಾ... ನಿವೇದನೆ ಮಾಡಿದ್ದರೆ ಸಿಗುತ್ತಿದ್ದಳೇನೋ ಎಂದು...? ಅದಕ್ಕಾಗಿ ಹೇಳುತ್ತಿದ್ದೇನೆ!” ಅವಳು ಉತ್ತರ ಕೊಡಲಿಲ್ಲ! ವರ್ಷಗಳು ಮೂರು ಉರುಳಿದವು! ಕೊನೆಗೆ ತಡೆಯಲಾರದೆ ಹೇಳಿದಳು- “ನೋಡೂ.... ಒಂದೂವರೆ ವರ್ಷ ಮುಂಚೆ.... ಆರ್ಕುಟ್‌ನಲ್ಲಿ ನಾನೊಬ್ಬ ಹುಡುಗನನ್ನು ಪರಿಚಯವಾದೆ- ಬೃಹದ್ರಥ- ಪ್ರೇಮಿಸುತ್ತಿದ್ದೇವೆ...!” ಎಂದು. ಒಂದೂವರೆ ವರ್ಷ ಮುಂಚೆ... ಅಂದರೆ ನಾ ಅವಳಿಗೆ ಪ್ರೇಮ ನಿವೇದನೆ ಮಾಡಿ ಒಂದೂವರೆ ವರ್ಷದ ನಂತರ! ಯಾಕೆ? ಕೇಳು ಸಾಗರವೇ.... ಅವಳು ಹೇಳದಿದ್ದರೂ ಕಾರಣ- ಅವ- ಬೃಹದ್ರಥ- ಇಂಜಿನಿಯರ್! ಮಾಂಧಾತನೋ....? ಇರಲಿ ಮುಂದೆ ಕೇಳು... ನಿನಗೆ ಗೊತ್ತೇ ಇದೆ... ಮಾಂಧಾತನೆಷ್ಟು ತ್ಯಾಗಿ ಅಂತ...!!! ಏನೂ ಇಲ್ಲದ- ಕೈಯ್ಯಲ್ಲಾಗ ಮಾಂಧಾತ ಅವಳಿಗೆ ಹೇಳಿದ.... “ಮಾಂಧಾತನ ಪ್ರೇಮಿ ನೀನು.... ನಿನ್ನ ಖುಷಿಯೇ ಅವನ ಸಂತೋಷ... ಇರುತ್ತಾನೆ.... ಯಾವ ಕ್ಷಣದಲ್ಲಾದರೂ ಅವನ ಅಗತ್ಯ ಬಂದರೆ ಹಿಂಜರಿಯಬೇಡ... ಕರೆದರೆ ಓಗೊಡುತ್ತಾನೆ- ಸ್ಪಂದಿಸುತ್ತಾನೆ....!” ಸಾಗರವೇ... ಕೇಳು- ಮಾಂಧಾತನಿಗೆ ಸ್ವಪರೀಕ್ಷೆ ಮಾಡಿಕೊಳ್ಳಬೇಕಿತ್ತು! ಯಾಕೆ ಅವಳು ತಿರಸ್ಕರಿಸಿದಳು? ಮಾಂಧಾತ ಪ್ರೇಮಕ್ಕೆ ಯೋಗ್ಯನಲ್ಲವೇ- ಎಂದು. ಎಷ್ಟೋ ಹೆಣ್ಣನ್ನು ಪರಿಚಯವಾದೆ! ಎಲ್ಲರಿಗೂ ಮಾಂಧಾತನಲ್ಲಿ ಪ್ರೇಮ! ಆದರೆ ಅವನೋ? ಮೋಸ ಮಾಡಬಲ್ಲನೇ? ಎಲ್ಲರಿಗೂ ಇರುವುದನ್ನು ಹೇಳಿದೆ! “ಮಾಂಧಾತನಿಗೆ ಯಾರನ್ನೂ ಪ್ರೇಮಿಸಲಾಗುವುದಿಲ್ಲ. ಅಂತರಂಗದ ಗೆಳೆಯರಾಗಿರೋಣ.... ಬೇಕಿದ್ದರೇ ಮಾಂಧಾತನೂ ಒಬ್ಬಳು ಹೆಣ್ಣು ಅಂದುಕೊಳ್ಳಿ!” ಎಂದು. ಎಷ್ಟು ಚಂದ ಸಾಗರವೇ- ಹೆಣ್ಣು! ಅವರ ಹೃದಯ... ಮಾಂಧಾತನಿಗಾಗಿ ಮರುಗಿತು- ಅವನನ್ನು ಖುಷಿಗೊಳಿಸಲು ಶ್ರಮಿಸಿದರು. ಕೊನೆಗೆ ವಾಸ್ತವವನ್ನು ಹೇಳಿದರು- “ಅವಳು ನಿನಗೆ ಸಿಗುವುದಿಲ್ಲವಲ್ಲೋ... ಮತ್ತೇಕೆ ಅವಳಿಗಾಗಿ ನಿನಗೆ ನೀನೇ ಶಿಕ್ಷೆ ವಿಧಿಸುತ್ತೀಯ?” ನಿಜವೇ... ಯಾಕೆ? ಹೇಳಿದೆ ನೋಡು ಉತ್ತರ.... “ಅವಳ ಮದುವೆ ಆಗುವವರೆಗೆ ಮಾಂಧಾತ ಬ್ರಹ್ಮಚಾರಿ! ನಂತರ ಅವನಿಗೆ ನಿಯಮಗಳಿಲ್ಲ! ಹಾಗೆಂದು ಅವ ಯಾರಿಗೂ ಮೋಸವೂ ಮಾಡಲಾರ... ಅವಳಿಗೆ ಹೇಳಿಬಿಟ್ಟಿದ್ದೇನೆ- ಮದುವೆ ಅನ್ನುವುದು ಇದ್ದರೆ ಅದು ನಿನ್ನೊಂದಿಗೆ ಮಾತ್ರ ಎಂದು! ಅದು ಮಾಂಧಾತನ ಮಾತು!!” ಮತ್ತೆ ಹೇಗೆ ಬೇರೆ ಹೆಣ್ಣನ್ನು ಮೋಸ ಮಾಡಲಿ? ಮದುವೆ ಆಗಲಾರ- ಒಟ್ಟಿಗೆ ಇರಲಾರ! ಆದರೆ ಅವರ- ಯಾರೇ ಆಗಿರಲಿ- ಬದುಕಿನಲ್ಲಿ ಅವರಿಗೆ ಬೇಕಾದ ಸಮಯಕ್ಕೆ ಅವನಿರುತ್ತಾನೆ! ದಿನಗಳುರುಳುತ್ತಿತ್ತು ಸಾಗರವೇ... ಈ ಮಾಂಧಾತನಿಗೊಂದು ಗುರಿ ಬೇಕಿತ್ತು! ಅವನ ಎಲ್ಲಾ ಅಗತ್ಯಗಳನ್ನು ಪೂರೈಸುವ- ಆದರೆ ಬಂಧನಕ್ಕೆ ಒಳಪಡಿಸದ ಗುರಿ! ತುಂಬಾ ಯೋಚಿಸಿದಾಗ ಹೊಳೆದದ್ದು ಸಿನೆಮಾ....! ಏನಿದ್ದರೂ ಕಥೆಗಾರ! ಅಲ್ಲಿ ದುಡ್ಡಿಗೆ ದುಡ್ಡು- ಸುತ್ತಾಟಕ್ಕೆ ಸುತ್ತಾಟ- ಹೆಣ್ಣಿಗೆ ಹೆಣ್ಣು....! ಹಾ... ಅದೇ ಸರಿ.... ತೀರ್ಮಾನಿಸಿದಮೇಲೆ ಬಿಡುವೆನೇ? ಬಿಟ್ಟರೆ ಇವ ಮಾಂಧಾತನೇ....? ಪ್ರಯತ್ನವಾರಂಭಿಸಿದೆ! ವರ್ಷಗಳು ಮೂರು ಉರುಳಿದವು. ಮುಂದೆ- ಒಂದು ದಿನ... ಅವಳಿಂದ ಒಂದು ಸಂದೇಶ ಬಂತು! “ಓಡಿಹೋಗೋಣವಾ?” ಎಂದು. ಹಹ್ಹಹ್ಹಾ... ಹೇಗಿದೆ? “ನಾ ಬೃಹದ್ರಥನಲ್ಲ- ಮಾಂಧಾಂತ!” ಎಂದೆ. “ಮಾಂಧಾತನನ್ನೇ ಕೇಳುತ್ತಿರುವುದು!” ಎಂದಳು. ಏನೋ ಸಮಸ್ಯೆಯಿದೆ! ಮಾಂಧಾತನ ಪ್ರೇಮಿ ದುಃಖಿಸುವುದು ಅವನಿಗಿಷ್ಟವಿಲ್ಲ! ಹೋದೆ! ಅವಳು ಹೇಳಿದ್ದು ಕೇಳಿ ನಗಬೇಕೋ ಅಳಬೇಕೋ ತಿಳಿಯಲಿಲ್ಲ ಸಾಗರವೇ....! ಪ್ರೇಮಿಸಿದ ಹುಡುಗ ಕೈಕೊಟ್ಟ!! ಅದು ಅಂಥಾ ಚಿಂತೆಯ ವಿಷಯವಲ್ಲ! ಸರ್ವೇ ಸಾಮಾನ್ಯ! ಅದಕ್ಕಿಂತ ಮುಖ್ಯ ವಿಷಯವಿದೆ ಕೇಳು... ಅವಳ ಅಪ್ಪ ಅಮ್ಮ ಬಲವಂತದಿಂದ ಅವಳನ್ನು ಬೇರೊಬ್ಬನೊಂದಿಗೆ ನಿಶ್ಚಿತಾರ್ಥ ಮಾಡಿದರು!! ಪ್ರೇಮಿ ಕೈಕೊಟ್ಟ- ಬೇರೊಬ್ಬನೊಂದಿಗೆ ಮದುವೆ ನಿಶ್ಚಿತವಾಯಿತು ಅನ್ನುವ ಹಂತದಲ್ಲಿ ಮಾಂಧಾತನನ್ನು ಕೇಳುತ್ತಿದ್ದಾಳೆ- “ಓಡಿ ಹೋಗೋಣವೇ...?” ಎಂದು. ಇದನ್ನೊಂದು ಅವಕಾಶವಾಗಿ ತೆಗೆದುಕೊಳ್ಳಲು ಮಾಂಧಾತನಿಗಿಷ್ಟವಿಲ್ಲ ಸಾಗರವೇ... ಅವ ಇರುವುದನ್ನು ಹೇಳಿದೆ.... “ನೋಡೂ.... ಮಾಂಧಾತನಿಗೆ ಕೆಲಸವಿಲ್ಲ! ನಿರ್ದೇಶಕನಾಗಬೇಕೆಂಬ ಹಠ ನರವನ್ನು ಸೇರಿದೆ... ಅದರ ಪ್ರಯತ್ನದಲ್ಲಿದ್ದೇನೆ... ಹಾಗೆಂದು ಮದುವೆಯಾದಮೇಲೂ ಕೆಲಸಕ್ಕೆ ಹೋಗುವುದಿಲ್ಲವೆಂದಲ್ಲ... ಆದರೆ ಗುರಿ ಮಾತ್ರ- ನಿರ್ದೇಶನವೇ...!” ಅವಳೂ ಹೇಳಿದಳು... “ನಾನು ಉನ್ನತ ವ್ಯಾಸಂಗ ಮಾಡಿರುವವಳು! ಕೆಲಸಕ್ಕೆ ಸೇರುತ್ತೇನೆ... ನಿನ್ನ ಗುರಿಗೆ ಅಡ್ಡ ಬರುವುದಿಲ್ಲ! ನೀ ಗುರಿ ಸೇರುವವರೆಗೂ ಜೊತೆಯಲ್ಲಿರುತ್ತೇನೆ...!” ಈ ಮಾಂಧಾತನಿಗಿನ್ನೇನು ಬೇಕು? “ಸ್ವಲ್ಪ ಸಮಯ ಕೊಡು!” ಎಂದೆ. “ಇಲ್ಲಾ... ಇಲ್ಲಿಯ ಜನರ ಮಾತು ಕೇಳೋಕೆ ನನಗಾಗುವುದಿಲ್ಲ!” ಎಂದಳು. “ಆರು ತಿಂಗಳು ಕಾಯಲಾಗುವುದಿಲ್ಲವೇ...? ಒಂದು ವ್ಯವಸ್ತೆ ಮಾಡಬೇಕಲ್ಲಾ...?” ಎಂದೆ. “ಒಟ್ಟಿಗೆ ಮಾಡೋಣ!” ಎಂದಳು. ಹಾಗೆ ಒಂದು ವಾರಕ್ಕೆ- ನಿಶ್ಚಿತಾರ್ಥವಾದವನೊಂದಿಗೆ ಸೆಟ್ ಆಗಿದ್ದ ದಿನವೇ- ಈ ಮಾಂಧಾತನ ಮದುವೆಯಾಯಿತು. ಮಾರನೆಯ ದಿನದಿಂದ ಶುರುವಾಯಿತು ನರಕ! “ವಿದೇಶಕ್ಕೆ ಹೋಗಿ ಸಂಪಾದನೆ ಮಾಡು! ಸಿನೆಮಾ ನಡೆಯುವುದಿಲ್ಲ! ಅದು ದುಡ್ಡಿರುವವರಿಗೆ- ಬ್ಯಾಕ್‌ಗ್ರೌಂಡ್‌ ಇರುವವರಿಗೆ... ಸಂಪಾದನೆ ಮಾಡಿ ಬಂದು ಬೇಕಿದ್ದರೆ ಸಿನೆಮಾಮಾಡು!” ಮಾಂಧಾತ ಒಪ್ಪುವನೆ? ಇಲ್ಲ! ಕೊನೆಗೆ ಅಪ್ಪ ಅಮ್ಮನ ತಲೆ ತಿಂದು ಮನೆಯಿಂದ ಹೊರ ಹಾಕಿದರೆ ಇವ ಉದ್ದಾರ ಆಗುತ್ತಾನೆ ಅಂತ- ಒಂದು ವರ್ಷ ಬಾಡಿಗೆ ಮನೆಯಲ್ಲಿ ಬದುಕಿದೆ ಸಾಗರವೇ.... ಬೆಳಗ್ಗೆ ಆರರಿಂದ ಮಧ್ಯಾಹ್ನ ಎರಡರವರೆಗೆ ಒಂದು ಕಡೆ ಕೆಲಸ! ಸಂಜೆ ನಾಲಕ್ಕರಿಂದ ರಾತ್ರಿ ಎಂಟರವರೆಗೆ ಒಂದುಕಡೆ ಕೆಲಸ... ಇದರ ಮಧ್ಯೆ ಸಮಯ ಹೊಂದಿಸಿ ಸಿನೆಮಾದವರ ಭೇಟಿ, ಕಥೆ ಬರೆಯುವುದು, ಗುರಿಯತ್ತ ಪಯಣ! ಅದೇ... ಅದೇ... ಮಾಂಧಾತನ ಗುರಿಯೇ ಅವನ ಪ್ರೇಯಸಿಯ ಸಮಸ್ಯೆ!! ಅವಳ ಅಪ್ಪ ಅಮ್ಮನಿಗೆ ಊರವರೊಂದಿಗೆ ಹೇಳಲು ಮಾಂಧಾತನಿಗೊಂದು ರೆಸಿಗ್ನೇಷನ್ ಇಲ್ಲವಂತೆ! ಅದಕ್ಕಾಗಿ ಮಾಂಧಾತ ದೊಡ್ಡ ಮಟ್ಟದ ಕೆಲಸ ಮಾಡಬೇಕು ಅಥವಾ ವಿದೇಶಕ್ಕೆ ಹಾರಬೇಕು...! ಅದಕ್ಕಾಗಿ ಅವಳು ಹಿಸ್ಟೀರಿಕ್ಕಾಗಿ ಕಿರುಚಾಡಿದಳು! ಕೈಯ ನರ ಕತ್ತರಿಸಲು ಹೋದಳು- ಇಬ್ಬರೇ ಇರುವ ಬಾಡಿಗೆ ಮನೆಯಲ್ಲಿ ಅವಳು ಹೀಗೆಲ್ಲಾ ಮಾಡಿದರೆ ಏನು ಮಾಡುವುದು? ಮಾಂಧಾತನ ಕನಸು ಅವನೊಬ್ಬನ ಕನಸು ಸಾಗರವೇ...! ಮಾಂಧಾತನಲ್ಲಿ- ಮಾಂಧಾತನ ಕನಸಿನಲ್ಲಿ ನಂಬಿಕೆಯಿಲ್ಲದೆ ಅವಳೊಂದು ಗುರಿ ಇಟ್ಟುಕೊಂಡಳು- ಬ್ಯಾಂಕ್‌ಕೆಲಸ! ಸಹಕಾರ ಸಿಗದಿದ್ದರೂ ವಿರೋಧ ಬೇಡವಿತ್ತು! ಆದರೂ ಗೆಲ್ಲುವವರೆಗೆ ತಾನೆ ಎನ್ನುವ ಚಿಂತೆಯಲ್ಲಿ ಅವಳ ಗುರಿಗೆ ಹೆಗಲುಕೊಟ್ಟೆ! ಕೋಚಿಂಗ್, ಪರೀಕ್ಷಾಶುಲ್ಕ, ಪರೀಕ್ಷಾ ಸೆಂಟರಿಗೆ ಪ್ರಯಾಣ, ಉದ್ಯೋಗಾದರಿತ ಮಾಸಪತ್ರಿಕೆ.... ಲಕ್ಷಗಳು! ಪ್ರತಿ ಸಾರಿ ಪರೀಕ್ಷೆಬರೆದು ಕಣ್ಣೀರು ಹಾಕಿ ಬರುವಾಗಲೂ- ಅವಳ ಅಪ್ಪ ಅಮ್ಮ ಅವಳನ್ನು- “ನಿನಗೆ ಕೆಲಸ ಸಿಗುವುದಿಲ್ಲ, ನೀನು ಉದ್ದಾರವಾಗುವುದಿಲ್ಲ!” ಎಂದು ತೆಗಳಿದಾಗಲೂ ಮಾಂಧಾತ ಅವಳೊಂದಿಗೆ ನಿಂತ! “ನೀ ಪ್ರಯತ್ನಿಸು- ಕೊನೆಯವರೆಗೂ ಪ್ರಯತ್ನಿಸುವುದು ನಿನ್ನ ಕರ್ತವ್ಯ- ನಿನಗೆ ಸಿಗುತ್ತದೆ...” ಇನ್ನೂ ಏನು ಮಾಡಲಿ? ಅವಳ ಜೊತೆಯಲ್ಲಿ ಕುಳಿತು ಕಲಿಸಿದೆ, ಮಾರ್ಗದರ್ಶನ ಕೊಟ್ಟೆ.... ಅವಳೆಂಬ ಹೊರೆ- ಜೊತೆಗೆ ಗುರಿ! ನಲುಗಿಹೋದೆ ಸಾಗರವೇ.... ಪ್ರಪಂಚದಷ್ಟು ಪ್ರೇಮ ಒಬ್ಬರಿಗೆ ಕೊಡುವಾಗ- ಅವರದನ್ನು ಸ್ವೀಕರಿಸಿದಿದ್ದರೂ ಸಮಸ್ಯೆಯಿಲ್ಲ- ಒಂದು ಗೌರವವಾದರೂ ಸಿಕ್ಕದಿದ್ದರೇ.... ಹೋಗಲಿ ಬಿಡು! ಅವಳಿಗಾಗಿ ಅನ್ನುವ ನೆಪದಲ್ಲಿ ಎಲ್ಲಾ ಗೆಳತಿಯರನ್ನು ಅವಗಣಿಸಿದೆ! ಅವಳೋ.... ಅವಳ ಕಾಮುಕನೊಂದಿಗೆ ಮಾತು ಕತೆ! ಮಾಂಧಾತನಬಗ್ಗೆಯೂ- ಅವನ ಕೈಯ್ಯಲ್ಲಾಗದ ತನದ ಬಗ್ಗೆಯೂ ಕಾಮುಕನಿಗೆ ಹೇಳಿದಳು! ಮಾಂಧಾತ ಕೈಬಿಟ್ಟರೆ ನೋಡಿಕೊಳ್ಳಲು ಅವ ಮುಂದೆ ಬರುತ್ತಾನಂತೆ!! ಹುಡುಗಿಯೊಬ್ಬಳು ಮಾಂಧಾತನಿಗೆ ಮೆಸೇಜ್ ಮಾಡಿದರೆ ಜಗಳಕ್ಕೆ ಬರುವ ಅವಳು- ಅವಳ ಗೆಳೆಯ, ನೆನಪಿರಲಿ ಪ್ರೇಮಿಮಯಲ್ಲ- ಬೇರೊಬ್ಬ ಗೆಳೆಯ ಹೆಣ್ಣು ಗಂಡಿನ ರಹಸ್ಯ ಭಾಗಗಳ ಪಟ ಕಳಿಸಿದರೆ ಅವನನ್ನು ಸಮರ್ಥಿಸುತ್ತಾಳೆ ಎಂದಾದರೆ.... ಅದೂ ಬಿಡು! ಮಾಂಧಾತನ ಗೆಳೆಯರಿಗೆ ಅವನ ಹೆಂಡತಿ ಮಾಂಧಾತನ ಹೆಂಡತಿಯಲ್ಲ! ಗೆಳತಿ- ಅಷ್ಟೆ- ಒಂದು ಸ್ವತಂತ್ರ ವ್ಯಕ್ತಿತ್ವ! ಅವಳಿಗೆ ಮಾಂಧಾತ ಕೊಟ್ಟ ಸ್ವಾತಂತ್ರ್ಯ... “ಕಾಮುಕನನ್ನು ಯಾಕೆ ಮಿಸ್ ಮಾಡಿಕೊಳ್ಳುತ್ತೀಯ? ಕಾಲ್ ಮಾಡು- ಭೇಟಿಯಾಗೋಣ, ಮಾತನಾಡೋಣ- ಒಬ್ಬ ಗೆಳೆಯನಾಗಿ ಅವನಿರಲಿ ಜೊತೆಗೆ!” ಎಂದರೆ... “ಅದು ಹೇಗೆ ಸರಿಯಾಗುತ್ತದೆ? ಮದುವೆಯಾಗಿದ್ದೇನೆ....” ಎಂದಳು. “ಮತ್ತೇಕೆ ಕಾಲ್ ಮಾಡುತ್ತೀಯೆ?” ಎಂದರೆ- ಇನ್ನು ಮಾಡುವುದಿಲ್ಲ ಎನ್ನುವ ಸಮಜಾಯಿಶಿ! ಪುನಃ ಮಾಡುತ್ತಾಳೆ! ದಿನಗಳುರುಳುತ್ತಿದ್ದವು... ಈ ಮಾಂಧಾತ ಗುರಿಯ ಸಮೀಪಕ್ಕೆ ಬರುತ್ತಿದ್ದೆ. ಅದೇ ಸಮಯಕ್ಕೆ ಹಳೆಯ ಗೆಳತಿಯೊಬ್ಬಳು ಹುಡುಕಿ ಬಂದಳು! ಅವಳಿಗೊಂದು ಸಮಸ್ಯೆ! ಅವಳ ಪ್ರೇಮಿಯಿಂದ ಬಿಡಿಸಿಕೊಳ್ಳಬೇಕಿತ್ತು! ಅವನಿಗೊಂದು ಖಂಡಿಷನ್ ಹಾಕಿದ್ದಳು- ಸಿಗರೇಟು ಸೇದಬಾರದು- ಕುಡಿಯಬಾರದು- ಕ್ರಿಮಿನಲ್ ಗೆಳೆಯರೊಂದಿಗಿನ ಗೆಳೆತನ ಬಿಡಬೇಕು!! ಅವನಿಗದು ಸಾಧ್ಯವಿಲ್ಲ! ಆದರೆ ಒಪ್ಪಿದೆ ಎಂದು ಸುಳ್ಳು ಹೇಳಿದ! ಮುಂದುವರೆದ! ಅವನಿಂದ ಬಿಡಿಸಿಕೊಳ್ಳಬೇಕು! ಈ ಮಾಂಧಾತನ ಹೊರತು ಅವಳಿಗೆ ಬೇರೆ ನಂಬುವಂಥಾ ಗೆಳೆಯರಿಲ್ಲ. ಅವಳಿಗೂ ಗೊತ್ತು ಮಾಂಧಾತ ಹೆಂಡತಿಯನ್ನೆಷ್ಟು ಪ್ರೀತಿಸುತ್ತಾನೆಂದು. ಅದರಿಂದ ಅವನೊಂದಿಗೆ ಬೇರೆ ಚಿಂತೆ ಬರಲು ಸಾಧ್ಯವಿಲ್ಲ! ಹೆಣ್ಣಿನೊಂದಿಗಿನ ಮಾಂಧಾತನ ಸಂಬಂಧವೇನು ಹೇಳು ನೋಡೋಣ ಸಾಗರವೇ....? ಹೌದು... ಸುಮಾರು ದಿನಗಳ ನಂತರ ಭೇಟಿಯಾದರೆ ಓಡಿ ಬಂದು ಅಪ್ಪಿಕೊಳ್ಳುವ ಸಂಬಂಧ! ಅದೊಂದು ಆತ್ಮ ಬಂಧ... ಗೆಳತಿಯ ಸಮಸ್ಯೆಯನ್ನು ಬಗೆಹರಿಸಿಕೊಟ್ಟ ಈ ಮಾಂಧಾತನಿಗೆ ಅವಳು ಕೆನ್ನಗೊಂದು ಮುತ್ತು ಕೊಡುವ ಮೂಲಕ ಕೃತಜ್ಞತೆ ಸಲ್ಲಿಸಿದಳು! ಅದನ್ನು ಡೈರಿಯಲ್ಲಿ ಬರೆದೆ ನೋಡು... ಹೆಂಡತಿ ಕದ್ದುನೋಡುವಳೆಂಬ ಅರಿವಿಲ್ಲ! ದಿನಗಳುರುಳಿದವು... ಒಂದು ಪಾಪುವಾದರೆ ಸಮಸ್ಯೆ ಬಗೆಹರಿಯಬಹುದೆಂದು ತೀರ್ಮಾನಿಸಿದೆ. ಮುಂದಿನ ಕಥೆ ಕೇಳು ಸಾಗರವೇ.... ಹೆಂಡತಿಗೆ ಐದು ತಿಂಗಳು!! ಅವಳಿಗೆ ತವರಿಗೆ ಹೋಗಬೇಕೆಂಬ ಆಸೆ- ... ಈ ವಿಷಯ ಹೇಳಿಲ್ಲ ನೋಡು.... ಮದುವೆಯಾಗಿ ಎಂಟು ವರ್ಷದ ನಂತರ ನಮಗೆ ಮಗುವಾಗುತ್ತಿರುವುದು! ಮದುವೆಯಾದ ಮಾರನೆ ದಿನ ಅವಳನ್ನು ಇಲ್ಲಿಗೆ ತಂದು ಬಿಟ್ಟ ಅವಳ ಅಪ್ಪ ಅಮ್ಮ ಇಂದಿನ ವರೆಗೆ- ಕೇಳು- ಈ ಕ್ಷಣದ ವರೆಗೆ ತಿರುಗಿ ನೋಡಿದವರಲ್ಲ! ಮಗಳಬಗ್ಗೆ ವಿಚಾರಿಸಿದವರಲ್ಲ! ಅವಳಿಗಾಗಿ ಏನಾದರೂ ಮಾಡಿದವರಲ್ಲ! ಆದರೆ ಅವಳಂತೂ ಹೋಗುತ್ತಿದ್ದಳು. ಮಾಂಧಾತನೇ ಬಿಟ್ಟು ಬರುತ್ತಿದ್ದೆ... ಆದರೆ ಎರಡುಮೂರು ಸಾರಿ ಅವಮಾನವಾದಮೇಲೆ ಹೋಗುವುದು ನಿಲ್ಲಿಸಿದ್ದೆ. ಅವಳು ಹೋಗುವುದಕ್ಕೆ ವಿರೋಧ ಹೇಳಲಿಲ್ಲ. ಅವಳೂ ಹೋಗದೇ ಇರಲಿಲ್ಲ!!! ಆದರೆ ಈಗ... ಮಾಂಧಾತ ಕಾಲು ಹಿಡಿದ. “ಹೋಗಬೇಡ... ನಮ್ಮ ಮಧ್ಯೆ ಅಗಲ ಜಾಸ್ತಿಯಾಗುತ್ತದೆ. ನಿನ್ನನ್ನು ಮಾಂಧಾತ ಕಳೆದುಕೊಳ್ಳಲಾರೆ...” ಅವಳಿಗೊಂದೇ ಹಠ! “ನನಗೂ ಆಸೆಯಿರುತ್ತದಲ್ಲವೇ ತವರಿಗೆ ಹೋಗಬೇಕೆಂದು....” ಎಂದಳು. “ಅವರಿಗೇ ಇಲ್ಲದಿರುವ ಚಿಂತೆ ನಿನಗೇಕೆ? ಅವರಾಗಿ ಬಂದು ಕರೆದುಕೊಂಡು ಹೋಗುವುದಾದರೆ ಹೋಗಲಿ!” ಎಂದೆ. ಅವಳು ಅವರನ್ನು ಕಾಡಿದಳು ಬೇಡಿದಳು- “ಬಂದರೆ ನೋಡಿಕೊಳ್ಳುತ್ತೇವೆ!” ಎಂದರು. ಅವಳು ಬಿಡಲಿಲ್ಲ... “ನಿಮ್ಮ ಮಗಳಲ್ಲವೇ... ಏನಾದರೂ ಮಾಡಿ ಕರೆದುಕೊಂಡು ಹೋಗಿ!” ಎಂದಳು. ದೊಡ್ಡಪ್ಪನ ಮಗ ಬಂದು ಕರೆದುಕೊಂಡು ಹೋದ. ಹೋದಳು ಸಾಗರವೇ... ಹೃದಯವೇ ಹೋದ ಭಾವ. ಹೋಗುವಾಗ ಹೇಳಿದ್ದಳು- “ನೀನು ಬರಬೇಡ ಮಾಂಧಾತ! ನನ್ನ ಅಪ್ಪ ಅಮ್ಮನಿಂದ ನಿನಗಾಗುವ ಅಪಮಾನ ನಾ ಸಹಿಸಲಾರೆ! ವಿದೇಶದಲ್ಲಿರುವ ನನ್ನ ಅಕ್ಕ ಬಂದಾಗ ಅವಳ ಮನೆಗೆ ಹೋಗುತ್ತೇನೆ- ಆಗ ಬಾ!” ಎಂದು. ನಂಬಿದೆ. ಅವಳ ಅಕ್ಕ ಬಂದರು... “ನಿನ್ನನ್ನು ನೋಡಬೇಕೆಂಬ ತುಡಿತವಾಗುತ್ತಿದೆ- ಅಕ್ಕನ ಮನೆಗೆ ಹೋಗು!” ಎಂದೆ. ಅವಳ ರೀತಿಯೇ ಬದಲಾಯಿಸಿತ್ತು! “ಅಷ್ಟು ನೊಡಬೇಕೆಂದಿದ್ದರೆ ಇಲ್ಲಿಗೇ ಬಾ!” ಎಂದಳು. ಹೋಗಲಾಗಲಿಲ್ಲ. ಪಾಪು ಹುಟ್ಟಿತು.... ಸಾಗರವೇ ಕೇಳು! ಹೆಣ್ಣೆಂದರೆ ಮಾಂಧಾತನಿಗೆ ಪ್ರಾಣ! ಆ ಪ್ರಾಣವೇ ಪಾಪುವಾಗಿ ಹುಟ್ಟಿದಾಗ..... ಕಳೆದು ಹೋದೆ. ಓಡಿದೆ. ಆದರೆ... ಆದರೆ... ಹೆಂಡಿತಿಯ ಅಪ್ಪನ ವರ್ತನೆ... ಭಿಕ್ಷುಕನಿಗಾದರೂ ಒಂದು ಗೌರವವಿರುತ್ತದೆ! ಮಾಂಧಾತನಿಗೆ ಅದೂ ಸಿಗಲಿಲ್ಲ. ಹೊರ ಪ್ರಪಂಚಕ್ಕೆ- ಕಥೆಗಾರ, ದುಃಖವೇ ಇಲ್ಲದವ, ಎಲ್ಲರ ದುಃಖಕ್ಕೆ ಸ್ಪಂದಿಸುವವ, ದುಃಖಗಳಿಗೆ ಪರಿಹಾರ ಸೂಚಿಸುವವ, ಇದ್ದರೆ ಮಾಂಧಾತನಂತಿರಬೇಕು- ಅಂತೆಲ್ಲಾ ಇರುವಾಗ... ಹೆಂಡತಿಗೆ ಅವಳ ಅಪ್ಪ ನಡೆದುಕೊಂಡ ಬಗ್ಗೆ ಸೂಚನೆ ಕೊಟ್ಟೆ! ಅವಳಿಗೆ ಅರ್ಥವಾಗಲಿಲ್ಲ... ಅವಳು ನಿರ್ಧರಿಸಿದಂತಿತ್ತು. ಪಾಪುವಾದಾಗಲಾದರೂ ಮಾಂಧಾಂತ ಅವಳ ಅಪ್ಪ ಅಮ್ಮ ಹೇಳಿದ್ದು ಕೇಳುತ್ತಾನಂತ! ಅವನ ಕನಸಿಗೆ ಅವಳು ಎಳ್ಳಿನಷ್ಟೂ ಬೆಲೆ ಕೊಡಲಿಲ್ಲ! ಏಳು ತಿಂಗಳ ನಂತರ ಬರುತ್ತೇನೆ ಎಂದಳು. ಒಪ್ಪಿದ್ದೆ. ಆಗಾಗ ಹೋಗಿ ಪಾಪುವನ್ನು ನೋಡಬಹುದಲ್ಲಾ.... ಆಗಲೇ.... ಆಗಲೇ ನೋಡು ಸಂಭವಿಸಿದ್ದು.... ಪಾಪು ಹುಟ್ಟಿ ಮೂರೂವರೆ ತಿಂಗಳಾಗಿತ್ತು. ಅಪ್ಪ ಅಮ್ಮ ಚಿಕ್ಕಪ್ಪ ಚಿಕ್ಕಮ್ಮ ಸಹೋದರರೊಂದಿಗೆ ಪಾಪುವನ್ನು ನೋಡಲು ಹೋದೆ.... ಅವಳ ಮನೆಗೇ... ಹೋಗಲೇ ಬೇಕಿತ್ತು. ಬೇರೆ ವಿದಿಯಿಲ್ಲ. ಅವಳ ಹಠವಲ್ಲವೇ.... ಹೋದೆ ಸಾಗರವೇ... ಮಾಂಧಾತನ ಅಪ್ಪ ಅಮ್ಮನಿಗಿಂತ, ಅವಳ ಅಪ್ಪ ಅಮ್ಮನಿಗಿಂತ, ಹುಟ್ಟುವ ಪಾಪುವಿಗಿಂತ ನೀನೇ ನನಗೆ ಸರ್ವಸ್ವ ಎಂದು ಹೇಳಿದ್ದೆ. ಆ ಅವಳು ಅವಳ ಅಪ್ಪನಿಂದ ಮಾಂಧಾತನನ್ನು ಹೊಡೆಸಲು ಬಂದಳು!!! ಮಾಂಧಾತ ಏನೂ ಮಾಡದೆ ಮನೆಯಲ್ಲಿ ಕುಳಿತಿದ್ದಾನೆ, ಮೋಸ ಮಾಡಿದ, ಮದುವೆಯಾಗಲು ನಾಟಕವಾಡಿದ, ಬೇರೆ ಹೆಣ್ಣಿನೊಂದಿಗೆ ಅಫೇರ್ ಇದೆ.... ಎಷ್ಟೊಂದು ಆರೋಪಗಳು.... ಜೀವನದಲ್ಲಿ ಮೊದಲ ಬಾರಿ ಕೋಪಗೊಂಡೆ.... ಒಂದು ಏಟು ಬಿದ್ದಿದ್ದರೂ ಕುಟುಂಬ ಸಮೇತ ಸುಟ್ಟು ಕರಕಲಾಗುತ್ತಿದ್ದರು. ಆಗ, ಈ ಮಾಂಧಾತನ ಕಣ್ಣು ಕಂಡು- ಆ ಕೋಪದ ಅರಿವಾಗಿಯೋ... ಯಾವುದಕ್ಕೂ ಕೊರತೆಯಾಗದೆ, ಸುತ್ತಾಟಕ್ಕೆ ಸುತ್ತಾಟ, ಬಟ್ಟೆಗೆ ಬಟ್ಟೆ, ತಿಂಡಿಗೆ ತಿಂಡಿ, ಸ್ವಾತಂತ್ರ್ಯಕ್ಕೆ ಸ್ವಾತಂತ್ರ್ಯ, ಒಂದುಸಾರಿಯಾದರೂ ಕೋಪಗೊಳ್ಳದೆ... ಬೈಯ್ಯದೇ.... ತಲೆಯ ಮೇಲಿಟ್ಟು ನೋಡಿಕೊಂಡ ಹೆಂಡತಿ ಮಧ್ಯೆ ಬಂದು ಹೇಳಿದಳು.... “ನೋಡೂ.... ನನಗೆ ನನ್ನ ಅಪ್ಪನೇ ಮುಖ್ಯ! ನನ್ನ ಅಪ್ಪನೇ ಎಲ್ಲಾ.... ಅವರೊಬ್ಬರೇ ನನ್ನೊಂದಿಗಿರುವುದು... ದಯವಿಟ್ಟು ಆಗಾಗ ಹೀಗೆ ಬಂದು ತೊಂದರೆ ಕೊಡದಿರು...” ಕುಸಿದು ಹೋದೆ ಸಾಗರವೇ.... ಹೃದಯ ಛಿದ್ರವಾಯಿತು. ಮಾಂಧಾತನ ಪ್ರೇಮ.... ಯಾಕೆ? ಅವಳಿಗಾಗಿ ಏನು ಬೇಕಿದ್ದರೂ ಮಾಡುವವ ಅವಳು ಹೇಳಿದ್ದನ್ನೂ ಮಾಡಬೇಕು ಅನ್ನುವುದು ಅವರ ವಾದ! ಅವನ ವ್ಯಕ್ತಿತ್ವ ಏನಾದರೂ ಇರಲಿ! ಪ್ರೇಮ- ವ್ಯಕ್ತಿತ್ವ ಮಾತ್ರವಿದ್ದರೆ ಬದುಕಲಾಗುತ್ತದೆಯೇ....? ಎಂದು ಕೇಳಿದ್ದಳು ಒಮ್ಮೆ! ಆದರೆ... ಬದುಕಲು ಏನು ಬೇಕೋ ಅದನ್ನು ಮಾಂಧಾಂತ ಮಾಡುತ್ತಿದ್ದನಲ್ಲಾ? ಏನೂ ಮಾಡದೆ ಕೂತಿದ್ದಾನೆ ಅಂದಾಗ ಸಹೋದರ ಕೇಳಿದ, “ಏನೂ ಮಾಡದೆ ಕುಳಿತಿದ್ದರೆ ನಿನ್ನ ಕೋಚಿಂಗ್‌ಗೆ ಮಾಡಿದ ಖರ್ಚು?” ಎಂದು. “ಅದು ಅವನನ್ನು ಹಿಂಡಿದ್ದು- ಹಾಗಾದರೂ ಕಷ್ಟ ಪಡಲಿ ಎಂದು!” ಎಂದಳು. ಇನ್ನು ಯಾರಿಗಾಗಿ ವಾದ ಮಾಡಲಿ? ಯಾರಿಗಾಗಿ ಅವಮಾನ ಸಹಿಸಲಿ? ಗುರಿಯ ಎಷ್ಟು ಹತ್ತಿರವಿದ್ದೇನೆಂದು ಮಾಂಧಾತನಿಗೆ ಮಾತ್ರ ಗೊತ್ತು! ಅವನ ಗುರಿ, ಅವನ ಪ್ರಯತ್ನ, ಅವನ ಕಷ್ಟ, ಅವನ ದುಃಖ, ಅವನ ಸಂತೋಷ ಅವನದು ಮಾತ್ರ! ಯಾರೆಂದರೆ ಯಾರಿಗೂ ಅದು ತಿಳಿಯುವುದಿಲ್ಲ... ಯಾಕೆ ಹೇಳು...? ಬರೆದ ಐವತ್ತು ಕಥೆಗಳಬಗ್ಗೆ, ಎರಡು ಕಾದಂಬರಿಗಳಬಗ್ಗೆ, ಅದನ್ನು ಬರೆಯಲು ಅವನು ಪಟ್ಟ ಕಷ್ಟದ ಬಗ್ಗೆ, ಈಗ ನಿರ್ದೇಶಕನಾಗುತ್ತಿರುವ ಮಾಂಧಾತ ಇಲ್ಲಿಯ ವರೆಗೆ ತಲುಪಲು ಪಟ್ಟ ಶ್ರಮದ ಬಗ್ಗೆ.... ಯಾರಿಗೂ ತಿಳಿಯುವುದಿಲ್ಲ! ಯಾಕೆಂದರೆ ಮಾಂಧಾತ ನಗುತ್ತಿರುತ್ತಾನೆ! ಹೆಂಡತಿಯ ಮನೆಯಿಂದ ಹೊರಟ ಮಾಂಧಾತ ಬದಲಾಗಿದ್ದಾನೆ! ಈಗಲೂ ಗೆಳತಿಯರಿದ್ದಾರೆ. ಅವರ ಅಗತ್ಯಗಳಿಗೆ ಮಾಂಧಾತನಿದ್ದಾನೆ.... ಹೃದಯ ಕಠಿಣವಾಗಿದೆ.... ಆದರೆ ಅದರ ಪ್ರಭಾವ ಯಾರಮೇಲು ಬೀರದಂತೆ ಪ್ರಯತ್ನಿಸುತ್ತಿದ್ದೇನೆ.... ಹಾಗೆ... ಎರಡನೆಯ ಅಧ್ಯಾಯ ಮುಗಿಯಿತು! ಮದುವೆಯ ವರೆಗಿನ ಜೀವನ ಒಂದು ಅಧ್ಯಾಯ. ಮದುವೆಯ ನಂತರ ಇದುವರೆಗಿನ ಜೀವನ ಎರಡನೆಯ ಅಧ್ಯಾಯ.... ಈಗ ಮೂರು.... ಏನು ಗೊತ್ತಾ ಸಾಗರವೇ...? ಈಗ ಅವನಿಗೆ ನಿಯಮಗಳಿಲ್ಲ... ಯಾರೊಂದಿಗೆ ಹೇಗೆ ಬೇಕಿದ್ದರೂ... ಆದರೆ ಪ್ರತಿ ಹೆಣ್ಣಿನ ಸಮಸ್ಯೆ ಅದೇ.... ಅವಳೊಂದಿಗೆ ಹೊರತು ಬೇರೆ ಯಾರೊಂದಿಗೂ ಮಾಂಧಾತ ಬೆರೆಯಬಾರದು! ಹೇಗೆ ಸಾಧ್ಯ? ಮಾಂಧಾತನ ಪ್ರೇಮ... ದೇವಿ ಅಷ್ಟು ಕ್ರೂರಳಲ್ಲ! ನಿನಗೂ ಗೊತ್ತು... ಮಾಂಧಾತ ದೇವೀ ಭಕ್ತ! ದೇವಿಯ ಸಂರಕ್ಷಣ ವಲಯದಲ್ಲಿರುವವ! ಸಿಕ್ಕಿಯೇ ಸಿಕ್ಕಳು ಹೊಸ ಹೆಣ್ಣು! ದೇವಿಯ ಹೆಸರವಳೇ.... ಗಂಡ- ಅತ್ತೆಯರ ಕಾಟ ಸಹಿಸಲಾರದೆ ಊರುಬಿಟ್ಟು ಬಂದವಳು!! ಅವಳನ್ನು ಸಮಾಧಾನಿಸಿದೆ.... ಒಂದು ನಿರೀಕ್ಷೆಯನ್ನು ಕೊಟ್ಟೆ... ಜೀವನದ ಯಾವುದೇ ಘಟ್ಟದಲ್ಲಿ ಇರುವುದಾಗಿ ಮಾತುಕೊಟ್ಟೆ.... ಮಾಂಧಾತ ಅನ್ನುವವನೊಬ್ಬ ಹೆಂಡತಿಯ ಬಾಳಿನಲ್ಲಿದ್ದಾನೆ ಎಂದು ಅರಿವಾದಾಗ... ಅವಳ ಗಂಡ ಒಳ್ಳೆಯವನಾದ! ಅವಳ ಬದುಕು ನಿರಾಳವಾಯಿತು! ಇನ್ನು ಮಾಂಧಾತ ಅವಳಿಗೆ ತೊಂದರೆ ಕೊಡಲಾರ... ಆದರೆ ಅವಳು ಸಿಕ್ಕ ಸಮಯ- ಅವಳ ಪ್ರೇಮ- ಒಂದಿಷ್ಟು ಪ್ರೇಮಕ್ಕಾಗಿ ಏನನ್ನೇ ಆದರೂ ಕಳೆದುಕೊಳ್ಳಲು ಅವಳು ತಯಾರಿದ್ದಳು... ಮಾಂಧಾತನಲ್ಲಿದ್ದುದ್ದು ಪ್ರೇಮ ಮಾತ್ರ.... ಒಂದು ವರ್ಷ... ಅದೊಂದು ಪುಟ್ಟ ಅಧ್ಯಾಯ... ಅವಳು ಹೋದಳು. ಅದಕ್ಕೂ ಮೊದಲು ಬಂದ ಇನ್ನೊಬ್ಬಳಬಗ್ಗೆ ಹೇಳಬೇಕು.... ಅವಳನ್ನು ಮಾಂಧಾತ ಹೆಣ್ಣು ಎಂದು ಪರಿಗಣಿಸಲಿಲ್ಲ.... ಸಮನಾಂತರ ವ್ಯಕ್ತಿತ್ವ...! ನೂರಕ್ಕೆ ನೂರು ವ್ಯಕ್ತಿತ್ವ ಮಾತ್ರ! ಗಂಡು ಹೆಣ್ಣು ಅನ್ನುವ ಭೇದವಿಲ್ಲದೇ ಇಬ್ಬರಿಗೂ ಇಬ್ಬರೂ ಅನ್ನುವಂತೆ. ಸ್ಪಷ್ಟವಾಗಿ ಹೇಳಿದ! ಪ್ರೇಮಿಸಲಾಗದು...! ಆದರೆ ಅವಳಿಗೆ ಪ್ರೇಮವೇ ಬೇಕಿತ್ತು! ಅವಳಿಗೆ ಮಾಂಧಾತನನ್ನು ಬಂಧಿಸಬೇಕಿತ್ತು! ಕಟ್ಟುಪಾಡುಗಳಿಗೆ ಒಳಗು ಮಾಡಬೇಕಿತ್ತು. ನಂಬಿ ಮಾಂಧಾತ ಹೇಳಿದ ನಿಜಗಳನ್ನಿಟ್ಟುಕೊಂಡೇ ಅವನನ್ನು ನೀಚಾತಿ ನೀಚನನ್ನಾಗಿ ಮಾಡಿದಳು! ಚುಚ್ಚಿದಳು. ಹೆಂಡತಿ ಬಿಟ್ಟು ಹೋಗಲು ಅವನ ಗುಣವೇ ಕಾರಣವೆಂದಳು.... ದೇವಿಯ ಹೆಸರಿರುವವಳು ಸಿಕ್ಕ ನಂತರವಂತೂ.... ಪ್ರಾಣ ಹಿಂಡಿದಳು. ನಿನಗೂ ಗೊತ್ತು- ಈ ಮಾಂಧಾತ ಕಾರಣವಿಲ್ಲದೆ ಸುಳ್ಳು ಹೇಳುವುದಿಲ್ಲ! ನಿಜ ಹೇಳಿದರೆ ಆಗುವ ನೋವಿಗಿಂತ ಸುಳ್ಳು ಹೇಳಿದಾಗಿನ ನೋವು ಕಡಿಮೆಯಾದರೆ- ಸುಳ್ಳನ್ನೇ ಹೇಳುತ್ತೇನೆ! ಕಾರಣ ಮಾಂಧಾತನಿಗೆ ದುಃಖ ಇಷ್ಟವಿಲ್ಲ!! ಅವಳೇ ಕಾರಣಗಳನ್ನು ಸೃಷ್ಟಿಸಿ ದೂರ ಹೋದಳು! ಕೊನೆಗೆ ಅವಳಿಗೆ ಬೇಕಾದಂತೆ ಪ್ರೇಮಿಯೊಬ್ಬ ಸಿಕ್ಕಾಗ.... ಮಾಂಧಾತನಿಗೆ ನೆಮ್ಮದಿ! ಆದರೂ ಆಗಾಗ ಕಿರಿಕಿರಿ- ದೂಷಣೆ ಇರುತ್ತದೆ... ಈ ಮಾಂಧಾತ ಒಬ್ಬನೇ ಎಂದು ನಂಬಿದೆ... ಆ ನಂಬಿಕೆಯಲ್ಲಿರುವಾಗ.... ದೇವಿ ವರ ಕೊಟ್ಟಂತೆ.... ಚಿಕ್ಕ ವಯಸ್ಸಿನಲ್ಲಿ ಮೋಹಗೊಂಡ ಇಬ್ಬರಲ್ಲಿ ಇನ್ನೊಬ್ಬಳು- ಹಿರಿಯೆ ಬಂದಳು!!! ಹಿರಿಯೆ ಅವಳು- ಪ್ರೇಮದಲ್ಲಿ! ಯೋಗ್ಯತೆ ಇಲ್ಲದ ಕಡೆ ಹರಿದ ಪ್ರೇಮ ದಿಕ್ಕು ಬದಲಿಸಿ ಯೋಗ್ಯತೆ ಇರುವ ಕಡೆ ಹರಿದರೆ ಏನಾಗುತ್ತದೋ ಅನುಭವಿಸಿಯೇ ಅರಿಯಬೇಕು!! ಇಷ್ಟೆ... ಇನ್ನೇನೂ ಇಲ್ಲ...! ಶುಭಂ!

Comments

Post a Comment

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!