ಶಾಂತಿ
ಶಾಂತಿ!
“ತಮ್ಮನ ಹೆಂಡತಿಗೆ ಬೈದರು ಅಮ್ಮ!” ಎಂದ ರಾಂ.
“ತಮ್ಮ ಏನಂದ?”
“ಹೆಂಡತಿ ಬಂದ ಮೇಲೆ ಮುಂಚಿನ ಹಾಗೆ ಇಲ್ಲ!” ಎಂದ.
“ಅದು ಮಾಮೂಲಿ ಬಿಡು! ಹೆಂಡತಿ ಬಂದಮೇಲೆ ಅಪ್ಪ ಅಮ್ಮ ಹೊಸ ರೀತಿಯಲ್ಲಿ ಕಾಣಿಸತೊಡಗುತ್ತಾರೆ! ಅದುವರೆಗೆ ಇಲ್ಲದ ಕುಂದು ಕೊರತೆ ಎಲ್ಲಾ ಪ್ರಕಟವಾಗುತ್ತದೆ! ನಾನೂ ಉದಾಹರಣೆಯೇ!” ಎಂದೆ.
“ಇದೆಲ್ಲಾ ನೋಡ್ತಾ ಇದ್ರೆ ಯಾಕಪ್ಪಾ ಮದುವೆ ಅನ್ನಿಸಿಬಿಡುತ್ತೆ!” ಎಂದ.
“ನಿಜಾ ರಾಂ! ಹೆಂಡತಿ ಬಂದಮೇಲೆ ನಾವೊಂದು ಭ್ರಮಾ ಪ್ರಪಂಚಕ್ಕೆ ಜಾರುತ್ತೇವೆ! ಅದನ್ನೇ ಋಷಿ ಮುನಿಗಳು ಮಾಯೆ ಎಂದರೇನೋ...! ಅದರೊಳಗಿರುವಷ್ಟು ದಿನವೂ ನಮಗೆ ಹಿಂಸೆಯೇ.... ಅದುವರೆಗಿನ ನಮ್ಮ ಸರಿಗಳು ಮದುವೆಯ ನಂತರ ತಪ್ಪು ತಪ್ಪಾಗಿ ಕಾಣತೊಡಗುತ್ತದೆ!”
“ಸುಮ್ಮನೆ ಹೆದರಿಸಬೇಡ!” ಎಂದ ರಾಂ.
“ಎಷ್ಟು ಬೇಗ ನಾವು ಆ ಮಾಯೆಯಿಂದ ಹೊರಬರುತ್ತೇವೆ ಅನ್ನುವುದರ ಮೇಲೆ ನಮ್ಮ ನೆಮ್ಮದಿ ಅಡಗಿದೆ!” ಎಂದೆ.
“ಅದಕ್ಕೇ ಹೆಂಡತಿ ಬಿಟ್ಟು ಹೋದಾಗ ಇಷ್ಟು ಖುಷಿಯಾಗಿದ್ದೀಯ?”
“ಹೂ! ಇಲ್ಲಿ ಸಮಸ್ಯೆ ಏನು ಗೊತ್ತಾ? ನಮ್ಮ ಮಧ್ಯೆ ಇಬ್ಬರೂ ಕಾಂಪ್ರಮೈಸ್‌ಗೆ ರೆಡಿಯಿಲ್ಲ!”
ಅವನು ನನ್ನ ಮುಖವನ್ನೇ ನೋಡಿದ. ಮುಂದುವರೆಸಿದೆ.
“ಅವಳಿಗೆ ಗಂಡ ಅವಳ ಗುಲಾಮನಾಗಿರಬೇಕು! ಅಂದರೆ ಅವಳು ನನ್ನೊಂದಿಗೆ ಇರಬೇಕೆಂದರೆ- ಅವಳು ಹೇಳಿದಂತೆ ಗಲ್ಫ್‌ಗೆ ಹೋಗಬೇಕು! ಹಣ ಮಾಡಬೇಕು! ಚಿನ್ನ, ಕಾರು, ಬಂಗ್ಲೋ ತಗೋಬೇಕು! ಅರ್ಥಾತ್.... ಅವಳ ಈ ಕನಸುಗಳನ್ನು ನಾನು ಸಾಧಿಸಿಕೊಡಬೇಕು! ಅವಳ ಆಸೆ ತಪ್ಪಲ್ಲ! ಆದರೆ ನನಗೂ ವ್ಯಕ್ತಿತ್ವ ಇದೆ ಅಲ್ವಾ...? ನಂದು ಉಲ್ಟಾಕೇಸು! ನನಗೊಂದು ಗುರಿಯಿದೆ! ಗುರಿ ಸೇರೋವರೆಗೆ ಬದುಕಲು ಎಷ್ಟು ಬೇಕೋ ಅಷ್ಟು ಸಾಕು! ಜೊತೆಗೆ- ಓದು, ಬರಹ, ಸುತ್ತಾಟ! ಗುರಿಯೆಡೆಗಿನ ಪ್ರಯಾಣದೊಂದಿಗೆ- ವರ್ತಮಾನ ಕಾಲವನ್ನು ಅನುಭವಿಸೋದು- ಸಂತೋಷವಾಗಿರೋದು- ನನ್ನ ರೀತಿ! ಅವಳಿಗದು ಬೇಡ!! ಸೋ ತೀರುಮಾನ ತೆಗೆದುಕೊಂಡಳು!!”
“ಒಟ್ನಲ್ಲಿ ಮದುವೆ ಆಗ್ಬೇಡ ಅನ್ತಿದೀಯ...!”
“ಆಗು ಅಂತ ಮಾತ್ರ ಹೇಳಲ್ಲ!”
“ಏನಂತೆ ಅವಳ ಕಥೆ? ಬರ್ತಾಳ? ನೀನೇನು ತೀರ್ಮಾನ ಮಾಡ್ದೆ? ಕರ್ಕೊಂಡ್ ಬರ್ತೀಯೋ ಹೇಗೆ?”
“ಯಾಕೆ ರಾಂ? ನಾನು ನೆಮ್ಮದಿಯಾಗಿ, ಶಾಂತಿಯಿಂದಿರೋದು ನಿನಗೆ ಇಷ್ಟವಿಲ್ವ?” ಎಂದೆ.
“ಅಂದ್ರೆ?” ಎಂದ.
“ಒಂದ್ಸಾರಿ ಒಬ್ಬ ವ್ಯಕ್ತಿ ಬುದ್ಧನಬಳಿಗೆ ಓಡಿ ಬಂದನಂತೆ! ತಲೆಯೆಲ್ಲ ಕೆದರಿ ಹುಚ್ಚನಂತೆ ಬಂದು ಬುದ್ಧನ ಕಾಲಿಗೆ ಬಿದ್ದು.... “ಸ್ವಾಮೀ.... ಏನಾದ್ರೂ ಮಾಡಿ ನನ್ನ ಉದ್ದಾರ ಮಾಡಿ! ಮನೆ ನರಕವಾಗಿದೆ. ಹುಚ್ಚ ಆಗ್ತೀನಿ!” ಎಂದನಂತೆ. ಬುದ್ಧ ಎಂದಿನ ಮುಗುಳುನಗು ನಕ್ಕು.... “ಏಳು ಕಂದ! ಹೇಳು- ಏನಾಯಿತು?” ಎಂದ. “ಏನು ಹೇಳಲಿ ತಂದೇ.... ಅಪ್ಪ ಅಮ್ಮ ಹೆಂಡತಿ ಮಕ್ಕಳು.... ಯಾರಿಗೂ ಹೊಂದಾಣಿಕೆಯಿಲ್ಲ.... ಯಾವಾಗ ನೋಡಿದರೂ ಗಲಾಟೆ... ಸಾಕಾಗಿ ಹೋಗಿದೆ!” ಎಂದ ಆತ. “ಜೀವನಕ್ಕೆ ಏನು ಮಾಡ್ತೀಯ ಕಂದ?” ಎಂದ ಬುದ್ಧ. “ಎರಡು ಒಂಟೆ, ಎರಡು ಕುರಿ, ಇಪ್ಪತ್ತು ಕೋಳಿ, ಎರಡು ಹಸು- ಇದೆ. ಜೊತೆಗೆ ಎರಡು ನಾಯಿ- ಐದಾರು ಮರಿಗಳು... ಅದನ್ನು ಮಾರಿ ಹೊಟ್ಟೆ ಹೊರೆದುಕೊಳ್ಳುತ್ತೇನೆ!” ಎಂದ ಆತ. “ಸರಿ... ನಿನಗೆ ಶಾಂತಿ ಬೇಕೆಂದರೆ ನೀನು ನಾನು ಹೇಳಿಂದತೆ ಮಾಡಬೇಕು!” ಎಂದ ಬುದ್ಧ. “ಏನು ಬೇಕಿದ್ದರೂ ಮಾಡುತ್ತೇನೆ ಹೇಳು ದೊರೆ!” ಎಂದ ಆತ. “ಸರಿ... ನಿನ್ನ ಜೀವನಕ್ಕೆ ಆಧಾರವಾದ ಪ್ರಾಣಿಗಳನ್ನು- ಒಂದೂ ಬಿಡದೆ ಎಲ್ಲವನ್ನೂ ಮನೆಯೊಳಗೆ ತಂದು ಕಟ್ಟು- ನೋಡಿಕೋ! ನಂತರ ಒಂದು ವಾರ ಬಿಟ್ಟು ಬಾ!” ಎಂದ ಬುದ್ಧ. ಒಂದು ವಾರದ ನಂತರ ಆತ ಗೊಳೋ ಎಂದು ಅಳುತ್ತಾ ನಿಜವಾಗಿಯೂ ಹುಚ್ಚನಾದನೇನೋ ಅನ್ನುವಂತೆ ಓಡೋಡಿ ಬಂದ. “ಏನು ಮಾಡಿಬಿಟ್ಟೆ ತಂದೆ... ಶಾಂತಿ ದೊರಕಿಸು ಅಂದರೆ ಹೀಗಾ ಮಾಡೋದು... ಅಯ್ಯಯ್ಯೋ... ಆ ಪ್ರಾಣಿಗಳ ಸದ್ದು, ಮಲ- ಮೂತ್ರಗಳ ವಾಸನೆ.... ಸತ್ತೆ!” ಎಂದ. ಮುಗುಳುನಕ್ಕ ಬುದ್ಧ.... “ಸರಿ... ಅವುಗಳನ್ನೆಲ್ಲಾ ಮುಂಚಿನಂತೆ ಹೊರಗೆ ಕಟ್ಟಿ ಒಂದು ವಾರದ ನಂತರ ಬಾ...!” ಎಂದ. ಒಂದು ವಾರದ ನಂತರ... ಬುದ್ಧನಿಗಿಂತಲೂ ದೊಡ್ಡ ಜ್ಞಾನಿಯಂತೆ- ಹಿಂದೆ ಬಂದ ವ್ಯಕ್ತಿ ಈತನೇ ಏನು ಅನ್ನುವಂತೆ ಶಾಂತನಾಗಿ ಆತ ಬಂದ. “ಹೇಗಿದೆ ಜೀವನ?” ಎಂದ ಬುದ್ಧ.... “ಸ್ವರ್ಗ ದೊರೆ ಸ್ವರ್ಗ! ನಿನಗೆ ಅನಂತ ಕೋಟಿ ಧನ್ಯವಾದಗಳು!” ಎಂದು ಬುದ್ಧನಿಗೆ ಹಣ್ಣು ಹಂಪಲು ಕೊಟ್ಟು ಹೋದ.” ಎಂದು ರಾಂನ ಮುಖ ನೋಡಿದೆ.
“ಇದೆಲ್ಲಾ ನನಗೆ ಯಾಕೆ ಹೇಳಿದೆ?” ಎಂದ.
“ನೆಮ್ಮದಿಯಾಗಿ ಬದುಕುತ್ತಿದ್ದೆ ರಾಂ! ಅನಗತ್ಯವಾಗಿ ಮದುವೆಯಾದೆ! ಈಗ ಹೇಗೋ ಅದರಿಂದ ಹೊರಬಂದಿದ್ದೀನಿ! ಬ್ರಹ್ಮಚಾರಿ- ನಿನಗೇನು ಗೊತ್ತು ನಿಜವಾದ ಶಾಂತಿ!”
!!
ReplyDeleteಯಾರಿದು? ಯೂನೀಕ್ ಬ್ಲಾಗ್??????
Delete