ಕಂಡುಕೊಂಡ-ಸತ್ಯ

ಕಂಡುಕೊಂಡ- ಸತ್ಯ

ಸತ್ಯದ ಅರಿವು ಆದಮೇಲೂ ಏನನ್ನು ತಿಳಿಸಲು ಹೊರಟಿದ್ದೀಯ ಮನು? ಹೀಗೆ ಇದ್ದೆ- ಹೀಗೆ ಆದೆ ಎಂದೋ ಅಥವಾ...?” ಎಂದರು.

ಸತ್ಯದ ಅರಿವು ಆಯಿತು ಅಂದುಕೊಳ್ಳುವುದು ಕೂಡ ಮಾಯೆಯೇ...!” ಎಂದೆ.

ಮತ್ತೆ...? ಎಲ್ಲರೂ ಬುದ್ಧನಾಗಲು ಸಾಧ್ಯವಿಲ್ಲ! ನೂರುವರ್ಷ ಆರೋಗ್ಯವಾಗಿ ಬದುಕಿ ಇಹಲೋಕ ತ್ಯಜಿಸಿದ ನನ್ನ ತಾತ ಬದುಕಿದ್ದಾಗ ಹೇಳುತ್ತಿದ್ದರು.... ಬದುಕಿನ ಜಂಜಾಟದಲ್ಲಿ ಬಿದ್ದ ಮನುಷ್ಯ ಮನೆ, ಆಸ್ತಿ, ಮಡದಿ, ಮಕ್ಕಳು, ಮರ್ಯಾದೆ ಎಂದು ಜೀವನದುದ್ದಕ್ಕೂ ಹೋರಾಡಿ, ಕೊನೆಗೆ ಇದ್ಯಾವುದೂ ನನ್ನದಲ್ಲ ಎಂದು ತಿಳಿದುಕೊಳ್ಳುವಷ್ಟರಲ್ಲಿ ಸಾವು ಸಮೀಪಿಸಿರುತ್ತದೆ....! ಆದರೆ ಬುದ್ಧ ಯುವಕನಾಗಿದ್ದಾಗಲೇ ಆ ಅರಿವನ್ನು ಗಳಿಸಿಕೊಂಡ- ದೇವರಾದ- ಎಂದು!” ಎಂದರು.

ಸ್ವಲ್ಪ ಸಮಯ ಮೌನವಾಗಿದ್ದೆ. ಅವರ ಪ್ರಶ್ನೆಗೆ ಪೂರ್ತಿಯಾಗಿ ಉತ್ತರಿಸಬೇಕೆಂದರೆ- ಸಾವಿರ ಪುಟಗಳ ಗ್ರಂಥವೂ ಸಾಲದು. ಆದರೂ ಉತ್ತರಿಸಬೇಕಾದ್ದು ನನ್ನ ಕರ್ತವ್ಯವಾದ್ದರಿಂದ....,

ನಿಮಗೆ ಜನಕ ಮಹಾರಾಜ ಗೊತ್ತೆ?” ಎಂದೆ.

ಸೀತೆಯ ತಂದೆ...!”

ಹಾ.... ಜನಕ ಮಹಾರಾಜನನ್ನು ರಾಜರ್ಷಿ ಅನ್ನುತ್ತಾರೆ! ಹೇಗೆ ಸನಾತನ ಧರ್ಮದ ಸಾವಿರಾರು ಮಹರ್ಷಿಗಳಲ್ಲಿ ವಸಿಷ್ಠ ಮಹರ್ಷಿ ಶ್ರೇಷ್ಠರೋ.... ಹಾಗೆ ಸಾವಿರಾರು ರಾಜರ್ಷಿಗಳಲ್ಲಿ ಜನಕಮಹಾರಾಜ ಶ್ರೇಷ್ಠರು!”

ಗೊಂದಲ ಹುಟ್ಟಿಸದೆ ನೇರವಾಗಿ ವಿಷಯವನ್ನು ಹೇಳು ಮನು!”

ಅವರನ್ನು ನೋಡಿದೆ.... ಅವರ ಹೃದಯದ ಬಡಿತ ನನಗೆ ಅನುಭವವಾಗುತ್ತದೆ!

ಮನು ಹೇಳುವುದೇ ಹೀಗೆ!” ಎಂದೆ.

ಅಹಂಕಾರಿ!” ಎಂದರು.

ಈಗ ಏನು...? ಹೇಳಲೋ ಬೇಡವೋ....?”

ಉಫ್.... ಹೇಳು!”

ನೀವು ಹೇಳಿದ ಬುದ್ಧ- ಸತ್ಯವನ್ನು ಕಂಡುಕೊಂಡ.... ಬದುಕಿದವರೆಲ್ಲರೂ ಸಾಯುತ್ತಾರೆ! ಆಸೆಯೇ ದುಃಖಕ್ಕೆ ಮೂಲ... ಇತ್ಯಾದಿಯಾಗಿ.... ಅಲ್ಲವೇ....?” ಎಂದು ಅವರ ಮುಖವನ್ನು ನೋಡಿದೆ.

ಗೊಂದಲವೋ ಅಸಹನೆಯೋ.... ಕೆಲವೊಮ್ಮೆ ನಮ್ಮ ನಂಬಿಕೆಗಳಿಗೆ ವಿರುದ್ಧವಾದ ಅಭಿಪ್ರಾಯ ಪ್ರತಿಪಾದಿಸಲ್ಪಡುವಾಗ ನಮಗಾಗುವ ಇಚ್ಛಾಭಂಗ! ಆದರೂ ಹೌದು ಅನ್ನುವಂತೆ ತಲೆಯಾಡಿಸಿದರು....!

ಅದೊಂದು ನಿರಾಶಾವಾದ! ಏನಿದ್ದರೂ ಸಾಯುತ್ತೇವೆ.... ಮತ್ತೆ ಏಕೆ ಕಷ್ಟ ಪಡಬೇಕು- ಅನ್ನುವಂತೆ...! ಎಲ್ಲರೂ ಭಿಕ್ಷುಕರಾದರೆ ಭಿಕ್ಷೆಯನ್ನು ನೀಡುವವರಾರು ತಾಯಿ....? ಬುದ್ಧನಂತೆ ಜನನ ಮರಣದ ರಹಸ್ಯವನ್ನು ತಿಳಿದುಕೊಂಡಿದ್ದ ಸಾವಿರಾರು ಮಹರ್ಷಿ- ರಾಜರ್ಷಿಗಳು ಯಾರೂ.... ಕರ್ತವ್ಯ ವಿಮುಖರಾಗಲಿಲ್ಲ!!!” ಎಂದು ಅವರ ಮುಖ ನೋಡಿದೆ.

ನನ್ನನ್ನೇ ನೋಡುತ್ತಿದ್ದರು.

ಸತ್ಯವನ್ನು ಕಂಡುಕೊಂಡ ನೀನು ಏನು ಹೇಳಲು ಹೊರಟಿದ್ದೀಯ... ಎಂದು ಕೇಳಿದಿರಿ... ಜನಕ ಮಹಾರಾಜನನ್ನು ಗೊತ್ತೆ ಎಂದೆ!! ಸೀತೆಯ ತಂದೆ ಎಂದಿರಿ.... ಅಷ್ಟೆ.... ನಮ್ಮ ಅರಿವು ಅಲ್ಲಿಗೆ ಸೀಮಿತ.... ಜನಕ ಬುದ್ಧನಂತೆ ಕೇವಲ ರಾಜನಾಗಿರಲಿಲ್ಲ- ಚಕ್ರವರ್ತಿ ಆತ....! ಭಾವನೆಗಳನ್ನು ಗೆದ್ದವನಾಗಿಯೂ....! ಆತನೊಂದು ತಾವರೆಯ ಎಲೆಯಂತೆ!! ಸುಖ ದುಃಖಗಳೇನೂ ಆತನನ್ನು ತಾಕುವುದಿಲ್ಲ.... ಆದರೂ ಆತ ರಾಜ! ತನ್ನ ರಾಜ ಧರ್ಮವನ್ನೂ ಅರಿತುಕೊಂಡವ... ಆತನೂ ವೈರಾಗ್ಯ ಹೊಂದಿ ರಾಜ್ಯವನ್ನು ಬಿಟ್ಟು ಹೋದರೆ ಹೇಗಿರುತ್ತದೆ...? ಆದರೆ ಆತ ಹೋಗಲಾರ.... ಆತನಿಗೆ ತನ್ನ ಕರ್ಮದ- ಅಂದರೆ ಮಾಡಲೇ ಬೇಕಾದ ಕರ್ತವ್ಯದ ಅರಿವಿದೆ...!” ಎಂದೆ.

ಇದೇ ಏನು ನೀನು ಕಂಡು ಕೊಂಡ ಸತ್ಯ?”

ಮುಗುಳುನಕ್ಕೆ....

ಇದು ಬುದ್ಧ ದೇವರಾದ ಎಂದು ನೀವು ಹೇಳಿದ್ದಕ್ಕೆ ಉತ್ತರ! ಮನು ಕಂಡುಕೊಂಡದ್ದು ತಿಳಿಯಬೇಕೆಂದರೇ..., ಒಂದು ಕಥೆ ಹೇಳಲೇ....?” ಎಂದೆ.

ಕರ್ಮ! ಹೇಳು...!”

ದೇವರು ಮನುಷ್ಯನೊಬ್ಬನನ್ನು ಭೂಮಿಗೆ ಕಳಿಸಲು ಶ್ರಮಿಸುತ್ತಿದ್ದ! ಮನುಷ್ಯನಾದರೋ... ದೇವರನ್ನು ಬಿಟ್ಟು ಹೋಗಲು ತಯಾರಿರಲಿಲ್ಲ! ಕೊನೆಗೆ.... ಹುಟ್ಟಿನಿಂದ ಸಾಯುವವರೆಗೂ ನಾನು ನಿನ್ನೊಂದಿಗಿರುತ್ತೇನೆ ಅನ್ನುವ ದೇವರ ಮಾತನ್ನು ನಂಬಿ ಭೂಮಿಗೆ ಹೋಗಲು ಒಪ್ಪಿದ! ಹುಟ್ಟು ಸಾವಿನ ನಡುವಿನ- ಭೂಮಿಯಲ್ಲಿನ ವಾಸವನ್ನು ಮುಗಿಸಿ ಬಂದ ಮನುಷ್ಯನನ್ನು ಕೇಳಿದರು ದೇವರು- ‘ಹೇಗಿತ್ತು ಜೀವನ?’ ಮನುಷ್ಯ ಅಳುತ್ತಾ ಹೇಳಿದ, ‘ತುಂಬಾ ಕೆಟ್ಟದ್ದಾಗಿತ್ತು! ಜೊತೆಗಿರುತ್ತೇನೆಂದು ಹೇಳಿ ನೀನು ಮೋಸ ಮಾಡಿದೆ!’ ದೇವರು ಮುಗುಳುನಕ್ಕು- ‘ಸರಿ, ಬಾ.... ಹುಟ್ಟಿನಿಂದ ಸಾಯುವವರೆಗಿನ ನಿನ್ನ ಜೀವನದ ಹೆಜ್ಜೆ ಗುರುತುಗಳನ್ನು ನಾವೊಮ್ಮೆ ನೋಡಿ ಬರೋಣ...!’ ಎಂದರು. ತಾಯಿಯ ಗರ್ಭದಿಂದ ಭೂಮಿಗೆ ಬಿದ್ದು, ಬಾಲ್ಯವನ್ನು ಮುಗಿಸಿ- ಶಾಸ್ತ್ರೀಯವಾಗಿ ಹೇಳಬೇಕೆಂದರೆ- ಬ್ರಹ್ಮಚರ್ಯಾಶ್ರಮವನ್ನು ಮುಗಿಸಿ ಗೃಹಸ್ಥಾಶ್ರಮವನ್ನು ಪ್ರವೇಶಿಸುವವರೆಗೆ ಎರಡು ಜೊತೆ ಕಾಲುಗಳು ಕಾಣಿಸಿದವು! ಒಂದು ಮನುಷ್ಯನದು ಮತ್ತೊಂದು ದೇವರದ್ದು! ಗೃಹಸ್ಥವನ್ನು ಪ್ರವೇಶಿಸುತ್ತಿದ್ದಂತೆ.... ಒಂದು ಜೊತೆ ಕಾಲುಗಳು ಮಾಯವಾಗಿದ್ದವು! ‘ಇಲ್ಲಿಂದ ನಿನ್ನ ಕಷ್ಟಗಳು ಶುರವಾದವು!’ ಎಂದರು ದೇವರು. ‘ನೋಡಿದೆಯಾ.... ಕಷ್ಟಗಳಲ್ಲಿ ನೀನು ನನ್ನ ಕೈಬಿಟ್ಟೆ- ಜೊತೆಗಿರಲಿಲ್ಲ!’ ಎಂದ ಮನುಷ್ಯ! ದೇವರು ಮುಗುಳುನಕ್ಕು ಹೇಳಿದರು- ‘ಆ ಒಂದು ಜೊತೆ ಕಾಲುಗಳು ನಿನ್ನದಲ್ಲ- ನನ್ನದು! ಅಂದಿನಿಂದ ನೀನು ಮರಣಿಸುವವರೆಗೆ ನಿನ್ನನ್ನು ನಾನು ನನ್ನ ತೋಳುಗಳಲ್ಲಿ ಎತ್ತಿಕೊಂಡಿದ್ದೆ!’ ಇಷ್ಟೆ ಕಥೆ!” ಎಂದೆ.

ಅವರು ಗಲಿಬಿಲಿಯಿಂದ ನನ್ನ ಮುಖವನ್ನು ನೋಡಿದರು. ಮುಗುಳುನಕ್ಕು ಹೇಳಿದೆ....

ಇದು ಚಿಕ್ಕವನಿದ್ದಾಗ ನಾನು ಓದಿದ ಕಥೆ! ಎಲ್ಲರೂ ಓದಿರುತ್ತಾರೆ.... ಎಲ್ಲರಿಗೂ ಏನೋ ಒಂದು ಅರಿವಾಗಿರುತ್ತದೆ.... ಆದರೆ ತಾಯಿ.... ಬೇರೆ ಯಾರಿಗೂ ಕಾಣದ್ದು- ಗೋಚರಿಸದ್ದು- ಇದರಲ್ಲಿ ಮನೂಗೆ ಅನ್ವಯಿಸಿಕೊಂಡು ಮನು ಕಂಡುಕೊಂಡ ಸತ್ಯವೇನು ಗೊತ್ತಾ?”

ಕುತೂಹಲದಿಂದ ನನ್ನ ಕಣ್ಣುಗಳನ್ನೇ ನೋಡಿದರು....

ಮನು ಹುಟ್ಟಿದಾಗಿನಿಂದ ಮರಣಿಸುವವರೆಗೆ- ಒಂದು ಜೊತೆ ಪಾದಗಳು ಮಾತ್ರವಿದೆ- ಇರುತ್ತದೆ!”

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!