ನೆರಳು

ನೆರಳು

*

ದಿನವೂ ಬೆಳಗೆದ್ದು ಚಾಮುಂಡಿ ಬೆಟ್ಟಕ್ಕೆ ಹೋಗುವ ಹವ್ಯಾಸ.... ನಾಲಕ್ಕೂವರೆಗೆ ಮನೆಯಿಂದ ಹೊರಟು ಐದಕ್ಕೆ ಮೆಟ್ಟಿಲು ಹತ್ತುವುದು ಶುರು ಮಾಡುತ್ತೇನೆ... ಒಂದುದಿನ, ನಿರ್ಜನ ಪ್ರದೇಶದಲ್ಲಿ ಗಾಡಿ ಓಡಿಸುವಾಗ ನನ್ನದೇ ಗಾಡಿಯ ಹಾರನ್ ಶಬ್ದ ಕೇಳಿಸಿತು.... ಗೊಂದಲ! ನನ್ನ ಕೈಬೆರಳೇ ನನ್ನರಿವಿಲ್ಲದೆ ಹಾರನ್ ಮಾಡಿತ್ತು!! ಯಾರೋ ಬಲವಂತವಾಗಿ ಮಾಡಿಸುವಂತೆ.... ಒಂದುಸಾರಿ ಆದಾಗ ತಲೆ ಕೆಡಿಸಿಕೊಳ್ಳಲಿಲ್ಲ... ಎರಡನೆಯಬಾರಿಯೂ ಹಾಗೇ ಆದಾಗ ಸ್ವಲ್ಪ ಗೊಂದಲವಾಯಿತು! ಮೂರನೆಯ ಬಾರಿ ಆಗುತ್ತದೇನೋ ಕಾದೆ- ಆಗಲಿಲ್ಲ! ಆದರೆ ನನ್ನ ಹೆಗಲಮೇಲೆ ಕೈಯ್ಯಿಟ್ಟು ಹಿಂದೆ ಯಾರೋ ಕುಳಿತ ಫೀಲ್! ತಪ್ಪಲು ತಲುಪಿ ಗಾಡಿ ನಿಲ್ಲಿಸಿದಾಗ, ಹಿಂದೆ ಕುಳಿತಿದ್ದವರು ಇಳಿದಂತೆ ಭ್ರಮೆ-ಇಳಿಯುವಾಗ ಹೆಗಲನ್ನು ಅದುಮಿದಂತೆ! ಗಾಡಿಯಿಂದ ಇಳಿದು, ಹೆಲ್ಮೆಟ್ ಗಾಡಿಗೆ ಸಿಕ್ಕಿಸಿ ನಡೆಯತೊಡಗಿದಾಗ ನನ್ನ ಮುಂದೆ- ಇಪ್ಪತ್ತು ಹೆಜ್ಜೆ ಅಂತರದಲ್ಲಿ ಯಾರೋ ನಡೆಯುತ್ತಿರುವಂತೆ ಒಂದು ನೆರಳು.... ಎಷ್ಟು ವೇಗವಾಗಿ ನಡೆದರೂ ಕೊನೆಗೆ ಜಾಗಿಂಗ್‌ನಂತೆ ಓಡಿದರೂ ಅದರ ಹತ್ತಿರ ತಲುಪಲಾಗಲಿಲ್ಲ- ಅದೇ ಅಂತರ! ಒಂದು ಕ್ಷಣ- ಇಂದು ಸ್ಟೆಪ್ ಹತ್ತಬೇಕಾ?- ಅನ್ನಿಸಿತು! ಆದರೂ ಏನೋ ಧೈರ್ಯ.... ಹತ್ತೋ ಎಂದಿತು ಮನಸ್ಸು.... ಇನ್ನೂ ಯಾರೆಂದರೆ ಯಾರೂ ಬಂದಿರಲಿಲ್ಲ.... ಶುರುಮಾಡಿದೆ.... ಅದೇ ಅಂತರದಲ್ಲಿ ಮುಂದೆ ನೆರಳು!! ನೂರು- ಇನ್ನೂರು- ಮುನ್ನೂರು..... ಮೆಟ್ಟಿಲುಗಳು ಮುಗಿಯುತ್ತಿದ್ದಂತೆ ಏದುಸಿರು!!! ನನ್ನದಲ್ಲದೆ ಮತ್ತೊಬ್ಬರದು.... ಒಂದು ಕ್ಷಣ ನಿಂತೆ.... ನೆರಳೂ ನಿಂತು ತಿರುಗಿ ನೋಡಿತು!!! ಹಿಂದಕ್ಕೆ ಓಡಿಬಿಡಲೆ ಅನ್ನಿಸಿತು.... ಆದರೂ ಮುಂದಕ್ಕೇ ನಡೆದೆ.... ನೆರಳೂ ಚಲಿಸಿತು.... ಬೆಟ್ಟದ ಮೇಲಕ್ಕೆ ತಲುಪಿದಾಗ ಯಾವ ಮಾಯವೋ, ಯಾವ ಕ್ಷಣವೋ ತಿಳಿಯದು- ನೆರಳು ಮಾಯವಾಗಿತ್ತು!!! ದೇವಸ್ಥಾನವನ್ನೊಂದು ಸುತ್ತುಹೊಡೆದು ಇಳಿಯತೊಡಗಿದಾಗ ಸಣ್ಣಗೆ ಬೆಳಕು ಮೂಡತೊಡಗಿತ್ತು... ಜೊತೆಗೆ ಮುಕ್ಕರಿಸಿ ಹತ್ತುತ್ತಿದ್ದ ಕೆಲವು ಜನ.... ಯಾವುದೇ ನೆರಳು ಕಾಣಿಸಲಿಲ್ಲ.... ನಿಜ ಹೇಳಬೇಕೆಂದರೆ ನಿರಾಶೆಯಾಯಿತು....!! ಮನೆಗೆ ಬಂದು ಗಾಡಿ ನಿಲ್ಲಿಸಿ ಒಳಬಂದೆ.... ಎಣ್ಣೆ ಹಚ್ಚಲು ಟೀಷರ್ಟ್ ತೆಗೆದೆ- "ಇದೇನೋ" ಎಂದರು ಅಮ್ಮ.... ತೋಳಿನಲ್ಲಿ ಯಾರೋ ಬಲವಾಗಿ ಹಿಡಿದಂತೆ ಸ್ಪಷ್ಟವಾಗಿ ಮೂಡಿತ್ತು- ಬೆರಳುಗಳ ಗುರುತು.... ಸರಿಯಾಗಿ ಒಂದುವರ್ಷಕಾಲ ಆ ಗುರುತು ನನ್ನ ಒಡನಾಡಿಯಾಗಿತ್ತು.... ಆಮೇಲೆ ಯಾವಾಗ ಮಾಸಿತೋ ತಿಳಿಯದು- ಆ ನೆರಳು ಮಾಯವಾದಂತೆ.....!

Comments

Post a Comment

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!